ಅಂಬೇಡ್ಕರ್ ದ್ವೇಷಿ, ಸಂವಿಧಾನ ದ್ರೋಹಿಗಳ ‘ಸಂವಿಧಾನ ಸನ್ಮಾನ ಅಭಿಯಾನ’
ಸರಣಿ- 7
4. ಅಂಬೇಡ್ಕರ್ ರಾಜೀನಾಮೆಯಲ್ಲಿ ಸಂಘಿಗಳ ಪಾತ್ರವಿಲ್ಲವೇ?
ಸಂವಿಧಾನ ಸನ್ಮಾನ ಅಭಿಯಾನದಲ್ಲಿ ಸಂಘಿಗಳು ಬಿತ್ತುತ್ತಿರುವ ಮತ್ತೊಂದು ಅರ್ಧ ಸತ್ಯ ಅಂಬೇಡ್ಕರ್ ಅವರು ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ನೆಹರೂ ಸರಕಾರ ಕಾರಣ ಎಂಬುದು. ಅಂಬೇಡ್ಕರ್ ರಾಜೀನಾಮೆ ಕೊಡುವಲ್ಲಿ ತಮ್ಮ ಪಾತ್ರ ಎಷ್ಟಿತ್ತೆಂಬುದರ ಬಗ್ಗೆ ಸಂಘಿಗಳು ಒಂದೋ ಮೌನವಹಿಸುತ್ತಿದ್ದಾರೆ ಅಥವಾ ಸುಳ್ಳು ಹೇಳುತ್ತಿದ್ದಾರೆ.
1947ರಲ್ಲಿ ಕರಡು ರಚನಾ ಸಮಿತಿಯ ಅಧ್ಯಕ್ಷರಾದ ಮೇಲೆ ಅಂಬೇಡ್ಕರ್ ಅವರು ಕರಡು ಸಮಿತಿಯ ಉಳಿದ ಆರು ಸದಸ್ಯರ ಅಸಹಕಾರದ ನಡುವೆ ಮತ್ತು ಸಂವಿಧಾನ ಸಭೆಯ ಉಳಿದ 288 ಸದಸ್ಯರ ಪ್ರಜಾತಂತ್ರದ ಪರ ಹಾಗೂ ವಿರೋಧಿ ಅಭಿಪ್ರಾಯಗಳ ನಡುವೆ ಮತ್ತು ಸಂದರ್ಭದ ಮತ್ತು ಐತಿಹಾಸಿಕ ಮಿತಿಗಳ ನಡುವೆ ಸಾಧ್ಯವಿರುವಷ್ಟು ಜನಪರವಾಗಿ ಸಂವಿಧಾನವನ್ನು ರಚಿಸಿ ದೇಶಕ್ಕೆ ನೀಡಿದ್ದಾರೆ.
1950ರ ಜನವರಿ 26ರಂದು ಭಾರತವು ಸಂವಿಧಾನವನ್ನು ಜಾರಿಗೆ ತಂದು ಗಣರಾಜ್ಯವಾದ ಮೇಲೆ 1951-52ರಲ್ಲಿ ಭಾರತದ ಮೊದಲ ಮಹಾ ಚುನಾವಣೆ ನಡೆಯುವುದೆಂದು ತೀರ್ಮಾನವಾಗುತ್ತದೆ. ಅಲ್ಲಿಯವರೆಗೂ ಮಧ್ಯಂತರ ಸರಕಾರವೇ ಮುಂದುವರಿಯಬೇಕಿರುತ್ತದೆ. ಈ ಅವಧಿಯಲ್ಲಿ ನೆಹರೂ ನೇತೃತ್ವದ ಮಧ್ಯಂತರ ಸರಕಾರದಲ್ಲಿ ಕಾನೂನು ಸಚಿವರಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಾರೆ. ಆದರೆ ಅಂಬೇಡ್ಕರ್ ಅವರು 1951ರ ಸೆಪ್ಟಂಬರ್ 27ರಂದು ಮಂತ್ರಿಮಂಡಲಕ್ಕೆ ರಾಜೀನಾಮೆ ಕೊಟ್ಟು ಹೊರಬರುತ್ತಾರೆ.
