ತೆರಿಗೆ ಹಂಚಿಕೆ: ಕರ್ನಾಟಕಕ್ಕೆ ಅನ್ಯಾಯ
PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಳೆದ ಹತ್ತು ವರ್ಷಗಳಿಂದ ಅಂದರೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ಮೇಲೆ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕ ನಿರಂತರವಾಗಿ ಅನ್ಯಾಯಕ್ಕೊಳಗಾಗುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ಮಲತಾಯಿ ಧೋರಣೆ ನ್ಯಾಯ ಸಮ್ಮತವಲ್ಲ. ಇತ್ತೀಚಿನ ತೆರಿಗೆ ಹಂಚಿಕೆಯ ಅಂಕಿಅಂಶಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ದೇಶದ 28 ರಾಜ್ಯಗಳಿಗೆ ಒಟ್ಟು 1,78,193 ಕೋಟಿ ರೂ. ಬಿಡುಗಡೆ ಮಾಡಿರುವ ಸರಕಾರ ಇದರಲ್ಲಿ ಕರ್ನಾಟಕಕ್ಕೆ ನೀಡಿರುವುದು ಕೇವಲ 6,498 ಕೋಟಿ ರೂ. ಮಾತ್ರ. ಕರ್ನಾಟಕವನ್ನು ಕಡೆಗಣಿಸುವಂತಹ ಈ ತಾರತಮ್ಯದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಪಕ್ಷಭೇದ ಬದಿಗೊತ್ತಿ ರಾಜ್ಯದ ಎಲ್ಲ ಪಕ್ಷಗಳು ಮತ್ತು ಸಂಘಟನೆಗಳು ಧ್ವನಿಯೆತ್ತಬೇಕಾಗಿದೆ.
ದೇಶದಲ್ಲಿ ಅತ್ಯಂತ ಹೆಚ್ಚು ತೆರಿಗೆಯನ್ನು ಸಂಗ್ರಹಿಸಿಕೊಡುವ ಎರಡನೇ ರಾಜ್ಯವಾದ ಕರ್ನಾಟಕಕ್ಕೆ ಅದು ಸಂಗ್ರಹಿಸಿಕೊಡುವ ಪ್ರತೀ ಒಂದು ರೂ.ಯಲ್ಲಿ 15 ಪೈಸೆ ಕೂಡ ವಾಪಸ್ ಬರುತ್ತಿಲ್ಲ ಎಂಬುದು ಅನ್ಯಾಯದ ಪರಮಾವಧಿಗೆ ಒಂದು ಉದಾಹರಣೆ. ದೇಶದ ಒಟ್ಟು ಜಿಎಸ್ಟಿ ಸಂಗ್ರಹದಲ್ಲೂ ನಮ್ಮ ರಾಜ್ಯ ನೀಡುತ್ತಿರುವ ಕೊಡುಗೆ ಶೇ. 17ರಷ್ಟಿದ್ದರೂ ಇದರಲ್ಲಿ ಶೇ. 4ರಷ್ಟು ಕೂಡ ವಾಪಸ್ ಬರುತ್ತಿಲ್ಲ ಎಂಬುದು ಆತಂಕದ ಸಂಗತಿಯಾಗಿದೆ.
