ಅಂಬೇಡ್ಕರ್ ದ್ವೇಷಿ, ಸಂವಿಧಾನ ದ್ರೋಹಿಗಳ ‘ಸಂವಿಧಾನ ಸನ್ಮಾನ ಅಭಿಯಾನ’
ಸರಣಿ- 9
ಸಂವಿಧಾನದದ ಮೊದಲ ತಿದ್ದುಪಡಿ-ಸಂಘಿಗಳ ವಿಕೃತ ವಿರೋಧಾಭಾಸದ ವಾದ
ತಾವು ಮಾತ್ರ ಸಂವಿಧಾನ ಸಮ್ಮಾನಿಗಳು ಕಾಂಗ್ರೆಸಿಗರು ಸಂವಿಧಾನ ದುಮ್ಮಾನಿಗಳು ಎನ್ನುವುದಕ್ಕೆ ಅವರು ಕೊಡುವ ಮತ್ತೊಂದು ಉದಾಹರಣೆ ನೆಹರೂ ಸರಕಾರ ಸಂವಿಧಾನಕ್ಕೆ ಮಾಡಿದ ಮೊದಲ ತಿದ್ದುಪಡಿಯ ಬಗ್ಗೆ. ನೆಹರೂ ಅವರು ತಮ್ಮ ಸರಕಾರದ ಬಗ್ಗೆ ಬರುತ್ತಿದ್ದ ಟೀಕಾ ಪ್ರಹಾರಗಳನ್ನು ಹತ್ತಿಕ್ಕುವುದಕ್ಕಾಗಿ ಈ ಮೊದಲ ತಿದ್ದುಪಡಿಯನ್ನು ತಂದದ್ದು ಎಂಬುದು ಸಂಘಿ ವಾದ.
ಮೊದಲಿಗೆ ಸಂವಿಧಾನಕ್ಕೆ ಈ ಮೊದಲ ತಿದ್ದುಪಡಿ ತಂದದ್ದು ಯಾರು ಮತ್ತು ಯಾವ ಸಂದರ್ಭದಲ್ಲಿ ಎಂದು ಗಮನಿಸೋಣ
ಸಂವಿಧಾನಕ್ಕೆ ಮೊದಲ ತಿದ್ದುಪಡಿಯಾದದ್ದು 1951ರ ಮೇ ತಿಂಗಳಲ್ಲಿ. ಅಂದರೆ ಆಗಿನ್ನು ಮೊದಲ ಚುನಾವಣೆಯೂ ನಡೆದಿರಲಿಲ್ಲ. ಈ ಮಧ್ಯಂತರ ಅವಧಿಯಲ್ಲಿ ಮಧ್ಯಂತರ ಸಂಸತ್ತಾಗಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಪಕ್ಷಗಳ ಪ್ರತಿನಿಧಿಗಳಿದ್ದ ಸಂವಿಧಾನ ಸಭೆಯೇ ಈ ತಿದ್ದುಪಡಿಯನ್ನು 228-20 ಅಂತರದಲ್ಲಿ ಅಂಗೀಕರಿಸಿತು. ಹೀಗಾಗಿ ಮೊದಲ ತಿದ್ದುಪಡಿ ಜಾರಿ ಮಾಡಿದ್ದು ಕಾಂಗ್ರೆಸ್ ಸರಕಾರವಲ್ಲ. ಆದರೆ ಮಧ್ಯಂತರ ಸಂಸತ್ತಿನಲ್ಲೂ ಕಾಂಗ್ರೆಸ್‌ನ ಆಧಿಪತ್ಯವಿದ್ದದ್ದು ನಿಜ.
ಎರಡನೆಯದಾಗಿ ತಿದ್ದುಪಡಿಯಾದದ್ದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿ ಪಡಿಸುವ ಆರ್ಟಿಕಲ್ 19ಕ್ಕೆ ಮಾತ್ರವಲ್ಲ.
