ಯತ್ನಾಳ್ ಕಾಂಗ್ರೆಸ್ ಏಜೆಂಟ್, ಅವರ ವಿರುದ್ಧ ಹೈಕಮಾಂಡ್ಗೆ ದೂರು ನೀಡುತ್ತೇವೆ : ರೇಣುಕಾಚಾರ್ಯ

ರೇಣುಕಾಚಾರ್ಯ/ ಬಸನಗೌಡ ಪಾಟೀಲ್ ಯ್ನಾಳ್
ಬೆಂಗಳೂರು: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಗೋಮುಖ ವ್ಯಾಘ್ರ. ಆತ ಕಾಂಗ್ರೆಸ್ ಏಜೆಂಟ್ನಂತೆ ವರ್ತನೆ ಮಾಡುತ್ತಿದ್ದು, ‘ಮಗು ಚಿವುಟಿ ತೊಟ್ಟಿಲು ತೂಗುತ್ತಿದ್ದಾರೆ’. ಕೆಲವರು ಯತ್ನಾಳ್ನ ಎತ್ತಿ ಕಟ್ಟಿ ವಿಜಯೇಂದ್ರರ ವರ್ಚಸ್ಸು ಕುಗ್ಗಿಸಬಹುದೆಂದು ಭಾವಿಸಿದ್ದಾರೆ. ಇನ್ನೂ ನಾವು ಸಹಿಸುವುದಿಲ್ಲ, ಜ.25ಕ್ಕೆ ಸಭೆ ಸೇರಿ ಚರ್ಚಿಸಿ ಹೈಕಮಾಂಡ್ಗೆ ದೂರು ನೀಡುತ್ತೇವೆ ಎಂದು ಬಿಎಸ್ವೈ ಆಪ್ತ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇಂದಿಲ್ಲಿ ಗುಡುಗಿದ್ದಾರೆ.
ರವಿವಾರ ನಗರದಲ್ಲಿ ಮಾತನಾಡಿದ ಅವರು, ಇಷ್ಟು ದಿನ ಹಿರಿಯರೆಂದು ಗೌರವ ಕೊಟ್ಟಿದ್ದೇವೆ. ಇನ್ನೂ ನಾವು ಸಹಿಸಲು ಆಗುವುದಿಲ್ಲ. ಈ ಹಿಂದೆ ಪಕ್ಷದಿಂದ ಉಚ್ಚಾಟನೆಯಾಗಿದ್ದ ಯತ್ನಾಳ್ ಯಡಿಯೂರಪ್ಪರ ಕಾಲಿಗೆ ಬಿದ್ದು ಪುನಃ ಬಿಜೆಪಿಗೆ ಬಂದಿದ್ದಾರೆ. ನಿಮಗೆ ಬಿಎಸ್ವೈ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದರು.
ಬಿಎಸ್ವೈ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಸೈಕಲ್, ಸ್ಕೂಟರ್, ಬಸ್, ಕಾರಲ್ಲಿ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಕಟ್ಟಿದ್ದಾರೆ. ಯಡಿಯೂರಪ್ಪ ಪಕ್ಷ ಸಂಘಟನೆ ಮಾಡುವ ವೇಳೆ ಯತ್ನಾಳ್ ಇನ್ನೂ ಕಣ್ಣು ಬಿಟ್ಟಿರಲಿಲ್ಲ. ಮಾತನಾಡುವ ವೇಳೆ ಎಚ್ಚರಿಕೆ ಇರಲಿ ಎಂದು ಹೇಳಿದ ರೇಣುಕಾಚಾರ್ಯ, ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಹೈಕಮಾಂಡ್. ವಿಜಯೇಂದ್ರಗೆ ನಿಂದಿಸಿದರೆ ಹೈಕಮಾಂಡ್ಗೆ ಬೈದಂತೆ ಎಂದು ವಿಶ್ಲೇಷಿಸಿದರು.
ಮುಖವಾಡ: ಯತ್ನಾಳ್ ಎಂಬ ಮನುಷ್ಯನಿಗೆ ಮೂರು ಮುಖವಾಡಗಳಿವೆ. ಉತ್ತರ ಕರ್ನಾಟಕದ ಹುಲಿ ಎಂದು ಕರೆಸಿಕೊಳ್ಳುತ್ತಾರೆ. ಆದರೆ, ಆ ಭಾಗಕ್ಕೆ ಎಷ್ಟು ಅನುದಾನ ತಂದಿದ್ದಾರೆಂದು ಹೇಳಬೇಕು ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಹಿಂದೂ ಹುಲಿ ಆಗಿರುವವರು ಟಿಪ್ಪುಸುಲ್ತಾನ್ ಟೋಪಿ ಹಾಕಿ, ಖಡ್ಗ ಹಿಡಿದು ಅವರ ಜತೆ ಅಲ್ಪಸಂಖ್ಯಾತರ ಜೊತೆ ಊಟ ಮಾಡಿದ್ದು ನಮಗೆ ಗೊತ್ತಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟದ ಮುಖವಾಡ ಧರಿಸಿ ಧ್ವಂದ್ವ ಹೇಳಿಕೆ ನೀಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಸಮರ್ಥ ಅಧ್ಯಕ್ಷ: ವಿಜಯೇಂದ್ರ ಬಚ್ಚಾ ಅಲ್ಲ, ಸಮರ್ಥ, ನುರಿತ ರಾಜಕಾರಣಿ. ಅವರಿಗೆ ಜ್ಞಾನ ಇದೆ, ಪಕ್ಷ ಅಧಿಕಾರಕ್ಕೆ ತರುವ ಛಲ ಇದೆ. ಯತ್ನಾಳ್ ಮತ್ತು ತಂಡ ಮುಖವಾಡದಲ್ಲಿ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎಂದ ಅವರು, ಕೆಲವರು ಆಕಾಶಕ್ಕೆ ಉಗುಳಿದರೆ, ಅದು ಅವರ ಮುಖದ ಮೇಲೆಯೇ ಬೀಳುತ್ತದೆ ಎಂದು ಟೀಕಿಸಿದರು.
ಯತ್ನಾಳ್, ರಮೇಶ್ ಜಾರಕಿಹೊಳಿ ಮನಸೋ ಇಚ್ಛೆ ಮಾತನಾಡುತ್ತಿದ್ದು, ಪಕ್ಷ ಸಂಘಟನೆಗೆ ಅಡ್ಡಿಯಾಗಿದ್ದಾರೆ. ಹೀಗಾಗಿ ಅವರನ್ನು ಯಾವುದೇ ಮುಲಾಜಿಲ್ಲದೆ ಪಕ್ಷದಿಂದಲೇ ಉಚ್ಛಾಟನೆ ಮಾಡಬೇಕೆಂದು ಪಕ್ಷದ ವರಿಷ್ಠರಿಗೆ ಶೀಘ್ರದಲ್ಲೇ ದೂರು ನೀಡುತ್ತೇವೆ. ರಮೇಶ್ ಜಾರಕಿಹೊಳಿ, ಯತ್ನಾಳ್ ಇಬ್ಬರೂ ಒಳ್ಳೆಯವರೆ. ಆದರೆ, ಪಕ್ಷದ ಕೆಲವರು ಅವರಿಗೆ ಪ್ರಚೋದನೆ ನೀಡುತ್ತಿದ್ದು, ಸಮಯ ಬಂದಾಗ ಆ ಎಲ್ಲ ವಿವರವನ್ನು ಬಹಿರಂಗಪಡಿಸುತ್ತೇವೆ ಎಂದರು.