ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿ: ಯುವಪೀಳಿಗೆಗೆ ರಾಜ್ಯಪಾಲರ ಕರೆ

ಬೆಂಗಳೂರು, ಡಿ.10: ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿ ಎಂದು ಯುವಪೀಳಿಗೆಗೆ ಕರೆ ನೀಡಿದ್ದಾರೆ.
ಥಾವರ್ ಚಂದ್ ಗೆಹ್ಲೋಟ್ ಅವರು ಅಲಯನ್ಸ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಇಂದು ಇಡೀ ಪ್ರಪಂಚವು ವಿವಿಧ ಸವಾಲುಗಳೊಂದಿಗೆ ಹೋರಾಡುತ್ತಿದೆ. ಭಾರತೀಯ ಶಿಕ್ಷಣ ವ್ಯವಸ್ಥೆಯು ಪ್ರಾಚೀನ ಕಾಲದಿಂದಲೂ "ವಸುಧೈವ ಕುಟುಂಬಕಂ" ತತ್ವಶಾಸ್ತ್ರದ ಮೇಲೆ ಕೇಂದ್ರೀಕರಿಸಿದೆ. ಹೀಗಾಗಿ, ಆಧುನಿಕ ಜ್ಞಾನವನ್ನು ಮೌಲ್ಯಗಳೊಂದಿಗೆ ಸಂಯೋಜಿಸುವ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ನೈತಿಕ ಕರ್ತವ್ಯವಾಗಿದೆ, ಅದು ಜಗತ್ತಿಗೆ ಹೊಸ ದಿಕ್ಕನ್ನು ನೀಡುವುದಲ್ಲದೆ ಇಡೀ ಮಾನವಕುಲಕ್ಕೆ ಒಳ್ಳೆಯದನ್ನು ಮಾಡುತ್ತದೆ ಎಂದು ಹೇಳಿದರು.
ಮಹಾತ್ಮ ಗಾಂಧಿ ಉತ್ತಮ ಶಿಕ್ಷಣವು ಮನಸ್ಸು, ದೇಹ ಮತ್ತು ಆತ್ಮದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದು ನಂಬಿದ್ದರು. ನೀವು ನುರಿತ ವಿಜ್ಞಾನಿ, ವ್ಯವಸ್ಥಾಪಕ ಅಥವಾ ಬರಹಗಾರರಾಗಿರಬಹುದು ಆದರೆ ನಿಮ್ಮ ಶಿಕ್ಷಣವು ಮಾನವೀಯತೆಯ ಕಲ್ಯಾಣಕ್ಕಾಗಿ ಬಳಸಿದರೆ ಮಾತ್ರ ಉಪಯುಕ್ತ ಮತ್ತು ಪ್ರಸ್ತುತವಾಗಿರುತ್ತದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತಮ್ಮ ಸಾಮಥ್ರ್ಯಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂಬುದನ್ನು ಗಮನಿಸುವುದು ಸಹ ಹರ್ಷದಾಯಕವಾಗಿದೆ. ಇದು ಶಿಕ್ಷಣದ ಗುಣಮಟ್ಟ ಮತ್ತು ಪ್ರಸ್ತುತತೆಯನ್ನು ಪ್ರತಿಬಿಂಬಿಸುತ್ತದೆ. ಗುಣಮಟ್ಟದ ಶಿಕ್ಷಣ ಮತ್ತು ಬಲವಾದ ನೈತಿಕ ಮೌಲ್ಯಗಳಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ. ನಮ್ಮ ದೇಶವು ಅಭಿವೃದ್ಧಿಯ ಪಥದಲ್ಲಿದೆ ಮತ್ತು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಗಳು ಅವರು ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸುವ ಮೂಲಕ ನವ ಭಾರತವನ್ನು ನಿರ್ಮಿಸಲು ಬದ್ಧರಾಗಿದ್ದಾರೆ ಎಂದು ಹೇಳಿದರು.
ಅಲಯನ್ಸ್ ವಿಶ್ವವಿದ್ಯಾಲಯವು ಜ್ಞಾನ, ಕೌಶಲ್ಯ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ಒದಗಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾಲುದಾರನಾಗಲಿದೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದರು.
ಕಲಿಕೆ ಮತ್ತು ಬೋಧನೆಯ ಮೂಲಕ ದೇಶ ಮತ್ತು ಪ್ರಪಂಚದ ಸಮಗ್ರ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳು ನಿರಂತರವಾಗಿ ಕೊಡುಗೆ ನೀಡುತ್ತಿವೆ. ಉತ್ತಮ ಶಿಕ್ಷಣಕ್ಕಾಗಿ ಅವಕಾಶ ನೀಡಿದರೆ ಪ್ರತಿಯೊಬ್ಬ ವ್ಯಕ್ತಿಯು ತನ್ನ ಕನಸುಗಳನ್ನು ಸಾಧಿಸಬಹುದು. ಈ ಉದ್ದೇಶವನ್ನು ಇಟ್ಟುಕೊಂಡು, ಈ ವಿಶ್ವವಿದ್ಯಾಲಯವು ಗುಣಮಟ್ಟದ ಶಿಕ್ಷಣವನ್ನು ನೀಡಲು ಪ್ರಯತ್ನಿಸುತ್ತಿದೆ. ಉನ್ನತ ಗುಣಮಟ್ಟದ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಪೀಳಿಗೆಗೆ ಬೌದ್ಧಿಕ ಸಂವಾದ ಮತ್ತು ಜ್ಞಾನದ ಸಂಗ್ರಹಣೆಯನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸುವುದು ವಿಶ್ವವಿದ್ಯಾಲಯದ ಧ್ಯೇಯವಾಗಿದೆ ಎಂದರು.
ಈ ವೇಳೆ ಡಿಆರ್ ಡಿಓದ ಮಾಜಿ ಮಹಾನಿರ್ದೇಶಕ ಡಾ.ಟೇಸ್ಸಿ ಥೋಮಸ್, ಪ್ರೇಮಾನಂದ, ಮುಂತಾದ ಗಣ್ಯರು ಉಪಸ್ಥಿತರಿದ್ದರು.