Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಅಂಬೇಡ್ಕರ್ ದ್ವೇಷಿ, ಸಂವಿಧಾನ ದ್ರೋಹಿಗಳ...

ಅಂಬೇಡ್ಕರ್ ದ್ವೇಷಿ, ಸಂವಿಧಾನ ದ್ರೋಹಿಗಳ ‘ಸಂವಿಧಾನ ಸನ್ಮಾನ ಅಭಿಯಾನ’

ಶಿವಸುಂದರ್ಶಿವಸುಂದರ್7 Dec 2024 10:05 AM IST
share
ಅಂಬೇಡ್ಕರ್ ದ್ವೇಷಿ, ಸಂವಿಧಾನ ದ್ರೋಹಿಗಳ ‘ಸಂವಿಧಾನ ಸನ್ಮಾನ ಅಭಿಯಾನ’
ಸಂಘಪರಿವಾರದ ಅಂಗಸಂಸ್ಥೆಗಳು ಈಗ ನಡೆಸುತ್ತಿರುವ ‘ಸಂವಿಧಾನ ಸನ್ಮಾನ ಅಭಿಯಾನ’ದಲ್ಲಿ ಸಂವಿಧಾನದ ಹಾಗೂ ಅಂಬೇಡ್ಕರ್‌ರ ನಿಜವಾದ ಅನುಯಾಯಿಗಳು ತಾವೇ ಹೊರತು ಕಾಂಗ್ರೆಸ್ ಅಥವಾ ಇತರ ಪಕ್ಷಗಳಲ್ಲ ಎಂದು ನಂಬಿಸಲು ಹಲವಾರು ಸುಳ್ಳುಗಳನ್ನು, ಐತಿಹಾಸಿಕ ಅರ್ಧ ಸತ್ಯಗಳನ್ನು, ಪ್ರಚಾರ ಮಾಡುತ್ತಿದೆ. ಆ ಮೂಲಕ ತನ್ನ ನಿಜ ಸ್ವರೂಪವಾದ ಅಂಬೇಡ್ಕರ್ ದ್ವೇಷ ಹಾಗೂ ಸಂವಿಧಾನ ದ್ರೋಹವನ್ನು ಮರೆಮಾಚುವ ಕುತಂತ್ರ ನಡೆಸಿದೆ.. ಈ ಸರಣಿ ಲೇಖನವು ಸಂಘಿ ಅಭಿಯಾನದ ಸುಳ್ಳುಗಳನ್ನು, ಬಯಲಿಗೆಳೆಯಲಿದೆ ಮತ್ತು ಸಂಘಿಗಳ ಅಸಲಿ ಪಾತ್ರವನ್ನು ಮತ್ತು ಹಾಲಿ ದುರುದ್ದೇಶಗಳನ್ನು ಅನಾವರಣ ಮಾಡಲಿದೆ.. ಕರ್ನಾಟಕದ ರಾಜಕೀಯ ಆರೋಗ್ಯದ ಹಿತದೃಷ್ಟಿಯಿಂದ ಈ ಸರಣಿಯನ್ನು ಪ್ರಕಟಿಸಲಾಗುತ್ತಿದೆ.

ಸರಣಿ- 4

3. ಸಂವಿಧಾನ ಸಭೆಗೆ ಅಂಬೇಡ್ಕರ್- ಹಿಂದೂ ಮಹಾಸಭಾದ ದಲಿತ ದ್ರೋಹಿ, ಅಂಬೇಡ್ಕರ್ ವಿರೋಧಿ ಕುತಂತ್ರಗಳು

ಈ ಸಂವಿಧಾನ ಅವಮಾನ ಅಭಿಯಾನದಲ್ಲಿ ಸಂಘಪರಿವಾರವು ಜನರ ಮುಂದಿಡುತ್ತಿರುವ ಮತ್ತೊಂದು ಅರ್ಧ ಸತ್ಯಗಳ ಕುತಂತ್ರ ಕಥನ ಅಂಬೇಡ್ಕರ್ ಸಂವಿಧಾನ ಸಭೆಗೆ ಆಯ್ಕೆಯಾಗಿದ್ದು ಮತ್ತು ನಂತರ ರಾಜೀನಾಮೆ ಕೊಡಬೇಕಾದ ಸಂದರ್ಭದ ಹಿಂದಿದ್ದ ಕಾಂಗ್ರೆಸ್‌ನ ಪಾತ್ರದ ಬಗ್ಗೆ.

