ಮುಖ್ಯಮಂತ್ರಿಗಳೇ, ‘ಮಾನವೀಯತೆಯೇ ಕಟಕಟೆಯಲ್ಲಿರುವಾಗ’ ಶಾಂತಿಯ ಧ್ವನಿಗಳನ್ನೇಕೆ ಹತ್ತಿಕ್ಕುತ್ತಿದ್ದೀರಿ?
Photo: twitter.com/SortedEagle
ಮಾನ್ಯ ಮುಖ್ಯಮಂತ್ರಿಗಳೇ,
ಅತ್ಯಂತ ವಿಷಾದ ಹಾಗೂ ದುಗುಡದಿಂದ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ.
ಇಸ್ರೇಲ್ನ ನಿರಾಯುಧ ನಾಗರಿಕರ ಮೇಲೆ ಹಮಾಸ್ ನಡೆಸಿದ ಖಂಡನೀಯ ದಾಳಿಯನ್ನು ನೆಪವಾಗಿ ಬಳಸಿಕೊಂಡು ಇಸ್ರೇಲ್, ಫೆಲೆಸ್ತೀನ್ನ ಅಸಹಾಯಕ, ಅಮಾಯಕ ನಾಗರಿಕರ ಮೇಲೆ ಘನಘೋರ ಯುದ್ಧ ಸಾರಿದೆ. ಈ ಅನಾಗರಿಕ ಬರ್ಬರತೆಗೆ ಅಮೆರಿಕ ಹಾಗೂ ಯೂರೋಪಿನ ಬಲಿಷ್ಠ ರಾಷ್ಟ್ರಗಳು ತಮ್ಮ ಸ್ವಾರ್ಥ ಜಿಯೊ-ಪೊಲಿಟಿಕಲ್ ಆಸಕ್ತಿಗಳಿಗಾಗಿ ಸಂಪೂರ್ಣ ಬೆಂಬಲ ನೀಡಿವೆ. ಕಳೆದ ಒಂದೂವರೆ ದಶಕಗಳಿಂದ ಗಾಝಾ ಪಟ್ಟಿಯಲ್ಲಿ ಅನ್ನಾಹಾರಗಳಿಲ್ಲದೆ ನಲುಗಿಹೋಗಿದ್ದ 23 ಲಕ್ಷ ಫೆಲೆಸ್ತೀನಿಯರ ಮೇಲೆ ಇಸ್ರೇಲ್ ಭೂದಾಳಿಯ ಮೂಲಕ ನರಮೇಧ ಪ್ರಾರಂಭಿಸಿದೆ. ಆ ಮೂಲಕ ಅಳಿದುಳಿದ ಫೆಲೆಸ್ತೀನನ್ನು ಇಸ್ರೇಲಿಗೆ ಸೇರಿಸಿಕೊಳ್ಳುವ ತನ್ನ ಐತಿಹಾಸಿಕ ಷಡ್ಯಂತ್ರವನ್ನು ಮುಂದುವರಿಸಿದೆ.
ಅಷ್ಟು ಮಾತ್ರವಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡು ಓಲಿವ್ ಕೃಷಿಯಲ್ಲಿ ನಿರತರಾಗಿರುವ ವೆಸ್ಟ್ ಬ್ಯಾಂಕಿನ ಫೆಲೆಸ್ತೀನಿ ರೈತರ ಮೇಲೆ ಇಸ್ರೇಲ್ ನ ಅಕ್ರಮ ನೆಲಸಿಗರು ಸರಕಾರದ ಬೆಂಬಲದೊಂದಿಗೆ ಯೋಜಿತ ಹತ್ಯೆಗಳನ್ನು ಮಾಡುತ್ತಾ ಫೆಲೆಸ್ತೀನಿಯರನ್ನು ವೆಸ್ಟ್ ಬ್ಯಾಂಕ್ನಿಂದಲೂ ಹೊರದಬ್ಬಿ ಅವರ ಜಮೀನುಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಅಕ್ಟೋಬರ್ 7ರ ನಂತರದಲ್ಲಿ ಕನಿಷ್ಠ 120 ಫೆಲೆಸ್ತೀನಿ ರೈತರನ್ನು ವೆಸ್ಟ್ ಬ್ಯಾಂಕಿನಲ್ಲಿ ಇಸ್ರೇಲ್ ಕೊಂದುಹಾಕಿದೆ. ವಾಸ್ತವವೆಂದರೆ ವೆಸ್ಟ್ ಬ್ಯಾಂಕ್ನಲ್ಲಿ ಹಮಾಸ್ ಇಲ್ಲ. ಹೀಗಾಗಿ ಇಸ್ರೇಲ್ ನಡೆಸುತ್ತಿರುವ ಯುದ್ಧದ ನಿಜವಾದ ಉದ್ದೇಶ ಹಮಾಸ್ ದಾಳಿಯನ್ನು ಬಳಸಿಕೊಂಡು ಫೆಲೆಸ್ತೀನ್ ರೈತಾಪಿಗಳ ಹಾಗೂ ಗಾಝಾ ವಾಸಿಗಳ ನರಮೇಧ ನಡೆಸಿ ಫೆಲೆಸ್ತೀನ್ ಕಬಳಿಸುವುದೇ ಆಗಿದೆ ಎಂಬುದರಲ್ಲಿ ಅನುಮಾನವಿಲ್ಲ.
ಇವೆಲ್ಲವೂ ನಿಮಗೆ ಗೊತ್ತಿರುವ ವಿಷಯವೇ.