ಈ ತಿದ್ದುಪಡಿಗೆ ಕಾರಣವಾದ ಹಿನ್ನೆಲೆಯಿಷ್ಟು:
ಸ್ವಾತಂತ್ರ್ಯಾನಂತರದಲ್ಲಿ ತೆಲಂಗಾಣ ಇತ್ಯಾದಿ ಕಡೆಗಳಲ್ಲಿ ರೈತಾಪಿಯು ಭೂ ಮಾಲಕರ ವಿರುದ್ಧ ದಂಗೆಯೆದ್ದಿತ್ತು. ಅಧಿಕಾರ ಹಸ್ತಾಂತರವಾಗಿರುವುದು ಕಾಂಗ್ರೆಸ್ ಮೂಲಕ ಅಧಿಕಾರ ಹಿಡಿದಿರುವ ಭೂ ಮಾಲಕರಿಗೆ ಮತ್ತು ಬಂಡಾವಾಳಶಾಹಿಗಳಿಗೆ ಹೊರತು ಜನರಿಗಲ್ಲ ಎಂಬ ತಿಳುವಳಿಕೆ ಆ ಕಮ್ಯುನಿಸ್ಟ್ ನೇತೃತ್ವದ ಜನಬಂಡಾಯಗಳಿಗಿತ್ತು. ಮತ್ತೊಂದು ಕಡೆ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾಗಳು ಸಮಾಜದ ಭಾವೈಕ್ಯತಾ ಬುನಾದಿಯನ್ನೇ ಅಲುಗಾಡಿಸುತ್ತಾ ಮುಸ್ಲಿಮರ ವಿರುದ್ಧ ಉಗ್ರ ಹಿಂದುತ್ವ ಹಿಂಸಾಚಾರವನ್ನು ಮುಂದುವರಿಸಿದ್ದರು.
ಈ ಸಂದರ್ಭದ ಒತ್ತಾಯವನ್ನು ಬಳಸಿಕೊಂಡು ಪ್ರಧಾನವಾಗಿ ಭೂಮಾಲಕ ಬಂಡವಾಳಶಾಹಿ ಹಿತಾಸಕ್ತಿ ಪ್ರತಿನಿಧಿಸುವ ವರ್ಗವೇ ಹೆಚ್ಚಿದ್ದ ನೆಹರೂ ನೇತೃತ್ವದ ಮಧ್ಯಂತರ ಸರಕಾರ ರೈತ ಬಂಡಾಯದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದ ‘ಕ್ರಾಸ್ ರೋಡ್’ ಎಂಬ ಪತ್ರಿಕೆಯನ್ನು ಮತ್ತು ಸಂಘಿಗಳ ‘ಆರ್ಗನೈಜರ್’ ಪತ್ರಿಕೆಗಳನ್ನು ನಿಷೇಧಿಸಿತು. ಅದರ ವಿರುದ್ಧ ಈ ಪತ್ರಿಕೆಗಳು ಸುಪ್ರೀಂ ಕೋರ್ಟಿಗೆ ಮನವಿ ಹೋದಾಗ ಸುಪ್ರೀಂ ಕೋರ್ಟ್ ಸರಕಾರದ ಈ ಕ್ರಮವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ಒದಗಿಸುವ ಆರ್ಟಿಕಲ್ 19ರ ಉಲ್ಲಂಘನೆಯೆಂದೂ ನಿಷೇಧವನ್ನು ರದ್ದು ಮಾಡಿತು.
ಅದೇ ಅವಧಿಯಲ್ಲಿ ಮದ್ರಾಸ್ ಹಾಗೂ ಇತರ ಪ್ರಾಂತಗಳು ಸ್ವಾತಂತ್ರ್ಯ ಪೂರ್ವದಿಂದಲೂ ಬ್ರಾಹ್ಮಣೇತರ ಹಿಂದುಳಿದ ಸಮುದಾಯಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಒದಗಿಸುತ್ತಿದ್ದ ಮೀಸಲಾತಿಯನ್ನು ಮುಂದುವರಿಸಿದ್ದವು. ಅದು ಹೊಸ ಸಂವಿಧಾನವು 1950ರ ಜನವರಿ 26ರಿಂದ ಖಾತರಿ ಮಾಡಿರುವ ಸಮಾನ ಕಾನೂನು ಹಕ್ಕಿನ ಉಲ್ಲಂಘನೆ ಎಂಬ ಅಹವಾಲು ಸುಪ್ರೀಂ ಕೋರ್ಟ್ ಮುಟ್ಟಿತ್ತು. ಚಂಪಕಂ ದೊರೈರಾಜನ್ ಮತ್ತು ಮದ್ರಾಸ್ ಸರಕಾರದ ನಡುವಿನ ಈ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟ್ ಹಿಂದುಳಿದ ವರ್ಗಗಳಿಗೆ ಕೊಡುವ ಮೀಸಲಾತಿಯು ಆರ್ಟಿಕಲ್ 15ರ ಉಲ್ಲಂಘನೆಯೆಂದು ರದ್ದು ಮಾಡಿತು.