ಸಂಘಿಗಳು ಈಗ ತಮ್ಮ ಸಂವಿಧಾನ ಸನ್ಮಾನ ಅಭಿಯಾನದಲ್ಲಿ ಅದನ್ನು ವಿಕೃತವಾಗಿ ತಿರುಚಿ ತಮ್ಮ ದ್ರೋಹದ ಪಾತ್ರವನ್ನು ಮರೆಮಾಚುತ್ತಿದ್ದಾರೆ.
ಅಂಬೇಡ್ಕರ್ ಅವರು ತಮ್ಮ ರಾಜೀನಾಮೆ ಪತ್ರದಲ್ಲೇ ಸ್ಪಷ್ಟಪಡಿಸಿರುವಂತೆ ಅವರ ರಾಜೀನಾಮೆಗೆ ಕಾರಣ ನೆಹರೂ ಸರಕಾರ:
1. ಹಿಂದೂ ಕೋಡ್ ಬಿಲ್ ಜಾರಿ ಮಾಡದಿರುವುದು
2. ಕಾಶ್ಮೀರ ವಿಷಯದಲ್ಲಿ ತಪ್ಪು ಧೋರಣೆ
3. ಒಬಿಸಿ ಮೀಸಲಾತಿಗೆ ಸರಕಾರದ ತಕರಾರುಗಳು
ಇವೆಲ್ಲವೂ ನಿಜ.
ಆದರೆ ಈ ಮೂರೂ ಪ್ರಕರಣಗಳಲ್ಲಿ ಅಂಬೇಡ್ಕರ್ ತಮ್ಮ ಅಭಿಪ್ರಾಯ ಮುಂದಿಟ್ಟಾಗ ಈಗ ಅಂಬೇಡ್ಕರ್ ಅವರ ಅಪರ ಅನುಯಾಯಿಗಳೆಂದು ಸೋಗುಹಾಕುತ್ತಿರುವ ಸಂಘಪರಿವಾರದ ಪಾತ್ರವೇನಿತ್ತು?
ಒಂದೊಂದಾಗಿ ನೋಡೋಣ.
ಹಿಂದೂ ಕೋಡ್ ಬಿಲ್- ಅಂಬೇಡ್ಕರ್ ಧರ್ಮದ್ರೋಹಿ ಎಂದು ದಾಳಿ ಮಾಡಿದ್ದ ಸಂಘಿಗಳು
ಮೊದಲನೆಯದಾಗಿ ಹಿಂದೂ ಕೋಡ್‌ಬಿಲ್ ಹಿಂದೂ ಮಹಿಳೆಯರ ಪರವಾಗಿ ರೂಪಿಸಿದ ಮಸೂದೆ. ಅದರಲ್ಲಿ ವಿವಾಹ, ದತ್ತು ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ಹಿಂದೂ ಮಹಿಳೆಯರಿಗೂ ಸ್ವತಂತ್ರ ನಿರ್ಧಾರದ ಮತ್ತು ಪಾಲಿನ ಹಕ್ಕನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಪ್ರಧಾನಿಯಾಗಿ ನೆಹರೂ ಕೂಡ ಅದಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಆದರೆ ಮಧ್ಯಂತರ ಸಂಸತ್‌ನಲ್ಲಿ ಈ ಮಸೂದೆ ಪ್ರಸ್ತಾವವಾದ ತಕ್ಷಣ ಭೂಕಂಪವಾದಂತೆ ವರ್ತಿಸಿ ಬಹುಪಾಲು ಸದಸ್ಯರುಗಳು ಪಕ್ಷಾತೀತವಾಗಿ ಮಸೂದೆಯ ವಿರುದ್ಧ ಪ್ರತಿಭಟನೆ ಪ್ರಾರಂಭಿಸಿದರು ಮತ್ತು ಅಂಬೇಡ್ಕರ್ ಅವರನ್ನು ಹೀನಾಯವಾಗಿ ನಿಂದಿಸಲು ಪ್ರಾರಂಭಿಸಿದರು. ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದರಿಂದ ಹಿಡಿದು ಕಾಂಗ್ರೆಸ್‌ನ ಬಹುಪಾಲು ಬಲಪಂಥೀಯ ನಿಲುವಿನ ಸದಸ್ಯರುಗಳು ಅಂಬೇಡ್ಕರ್‌ರನ್ನು ಧರ್ಮದ್ರೋಹಿ ಎಂದು ದೂಷಿಸಿದರು.