ನೆತನ್ಯಾಹು-ಮೋದಿ ಭಾಯಿ, ಭಾಯಿ
ಆದರೆ, ಇಸ್ರೇಲಿನ ಈ ಬರ್ಬರ ವಸಾಹತುಶಾಹಿ ಜನಾಂಗೀಯ ಉಗ್ರವಾದಿ ಕ್ರಮಗಳನ್ನು ಮೋದಿ ಸರಕಾರವೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಮರ್ಥಿಸಿಕೊಳ್ಳುತ್ತಿದೆ. ಇತ್ತೀಚೆಗೆ ವಿಶ್ವ ಸಂಸ್ಥೆಯಲ್ಲಿ ಗಾಝಾ ನಾಗರಿಕರಿಗೆ ಮಾನವೀಯ ಸಹಕಾರ ಒದಗಿಸುವ ಗೊತ್ತುವಳಿಯನ್ನೂ ಮೋದಿ ಸರಕಾರ ಪರೋಕ್ಷವಾಗಿ ವಿರೋಧಿಸಿರುವುದು ಇದಕ್ಕೊಂದು ಉದಾಹರಣೆ. ಇಸ್ರೇಲಿನ ಬಗ್ಗೆ ತಮ್ಮ ಪಕ್ಷದ ನರಸಿಂಹರಾವ್ ಸರಕಾರದ ಕಾಲದಲ್ಲಿ ಭಾರತವು ಮೃದು ಧೋರಣೆ ತೋರಲು ಪ್ರಾರಂಭಿಸಿತು ಮತ್ತು ಅತ್ಯಂತ ಉತ್ಸುಕತೆಯಿಂದಲೇ ಅಂದಿನ ಕಾಂಗ್ರೆಸ್ ಸರಕಾರವು ಇಸ್ರೇಲಿನ ಜೊತೆ ರಾಜತಾಂತ್ರಿಕ ಸಂಬಂಧಗಳನ್ನು ಪುನರ್ ಸ್ಥಾಪನೆ ಮಾಡಿತು ಹಾಗೂ ಆ ಮೂಲಕ ಕಾಂಗ್ರೆಸ್ ನಾಯಕತ್ವದಲ್ಲೇ ಭಾರತ ಇಸ್ರೇಲ್ ನಡೆಸುತ್ತಿದ್ದ ಫೆಲೆಸ್ತೀನಿಯರ ಯೋಜಿತ ಹಾಗೂ ನಿಧಾನ ನರಮೇಧಗಳ ಬಗ್ಗೆ ಜಾಣ ಕುರುಡು ಪ್ರಾರಂಭವಾಯಿತು.
ಆದರೆ ಇಸ್ರೇಲಿನ ಅತ್ಯುಗ್ರ ಜನಾಂಗೀಯವಾದಿ ಜಿಯೋನಿಸಂನ ಸೋದರ ಸಂಬಂಧಿಯಾಗಿರುವ ಬ್ರಾಹ್ಮಣಶಾಹಿ ಹಿಂದುತ್ವ ಉಗ್ರವಾದಿ ಸಿದ್ಧಾಂತದ ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಇಸ್ರೇಲಿನ ಜಿಯೋನಿಸ್ಟ್ ನೆತನ್ಯಾಹು ಹಾಗೂ ಹಿಂದುತ್ವವಾದಿ ಮೋದಿ ಸರಕಾರ ಕೇವಲ ರಾಜತಾಂತ್ರಿಕ ಮಾತ್ರವಲ್ಲದೆ ರಾಜಕೀಯ ಮತ್ತು ಸೈದ್ಧಾಂತಿಕ ಮೈತ್ರಿಕೂಟವನ್ನು ರೂಪಿಸಿಕೊಂಡಿದ್ದಾರೆ. ಅಮೆರಿಕದ ಬಿಳಿ ಶ್ರೇಷ್ಠತವಾದ, ಇಸ್ರೇಲಿನ ಜನಾಂಗೀಯವಾದ ಮತ್ತು ಭಾರತದ ಹಿಂದುತ್ವದ ಮೈತ್ರಿಕೂಟ ಜಗತ್ತಿನ ಎಲ್ಲಾ ದಮನಕೋರ ಬಲಪಂಥೀಯರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಇಸ್ರೇಲಿನ ಈ ಜನಾಂಗೀಯ ಆಕ್ರಮಣ ನೀತಿಯನ್ನು ಮೋದಿ ಸರಕಾರವನ್ನು ಒಳಗೊಂಡಂತೆ ಜಗತ್ತಿನ ಎಲ್ಲಾ ಉಗ್ರ ಬಲಪಂಥೀಯ ಪಕ್ಷಗಳು ಮತ್ತು ಸರಕಾರಗಳು ಆದರ್ಶವೆಂದು ಭಾವಿಸುತ್ತಿವೆ. ಆದ್ದರಿಂದಲೇ ಇಸ್ರೇಲಿನ ಜಿಯೋನಿಸಂ ಮತ್ತು ಭಾರತದ ಹಿಂದುತ್ವ ಭಾಯಿ-ಭಾಯಿ ಎಂದು ಆರೆಸ್ಸೆಸ್-ಬಿಜೆಪಿ ಬಹಿರಂಗವಾಗಿ ಹೇಳುತ್ತಿದೆ.
ಅಮೆರಿಕದ ನೇತೃತ್ವದಲ್ಲಿ ಇಸ್ರೇಲ್, ಇಂಡಿಯಾ, ಅಮೆರಿಕ ಮತ್ತು ಯುಎಇ ದೇಶಗಳು ಯು2-ಐ2-ಎಂಬ ಅನೌಪಚಾರಿಕ ಮೈತ್ರಿಕೂಟವನ್ನು ಸ್ಥಾಪಿಸಿಕೊಂಡಿವೆ. ಇಸ್ರೇಲ್ ಹೇಗೆ ತಮಗೆ ತೊಡಕೆಂದು ಭಾವಿಸುವ ಫೆಲೆಸ್ತೀನಿಯರನ್ನು ಜನಾಂಗೀಯ ನರಮೇಧ ಮತ್ತು ಬಲವಂತದ ಹೊರದಬ್ಬುವಿಕೆಯ ಮೂಲಕ ನಿವಾರಿಸಿಕೊಳ್ಳುತ್ತಿದೆಯೋ ಅದೇ ರೀತಿ ಭಾರತದಲ್ಲಿ ತಾವು ತೊಡಕೆಂದು ಭಾವಿಸುವ ಮುಸ್ಲಿಮರನ್ನು ಹಾಗೂ ಇನ್ನಿತರರನ್ನು ನಿವಾರಿಸಿಕೊಳ್ಳುವ ಚಿಂತನೆ ಬಿಜೆಪಿ-ಆರೆಸ್ಸೆಸ್ನದು. ಅದಕ್ಕೆ ಮೋದಿ, ಬಿಜೆಪಿ ಮತ್ತು ಆರೆಸ್ಸೆಸ್ಗೆ ಜಿಯೋನಿಸ್ಟ್ ಇಸ್ರೇಲಿಗಳೆಂದರೆ ಅಚ್ಚುಮೆಚ್ಚು. ಅದಕ್ಕೆ ಇಸ್ರೇಲಿಗೆ ಭೇಟಿ ನೀಡಿದ ಪ್ರಪ್ರಥಮ ಪ್ರಧಾನ ಮಂತ್ರಿ ಎಂಬ ಕೀರ್ತಿ ನರೇಂದ್ರ ಮೋದಿಗೇ ಸೇರುತ್ತದೆ. ಆ ಭೇಟಿಯಲ್ಲೇ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತದಲ್ಲಿ ಉದಾರವಾದಿ ಪತ್ರಕರ್ತ, ಆ್ಯಕ್ಟಿವಿಸ್ಟ್ಗಳ ಮೇಲೆ ಗುಪ್ತ ಆದರೆ ಸಮಗ್ರ ಬೇಹುಗಾರಿಕೆ ನಡೆಸಲು ಪೆಗಾಸಸ್ ಸಾಫ್ಟ್ವೇರನ್ನು ಕೊಡುಗೆ ನೀಡಿದ್ದರು.