ಅದೇ ರೀತಿ ಬಡ ಹಾಗೂ ಭೂ ಹೀನ ರೈತರಿಗೆ ಹಂಚುವ ಉದ್ದೇಶದಿಂದ ದೊಡ್ಡ ದೊಡ್ಡ ಜಮೀನ್ದಾರರುಗಳ ಜಮೀನನ್ನು ವಶಪಡಿಸಿಕೊಳ್ಳುವುದು ಕೂಡ ಸಂವಿಧಾನದ ಆರ್ಟಿಕಲ್ 31 ನೀಡಿರುವ ಆಸ್ತಿ ಹಕ್ಕಿನ ಉಲ್ಲಂಘನೆ ಎಂದು ಸುಪ್ರೀಂ ಕೋರ್ಟ್ ಸರಕಾರದ ಅರೆಮನಸ್ಸಿನ ಕ್ರಮಗಳನ್ನು ಕೂಡಾ ರದ್ದು ಮಾಡಿತು.
ಈ ಎಲ್ಲಾ ಹಿನ್ನೆಲೆಯಲ್ಲಿ ನೆಹರೂ ನೇತೃತ್ವದ ಮಧ್ಯಂತರ ಸಂಸತ್ತು ಸಂವಿಧಾನಕ್ಕೆ ಮೊದಲ ತಿದ್ದುಪಡಿಯನ್ನು ತಂದಿತು. ಅದರಲ್ಲಿ ಮೂರು ಭಾಗಗಳಿತ್ತು.
ಮೊದಲನೆಯದು ನಾಗರಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುವ ಸಂವಿಧಾನದ ಆರ್ಟಿಕಲ್ 19ಕ್ಕೆ ತಿದ್ದುಪಡಿ ತಂದು ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸರಕಾರವು ಸೂಕ್ತ ನಿರ್ಬಂಧಗಳನ್ನು ಹೇರಲು ಅವಕಾಶ ಕಲ್ಪಿಸುವ ಆರ್ಟಿಕಲ್ 19 (2)ನ್ನು ಸೇರಿಸಿತು. ಇದು ವಾಸ್ತವದಲ್ಲಿ ನೆಹರೂ ಸರಕಾರ ಮತ್ತು ಆನಂತರದ ಸರಕಾರಗಳು ಜನಬಂಡಾಯಗಳ ಮೇಲೆ ನಡೆಸಿದ ಮತ್ತು ನಡೆಸುತ್ತಿರುವ ದಮನಗಳ ಪೂರ್ವ ಪೀಠಿಕೆಯಾಗಿತ್ತು. ಇದು 1947ರ ಸ್ವಾತಂತ್ರ್ಯದ ವರ್ಗ ಸ್ವಭಾವಕ್ಕೂ ಉದಾಹರಣೆಯಾಗಿತ್ತು. ಏಕೆಂದರೆ ಈ ನಿರ್ಬಂಧ ಯಶಸ್ವಿಯಾಗಿ ಜಾರಿಯಾದದ್ದು ಕಮ್ಯುನಿಸ್ಟ್-ಸಮಾಜವಾದಿ ಹಾಗೂ ಇನ್ನಿತರ ಪ್ರಜಾತಾಂತ್ರಿಕ ಚಿಂತನೆಗಳ ಮೇಲೆಯೇ ವಿನಾ ಜಾತಿವಾದಿ, ಕೋಮುವಾದಿ ಶಕ್ತಿಗಳ ಮೇಲಲ್ಲ.
ವಾಸ್ತವವಾಗಿ ಮಧ್ಯಂತರ ಸಂಸತ್ತಿನಲ್ಲಿದ್ದ ಅಂಬೇಡ್ಕರ್ ಅವರ ಅಭಿಪ್ರಾಯ ಈ ನಿರ್ಬಂಧದ ಬಗ್ಗೆ ಏನಾಗಿತ್ತು?
ಸಂವಿಧಾನದ ಮೊದಲ ತಿದ್ದುಪಡಿಯನ್ನು ಬೆಂಬಲಿಸಿದ್ದ ಅಂಬೇಡ್ಕರ್
ಅಂಬೇಡ್ಕರ್ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯವನ್ನು ದಲಿತ ದಮನಿತರ ದೃಷ್ಟಿಕೋನದಿಂದ ನೋಡಿದರು. ಪ್ರಬಲ ಜಾತಿಗಳು ಮತ್ತು ಪ್ರಬಲ ವರ್ಗಗಳು ತಮ್ಮ ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರ್ಬಲ ಜಾತಿ ಮತ್ತು ವರ್ಗಗಳ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಗಳನ್ನು ಹತ್ತಿಕ್ಕಲು ಬಳಸಿಕೊಳ್ಳುವ ಸಾಧ್ಯತೆಯೇ ಹೆಚ್ಚಿರುವುದರಿಂದ ಪ್ರಬಲರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸರಕಾರವು ನಿರ್ಬಂಧ ಹೇರಬೇಕೆಂಬುದೇ ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು ಮತ್ತು ಈ ದೃಷ್ಟಿಯಿಂದ ಅವರು ನೆಹರೂ ಅವರ ತಿದ್ದುಪಡಿಗಳನ್ನು ಬೆಂಬಲಿಸಿದರು.
