ನಾಳೆಯಿಂದ ಕುಂದಾ ನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
ರಾಜ್ಯ ಸರಕಾರದ ವಿರುದ್ಧ ಹೋರಾಡಲು ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸಜ್ಜು
►ವಿಪಕ್ಷಗಳಿಗೆ ತಿರುಗೇಟು ನೀಡಲು ಸರಕಾರದ ಸಿದ್ಧತೆ
ಬೆಂಗಳೂರು: ಕುಂದಾನಗರ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಮೊದಲ ಚಳಿಗಾಲದ ಅಧಿವೇಶನ ಡಿ.4 ರಿಂದ 15ರವರೆಗೆ ನಡೆಯಲಿದ್ದು, ಸದನದಲ್ಲಿ ಸರಕಾರದ ವಿರುದ್ಧ ಹೋರಾಡಲು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಕೈ ಜೋಡಿಸಿವೆ. ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಲು ಸರಕಾರವು ಸಿದ್ಧತೆಗಳನ್ನು ಮಾಡಿಕೊಂಡಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸದನದ ಒಳಗೆ ಸರಕಾರದ ವಿರುದ್ಧ ಜಂಟಿ ಹೋರಾಟ ನಡೆಸಲಿವೆ. ಇದೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಆರ್.ಅಶೋಕ್ ಅವರಿಗೆ ಇದು ಹೊಸ ಸವಾಲಾಗಿದೆ.
ವಿಪಕ್ಷಗಳ ಬತ್ತಳಕೆಯಲ್ಲಿನ ಅಸ್ತ್ರಗಳು?: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಯನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿರುವುದು. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿ(ಜಾತಿ ಜನಗಣತಿ)ಯ ಮೂಲ ಪ್ರತಿ ನಾಪತ್ತೆಯಾಗಿರುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರಕಾರಕ್ಕೆ ಬರೆದಿರುವ ಪತ್ರ.
ಸರಕಾರಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಮಾಜಿ ಶಾಸಕ ಡಾ.ಯತೀಂದ್ರ ಹಸ್ತಕ್ಷೇಪ ಮಾಡುವ ಆರೋಪ. ರಾಜ್ಯದ 200ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರಗಾಲ ಇದ್ದರೂ, ಸಮಪರ್ಕವಾಗಿ ನಿರ್ವಹಿಸಲು ಸರಕಾರ ವಿಫಲವಾಗಿದೆ ಎಂಬ ಆರೋಪ. ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ತಡೆಯುವಲ್ಲಿ ವಿಫಲ, ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಲೋಪ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ನೀಡುತ್ತಿದ್ದ ಅನುದಾನ ಕಡಿತದ ಆರೋಪಗಳನ್ನು ಮುಂದಿಟ್ಟುಕೊಂಡು ಹೋರಾಡಲು ಪ್ರತಿಪಕ್ಷಗಳು ಸಜ್ಜಾಗಿವೆ.
ಅಲ್ಲದೆ, ಸಚಿವರ ವಿರುದ್ಧ ಶಾಸಕ ಬಿ.ಆರ್.ಪಾಟೀಲ್ ಮುಖ್ಯಮಂತ್ರಿಗೆ ಬರೆದಿರುವ ಪತ್ರ, ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ಪತ್ರ ಬಂದಿರುವುದು ಸೇರಿದಂತೆ ಇನ್ನೂ ಅನೇಕ ವಿಚಾರಗಳೆ ಸರಕಾರದ ವಿರುದ್ಧ ಮುಗಿಬೀಳಲು ವಿರೋಧ ಪಕ್ಷಗಳ ಬತ್ತಳಕೆಯಲ್ಲಿನ ಪ್ರಮುಖ ಅಸ್ತ್ರಗಳಾಗಿವೆ.
ಝಮೀರ್ ವಿರುದ್ಧ ಹಕ್ಕುಚ್ಯುತಿ?: ತೆಲಂಗಾಣ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸ್ಪೀಕರ್ ಸ್ಥಾನದ ಬಗ್ಗೆ ಉಲ್ಲೇಖಿಸಿ ವಿಪಕ್ಷಗಳ ಸದಸ್ಯರನ್ನು ಟೀಕಿಸಿದ ಆರೋಪದ ಹಿನ್ನೆಲೆಯಲ್ಲಿ ಸಚಿವ ಝಮೀರ್ ಅಹ್ಮದ್ ಖಾನ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಿರ್ಧರಿಸಿವೆ. ಅಧಿವೇಶನದ ಮೊದಲ ದಿನವೇ ಝಮೀರ್ ಅಹ್ಮದ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಧರಣಿ ನಡೆಸುವ ಸಾಧ್ಯತೆಗಳಿವೆ.