ಹೀಗಾಗಿಯೇ ಮೋದಿ ಸರಕಾರ ಇಸ್ರೇಲಿನ ಯಾವುದೇ ಅತಿರೇಕಗಳನ್ನು ಖಂಡಿಸುವುದೇ ಇಲ್ಲ. ಅದರ ಭಾಗವಾಗಿಯೇ ಮೊನ್ನೆ ವಿಶ್ವಸಂಸ್ಥೆಯಲ್ಲಿ 193 ದೇಶಗಳಲ್ಲಿ 120 ದೇಶಗಳು ಗಾಝಾದ ಫೆಲೆಸ್ತೀನ್ ನಾಗರಿಕರಿಗೆ ಮಾನವೀಯ ಸಹಕಾರ ಕೊಡಬೇಕೆಂಬ ನಿರುಪದ್ರವಿ ಗೊತ್ತುವಳಿಯ ಪರವಾಗಿ ಸಹಿ ಹಾಕಿದರೂ, ಭಾರತ ಮಾತ್ರ ಹೊರಗುಳಿಯಿತು. ಇದು ಆಕಸ್ಮಿಕವಲ್ಲ. ಮೋದಿ ಸರಕಾರ ಭಾರತದಲ್ಲಿ ಇತರ ಸಮುದಾಯಗಳ ಜೊತೆ ಸಹಬಾಳ್ವೆಯ ಬದಲಿಗೆ ದಮನ ಹಾಗೂ ಅಧೀನ ಮಾದರಿಯನ್ನು ಅನುಸರಿಸುತ್ತಿರುವುದರಿಂದಲೇ ಇಸ್ರೇಲಿನ ದಮನಕಾರಿ ಜನಾಂಗೀಯವಾದಿ ನೀತಿಯನ್ನು ಸಮರ್ಥಿಸಿಕೊಳ್ಳುತ್ತಿದೆ. ಇದು ಭಾರತದ ಘನತೆಯನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದೆ.
ಹೀಗಾಗಿ ಮೋದಿ ಸರಕಾರದ ಈ ನೀತಿಯನ್ನು ಖಂಡಿಸುವುದು ಶಾಂತಿಯುತ ಸಹಬಾಳ್ವೆಯನ್ನು ಹಾಗೂ ನಮ್ಮ ದೇಶಗಳಲ್ಲಿ ಜನಪರ ಸೌಹಾರ್ದ ಬದುಕಿನ ಮಾದರಿ ಮತ್ತು ನೀತಿಯನ್ನು ಬಯಸುವ ಎಲ್ಲ ಪಕ್ಷ ಹಾಗೂ ಸಂಘಟನೆಗಳ ಆದ್ಯ ಕರ್ತವ್ಯವಾಗಿಬಿಡುತ್ತದೆ.
ನಿನ್ನೆ ತಮ್ಮ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿಯವರು ‘ದಿ ಹಿಂದೂ’ ಪತ್ರಿಕೆಯಲ್ಲೂ ಇದೇ ವಿಷಯಗಳನ್ನೇ ಬರೆದಿದ್ದಾರೆ. ತಮ್ಮ ಪಕ್ಷದ ಇತರ ಹಲವಾರು ನಾಯಕರೂ ಕೂಡಲೇ ಯುದ್ಧ ವಿರಾಮ ಘೋಷಿಸುವ, ಜೀವಗಳನ್ನು ಉಳಿಸಿಕೊಳ್ಳಲು ಬೇಕಾದ ಅನ್ನಾಹಾರ, ಔಷಧಿಗಳ ನಿರಾತಂಕ ಸರಬರಾಜಿಗೆ ಅವಕಾಶ ಕೊಡಬೇಕೆಂದೂ, ಮಾತುಕತೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳಬೇಕೆಂದೂ ಹೇಳಿಕೆ ಕೊಟ್ಟಿದ್ದಾರೆ. ಕೇರಳ ಹಾಗೂ ಇನ್ನಿತ್ಯಾದಿ ಕಡೆಗಳಲ್ಲಿ ಯುದ್ಧವನ್ನು ಕೂಡಲೇ ನಿಲ್ಲಿಸಬೇಕೆಂದೂ ಬೃಹತ್ ಶಾಂತಿಯುತ ಜನಪ್ರದರ್ಶನಗಳು ನಡೆದಿವೆ.
ನಿನ್ನೆ ಸೋನಿಯಾ ಗಾಂಧಿಯವರು ಬರೆದಿರುವ ಲೇಖನದಲ್ಲೂ ‘‘ನ್ಯಾಯವಿಲ್ಲದೆ ಶಾಂತಿ ಸಾಧ್ಯವಿಲ್ಲ’’ ಎಂದು ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. ಹಾಗೂ ‘‘ಜಗತ್ತಿನಾದ್ಯಂತ ಶಾಂತಿಯ ಪರವಾಗಿ ಗಟ್ಟಿಯಾದ ಧ್ವನಿ ಮೊಳಗಬೇಕು’’ ಎಂದು ಕರೆ ಕೊಟ್ಟಿದ್ದಾರೆ.
