ಯಶ್ ಅಭಿಮಾನಿಗಳ ಸಾವು ಪ್ರಕರಣ: ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ರಾಜ್ಯ ಸರಕಾರ
Photo: facebook.com/VVani4U
ಬೆಂಗಳೂರು- ಗದಗ: ಕನ್ನಡದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ಅಂಗವಾಗಿ ಕಟೌಟ್ ನಿಲ್ಲಿಸುವ ವೇಳೆ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಮೂವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರಕಾರ ಘೋಷಿಸಿದೆ.
ಈ ಕುರಿತು ʼಎಕ್ಸ್ʼ ನಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಫ್ಲೆಕ್ಸ್ ಕಟ್ಟುವ ವೇಳೆ ವಿದ್ಯುತ್ ಪ್ರವಹಿಸಿ ಮೂವರು ಯುವಕರು ಮೃತಪಟ್ಟ ಸುದ್ದಿ ತಿಳಿದು ಬೇಸರವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಬದುಕಿ ಬಾಳಬೇಕಿದ್ದ ಹುಡುಗರು ಹೀಗೆ ಅಚಾತುರ್ಯದಿಂದ ಸಾವಿಗೀಡಾಗಿದ್ದಾರೆ, ಅವರನ್ನು ನಂಬಿದ್ದ ಕುಟುಂಬವೀಗ ಸಂಕಷ್ಟಕ್ಕೆ ಸಿಲುಕಿದ್ದು ಆ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ಮೃತ ದುರ್ದೈವಿಗಳಿಗೆ ತಲಾ 2 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದ್ದೇನೆ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಏನಿದು ಘಟನೆ
ರವಿವಾರ ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ಅಂಗವಾಗಿ ಕಟೌಟ್ ನಿಲ್ಲಿಸುವ ವೇಳೆ ವಿದ್ಯುತ್ ತಂತಿ ತಗುಲಿ ಸೂರಣಗಿ ಗ್ರಾಮದ ಹನುಮಂತ ಹರಿಜನ(21), ಮುರಳಿ ನಡವಿನಮನಿ(20), ನವೀನ ಗಾಜಿ(19) ಎಂಬ ಮೂವರು ಯುವಕರು ಮೃತ ಪಟ್ಟಿದ್ದರು.
ಸೂರಣಗಿ ಗ್ರಾಮದ 10ಕ್ಕೂ ಹೆಚ್ಚು ಯುವಕರು, ಗ್ರಾಮದ ಅಂಬೇಡ್ಕರ್ ಸರ್ಕಲ್ ನಲ್ಲಿ 25 ಅಡಿ ಎತ್ತರದ ಬೃಹತ್ ಕಟೌಟ್ ನಿಲ್ಲಿಸುವ ವೇಳೆ ಕಟೌಟ್ ವಿದ್ಯುತ್ ತಂತಿಗೆ ಸ್ಪರ್ಶಿಸಿ ದುರ್ಘಟನೆ ಸಂಭವಿಸಿದೆ.
ಮೂವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.