ಇದಕ್ಕೆ ತದ್ವಿರುದ್ಧವಾಗಿ ಆಗ ಹಿಂದೂ ಮಹಾಸಭಾದ ಮುಖಸ್ಥರಾಗಿದ್ದು ಆ ನಂತರ ಭಾರತೀಯ ಜನಸಂಘದ (ಇಂದಿನ ಬಿಜೆಪಿಯ ಮೂಲ ಸಂಘಟನೆ )ಮೊದಲ ಅಧ್ಯಕ್ಷರೂ ಆದ ಶ್ಯಾಮ ಪ್ರಸಾದ್ ಮುಖರ್ಜಿಯವರು ಪ್ರಬಲ-ದುರ್ಬಲ ಎಲ್ಲರಿಗೂ ಸಮಾನ ಅಭಿವ್ಯಕ್ತಿ ಸ್ವಾತಂತ್ರ್ಯವಿರಬೇಕೆಂದು ವಾದಿಸಿದರು.
ವಾಸ್ತವದಲ್ಲಿ ಈ ತಿದ್ದುಪಡಿಯು ಇಂದಿರಾ ಗಾಂಧಿ ಜಾರಿಗೆ ತಂದ ತುರ್ತು ಪರಿಸ್ಥಿತಿಯಲ್ಲಿ ಅತಿ ಹೆಚ್ಚು ದುರ್ಬಳಕೆಯಾಗಿದ್ದು ನಿಜ.
ಆದರೆ ಸಂಘಿಗಳು ಮರೆಮಾಚುತ್ತಿರುವ ಅತಿ ದೊಡ್ಡ ಸತ್ಯವೇನೆಂದರೆ ಈ ದೇಶದ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯಂತ ಹೆಚ್ಚು ದುರುಪಯೋಗವಾಗುತ್ತಿರುವುದು ಕಳೆದ ಹತ್ತುವರ್ಷಗಳ ಮೋದಿ ಅವಧಿಯಲ್ಲಿ. ಸರಕಾರವನ್ನು ಟೀಕಿಸುವುದೆಂದರೆ ದೇಶವನ್ನೇ ಟೀಕಿಸಿದಂತೆ ಎಂದು ಭಿನ್ನಾಭಿಪ್ರಾಯ, ಭಿನ್ನ ಅಭಿವ್ಯಕ್ತಿ ಉಳ್ಳ ಅತಿ ಹೆಚ್ಚು ಜನರು ಬಂಧನಕ್ಕೊಳಗಾಗಿ ರುವುದು ಮೋದಿ ಸರಕಾರದಡಿಯಲ್ಲಿ. ಅತಿ ಹೆಚ್ಚು ಪತ್ರಕರ್ತರು ಕೊಲೆಯಾಗಿರುವುದು, ಭಯೋತ್ಪಾದಕರೆಂದು ಜೈಲುಪಾಲಾಗಿರು ವುದು ಮೋದಿ ಅವಧಿಯಲ್ಲಿ. ಸರಕಾರವನ್ನು ಟೀಕಿಸುವ ಅತಿ ಹೆಚ್ಚು ಸಾಮಾಜಿಕ ಜಾಲತಾಣ ಸಂಸ್ಥೆಗಳು ನಿಷೇಧಗೊಂಡಿರುವುದು ಮೋದಿ ಕಾಲದಲ್ಲಿ.
ಹೀಗಿರುವಾಗ ಸಂಘಪರಿವಾರದವರು ನೆಹರೂ-ಇಂದಿರಾ ಗಾಂಧಿಗಳ ಕಾಂಗ್ರೆಸನ್ನು ಟೀಕಿಸುತ್ತಾ ತಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಚಾಂಪಿಯನ್ನರೆಂದು ಪೋಸು ಕೊಡುವುದು ಹಾಸ್ಯಾಸ್ಪದವಾಗಿದೆ.