ಈಗಾಗಲೇ ಪ್ರಸ್ತಾಪಿಸಿದಂತೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದಲಿತರ ವಿಮೋಚನೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್‌ನ ಪಾತ್ರ ವಂಚಕವಾಗಿತ್ತು ಮತ್ತು ದ್ರೋಹಪೂರಿತ ವಾಗಿತ್ತು. ಇತಿಹಾಸದ ಹಲವು ಕಾಲಘಟ್ಟಗಳಲ್ಲಿ ಸ್ವಾತಂತ್ರ್ಯದ ಜೊತೆಗೆ ದಲಿತರ ವಿಮೋಚನೆಯೂ ಅಗುವಂತೆ ಪ್ರಸ್ತಾವಗಳನ್ನು ಅಂಬೇಡ್ಕರ್ ಇಟ್ಟಾಗ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಅದನ್ನು ದೇಶ ಹಾಗೂ ಹಿಂದೂ ಧರ್ಮದ ಐಕ್ಯತೆಯ ಹೆಸರಿನಲ್ಲಿ ನಿರಾಕರಿಸಿ, ಅಪಮಾನಿಸಿ ದಲಿತ ವಿಮೋಚನೆಗೆ ಮತ್ತು ದಲಿತ ಅಸ್ಮಿತೆಯ ಸ್ವಾಯತ್ತತೆಗೆ ದ್ರೋಹ ಬಗೆಯಿತು. ಇದರಿಂದ ಅಂಬೇಡ್ಕರ್ ಅವರು ಗಾಂಧಿಯ ನೇತೃತ್ವದ ಬಗ್ಗೆ ಹಾಗೂ ಕಾಂಗ್ರೆಸ್ ಹೋರಾಟದ ಬಗ್ಗೆ ಸಕಾರಣವಾಗಿ ಅತ್ಯಂತ ಆಕ್ರೋಶಿತರಾಗಿದ್ದರು ಹಾಗೂ ಕಾಂಗ್ರೆಸ್‌ಗೆ ವಿರೋಧವಾಗಿ ಮತ್ತು ಪರ್ಯಾಯವಾಗಿ ಈ ದೇಶದ ದಲಿತ ದಮನಿತರ ವಿಮೋಚನೆಯನ್ನು ಖಾತರಿ ಪಡಿಸುವ ದಾರಿಯ ಅನ್ವೇಷಣೆಯನ್ನು ಮಾಡುತ್ತಿದ್ದರು.

ಹೀಗಾಗಿ ಕಾಂಗ್ರೆಸ್ ಮತ್ತು ಅಂಬೇಡ್ಕರ್‌ರ ನಡುವಿನ ಸಮಸ್ಯಾತ್ಮಕ ಸಂಬಂಧಗಳ ಹಿಂದೆ ಒಂದು ಜಾತಿ-ವರ್ಗಗ್ರಸ್ಥ ಸಮಾಜದಲ್ಲಿ ರಾಜ್ಯಾಧಿಕಾರವು ಪ್ರಬಲ ಜಾತಿ-ವರ್ಗಗಳಿಗೆ ಹಸ್ತಾಂತರವಾಗುವ ಆತಂಕ ಹುಟ್ಟುಹಾಕುವ ಸಾಮಾಜಿಕ- ರಾಜಕೀಯ ಪ್ರಶ್ನೆಗಳಿದ್ದವು. ಆ ಪ್ರಶ್ನೆಗಳನ್ನು ಸ್ವಾತಂತ್ರ್ಯ ಹೋರಾಟವೂ ಬಗೆಹರಿಸಲಿಲ್ಲ. ಸ್ವಾತಂತ್ರ್ಯವೂ ಬಗೆಹರಿಸಿಲ್ಲ. ಸಂವಿಧಾನವೂ ಬಗೆಹರಿಸಿಲ್ಲ.

ಆದರೆ ಈ ವಿಷಯದಲ್ಲಿ ಹಿಂದುತ್ವವಾದಿಗಳು ಸಹ ಕಾಂಗ್ರೆಸ್‌ನಷ್ಟೇ ಅಥವಾ ಕಾಂಗ್ರೆಸ್‌ಗಿಂತ ಹೆಚ್ಚು ದಲಿತ ದ್ರೋಹಿಗಳು ಮತ್ತು ಅಂಬೇಡ್ಕರ್ ವಿರೋಧಿಗಳೇ ಆಗಿದ್ದರು. ಅದನ್ನು ಸಂಘಿಗಳು ಈ ಅಭಿಯಾನದಲ್ಲಿ ಮುಚ್ಚಿಡುತ್ತಿದ್ದಾರೆ.