ಆದರೆ ಅಷ್ಟು ಮಾತ್ರವಲ್ಲ. ಹಿಂದೂ ಮಹಾಸಭಾ ಮತ್ತು ಭಾರತೀಯ ಜನಸಂಘದ ಶಾಮಪ್ರಸಾದ್ ಮುಖರ್ಜಿ ಅವರು ಈ ಮಸೂದೆಯ ಮೂಲಕ ಅಂಬೇಡ್ಕರ್ ಅವರು ದೈವಭೀರುಗಳ ಮನಸ್ಸಿಗೆ ಧಕ್ಕೆ ಉಂಟು ಮಾಡಿರುವುದಾಗಿ ಆರೋಪಿಸಿದರು. ಹೊರಗಡೆ ಆರೆಸ್ಸೆಸ್‌ನ ನೇತೃತ್ವದಲ್ಲಿ ಅಂಬೇಡ್ಕರ್ ಧರ್ಮದ್ರೋಹಿ ಮತ್ತು ದೇಶದ್ರೋಹಿ ಎಂದು ಬೃಹತ್ ಪ್ರತಿಭಟನೆಗಳನ್ನು ನಡೆಸಿದರು. ದಿಲ್ಲಿ ಒಂದರಲ್ಲೇ ಆರೆಸ್ಸೆಸ್ ಪ್ರೇರಿತ 15 ಪ್ರತಿಭಟನೆಗಳು ನಡೆದವೆಂದು ಪತ್ರಿಕೆಗಳು ವರದಿ ಮಾಡಿದವು.
ಹೀಗೆ ಸಂಸತ್ತಿನ ಒಳಗೆ ಮತ್ತು ಹೊರಗೆ ಸಂಘಿಗಳು ಮತ್ತು ಸಂಘಿಮನಸ್ಕರು ಮಸೂದೆಯ ವಿರುದ್ಧ ಹುಟ್ಟುಹಾಕಿದ ಅರಾಜಕತೆಯಿಂದಾಗಿ ಮಸೂದೆ ಬಗ್ಗೆ ಅರೆಮನಸ್ಕರಾಗಿದ್ದ ನೆಹರೂ ಕೂಡ ಮಸೂದೆಯನ್ನು ಕೈಬಿಟ್ಟು ಅಂಬೇಡ್ಕರ್ ಗೆ ಕೊಟ್ಟ ವಚನಕ್ಕೆ ಮೋಸ ಮಾಡಿದರು. ಇದರಲ್ಲಿ ಕಾಂಗ್ರೆಸ್‌ನ ಪಾತ್ರ ಇದ್ದೇ ಇದೆ. ಆದರೆ ಅಂಬೇಡ್ಕರ್ ರಾಜೀನಾಮೆ ಕೊಡುವಂತಹ ಸಂದರ್ಭ ಸೃಷ್ಟಿಸಿದ್ದರಲ್ಲಿ ಸಂಘಿಗಳ ಪಾತ್ರವೂ ಅಷ್ಟೆ ಮುಖ್ಯವಾಗಿದೆ. ಇದನ್ನು ಸಂಘಿಗಳು ಮುಚ್ಚಿಹಾಕುತ್ತಿದ್ದಾರೆ.
ಕಾಶ್ಮೀರ-ಆರೆಸ್ಸೆಸ್ ನಿಲುವನ್ನು ವಿರೋಧಿಸಿದ್ದ ಅಂಬೇಡ್ಕರ್
ಕಾಂಗ್ರೆಸ್‌ಗೆ ವಿರುದ್ಧವಾಗಿದ್ದವರೆಲ್ಲಾ ಸಂಘಿಗಳ ಪರವಾಗಿದ್ದರು ಎಂಬ ಸುಳ್ಳು ಕಥನವನ್ನು ಹುಟ್ಟುಹಾಕುತ್ತಿರುವ ಸಂಘಿಗಳು ಈ ಅಭಿಯಾನದಲ್ಲೂ ಕಾಶ್ಮೀರದ ವಿಷಯದಲ್ಲಿ ಅಂಬೇಡ್ಕರ್ ತಮ್ಮಂತಹ ಕೋಮುವಾದಿ ನಿಲುವನ್ನೇ ಇಟ್ಟುಕೊಂಡಿದ್ದರು. ಆದರೆ ಅದಕ್ಕೆ ಕಾಂಗ್ರೆಸ್ ಸ್ಪಂದಿಸದಿದ್ದರಿಂದ ರಾಜೀನಾಮೆ ಕೊಟ್ಟರು ಎಂದು ಪ್ರಚಾರ ಮಾಡುತ್ತಿದ್ದಾರೆ.