(ಪುಟ 203, Politics and Ethics Of Indian Constitution ಸಂಪಾದಿತ ಬರಹಗಳ ಪುಸ್ತಕದಲ್ಲಿ ನಿವೇದಿತಾ ಮೆನನ್ ಅವರ Citizenship and Passive Revolution ಲೇಖನದಿಂದ)
ಮೀಸಲಾತಿಗೂ ಅವಕಾಶ ಕಲ್ಪಿಸಿದ್ದು ಮೊದಲ ತಿದ್ದುಪಡಿಯೇ!
ಸಂವಿಧಾನದ ಮೊದಲ ತಿದ್ದುಪಡಿ ಬದಲಿಸಿದ್ದು ಕೇವಲ ಆರ್ಟಿಕಲ್ 19ನ್ನು ಮಾತ್ರವಲ್ಲ. ಸಂವಿಧಾನಕ್ಕೆ ಮಾಡಿದ ಇದೇ ಮೊದಲ ತಿದ್ದುಪಡಿಯು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಆರ್ಟಿಕಲ್ 15ಕ್ಕೆ ತಿದ್ದುಪಡಿ ತಂದು ಹಿಂದುಳಿದ ವರ್ಗಗಳಿಗೆ ಆದ್ಯತೆಯ ಮೇಲೆ ವಿಶೇಷ ಅವಕಾಶ ಕಲ್ಪಿಸುವ 15(4)ನ್ನು ಸೇರಿಸಿತು.
ಆದರೆ ಇದರ ಬಗ್ಗೆ ಸಂಘಪರಿವಾರದ ನಿಲುವೇನಿತ್ತು? ಆಂದಿನಿಂದ ಇಂದಿನವರೆಗೂ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯವನ್ನು ಆಮೂಲಾಗ್ರವಾಗಿ ವಿರೋಧಿಸಿಕೊಂಡು ಬಂದವರು ಸಂಘ ಪರಿವಾರ ಮತ್ತು ಬಿಜೆಪಿಗಳು. ಇಡಬ್ಲ್ಯುಎಸ್ ಮೀಸಲಾತಿಯ ಮೂಲಕ ಮೇಲ್ಜಾತಿ ಮಧ್ಯಮವರ್ಗಕ್ಕೆ ಮೀಸಲಾತಿ ಕೊಡಲು ಒಂದೇ ತಿಂಗಳಲ್ಲಿ ಸಂವಿಧಾನ ತಿದ್ದುಪಡಿ ಮಾಡಿದ ಮೋದಿ ಸರಕಾರ ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಅದೇ ಆಸಕ್ತಿಯನ್ನು ಪರಿಶಿಷ್ಟರ ಒಳಮೀಸಲಾತಿಗಾಗಿ ಸಂವಿಧಾನ ತಿದ್ದುಪಡಿಯನ್ನು ಮಾಡಲು ತೋರಲಿಲ್ಲ. ಹಿಂದುಳಿದ ಒಳಮೀಸಲಿನ ವರದಿಯನ್ನು ಈವರೆಗೆ ಜಾರಿ ಮಾಡಿಲ್ಲ.
ಈ ಸಂವಿಧಾನ ಸಮ್ಮಾನ ಅಭಿಯಾನದಲ್ಲಿ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದಿದ್ದರಿಂದಾಗಿಯೇ ದಲಿತರಿಗೆ ಮತ್ತು ಒಬಿಸಿಗಳಿಗೆ ಮೀಸಲಾತಿಯ ಸಂವಿಧಾನ ಹಕ್ಕು ಕಾಗದದ ಮೇಲಾದರೂ ದಕ್ಕಿತು ಎಂಬ ಸತ್ಯವನ್ನು ದುರುದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದ್ದಾರೆ.
ಅಷ್ಟು ಮಾತ್ರವಲ್ಲ. ಸಂವಿಧಾನಕ್ಕೆ ಮಾಡಿದ ಇದೇ ತಿದ್ದುಪಡಿಯೇ ನಾಗರಿಕರಿಗೆ ಆಸ್ತಿ ಹೊಂದುವ ಹಕ್ಕನ್ನು ನೀಡುದ ಆರ್ಟಿಕಲ್ 31ಕ್ಕೆ ತಿದ್ದುಪಡಿ ತಂದು ಜಮೀನ್ದಾರಿ ಪದ್ಧತಿಯನ್ನು ರದ್ದು ಮಾಡಿ ಭೂ ಹೀನರಿಗೆ ಭೂಮಿಯನ್ನು ಹಂಚುವ ಅಧಿಕಾರವನ್ನು ಸರಕಾರಕ್ಕೆ ನೀಡುವ 31(2)ನ್ನು ಸೇರಿಸಿತು. ಇದರಿಂದ ಅಂದಿನ ನೆಹರೂ ಸರಕಾರ ಉಳುವವನಿಗೆ ಭೂಮಿ ಪಡೆಯುವ ಹಕ್ಕನ್ನು ಕಾಗದದ ಮೇಲೆ ನೀಡಿತು. ವಾಸ್ತವದಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಉಳುವವನಿಗೆ ಹಕ್ಕಿನ ಭೂಮಿ ಸಿಕ್ಕಿಲ್ಲ. ದೊಡ್ಡ ದೊಡ್ಡ ಜಮೀನ್ದಾರಿ ಆಳ್ವಿಕೆ ಇನ್ನೂ ಪೂರ್ಣವಾಗಿ ಹೋಗಿಲ್ಲ.
