ಭಾರತೀಕರಣದ ಹೆಸರಲ್ಲಿ ಸರ್ವಾಧಿಕಾರ?
ಹೊಸ ಕ್ರಿಮಿನಲ್ ಮಸೂದೆಗಳು
ಭಾಗ-1
ಸಂಸತ್ ಅಧಿವೇಶನದ ಕಟ್ಟಕಡೆಯ ದಿನದಂದು ಗೃಹಮಂತ್ರಿ ಶಾ ಅವರು ಪೂರಕ ಕಾರ್ಯಸೂಚಿಯ ಭಾಗವಾಗಿ ಭಾರತದ ಕ್ರಿಮಿನಲ್ ಕಾಯ್ದೆಗಳ ನಿರ್ವಹಣೆಯ ಮೇಲೆ ಅಗಾಧ ಪರಿಣಾಮ ಬೀರುವ ಮೂರು ಹೊಸ ಕಾಯ್ದೆಗಳನ್ನು ಮಂಡಿಸಿಬಿಟ್ಟರು. ಈವರೆಗೆ ಭಾರತದ ಕ್ರಿಮಿನಲ್ ಅಪರಾಧಗಳ ನಿರ್ವಚನ, ನ್ಯಾಯ ಪ್ರಕ್ರಿಯೆ ಮತ್ತು ಶಿಕ್ಷಾ ಸಂಹಿತೆಗಳನ್ನು ಇಂಡಿಯನ್ ಪೀನಲ್ ಕೋಡ್ (ಐಪಿಸಿ)- ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್(ಸಿಆರ್‌ಪಿಸಿ)- ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಇಂಡಿಯನ್ ಎವಿಡೆನ್ಸ್ ಆ್ಯಕ್ಟ್- ಭಾರತೀಯ ಸಾಕ್ಷ್ಯ ಕಾಯ್ದೆಗಳು ಮಾಡುತ್ತಿದ್ದವು. ಇದರಲ್ಲಿ ಐಪಿಸಿಯು ೧೮೬೨ರಲ್ಲಿ ಜಾರಿಯಾದರೆ, ಸಿಆರ್‌ಪಿಸಿಯು ೧೮೯೮ರಲ್ಲಿ ಜಾರಿಯಾಗಿ ೧೯೭೩ ಮತ್ತೊಮ್ಮೆ ಪರಿಷ್ಕರಣೆಗೆ ಒಳಪಟ್ಟಿತ್ತು ಮತ್ತು ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ೧೮೭೨ರಲ್ಲಿ ಜಾರಿಯಾಯಿತು.
ಭಾರತದ ಇತಿಹಾಸದಲ್ಲಿ ಬ್ರಿಟಿಷರು ಬರುವ ತನಕ ಎಲ್ಲರಿಗೂ ಒಂದೇ ಕಾನೂನು ಮತ್ತು ಕಾನೂನಿನ ಆಡಳಿತದಂಥ ಆಧುನಿಕ ಹಾಗೂ ಪ್ರಜಾತಾಂತ್ರಿಕ ಪರಿಕಲ್ಪನೆ ಇರಲೇ ಇಲ್ಲ. ಇಲ್ಲಿ ಇದ್ದದ್ದು ಪ್ರಧಾನವಾಗಿ ಮನುಷ್ಯರ ನಡುವೆ ಜಾತಿ, ವರ್ಗ ಮತ್ತು ಲಿಂಗ ತಾರತಮ್ಯವನ್ನು ದೈವಿಕ ಆದೇಶವೆಂದು ಕಾಪಾಡಿಕೊಳ್ಳುತ್ತಾ ಬಂದ ಬ್ರಾಹ್ಮಣೀಯ ಮನುವಾದ.
ಹೀಗಾಗಿ ಬ್ರಿಟಿಷರು ಭಾರತಕ್ಕೆ ಪರಿಚಯಿಸಿದ ಕಾನೂನಿನ ಆಡಳಿತ, ಸಾಕ್ಷ್ಯ-ಪುರಾವೆ ಆಧಾರಿತ ಅಪರಾಧ ನಿರ್ಧಾರ ಪ್ರಕ್ರಿಯೆ, ಇನ್ನಿತ್ಯಾದಿಗಳು ಆಧುನಿಕ ಪ್ರಜಾತಂತ್ರಕ್ಕೆ ಅನುಗುಣವಾಗಿತ್ತು. ಹೀಗಾಗಿ ಸ್ವಾತಂತ್ರ್ಯಾನಂತರವೂ ಇದೇ ಕ್ರಿಮಿನಲ್ ಕಾಯ್ದೆಗಳೇ ಮುಂದುವರಿದಿದ್ದವು. ಆದರೆ ಕಾಲಕಾಲಕ್ಕೆ ಮತ್ತು ಹೊಸ ಅಗತ್ಯಗಳಿಗೆ ತಕ್ಕಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅದಕ್ಕೆ ಸಾಕಷ್ಟು ತಿದ್ದುಪಡಿಗಳನ್ನು ಮಾಡುತ್ತಾ ಬಂದಿದ್ದವು.