ಕಾಂಗ್ರೆಸ್ ಕೂಡ ಕಟಕಟೆಯಲ್ಲಿದೆ!
ಮಾನ್ಯ ಮುಖ್ಯಮಂತ್ರಿಗಳೆ,
ನಿಮ್ಮ ವರಿಷ್ಠರಾದ ಸೋನಿಯಾ ಗಾಂಧಿಯವರು ಹೇಳುವಂತೆ ‘‘ಈ ಯುದ್ಧವು ಮಾನವೀಯತೆಯನ್ನೇ ಕಟಕಟೆಯಲ್ಲಿ ನಿಲ್ಲಿಸಿರುವಾಗ’’ ನ್ಯಾಯದ ಪರವಾದ ಧ್ವನಿ ‘‘ಜಗತ್ತಿನಾದ್ಯಂತ ಗಟ್ಟಿಯಾಗಿ ಮೊಳಗಬೇಕಾಗಿರುವಂತೆ ಕರ್ನಾಟಕದಲ್ಲೂ ಮೊಳಗಬೇಕಲ್ಲವೇ?’’.
ಕರ್ನಾಟಕದಲ್ಲಿ ಯುದ್ಧ ನಿಲ್ಲಿಸುವ ಹಾಗೂ ನ್ಯಾಯದಪರ ನಿಲುವನ್ನು ಹೊಂದಿರುವ ಪಕ್ಷ ಎಂದು ಹೇಳಿಕೊಳ್ಳುವ ನಿಮ್ಮ ನೇತೃತ್ವದ ಕಾಂಗ್ರೆಸ್ ಸರಕಾರವೇ ಅಧಿಕಾರದಲ್ಲಿದ್ದರೂ
...ಇಸ್ರೇಲ್ ನಡೆಸುತ್ತಿರುವ ಅಮಾನವೀಯ ಆಕ್ರಮಣದ ವಿರುದ್ಧ ಗಟ್ಟಿಯಾದ ಧ್ವನಿಯಿರಲಿ ಪಿಸುಮಾತೂ ಮೊಳಗದಂತೆ ನೋಡಿಕೊಳ್ಳುವ ಮೋದಿ ಸರಕಾರದ ನೀತಿಯನ್ನು ಜಾರಿಗೊಳಿಸುತ್ತಿರುವಂತೆ ಕಾಣುತ್ತಿದೆ!
ಅಕ್ಟೋಬರ್ 7ರ ನಂತರ ಇಸ್ರೇಲ್-ಫೆಲೆಸ್ತೀನ್ ವಿಷಯದಲ್ಲಿ ರಾಜ್ಯದಲ್ಲಿ ಎಲ್ಲಿಯೂ ಶಾಂತಿಯನ್ನು ಆಗ್ರಹಿಸಿ ಶಾಂತಿಯುತ ಪ್ರದರ್ಶನ ಮಾಡಲು ಕರ್ನಾಟಕ ಪೊಲೀಸರು ಅನುಮತಿ ಕೊಡುತ್ತಿಲ್ಲ. ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಸ್ವಪ್ರೇರಿತರಾಗಿ ಸೇರಿ ಸಾವಿರಾರು ಮಂದಿ ಶಾಂತಿಯುತವಾದಿ ಯುದ್ಧ ವಿರಾಮ ಕೋರಿ ಭಿತ್ತಿ ಪತ್ರ ಪ್ರದರ್ಶನ ಮಾಡಿದ್ದರೆ ಕಾನೂನು ಉಲ್ಲಂಘನೆಯ ಆಪಾದನೆ ಹೊರಿಸಿ 30ಕ್ಕೂ ಹೆಚ್ಚು ಮುಸ್ಲಿಮರ ಮೇಲೆ ಕೇಸುಗಳನ್ನು ಜಡಿಯಲಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ಕೇವಲ ಫ್ರೀಡಂ ಪಾರ್ಕಿನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ಎಂಬ ಸಬೂಬನ್ನು ನೀಡಲಾಗಿದೆ. ಎಸ್ಯುಸಿಐ ಸಂಘಟನೆ ಫ್ರೀಡಂ ಪಾರ್ಕಿನಲ್ಲೇ ಪ್ರತಿಭಟನೆಗೆ ಅವಕಾಶ ಕೊಡಬೇಕೆಂದು ಪೂರ್ವಭಾವಿ ಮನವಿ ಕೊಟ್ಟರೆ ಅದಕ್ಕೆ ಶಾಂತಿ ಸುವ್ಯವಸ್ಥೆಯ ನೆಪವೊಡ್ಡಿ ಅನುಮತಿ ನಿರಾಕರಿಸಲಾಗಿದೆ. ತುಮಕೂರಿನಲ್ಲಿ ರಾಜ್ಯದ ಸಾಕ್ಷಿ ಪ್ರಜ್ಞೆಗಳಂತಿರುವ ಯತಿರಾಜ್ ಹಾಗೂ ಇನ್ನಿತರರ ನೇತೃತ್ವದಲ್ಲಿ ಯುದ್ಧ ನಿಲ್ಲಿಸಿ-ಶಾಂತಿ ಸ್ಥಾಪನೆ ಕೋರಿ ಅತ್ಯಂತ ಶಾಂತಿಯುತ ಪ್ರತಿಭಟನೆ ನಡೆಸಿದರೆ ಎರಡು ಕೋಮುಗಳ ನಡುವೆ ವೈಷಮ್ಯ ಬಿತ್ತುವ ಪ್ರಕರಣವನ್ನು ದಾಖಲಿಸಲಾಗಿದೆ!
ಕರ್ನಾಟಕದಲ್ಲಿ ಎಮರ್ಜೆನ್ಸಿ ಜಾರಿಯಲ್ಲಿದೆಯೇ?
