ವರಿಷ್ಠರು ಅನುಮತಿ ನೀಡಿದರೆ ಯತ್ನಾಳ್ ಪಾದಯಾತ್ರೆಗೆ ತಕರಾರು ಇಲ್ಲ : ವಿಜಯೇಂದ್ರ
ವಿಜಯೇಂದ್ರ/ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು: ‘ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಕೆಲ ಮುಖಂಡರು ಉತ್ತರ ಕರ್ನಾಟಕ ಭಾಗದಲ್ಲಿ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಗೆ ನಮ್ಮದೇನು ತಕರಾರು ಇಲ್ಲ. ಆದರೆ, ಯಾತ್ರೆಗೆ ವರಿಷ್ಠರ ಅನುಮತಿ ಪಡೆದುಕೊಳ್ಳಬೇಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯಾಧ್ಯಕ್ಷನಾಗಿ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ನನ್ನ ಆದ್ಯ ಕರ್ತವ್ಯ. ಇದನ್ನು ಸತತವಾಗಿ ಮಾಡಿಕೊಂಡು ಬಂದಿದ್ದೇನೆ. ಪಕ್ಷಕ್ಕೆ ಶಕ್ತಿ ಸಿಗುವುದಾದರೆ ಕೆಲವರು ಮಾಡಬಯಸಿದ ಪಾದಯಾತ್ರೆಗೆ ವರಿಷ್ಠರು ಸಮ್ಮತಿ ಕೊಡುತ್ತಾರೆ. ಕೇಂದ್ರದ ವರಿಷ್ಠರ ಭೇಟಿಯೂ ಪಕ್ಷದ ಸಂಘಟನೆಗೆ ಲಾಭ ತರಬೇಕೆಂಬ ಸದುದ್ದೇಶ ಹೊಂದಿರಲಿ’ ಎಂದು ಆಶಿಸಿದರು.
ಸರಕಾರದ ನಿರ್ಲಕ್ಷ್ಯವೇ ಕಾರಣ:‘ಜಲ ಸಂಪನ್ಮೂಲ ಸಚಿವರು ಸಂಪನ್ಮೂಲದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡ ಹಾಗಿದೆ. ಜಲ, ಜನ, ರೈತರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಪಿಎಸ್ಸೈ ಪರಶುರಾಮ್ ಕುಟುಂಬಕ್ಕೆ ಇನ್ನೂ ಪರಿಹಾರ ಕೊಟ್ಟಿಲ್ಲ. ತುಂಗಭದ್ರಾ ಡ್ಯಾಮಿಗೆ ಮುಖ್ಯ ಎಂಜಿನಿಯರ್ ನೇಮಿಸಿಲ್ಲ. ತುಂಗಭದ್ರಾ ಜಲಾಶಯದ ಗೇಟ್ ಮುರಿದ ಘಟನೆಗೆ ರಾಜ್ಯ ಸರಕಾರದ ನಿರ್ಲಕ್ಷ್ಯವೇ ಕಾರಣ’ ಎಂದು ಟೀಕಿಸಿದರು.