ನ್ಯಾ. ಚಂದ್ರಚೂಡ್-ಹತಾಶ ಭಾರತದ ಮತ್ತೊಂದು ನಿರಾಶೆ
ಭಾಗ- 2
ನ್ಯಾಯಪರವೆಂದು ತೋರುತ್ತಲೇ ಬಿಜೆಪಿಯನ್ನು ರಕ್ಷಿಸಿದ, ಪೋಷಿಸಿದ ಆದೇಶಗಳು
ನ್ಯಾ. ಚಂದ್ರಚೂಡ್ ಅವರು ಮುಖ್ಯ ನ್ಯಾಯಾಧೀಶರಾಗುವ ಮುನ್ನ ನ್ಯಾಯಪೀಠಗಳ ಸಹಭಾಗಿ ನ್ಯಾಯಾಧೀಶರಾಗಿದ್ದ ಕಾಲದಿಂದಲೂ ಬಿಜೆಪಿ ಸರಕಾರದ ಮತ್ತು ಪಕ್ಷದ ಮುಖ್ಯಸ್ಥರು ಮತ್ತು ಕಾರ್ಪೊರೇಟ್ ಬೆಂಬಲಿಗರ ಆಸಕ್ತಿಗೆ ಭಂಗ ಬರುವ, ಇರಿಸು ಮುರಿಸು ಉಂಟು ಮಾಡುವ ಯಾವ ಆದೇಶವನ್ನೂ ನೀಡದಿರುವುದು ಸ್ಪಷ್ಟವಾಗುತ್ತದೆ.
ಅ) ನ್ಯಾ. ಲೋಯಾ ಹತ್ಯೆ ಪ್ರಕರಣ
ಉದಾಹರಣೆಗೆ ಮೋದಿ ಸರಕಾರಕ್ಕೆ ಮತ್ತು ಗೃಹಮಂತ್ರಿ ಅಮಿತ್ ಶಾ ಅವರ ರಾಜಕೀಯ ಜೀವನಕ್ಕೆ ಮುಳುವಾಗಿ ಪರಿಣಮಿಸಿದ ಜಸ್ಟಿಸ್ ಲೋಯಾ ಹತ್ಯೆ/ಸಾವು ಪ್ರಕರಣದಲ್ಲಿ ಆರೆಸ್ಸೆಸ್ ಮತ್ತು ಗೃಹಮಂತ್ರಿ ಶಾ ಅವರ ಹಸ್ತಕ್ಷೇಪ ಇರುವ ಬಗ್ಗೆ ಹೊಸದಾಗಿ ತನಿಖೆ ನಡೆಸಲು ಕೋರಿ ಪ್ರಶಾಂತ್ ಭೂಷಣ್ ಹಾಗೂ ಇನ್ನಿತರ ಹೆಸರಾಂತ ವಕೀಲರು ಸಾಕಷ್ಟು ಪುರಾವೆ ಮತ್ತು ಸಾಕ್ಷಿಗಳನ್ನು ಕೊಟ್ಟು ಮರು ವಿಚಾರಣೆ ಕೇಳಿದರೂ ನ್ಯಾ. ಚಂದ್ರಚೂಡ್ ಪೀಠ ಅದನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಪರಿಣಾಮವಾಗಿ ಮೋದಿ-ಶಾ ಸರಕಾರ ಅತ್ಯಂತ ದೊಡ್ಡ ಆಪತ್ತಿನಿಂದ ಬಚಾವಾಯಿತು.