ವಿಜಯಪುರದಲ್ಲಿ ಹಾಗೂ ಇನ್ನಿತರ ಕಡೆ ಎಸ್ಡಿಪಿಐ ಹಾಗೂ ಮತ್ತಿತರ ಸಂಘಟನೆಗಳು ಯುದ್ಧ ಬೇಡ, ಶಾಂತಿ ಬೇಕು ಎಂದು ಆಗ್ರಹಿಸಿ ಶಾಂತಿಯುತ ಧರಣಿ ಮಾಡಲು ಅವಕಾಶ ಕೋರಿದರೆ ವಿಜಯಪುರದ ಪೊಲೀಸ್ ಅಧಿಕಾರಿಗಳು ಈ ವಿಷಯವು ಕೇಂದ್ರ ಸರಕಾರದ ಅಧಿಕೃತ ನಿಲುವಿಗೆ ವಿರುದ್ಧವಿರುವುದರಿಂದ ಅನುಮತಿಯನ್ನು ನಿರಕಾರಿಸಲಾಗಿದೆ ಎಂದು ಶರಾ ಬರೆದುಕೊಟ್ಟಿದ್ದಾರೆ! ಸರಕಾರದ ನೀತಿಯ ವಿರುದ್ಧ ಎಂಬ ಕಾರಣಕ್ಕಾಗಿ ಪ್ರತಿಭಟನೆಗೆ ಅಧಿಕೃತ ಅವಕಾಶ ನಿರಾಕರಣೆ ಬಿಜೆಪಿ ಸರಕಾರದ ಕಾಲದಲ್ಲೂ ಆದ ನೆನಪಿಲ್ಲ.
ಫ್ರೀಡಂ ಪಾರ್ಕಿನಲ್ಲಿ ಸಿಪಿಐ, ಸಿಪಿಎಂ, ಸಿಪಿಐ-ಎಂಎಲ್ ಸಂಘಟನೆಗಳು ಪ್ರತಿಭಟನೆಗೆ ಅವಕಾಶ ಕೇಳಿದರೆ ಕೊನೆ ನಿಮಿಷದ ತನಕ ಸತಾಯಿಸಿ ಅಂತಿಮವಾಗಿ ಫ್ರೀಡಂ ಪಾರ್ಕಿನಲ್ಲಿ ಸ್ಥಳಾವಕಾಶವಿಲ್ಲ ಎಂಬ ನೆಪವೊಡ್ಡಿ ಅನುಮತಿ ನಿರಾಕರಿಸಲಾಯಿತು. ಆದರೂ ಪ್ರತಿಭಟನೆ ಮಾಡಲು ನೆರೆದಿದ್ದ ಎಡಪಕ್ಷಗಳ ಕಾರ್ಯಕರ್ತರನ್ನು ಘೋಷಣೆ ಕೂಗಲು ಅವಕಾಶ ಕೊಡದಂತೆ ವಶಕ್ಕೆ ತೆಗೆದುಕೊಂಡು ಗಂಟೆಗಟ್ಟಲೆ ಬಂಧಿಸಿಟ್ಟಿದ್ದರು.
‘ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರು’ ಎಂಬ ನಗರದ ಹಲವಾರು ಶಾಂತಿಪರ ಸಂಘಟನೆಗಳ ಒಕ್ಕೂಟವು ಕಳೆದ ಒಂದು ತಿಂಗಳಿಂದ ಫೆಲೆಸ್ತೀನ್ ಮೇಲೆ ಯುದ್ಧ ನಿಲ್ಲಿಸಿ, ಶಾಂತಿಯನ್ನು ಆಗ್ರಹಿಸಿ ಫ್ರೀಡಂ ಪಾರ್ಕಿನಲ್ಲೇ ಪ್ರದರ್ಶನ ಮಾಡಲು ಹಾಗೂ ರಕ್ತದಾನ ಮಾಡಲು ಅನುಮತಿ ಪಡೆದುಕೊಳ್ಳಲು ಸತತವಾಗಿ ಪ್ರಯತ್ನಿಸುತ್ತಿದೆೆ. ಆ ಒಕ್ಕೂಟದ ನಾಯಕರು ತಮ್ಮನ್ನು ಕೂಡ ಭೇಟಿ ಮಾಡಿ ಅನುಮತಿ ದೊರಕಿಸಿಕೊಡಲು ಆಗ್ರಹಿಸಿದ್ದಾರೆ.
ತಮ್ಮ ಪೊಲೀಸರು ಪ್ರತಿಯಾಗಿ ಸಂಘಟಕರಿಂದ ಪ್ರತಿಭಟನೆಯ ದಿನ ಯಾರು ಯಾವ ಘೋಷಣೆ ಹಾಕುತ್ತಾರೆ, ಯಾರು ಏನೇನು ಮಾತಾಡುತ್ತಾರೆ, ಇನ್ನಿತ್ಯಾದಿ ಕ್ಷಣಕ್ಷಣದ ವಿವರಗಳನ್ನು ಕೇಳಿದ್ದಾರೆ. ಸಂಘಟಕರು ಪೊಲೀಸರು ಹೇಳಿದಂತೆ ಚಾಚೂ ತಪ್ಪದಂತೆ ನಡೆದುಕೊಂಡು ಎಲ್ಲಾ ವಿವರಗಳನ್ನೂ ನೀಡಿದ್ದಾರೆ. ಆದರೂ ಕೊನೆ ನಿಮಿಷದಲ್ಲಿ ಪೊಲೀಸರು ಇದು ಅಂತರ್ರಾಷ್ಟ್ರೀಯ ವಿಷಯವಾದ್ದರಿಂದ ಅನುಮತಿ ನೀಡಲಾಗುವುದಿಲ್ಲ ಎಂದು ಶರಾ ಬರೆದು ಅನುಮತಿ ನಿರಾಕರಿಸಿದ್ದಾರೆ. ಮುಖ್ಯಮಂತ್ರಿಗಳೇ, ಅಂತರ್ರಾಷ್ಟ್ರೀಯ ಅನ್ಯಾಯಗಳಿಗೆ ಭಾರತೀಯರು ಪ್ರತಿಕ್ರಿಯಿಸಬಾರದು ಎಂಬುದು ಯಾವಾಗ ಕಾನೂನು ಆಯಿತು?!
