ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಪ್ರಧಾನಿ ಮೋದಿ ಉತ್ತರಿಸುವರೇ? : ಸಚಿವ ಕೃಷ್ಣ ಬೈರೇಗೌಡ
"ಬಿಜೆಪಿಯವರದ್ದು ಉಂಡು ಹೋದ ಕೊಂಡು ಹೋದ ಸಂಸ್ಕೃತಿ"
ಬೆಂಗಳೂರು : ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರಚಾರಕ್ಕಾಗಿ ತಪ್ಪದೇ ರಾಜ್ಯಕ್ಕೆ ಆಗಮಿಸುವ ಪ್ರಧಾನಿ ಮೋದಿ, ಭದ್ರಾ ಮೇಲ್ದಂಡೆ, ಮಹಾದಾಯಿ, ಮೇಕೆದಾಟು ಯೋಜನೆಗೆ ಕೇಂದ್ರವೇ ತಡೆಯಾಗಿರುವ ಹಾಗೂ ರಾಜ್ಯದ ಸಂಸತ್ ಸೀಟುಗಳನ್ನು ಕಸಿಯುವ ಮೂಲಕ ರಾಜ್ಯಕ್ಕೆ ಅನ್ಯಾಯ ಎಸಗಲು ಹೊರಟಿರುವ ಕೇಂದ್ರದ ನೀತಿ ಬಗ್ಗೆ ಉತ್ತರಿಸುವಿರಾ? ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದ್ದಾರೆ.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತದಲ್ಲೆ ಅತ್ಯಂತ ಕಡಿಮೆ ತೆರಿಗೆ ಪಾಲು ಪಡೆಯುತ್ತಿರುವ ರಾಜ್ಯವೇ ಕರ್ನಾಟಕ. ರಾಜ್ಯದಿಂದ ಮೈತ್ರಿ ಅಭ್ಯರ್ಥಿಯೂ ಸೇರಿ 27 ಜನ ಸಂಸತ್ ಸದಸ್ಯರು ಇದ್ದರೂ ಏನೂ ಪ್ರಯೋಜನವಾಗಲಿಲ್ಲ. ನಮ್ಮಿಂದ ತೆರಿಗೆ ಜೊತೆಗೆ ಸಂಸತ್ ಸೀಟುಗಳನ್ನು ಕಸಿಯಲಾಗುತ್ತಿದೆ ಎಂದು ದೂರಿದರು.
ನೆಂಟರ ಮನೆಗೆ ಹೋದಾಗ ಖಾಲಿ ಕೈಯಲ್ಲಿ ಹೋಗುವುದು ಭಾರತೀಯ ಸಂಸ್ಕೃತಿಯಲ್ಲ. ಆದರೆ ಬಿಜೆಪಿಯವರದ್ದು ಉಂಡು ಹೋದ ಕೊಂಡು ಹೋದ ಸಂಸ್ಕೃತಿ. ತೆರಿಗೆ ಜೊತೆಗೆ ನದಿ ನೀರು ಹಂಚಿಕೆಯಲ್ಲೂ ನಮಗೆ ಸಾಕಷ್ಟು ಅನ್ಯಾಯವಾಗಿದೆ. ಕೃಷ್ಣ, ತುಂಗಭದ್ರಾ, ಮಹಾದಾಯಿ, ಕಾವೇರಿ ಸೇರಿದಂತೆ ಅನೇಕ ನದಿ ನೀರಿನ ವಿಚಾರದಲ್ಲಿ ಮೋಸವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇಡೀ ದೇಶದಲ್ಲಿ ಅತ್ಯಂತ ಹೆಚ್ಚು ಖುಷ್ಕಿ ಭೂಮಿ ಇರುವುದು ಕರ್ನಾಟಕದಲ್ಲಿ. ಅತಿ ಹೆಚ್ಚು ಮಳೆ ಆಶ್ರಯ ಹೊಂದಿರುವ ಕರ್ನಾಟಕ ಅತಿ ಹೆಚ್ಚು ಬರಕ್ಕೆ ಈಡಾಗಿದೆ. ನಮ್ಮ ನದಿ ನೀರುಗಳನ್ನು ಉಪಯೋಗಿಸಲು ಕೇಂದ್ರ ಸರಕಾರ ಅನುವು ಮಾಡಿಕೊಡದೆ ಅನ್ಯಾಯ ಎಸಗುತ್ತಿದೆ. ನಮ್ಮ ಪಾಲಿನ ನೀರನ್ನು ಕೊಡಿ ಎಂದು ಪ್ರಧಾನಿ ಬಳಿ ಎಷ್ಟು ಬಾರಿ ಮನವಿ ಮಾಡಿದರೂ ಉಪಯೋಗವಿಲ್ಲ ಎಂದು ಕೃಷ್ಣ ಬೈರೇಗೌಡ ಬೇಸರ ಹೊರಹಾಕಿದರು.