ಅದೇನೇ ಇದ್ದರೂ ಸಂವಿಧಾನದ ತಿದ್ದುಪಡಿಯ ಆಶಯವಂತೂ ಆ ನಿಟ್ಟಿನಲ್ಲಿ ಇತ್ತು. ಇದನ್ನು ಏಕೆ ಸಂಘಿಗಳು ತಮ್ಮ ಅಭಿಯಾನದಲ್ಲಿ ಮುಚ್ಚಿಡುತ್ತಿದ್ದಾರೆ? ಏಕೆಂದರೆ ಆಗಲೂ ಈಗಲೂ ಸಂಘಿಗಳು ಮತ್ತು ಅವರ ಅಂದಿನ ಭಾರತೀಯ ಜನಸಂಘ ಮತ್ತು ನಂತರದ ಭಾರತೀಯ ಜನತಾ ಪಕ್ಷಗಳು ದೊಡ್ಡ ದೊಡ್ಡ ಭೂಮಾಲಕರಾಗಿದ್ದ ರಾಜಮನೆತನಗಳ ಪರವಾಗಿ, ಜಮೀನ್ದಾರರ ಪರವಾಗಿ ನಿಂತರು. ಭೂಮಿ ಹಂಚಿಕೆ , ಜಾತಿ ನಿರ್ನಾಮ, ಸಮಾಜವಾದ ಇತ್ಯಾದಿಗಳೆಲ್ಲವೂ ಭಾರತೀಯ ಸಂಸ್ಕೃತಿಗೆ ವಿರುದ್ಧ ಎಂದು ದಲಿತರ ಮತ್ತು ರೈತಾಪಿಗಳ ಮತ್ತು ಕಾರ್ಮಿಕರ ವಿರುದ್ಧ ರಾಜಕಾರಣ ಮಾಡಿದ್ದರು. ಈಗ ಅವರೇ ಅವೆಲ್ಲವನ್ನು ಮುಚ್ಚಿಟ್ಟು ತಾವೇ ದಲಿತರ, ರೈತರ ಪರ ಎಂದು ಜನರ ಕಣ್ಣಿಗೆ ಮಣ್ಣೆರಚುವ ಅಭಿಯಾನಕ್ಕೆ ಮುಂದಾಗಿದ್ದಾರೆ.
ಇಂದಿರಾ ಕಾಲದ ತಿದ್ದುಪಡಿಗಳು ಮತ್ತು ಸಂಘಿಗಳ ವಾದದ ವಿಕೃತ ವೈರುಧ್ಯ
ಸಂಘಿಗಳು ಈ ಹುಸಿ ಸಂವಿಧಾನ ಸನ್ಮಾನ ಅಭಿಯಾನದಲ್ಲಿ ತಾವೇ ನಿಜವಾದ ಸಂವಿಧಾನ ರಕ್ಷಕರು ಎಂದು ಪ್ರತಿಪಾದಿಸಲು ಬಳಸುತ್ತಿರುವ ಉದಾಹರಣೆಗಳು ಅವರನ್ನು ಹಾಸ್ಯಾಸ್ಪದರಾಗಿಸುತ್ತಿದೆ. ಉದಾಹರಣೆಗೆ ಇಂದಿರಾಗಾಂಧಿ ಕಾಲದಲ್ಲಿ ಮತ್ತು ತುರ್ತುಸ್ಥಿತಿಯಲ್ಲಿ ತಂದ ತಿದ್ದುಪಡಿಗಳು ಹೇಗೆ ಮಾಧ್ಯಮ ಸ್ವಾತಂತ್ರ್ಯಕ್ಕೆ ಭಂಗ ತಂದವು ಮತ್ತು ಹೇಗೆ ನ್ಯಾಯಾಂಗದ ಮೇಲೆ ಶಾಸಕಾಂಗ ಹಿಡಿತ ಸಾಧಿಸಲು ಮಾಡಿದ ಪ್ರಯತ್ನಗಳಾಗಿದ್ದವು ಎಂದು ಈ ಅಭಿಯಾನಿಗಳು ಭಾಷಣ ಮಾಡುತ್ತಿದ್ದಾರೆ ಮತ್ತು ಈ ಕ್ರಮಗಳು ಹೇಗೆ ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿದ್ದವು ಎಂದು ಕೂಡ ಪ್ರತಿಪಾದಿಸುತ್ತಿದ್ದಾರೆ.