ಅ) ಕೊಲಿಜಿಯಂ ನಿರ್ಧಾರಗಳ ಮುಖಭಂ
ಮತ್ತೊಂದು ಪ್ರಕರಣದಲ್ಲಿ ಸುಪ್ರೀಂನ ಹಿರಿಯ ನ್ಯಾಯಾಧೀಶ ನ್ಯಾ. ಕೌಲ್ ಅವರ ಪೀಠ ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಾಧೀಶರನ್ನು ನೇಮಕ ಮಾಡುವಲ್ಲಿ ಮೋದಿ ಸರಕಾರ ಮಾಡುತ್ತಿರುವ ವಿಳಂಬದ ಬಗ್ಗೆ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಮೋದಿ ಸರಕಾರ ಮುಜುಗರಕ್ಕೆ ಒಳಗಾಗಿರುವ ಹೊತ್ತಿನಲ್ಲಿ ಮುಖ್ಯ ನ್ಯಾಯಾಧೀಶರಾಗಿ ಮಸ್ಟರ್ ಆಫ್ ದಿ ರೋಸ್ಟರ್ ಆಗಿರುವುದರಿಂದ ಪ್ರಕರಣಗಳನ್ನು ವಹಿಸುವ ಆಡಳಿತಾತ್ಮಕ ಪರಮಾಧಿಕಾರವನ್ನು ಬಳಸಿಕೊಂಡು ಆ ಪ್ರಕರಣವನ್ನೇ ಕೌಲ್ ಅವರ ಪೀಠದಿಂದ ನ್ಯಾ. ಚಂದ್ರಚೂಡರು ಹಿಂದೆಗೆದುಕೊಂಡುಬಿಟ್ಟಿದ್ದರು.
ಇ) ಇಲೆಕ್ಟೊರಲ್ ಬಾಂಡ್-ಆಪರೇಶನ್ ಸಕ್ಸಸ್, ಪೇಶೆಂಟ್?
ಅದೇ ರೀತಿ ಇಲೆಕ್ಟೊರಲ್ ಬಾಂಡ್ ಅನ್ನು ರದ್ದು ಮಾಡಿದರೂ, ಇಡೀ ಯೋಜನೆಯ ಹಿಂದೆ ಆಳುವ ಸರಕಾರಗಳು ಬಾಂಡ್ ಹೆಸರಿನಲ್ಲಿ ಲಂಚ ಪಡೆದು ಕಾರ್ಪೊರೇಟುಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಸಾಬೀತಾಗಿದೆ ಎಂದು ಒಪ್ಪಿಕೊಂಡರೂ, ಆ ಅಪರಾಧದ ಆಮೂಲಾಗ್ರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಮಾತ್ರ ನಿರಾಕರಿಸಿ ಬಿಜೆಪಿ ಸರಕಾರವನ್ನು ಬಚಾವು ಮಾಡಿದ್ದು ಕೂಡ ನ್ಯಾ. ಚಂದ್ರಚೂಡರ ಪೀಠವೇ.
ಈ) ಬಿಸಿಸಿಐ ಪ್ರಕರಣ-ಮರಿ ಶಾ ಪರ ಪಕ್ಷಪಾತ
ಕ್ರೀಡೆಯ ಹೆಸರಲ್ಲಿ ಅತಿ ದೊಡ್ಡ ಕಾರ್ಪೊರೇಟ್ ಸಂಸ್ಥೆಯಾಗಿ ಸಾವಿರಾರು ಕೋಟಿ ರೂಪಾಯಿಯ ಒಡೆಯನಾಗಿರುವ ಬಿಸಿಸಿಐ ಸಂಸ್ಥೆಯ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಗಳನ್ನು ನಿಗ್ರಹಿಸಲು ಸುಪ್ರೀಂ ಕೋರ್ಟೇ 2015ರಲ್ಲಿ ನಿವೃತ್ತ ಮುಖ್ಯ ನ್ಯಾಯಾಧೀಶ ಲೋಧಾ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಅದು ಬಿಸಿಸಿಐ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ತರಲು ಯಾರೂ ಕೂಡ ಸರಣಿಯಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಪದವಿಯಲ್ಲಿರಬಾರದು. ಮೂರನೇ ಬಾರಿ ಸ್ಪರ್ಧಿಸುವ ಮುನ್ನ ಕನಿಷ್ಠ ಮೂರು ವರ್ಷಗಳ ಕಾಲ ಪದವಿಯಿಂದ ದೂರವಿರಬೇಕು ಎಂದು ಸೂತ್ರ ರೂಪಿಸಿತ್ತು.