ಆದರೆ ಬ್ರಿಟಿಷರು ಭಾರತಕ್ಕೆ ಹೊಸ ಆಧುನಿಕ ಆಡಳಿತ ವ್ಯವಸ್ಥೆಯನ್ನು ಪರಿಚಯಿಸಿದರೂ, ತಮ್ಮ ವಸಾಹತುವಾದಿ ಆಸಕ್ತಿ ಮತ್ತು ಲೂಟಿಯನ್ನು ನಿರಾತಂಕವಾಗಿ ಮುಂದುವರಿಸಿಕೊಂಡು ಹೋಗಲು ಅಡ್ಡಿಯಾಗದಂತೆ ಮತ್ತು ಅನುಕೂಲವಾಗುವಂತೆ ಈ ಕಾಯ್ದೆಗಳನ್ನು ರೂಪಿಸಿದ್ದರು ಎಂಬುದು ಕೂಡ ಐತಿಹಾಸಿಕ ಸತ್ಯವೇ. ಹೀಗಾಗಿ ಈ ಕಾಯ್ದೆಗಳು ಮನುವಾದಕ್ಕಿಂತ ಉತ್ತಮವಾಗಿದ್ದರೂ ನೈಜ ಪ್ರಜಾತಂತ್ರದ ಆಶಯಗಳನ್ನು ಈಡೇರಿಸುವಂತೇನೂ ಇರಲಿಲ್ಲ. ಉದಾಹರಣೆಗೆ, ಬ್ರಿಟಿಷರು ಈ ದೇಶದ ಎಲ್ಲ್ ಪ್ರಜೆಗಳನ್ನು ಸಂಭಾವ್ಯ ಅಪರಾಧಿಗಳು- potential criminals- ಎಂದೇ ಭಾವಿಸಿದ್ದರು. ತಮ್ಮನ್ನು ಭಾರತೀಯರಿಗಿಂತ ಜನಾಂಗೀಯವಾಗಿ, ಸಾಂಸ್ಕೃತಿಕವಾಗಿ ಉನ್ನತ ಜನಾಂಗವೆಂದು ಭಾವಿಸಿದ್ದ ಬ್ರಿಟಿಷರು ತಾವು ಇಲ್ಲಿನ ಉನ್ನತ ಕುಲದವರು ಎಂದು ಭಾವಿಸಿದ್ದ ಬ್ರಾಹ್ಮಣಶಾಹಿಯೊಂದಿಗೆ ಸಾಮಾಜಿಕ ವಿಚಾರಗಳಲ್ಲಿ ರಾಜಿ ಮಾಡಿಕೊಂಡರು. ಈ ವಿಷಯಗಳನ್ನು ಅಂಬೇಡ್ಕರ್ ಅವರು ತಮ್ಮ “The Untouchables and Pax Britanica” ಎಂಬ ಪ್ರಬಂಧದಲ್ಲಿ ಬಹಳ ವಿವರವಾಗಿ ವಿಶ್ಲೇಷಿಸುತ್ತಾರೆ. ಇದರ ಜೊತೆಗೆ ಅಶ್ಲೀಲತೆ, ಪಾತಿವ್ರತ್ಯ, ಗಂಡು-ಹೆಣ್ಣಿನ ಸಂಬಂಧ, ಹೆಣ್ಣಿನ ದೈಹಿಕ ಸ್ವಾತಂತ್ರ್ಯ ..ಇನ್ನಿತ್ಯಾದಿ ಹಲವಾರು ಸಾಮಾಜಿಕ ವಿಷಯಗಳಲ್ಲಿ ಆಳುವ ಬ್ರಿಟಿಷರ ಆಗಿನ ಕಾಲದ ಪೂರ್ವಗ್ರಹಗಳನ್ನು ಅವರು ಕ್ರಿಮಿನಲ್ ಕಾನೂನುಗಳಲ್ಲಿ ಮುಂದುವರಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಭುತ್ವ ಮತ್ತು ನಾಗರಿಕರ ಸಂಬಂಧಗಳನ್ನು ನಿರ್ವಚಿಸುವಾಗ ಅದು ಸಂಪೂರ್ಣ ವಸಾಹತು ಧೋರಣೆಗೆ ತಕ್ಕಂತೆ ಕಾಯ್ದೆಯನ್ನು ರೂಪಿಸಿತ್ತು. ಹೀಗಾಗಿ ಸರಕಾರದ ವಿರುದ್ಧ ಅಸಮಾಧಾನ ಹುಟ್ಟಿಸುವ ಹಾಗೂ ಸಾಮ್ರಾಜ್ಯವನ್ನು ಬುಡಮೇಲು ಮಾಡುವ ಚಿಂತನೆ ಮತ್ತು ಎಲ್ಲಾ ಬಗೆಯ ಕ್ರಿಯೆಗಳನ್ನು ಸೆಡಿಷನ್-ರಾಜದ್ರೋಹ ಎಂದು ಪರಿಗಣಿಸಿ ತೀವ್ರವಾಗಿ ಶಿಕ್ಷಿಸುವ ಕಾಯ್ದೆಗಳನ್ನು ಕ್ರಿಮಿನಲ್ ಕಾಯ್ದೆಗಳಲ್ಲಿ ಪರಿಚಯಿಸಿತ್ತು.
ಹೀಗೆ, ಬ್ರಿಟಿಷರು ಜಾರಿ ಮಾಡಿದ ಐಪಿಸಿ, ಸಿಆರ್‌ಪಿಸಿ ಮತ್ತು ಎವಿಡೆನ್ಸ್ ಆ್ಯಕ್ಟ್‌ಗಳು ಭಾರತವನ್ನು ಮೂರು ಸಾವಿರ ವರ್ಷಗಳಿಂದ ಆಳುತ್ತಾ ಬಂದ ಸಾಮಾಜಿಕ-ರಾಜಕೀಯ ಕಾನೂನಾಗಿದ್ದ ಬ್ರಾಹ್ಮಣೀಯ ಮನುವಾದಕ್ಕಿಂತ ಒಂದಷ್ಟು ಉತ್ತಮವೇ ಆಗಿದ್ದರೂ, ಬ್ರಿಟಿಷರ ವಸಾಹತುಶಾಹಿ ಮತ್ತು ದುರಭಿಮಾನಿ ಧೋರಣೆಗಳೂ ಅವುಗಳಲ್ಲಿ ಅಂತರ್ಗತವಾಗಿ ಅಡಕವಾಗಿತ್ತು. ಅದು ಯಾವುದು ಅಪರಾಧ? ಯಾವ ಅಪರಾಧಕ್ಕೆ ಎಷ್ಟು ಶಿಕ್ಷೆ? ಯಾವ ಅಪರಾಧಗಳಿಗೆ ಯಾವ ಬಗೆಯ ವಿಚಾರಣೆ? ಯಾವುದು ಸಾಕ್ಷಿ ಯಾವುದು ಅಲ್ಲ ಇನ್ನಿತ್ಯಾದಿ ನಿರ್ವಚನಗಳಲ್ಲಿ ವ್ಯಕ್ತವಾಗುತ್ತಾ ಬಂದಿದೆ.