ಕೇಂದ್ರ ಸರಕಾರ ತೆರಿಗೆ ಹಂಚಿಕೆಯಲ್ಲಿ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಸಿದ್ದರಾಮಯ್ಯನವರು ಮುಂಚಿನಿಂದಲೂ ಪ್ರತಿಭಟಿಸುತ್ತಲೇ ಇದ್ದಾರೆ. ಕರ್ನಾಟಕ ಮಾತ್ರವಲ್ಲ, ದಕ್ಷಿಣ ಭಾರತದ ಬಹುತೇಕ ಎಲ್ಲ ರಾಜ್ಯಗಳು ತೆರಿಗೆ ಹಂಚಿಕೆಯಲ್ಲಿ ನಿರಂತರವಾಗಿ ಅನ್ಯಾಯಕ್ಕೊಳಗಾಗುತ್ತಲೇ ಇವೆ. ಇದರ ಬಗ್ಗೆ ಈ ರಾಜ್ಯಗಳು ಪ್ರತಿಭಟಿಸುತ್ತಲೇ ಇವೆ. ಮಹಾರಾಷ್ಟ್ರವನ್ನು ಬಿಟ್ಟರೆ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿ ಇದೆ. ಪ್ರತಿವರ್ಷ 4 ಲಕ್ಷ ಕೋಟಿ ರೂ.ಗಳನ್ನು ಕೇಂದ್ರಕ್ಕೆ ಸಂಗ್ರಹಿಸಿಕೊಡುವ ರಾಜ್ಯಕ್ಕೆ ದಕ್ಕಿರುವುದು ಒಂದಿಷ್ಟು ಮಾತ್ರ. ಅನುದಾನದ ರೂಪದಲ್ಲಿ ಬಂದಿರುವ 15 ಸಾವಿರ ಕೋಟಿ ರೂ. ಸೇರಿದರೂ ಕೂಡ 1 ಲಕ್ಷ ಕೋಟಿ ರೂ. ಕಡಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಕರಾರು ಸಮರ್ಥನೀಯವಾಗಿದೆ. ಅತ್ಯಂತ ಕಡಿಮೆ ತೆರಿಗೆಯ ಪಾಲನ್ನು ನೀಡುವ, ದುರಾಡಳಿತ ಹಾಗೂ ಭ್ರಷ್ಟಾಚಾರ ತುಂಬಿ ತುಳುಕುವ, ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿರುವ ಉತ್ತರ ಪ್ರದೇಶಕ್ಕೆ 31,962 ಕೋಟಿ, ಬಿಹಾರಕ್ಕೆ 17,921 ಕೋಟಿ, ಮಧ್ಯಪ್ರದೇಶಕ್ಕೆ 13,987 ಕೋಟಿ ಮತ್ತು ರಾಜಸ್ಥಾನಕ್ಕೆ 10,737 ಕೋಟಿ ರೂ. ತೆರಿಗೆ ಪಾಲನ್ನು ನೀಡಲಾಗಿದೆ. ಉತ್ತರದ ರಾಜ್ಯಗಳು ದಕ್ಷಿಣದ ರಾಜ್ಯಗಳ ಅದರಲ್ಲೂ ಕರ್ನಾಟಕದ ಪಾಲನ್ನು ಕಬಳಿಸುತ್ತಿವೆ. ಈ ರಾಜ್ಯಗಳಲ್ಲಿ ಬಿಜೆಪಿ ಸರಕಾರ ಇರುವುದರಿಂದಲೇ ಕೇಂದ್ರ ಸರಕಾರಕ್ಕೆ ಇವುಗಳ ಬಗ್ಗೆ ವಿಶೇಷ ಆಸಕ್ತಿ ಎಂದರೆ ತಪ್ಪಿಲ್ಲ.
ಒಕ್ಕೂಟ ವ್ಯವಸ್ಥೆಯ ಬಗ್ಗೆ ಕರ್ನಾಟಕ ರಾಜ್ಯಕ್ಕೆ ಗೌರವವಿದೆ. ತೆರಿಗೆ ಸಂಗ್ರಹಿಸಿ ಕೊಡುವುದು ರಾಜ್ಯಗಳ ಕರ್ತವ್ಯ ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಆದರೆ ಯಾವ ಅಭಿವೃದ್ಧಿ ಕಾರ್ಯಕ್ರಮವನ್ನೂ ರೂಪಿಸದ, ದಿವಾಳಿಯ ಅಂಚಿನಲ್ಲಿ ಇರುವ ಉತ್ತರದ ರಾಜ್ಯಗಳಿಗೆ ದಕ್ಷಿಣದ ರಾಜ್ಯಗಳಿಗೆ ದಕ್ಕ ಬೇಕಾದ ತೆರಿಗೆ ಪಾಲನ್ನು ಉತ್ತರದ ರಾಜ್ಯಗಳಿಗೆ ನೀಡುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ವಿಭಿನ್ನ ಪಕ್ಷಗಳು ಅಧಿಕಾರದಲ್ಲಿರುವ ದಕ್ಷಿಣದ ರಾಜ್ಯಗಳನ್ನು ಪ್ರತ್ಯೇಕಿಸಿ ತೆರಿಗೆ ಹಂಚಿಕೆಯಲ್ಲಿ ಪಕ್ಷಪಾತ ಮಾಡುತ್ತಿರುವುದು ಸರಿಯಲ್ಲ.