ಸ್ವಾತಂತ್ರ್ಯ ಪೂರ್ವ ರಾಜಕಾರಣದಲ್ಲಿ ಉಗ್ರ ಹಿಂದುತ್ವದ ಪ್ರಧಾನ ಪ್ರತಿಪಾದಕ ಸಾವರ್ಕರ್ ಅವರ ಹಿಂದೂ ಮಹಾಸಭಾ. ಅಂದಿನ ಆರೆಸ್ಸೆಸ್ ರಾಷ್ಟ್ರ ರಾಜಕಾರಣದ ಕ್ಷೇತ್ರದಲ್ಲಿ ಅದರಲ್ಲೂ 1945-48ರ ಅವಧಿಯಲ್ಲಿ ವಿಶೇಷವಾಗಿ ಹಿಂದೂ ಮಹಾಸಭಾದ ಬೆನ್ನಿಗೆ ನಿಂತು ಕೆಲಸ ಮಾಡುತ್ತಿತ್ತು. ಬಹಳಷ್ಟು ಬಾರಿ ಹಿಂದೂ ಮಹಾಸಭಾದ ಸದಸ್ಯರೇ ಆರೆಸ್ಸೆಸ್‌ನ ಸದಸ್ಯರೂ ಆಗಿರುತ್ತಿದ್ದರು. ಗಾಂಧಿಯನ್ನು ಕೊಂದ ಭಾರತದ ಪ್ರಥಮ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಇದಕ್ಕೊಂದು ಉದಾಹರಣೆ.

ಎಲ್ಲಕ್ಕಿಂತ ಹೆಚ್ಚಾಗಿ ಆಗಲೂ, ಈಗಲೂ ಆರೆಸ್ಸೆಸ್ ಮತ್ತು ಅದರ ಪರಿವಾರ ಸಾವರ್ಕರ್ ಅವರನ್ನೇ ತಮ್ಮ ಸೈದ್ಧಾಂತಿಕ ನಾಯಕನನ್ನಾಗಿ, ಪಿತಾಮಹನನ್ನಾಗಿ ಪರಿಗಣಿಸುತ್ತದೆ ಮತ್ತು 1951ರಲ್ಲಿ ಭಾರತೀಯ ಜನ ಸಂಘ ಎಂಬ ಪಕ್ಷವನ್ನು ತಾನೇ ಹುಟ್ಟುಹಾಕುವವರೆಗೆ ಹಿಂದೂ ಮಹಾಸಭಾವನ್ನೇ ತನ್ನ ರಾಜಕೀಯ ಪಕ್ಷವೆಂದು ಭಾವಿಸಿತ್ತು.

1951ರಲ್ಲಿ ಆರೆಸ್ಸೆಸೇ ಭಾರತೀಯ ಜನಸಂಘವನ್ನು ಹುಟ್ಟುಹಾಕಿದಾಗ ಅದರ ಪ್ರಥಮ ಅಧ್ಯಕ್ಷರಾದದ್ದು ಹಿಂದೂ ಮಹಾಸಭಾದ ಸಂಸದರಾಗಿದ್ದ ಶಾಮ್‌ಪ್ರಸಾದ್ ಮುಖರ್ಜಿ. ಹೀಗಾಗಿ ಇಲ್ಲಿ ಹಿಂದೂ ಮಹಾಸಭಾ ಎಂದು ಪ್ರಸ್ತಾಪವಾಗುವುದೆಲ್ಲಾ ಆರೆಸ್ಸೆಸ್‌ಗೆ ಅನ್ವಯವಾಗುತ್ತದೆ. ಅವೆರಡು ಒಂದೇ ಆತ್ಮದ ಎರಡು ಬೇರೆ ದೇಹಗಳಾಗಿದ್ದವು ಅಷ್ಟೆ.

