ʼಮುರುಘಾಶ್ರೀ ವಿರುದ್ಧದ ಪ್ರಕರಣದ ವಿಚಾರಣೆ ದಿಕ್ಕು ತಪ್ಪಲಿದೆಯೇ?ʼ; ಹೈಕೋರ್ಟ್ ಕಳವಳ
ಬೆಂಗಳೂರು, ಅ.5: ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧದ ಪೊಕ್ಸೊ ಪ್ರಕರಣದಲ್ಲಿ ಮಠದ ಮಾಜಿ ಆಡಳಿತಾಕಾರಿ ಎಸ್.ಕೆ.ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ಅವರ ವಿರುದ್ಧ ಪ್ರತಿ ದೂರು ದಾಖಲಿಸಿರುವುದರಿಂದ ಶ್ರೀಗಳ ವಿರುದ್ಧದ ಪೊಕ್ಸೊ ಪ್ರಕರಣದ ವಿಚಾರಣೆ ದಿಕ್ಕು ತಪ್ಪಲಿದೆಯೇ? ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
'ಮುರುಘಾಶ್ರೀ ವಿರುದ್ಧದ ಪ್ರಕರಣ ಸೆಷನ್ಸ್ ಕೋರ್ಟ್ನಲ್ಲಿ ವಿಚಾರಣೆ ಹಂತ ತಲುಪಿದ್ದು, ಸತ್ಯ ಹೊರಬರಲಿ ಬಿಡಿ ಎಂದು ಹೇಳಿದೆ. ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಬಸವರಾಜನ್ ಮತ್ತು ಸೌಭಾಗ್ಯ ಸಲ್ಲಿಸಿರುವ ಅರ್ಜಿ ಕುರಿತು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯಪೀಠವು ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲರು, ಬಸವಪ್ರಭು ಸ್ವಾಮೀಜಿ ಸಲ್ಲಿಸಿರುವ ಈ ದೂರಿನಲ್ಲಿ ಯಾವುದೇ ಹುರುಳಿಲ್ಲ. ಶಿವಮೂರ್ತಿ ಶರಣರ ವಿರುದ್ಧ ದಾಖಲಾಗಿರುವ ಬಾಲಕಿಯರ ಮೇಲಿನ ಅತ್ಯಾಚಾರದ ಆಪಾದನೆಗಳಿಗೆ ರಕ್ಷಣೆ ಪಡೆಯಲು ಇಂತಹ ಪ್ರತಿ ದೂರು ದಾಖಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಈ ಕುರಿತಂತೆ ಸರಕಾರಿ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ, ಪ್ರತಿ ದೂರನ್ನು ಗಮನಿಸಿದರೆ ಈ ಪ್ರಕರಣದಲ್ಲಿನ ಸಾಕ್ಷಿಗಳ ರಕ್ಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿತು. ಅಂತೆಯೇ, ಪ್ರಕರಣದ ಕುರಿತಂತೆ ಜೆಎಂಎಫ್ಸಿ ಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆಗೆ ನೀಡಿರುವ ತಡೆ ಆದೇಶವನ್ನು ಮುಂದುವರಿಸಿ ವಿಚಾರಣೆಯನ್ನು ಅ.9ಕ್ಕೆ ಮುಂದೂಡಿತು. ಮುಂದಿನ ದಿನಾಂಕದಂದು ಯಾವುದೇ ಕಾರಣಕ್ಕೂ ವಿಚಾರಣೆ ವಿಸ್ತರಣೆ ಕೋರಿಕೆ ಪರಿಗಣಿಸಲಾಗುವುದಿಲ್ಲ ಎಂದು ಪ್ರತಿವಾದಿಗಳಿಗೆ ಎಚ್ಚರಿಕೆ ನೀಡಿತು.