ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ತಂದೆ, ಮಗ ಕಾರಣ : ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಯತ್ನಾಳ್ ಆಕ್ರೋಶ
ಬಸನಗೌಡ ಪಾಟೀಲ್ ಯತ್ನಾಳ್
ಬೆಳಗಾವಿ : ‘ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಿನ ನಿರೀಕ್ಷೆ ಇರಲಿಲ್ಲ. ಈ ಸೋಲಿಗೆ ಪೂಜ್ಯ ತಂದೆ ಮತ್ತು ಪೂಜ್ಯ ತಂದೆಯ ಕಿರಿಯ ಮಗ ಕಾರಣ’ ಎಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಒಳ ಒಪ್ಪಂದದಿಂದ ಬಿಜೆಪಿ ಈ ಸ್ಥಿತಿಗೆ ಬಂದು ತಲುಪಿದೆ. ಹೈಕಮಾಂಡ್ ಪ್ರಾಮಾಣಿಕರನ್ನು, ಸಂಸ್ಕಾರ ಇರುವಂತವರನ್ನು ಇನ್ನಾದರೂ ಉಸ್ತುವಾರಿಗಳನ್ನಾಗಿ ನೇಮಕ ಮಾಡಬೇಕು. ಪಕ್ಷದ ಉಸ್ತುವಾರಿಯಾಗಿದ್ದ ಅರುಣ್ ಸಿಂಗ್, ಯಡಿಯೂರಪ್ಪ-ವಿಜಯೇಂದ್ರನ ಸಂದೇಶ ವಾಹಕನಾಗಿ ಕೆಲಸ ಮಾಡಿದ ಪರಿಣಾಮ ಸೋಲಾಗಿದೆ’ ಎಂದು ವಾಗ್ದಾಳಿ ನಡೆಸಿದರು.
‘ಪಕ್ಷದ ವರಿಷ್ಠರು ಇನ್ನಾದರೂ ಪೂಜ್ಯ ತಂದೆ ಮತ್ತು ಪೂಜ್ಯ ಪುತ್ರನ ಮೇಲಿನ ವ್ಯಾಮೋಹವನ್ನು ಬಿಡಬೇಕು ಎಂದ ಅವರು, ‘ವಕ್ಫ್ ನೋಟಿಸ್ ವಿಚಾರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಿದೆʼ ಎಂದು ಪ್ರತಿಕ್ರಿಯೆ ನೀಡಿದರು.