ಈಗಾಗಲೇ ಚರ್ಚಿಸಿದಂತೆ ದಲಿತರಿಗೆ ದ್ರೋಹ ಬಗೆದ ಕಾಂಗ್ರೆಸ್ ನೇತೃತ್ವದ ಪೂನ ಒಪ್ಪಂದಕ್ಕೆ ಸಹಿಹಾಕಿದವರಲ್ಲಿ ಹಿಂದೂ ಮಹಾಸಭಾ ಕೂಡ ಇತ್ತು. ಹಿಂದುತ್ವವಾದಿಗಳ ಬಳಿ ದಲಿತ ದಮನಿತರನ್ನು ಜಾತಿ-ವರ್ಗ-ಲಿಂಗಾಧಿಪತ್ಯಗಳಿಗೆ ಇನ್ನಷ್ಟು ಉಗ್ರವಾಗಿ ಕಟ್ಟಿಹಾಕುವ ಹಿಂದುತ್ವದ ಕಾರಾಗೃಹಗಳನ್ನು ಬಿಟ್ಟರೆ ಬೇರೆ ಪರಿಹಾರಗಳೇನೂ ಇರಲಿಲ್ಲ. ಆದರೂ ಅಂಬೇಡ್ಕರ್ ಮತ್ತು ಕಾಂಗ್ರೆಸ್ ನಡುವೆ ಇದ್ದಂತಹ ವೈರುಧ್ಯಗಳನ್ನು ಬಳಸಿಕೊಂಡು ಹಿಂದೂ ಮಹಾಸಭಾ ತಾನು ದಲಿತ ಪರ ಎಂದೆಲ್ಲಾ ಸೋಗು ಹಾಕಿದ್ದು ನಿಜ. ಆದರೆ ಅಂಬೇಡ್ಕರ್ ಅವರು ಕಾಂಗ್ರೆಸನ್ನು ವಿರೋಧಿಸುತ್ತಿದ್ದರೂ ಎಂದಿಗೂ ಹಿಂದುತ್ವವನ್ನು ಒಂದು ಪರಿಹಾರದ ಸಾಧನವೆಂದು ಪರಿಗಣಿಸಲಿಲ್ಲ. ಅದಕ್ಕೆ 1940ರಲ್ಲಿ ಕೂಡ ಅವರು ಅತ್ಯಂತ ಸ್ಪಷ್ಟವಾಗಿ ಹಿಂದೂ ರಾಷ್ಟ್ರವೆಂಬುದು ಪ್ರಜಾತಂತ್ರದ ವಿಪತ್ತು ಎಂದು ತಿರಸ್ಕರಿಸಿದ್ದೇ ಸಾಕ್ಷಿ.

ಅವೆಲ್ಲವನ್ನೂ ಈಗ ಮರೆಮಾಚುತ್ತಿರುವ ಸಂಘಪರಿವಾರ ಸ್ವಾತಂತ್ರ್ಯ ಹೋರಾಟದಲ್ಲಿ ಅಂಬೇಡ್ಕರ್ ಮತ್ತು ಕಾಂಗ್ರೆಸ್‌ನ ನಡುವೆ ಇದ್ದ ಬಿರುಕುಗಳು ಮತ್ತು ಕಾಂಗ್ರೆಸ್ ಮಾಡಿದ ದ್ರೋಹಗಳನ್ನು ಮುಂದುಮಾಡುತ್ತಾ ತನ್ನ ಮಹಾದ್ರೋಹ ಹಾಗೂ ಮಹಾವಂಚನೆಗಳನ್ನು ಮರೆಮಾಚುತ್ತಿದೆ.

ಅದರ ಭಾಗವಾಗಿಯೇ ಈ ಅಭಿಯಾನದಲ್ಲಿ ಅವರು ಸಂವಿಧಾನ ಸಭೆಗೆ ಅಂಬೇಡ್ಕರ್ ಆಯ್ಕೆ ಮತ್ತು ರಾಜೀನಾಮೆಗಳಲ್ಲಿ ಕಾಂಗ್ರೆಸ್ ಪಾತ್ರದ ಸುತ್ತ ಹಲವು ಅರ್ಧ ಸತ್ಯಗಳನ್ನು ಬಿತ್ತುತ್ತಿದ್ದಾರೆ ಮತ್ತು ತಮ್ಮ ಕುತಂತ್ರದ ಬಗ್ಗೆ ಮೌನವನ್ನೂ ತೋರಿದ್ದಾರೆ.