ಇಷ್ಟಕ್ಕೆ ನಿಲ್ಲಲಿಲ್ಲ. ಬೆಂಗಳೂರಿನ ಫ್ರೇಜರ್ ಟೌನ್ನಲ್ಲಿ ಕೆಲವು ಉತ್ಸಾಹಿಗಳು ಯುದ್ಧ ವಿರೋಧಿ ಕಲಾ ಪ್ರದರ್ಶನ, ಭಾಷಣವನ್ನು ಒಂದು ಹಾಲ್ನಲ್ಲಿ ಏರ್ಪಡಿಸಿದ್ದರೆ ಕೊನೆನಿಮಿಷದಲ್ಲಿ ಪೊಲೀಸರು ಒತ್ತಡ ತಂದು ಅದನ್ನು ರದ್ದುಗೊಳಿಸಿದ್ದಾರೆ.
ಅಷ್ಟು ಮಾತ್ರವಲ್ಲ. ಕರ್ನಾಟಕ ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ಎಂಬ ಸಂಘಟನೆ ತನ್ನದೇ ಕಚೇರಿಯಲ್ಲಿ ತನ್ನ ಸದಸ್ಯರು ಮತ್ತು ಹಿತೈಷಿಗಳೊಡನೆ ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದರೂ, ಅವರ ಕಚೇರಿಯೊಳಗೂ ಹಾಗೂ ತಮ್ಮೊಳಗೂ ಕೂಡ ಫೆಲೆಸ್ತೀನ್ ವಿಷಯ ಮಾತಾಡಬಾರದೆಂದು ಪೊಲೀಸರು ಸಂಘಟಕರಿಗೆ ಇನ್ನಿಲ್ಲದ ಒತ್ತಡವನ್ನು ಹಾಕಿ ಕಾರ್ಯಕ್ರಮವನ್ನು ಮುಂದೂಡುವಂತೆ ಮಾಡಿದ್ದಾರೆ.
ಕರ್ನಾಟಕದಲ್ಲಿ ತುರ್ತುಸ್ಥಿತಿ ಜಾರಿಯಲ್ಲಿದೆಯೇ ಮುಖ್ಯಮಂತ್ರಿಗಳೇ?
ಕೊನೆಗೆ ಇವೆಲ್ಲವನ್ನು ಕಂಡು ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರು-ಒಕ್ಕೂಟವು ಅಕ್ಟೋಬರ್ 31ರಂದು ಯುದ್ಧವಿರೋಧಿಗಳೆಲ್ಲರೂ ಸಂಜೆ ಆರು ಗಂಟೆಗೆ ತಮ್ಮ ತಮ್ಮ ಮನೆಯಲ್ಲಿ ಮೇಣದ ಬತ್ತಿ ಹಚ್ಚಿ ಸೌಹಾರ್ದತೆ ಸೂಚಿಸಬೇಕೆಂದು ಕರೆ ಕೊಟ್ಟಿದ್ದಾರೆ.
ಇವೆಲ್ಲ ಒಂದುಕಡೆಯಾದರೆ, ಮತ್ತೊಂದು ಕಡೆ ಇಸ್ರೇಲಿನ ಪರವಾಗಿ ಹಾಗೂ ಯುದ್ಧದ ಪರವಾಗಿ ಬೆಂಗಳೂರಿನ ಟೌನ್ ಹಾಲಿನ ಎದುರು ದೇಶಭಕ್ತರ ಹೆಸರಿನ ಗುಂಪೊಂದು ಪ್ರದರ್ಶನ ನಡೆಸುತ್ತದೆ. ಅವರನ್ನು ತಮ್ಮ ಸರಕಾರ ತಡೆಯುವುದೂ ಇಲ್ಲ. ಅವರ ಮೇಲೆ ಕೇಸುಗಳನ್ನೂ ಹಾಕುವುದಿಲ್ಲ.
ಮೋದಿ ಸರಕಾರಕ್ಕೂ,
ಸಿದ್ದರಾಮಯ್ಯ ಸರಕಾರಕ್ಕೂ ವ್ಯತ್ಯಾಸವೇನು
ಮಾನ್ಯ ಮುಖ್ಯಮಂತ್ರಿಗಳೇ,
ಜನರು ಒಂದೆಡೆ ಸೇರದೆ ತಮ್ಮ ತಮ್ಮ ಮನೆಯಲ್ಲೇ ಪ್ರತಿಭಟನೆ ತೋರುವ ಮಾದರಿಯನ್ನು ಅನುಸರಿಸಿದ್ದು ಯಾವಾಗ ನೆನಪಿದೆಯೇ? ಮೋದಿ ಸರಕಾರ ಕೋವಿಡ್ ನೆಪದಲ್ಲಿ ಅತ್ಯಂತ ಅಮಾನವೀಯವಾದ ಹಾಗೂ ಸರ್ವಾಧಿಕಾರಿ ಲಾಕ್ಡೌನ್ ಹೇರಿದ ಸಂದರ್ಭದಲ್ಲಿ!
ಹಾಗೂ ತುರ್ತು ಪರಿಸ್ಥಿತಿಯ ಸಂದರ್ಭವನ್ನು ಹೊರತು ಪಡಿಸಿ ಬೇರೆ ಯಾವ ಸರಕಾರಗಳೂ ಸರಕಾರದ ನೀತಿಗಳ ವಿರುದ್ಧ ಎಂಬ ಕಾರಣಕ್ಕಾಗಿ ಪ್ರತಿಭಟನೆಯ ಅವಕಾಶಗಳನ್ನು ನಿರಾಕರಿಸಿರಲಿಲ್ಲ ಹಾಗೂ ತಮ್ಮದೇ ಕಚೇರಿಯಲ್ಲಿ ತಮ್ಮ ಸದಸ್ಯರ ಜೊತೆ ಚರ್ಚೆ ಮಾಡುವುದನ್ನೂ ನಿರ್ಬಂಧಿಸಿರಲಿಲ್ಲ.
ಇದು ರಾಜ್ಯದ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆ. ಇದು ಸರ್ವಾಧಿಕಾರ. ಇದು ಪ್ರಜಾತಂತ್ರವಲ್ಲ. ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಲಾಕ್ಡೌನ್.
