ಯತ್ನಾಳ್ ಹೊರಗಿನವರಲ್ಲ, ಎಲ್ಲವನ್ನೂ ಹೈಕಮಾಂಡ್ ಬಗೆಹರಿಸುತ್ತದೆ : ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ
ಶಿವಮೊಗ್ಗ: ʼಯತ್ನಾಳ್ ಹೊರಗಿನವರಲ್ಲ, ನಮ್ಮವರೇ. ಯಾವುದೋ ಕಾರಣಕ್ಕೆ ಅವರು ಹಾಗೆ ಮಾತನಾಡುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ಕೂತು ಬಗೆಹರಿಸುತ್ತದೆ ಎಂಬ ವಿಶ್ವಾಸವಿದೆʼ ಎಂದು ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಬೆಳಗಾವಿ ಅಧಿವೇಶನದಲ್ಲಿ ಸರಕಾರದ ವೈಫಲ್ಯದ ವಿರುದ್ಧ ನಮ್ಮ ಶಾಸಕರು ಜಾಗೃತಿ ಮೂಡಿಸಲಿದ್ದಾರೆ. ಮುಡಾ ಹಗರಣದ ಬಗ್ಗೆ ಮಾಧ್ಯಮಗಳಲ್ಲಿ ಎಲ್ಲ ವಿವರಗಳು ಹೊರಗೆ ಬರುತ್ತಿವೆ. ನಿವೇಶನ ವಾಪಾಸ್ಸು ನೀಡಿದ್ದರೂ ಸಹ ಅಪರಾಧ ಅಪರಾಧವೇ ಆಗಿದೆ. ಮುಡಾದಲ್ಲಿ ಸಾವಿರಾರು ನಿವೇಶನಗಳನ್ನು ಅಕ್ರಮವಾಗಿ ನೀಡಲಾಗಿದೆ ಎಂಬ ಆರೋಪವಿದೆ. ಈಡಿ ರಂಗಕ್ಕೆ ಇಳಿಯಬೇಕಾದರೆ ಸೂಕ್ತ ಸಾಕ್ಷ ಬೇಕು. ಸಾಕಷ್ಟು ಪುರಾವೆ ಸಿಕ್ಕಿದ್ದರಿಂದಲೇ ಈಡಿ ಪ್ರವೇಶ ಮಾಡಿದೆʼ ಎಂದರು.
ಯತ್ನಾಳ್ ಬಂಡಾಯ ಪಕ್ಷಕ್ಕೆ ಹಾನಿಯಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಎಲ್ಲರೂ ಒಟ್ಟಾಗಿ ಪಕ್ಷವನ್ನು ಮುಂದೆ ತೆಗೆದುಕೊಂಡು ಹೋಗುತ್ತೇವೆ. ಏನೇ ಭಿನ್ನಾಭಿಪ್ರಾಯವಿದ್ದರೂ ಎದುರು ಬದುರು ಕೂತು ಒಟ್ಟಾಗಿ ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲವೂ ಸರಿಯಾಗುತ್ತದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.