ಕಾಂಗ್ರೆಸ್ ಮತ್ತು ಹಿಂದೂ ಮಹಾಸಭಾ-ಸ್ವಾಯತ್ತ ದಲಿತ ಅಸ್ಮಿತೆಯ ಹಂತಕರು

ಅಂಬೇಡ್ಕರ್ ಅವರು ಏಕೆ 1946ರಲ್ಲಿ ನಡೆದ ಪ್ರಾಂತೀಯ ಶಾಸನಸಭಾ ಚುನಾವಣೆಯಲ್ಲಿ ಸೋಲಬೇಕಾಯಿತು? ಏಕೆ ಸಂವಿಧಾನ ಸಭೆಗೆ ಆಯ್ಕೆಯಾಗಲು ಮುಂಬೈನಿಂದ ಬಂಗಾಳಕ್ಕೆ ಹೋಗಬೇಕಾಯಿತು? ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಅವರೇ ಚುನಾವಣೆಯಲ್ಲಿ ಏಕೆ ಸೋಲಬೇಕಾಯಿತು?

ಇದು ಅರ್ಥವಾಗಬೇಕೆಂದರೆ ಸ್ವಾಯತ್ತ ದಲಿತ ರಾಜಕಾರಣ ಮತ್ತು ಸ್ವತಂತ್ರ ದಲಿತ ನಾಯಕರು ಸಂವಿಧಾನ ಸಭೆಗೆ ಆಯ್ಕೆಯಾಗದಂತೆ ಯೋಜಿತವಾಗಿ ರಚಿಸಲಾದ ರಾಜಕೀಯ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಗಮನಿಸಬೇಕು. ಅದು ಅರ್ಥವಾಗದೆ ಸ್ವಾತಂತ್ರ್ಯ ಹೋರಾಟದಲ್ಲೂ ಮತ್ತು ಈಗಲೂ ದಲಿತರ ರಾಜಕೀಯ ವಿಮೋಚನೆಗೆ ಅಗುತ್ತಿರುವ ಅನ್ಯಾಯ ಅರ್ಥವಾಗದು.

ಆದ್ದರಿಂದ ಸಂವಿಧಾನ ಸಭೆಗೆ ಅಂಬೇಡ್ಕರ್ ಆಯ್ಕೆಯನ್ನು ತಡೆಗಟ್ಟುತ್ತಿದ್ದ ಕಾಂಗ್ರೆಸ್ ಹಾಗೂ ಹಿಂದೂ ಮಹಾಸಭಾಗಳ ಸವರ್ಣೀಯ ಹಿಂದೂ ರಾಜಕಾರಣವನ್ನು ಸ್ವಲ್ಪ ಕೂಲಂಕಷವಾಗಿಯೇ ನೋಡಬೇಕಿದೆ.

ಭಾರತಕ್ಕೆ ಜವಾಬ್ದಾರಿಯುತ ಸರಕಾರವನ್ನು ಒದಗಿಸುವ ಮತ್ತು ಸ್ಥಳೀಯ ಪ್ರಾತಿನಿಧ್ಯವನ್ನು ಹಂತಹಂತವಾಗಿ ಹೆಚ್ಚಿಸುವ ಪ್ರಕ್ತಿಯೆ 1909ರ ಮಾರ್ಲೆ-ಮಿಂಟೊ ಸುಧಾರಣೆಯಿಂದ ಪ್ರಾರಂಭವಾಯಿತು. ಆದರೆ ಸ್ಥಳೀಯರ ಪ್ರಾತಿನಿಧ್ಯದ ವಿಷಯದಲ್ಲಿ ವಸಾಹತುಶಾಹಿ ಬ್ರಿಟಿಷರು ತಮ್ಮ ಒಡೆದಾಳುವ ನೀತಿಯ ಭಾಗವಾಗಿ ಕೋಮುವಾರು ಪ್ರಾತಿನಿಧ್ಯದ ಮಾರ್ಗವನ್ನು ಅನುಸರಿಸಿದರು. ಸೈಮನ್ ಕಮಿಷನ್ ನಂತರ ಭಾರತಕ್ಕೆ ಹೆಚ್ಚಿನ ಜವಾಬ್ದಾರಿಯುತ ಸರಕಾರ ಒದಗಿಸುವ ಹೆಸರಿನಲ್ಲಿ ಯಾವ ಯಾವ ಕೋಮುಗಳಿಗೆ ಎಷ್ಟೆಷ್ಟು ಪ್ರಾತಿನಿಧ್ಯ ಎಂದು ನಿಗದಿಪಡಿಸಲು ದುಂಡು ಮೇಜಿನ ಪರಿಷತ್ ಸಭೆಗಳು ನಡೆದವು. ಇದರಲ್ಲಿ ಅಂಬೇಡ್ಕರ್ ಅವರು ಅಸ್ಪಶ್ಯರು ಹಿಂದೂಗಳಲ್ಲ ಮತ್ತು ಕಾಂಗ್ರೆಸ್ ಸವರ್ಣೀಯ ಹಿಂದೂಗಳ ಪ್ರತಿನಿಧಿಯೇ ಹೊರತು ಅಸ್ಪಶ್ಯರದ್ದಲ್ಲ ಎಂದು ಯಶಸ್ವಿಯಾಗಿ ಪ್ರತಿಪಾದಿಸಿದರು ಮತ್ತು ಹಿಂದೂ, ಮುಸ್ಲಿಮ್, ಸಿಖ್ಖರಂತೆ ದಲಿತರಿಗೂ ಪ್ರತ್ಯೇಕ ಮತದಾನ ಮತ್ತು ಮತಕ್ಷೇತ್ರಗಳನ್ನು ದಕ್ಕಿಸಿಕೊಂಡರು.

