ವರ್ಗಾವಣೆ ದಂಧೆ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಸಿಎಂ ಸಿದ್ದರಾಮಯ್ಯ ಸವಾಲು
ಬೆಂಗಳೂರು, ಜು.13: ನಾನು 1983ರಲ್ಲಿ ಶಾಸಕ, 1984ರಲ್ಲಿ ಸಚಿವ, ಉಪ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಐದು ವರ್ಷ ಮುಖ್ಯಮಂತ್ರಿಯಾಗಿದ್ದೆ. ಈಗ ಎರಡನೆ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಯಾರಾದರೂ ವರ್ಗಾವಣೆಗೆ ಲಂಚ ತೆಗೆದುಕೊಂಡಿರುವುದನ್ನು ತೋರಿಸಿದರೆ ರಾಜಕೀಯದಿಂದಲೆ ನಿವೃತ್ತಿಯಾಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಅವರು, ನಮ್ಮ ಸರಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳು ಆಗಿಲ್ಲ. ಆಡಳಿತಾತ್ಮಕ ದೃಷ್ಟಿಯಿಂದ ಹಾಗೂ ಶಾಸಕರ ಮನವಿ ಸೇರಿದಂತೆ ಅನೇಕ ಕಾರಣಗಳಿಂದ ಹೆಚ್ಚು ವರ್ಗಾವಣೆ ಆಗಿರಬಹುದು ಎಂದರು.
ಈ ಹಿಂದಿನ ಸರಕಾರ ಇದ್ದಾಗ ಅವರ ಪಕ್ಷದ ಶಾಸಕರ ಕೋರಿಕೆ ಮೇರೆಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿರಬಹುದು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೂ ವರ್ಗಾವಣೆಗಳು ಆಗಿವೆ. ಆದರೆ, ಅದನ್ನೆ ದಂಧೆ, ವ್ಯಾಪಾರ ಎನ್ನುವುದು ಹಾಸ್ಯಸ್ಪದ ಹಾಗೂ ಸತ್ಯಕ್ಕೆ ದೂರವಾದದ್ದು. ಅವರ ಕಾಲದಲ್ಲಿ ಮಾಡಿರುವ ವರ್ಗಾವಣೆಗಳು ದಂಧೆಯೆ? ಎಂದು ಅವರು ಪ್ರಶ್ನಿಸಿದರು.
ನನ್ನ ಅಧೀನದಲ್ಲಿರುವ ಡಿಪಿಆರ್, ಖಜಾನೆ, ವಾಣಿಜ್ಯ ತೆರಿಗೆ ಸೇರಿದಂತೆ ಯಾವ ಇಲಾಖೆಯಲ್ಲಿಯೂ ವರ್ಗಾವಣೆ ಮಾಡಿಲ್ಲ. ನಮ್ಮ ಸಚಿವರಿಗೂ ಯಾವ ಕಾರಣಕ್ಕೂ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳುವಂತೆ ಹೇಳಿದ್ದೇನೆ. ನಮ್ಮ ಸರಕಾರದ ವಿರುದ್ಧ ಮಾಡಿರುವ ವರ್ಗಾವಣೆಯ ಭ್ರಷ್ಟಾಚಾರದ ಆರೋಪಗಳು ಕಪೋಲಕಲ್ಪಿತ ಎಂದು ಸಿದ್ದರಾಮಯ್ಯ ಹೇಳಿದರು.
