ರಾಜ್ಯ ಸರಕಾರ, ವಿಜಯೇಂದ್ರ ನಡುವೆ ಹೊಂದಾಣಿಕೆ ಇದೆ : ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್
ಹುಬ್ಬಳ್ಳಿ : ‘ಹಣವನ್ನು ಕೊಟ್ಟು ಸರ್ವೆ ಮಾಡಿಸುವುದನ್ನು ಬಿಡಬೇಕು. ಸರಿಯಾದ ರೀತಿಯಲ್ಲಿ ಸರ್ವೇ ಆದರೆ, ನಾನೇ ನಂಬರ್ ಒನ್ ನಾಯಕ(ಲೀಡರ್)’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಪರೋಕ್ಷವಾಗಿ ಬಿಎಸ್ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಹಿಂದೂಗಳ ರಕ್ಷಣೆ ಮಾಡದಿರುವುದೇ ಬಿಜೆಪಿ ಸೋಲಿಗೆ ಪ್ರಮುಖ ಕಾರಣ. ಈ ಹಿನ್ನೆಲೆ ವಿಧಾನಸಭಾ ಚುನಾವಣೆಯಲ್ಲಿ ಯಾರೂ ಸರಿಯಾದ ಕೆಲಸ ಮಾಡಲಿಲ್ಲ. ಒಂದು ವೇಳೆ ಹಿಂದೂಗಳ ರಕ್ಷಣೆ ಮಾಡಿದ್ದರೆ ಉತ್ತರ ಪ್ರದೇಶದ ವಾತಾವರಣ ರಾಜ್ಯದಲ್ಲಿ ಇರುತ್ತಿತ್ತು’ ಎಂದು ಹೇಳಿದರು.
‘ಬಿಜೆಪಿಯಲ್ಲಿ ನಮ್ಮ ತಪ್ಪುಗಳು ಬಹಳಷ್ಟಿವೆ. ಯಡಿಯೂರಪ್ಪ ಏನೂ ಮಾಡಲಿಲ್ಲ, ಶಿವಮೊಗ್ಗದಲ್ಲಿ ನಿಯಂತ್ರಣ ಮಾಡದೇ ಅವರು ರಾಜ್ಯದಲ್ಲಿ ಏನು ಮಾಡುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದ ಯತ್ನಾಳ್, ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ವಾಲ್ಮೀಕಿ ನಿಗಮದಲ್ಲಿ ಮೀಸಲಿಟ್ಟ 187 ಕೋಟಿ ರೂ.ಲೂಟಿ ಮಾಡಿದ್ದಾರೆ. ಇದೀಗ ಅಭಿವೃದ್ಧಿಗೆ ಸರಕಾರದ ಬಳಿ ಹಣವಿಲ್ಲ’ ಎಂದು ದೂರಿದರು.
ರಾಜ್ಯ ಸರಕಾರ ಮತ್ತು ವಿಜಯೇಂದ್ರ ನಡುವೆ ಹೊಂದಾಣಿಕೆ ಇದೆ. ಹೀಗಾಗಿಯೇ ರಾಜ್ಯ ಸರಕಾರವನ್ನು ನಾವು ಟಾರ್ಗೆಟ್ ಮಾಡುತ್ತಿಲ್ಲ, ಬದಲಾಗಿ ಸಿ.ಟಿ.ರವಿ, ನನ್ನ ಸೇರಿದಂತೆ ಹಿಂದೂಪರವಾಗಿ ಮಾತನಾಡುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ, ವಿಜಯೇಂದ್ರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಇದನ್ನು ನೋಡಿದರೆ ಸರಕಾರ ಮತ್ತು ವಿಜಯೇಂದ್ರ ನಡುವೆ ಹೊಂದಾಣಿಕೆ ಇದೆ ಎಂದರು.
ನೆಹರೂಗೆ ಸರ್ವಾಧಿಕಾರಿ ಆಗುವ ಹಂಬಲವಿತ್ತು :
ಗಾಂಧೀಜಿಗೆ ಗೋಡ್ಸೆ ಹೊಡೆದಿದ್ದು ಒಂದೇ ಗುಂಡು, ಇನ್ನೆರಡು ಗುಂಡುಗಳು ಎಲ್ಲಿಂದ ಬಂದವು?. ಒಂದು ಗುಂಡು ಗೋಡ್ಸೆ ಹೊಡೆದಿದ್ದು ಎಂದು ಕೋರ್ಟ್ನಲ್ಲಿ ವಾದ-ಪ್ರತಿವಾದ ಆಗಿದೆ. ಇನ್ನೆರಡು ಗುಂಡುಗಳನ್ನು ನೆಹರು ಹೊಡೆಸಿದ್ದಾರಾ? ಎಂದು ನಮಗೆ ಸಂಶಯವಿದೆ. ಗಾಂಧಿ ಅವರನ್ನು ಕೊಲ್ಲಿಸಿದ್ದು ನೆಹರೂ ಅವರೇ. ನೆಹರೂಗೆ ಸರ್ವಾಧಿಕಾರಿ ಆಗುವ ಹಂಬಲವಿತ್ತು. ಅದಕ್ಕೆ ಅವರೇ ಗಾಂಧಿಯನ್ನು ಕೊಲ್ಲಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
‘ನಮ್ಮ ವಿರೋಧಿ ಬಣ ದಿಲ್ಲಿಗಾದರೂ ಹೋಗಲಿ, ವಾಷಿಂಗ್ಟನ್ಗೆ ಹೋಗಲಿ. ಎಲ್ಲಿ ಬೇಕಾದಲ್ಲಿ ಹೋಗಲಿ ಸತ್ಯ ಸತ್ಯವೇ. ಮಾಧ್ಯಮದವರು ಒಳ್ಳೆಯವರನ್ನು ಮಾತನಾಡಿಸಬೇಕು. ಕಿಸೆ ಕಳ್ಳರನ್ನು, ದಲಿತರ ಮೀಸಲಾತಿ ಕಸಿದುಕೊಂಡ ನಾಲಾಯಕ್ಗಳನ್ನು ಮಾತನಾಡಿಸುವುದನ್ನು ಬಿಡಬೇಕು. ತಮ್ಮ ತಂದೆಯ ನಕಲಿ ಸಹಿ ಮಾಡಿದ ವಿಜಯೇಂದ್ರಗೆ ರಮೇಶ್ ಜಾರಕಿಹೊಳಿ ಸಾಚಾ ಅನ್ನಬೇಕೇ?’
-ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಹಿರಿಯ ಶಾಸಕ