ಆರೆಸ್ಸೆಸ್ ಮತ್ತು ಆಗಿನ ಭಾರತೀಯ ಜನಸಂದ ನಿಲುವು ಜಮ್ಮು-ಕಾಶ್ಮೀರವನ್ನು ಅಲ್ಲಿನ ಜನರ ಅಭಿಪ್ರಾಯವನ್ನು ಕೇಳದೆ ಇಡಿಯಾಗಿ ಭಾರತದಲ್ಲಿ ವಿಲೀನಗೊಳಿಸಿಕೊಳ್ಳಬೇಕು ಎಂಬುದಾಗಿತ್ತು. ಆದರೆ ಸಂವಿಧಾನ ರಚಿಸುವಾಗ ಕಾಶ್ಮೀರಕ್ಕೆ ಸ್ವಾಯತ್ತತೆಯನ್ನು ನೀಡುವ ಅರ್ಟಿಕಲ್ 370ರ ಸೇರ್ಪಡೆಯನ್ನು ಶಾಮ ಪ್ರಸಾದ್ ಮುಖರ್ಜಿ ವಿರೋಧಿಸಿರಲಿಲ್ಲ. ಆದರೆ 1951ರಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಒಂದು ದೇಶಕ್ಕೆ ಒಂದೇ ಕಾನೂನು ಮತ್ತು ಒಂದೇ ಬಾವುಟ ಇರಬೇಕು, ಜಮ್ಮು-ಕಾಶ್ಮೀರ ಪೂರ್ತಿಯಾಗಿ ಭಾರತದಲ್ಲಿ ವಿಲೀನಗೊಳಿಸಬೇಕು ಎಂದು ಪ್ರತಿಪಾದಿಸಲಾರಂಭಿಸಿದರು. ಅದರ ಭಾಗವಾಗಿಯೇ ಜಮ್ಮುವಿನಲ್ಲಿ ಪ್ರತಿಭಟಿಸಲು ಹೋದಾಗ ನಿಧನರಾದರು,
(The Kashmir Dispute- 1947-2012, AG Noorani)
ಆದರೆ ಕಾಶ್ಮೀರ ಭಾರತದೊಡನೆ ವಿಲೀನವಾಗುವ ವಿಚಾರವನ್ನು ಕಾಶ್ಮೀರದ ಸಂವಿಧಾನ ಸಭೆ ಕೈಗೊಳ್ಳಬೇಕು ಎಂಬುದು ಕಾಂಗ್ರೆಸ್‌ನ ನಿಲುವಾಗಿತ್ತು. ಆದರೆ ಆ ನಿಲುವನ್ನು ಬಹಿರಂಗವಾಗಿ ಹೇಳುತ್ತಿದ್ದರೂ ಸ್ವಾಯತ್ತ ಕಾಶ್ಮೀರದ ಪ್ರತಿಪಾದನೆ ಮಾಡುತ್ತಿದ್ದ ಶೇಕ್ ಅಬ್ದುಲಾರಂತಹ ನಾಯಕರನ್ನು ಬಂಧಿಸಿತು ಮತ್ತು ದಿಲ್ಲಿಯ ಮಾತು ಕೇಳುವ ಕೈಗೊಂಬೆ ಸರಕಾರವನ್ನು ಸ್ಥಾಪಿಸುತ್ತಾ ಬೆಂಕಿಯ ಜೊತೆ ಆಟ ಆಡುತ್ತಿತ್ತು.