ಅಂದರೆ ಸವರ್ಣೀಯರ ಹಂಗಿಲ್ಲದೆ ದಲಿತರೇ ದಲಿತರನ್ನು ತಮ್ಮ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿಕೊಳ್ಳುವ ಸವರ್ಣೀಯ ಹಂಗಿನಿಂದ ಮುಕ್ತವಾದ ಸ್ವಾಯತ್ತ ದಲಿತ ಅಸ್ಮಿತೆಯ ಹಕ್ಕನ್ನು ಪಡೆದುಕೊಂಡರು.

ಆದರೆ ಸವರ್ಣೀಯ ಹಿಂದೂಗಳಿಂದ ದಲಿತರು ಪಡೆದ ಈ ರಾಜಕೀಯ ವಿಮೋಚನೆಯನ್ನು ಕಾಂಗ್ರೆಸ್ ಮಾತ್ರವಲ್ಲದೆ ಹಿಂದೂ ಮಹಾಸಭಾ ಕೂಡ ದೇಶಾದ್ಯಂತ ಉಗ್ರವಾಗಿ ವಿರೋಧಿಸಿತು. ಯರವಾಡ ಜೈಲಿನಲ್ಲಿ ಗಾಂಧಿ ಆಮರಣಾಂತ ಉಪವಾಸ ಸತ್ಯಾಗ್ರಹದ ಭಯೋತ್ಪಾದನೆಗಿಳಿದರು. ದಲಿತರಿಗೆ ಮತ್ತು ಅಂಬೇಡ್ಕರ್‌ಗೆ ಮಾರಣಾಂತಿಕ ಎಚ್ಚರಿಕೆಯನ್ನು ನೀಡಿದರು. ಇವೆಲ್ಲದರ ಭಾಗವಾಗಿ ಪೂನ ಒಪ್ಪಂದವಾಯಿತು.

ಈಗಾಗಲೇ ಗಮನಿಸಿದಂತೆ ಕಾಂಗ್ರೆಸ್ ಮತ್ತು ಸವರ್ಣೀಯ ಹಿಂದೂಗಳ ಪಕ್ಷದಿಂದ ಈ ದಲಿತ ದ್ರೋಹಿ ಒಪ್ಪಂದಕ್ಕೆ ಸಹಿ ಹಾಕಿದವರಲ್ಲಿ ಹಿಂದೂ ಮಹಾಸಭಾದ ಪ್ರಮುಖ ನಾಯಕ ಮೂಂಜೆ ಸಹ ಒಬ್ಬರು. ಇದರಿಂದ ದುಂಡು ಮೇಜಿನ ಪರಿಷತ್ತಿನಲ್ಲಿ ಅಂಬೇಡ್ಕರ್ ದಲಿತರ ರಾಜಕೀಯ ವಿಮೋಚನೆಗೆ ಗಳಿಸಿದ್ದ ಹಕ್ಕು ನಷ್ಟವಾಯಿತು.

share
ಶಿವಸುಂದರ್
ಶಿವಸುಂದರ್
Next Story
X