ಸ್ವಾತಂತ್ರ್ಯಾನಂತರದಲ್ಲಿ ಈ ಕ್ರಿಮಿನಲ್ ಕಾಯ್ದೆಗಳಲ್ಲಿ ಹಲವಾರು ಬದಲಾವಣೆಗಳನ್ನು, ತಿದ್ದುಪಡಿಗಳನ್ನು, ಸೇರ್ಪಡೆಗಳನ್ನು ಮಾಡುತ್ತಾ ಬರಲಾಗಿದ್ದರೂ ಹಲವಾರು ಲಾ ಕಮಿಶನ್‌ಗಳು ಸಲಹೆ ಮಾಡುತ್ತಾ ಬಂದಂತೆ ಎಲ್ಲಾ ಕ್ರಿಮಿನಲ್ ಕಾನೂನುಗಳು ಇನ್ನಷ್ಟು ಪ್ರಜಾತಾಂತ್ರೀಕರಣವಾಗುವ ಮತ್ತು ಕಾಲದ ಅಗತ್ಯಗಳನ್ನು ಪೂರೈಸುವ ಅಗತ್ಯವಿದ್ದೇ ಇತ್ತು. ಆದರೆ ಅಂತಹ ಆಮೂಲಗ್ರ ಬದಲಾವಣೆಗಳನ್ನು ಒಂದು ನೈಜ ಪ್ರಜಾತಂತ್ರ ದೇಶ ಮತ್ತು ಸರಕಾರ ಜನರೊಂದಿಗೆ ವಿಸ್ತೃತವಾದ ಸಮಾಲೋಚನೆ ಹಾಗೂ ಮುಕ್ತ ಮನಸ್ಸುಗಳೊಂದಿಗೆ ಸ್ವೀಕರಿಸುವ ಮನೋಭಾವದೊಂದಿಗೆ ಮಾತ್ರ ಮಾಡಬೇಕಿತ್ತು.
ಆದರೆ ಮೊನ್ನೆ ಮೋದಿ ಸರಕಾರ ಐಪಿಸಿ, ಸಿಆರ್‌ಪಿಸಿ ಮತ್ತು ಎವಿಡೆನ್ಸ್ ಆ್ಯಕ್ಟ್‌ಗಳಿಗೆ ಪರ್ಯಾಯವಾಗಿ ಮುಂದಿಟ್ಟಿರುವ ಭಾರತೀಯ ಶಿಕ್ಷಾ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಎವಿಡೆನ್ಸ್ ಬಿಲ್‌ಗಳು ಭಾರತೀಯ ಕ್ರಿಮಿನಲ್ ಕಾಯ್ದೆಗಳ ಪ್ರಜಾತಾಂತ್ರೀಕರಣದ ಉದ್ದೇಶವನ್ನು ಹೊಂದಿದೆಯೋ? ಅಥವಾ ಅದರ ಹೆಸರಿನಲ್ಲಿ ಕ್ರಿಮಿನಲ್ ಕಾಯ್ದೆಗಳ ಬ್ರಾಹ್ಮಣೀಕರಣ ಹಾಗೂ ಪ್ರಭುತ್ವದ ಮತ್ತಷ್ಟು ಸರ್ವಾಧಿಕಾರವನ್ನು ಸಾಧಿಸುವ ಉದ್ದೇಶವನ್ನು ಹೊಂದಿದೆಯೋ?
ಈ ಮೂರೂ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸುತ್ತಾ ಗೃಹಮಂತ್ರಿ ಶಾ ಅವರು ಈ ಹೊಸ ಕಾಯ್ದೆಗಳಿಂದ ಕಳೆದ ೧೬೦ ವರ್ಷಗಳಿಂದ ಭಾರತವನ್ನು ಆಳುತ್ತಿದ್ದ ಬ್ರಿಟಿಷ್ ಕಾಲದ ವಸಾಹತು ಕಾನೂನುಗಳಿಂದ ಸಂಪೂರ್ಣವಾಗಿ ಮುಕ್ತಗೊಂಡು ಭಾರತೀಕರಣಗೊಳ್ಳುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಅದರೆ ಈ ಮಸೂದೆಗಳನ್ನು ಮೇಲ್ನೋಟಕ್ಕೆ ಗಮನಿಸಿದರೂ ಅದರ ಉದ್ದೇಶ ಮತ್ತು ಪರಿಣಾಮ ಎರಡೂ ಕೂಡ ಅದಕ್ಕೆ ತದ್ವಿರುದ್ಧವಾಗಿದೆ ಎಂಬುದು ಅರ್ಥವಾಗುತ್ತದೆ.
ಆಯ್ದ ಸಮಾಲೋಚನೆ-ವಸಾಹತು ತಂತ್ರವೋ? ಪ್ರಜಾತಂತ್ರವೋ?
ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ ರೀತಿಯಲ್ಲೇ ಎದ್ದು ಕಾಣುವುದು ಸಮಾಲೋಚನಾ ಪ್ರಜಾತಂತ್ರವಲ್ಲ. ಹೇರಿಕೆಯ ವಸಾಹತುವಾದಿ ದುರಭಿಮಾನ. ವಸಾಹತುಶಾಹಿ ಧೋರಣೆಯು ಪ್ರಜೆಗಳನ್ನು ಮಾಲಕರೆಂದು, ಸರಕಾರವನ್ನು ಜನರ ಸೇವಕ ಎಂದು ಪರಿಗಣಿಸುವುದಿಲ್ಲ. ಬದಲಿಗೆ ಪ್ರಜೆಗಳು ಅಜ್ಞಾನಿಗಳೆಂದೂ ಅವರ ಪರವಾಗಿ ತನಗೆ ಎಲ್ಲಾ ತೀರ್ಮಾನ ಮಾಡುವ ಹಕ್ಕಿದೆಯೆಂದು ಭಾವಿಸುತ್ತದೆ. ಒಂದು ಚುನಾವಣಾ ಪ್ರಜಾತಂತ್ರದಲ್ಲಿ ಹೀಗಾಗಬಾರದು. ಅಲ್ಲಿ ಅನಿವಾರ್ಯವಾಗಿ ಕೆಲವು ರೀತಿ ರಿವಾಜುಗಳನ್ನು ಪಾಲಿಸುವುದು ಸಂವಿಧಾನದ ಭಾಗವಾಗಿರುವುದರಿಂದ ಈವರೆಗೆ ಸರಕಾರಗಳು ಕೆಲವನ್ನಾದರೂ ಪಾಲಿಸುತ್ತಿದ್ದವು. ಆಳುವ ಸರಕಾರ ಯಾವುದಾದರೂ ಒಂದು ಮಸೂದೆ ಪ್ರಸ್ತಾಪಿಸುವ ಮುನ್ನ ಸಂಬಂಧಪಟ್ಟ ಎಲ್ಲರ ಜೊತೆಗೆ, ವಿಶೇಷವಾಗಿ ವಿರೋಧ ಪಕ್ಷಗಳ ಜೊತೆಗೆ, ಪರಿಣಿತರ ಜೊತೆಗೆ, ವಿಸ್ತೃತವಾಗಿ ಚರ್ಚಿಸಿ ಆ ನಂತರ ಮಸೂದೆಯ ಕರಡನ್ನು ತಯಾರಿಸುತ್ತಿತ್ತು. ಆ ನಂತರ ಅದನ್ನು ವಿಸ್ತೃತವಾದ ಚರ್ಚೆಗಾಗಿ ಎಲ್ಲ ಪಕ್ಷದ ಸದಸ್ಯರು ಇರುವಂತಹ ಸಬ್ಜೆಕ್ಟ್ ಕಮಿಟಿಗೆ ಒಪ್ಪಿಸುತ್ತಿತ್ತು. ಆ ಸಮಿತಿ ಕೊಟ್ಟ ವರದಿಯ ಮೇರೆಗೆ ಮಸೂದೆಯಲ್ಲಿ ತಿದ್ದುಪಡಿ ಮಾಡಿದ ಕರಡನ್ನು ಸಂಸತ್ತಿನಲ್ಲಿ ಚರ್ಚೆಗೆ ಬಿಡುತ್ತಿತ್ತು. ಸಾಧ್ಯವಾದಷ್ಟು ಹೆಚ್ಚು ಜನರು ಸಮ್ಮತಿಸುವ ರೀತಿಯಲ್ಲಿ ಮಸೂದೆ ತಿದ್ದುಪಡಿಯಾಗಿ ಕಾಯ್ದೆಯಾಗುತ್ತಿತ್ತು. ಕೆಲವು ಪ್ರಜಾತಾಂತ್ರಿಕ ದೇಶಗಳಲ್ಲಿ ಇಂತಹ ವಿಷಯಗಳಲ್ಲಿ ಸಂಸತ್ತಿನಾಚೆಗೆ ಜನಮತಗಣನೆಯನ್ನು ಮಾಡುತ್ತಾರೆ. ಇದು ನೈಜ ಪ್ರಜಾತಾಂತ್ರಿಕ ವಿಧಾನ.
