ಮಣಿಪುರದಲ್ಲಿ ಮಹಿಳೆಯರ ನಗ್ನ ಮೆರವಣಿಗೆ: ಹಿರಿಯ ಸಾಹಿತಿಗಳ ಖಂಡನೆ
Screengrab : Twitter
ಬೆಂಗಳೂರು, ಜು. 20: ‘ಮೂವರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿ, ದೈಹಿಕ ಹಲ್ಲೆ ಮಾಡುತ್ತ, ಗುಂಪು ಅತ್ಯಾಚಾರ ಎಸಗಿರುವ ಮಣಿಪುರದ ಅತ್ಯಂತ ಹೇಯವಾದ ಪಾತಕಿ ಘಟನೆಯನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ‘ಜಾಗೃತ ನಾಗರಿಕರು ಕರ್ನಾಟಕ’ ತಿಳಿಸಿದೆ.
ಗುರುವಾರ ಈ ಸಂಬಂಧ ಪ್ರಕಟನೆ ನೀಡಿರುವ ಹಿರಿಯ ಸಾಹಿತಿಗಳಾದ ಪ್ರೊ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ವಿಜಯಾ, ವಿಮಲಾ ಕೆ.ಎಸ್, ಪ್ರೊ.ರಾಜೇಂದ್ರ ಚೆನ್ನಿ, ಶ್ರೀಪಾದ ಭಟ್ ಸೇರಿದಂತೆ ಇನ್ನಿತರರು, ‘ಇದು 25 ದಿನಗಳ ಹಿಂದೆ ನಡೆದಿದ್ದು ಈಗ ಬೆಳಕಿಗೆ ಬರುತ್ತಿದೆ. ಅದೇ ಸಮಯದಲ್ಲಿ ಇದರ ಬಗ್ಗೆ ಲಕ್ಷ್ಯವೇ ಇಲ್ಲದೆ, ‘ರೋಮ್ ನಗರ ಉರಿಯುತ್ತಿದ್ದಾಗ ನೀರೋ ಚಕ್ರವರ್ತಿ ಪಿಟೀಲು ನುಡಿಸುತ್ತಿದ್ದ’ ಎಂಬಂತೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಕರ್ನಾಟಕದ ಚುನಾವಣೆಯಲ್ಲಿ ಅಬ್ಬರದ ಪ್ರಚಾರದಲ್ಲಿ ಮುಳುಗಿದ್ದರು. ಈ ಘಟನೆ ಭಾರತದ ಅಂತಃಸಾಕ್ಷಿಯನ್ನು ತೀವ್ರವಾಗಿ ಕಲಕಿದೆ’ ಎಂದು ವಿಶ್ಲೇಷಿಸಿದ್ದಾರೆ.
‘ಮಣಿಪುರ ಹೊತ್ತಿ ಉರಿಯುತ್ತಿರುವಾಗಲೂ ಇದುವರೆಗೂ ಸೊಲ್ಲೆತ್ತದೆ ಇರುವ ಪ್ರಧಾನಿ ಕಾರ್ಯ ವಿಧಾನವೇ ಆಕ್ಷೇಪಾರ್ಹವಾಗಿದೆ. ಎರಡು ಸಮುದಾಯಗಳ ಮಧ್ಯೆ ಹಚ್ಚಿದ ಬೆಂಕಿಯನ್ನು ಆರಿಸುವ ಬದಲು ಒಡೆದು ಆಳುುವ ನೀತಿಯನ್ನು ಕೇಂದ್ರದ ಒಕ್ಕೂಟ ಸರಕಾರವೇ ಮಾಡುತ್ತಿರುವ ಅಕ್ಷಮ್ಯ ಅಪರಾಧದ ಮುಂದುವರೆದ ಭಾಗ ಇದಾಗಿದೆ’ ಎಂದು ಅವರುಗಳು ಟೀಕಿಸಿದ್ದಾರೆ.
‘ಕೇಂದ್ರದ ಒಕ್ಕೂಟ ಸರಕಾರವು ಮಣಿಪುರದ ಪರಿಸ್ಥಿತಿಯನ್ನು ಆಳುವ ಪಕ್ಷದ ಹಿತಾಸಕ್ತಿಗೆ ಉಪಯೋಗಿಸಿ ಕೊಳ್ಳುವುದನ್ನು ನಿಲ್ಲಿಸಬೇಕು. ಬಿಜೆಪಿಯು ಅಲ್ಲಿನ ಮುಖ್ಯಮಂತ್ರಿಯನ್ನು ಕೆಳಗಿಳಿಸಬೇಕು. ಕೇಂದ್ರವು ಅಲ್ಲಿ ಕಾನೂನು ವ್ಯವಸ್ಥೆ ಪುನರ್ ಸ್ಥಾಪಿಸಬೇಕು, ಸಾವು-ನೋವಿಗೆ ತುತ್ತಾದವರಿಗೆ, ಆಸ್ತಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಪಾತಕಿಗಳಿಗೆ ಉಗ್ರ ಶಿಕ್ಷೆಯನ್ನು ಖಾತ್ರಿ ಪಡಿಸಬೇಕು ಎಂದು ಗಣ್ಯರು ಒತ್ತಾಯಿಸಿದ್ದಾರೆ.