ಅಪಾರ್ಟ್ಮೆಂಟ್ ಮಾಲಕತ್ವಕ್ಕೆ ಹೊಸ ಕಾನೂನು ರಚನೆ: ಡಿ.ಕೆ. ಶಿವಕುಮಾರ್
ಬೆಂಗಳೂರು: ಅಪಾರ್ಟ್ಮೆಂಟ್ ಮಾಲಕರು ಹಾಗೂ ಖರೀದಿದಾರರ ಹಕ್ಕನ್ನು ರಕ್ಷಿಸಲು ಕರ್ನಾಟಕ ರಾಜ್ಯದಾದ್ಯಂತ ಏಕರೂಪದ ನೂತನ ಕಾಯ್ದೆ ಜಾರಿಗೆ ತರುವ ಕೆಲಸ ಪ್ರಗತಿಯಲ್ಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನೂತನ ಕಾಯ್ದೆಯು ಈಗಾಗಲೇ ಜಾರಿಯಲ್ಲಿರುವ ಕರ್ನಾಟಕ ಅಪಾರ್ಟ್ಮೆಂಟ್ ಮಾಲಕತ್ವ ಕಾಯ್ದೆ, 1972 ಅನ್ನು ರದ್ದುಗೊಳಿಸಿದರೆ, ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ನಿಯಮಗಳು, 2017 ಅನ್ನು ಒಳಗೊಳ್ಳಲಿದೆ.
ಇದರಿಂದ ಅಪಾರ್ಟ್ಮೆಂಟ್ ಕೇಂದ್ರಿತ ರಿಯಲ್ ಎಸ್ಟೇಟ್ ಚುಟುವಟಿಕೆಗಳು ತೀವ್ರ ಗತಿಯಲ್ಲಿರುವ ಬೆಂಗಳೂರಿಗೆ ಲಾಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
"ನೂತನ ಕರ್ನಾಟಕ ಅಪಾರ್ಟ್ಮೆಂಟ್ ಮಾಲಕತ್ವ ಕಾಯ್ದೆಯನ್ನು ಪರಿಚಯಿಸಲು ಕ್ರಮ ಕೈಗೊಂಡಿದ್ದು, ಇದರಿಂದ ಎಲ್ಲ ನಗರಗಳು ಹಾಗೂ ಪಟ್ಟಣಗಳಲ್ಲಿ ಏಕರೂಪದ ಅರ್ಜಿ ಸಲ್ಲಿಕೆಗೆ ಅವಕಾಶವಾಗಲಿದೆ" ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
"ಸದ್ಯ 1972ರ ಕಾನೂನು ಜಾರಿಯಲ್ಲಿದೆ. ನಿವಾಸಿಗಳ ಸಂಘಗಳು ಸಹಕಾರ ಇಲಾಖೆಯಡಿ ನೋಂದಣಿಗೊಂಡಿವೆ. ಹೀಗಾಗಿ ಎರಡು ಪ್ರತ್ಯೇಕ ಇಲಾಖೆಗಳಿವೆ. ಇದರೊಂದಿಗೆ 2016ರಲ್ಲಿ ರೇರಾ ಕಾಯ್ದೆ ಜಾರಿಗೆ ಬಂದಿದೆ. ಹೀಗಾಗಿ ನಾವು ಚಾಲ್ತಿಯಲ್ಲಿರುವ ಕಾಯ್ದೆಯನ್ನು ರದ್ದುಗೊಳಿಸಿ, ಹೊಸ ಕಾಯ್ದೆಯನ್ನು ತರಬೇಕಿದೆ" ಎಂದು ಅವರು ತಿಳಿಸಿದ್ದಾರೆ.