2023-24ನೆ ಸಾಲಿನ ಕೇಂದ್ರ ಬಜೆಟ್ ಪುಸ್ತಕದ ಪ್ಯಾರಾ 39 ರಲ್ಲಿ ಬರ ಪೀಡಿತ ಮಧ್ಯ ಕರ್ನಾಟಕದ ಕೆರೆಗೆ ನೀರು ತುಂಬಿಸಲು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಡಬೇಕು ಎಂದು ಬಜೆಟ್ ಅಲ್ಲಿ ಘೋಷಣೆ ಮಾಡಿ ಒಂದು ವರ್ಷ ಮೂರು ತಿಂಗಳು ಆದರೂ ಏಕೆ ಕೊಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಅಪರ ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಸರಕಾರದ ಕಾರ್ಯದರ್ಶಿಗಳಿಗೆ ಭದ್ರಾ ಮೇಲ್ದಂಡೆ ಯೊಜನೆಗೆ ಹಣ ಬಿಡುಗಡೆ ಮಾಡಿ ಎಂದು ಪತ್ರ ಬರೆದಿದ್ದರು. ನೀರಾವರಿ ಸಚಿವ ಡಿ.ಕೆ.ಶಿವಕುಮಾರ್, ದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿಯವರು ಪತ್ರ ಬರೆದಿದ್ದರು. ಡಿ.ಕೆ.ಶಿವಕುಮಾರ್ ಖುದ್ದಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಆದರೂ ಹಣ ಬಿಡುಗಡೆ ಮಾಡದೆ ಕೇಂದ್ರ ಅನ್ಯಾಯ ಮಾಡಿದೆ ಎಂದು ಅವರು ದೂರಿದರು.
ಇದು ಕರ್ನಾಟಕದ 5 ಜಿಲ್ಲೆಗಳಿಗೆ ಮಾಡಿದ ಮೋಸ. ಕರ್ನಾಟಕಕ್ಕೆ ಬರುವ ಮೋದಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಘೋಷಣೆ ಮಾಡುತ್ತೀರಾ? ಅಥವಾ ಕರ್ನಾಟಕದ ತೆರಿಗೆ ಹಣ ತೆಗೆದು ಕೊಂಡು ಮೋಸ ಮಾಡಿದ್ದೇವೆ ಎಂದು ಒಪ್ಪಿಕೊಳ್ಳುವಿರಾ? ರೈತರಿಗೆ ಮೂರು ನಾಮ ಹಾಕುತ್ತಿದ್ದೇವೆ ಎಂದು ಒಪ್ಪಿಕೊಳ್ಳುವಿರಾ? ಎಂದು ಕೃಷ್ಣ ಬೈರೇಗೌಡ ಆಕ್ರೋಶ ಹೊರಹಾಕಿದರು.
ಮಹಾದಾಯಿ ನೀರಿಗಾಗಿ ರೈತರು ಸಾವಿರಾರು ದಿನಗಳ ಕಾಲ ಹೋರಾಟ ಮಾಡಿದ್ದಾರೆ. 13.4 ಟಿಎಂಸಿ ನೀರನ್ನು 2019 ರಲ್ಲಿ ಟ್ರಿಬ್ಯುನಲ್ ಕರ್ನಾಟಕಕ್ಕೆ ಎಂದು ಗೆಜೆಟ್ ನೋಟಿಫಿಕೇಷನ್ ಮಾಡಿದೆ. ಅಂದರೆ ನೀರಿನ ಹಂಚಿಕೆಯ ಸೂತ್ರವನ್ನು ಅಂತಿಮಗೊಳಿಸಿದೆ. ಕುಡಿಯುವ ನೀರಿಗೆ 5.4 ಟಿಎಂಸಿ, ವಿದ್ಯುತ್ ಉತ್ಪಾದನೆಗೆ 8.02 ನೀರನ್ನು ಹಂಚಿಕೆ ಮಾಡಲಾಗಿದೆ. ಇಷ್ಟು ಆದರೂ ಕೇಂದ್ರ ಸರ್ಕಾರ ಮಹದಾಯಿ ಯೋಜನೆಗೆ ಅನುಮತಿ ಕೊಟ್ಟಿಲ್ಲ ಎಂದು ಅವರು ಹೇಳಿದರು.