ನಾವು ಐದು ಗ್ಯಾರಂಟಿಗಳನ್ನು ಹೇಳಿರುವುದರಿಂದ ಅವರಿಗೆ ರಾಜಕೀಯ ಭಯ ಶುರುವಾಗಿದೆ. ರಾಜಕೀಯ ಅಭದ್ರತೆ ಶುರುವಾಗಿದೆ. ಆದುದರಿಂದ, ಕೆಲವು ಆರೋಪಗಳನ್ನು ಮಾಡಿದ್ದಾರೆ. ಹಿಂದಿನ ಸರಕಾರದ ಅಕ್ರಮಗಳ ಬಗ್ಗೆ ತನಿಖೆಗೆ ನಿರ್ಧಾರ ಮಾಡಿದ್ದೇನೆ. ನಮ್ಮ ಕಾಲದಲ್ಲಿ ಭ್ರಷ್ಟಾಚಾರ ಆಗಿದ್ದರೆ ತನಿಖೆ ಮಾಡಿಸಿ ಎಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಿಗೆ ಹತ್ತು ಬಾರಿ ಹೇಳಿದ್ದೇನೆ. ನಮ್ಮ ವಿರುದ್ಧದ ಆರೋಪಗಳಿಗೆ ದಾಖಲೆಗಳು ಇಲ್ಲ ಅಂತಾ ತನಿಖೆ ಮಾಡಿಸಲಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ಸರಕಾರದ ಆಡಳಿತದಲ್ಲಿನ ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ, ಸಮಾಜದ ಸಾಮರಸ್ಯ ಕೆಡಿಸಿದಕ್ಕೆ ಜನರು ಅವರನ್ನು ತಿರಸ್ಕರಿಸಿದ್ದಾರೆ. 2008 ರಿಂದ ಈವರೆಗೆ ಯಾವ ಚುನಾವಣೆಯಲ್ಲಾದರೂ ಬಹುಮತ ಸಿಕ್ಕಿದೆಯಾ? ಕುತಂತ್ರದಿಂದ ಆಪರೇಷನ್ ಕಮಲ ಮಾಡಿ ನೀವು ಅಧಿಕಾರಕ್ಕೆ ಬಂದವರು. ರಾಜ್ಯದ ಇತಿಹಾಸದಲ್ಲಿ ನೀವು ಎಂದಿಗೂ ಜನರ ಆಶೀರ್ವಾದಿಂದ ಅಧಿಕಾರಕ್ಕೆ ಬಂದಿಲ್ಲ ಎಂದು ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಈ ಹಿಂದೆ ನೀವು ಎಲ್ಲ ಭಾಗ್ಯಗಳನ್ನು ಕೊಟ್ಟರೂ ಅಧಿಕಾರಕ್ಕೆ ಬಂದಿರಲಿಲ್ಲ. 2013ರಲ್ಲಿ ನಮ್ಮಲ್ಲಿನ ಒಡುಕುಗಳಿಂದ ನೀವು ಅಧಿಕಾರಕ್ಕೆ ಬಂದಿದ್ದೀರಾ. ನಿಮ್ಮ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಈಗ ನೀವು ಗೆದ್ದಿರುವುದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದರು.
ಬೊಮ್ಮಾಯಿ ವಿಪಕ್ಷ ನಾಯಕನಾಗಲಿ: ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದ ನಾಯಕರಾಗಲಿ ಎಂದು ಆಶಿಸುತ್ತೇನೆ. ಆದರೆ, ಇಷ್ಟು ದಿನವಾದರೂ ವಿರೋಧ ಪಕ್ಷದ ನಾಯಕನ ನೇಮಕ ಮಾಡಲಿಲ್ಲ. ಅಧಿವೇಶನ ಆರಂಭವಾಗಿ 12 ದಿನ ಆಗುತ್ತಿದೆ. ರಾಜ್ಯದ ಇತಿಹಾಸದಲ್ಲಿ ಎಂದೂ ಹೀಗೆ ಆಗಿರಲಿಲ್ಲ. ಯಾಕೆ ನಿಮ್ಮ ಮೇಲೆ ವಿಶ್ವಾಸವಿಲ್ಲವೋ, ಅಥವಾ ಬೇರೆಯಾರಾದರೂ ಆ ಸ್ಥಾನಕ್ಕೆ ಬರುತ್ತಾರೋ ಎಂದು ಮುಖ್ಯಮಂತ್ರಿ ಹೇಳಿದರು.
‘ನಿಮ್ಮ ತಪ್ಪಿಗೆ ಸಿದ್ದರಾಮಣ್ಣ ಬಲಿಯಾಗುವುದು ಬೇಡ’
ವರ್ಗಾವಣೆ ಮಾಡೋದು ಅಥವಾ ಯಾವುದೊ ಕಡತಕ್ಕೆ ಸಹಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಣ್ಣ ಹಣ ಪಡೆಯುತ್ತಾರೆ ಎಂದು ಯಾರೂ ಹೇಳಿದರು ನಾನು ನಂಬಲ್ಲ. ಅವರು ಹಣ ಲೂಟಿ ಮಾಡುತ್ತಾರೆ ಎಂದು ಯಾರೂ ಹೇಳಿಲ್ಲ ಎಂದು ಜೆಡಿಎಸ್ ಹಿರಿಯ ಸದಸ್ಯ ಎಚ್.ಡಿ.ರೇವಣ್ಣ ಹೇಳಿದರು.