ಕಾಶ್ಮೀರದ ವಿಷಯದಲ್ಲಿ ಅಂಬೇಡ್ಕರ್ ಅವರ ನಿಲುವು ಆರೆಸ್ಸೆಸ್ ನಿಲುವಿಗೆ ವಿರುದ್ಧವಿತ್ತು ಮತ್ತು ಕಾಂಗ್ರೆಸ್‌ನ ನಿಲುವಿನ ಬಗ್ಗೆ ವಿಮರ್ಶಾತ್ಮಕವಾಗಿತ್ತು. ಈ ಬಗ್ಗೆ ಅಂಬೇಡ್ಕರ್ ಅವರ ಕೆಳಗಿನ ಹೇಳಿಕೆಯನ್ನು ಗಮನಿಸಿದರೆ ಅದು ಸ್ಪಷ್ಟವಾಗುತ್ತದೆ:
ಕಾಶ್ಮೀರ ಸಮಸ್ಯೆಗೆ ಅಂಬೇಡ್ಕರ್ ಸೂಚಿಸುವ ಪರಿಹಾರ:
ಅಂಬೇಡ್ಕರ್ ಅವರ ಪ್ರಕಾರ ಕಾಶ್ಮೀರ ಪ್ರಶ್ನೆಯನ್ನು ಕಾಶ್ಮೀರಿ ಜನರ ಸ್ವನಿರ್ಣಯಾಧಿಕಾರ ನೆಲೆಯ ಆಧಾರದಲ್ಲಿ ಪರಿಗಣಿಸುತ್ತಾರೆ. ಅದರ ಜೊತೆಜೊತೆಗೆ ಭಾರತ ಮತ್ತು ಪಾಕಿಸ್ತಾನಗಳೆಂಬ ಈ ಎರಡು ಯುವ ದೇಶಗಳ ನಡುವೆ ಇರಬೇಕಾದ ಶಾಂತಿಯುತ ಸಂಬಂಧ, ಅನಗತ್ಯವಾಗಿ ಹೆಚ್ಚುತ್ತಿರುವ ರಕ್ಷಣಾ ವೆಚ್ಚದ ಕಡಿತ ಮಾಡಬೇಕೆಂಬ ದೃಷ್ಟಿಕೋನಗಳೂ ಸಹ ಕಾಶ್ಮೀರ ಸಮಸ್ಯೆಗೆ ಅವರು ಸೂಚಿಸುವ ಪರಿಹಾರಗಳ ರಾಜತಾಂತ್ರಿಕ ನೆಲೆಗಳಾಗಿವೆ.
ಇದರ ಬಗ್ಗೆ ಅವರು ಸಂಸತ್ತಿನಲ್ಲಿ ರಕ್ಷಣೆ ಮತ್ತು ವಿದೇಶಾಂಗ ನೀತಿಗಳ ಬಗ್ಗೆ ನಡೆದ ಚರ್ಚೆಯ ಸಂದರ್ಭದಲ್ಲಿ, ತಾವು ಸಂಪುಟಕ್ಕೆ ಕೊಟ್ಟ ರಾಜೀನಾಮೆ ಪತ್ರದಲ್ಲಿ, 1952ರ ಎಸ್.ಸಿ.ಎಫ್.ನ ಚುನಾವಣಾ ಪ್ರಣಾಳಿಕೆಯಲ್ಲಿ ಮತ್ತು ಜಲಂಧರ್‌ನಲ್ಲಿ ಪತ್ರಿಕಾ ಸಂಪಾದಕರಿಗೆ ಕೊಟ್ಟ ಸಂದರ್ಶನದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸುತ್ತಾರೆ.
