ಮಹಿಳೆಯ ಅಪಹರಣ ಪ್ರಕರಣ | ಎಸ್‌ಐಟಿ ಕಸ್ಟಡಿಗೆ ಎಚ್.ಡಿ.ರೇವಣ್ಣ ; ನ್ಯಾಯಾಲಯ ಆದೇಶ
ಬೆಂಗಳೂರು : ಸಂತ್ರಸ್ತ ಮಹಿಳೆಯ ಅಪಹರಣ ಆರೋಪ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ)ದಿಂದ ಬಂಧನಕ್ಕೊಳಗಾಗಿರುವ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಮೇ 8ರ ವರೆಗೆ ‘ಎಸ್‌ಐಟಿ’ ಕಸ್ಟಡಿಗೆ ನೀಡಿ 17ನೆ ಎಸಿಎಂಎಂ ನ್ಯಾಯಾಲಯ ನ್ಯಾಯಾಧೀಶ ರವೀಂದ್ರ ಕುಮಾರ್ ಬಿ. ಕಟ್ಟೀಮನಿ ಆದೇಶ ಹೊರಡಿಸಿದ್ದಾರೆ.
ಮೈಸೂರಿನ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣದಲ್ಲಿ ಎರಡು ದಿನಗಳ ಹಿಂದೆಷ್ಟೇ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ನಿವಾಸದಲ್ಲಿದ್ದ ಎಚ್.ಡಿ.ರೇವಣ್ಣ ಅವರನ್ನು ಎಸ್‌ಐಟಿ ತನಿಖಾಧಿಕಾರಿಗಳು ಬಂಧಿಸಿದ್ದರು.
ಬಳಿಕ ಸಿಐಡಿಯಲ್ಲಿರುವ ಎಸ್‌ಐಟಿ ಕಚೇರಿಯಲ್ಲಿ ರೇವಣ್ಣ ಅವರನ್ನು ತನಿಖಾಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. ಹೆಚ್ಚಿನ ತನಿಖೆ ಅಗತ್ಯತೆ ಹಿನ್ನೆಲೆ ರವಿವಾರ ಅವರನ್ನು ಕೋರಮಂಗಲದ ಎನ್.ಜಿ.ವಿ.ಯಲ್ಲಿರುವ 17ನೆ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಕುಮಾರ್ ಬಿ. ಕಟ್ಟೀಮನಿ ಅವರ ನಿವಾಸದ ಮುಂದೆ ಹಾಜರುಪಡಿಸಿದ್ದರು.
ಈ ವೇಳೆ ಪ್ರಕರಣದಲ್ಲಿ ರೇವಣ್ಣ ಅವರ ಹೆಚ್ಚಿನ ವಿಚಾರಣೆ ಅಗತ್ಯವಿರುವುದರಿಂದ 5 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಎಸ್‌ಐಟಿ ಅಧಿಕಾರಿಗಳು ಮನವಿ ಸಲ್ಲಿಸಿದ್ದರು. ಮತ್ತೊಂದೆಡೆ, ಎಸ್‌ಐಟಿ ಕಸ್ಟಡಿಗೆ ನೀಡದಂತೆ ರೇವಣ್ಣ ಅವರ ಪರ ವಕೀಲ ಮೂರ್ತಿ ಡಿ.ನಾಯ್ಕ್ ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಮೇ 8ರ ವರೆಗೆ ರೇವಣ್ಣ ಅವರನ್ನು ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.
ಮಂಗಳೂರಿನತ್ತ ಪ್ರಜ್ವಲ್ ರೇವಣ್ಣ?: ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದು, ರವಿವಾರ ತಡರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಿಶೇಷ ತನಿಖಾ ಅಧಿಕಾರಿಗಳು ಬಂಧಿಸಲಿದ್ದು, ಹಾಸನಕ್ಕೆ ಕರೆತರುವ ಸಾಧ್ಯತೆ ಇದೆ.
ಗೊಂದಲದ ಹೇಳಿಕೆ ನೀಡುತ್ತಿರುವ ಸಂತ್ರಸ್ತೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮಹಿಳೆಯನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.ಆದರೆ. ಸಂತ್ರಸ್ತೆ ಯಾರು ನನ್ನನ್ನು ಅಪಹರಣ ಮಾಡಿಲ್ಲ ನಾನೇ ಹೋಗಿದ್ದು ಎಂದು ಒಂದು ಬಾರಿ ಹೇಳಿದರೆ, ಇನ್ನೊಂದು ಸಲ ಯಾರೋ ಸ್ಥಳೀಯರು ಬಂದು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಸಂತ್ರಸ್ತೆಯ ಉತ್ತರಗಳಿಗೆ ಅಧಿಕಾರಿಗಳಲ್ಲಿ ಗೊಂದಲ ಮೂಡಿದೆ ಎನ್ನಲಾಗಿದೆ.