ಆದರೆ ಮೋದಿ ಸರಕಾರ ಮಾಡಿದ್ದೇನು? ಮೂರು ಕ್ರಿಮಿನಲ್ ಕಾಯ್ದೆಗಳಿಗೆ ಆಮೂಲಾಗ್ರ ತಿದ್ದುಪಡಿ ತರಲು ಕೋವಿಡ್ ಕಾಲದಲ್ಲಿ ಇಡೀ ದೇಶವನ್ನು ಮೋದಿ ಸರಕಾರ ಲಾಕ್‌ಡೌನ್ ಮಾಡಿದ್ದಾಗ ೨೦೨೦ರ ಮೇ ತಿಂಗಳಲ್ಲಿ ದಿಲ್ಲಿಯ ನ್ಯಾಶನಲ್ ಸ್ಕೂಲ್‌ನ ಮಾಜಿ ವೈಸ್ ಚಾನ್ಸಲರ್ ರಣಬೀರ್ ಸಿಂಗ್ ಅವರ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿ ನೇಮಕವಾಯಿತು. ಅದರಲ್ಲಿ ಮುಖ್ಯ ಜವಾಬ್ದಾರಿ ಸಂಸದ ಮತ್ತು ವಕೀಲ ಮಹೇಶ್ ಜೇಠ್ಮಲಾನಿ ಅವರದಾಗಿತ್ತು. ಅದರಲ್ಲಿ ಒಬ್ಬ ಮಹಿಳೆಯೂ ಇರಲಿಲ್ಲ. ಪಕ್ಷ, ರಾಜ್ಯ, ಪ್ರದೇಶ, ಸಮುದಾಯಗಳ ಪ್ರಾತಿನಿಧ್ಯವಾಗಲೀ, ಕ್ರಿಮಿನಲ್ ಕಾನೂನಿಗೆ ಸಂಬಂಧಪಟ್ಟ ವಿವಿಧ ಬಗೆಯ ಪರಿಣಿತರ ಪ್ರಾತಿನಿಧ್ಯವೂ ಇರಲಿಲ್ಲ. ಕನಿಷ್ಠ ಈ ಸಮಿತಿ ಯಾವುದೇ ವಿಸ್ತೃತವಾದ ಸಮಾಲೋಚನೆ ನಡೆಸಿದ ಬಗ್ಗೆಯೂ ಯಾವುದೇ ವಿವರಗಳನ್ನು ಗೃಹಮಂತ್ರಿ ಸಂಸತ್ತಿನಲ್ಲಿ ನೀಡಲಿಲ್ಲ. ಹೀಗಾಗಿ ಪ್ರಾರಂಭದಲ್ಲಿ ಈ ಸಮಿತಿಯು ತನ್ನ ಸೀಮಿತ ಪ್ರಾತಿನಿಧ್ಯ ಮತ್ತು ಅಸಮತೋಲನ ಹಾಗೂ ನಿರ್ದಿಷ್ಟ ರಾಜಕೀಯ ಪ್ರಭಾವಗಳ ಕುರಿತು ತೀವ್ರವಾದ ಆಕ್ಷೇಪಣೆಗೆ ಗುರಿಯಾಗಿತ್ತು.
ಕೊನೆಗೆ ಈ ಸಮಿತಿ ಯಾವಾಗ ವರದಿ ಕೊಟ್ಟಿತು, ಯಾರ್ಯಾರನ್ನು ಸಂಪರ್ಕಿಸಿತ್ತು ಇನ್ನಿತರ ಯಾವ ಮಾಹಿತಿಗಳೂ ಸಾರ್ವಜನಿಕರಿಗೆ ಲಭ್ಯವಿರಲಿಲ್ಲ.
ಹಾಲಿ ಸಂಸತ್ ಅಧಿವೇಶನದಲ್ಲಂತೂ ಮೋದಿ ಸರಕಾರ ಮಣಿಪುರದ ವಿಷಯದಲ್ಲಿ ಸರಕಾರ ತನ್ನ ಅಮಾನವೀಯ, ದುರಹಂಕಾರಿ ಹಾಗೂ ಪ್ರಜಾತಂತ್ರ ವಿರೋಧಿ ನಡವಳಿಕೆಗೆ ತೀವ್ರ ಟೀಕೆಗೆ ಗುರಿಯಾಗಿತ್ತು. ಮಣಿಪುರದ ಬಗ್ಗೆ ಚರ್ಚೆಗೆ ಒಪ್ಪದೆ ಅಧಿವೇಶನ ಮುಗಿಯುವ ದಿನ ಬಂದಾಗ ಗೃಹಮಂತ್ರಿ ಶಾ ದಿಢೀರನೇ ಈ ಮೂರು ಮಸೂದೆಗಳನ್ನು ಮಂಡಿಸಿದರು. ಅದರ ಬಗ್ಗೆ ಯಾವುದೇ ಚರ್ಚೆಗಳು ಕೊನೆಯ ದಿನ ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಒಂದು ರಹಸ್ಯ ಕಾರ್ಯಾಚರಣೆಯ ರೀತಿಯಲ್ಲಿ ಈ ಮಸೂದೆಯನ್ನು ಪ್ರಸ್ತಾಪಿಸಿದ್ದೇಕೆ? ಇದರ ಹಿಂದಿನ ಸರಕಾರದ ದುರುದ್ದೇಶವೇನು? ಇದು ಪ್ರಜಾತಾಂತ್ರಿಕ ಸರಕಾರಕ್ಕೆ ತಕ್ಕುದಾದ ನಡಾವಳಿಯೋ? ವಸಾಹತುಶಾಹಿ ದುರಹಂಕಾರವನ್ನು ಪ್ರದರ್ಶಿಸುವ ನಡಾವಳಿಯೋ?
ಸದ್ಯಕ್ಕೆ ಈ ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಯ ಪರ್ಯಾಲೋಚನೆಗೆ ವರ್ಗಾಯಿಸಲಾಗಿದೆ. ಅಷ್ಟರಮಟ್ಟಿಗೆ ಅದು ಸಮಾಧಾನಕರ. ಆದರೆ ಅದಕ್ಕೆ ಮುಂದಿನ ಚಳಿಗಾಲದ ಅಧಿವೇಶನದ ತನಕ ಮಾತ್ರ ಸಮಯ ನೀಡಲಾಗಿದೆ. ಅಲ್ಲಿ ಇತರ ಪಕ್ಷಗಳು ವ್ಯಕ್ತಪಡಿಸುವ ಸಲಹೆ, ಭಿನ್ನಾಭಿಪ್ರಾಯಗಳನ್ನು ಮೋದಿ ಸರಕಾರ ಒಳಗೊಳ್ಳುತ್ತದೆಯೇ? ಸಂಸತ್ತಿನಲ್ಲಿ ಮಸೂದೆಯ ಬಗ್ಗೆ ಸಮಗ್ರ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆಯೇ? ಅದಕ್ಕೆ ಮುಂಚೆ ದೇಶದ ಜನರ ಸಮಗ್ರ ಬದುಕಿನ ಮೇಲೆ ದೀರ್ಘಾವಧಿ ಪರಿಣಾಮ ಬೀರುವ ಈ ಮಸೂದೆಯ ಬಗ್ಗೆ ಸಂಬಂಧ ಪಟ್ಟವರೆಲ್ಲರ ಜೊತೆ ಸಾರ್ವಜನಿಕ ಚರ್ಚೆಯನ್ನು ಮಾಡುವುದೇ?