- 1951ರಲ್ಲಿ ತಮ್ಮ ಸಂಪುಟ ಸಚಿವರ ಸ್ಥಾನಕ್ಕೆ ಅಂಬೇಡ್ಕರ್ ರಾಜೀನಾಮೆ ನೀಡುತ್ತಾರೆ. ತಾವು ರಾಜೀನಾಮೆ ನೀಡಲು ಸರಕಾರವು ಹಿಂದೂ ಕೋಡ್ ಬಿಲ್, ಒಬಿಸಿ ಮತ್ತು ದಲಿತರ ಹಕ್ಕುಗಳ ರಕ್ಷಣೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯಗಳ ಜೊತೆಗೆ ಭಾರತದ ತಪ್ಪು ವಿದೇಶಾಂಗ ನೀತಿಯಿಂದ ಭಾರತದ ರಕ್ಷಣಾ ವೆಚ್ಚ ಹೆಚ್ಚುತ್ತಿರುವುದನ್ನು ಪ್ರಸ್ತಾಪಿಸುತ್ತಾ ಹೇಗೆ ಭಾರತ ಸರಕಾರದ ತಪ್ಪು ಕಾಶ್ಮೀರ ನೀತಿಯೂ ಕಳವಳಕಾರಿಯಾಗಿದೆ ಎಂದು ವಿವರಿಸುತ್ತಾರೆ. ಅದರ ಭಾಗವಾಗಿಯೇ ಕಾಶ್ಮೀರ ವಿವಾದವನ್ನು ಹೇಗೆ ಪರಿಹರಿಸಬೇಕು ಎಂಬ ಬಗ್ಗೆ ತಮ್ಮ ನಿಲುವನ್ನೂ ಪ್ರತಿಪಾದಿಸುತ್ತಾರೆ:
‘‘ಪಾಕಿಸ್ತಾನದ ಜೊತೆಗೆ ನಮ್ಮ ಜಗಳವು ನಮ್ಮ ತಪ್ಪು ವಿದೇಶಾಂಗ ನೀತಿಯ ಭಾಗವಾಗಿದ್ದು ನನಗೆ ಅದರ ಬಗ್ಗೆ ತೀವ್ರ ಅಸಮಾಧಾನವಿದೆ. ಎರಡು ಕಾರಣಗಳಿಂದ ಪಾಕಿಸ್ತಾನದ ಜೊತೆ ನಮ್ಮ ಸಂಬಂಧ ಹದಗೆಟ್ಟಿದೆ-ಒಂದು ಕಾಶ್ಮೀರ ಮತ್ತೊಂದು ಪೂರ್ವ ಬಂಗಾಳದಲ್ಲಿ ನಮ್ಮ ಜನರ ಪರಿಸ್ಥಿತಿ. ಪತ್ರಿಕಾ ವರದಿಗಳನ್ನು ಗಮನಿಸಿದಾಗ ಕಾಶ್ಮೀರಕ್ಕಿಂತ ಪೂರ್ವ ಬಂಗಾಳದಲ್ಲಿ ನಮ್ಮ ಜನರ ಪರಿಸ್ಥಿತಿ ಅಸಹನೀಯವಾಗಿದೆ ಎಂದು ತಿಳಿಯುತ್ತದೆ. ಆದ್ದರಿಂದ ನಾವು ಪೂರ್ವ ಬಂಗಾಳದ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು. ಆದರೂ ನಾವು ನಮ್ಮೆಲ್ಲಾ ಗಮನವನ್ನು ಕಾಶ್ಮೀರದ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ಹಾಗಿದ್ದರೂ ನಾವು ಒಂದು ವಿಷಯವಲ್ಲದ ವಿಷಯದ ಮೇಲೆ ಹೊಡೆದಾಡುತ್ತಿದ್ದೇವೆ ಎಂದು ನನಗೆ ಭಾಸವಾಗುತ್ತದೆ. ಬಹಳಷ್ಟು ಸಮಯ ನಾವು ಯಾರು ಸರಿ ಮತ್ತು ಯಾರು ತಪ್ಪು ಎಂದು ಕಾದಾಡುತ್ತಿದ್ದೇವೆ. ಆದರೆ ನಿಜವಾದ ವಿಷಯ ಯಾರು ಸರಿ ಅಥವಾ ತಪ್ಪು ಎಂಬುದಲ್ಲ. ಬದಲಿಗೆ ಯಾವುದು ಸರಿ ಎಂಬುದೇ ಆಗಿದೆ. ನಮ್ಮ ಮುಂದಿರುವ ಪ್ರಧಾನ ಪ್ರಶ್ನೆ ಅದಾಗಿದ್ದಲ್ಲಿ ಕಾಶ್ಮೀರವನ್ನು ವಿಭಜಿಸುವುದೇ ಅದಕ್ಕೆ ಸರಿಯಾದ ಪರಿಹಾರ ಎಂದು ನಾನು ಪ್ರತಿಪಾದಿಸಿಕೊಂಡು