ʼಉಚ್ಛಾಟನೆ ತೀರ್ಮಾನ ಮರುಪರಿಶೀಲನೆ ಮಾಡಬೇಕುʼ; ಯತ್ನಾಳ್ ಬಣದ ಮುಖಂಡರ ಸಭೆ
ಯತ್ನಾಳ್ ಅವರನ್ನು ಮರಳಿ ಪಕ್ಷಕ್ಕೆ ಕರೆದುಕೊಳ್ಳಬೇಕು, ಆ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ : ಕುಮಾರ್ ಬಂಗಾರಪ್ಪ

ಕುಮಾರ್ ಬಂಗಾರಪ್ಪ/ಯತ್ನಾಳ್
ಬೆಂಗಳೂರು : ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಮುಖಂಡರು ಪ್ರತ್ಯೇಕ ಸಭೆ ನಡೆಸಿದ್ದು, ‘ಯತ್ನಾಳ್ ಉಚ್ಛಾಟನೆ ಮರುಪರಿಶೀಲನೆ ಮಾಡಬೇಕು. ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕೆಂಬ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ’ ಎಂದು ಪಕ್ಷದ ವರಿಷ್ಠರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಇಲ್ಲಿನ ಯು.ಬಿ. ಸಿಟಿಯಲ್ಲಿರುವ ಕಿಂಗ್ ಫಿಷರ್ ಅಪಾರ್ಟ್ಮೆಂಟ್ನಲ್ಲಿರುವ ಮಾಜಿ ಸಂಸದ ಜಿ.ಎಂ. ಸಿದ್ದೇಶ್ ನಿವಾಸದಲ್ಲಿ ನಡೆದ ಬಿಜೆಪಿ ಭಿನ್ನರ ಸಭೆಯಲ್ಲಿ, ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಮೇಶ್ ಜಾರಕಿಹೊಳಿ, ಶಾಸಕ ಬಿ.ಪಿ. ಹರೀಶ್, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮುಖಂಡ ಎನ್.ಆರ್.ಸಂತೋಷ್ ಪಾಲ್ಗೊಂಡಿದ್ದರು.
‘ಯುಗಾದಿ ಹಬ್ಬದ ಬಳಿಕ ಬಿಜೆಪಿ ರಾಷ್ಟ್ರೀಯಾಧ್ಯಕ್ಷರ ಬದಲಾವಣೆ ಆಗಲಿದ್ದು, ಇದೇ ವೇಳೆ ರಾಜ್ಯಾಧ್ಯಕ್ಷರ ಬದಲಾವಣೆಯೂ ಆಗಲಿದೆ. ಈ ಹಿಂದೆ ನಾವು ಕೈಗೊಂಡಿರುವ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಯತ್ನಾಳ್ ಉಚ್ಛಾಟನೆ ಅತೀವ ನೋವು ತಂದಿದೆ. ಆದರೆ, ನಾವು ಪಕ್ಷದ ನಿಲುವಿಗೆ ವಿರುದ್ಧವಿಲ್ಲ. ನಾವು ಬಿಜೆಪಿ ತೊರೆಯುವುದು ಅಥವಾ ಹೊಸ ಪಕ್ಷ ಕಟ್ಟುವ ಪ್ರಶ್ನೆಯೇ ಇಲ್ಲ. ಪಕ್ಷ ಸುಧಾರಣೆ ಆಗಬೇಕೆಂಬುದಷ್ಟೇ ನಮ್ಮ ಉದ್ದೇಶ’ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಿಳಿಸಿದರು.
ಭಿನ್ನರ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕ ಬಿ.ಪಿ.ಹರೀಶ್ ಅವರಿಗೆ ನೋಟಿಸ್ ನೀಡಲಾಗಿದೆ. ಅವರು ಶೀಘ್ರದಲ್ಲೇ ನೋಟಿಸ್ಗೆ ಉತ್ತರ ನೀಡಲಿದ್ದಾರೆ. ಯತ್ನಾಳ್ ಅವರನ್ನು ಮರಳಿ ಪಕ್ಷಕ್ಕೆ ಕರೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಸಾಮೂಹಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಅವರು ಪ್ರತಿಕ್ರಿಯಿಸಿದರು.
‘ನಾವು ಯಾರೂ ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡುವ ತೀರ್ಮಾನ ಮಾಡಿಲ್ಲ. 2028ಕ್ಕೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಎಲ್ಲ ತಯಾರಿ ಮಾಡಿದ್ದೇವೆ. ಯಾವುದೋ ಕೆಟ್ಟ ಘಳಿಗೆಯಲ್ಲಿ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. ನಮ್ಮಿಂದ ಏನಾದರೂ ತಪ್ಪಾಗಿದೆ ಎಂದು ಅನಿಸಿದರೆ ಅದನ್ನು ತಿದ್ದುಕೊಂಡು ನಾವು ಸಿದ್ಧರಿದ್ದೇವೆ. ನಾವೆಲ್ಲರೂ ಹೋಗಿ ವರಿಷ್ಠರನ್ನು ಭೇಟಿ ಮಾಡುತ್ತೇವೆ’ ಎಂದರು.
‘ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿ, ಕಾಂಗ್ರೆಸ್ನೊಂದಿಗೆ ಸಖ್ಯಹೊಂದಿರುವ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರನ್ನು ಏಕೆ ಉಚ್ಛಾಟನೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ತಪ್ಪು ಗ್ರಹಿಕೆಗಳಿಂದ ಯತ್ನಾಳ್ ಉಚ್ಛಾಟನೆ ನಿರ್ಧಾರ ಆಗಿರಬಹುದು. ಹೀಗಾಗಿ ವರಿಷ್ಠರು ತಮ್ಮ ತೀರ್ಮಾನವನ್ನು ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡುತ್ತೇವೆ’ ಎಂದರು.
ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಬಿಜೆಪಿ ಭಿನ್ನರ ಸಭೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಗೈರು ಹಾಜರಾಗಿದ್ದರು.