ಈವರೆಗಿನ ಮೋದಿ ಸರಕಾರದ ಸಂಸದೀಯ ನಡಾವಳಿಗಳನ್ನು ಗಮನಿಸಿದ ಯಾರಿಗೂ ಅದರ ಬಗೆ ಯಾವುದೇ ವಿಶ್ವಾಸ ಮೂಡುವುದಿಲ್ಲ.ಮೋದಿ ಸರಕಾರದಲ್ಲಿ ಯಾವುದೇ ಮಸೂದೆಯ ಬಗ್ಗೆ ಒಂದು ಬಾರಿಯೂ ಪರಿಣಾಮಕಾರಿ ಚರ್ಚೆಯಾಗುವಷ್ಟು ಅವಕಾಶವನ್ನು ನೀಡಿಯೇ ಇಲ್ಲ. ಆದ ಚರ್ಚೆಗಳ ಬಗ್ಗೆ ಒಳಗೊಳ್ಳುವ ಧೋರಣೆಯನ್ನು ಪಾಲಿಸಿಲ್ಲ. ಲೋಕಸಭೆಯಲ್ಲಿ ತನಗಿರುವ ಬಹುಮತ ಮತ್ತು ರಾಜ್ಯಸಭೆಯಲ್ಲಿ ದುರ್ಬಲ ಹಾಗೂ ಅವಕಾಶವಾದಿ ವಿರೋಧ ಅಥವಾ ತಟಸ್ಥ ಪಕ್ಷಗಳ ಮೇಲೆ ಆಮಿಷ ಹಾಗೂ ಭಯದ ಒತ್ತಡ ಹಾಕಿ ಬಹುಮತವನ್ನು ರೂಢಿಸಿಕೊಳ್ಳುವ ವಿಧಾನವನ್ನೇ ಅದು ಅನುಸರಿಸುತ್ತಾ ಬಂದಿದೆ. ಇವೆಲ್ಲವೂ ಸರ್ವಾಧಿಕಾರಿ ಧೋರಣೆಯೇ ಆಗಿದೆ. ಒಂದು ಸರ್ವಾಧಿಕಾರಿ ಸರಕಾರ ಪ್ರಜಾತಾಂತ್ರಿಕ ತಿದ್ದುಪಡಿಗಳನ್ನು ತರುವುದಿಲ್ಲ.
ಒಟ್ಟಿನಲ್ಲಿ ೨೦೨೪ರ ಚುನಾವಣೆಗೆ ಮುನ್ನ ತಾನು ವಸಾಹತುಶಾಹಿ ಕ್ರಿಮಿನಲ್ ಕಾಯ್ದೆಗಳನ್ನು ಬದಲಾಯಿಸಿ ಭಾರತೀಕರಣಗೊಳಿಸಿದೆ ಎಂಬ ಬೃಹತ್ ಪ್ರಚಾರವನ್ನು ಮಾಡಿಕೊಳ್ಳುವ ಚುನಾವಣಾ ಅಸ್ತ್ರವನ್ನಾಗಿ ಮೋದಿ ಸರಕಾರ ಈ ತಿದ್ದುಪಡಿಗಳನ್ನು ಬಳಸಿಕೊಳ್ಳುತ್ತಿದೆ.
ಇದು ಒಂದು ರೀತಿ ನೋಟು ನಿಷೇಧದಂತೆ. ಮೋದಿ ಸರಕಾರ ಆ ಮೂಲಕ ತಾನು ಕಪ್ಪುಹಣದ ವಿರುದ್ಧ ಬೃಹತ್ ಯುದ್ಧ ಸಾರಿದ್ದೇನೆಂಬ ಜಾನಪದವನ್ನು ತನ್ನ ಚಮಚಾ ಮಾಧ್ಯಮಗಳ ಮೂಲಕ ಸೃಷ್ಟಿಸಿ ಚುನಾವಣೆಗಳನ್ನು ಗೆದ್ದಿತು. ಆದರೆ ಅದರಿಂದ ಯಾವ ಲಾಭವೂ ಆಗಲಿಲ್ಲ. ಆದರೆ ದೇಶದ ಆರ್ಥಿಕತೆ ಮತ್ತು ಬಡಮಧ್ಯಮ ವರ್ಗದವರ ಬದುಕು ದಿಕ್ಕೆಟ್ಟಿತು.
ಈಗಲೂ ತಾನು ಕ್ರಿಮಿನಲ್ ಕಾಯ್ದೆಗಳಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದೆಯೆಂದು ಸರಕಾರ ಹೇಳಿಕೊಳ್ಳುತ್ತಿದೆಯಷ್ಟೆ. ಅದು ಎಷ್ಟರ ಮಟ್ಟಿಗೆ ನಿಜ..?