ಆದರೆ ಗೃಹಮಂತ್ರಿ ಅಮಿತ್ ಶಾ ಮಗ ಕ್ರಿಕೆಟಿನ ಗಂಧಗಾಳಿ ಗೊತ್ತಿಲ್ಲದ ಜಯ್ ಶಾ ಸಂಸ್ಥೆಯ ಮುಖ್ಯಸ್ಥನಾಗಿ ಎರಡು ಬಾರಿ ಅವಧಿ ಪೂರೈಸಿದ ನಂತರ ರಾಷ್ಟ್ರೀಯ ಹಿತಾಸಕ್ತಿಯ ಕಾರಣಕ್ಕಾಗಿ ಮೂರನೇ ಅವಧಿಗೂ ಅವರನ್ನೇ ಅಯ್ಕೆ ಮಾಡಲು ಪೂರಕವಾಗಿ ನಿಯಮಗಳಿಗೆ ಬದಲಾವಣೆ ತರಲು ಬಿಸಿಸಿಐ ಸುಪ್ರೀಂ ಕೋರ್ಟನ್ನು ಕೋರಿತು. ಅದನ್ನು ನ್ಯಾ. ಚಂದ್ರಚೂಡ್ ಪೀಠ ಅನಾಮತ್ತು ಒಪ್ಪಿಕೊಂಡು ಶಾ ಮುಂದುವರಿಯಲು ಅವಕಾಶ ಮಾಡಿಕೊಟ್ಟಿತು.
ಉ) ಹಾದಿಯಾ ಪ್ರಕರಣದಲ್ಲಿ ಎನ್‌ಐಎ ತನಿಖೆಗೆ ಅವಕಾಶ
ಎಲ್‌ಜಿಬಿಟಿಕ್ಯೂ ಸಮುದಾಯಗಳ ಸಮ್ಮತ ವಿವಾಹದ ವಿಷಯದಲ್ಲಿ ವಯಸ್ಕರ ನಡುವಿನ ಸಮ್ಮತಿಪೂರ್ವಕ ವಿವಾಹದ ಆಯ್ಕೆಯಲ್ಲಿ ಸಮಾಜವಾಗಲಿ, ಸರಕಾರವಾಗಲಿ ಮೂಗು ತೂರಿಸಬಾರದೆಂಬ ಅತ್ಯಂತ ನ್ಯಾಯ ಸಮ್ಮತ, ಆದರೆ ಅಲ್ಪಸಂಖ್ಯಾತ ತೀರ್ಪು ನೀಡಿದ್ದ ನ್ಯಾ. ಚಂದ್ರಚೂಡರು ವಯಸ್ಕ ಹಿಂದೂ ಯುವತಿ ಸ್ವ ಇಚ್ಛೆಯಿಂದ ಹಾದಿಯಾ ಆಗಿ ಇಸ್ಲಾಮಿಗೆ ಮತಾಂತರವಾಗಿ ಮುಸ್ಲಿಮ್ ವಯಸ್ಕನನ್ನು ಮದುವೆಯಾದ ಪ್ರಕರಣದಲ್ಲಿ ಮಾತ್ರ ಮಾನದಂಡವನ್ನೇ ಬದಲಿಸಿಬಿಟ್ಟರು. ಹಾದಿಯಾ ಕೇಸಿನಲ್ಲಿ ವಯಸ್ಕರ ಸಮ್ಮತಿಯುಕ್ತ ಮದುವೆಯ ಹಕ್ಕಿನ ಬಗ್ಗೆ ಸಕಾರಾತ್ಮಕ ತೀರ್ಪು ಕೊಟ್ಟರೂ ನ್ಯಾ. ಚಂದ್ರಚೂಡ್ ಪೀಠವೇ, ಈ ಮದುವೆ ಹಿಂದೆ ಲವ್ ಜಿಹಾದ್ ಷಡ್ಯಂತ್ರ ಇರಬಹುದೇ ಎಂದು ತನಿಖೆ ಮಾಡಲು ಎನ್‌ಐಎಗೂ ಅವಕಾಶ ಮಾಡಿಕೊಟ್ಟು ಸರಕಾರದ ಬಲಯುತ ಮಧ್ಯಪ್ರವೇಶಕ್ಕೆ ಅವಕಾಶ ಕೊಟ್ಟಿತ್ತು.
