ಅದಾನಿ, ಅಂಬಾನಿ ಅವರ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗುವುದಿಲ್ಲವೇ: BJP ನಾಯಕರಿಗೆ ಸಚಿವ ಮುನಿಯಪ್ಪ ಪ್ರಶ್ನೆ
ಮೈಸೂರು,ನ.6: 'ಬಡವರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದರೆ ರಾಜ್ಯ ದಿವಾಳಿಯಾಗಲಿದೆ ಎನ್ನುವ ಬಿಜೆಪಿಯವರಿಗೆ ಅದಾನಿ, ಅಂಬಾನಿ ಅವರ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗುವುದಿಲ್ಲವೇ' ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಡವರಿಗೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿ ಸಬಲರನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿದೆ. ಉಚಿತ ಅಕ್ಕಿ ನೀಡಿದರೆ, ಉಚಿತ ಬಸ್, ಉಚಿತ ವಿದ್ಯುತ್ ನೀಡಿದರೆ ರಾಜ್ಯ ದಿವಾಳಿಯಾಗಲಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಾದರೆ ಅದಾನಿ, ಅಂಬಾನಿ ಅವರ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗುವುದಿಲ್ಲವೆ? ನಾವು ಇವರು ಸಾಲ ಮನ್ನಾ ಮಾಡಿರುವ ಶೇ10 ರ ಒಂದು ಭಾಗವನ್ನು ಖರ್ಚು ಮಾಡುತ್ತಿಲ್ಲ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ಖರ್ಚಾಗುತ್ತಿದೆ. ಸಿದ್ಧರಾಮಯ್ಯ ಉತ್ತಮ ಆಡಳಿತ ನಡೆಸುತ್ತಿದ್ದಾರೆ.ರಾಜ್ಯದ ಯಾವುದೇ ಅಭಿವೃದ್ಧಿಯು ಕುಂಠಿತವಾಗುವುದಿಲ್ಲ, ಮುಂದಿನ ವರ್ಷದಿಂದ ಎಲ್ಲಾ ಆಭಿವೃದ್ಧಿ ಕಾರ್ಯಗಳು ಎಂದಿನಂತೆ ಮುಂದುವರಿಯುತ್ತವೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸುಭದ್ರವಾಗಿದೆ ಅದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ, ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಕಚಕ್ಯತೆಯಿಂದ ಸರ್ಕಾರ ನಡೆಸುತ್ತಿದ್ದಾರೆ. ರಾಜ್ಯದ 224 ಶಾಸಕರಿಗೂ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇರುತ್ತದೆ ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.
ನಾವು 136 ಸ್ಥಾನವನ್ನು ಪಡೆದು ಸರ್ಕಾರ ರಚಿಸಿದ್ದೇವೆ. ಹಾಗಾಗಿ ನಮ್ಮ ಸರ್ಕಾರವನ್ನು ಅಷ್ಟು ಸುಲಭವಾಗಿ ಅಲುಗಾಡಿಸಲು ಸಾಧ್ಯವೆ? ನಮ್ಮಲ್ಲಿ ಗೆದ್ದಿರುವ ಎಲ್ಲಾ ಶಾಸಕರಿಗು ಮಂತ್ರಿಯಾಗಬೇಕು ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಕೆಲವರು ಮಾತನಾಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.