ಗೇಣುದ್ದ ಮಾರ್ಪಾಡು- ಆಳುದ್ದ ಪ್ರಚಾರ
ಉದಾಹರಣೆಗೆ ಹಾಲಿ ಹಳೆಯ ಸಿಆರ್‌ಪಿಸಿಯಲ್ಲಿ ೫೬ ಸ್ವರೂಪದ ೪೮೪ ಸೆಕ್ಷನ್‌ಗಳಿವೆ. ಈಗ ಅದರ ಬದಲಿಗೆ ತರಲಾಗುತ್ತಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಲ್ಲಿ ೫೩೩ ಸೆಕ್ಷನ್‌ಗಳಿವೆ. ಶಾ ಅವರು ಹಳೆಯ ಸಿಆರ್‌ಪಿಸಿಯಲ್ಲಿದ್ದ ೯ ಸೆಕ್ಷನ್‌ಗಳನ್ನು ಸಂಪೂರ್ಣವಾಗಿ ತೆಗೆದು, ೯ ಸೆಕ್ಷನ್‌ಗಳನ್ನು ಹೊಸದಾಗಿ ಸೇರಿಸಿದ್ದಾರೆ. ಉಳಿದಂತೆ ಸುಮಾರು ೧೬೦ ಸೆಕ್ಷನ್‌ಗಳಿಗೆ ಸಣ್ಣ ಪುಟ್ಟ ತಿದ್ದುಪಡಿಗಳನ್ನು ಮಾಡಿದ್ದಾರೆ. ಅಂದರೆ ಸರಕಾರದ ಹೇಳಿಕೆಯನ್ನು ಗಮನಿಸಿದರೆ ಹಳೆಯ ಸಿಆರ್‌ಪಿಸಿಯ ಸುಮಾರು ಶೇ.೯೦ ಭಾಗವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಅದೇ ರೀತಿ ಹಳೆಯ ಐಪಿಸಿಯಲ್ಲಿ ೫೧೧ ಸೆಕ್ಷನ್‌ಗಳಿದ್ದವು. ಈಗ ಅದರ ಬದಲಿಗೆ ಪ್ರಸ್ತಾಪಿಸಲಾಗಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿ ೩೫೬ ಸೆಕ್ಷನ್‌ಗಳು ಮಾತ್ರ ಇವೆ. ಪ್ರತ್ಯೇಕವಾಗಿ ಸೂಚಿಸಲಾಗಿದ್ದ ಹಲವರು ಅಪರಾಧಗಳನ್ನು ಒಂದೇ ಬಗೆಯ ಅಪರಾಧಗಳಡಿ ತಂದಿರುವುದು ಈ ಇಳಿಕೆಗೆ ಪ್ರಧಾನ ಕಾರಣ. ಅದನ್ನು ಬಿಟ್ಟಂತೆ ಸರಕಾರವೇ ಹೇಳಿರುವ ಪ್ರಕಾರ ಹಳೆಯ ಐಪಿಸಿಯಿಂದ ಸಂಪೂರ್ಣವಾಗಿ ತೆಗೆದುಹಾಕಿರುವುದು ಕೇವಲ ೨೮ ಸೆಕ್ಷನ್ ಗಳನ್ನು ಮತ್ತು ಹೊಸದಾಗಿ ಸೇರಿಸಿರುವುದು ಕೇವಲ ೮ ಸೆಕ್ಷನ್‌ಗಳನ್ನು. ಇನ್ನು ಸುಮಾರು ೧೭೫ ಸೆಕ್ಷನ್‌ಗಳಿಗೆ ಸಣ್ಣ ಪುಟ್ಟ ತಿದ್ದುಪಡಿಗಳನ್ನು ಮಾಡಲಾಗಿದೆ.
ಹಾಗೆಯೇ ಹಳೆಯ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್‌ನಲ್ಲಿ ೧೬೬ ಸೆಕ್ಷನ್‌ಗಳಿದ್ದವು. ಈಗ ಅದರ ಬದಲಿಗೆ ತಂದಿರುವ ಭಾರತೀಯ ಸಾಕ್ಷ್ಯ ಬಿಲ್‌ನಲ್ಲಿ ೧೭೦ ಸೆಕ್ಷನ್‌ಗಳಿವೆ. ಸರಕಾರವೇ ಹೇಳಿರುವ ಪ್ರಕಾರ ಹಳೆಯ ಕಾಯ್ದೆಯಿಂದ ಸಂಪೂರ್ಣವಾಗಿ ತೆಗೆದಿರುವುದು ಕೇವಲ ಐದು ಸೆಕ್ಷನ್ ಗಳನ್ನು ಮಾತ್ರ. ಒಂದನ್ನು ಹೊಸದಾಗಿ ಸೇರಿಸಲಾಗಿದೆ ಹಾಗೂ ೨೩ ಸೆಕ್ಷನ್‌ಗಳಿಗೆ ಸಣ್ಣ ಪುಟ್ಟ ತಿದ್ದುಪಡಿಗಳನ್ನು ಮಾಡಲಾಗಿದೆ.
ಅಂದರೆ ಸಾರಾಂಶದಲ್ಲಿ ನೋಡಿದರೆ ಮೋದಿ ಸರಕಾರ ಹಳೆಯ ಐಪಿಸಿ, ಸಿಆರ್‌ಪಿಸಿ ಮತ್ತು ಎವಿಡೆನ್ಸ್ ಆ್ಯಕ್ಟ್‌ಗಳಲ್ಲಿ ಶೇ. ೯೦ಕ್ಕೂ ಹೆಚ್ಚು ಭಾಗವನ್ನು ಹಾಗೆಯೇ ಉಳಿಸಿಕೊಂಡಿದೆ. ಆದರೂ ತಾನು ವಸಾಹತು ಕಾನೂನುಗಳನ್ನು ಸಂಪೂರ್ಣವಾಗಿ ಬದಲಾಯಿಸಿ ಭಾರತೀಕರಿಸಿದ್ದೇನೆ ಎಂದು ಕೊಚ್ಚಿಕೊಳ್ಳುತ್ತಿದೆ. ನೋಟು ನಿಷೇಧ ಮಾಡಿದಾಗ ಕೊಚ್ಚಿಕೊಂಡಂತೆ!