ಮೋದಿ ಸರಕಾರಕ್ಕೆ ಮುಜುಗರ ಉಂಟುಮಾಡುವ ಕೇಸುಗಳನ್ನೇ ಕೈಗೆತ್ತಿಕೊಂಡಿಲ್ಲ
ಇವಲ್ಲದೆ ಮೋದಿ ಸರಕಾರದ ಹಲವು ಸರ್ವಾಧಿಕಾರಿ ಹಾಗೂ ಹಿಂದುತ್ವವಾದಿ ನೀತಿಗಳು ಸುಪ್ರೀಂನಲ್ಲಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಅವುಗಳ ವಿಚಾರಣೆ ಕೈಗೊಂಡರೆ ಮೋದಿ ಸರಕಾರಕ್ಕೆ ಇರಿಸು ಮುರಿಸಾಗುತ್ತದೆ. ಅದರಲ್ಲಿ ಮುಖ್ಯವಾದದ್ದು ತನ್ನ ನಾಗರಿಕರ ಮೇಲೆಯೇ ಕಾನೂನು ಬಾಹಿರವಾಗಿ ಗೂಢಚರ್ಯೆ ಮಾಡಿ ಸಿಕ್ಕಿಹಾಕಿಕೊಂಡಿರುವ ಪೆಗಾಸಸ್ ಗೂಢಚರ್ಯೆ ಪ್ರಕರಣ. ಹಾಗೆಯೇ ಭಾರತದ ಸೆಕ್ಯುಲರ್ ಬುನಾದಿಯನ್ನೇ ಧಾರ್ಮಿಕವಾಗಿ ಬದಲಾಯಿಸುವ ಸಿಎಎ-ಎನ್‌ಪಿಆರ್/ಎನ್‌ಆರ್‌ಸಿ ನೀತಿ. ಇವುಗಳ ಜೊತೆಗೆ ಕರ್ನಾಟಕ ಹೈಕೋರ್ಟ್ ನೀಡಿದ ಹಿಜಾಬ್ ತೀರ್ಪನ್ನು ಸುಪ್ರೀಂನಲ್ಲಿ ದ್ವಿಸದಸ್ಯ ಪೀಠ ತದ್ವಿರುದ್ಧ ನಿಲುವಿನಿಂದಾಗಿ ಬಗೆಹರಿಸಲಾಗಿಲ್ಲ. ಅದರ ಪರಿಹಾರಕ್ಕೆ ತ್ರಿಸದಸ್ಯ ಪೀಠ ನೇಮಕಾತಿಯಾಗಬೇಕಿತ್ತು. ಆದರೆ ಇವ್ಯಾವ ಪ್ರಕರಣಗಳನ್ನೂ ತನ್ನ ಎರಡು ವರ್ಷಗಳ ಅವಧಿಯಲ್ಲಿ ನ್ಯಾ. ಚಂದ್ರಚೂಡರು ಮುಟ್ಟಲೂ ಹೊಗಲಿಲ್ಲ.
ನ್ಯಾಯಾಲಯದ ಹೊರಗೆ ಬಚ್ಚಿಡಲಾಗದ ಸನಾತನ
ಇನ್ನು ತಮ್ಮ ಅವಧಿಯ ಕೊನೆ ದಿನಗಳಲ್ಲಂತೂ ನ್ಯಾ. ಚಂದ್ರಚೂಡರು ತಾವು ಸಂವಿಧಾನವಾದಿಯಾಗಿರುವುದಕ್ಕಿಂತ ಹೆಚ್ಚಾಗಿ ಸನಾತನವಾದಿ ಎಂಬುದರ ಬಗ್ಗೆ ಯಾವ ಮುಚ್ಚುಮರೆಯನ್ನು ಮಾಡುತ್ತಿಲ್ಲ. ಹಾಗೂ ಆ ನಿಟ್ಟಿನಲ್ಲಿ ನ್ಯಾಯಮೂರ್ತಿಗಳು ತಮ್ಮ ಖಾಸಗಿ ಬದುಕಿನಲ್ಲೂ ಸಂವಿಧಾನವಾದಿಯಾಗಿ ಕಾಣಿಸಿಕೊಳ್ಳಬೇಕು ಎಂದು 1997ರಲ್ಲಿ ಸರ್ವ ನ್ಯಾಯಾಧೀಶರು ಜನತೆಗೆ ನೀಡಿದ ಅಧಿಕೃತ ಒಡಂಬಡಿಕೆಯನ್ನೇ ಮುರಿಯುತ್ತಿದ್ದಾರೆ.