ಕಳೆದ 4 ವರ್ಷಗಳಿಂದ ಟೆಂಡರ್ ಆದರೂ ಕಿತ್ತೂರು ಕರ್ನಾಟಕ ಭಾಗದ ರೈತರಿಗೆ ಅನ್ಯಾಯ ಮಾಡಿದೆ. ಮಹಾದಾಯಿ ಯೋಜನೆ ಕುರಿತು ಉಪ ಮುಖ್ಯಮಂತ್ರಿ, ಕೇಂದ್ರ ನೀರಾವರಿ ಸಚಿವರನ್ನು ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ. ಪರಿಸರ ಇಲಾಖೆಯ ಅನುಮತಿ ಕೊಡದಿರುವ ಹಿಂದೆ ದುರುದ್ದೇಶ ಅಡಗಿದೆ ಎಂದು ಅವರು ದೂರಿದರು.
ಸುಪ್ರೀಂಕೋರ್ಟಿನ ತೀರ್ಪಿನ ಪ್ರಕಾರ ವಾಡಿಕೆಯ ಮಳೆಯಾದರೆ ಒಂದು ವರ್ಷಕ್ಕೆ ತಮಿಳುನಾಡಿಗೆ 177.25 ಟಿಎಂಸಿ ನೀರನ್ನು ಬಿಡಬೇಕು. 2022-23ರಲ್ಲಿ 405.04 ಟಿಎಂಸಿ, 2019-20ರಲ್ಲಿ 205 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿತ್ತು. 2020-21ರಲ್ಲಿ 211 ಟಿಎಂಸಿ, 2021-22 ರಲ್ಲಿ 281 ಟಿಎಂಸಿ ನೀರನ್ನು ಬಿಟ್ಟಿದ್ದೇವೆ. ಈವರೆಗೆ 1 ಸಾವಿರ ಟಿಎಂಸಿಗೂ ಹೆಚ್ಚು ನೀರನ್ನು ಬಿಡಲಾಗಿದ್ದು, ಈ ಹೆಚ್ಚುವರಿ ನೀರನ್ನು ಮೇಕೆದಾಟು ಯೋಜನೆಯಿಂದ ಸಂಗ್ರಹಿಸಿ ಸಂಕಷ್ಟದ ಕಾಲದಲ್ಲಿ ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು.
ಮೇಕೆದಾಟು ಸಮತೋಲನ ಅಣೆಕಟ್ಟು ಮಾಡಿದರೆ ಎರಡು ರಾಜ್ಯಗಳಿಗೂ ಅನುಕೂಲ. ಈ ಯೋಜನೆಗೆ ಅನುಮತಿ ನೀಡಬೇಕು ಎಂದು ಪತ್ರ ಬರೆದು 5 ವರ್ಷಗಳಾಗಿವೆ. ಆದರೂ, ಅನುಮತಿ ನೀಡದೆ ನಮ್ಮ ಮೇಲೆ ಕೇಂದ್ರ ಸರಕಾರ ಏಕೆ ಹಗೆತನ ಸಾಧಿಸುತ್ತಿದೆ. ಪ್ರಧಾನಿಯವರು ಕರ್ನಾಟಕಕ್ಕೆ ಏಕೆ ಮೋಸ ಮಾಡುತ್ತಾ ಇದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿ ಎಂದು ಕೃಷ್ಣ ಬೈರೇಗೌಡ ಒತ್ತಾಯಿಸಿದರು.
ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಲೋಕಸಭಾ ಸೀಟುಗಳು 129 ಇದ್ದು, ಕ್ಷೇತ್ರ ಮರು ವಿಂಗಡಣೆ ಮಾಡಿದರೆ 103ಕ್ಕೆ ಇಳಿಯಲಿದೆ. ದಕ್ಷಿಣ ಭಾಗದ ಎಲ್ಲ ರಾಜ್ಯಗಳ ಹಕ್ಕನ್ನು, ಪ್ರಾತಿನಿಧ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ಇದರ ಬಗ್ಗೆ ಮೋದಿ ಉತ್ತರಿಸಬೇಕು. ನಮ್ಮ ಸೀಟು, ತೆರಿಗೆ, ನೀರು ಎಲ್ಲವನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಹ ಅಧ್ಯಕ್ಷ ವಿಜಯ ಮತ್ತಿಕಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ರಾಮಚಂದ್ರಪ್ಪ, ಕೆಪಿಸಿಸಿ ಕಾನೂನು ವಿಭಾಗದ ಉಪಾಧ್ಯಕ್ಷ ದಿವಾಕರ್ ಉಪಸ್ಥಿತರಿದ್ದರು.