ಭಾರತೀಕರಣವೆಂದರೆ ಸಂಸ್ಕೃತೀಕರಣವೇ?
ಮೋದಿ ಸರಕಾರ ಇಂಡಿಯನ್ ಪೀನಲ್ ಕೋಡ್ ಎಂಬ ಹೆಸರಿದ್ದ ಕಾಯ್ದೆಗೆ ಈಗ ಭಾರತೀಯ ನ್ಯಾಯ ಸಂಹಿತೆ ಎಂಬ ಸಂಸ್ಕೃತ/ಹಿಂದಿ ಹೆಸರಿಟ್ಟಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್‌ಗೆ- ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಎದು ಹೆಸರಿಟ್ಟಿದೆ ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಗೆ ಭಾರತೀಯ ಸಾಕ್ಷ್ಯ ಬಿಲ್ ಎಂದು ಹೆಸರಿಟ್ಟಿದೆ.
ಇಂಡಿಯನ್ ಎಂಬುದಕ್ಕೆ ಬದಲಾಗಿ ಭಾರತೀಯ ಎಂದು ಹೆಸರಿಟ್ಟರೆ ಕಾಯ್ದೆಗಳು ನಿರ್ವಸಹತೀಕರಣಗೊಳ್ಳುವವೇ? ಅಷ್ಟು ಮಾತ್ರವಲ್ಲ. ಈವರೆಗೆ ಸಂವಿಧಾನದ ನಿಯಮದಂತೆ ಎಲ್ಲಾ ರಾಷ್ಟ್ರೀಯ ಕಾಯ್ದೆಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಒದಗಿಸಲಾಗುತ್ತಿತ್ತು. ಇಂಗ್ಲಿಷ್‌ನ ಕಾಯ್ದೆಗಳಿಗೆ ಇಂಗ್ಲಿಷ್ ಹೆಸರೇ ಉಳಿಸಿಕೊಳ್ಳಲಾಗುತ್ತಿತ್ತು. ಹಿಂದಿಯಲ್ಲಿ ಅದರ ಅನುವಾದವನ್ನು ಸಂಸ್ಕೃತಮಯ ಹಿಂದಿಯಲ್ಲಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮೊತ್ತ ಮೊದಲ ಬಾರಿಗೆ ಮೋದಿ ಸರಕಾರ ಇಂಗ್ಲಿಷ್‌ನಲ್ಲೂ ಕಾಯ್ದೆಯ ಹೆಸರನ್ನು ಸಂಸ್ಕೃತ/ಹಿಂದಿಯಲ್ಲೇ ನೀಡಿದೆ. ಇದೇ ಮೋದಿ ಸರಕಾರ ಕೊಚ್ಚಿಕೊಳ್ಳುತ್ತಿರುವ ಭಾರತೀಕರಣ. ಅವರ ಪ್ರಕಾರ ಭಾರತೀಕರಣವೆಂದರೆ ಸಂಸ್ಕೃತೀಕರಣವೇ ಹೊರತು ಬೇರೇನಿಲ್ಲ. ಅದೂ ಹಿಂದಿ ಮತ್ತು ಸಂಸ್ಕೃತವನ್ನು ಭಾರತದ ಇತರ ಭಾಷೆಗಳಿಗಿಂತ ಉನ್ನತ ಸ್ಥಾನಕ್ಕೆ ಏರಿಸುವ ಅವರ ಬ್ರಾಹ್ಮಣೀಯ ಹುನ್ನಾರದ ಭಾಗವಾಗಿದೆ. ಏಕೆಂದರೆ ಈ ಕಾಯ್ದೆಯ ಸಂಸ್ಕೃತ/ಹಿಂದಿ ಹೆಸರನ್ನು ಈಗ ಹಿಂದಿಯೇತರ ಭಾಷಿಕರೂ ಅವರವರ ರಾಜ್ಯಗಳಲ್ಲಿ ದಿನನಿತ್ಯ ಕೋರ್ಟುಗಳಲ್ಲಿ ಜಪಿಸಬೇಕಾಗುತ್ತದೆ. ಇದು ಹಿಂದಿ ಹೇರಿಕೆಯ ವಸಾಹತುಶಾಹಿ ನೀತಿಯೇ ಹೊರತು ಮತ್ತೇನಲ್ಲ. ಹಾಗೆಯೇ ಸಂಸ್ಕೃತೀಕರಣದ ಸಾಂಸ್ಕೃತಿಕ ರಾಜಕಾರಣವೂ ಈ ಹೆಸರಿನಲ್ಲಿದೆ. ಈ ಸಂಸ್ಕೃತೀಕರಣವನ್ನೇ ಮೊದಿ ಸರಕಾರ ಭಾರತೀಕರಣವೆಂದೂ, ನಿರ್ವಸಾಹತೀಕರಣವೆಂದು ಕೊಚ್ಚಿಕೊಳ್ಳುತ್ತಿದೆ.
ಆದರೆ ಭಾರತೀಕರಣದ ಹುಸಿ ಅಬ್ಬರದ ಪ್ರಚಾರದ ನಡುವೆ ಸಾರದಲ್ಲಿ ಮಾತ್ರ ವಸಾಹತುಶಾಹಿ ಧೋರಣೆಯ ಕಾನೂನುಗಳನ್ನು ಇನ್ನಷ್ಟು ಕರಾಳಗೊಳಿಸಿದೆ.