ಹಾಗಿದ್ದಲ್ಲಿ ನಿಮಗೂ ಮೋದಿ ಸರಕಾರಕ್ಕೂ ಏನು ವ್ಯತ್ಯಾಸ? ಫೆಲೆಸ್ತೀನಿಯರ ಬಗ್ಗೆ, ಶಾಂತಿಯ ಬಗ್ಗೆ ಮೋದಿ ಸರಕಾರದ ಸೋಗಲಾಡಿತನಕ್ಕೂ, ನಿಮ್ಮ ಶಾಂತಿಪರತೆಯ ಹೇಳಿಕೆಗಳಿಗೂ ಏನು ವ್ಯತ್ಯಾಸ..? ಎರಡೂ ಮೊಸಳೆ ಕಣ್ಣೀರೇ ಅಲ್ಲವೇ?
ಒಂದೆಡೆ ನಿನ್ನೆ ನಿಮ್ಮ ಪಕ್ಷದ ವರಿಷ್ಠ ನಾಯಕಿ ಸೋನಿಯಾ ಗಾಂಧಿ ‘ದಿ ಹಿಂದೂ’ ಪತ್ರಿಕೆಯಲ್ಲಿ ನ್ಯಾಯದ ಪರವಾಗಿ ಬಲಿಷ್ಠವಾದ ಹಾಗೂ ಗಟ್ಟಿ ಧ್ವನಿಗಳು ದೇಶಾದ್ಯಂತ ಮೊಳಗಬೇಕೆಂದು ಕರೆಕೊಡುತ್ತಾರೆ. ಆದರೆ ಮತ್ತೊಂದು ಕಡೆ ನಿಮ್ಮದೇ ಸರಕಾರ ಅಂತಹ ಧ್ವನಿಯನ್ನು ಹತ್ತಿಕ್ಕುವುದು ಮಾತ್ರವಲ್ಲದೇ ಶಾಂತಿ ಸತ್ಯಾಗ್ರಹಿಗಳ ಮೇಲೆ ಕೇಸು ಜಡಿಯುತ್ತದೆ.
ಇದೆಲ್ಲ ನಿಮಗೆ ಗೊತ್ತಿದ್ದೇ, ನಿಮ್ಮ ಸೂಚನೆಯ ಮೇರೆಗೇ ನಡೆಯುತ್ತಿದೆ ಎಂಬುದರಲ್ಲಿ ಜನರಿಗೆ ಯಾವುದೇ ಸಂಶಯವಿಲ್ಲ. ಏಕೆಂದರೆ ಪ್ರತೀ ದಿನ ಬೆಳಗ್ಗೆ ರಾಜ್ಯದ ಬೆಳವಣಿಗೆಗಳ ಬಗೆಗೆ ನಿಮಗೆ ಗುಪ್ತ ಮಾಹಿತಿ ನೀಡುವ ಪೊಲೀಸ್ ವರಿಷ್ಠಾಧಿಕಾರಿಗಳು ಇಸ್ರೇಲ್ ವಿರೋಧಿ ಅಭಿವ್ಯಕ್ತಿಗೆ ಅವಕಾಶಮಾಡಿಕೊಟ್ಟರೆ ಬಲಪಂಥೀಯ ಶಕ್ತಿಗಳು ದುರ್ಲಾಭ ಮಾಡಿಕೊಂಡು ಕಾಂಗ್ರೆಸ್ ಸರಕಾರಕ್ಕೆ ಕೆಟ್ಟ ಹೆಸರು ತರುತ್ತಾರೆ ಎಂಬ ಕಲ್ಪಿತ ಬೇಹು ಮಾಹಿತಿಯನ್ನು ಕೊಡುತ್ತಾರೆ. ಅದು ಅವರ ಕೆಲಸ. ಅವರು ಮಾಡುತ್ತಾರೆ
ಆದರೆ ಮುಖ್ಯಮಂತ್ರಿಗಳಾದ ತಾವು ಆಡಳಿತದ ಮುಖ್ಯಸ್ಥರು ಮಾತ್ರವಲ್ಲ. ಒಂದು ಪಕ್ಷದ ಸಿದ್ಧಾಂತದ ಮೇರೆಗೆ ಸರಕಾರ ನಡೆಸಲು ಆಯ್ಕೆಯಾಗಿರುವ ರಾಜಕೀಯ ನಾಯಕರು. ನ್ಯಾಯ ಹಾಗೂ ಸತ್ಯದ ಪರವಾದ ಅಭಿವ್ಯಕ್ತಿಯನ್ನು ಸಮಾಜ ವಿರೋಧಿ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳಬಹುದೆಂಬ ವರದಿ ಇದ್ದಲ್ಲಿ ನೀವು ಹತ್ತಿಕ್ಕಬೇಕಿರುವುದು ಸಮಾಜ ವಿರೋಧಿ ಶಕ್ತಿಗಳನ್ನೇ ಹೊರತು ನ್ಯಾಯದ ಪರವಾದ ಗಟ್ಟಿ ಧ್ವನಿಗಳನ್ನಲ್ಲ. ಅಲ್ಲವೇ?
