ಹಿಂಗಾರು ಮಳೆಯ ಆರ್ಭಟ ಆರಂಭ: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆಯ ಆರ್ಭಟ ಆರಂಭವಾಗಿದ್ದು, ಹವಾಮಾನ ಇಲಾಖೆಯು ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಮುಂದಿನ 24 ಗಂಟೆಗಳ ಕಾಲ ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ದಾವಣಗೆರೆ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಹಲವೆಡೆ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ.
ಉತ್ತರ ಬಂಗಾಳ ಕೊಲ್ಲಿ, ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಪಕ್ಕದ ಕರಾವಳಿ ಪ್ರದೇಶಗಳಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, 5.8 ಕಿಮೀ ಎತ್ತರದಲ್ಲಿರುವ ಚಂಡಮಾರುತ ಪಶ್ಚಿಮಕ್ಕೆ ವಾಲುತ್ತಿದೆ. ಲಕ್ಷದ್ವೀಪ ಮತ್ತು ನೆರೆಹೊರೆಯ ಮೇಲಿನ ಚಂಡಮಾರುತದ ಪರಿಚಲನೆಯು ಈಗ ಆಗ್ನೇಯ ಅರೇಬಿಯನ್ ಸಮುದ್ರದ ಮೇಲಿದ್ದು, ಸರಾಸರಿ ಸಮುದ್ರ ಮಟ್ಟದಿಂದ 1.5 ಕಿಮೀ ಎತ್ತರದಲ್ಲಿದೆ ಅದು ದಕ್ಷಿಣ ಕೇರಳದೆಡೆ ಸಾಗುತ್ತಿದೆ.
ಇದರಿಂದ ನೈಋತ್ಯ ಮುಂಗಾರು ದುರ್ಬಲವಾಗುವತ್ತ ಸಾಗಲಿದ್ದು, ಹಿಂಗಾರಿನ ಪ್ರಭಾವ ರಾಜ್ಯದಲ್ಲಿ ಗೋಚರಿಸಿದೆ. ಸದ್ಯ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮಳೆಯಾಗುತ್ತಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವೇ ಸ್ಥಳಗಳಲ್ಲಿ ಮಳೆ ಸುರಿಯುತ್ತಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.