ಮೊನ್ನೆ ಅಯೋಧ್ಯೆ ಪ್ರಕರಣದಲ್ಲಿ ತೀರ್ಪು ಕೊಡಲು ಸಂವಿಧಾನಕ್ಕಿಂತ ದೈವದ ಮೊರೆ ಹೋದೆ ಎಂದು ಯಾವುದೇ ಎಗ್ಗುಸಿಗ್ಗಿಲ್ಲದೆ ಕೊಚ್ಚಿಕೊಂಡ ನ್ಯಾ. ಚಂದ್ರಚೂಡರು ಎರಡು ವರ್ಷದ ಕೆಳಗೆ ಗುಜರಾತಿನಲ್ಲಿ ದ್ವಾರಕೆ ಮತ್ತು ಪುರಿಯಲ್ಲಿರುವ ಧರ್ಮ ಧ್ವಜಗಳು ವಿಶೇಷ ಅರ್ಥವನ್ನು ನೀಡುತ್ತವೆ ಎಂದು ಕೂಡ ಸೂಚನೆ ನೀಡಿದ್ದರು.
(https://indianexpress.com/.../after-temple-visits-cji.../)
ಅದೇ ರೀತಿ ಗಣೇಶನ ಹಬ್ಬವನ್ನು ತನ್ನ ಮನೆಯಲ್ಲಿ ಪ್ರಧಾನಿಯ ಜೊತೆ ಸೇರಿ ಆಚರಿಸಿ ಅದರ ಚಿತ್ರವನ್ನು ಬಹಿರಂಗವಾಗಿ ಹಂಚಿಕೊಂಡಿದ್ದು ಮಾತ್ರವಲ್ಲದೆ ಮೊನ್ನೆ ‘ಇಂಡಿಯನ್ ಎಕ್ಸ್‌ಪ್ರೆಸ್ ಸಂದರ್ಶನದಲ್ಲಿ ಅದನ್ನು ತಮ್ಮ ಸ್ಥಾನಕ್ಕೆ ಅನುಚಿತವಾಗಿ ಎಗ್ಗುಸಿಗ್ಗಿಲ್ಲದೆ ಸಮರ್ಥಿಸಿಕೊಂಡಿದ್ದಾರೆ.
ಇದು ನ್ಯಾ. ಚಂದ್ರಚೂಡರ ಪರಂಪರೆ. ಒಂದು ಬಗೆಯ ವಿನೂತನ ಸನಾತನ ಪರಂಪರೆ.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾ. ಚಂದ್ರಚೂಡರು ಮುಖ್ಯ ನ್ಯಾಯಾಧೀಶರಾಗುವ ಮುಂಚೆ ಬರೆಯುತ್ತಾ ‘‘ಭಾರತದ ಪ್ರಜಾತಂತ್ರದ ಅವನತಿಯ ಕಾರಣಗಳನ್ನು ದಾಖಲಿಸುವಾಗ ಚರಿತ್ರಕಾರರು ಮಾಡುವ ಪಟ್ಟಿಯಲ್ಲಿ ಭಾರತದ ಈ ಹಿಂದಿನ ಹಲವು ಮುಖ್ಯ ನ್ಯಾಯಾಧೀಶರ ಹೆಸರು ಸೇರಿರುತ್ತದೆ’’ಎಂದು ವಿಷಾದ ಹಾಗೂ ಆಕ್ರೋಶದಿಂದ ಭಾರತದ ನ್ಯಾಯಾಂಗದ ಅವನತಿಯ ವಿಶ್ಲೇಷಣೆ ಮಾಡಿದ್ದರು.
ಭಾರತದ ಪ್ರಜಾತಂತ್ರದ ಅವನತಿಗೆ ಕಾರಣರಾದ ಪಟ್ಟಿಯಲ್ಲಿ ಯಾರ ಹೆಸರು ಇದ್ದರೂ, ಇರದಿದ್ದರೂ ನ್ಯಾ. ಚಂದ್ರಚೂಡರ ಹೆಸರು ಮಾತ್ರ ಖಂಡಿತಾ ಇರುತ್ತದೆ.
ನ್ಯಾ. ಚಂದ್ರಚೂಡರು ಹತಾಶ ಭಾರತದ ಮತ್ತೊಂದು ಅತಿ ದೊಡ್ಡ ನಿರಾಶೆ.