‘ಝಿಕಾ ವೈರಸ್’ ಸೊಳ್ಳೆಗಳಿಗೆ ಮಾತ್ರ, ಮನುಷ್ಯರಲ್ಲಿ ಪತ್ತೆಯಾಗಿಲ್ಲ: ಸಚಿವ ದಿನೇಶ್ ಗುಂಡೂರಾವ್
ಝಿಕಾ ವೈರಸ್ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳೇನು?
ಬೆಂಗಳೂರು, ನ.2: ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಸೊಳ್ಳೆಗಳಿಗೆ ಮಾತ್ರ ಝಿಕಾ ವೈರಸ್ (Zika Virus) ಹರಡಿದೆ. ಇದರಿಂದ ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ. ವೈದ್ಯಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾರಿಗೂ ಝಿಕಾ ಪಾಸಿಟಿವ್ ಬಂದಿಲ್ಲ.ಆದರೆ, ಸೊಳ್ಳೆಗಳಿಗೆ ವೈರಸ್ ತಗುಲಿದ್ದು, ಅವುಗಳ ಪರೀಕ್ಷೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಈ ಸಂಬಂಧ 10 ದಿನಗಳ ಹಿಂದೆಯೇ ಆರೋಗ್ಯ ಇಲಾಖೆಗೆ ವರದಿ ಬಂದಿದ್ದು, ಇದರಲ್ಲಿ ಸಂಪೂರ್ಣ ವಿವರ ಉಲ್ಲೇಖಿಸಲಾಗಿದೆ ಎಂದರು.
ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿತ್ತು. ಝಿಕಾ ಮತ್ತು ನಿಫಾ ಬೇರೆ ಬೇರೆ ವೈರಾಣುವಾಗಿದೆ. ನಿಫಾ ಗಂಭೀರ ವೈರಾಣುವಾಗಿದೆ. ಝಿಕಾ ಅಷ್ಟು ಮನುಷ್ಯರಿಗೆ ಬಾಧಿಸುವುದಿಲ್ಲ. ಆದ್ದರಿಂದ ಜನರಿಗೆ ಈ ಬಗ್ಗೆ ಭಯ ಬೇಡ. ಆಸ್ಪತ್ರೆಯಲ್ಲಿ ಇದ್ದವರಿಗೆ ಪರೀಕ್ಷೆ ಮಾಡಲಾಗಿದೆ. ಖಾಯಿಲೆ ಲಕ್ಷಣ ಇದ್ದವರ ರಕ್ತದ ಮಾದರಿ ಪಡೆಯಲಾಗಿದೆ. 3 ದಿನಗಳಲ್ಲಿ ಸ್ಪಷ್ಟವಾದ ವರದಿ ಕೈಸೇರಲಿದೆ ಎಂದು ವಿವರಿಸಿದರು.
ಝಿಕಾ ವೈರಸ್ ಹರಡದಂತೆ ಅಲ್ಲಿನ ಸ್ಥಳೀಯ ಸಂಸ್ಥೆಯೊಂದಿಗೆ ಮಾತನಾಡಿಕೊಂಡು ನಮ್ಮ ಇಲಾಖೆಯವರು ಸೇರಿ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಆಯುಕ್ತರೊಂದಿಗೆ ಮಾತನಾಡಬಹುದು. ಯಾರೂ ಕೂಡಾ ಆತಂಕಕ್ಕೆ ಒಳಗಾಗಬೇಕಾದ ಅವಶ್ಯಕತೆ ಇಲ್ಲ. ಖಂಡಿತವಾಗಿಯೂ ಇದನ್ನು ನಿಯಂತ್ರಣಕ್ಕೆ ತೆಗೆದುಕೊಂಡು ನಿಭಾಯಿಸುವ ಕೆಲಸವನ್ನು ಮಾಡುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗರ್ಭಿಣಿಯರಿಗೆ ಮುನ್ನೆಚ್ಚರಿಕೆ..!
ಗರ್ಭಿಣಿಯರಿಗೆ ಝಿಕಾ ವೈರಸ್ ಮಾರಕ ಕಾಯಿಲೆಯಾಗಿದೆ. ಸೌಮ್ಯ ಲಕ್ಷಣಗಳಿಂದ ಪ್ರಾರಂಭವಾಗುವ ಜ್ವರವು ಜೀವ ತೆಗೆಯುವ ರೋಗವಾಗಿ ಬದಲಾಗುತ್ತದೆ. ಗರ್ಭಿಣಿ ಸೋಂಕಿಗೆ ಒಳಗಾದಾಗ ಈ ರೋಗವು ಹುಟ್ಟಲಿರುವ ಮಗುವಿನ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ. ಹೀಗಾಗಿ ಗರ್ಭಿಣಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಝಿಕಾ ವೈರಸ್, ಮುನ್ನೆಚ್ಚರಿಕೆ ಕ್ರಮಗಳೇನು?
- ಝಿಕಾ ವೈರಸ್‍ಗೆ ಯಾವುದೇ ನಿಗದಿತ ಚಿಕಿತ್ಸೆಯಾಗಲಿ ಅಥವಾ ಲಸಿಕೆಯಾಗಲಿ ಇಲ್ಲ. ಝಿಕಾ ಹಗಲಿನಲ್ಲಿ ಬರುವ ಸೊಳ್ಳೆಗಳು ಕಚ್ಚುವುದರಿಂದ ಹರಡುತ್ತದೆ. ಈಗ ಚಳಿಗಾಲವಾದ್ದರಿಂದ ಸೊಳ್ಳೆ ಉತ್ಪತ್ತಿಯೂ ಹೆಚ್ಚು. ಹೀಗಾಗಿ, ಈ ಸಮಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು.
-ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು.
-ಸೊಳ್ಳೆ ನಿವಾರಕ ಕ್ರೀಮ್‍ಗಳ ಬಳಕೆ, ಮೈತುಂಬಾ ಬಟ್ಟೆ ಧರಿಸುವುದು, ಸೊಳ್ಳೆ ಪರದೆ ಬಳಸುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ತಡೆಗಟ್ಟಬಹುದು.
ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ
https://bit.ly/3tfd2Ro ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.