ತೆರಿಗೆ ಮತ್ತು ಅನುದಾನ ಹಂಚಿಕೆಯಲ್ಲಿ ನಿರಂತರವಾಗಿ ಅನ್ಯಾಯಕ್ಕೊಳ ಗಾಗಿರುವ ಕರ್ನಾಟಕದ ಕಳವಳವನ್ನು ಗಮನಿಸಿದ ನಂತರ ಹದಿನೈದನೇ ಹಣಕಾಸು ಆಯೋಗ ಕರ್ನಾಟಕಕ್ಕೆ ವಿಶೇಷ ಅನುದಾನದ ರೂಪದಲ್ಲಿ 5,495 ಕೋಟಿ ರೂ. ಕೊಡಬೇಕೆಂದು ಶಿಫಾರಸು ಮಾಡಿತ್ತು. ಆದರೆ ಸಂಸತ್ತಿನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಆಯೋಗದ ಶಿಫಾರಸನ್ನು ತಳ್ಳಿಹಾಕಿದರು. ಹೀಗಾಗಿ ಕರ್ನಾಟಕಕ್ಕೆ ಈ ಹಣವೂ ದಕ್ಕಲಿಲ್ಲ ಎಂಬುದು ವಾಸ್ತವ ಸಂಗತಿಯಾಗಿದೆ.
ಉತ್ತರದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಲ್ಲಿನ ಸರಕಾರಗಳು ತಮ್ಮ ರಾಜ್ಯಗಳ ಜನರಿಗೆ ಉದ್ಯೋಗಾವಕಾಶ ಒದಗಿಸುವಲ್ಲಿ ವಿಫಲಗೊಂಡಿವೆ. ಹೀಗಾಗಿ ಹೊಟ್ಟೆಗೆ ಅನ್ನವಿಲ್ಲದ ಉತ್ತರದ ರಾಜ್ಯಗಳಿಂದ ಕೆಲಸವನ್ನು ಅರಸಿ ಪ್ರತಿ ನಿತ್ಯವೂ ಸಾವಿರಾರು ಜನ, ಅದರಲ್ಲೂ ಯುವಕರು ಬದುಕನ್ನು ಕಟ್ಟಿಕೊಳ್ಳಲು ನಮ್ಮ ರಾಜ್ಯಕ್ಕೆ ವಲಸೆ ಬರುತ್ತಿದ್ದಾರೆ. ಜಾತಿ, ಮತದ ಹೆಸರಿನಲ್ಲಿ ಜನರನ್ನು ವಿಭಜಿಸುವ ಬಿಜೆಪಿಗೆ ಅದರಿಂದ ಬಹುಸಂಖ್ಯಾತರ ವೋಟ್ಬ್ಯಾಂಕ್ ನಿರ್ಮಿಸುವುದನ್ನು ಬಿಟ್ಟರೆ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ನಂಬಿಕೆಯಿಲ್ಲ ಎಂಬುದು ಇದರಿಂದ ಖಚಿತವಾಗುತ್ತದೆ.
