ಬೆಂಗಳೂರಿಗೆ ಅಪಕೀರ್ತಿ ತರುವ ಮಾತುಗಳು ಸರಿಯಲ್ಲ : ಗೃಹ ಸಚಿವ ಪರಮೇಶ್ವರ್
"ದೇವೇಗೌಡರ ಪತ್ರಕ್ಕೆ ಗೌರವ ಕೊಟ್ಟು ಪ್ರಜ್ವಲ್ ವಾಪಸ್ ಆಗಬೇಕು"
ಬೆಂಗಳೂರು : ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟಹಾಕುವ ನಿಟ್ಟಿನಲ್ಲಿ ಇಲಾಖೆಯು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಬೆಂಗಳೂರಿಗೆ ಅಪಕೀರ್ತಿ ತರುವಂತಹ ಮಾತುಗಳನ್ನಾಡುವುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಸಾವಿರಾರು ಕೆಜಿ ಗಾಂಜಾ, ಎಂಡಿಎಂಎ, ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ವಿದೇಶಿಗರನ್ನು ಗಡಿಪಾರು ಮಾಡಲಾಗಿದ್ದು, ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಇಷ್ಟೆಲ್ಲಾ ಕೆಲಸ ಮಾಡಿದಾಗಿಯೂ ಬೆಂಗಳೂರು ಬಗ್ಗೆ ಮಾತನಾಡುವುದು ಸರಿಯಲ್ಲ. ಇನ್ನೂ ಹೆಚ್ಚು ನಿಯಂತ್ರಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಲಿ. ಆದರೆ, ಬೆಂಗಳೂರಿಗೆ ಅಪಕೀರ್ತಿ ತರುವಂತಹ ಮಾತನ್ನು ಆಡಬಾರದು" ಎಂದು ಎಚ್ಚರಿಸಿದರು.
ʼಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ಒಂದು ವರ್ಷದಿಂದ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಯ ಸಮಸ್ಯೆಯಾಗದಂತೆ ನೋಡಿಕೊಂಡಿದ್ದೇವೆ. ಬಿಜೆಪಿಯವರ ಕಾಲದಲ್ಲಿ ಕೊಲೆಗಳು ಆಗಿಲ್ಲವೇ?. ಅರೋಪಿಗಳನ್ನು ಹಿಡಿದು ಕಾನೂನಿನ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತಹ ಕೆಲಸವನ್ನು ತಕ್ಷಣವೇ ಮಾಡಿದ್ದೇವೆ. ಶೇ.95ರಷ್ಟು ಕೊಲೆ ಪ್ರಕರಣಗಳ ಆರೋಪಿಗಳನ್ನು 24 ಗಂಟೆಗಳಲ್ಲಿಯೇ ಹಿಡಿದಿದ್ದೇವೆ. ಸುಮ್ಮನೇ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬುದು ಸರಿಯಲ್ಲʼ ಎಂದರು.
ದೇವೇಗೌಡರ ಪತ್ರಕ್ಕೆ ಗೌರವ ಕೊಟ್ಟು ವಾಪಸ್ ಆಗಬೇಕು:
ಎಚ್.ಡಿ.ದೇವೆಗೌಡರು ಪ್ರಜ್ವಲ್‌ಗೆ ಪತ್ರ ಬರೆದಿದ್ದಾರೆ ಎಂಬುದು ಗೊತ್ತಾಗಿದೆ. ಅದು ಅವರ ಕುಟುಂಬದ ಆಂತರಿಕ ವಿಚಾರ ಇರಬಹುದು. ಪ್ರಜ್ವಲ್ ರೇವಣ್ಣ ಸಾರ್ವಜನಿಕ ದೃಷ್ಟಿಯಿಂದ ದೇವೇಗೌಡ ಅವರ ಪತ್ರಕ್ಕೆ ಗೌರವ ಕೊಟ್ಟು ದೇಶಕ್ಕೆ ವಾಪಸ್ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾನೂನು ಹೊರತುಪಡಿಸಿ ನಾವು ಯಾರು ಏನು ಮಾಡಲಾಗುವುದಿಲ್ಲ:
ಫೋನ್ ಟ್ಯಾಪಿಂಗ್ ಆರೋಪದ ಕುರಿತು ಪ್ರತಿಕ್ರಿಯಿಸಿ, "ಸುಮ್ಮನೆ ಅವರು ಬಾಯಿಗೆ ಬಂದಂತೆ ಮಾತನಾಡುವುದಲ್ಲ. ಫೋನ್ ಟ್ಯಾಪಿಂಗ್ ಯಾರು ಮಾಡುತ್ತಿದ್ದಾರೆ?, ಗೊತ್ತಿದ್ದರೆ ಹೇಳಲಿ. ಬಾಯಿಗೆ ಬಂದಿದ್ದು ಹೇಳಿದರೆ ಯಾರು ಕೇಳುತ್ತಾರೆ?. ದೇಶದಲ್ಲಿ, ರಾಜ್ಯದಲ್ಲಿ ಕಾನೂನು ಇದೆ. ಕಾನೂನು ಹೊರತುಪಡಿಸಿ ನಾವು ಯಾರು ಏನು ಮಾಡಲಾಗುವುದಿಲ್ಲ" ಎಂದು ಹೇಳಿದರು.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು ttps://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.