ಅನ್ಯಾಯದ ಜೊತೆ ಹೊಂದಾಣಿಕೆಯೆಂದರೆ
ನ್ಯಾಯಕ್ಕೆ ಬಗೆವ ದ್ರೋಹವೇ
ಆದರೆ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಸರಕಾರಗಳು ಆ ಬಗೆಯ ಜನರ ನಿರೀಕ್ಷೆಯನ್ನು ಪದೇಪದೇ ಹುಸಿಗೊಳಿಸುತ್ತಲೇ ಬಂದಿವೆ. ಪಠ್ಯ ಪರಿಷ್ಕರಣೆ ಮಾಡಿದರೂ ಹಿಂದೂ ವೋಟುಗಳು ಕೈತಪ್ಪಬಹುದೆಂಬ ಏಕೈಕ ತತ್ವಹೀನ ರಾಜಕೀಯ ಕಾರಣಕ್ಕಾಗಿ ಬಿಜೆಪಿ ಕೈಬಿಟ್ಟ ಟಿಪ್ಪುವನ್ನು ಮತ್ತೆ ಪಠ್ಯದೊಳಗೆ ನಿಮ್ಮ ಸರಕಾರ ಸರಿಯಾಗಿ ಸೇರಿಸಲಿಲ್ಲ. ‘ಭಾರತ್ ಜೋಡೊ’ ಅಭಿಯಾನದ ಭಾಗವಾಗಿ ಶ್ರೀರಂಗಪಟ್ಟಣದಲ್ಲಿ ಮೂರು ದಿನ ತಂಗಿದ್ದರೂ ಟಿಪ್ಪುವಿನ ಸಮಾಧಿಗೆ ರಾಹುಲ್ ಗಾಂಧಿ ಭೇಟಿ ಕೊಡುವುದಿಲ್ಲ. ಅನ್ಯಾಯಯುತವಾಗಿ ಬಾಬರಿ ಮಸೀದಿಯನ್ನು ಕೆಡವಿ ಅಲ್ಲಿ ರಾಮಮಂದಿರ ಕಟ್ಟುತ್ತಿರುವ ದ್ರೋಹವನ್ನು ತಮ್ಮ ಪಕ್ಷ ಖಂಡಿಸುವುದಿರಲಿ, ಮಂದಿರಕ್ಕೆ ನೀವೇ ಚಂದಾ ಸಂಗ್ರಹಿಸುತ್ತೀರಿ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಮೇಲ್ಜಾತಿ ಮಧ್ಯಮ ವರ್ಗದ ಮೀಸಲಾತಿಯನ್ನು ಸಂಭ್ರಮದಿಂದ ಸ್ವಾಗತಿಸುತ್ತೀರಿ. ತಮ್ಮ ಪಕ್ಷದ ರಾಜ್ಯಾಧ್ಯಕ್ಷರು ಸಂಸ್ಕೃತಿಯನ್ನು ಎತ್ತಿಹಿಡಿಯಬೇಕೆಂದು ಮಾತನಾಡುತ್ತಾ, ಹೆಣ್ಣು ತಾಯಿಯೇ ಆದರೂ, ಹೆಂಡತಿಯೇ ಆದರೂ, ಮಗಳೇ ಆದರೂ ಸದಾ ಪುರುಷನ ಅಧೀನದಲ್ಲಿರಬೇಕು. ಏಕೆಂದರೆ ಹೆಣ್ಣು ಚಂಚಲೆಯೆಂದು ಬಹಿರಂಗವಾಗಿ ಹೇಳುತ್ತಾ ಮನುಧರ್ಮವನ್ನು, ಹಿಂದುತ್ವವನ್ನು ಎತ್ತಿ ಹಿಡಿಯುತ್ತಾರೆ. ಒಂದೇ ಎರಡೇ..
ಕೆಡುಕಿನ ಶಕ್ತಿಗಳ ವಿರುದ್ಧ ಗಟ್ಟಿಯಾಗಿ ನಿಲ್ಲದ ಹಾಗೂ ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಅವರೊಂದಿಗೆ ಯಾವ ಮಟ್ಟದ ತಾತ್ವಿಕ ರಾಜಿಯನ್ನಾದರೂ ಮಾಡಿಕೊಳ್ಳುವ ಕಾಂಗ್ರೆಸ್ನ ಈ ಅವಕಾಶವಾದಿ ಮತ್ತು ಮೃದು ಹಿಂದುತ್ವವಾದಿ ನಿಲುವುಗಳು ದೇಶದ ಜನರಿಗೆಲ್ಲಾ ಸುಪರಿಚಿತವಾದದ್ದೇ.
ಆದರೆ ಈ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸನ್ನು ಆಯ್ಕೆ ಮಾಡಿದಾಗ ತಮ್ಮ ಪಕ್ಷ ತನ್ನ ಈ ಮೃದು ಹಿಂದುತ್ವದ ರಾಜಕೀಯದ ಚುನಾವಣಾ ಅನನುಕೂಲತೆಗಳ ಬಗ್ಗೆ ಹಾಗೂ ಜನರ ಪರವಾಗಿ ಮತ್ತು ಸಂವಿಧಾನದ ಮೌಲ್ಯಗಳ ಪರವಾಗಿ ದೃಢವಾಗಿ ನಿಂತರೆ ದೊರಕುವ ಚುನಾವಣಾ ಪ್ರಯೋಜನಗಳ ಬಗ್ಗೆಯಾದರೂ ಪಾಠ ಕಲಿತಿರಬಹುದೆಂದು ಕೆಲವರು ಪ್ರಾಮಾಣಿಕವಾಗಿ ನಿರೀಕ್ಷಿಸಿದ್ದರು.
ಹಾಗೆಯೇ ಬೇರೆ ಏನಿಲ್ಲವಾದರೂ ತಮ್ಮ ನೇತೃತ್ವದ ಸರಕಾರ ಜನರ ಅಭಿವ್ಯಕ್ತಿ ಹಕ್ಕುಗಳನ್ನೂ ರಕ್ಷಿಸುತ್ತದೆ ಎಂಬ ನಿರೀಕ್ಷೆ ಹಲವರಿಗಿತ್ತು.
ಆದರೆ ಯುದ್ಧವಿರೋಧಿ ಶಾಂತಿಯ ಧ್ವನಿಗಳನ್ನು ತಮ್ಮ ಅನುಮತಿಯೊಂದಿಗೆ ಪೊಲೀಸರು ಹತ್ತಿಕ್ಕುತ್ತಿರುವ ರೀತಿ ತುರ್ತುಸ್ಥಿತಿಯನ್ನು ನೆನಪಿಗೆ ತರುವಂತಿದೆ.
ಈಗಲಾದರೂ ತಾವು ಎಚ್ಚೆತ್ತುಕೊಂಡು, ತಮ್ಮ ನಾಯಕಿ ಸೋನಿಯಾ ಗಾಂಧಿ ಅವರು ಹೇಳಿದಂತೆ ‘‘ನ್ಯಾಯದ ಗಟ್ಟಿ ಧ್ವನಿ ಮೊಳಗಲು’’ ಅವಕಾಶ ಕೊಡುವಿರಾ?
‘ಮಾನವೀಯತೆಯೇ ಕಟಕಟೆಯಲ್ಲಿ ನಿಂತಿರುವ’ ಈ ಹೊತ್ತಿನಲ್ಲಿ ನೀವು ಯಾರ ಪರವಾಗಿ ನಿಲ್ಲುವಿರಿ..ಮುಖ್ಯಮಂತ್ರಿಗಳೇ..?