ಕೇಂದ್ರದಲ್ಲಿ ತಮ್ಮದೇ ಸರಕಾರವಿದ್ಧರೂ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ರಾಜ್ಯದ ಬಿಜೆಪಿ ನಾಯಕರು ಜಾಣ ಮೌನವನ್ನು ತಾಳಿದ್ದಾರೆ. ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತಾಡದ ಬಿಜೆಪಿ ನಾಯಕರು ಜಾತಿ, ಧರ್ಮದ ಹೆಸರಿನಲ್ಲಿ ಕನ್ನಡಿಗರನ್ನು ಒಡೆಯುವ, ಸೌಹಾರ್ದವನ್ನು ಕೆಡಿಸುವ ವಿಚ್ಛಿದ್ರಕಾರಿ ರಾಜಕೀಯ ಮಾಡುತ್ತಿದ್ದಾರೆ.
ಕೇಂದ್ರ ಸರಕಾರ ರಾಜ್ಯಗಳಿಗೆ ನೀಡಿದ ತೆರಿಗೆಯ ಪಾಲಿಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ಗಮನಿಸಿದರೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿರುವುದು ಸ್ಪಷ್ಟವಾಗಿದೆ. ಯಾವ ಮಾನದಂಡಗಳನ್ನು ಅನುಸರಿಸಿ ರಾಜ್ಯಗಳ ತೆರಿಗೆ ಪಾಲನ್ನು ನಿರ್ಧರಿಸಲಾಗುತ್ತದೆ ಎಂಬುದು ರಾಜ್ಯದ ಜನರಿಗೆ ತಿಳಿಯಬೇಕಾಗಿದೆ.
ವಾಸ್ತವವಾಗಿ ಹೆಚ್ಚು ತೆರಿಗೆಯನ್ನು ಸಂಗ್ರಹಿಸಿ ಕೊಡುವ ರಾಜ್ಯಗಳಿಗೆ ಕೊಂಚ ಜಾಸ್ತಿ ಅನುದಾನ ನೀಡುವ ಮಾನದಂಡ ಅನುಸರಿಸುವುದು ಸೂಕ್ತವಾಗಿದೆ. ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ನೀಡುವ ಹಣದಲ್ಲಿ ರಾಜಕೀಯ ಮಾಡಬಾರದು. ರಾಜ್ಯಕ್ಕೆ ನೀಡುವ ಹಣ ಮುಖ್ಯಮಂತ್ರಿಗಳು ಇಲ್ಲವೇ ಯಾವುದೇ ಮಂತ್ರಿಯ ವೈಯಕ್ತಿಕ ಬ್ಯಾಂಕ್ ಖಾತೆಗೆ ಹೋಗುವುದಿಲ್ಲ. ಇದು ರಾಜ್ಯದ ಅಭಿವೃದ್ಧಿಗೆ ಒದಗಿಸುವ ಕರ್ನಾಟಕದ ಪಾಲಿನ ತೆರಿಗೆ ಹಣ. ಇದರಲ್ಲಿ ರಾಜಕೀಯ ಮಾಡದೆ ರಾಜ್ಯದಿಂದ ಚುನಾಯಿತರಾದ ಸಂಸದರು ಹಾಗೂ ಕೇಂದ್ರ ಸಚಿವರು ಅದರಲ್ಲೂ ಬಿಜೆಪಿ ಸಂಸದರೂ ಕರ್ನಾಟಕದ ಪಾಲಿನ ತೆರಿಗೆ ಹಣಕ್ಕಾಗಿ ಪಕ್ಷಭೇದ ಬದಿಗೊತ್ತಿ ಒಂದಾಗಿ ಧ್ವನಿ ಎತ್ತಬೇಕಾಗಿದೆ. ರಾಜ್ಯದ ಬಿಜೆಪಿ ಸಂಸದರು, ಶಾಸಕರು ರಾಜ್ಯಕ್ಕೆ ಅನ್ಯಾಯವಾದಾಗ ಅದರ ಬಗ್ಗೆ ಮಾತನಾಡದಿರುವುದು ತಮ್ಮನ್ನು ಚುನಾಯಿಸಿದ ಜನರಿಗೆ ದ್ರೋಹ ಮಾಡಿದಂತೆ ಎಂಬುದನ್ನು ಮರೆಯಬಾರದು.