ಯತ್ನಾಳ್ ವಿಷಯದಲ್ಲಿ ವರಿಷ್ಠರಿಂದ ನಿರ್ಧಾರ : ವಿಜಯೇಂದ್ರ
Vijayendra/Yatnal
ಬೆಂಗಳೂರು : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿಷಯವನ್ನು ಕೇಂದ್ರದ ವರಿಷ್ಠರು ಗಮನಿಸುತ್ತಿದ್ದಾರೆ. ಶಿಸ್ತು ಕ್ರಮ ಕೈಗೊಳ್ಳಬೇಕೇ ಅಥವಾ ಹೀಗೇ ಸುಮ್ಮನೇ ಬಿಡಬೇಕೇ ಎಂಬುದನ್ನು ಅವರು ನಿರ್ಧರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ವಿರುದ್ಧ ಮಾತ್ರ ಶಿಸ್ತು ಕ್ರಮವೇ ಅಥವಾ ಅವರ ಸುತ್ತ ಇರುವವರ ಬಗ್ಗೆ ಕ್ರಮ ಆಗಲಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದರು.
ಸಂಘಟನಾ ಪರ್ವದ ಹಿನ್ನೆಲೆಯಲ್ಲಿ ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಕರ್ನಾಟಕದ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಕೇಂದ್ರದ ಮಾಜಿ ಸಚಿವ ರಾಧಾಕೃಷ್ಣನ್ ಅವರು ಬೆಂಗಳೂರಿಗೆ ಬಂದು ಬೆಳಗ್ಗೆಯಿಂದ ಸುಮಾರು 4ರಿಂದ 4.30 ತಾಸುಗಳ ಕಾಲ ಸಕ್ರಿಯ ಸದಸ್ಯತ್ವ ಮುಂದುವರಿಕೆ, ಬೂತ್ ಸಮಿತಿಗಳ ರಚನೆ, ಮಂಡಲ ಸಮಿತಿಗಳ ರಚನೆ ಕುರಿತು ಸಮಗ್ರವಾಗಿ ಚರ್ಚೆ ಮಾಡಿದ್ದಾರೆ. ‘ಸಂಘಟನಾ ಪರ್ವ’ ಯಶಸ್ಸಿಗೆ ಸಂಬಂಧಿಸಿ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಕೋರ್ ಕಮಿಟಿ ಸಭೆಯೂ ನಡೆದಿದೆ. ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನೂ ನೀಡಿದ್ದಾರೆ ಎಂದು ವಿವರಿಸಿದರು. ಜಿಲ್ಲಾಧ್ಯಕ್ಷರು ಮತ್ತು ರಾಜ್ಯದ ಪದಾಧಿಕಾರಿಗಳು ಇವೆಲ್ಲವನ್ನೂ ಗಮನಿಸಿ ಸಂಘಟನೆ ಗಟ್ಟಿಗೊಳಿಸುವ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಹೇಳಿದರು
ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಸದಸ್ಯತ್ವದಲ್ಲಿ ದೇಶದಲ್ಲಿ ನಾಲ್ಕನೇ ಸ್ಥಾನವನ್ನು ರಾಜ್ಯ ಪಡೆದು ಸಾಧನೆ ಮಾಡಿದೆ. ಕರ್ನಾಟಕದ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ, ಹಗರಣಗಳಲ್ಲಿ ಮುಳುಗಿದೆ. 74 ಲಕ್ಷ ಸದಸ್ಯತ್ವ ಮಾಡಿದ್ದು, ಇನ್ನಷ್ಟು ಸದಸ್ಯತ್ವ ಮಾಡಲು ಅವಕಾಶವಿದೆ ಎಂದು ಕೇಂದ್ರದ ಮುಖಂಡರು ತಿಳಿಸಿದ್ದಾರೆ ಎಂದರು.