ವಿಪಕ್ಷಗಳಿಗೆ ತಿರುಗೇಟು ನೀಡಲು ಸರಕಾರದ ಸಿದ್ಧತೆ: ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ಅಡ್ವೊಕೇಟ್ ಜನರಲ್ ಸಲಹೆಯನ್ನು ಕಡೆಗಣಿಸಿ, ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಆರೋಪದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದು ಕಾನೂನು ಬಾಹಿರವೆಂದು ಹಿಂಪಡೆದಿರುವುದು ಎಂಬುದು ಸರಕಾರದ ಸಮರ್ಥನೆ.
ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿದ್ದರೂ ಕೇಂದ್ರ ಸರಕಾರ ರಾಜ್ಯಕ್ಕೆ ಎನ್‍ಡಿಆರ್ ಎಫ್ ನಿಯಮಾವಳಿಗಳ ಅನ್ವಯ ಈವರೆಗೆ ಪರಿಹಾರ ಬಿಡುಗಡೆ ಮಾಡದೆ ಇರುವುದು, ಯತೀಂದ್ರ ವಿರುದ್ಧದ ಆರೋಪ ನಿರಾಕರಣೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ವಿವರಣೆ ನೀಡಲು ಸರಕಾರ ಸಿದ್ಧತೆ ಮಾಡಿಕೊಂಡಿದೆ.
ಪ್ರತಿಪಕ್ಷಗಳ ಆರೋಪಗಳಿಗೆ ಸಮರ್ಥವಾಗಿ ಪ್ರತ್ಯುತ್ತರ ನೀಡುವಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಸಚಿವರಿಗೆ ಸೂಚನೆಗಳನ್ನು ನೀಡಿದ್ದಾರೆ. ತಳಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿರುವುದು, ಕೇಂದ್ರ ಸರಕಾರದಿಂದ ಆಗುತ್ತಿರುವ ಅಸಹಕಾರದ ವಿಚಾರವನ್ನು ಪ್ರಧಾನವಾಗಿ ಸದನದಲ್ಲಿ ಬಿಂಬಿಸುವಂತೆ ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಪೂರ್ಣಗೊಂಡಿರುವುದರಿಂದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ, ರಾಜ್ಯದ ಆರ್ಥಿಕ ಪರಿಸ್ಥಿತಿ, ಸರಕಾರದ ಸಾಧನೆಗಳ ಬಗ್ಗೆಯೂ ಸದನದಲ್ಲಿ ವಿಪಕ್ಷಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಸರಕಾರ ಮಾಡಲಿದೆ ಎಂದು ತಿಳಿದು ಬಂದಿದೆ.
ಉತ್ಸಾಹ ಹೆಚ್ಚಿಸಿದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ: ಮುಂಬರುವ ಲೋಕಸಭಾ ಚುನಾವಣೆಗೆ ಸೆಮಿ ಫೈನಲ್ ಎಂದೇ ಬಿಂಬಿಸಲ್ಪಟ್ಟಿದ್ದ ರಾಜಸ್ತಾನ, ತೆಲಂಗಾಣ, ಛತ್ತೀಸ್‍ಗಡ, ಮಧ್ಯಪ್ರದೇಶ ಹಾಗೂ ಮಿಝೋರಾಂ ರಾಜ್ಯಗಳ ಚುನಾವಣಾ ಫಲಿತಾಂಶವು ಪ್ರತಿಪಕ್ಷಗಳ ಪಾಳಯದಲ್ಲಿ ಉತ್ಸಾಹ ತುಂಬಿಸಿದೆ.
ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಐದು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಸುಮಾರು ಎರಡು ಸಾವಿರ ಪೊಲೀಸರ ವಾಸ್ತವ್ಯಕ್ಕೆ ಸುವರ್ಣ ವಿಧಾನಸೌಧದ ಸಮೀಪ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಪೊಲೀಸರ ವಾಸ್ತವ್ಯಕ್ಕೆ ಅಲ್ಲಿ ಜರ್ಮನ್ ಟೆಂಟ್, ಕುಡಿಯುವ ನೀರು, ಶೌಚಾಲಯ, ಬಿಸಿ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.