370 ನೇ ವಿಧಿ ವಿರುದ್ಧ ವಾದಿಸಲು ನ್ಯಾಯಾಲಯಕ್ಕೆ ಹಾಜರಾಗಿದ್ದ ಜಮ್ಮು-ಕಾಶ್ಮೀರ ಉಪನ್ಯಾಸಕರ ಅಮಾನತು; ವಿವರಣೆ ಕೇಳಿದ ಸುಪ್ರೀಂಕೋರ್ಟ್
Photo: PTI
ಹೊಸದಿಲ್ಲಿ: 370ನೇ ವಿಧಿ ರದ್ದತಿಯ ವಿರುದ್ಧ ವಾದ ಮಂಡಿಸಲು ನ್ಯಾಯಾಲಯಕ್ಕೆ ಹಾಜರಾದ ಕೆಲವೇ ದಿನಗಳಲ್ಲಿ ಕೇಂದ್ರಾಡಳಿತ ಪ್ರದೇಶದ ಶಿಕ್ಷಣ ಇಲಾಖೆಯ ಉಪನ್ಯಾಸಕರನ್ನು ಏಕೆ ಅಮಾನತುಗೊಳಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳುವಂತೆ ಹಾಗೂ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಮಾತನಾಡುವಂತೆ ಕೇಂದ್ರದ ಉನ್ನತ ಕಾನೂನು ಅಧಿಕಾರಿಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ..
ಅಮಾನತುಗೊಳಿಸುವಿಕೆಗೂ ನ್ಯಾಯಾಲಯದ ಮುಂದೆ ಉಪನ್ಯಾಸಕರು ಹಾಜರಾಗಿದ್ದಕ್ಕೂ ಸಂಬಂಧ ವಿದೆಯೇ ಎಂದು ತಿಳಿದುಕೊಳ್ಳಲು ನ್ಯಾಯಾಲಯ ಬಯಸಿತು ಹಾಗೂ ಇದನ್ನು "ಪ್ರತಿಕಾರ" ಎಂದು ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಕಳೆದ ಬುಧವಾರ ಹಿರಿಯ ರಾಜ್ಯಶಾಸ್ತ್ರ ಉಪನ್ಯಾಸಕ ಝಹೂರ್ ಅಹ್ಮದ್ ಭಟ್ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ಹಾಜರಾಗಿದ್ದರು.
ಎರಡು ದಿನಗಳ ನಂತರ, ಶುಕ್ರವಾರ, ಜಮ್ಮು ಮತ್ತು ಕಾಶ್ಮೀರ ನಾಗರಿಕ ಸೇವಾ ನಿಯಮಗಳು, ಜಮ್ಮು ಮತ್ತು ಕಾಶ್ಮೀರ ಸರಕಾರಿ ನೌಕರರ ನಡವಳಿಕೆ ನಿಯಮಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ರಜೆ ನಿಯಮಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಕ್ಷಣವೇ ಜಾರಿಗೆ ಬರುವಂತೆ ಭಟ್ ಅವರನ್ನು ಅಮಾನತುಗೊಳಿಸಿ ಜಮ್ಮು-ಕಾಶ್ಮೀರ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು.
ಅಮಾನತು ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿರುವ ಹಿರಿಯ ವಕೀಲ ಕಪಿಲ್ ಸಿಬಲ್, ‘‘ಇಲ್ಲಿಗೆ ಬಂದು ಕೆಲ ನಿಮಿಷಗಳ ಕಾಲ ವಾದ ಮಂಡಿಸಿದ ಹಿರಿಯ ಉಪನ್ಯಾಸಕರನ್ನು ಆ.25ರಂದು ಅಮಾನತುಗೊಳಿಸಲಾಗಿದೆ, ಎರಡು ದಿನ ರಜೆ ಪಡೆದು ವಾಪಸ್ ಹೋಗಿದ್ದ ಅವರನ್ನು ಅಮಾನತು ಮಾಡಲಾಗಿದೆ " ಎಂದರು.
ನಂತರ ಮುಖ್ಯ ನ್ಯಾಯಮೂರ್ತಿ ಅವರು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಲ್ಲಿ ಈ ವಿಚಾರವನ್ನು ಪರಿಶೀಲಿಸುವಂತೆ ಕೇಳಿದರು. "
ಅಟಾರ್ನಿ ಜನರಲ್ ಅವರೇ , ಏನಾಯಿತು ಎಂದು ನೋಡಿ. ಈ ನ್ಯಾಯಾಲಯಕ್ಕೆ ಹಾಜರಾಗಿರುವ ಯಾರೋ ಒಬ್ಬರು ಈಗ ಅಮಾನತುಗೊಂಡಿದ್ದಾರೆ ... ಲೆಫ್ಟಿನೆಂಟ್ ಗವರ್ನರ್ ಜೊತೆ ಮಾತನಾಡಿ’’ ಎಂದರು.
ಅಮಾನತು ಇತರ ವಿಷಯಗಳಿಗೆ ಸಂಬಂಧಿಸಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹೇಳಿದರು. ಆದರೆ, ನ್ಯಾಯಮೂರ್ತಿ ಎಸ್. ಕೆ. ಕೌಲ್ ಅವರು ಸಮಯ-ಸಂದರ್ಭವನ್ನು ಬೆಟ್ಟು ಮಾಡಿದದ ನಂತರ, "ಖಂಡಿತವಾಗಿಯೂ ಅದು ಸರಿಯಾಗಿಲ್ಲ" ಎಂದುಮೆಹ್ತಾ ಒಪ್ಪಿಕೊಂಡರು.