ಬಂದಿದ್ದೇನೆ. ನಾವು ಭಾರತ ವಿಭಜನೆಯ ಸಂದರ್ಭದಲ್ಲಿ ಮಾಡಿದಂತೆ ಕಾಶ್ಮೀರದ ಮುಸ್ಲಿಮ್ ಭಾಗಗಳನ್ನು ಪಾಕಿಸ್ತಾನಕ್ಕೆ ಕೊಟ್ಟು ಹಿಂದೂ ಮತ್ತು ಬೌದ್ಧ ಭಾಗಗಳನ್ನು ಭಾರತಕ್ಕೆ ಪಡೆದುಕೊಳ್ಳಬೇಕು. ಕಾಶ್ಮೀರದ ಮುಸ್ಲಿಮ್ ಪ್ರಾಂತದ ಬಗ್ಗೆ ನಮಗೆ ನಿಜಕ್ಕೂ ಕಾಳಜಿಯಿಲ್ಲ. ಅದು ಕಾಶ್ಮೀರದ ಮುಸ್ಲಿಮರು ಮತ್ತು ಪಾಕಿಸ್ತಾನದ ನಡುವಿನ ವಿಷಯ. ಅವರಿಗೆ ತೋರಿದಂತೆ ಅವರು ಅದನ್ನು ಬಗೆಹರಿಸಿಕೊಳ್ಳಬಹುದು ಅಥವಾ ನೀವು ಬಯಸುವುದಾದಲ್ಲಿ, ಕಾಶ್ಮೀರವನ್ನು ಯುದ್ಧ ವಿರಾಮ ವಲಯ, ಕಾಶ್ಮೀರ ಕಣಿವೆ ಹಾಗೂ ಜಮ್ಮು ಮತ್ತು ಲಡಾಖ್ ಪ್ರಾಂತಗಳಾಗಿ ತ್ರಿಭಜೀಕರಿಸಿ ಕಾಶ್ಮೀರ ಕಣಿವೆಯಲ್ಲಿ ಮಾತ್ರ ಜನಮತಗಣನೆ ನಡೆಸಿ. ಅದರ ಬದಲಿಗೆ ಇಡೀ ಪ್ರಾಂತದಲ್ಲಿ ಜನಮತಗಣನೆಯನ್ನು ನಡೆಸಿದರೆ ಕಾಶ್ಮೀರದ ಹಿಂದೂ ಮತ್ತು ಬೌದ್ಧರನ್ನೂ ಸಹ ಅವರ ಬಯಕೆಗೆ ವಿರುದ್ಧವಾಗಿ ಪಾಕಿಸ್ತಾನದೆಡೆಗೆ ದೂಡಿದಂತಾಗುತ್ತದೆ ಮತ್ತು ಆಗ ಪೂರ್ವ ಬಂಗಾಳದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಯನ್ನೇ ಇಲ್ಲಿಯೂ ಎದುರಿಸಬೇಕಾಗಿ ಬರಬಹುದು.
(DR. BABASAHEB AMBEDKAR: WRITINGS AND SPEECHES VOL. 14-2, p. 1322)
-1951ರ ಅಕ್ಟೋಬರ್‌ನಲ್ಲಿ ಜಲಂಧರ್‌ನಲ್ಲಿ ಪತ್ರಿಕಾ ಸಂಪಾದಕರು ಈ ವಿಷಯದ ಬಗ್ಗೆ ಕೇಳಿದ ಪ್ರಶ್ನೆಗೂ ಅಂಬೇಡ್ಕರ್ ಅವರು ನೇರವಾದ ಉತ್ತರವನ್ನೇ ಕೊಡುತ್ತಾರೆ:
ಸಂಪಾದಕರು: ಕಾಶ್ಮೀರ ಸಮಸ್ಯೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅಂಬೇಡ್ಕರ್: ಪ್ರಾಯಶಃ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಬಹುದಾದ ಜನಮತಗಣನೆ ಭಾರತಕ್ಕೆ ವ್ಯತಿರಿಕ್ತವಾಗಿ ಬರಬಹುದು ಎನಿಸುತ್ತದೆ. ಜಮ್ಮು ಮತ್ತು ಲಡಾಖ್ ಪ್ರಾಂತದ ಹಿಂದೂ ಮತ್ತು ಬೌದ್ಧರು ಪಾಕಿಸ್ತಾನಕ್ಕೆ ಹೋಗದಂತಾಗಬೇಕೆಂದರೆ ಜಮ್ಮು, ಲಡಾಖ್ ಮತ್ತು ಕಾಶ್ಮೀರಗಳಲ್ಲಿ ವಲಯವಾರು ಜನಮತಗಣನೆಯಾಗಬೇಕು
(DR. BABASAHEB AMBEDKAR : WRITINGS AND SPEECHES VOL. 17-2, p.381)