ಇಂದಿರಾಗಾಂಧಿಯವರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಇವೆಲ್ಲವನ್ನೂ ಮಾಡಿದ್ದು ನಿಜ. ಆದರೆ ಈಗ ಮೋದಿ ಸರಕಾರ ಮಾಡುತ್ತಿರುವುದೇನು? ಸಂವಿಧಾನಕ್ಕೆ ತಿದ್ದುಪಡಿಯನ್ನೇ ತರದೆ ಇಡೀ ಸ್ವತಂತ್ರ ಮಾಧ್ಯಮವನ್ನು ಮೋದಿ ಸರಕಾರ ಸಾಂಸ್ಥಿಕವಾಗಿ ನಾಶ ಮಾಡುತ್ತಿಲ್ಲವೇ? ಮೋದಿ ಅವಧಿಯಲ್ಲಿ ಕೊಲೆಯಾದಷ್ಟು ಮತ್ತು ಜೈಲುಪಾಲಾದಷ್ಟು ಸ್ವತಂತ್ರ ಪತ್ರಕರ್ತರು ಬೇರೆ ಯಾವ ಕಾಲದಲ್ಲೂ ಆಗಿಲ್ಲ. ಹೀಗಾಗಿ ಇಂದಿರಾ ಗಾಂಧಿಯವರನ್ನು ಮಾತ್ರ ಮಾಧ್ಯಮ ಸ್ವಾತಂತ್ರ್ಯಹರಣಕ್ಕೆ ದೂರುವ ನೈತಿಕತೆ ಸಂಘಿಗಳಿಗೆ ಇಲ್ಲವೇ ಇಲ್ಲ.
ಎರಡನೆಯದಾಗಿ ಇಂದಿರಾ ಕಾಲದಲ್ಲಿ ಹೇಗೆ ಶಾಸಕಾಂಗವೇ ನ್ಯಾಯಾಂಗದ ಮೇಲೆ ಆಧಿಪತ್ಯ ಸಾಧಿಸುವ ಸಂವಿಧಾನ ವಿರೋಧಿ ಹುನ್ನಾರ ನಡೆಸಲಾಗಿತ್ತು ಎಂದು ಸಂಘಿ ಅಭಿಯಾನಿಗಳು ದೂರುತ್ತಾರೆ. ಇದು ಸತ್ಯವೇ. ಇಂದಿರಾಗಾಂಧಿ ನ್ಯಾಯಾಂಗದ ಸ್ವಾತಂತ್ರ್ಯಹರಣ ಮಾಡುವ ಪ್ರಯತ್ನ ಮಾಡಿದ್ದರು.
ಆದರೆ ಈಗ ಮೋದಿ ಸರಕಾರ ಮಾಡುತ್ತಿರುವುದು ಅದೇ ಅಲ್ಲವೇ? 2015ರಲ್ಲಿ ನ್ಯಾಯಾಧೀಶರ ನೇಮಕಾತಿಯನ್ನೂ ಕೂಡ ತನ್ನ ಸರಕಾರದ ಇಚ್ಛೆಯಂತೆ ನಡೆಸಲು ಸಂವಿಧಾನಕ್ಕೆ ತಿದ್ದುಪಡಿಯನ್ನೇ ತಂದಿದ್ದು ಮೋದಿ ಸರಕಾರವಲ್ಲವೇ? ಆದರೆ ಆ ತಿದ್ದುಪಡಿಯನ್ನು ಸಂವಿಧಾನದ ಮೂಲ ರಚನೆಗೆ ವಿರುದ್ಧ ಎಂದು ಸುಪ್ರೀಂ ಕೋರ್ಟ್ ರದ್ದು ಮಾಡಿರಲಿಲ್ಲವೇ?
ಆಗಿನಿಂದ ಸುಪ್ರೀಂ ಕೋರ್ಟಿನ ಕೊಲಿಜಿಯಂ ಎಷ್ಟೇ ಸಾರಿ ಶಿಫಾರಸು ಮಾಡಿದರೂ ತನಗೆ ಒಪ್ಪಿಗೆ ಇಲ್ಲದವರನ್ನು ಮೋದಿ ಸರಕಾರ ಉನ್ನತ ನ್ಯಾಯಾಲಯಗಳ ನ್ಯಾಯಾಧೀಶರನ್ನಾಗಿ ನೇಮಕ ಮಾಡದಿರುವುದು ನ್ಯಾಯಾಂಗದ ಮೇಲೆ ಸರಕಾರದ ಸವಾರಿಯಲ್ಲವೇ?
1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ 13 ನ್ಯಾಯಾಧೀಶರ ಸಂವಿಧಾನ ಪೀಠ ಸಂವಿಧಾನದ ಪ್ರಕಾರ ಸಂಸತ್ತು ಮತ್ತು ನ್ಯಾಯಾಂಗದ ಅಧಿಕಾರ ವ್ಯಾಪ್ತಿಯನ್ನು ನಿಗದಿಗೊಳಿಸಿತು. ಅದರ ಪ್ರಕಾರ ಸಂಸತ್ತು ಈಗಾಗಲೇ ಚರ್ಚಿಸಿದ ಸಂವಿಧಾನದ ಮೂಲ ರಚನೆಯಾದ ಕಲ್ಯಾಣ ರಾಜ್ಯ, ಸಂಸದೀಯ ಪ್ರಜಾತಂತ್ರ, ಧರ್ಮ ನಿರಪೇಕ್ಷತೆ, ಒಕ್ಕೂಟ ಸ್ವರೂಪ ಇತ್ಯಾದಿಗಳಿಗೆ ಧಕ್ಕೆಯಾಗದಂತೆ ಯಾವುದೇ ಬಗೆಯ ಕಾನೂನು ಮತ್ತು ಸಂವಿಧಾನ ತಿದ್ದುಪಡಿಗಳನ್ನು ಮಾಡಬಹುದು. ಆದರೆ ಅವು ಸಂವಿಧಾನದ ಮೂಲ ರಚನೆಗೆ ವ್ಯತಿರಿಕ್ತವಾದರೆ ಅದನ್ನು ರದ್ದುಗೊಳಿಸುವ ಪರಮಾಧಿಕಾರ ಸುಪ್ರೀಂ ಕೋರ್ಟಿಗಿದೆ ಎಂದು ಬಗೆಹರಿಸಿತ್ತು.
ಈಗ ಮೋದಿ ಸರಕಾರ ಈ ಸಮತೋಲನವನ್ನೇ ಖಂಡಿಸುತ್ತಾ ಸಂವಿಧಾನದ ಮೂಲ ರಚನೆ ಎಂಬ ಪರಿಕಲ್ಪನೆಯನ್ನೇ ವಿರೋಧಿಸುತ್ತಿಲ್ಲವೇ? ಪ್ರಜಾತಂತ್ರದಲ್ಲಿ ಸಂಸತ್ತಿನದೇ ಪರಮಾಧಿಕಾರ ಎಂದು ಉಪರಾಷ್ಟ್ರಪತಿ ಧನ್ಕರ್ ಆದಿಯಾಗಿ ಬಿಜೆಪಿಯ ಸಕಲ ನಾಯಕರೂ ಬಡಬಡಿಸುತ್ತಿಲ್ಲವೇ?
ಹಾಗಿದ್ದ ಮೇಲೆ ಸಂಘಿಗಳು ಇಂದಿರಾಗಾಂಧಿಯ ಸರ್ವಾಧಿಕಾರಿ ಹಾದಿಯನ್ನೇ ಹಿಡಿಯುತ್ತಿಲ್ಲವೇ?
ಎಲ್ಲಕ್ಕಿಂತ ಮುಖ್ಯವಾಗಿ ತುರ್ತುಸ್ಥಿತಿಯನ್ನು ಜಾರಿ ಮಾಡಿದ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಸರಕಾರ ಸಂವಿಧಾನಕ್ಕೆ 38, 39, 40, 41, 42ನೇ ತಿದ್ದುಪಡಿ ತಂದು ಸಂವಿಧಾನವನ್ನು ಕೊಂದರು ಎಂದು ಪ್ರಚಾರ ಮಾಡುತ್ತಿರುವ ಸಂಘಪರಿವಾರವು ತುರ್ತುಸ್ಥಿತಿಯನ್ನು ಏಕೆ ಬೆಂಬಲಿಸಿತ್ತು?