ಜ್ಞಾನವಾಪಿ ಮಸೀದಿ: ಮತ್ತೊಂದು ಮಸೀದಿ ಒಡೆಯಲು ಸುಪ್ರೀಂ ಕೋರ್ಟ್ ನ ಸಮ್ಮತಿಯೇ?
ಭಾರತದ ಸೆಕ್ಯುಲರ್ ರಾಜಕಾರಣದ ವೈಫಲ್ಯ ಮತ್ತು ಸಂಘ ಪರಿವಾರದ ಫ್ಯಾಶಿಸ್ಟ್ ರಾಜಕಾರಣದ ವಿಜಯಕ್ಕೆ ದೊಡ್ಡ ಉದಾಹರಣೆ 1992 ರ ಡಿಸೆಂಬರ್ 6 ರಂದು ನಡೆದ ಬಾಬರಿ ಮಸೀದಿಯ ವಿನಾಶ. ಆದರೆ ಅದಕ್ಕಿಂತ ದೊಡ್ಡ ದುರಂತ ನಡೆದದ್ದು 2019 ರ ನವೆಂಬರ್ 9ರಂದು. ಸರಕಾರವು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ವಿಫಲವಾದರೆ ಈ ದೇಶದ ಸಂವಿಧಾನವನ್ನು ಉಳಿಸಲು ಏಕೈಕ ಆಸರೆಯಾಗಿರುವ ಸುಪ್ರೀಂಕೋರ್ಟಿನ ಐವರು ನ್ಯಾಯಾಧೀಶರ ಪೀಠವು ಅಂದು ತಮ್ಮ ತೀರ್ಪಿನಲ್ಲಿ ಮಸೀದಿ ಕೆಡವಿದ್ದನ್ನು ಹೀನಾಯ ಅಪರಾಧವೆಂದು ಬಣ್ಣಿಸಿದರೂ ‘ಸರ್ವಸಮ್ಮತಿಯಿಂದ’ ಮಸೀದಿ ಕೆಡವಿದವರಿಗೇ ಮಂದಿರ ನಿರ್ಮಿಸಲು ಸಮ್ಮತಿಸಿತು. ಅನ್ಯಾಯಕ್ಕೆ ಗುರಿಯಾದ ಮುಸ್ಲಿಮರನ್ನು ಶಾಂತಿಯ ಹೆಸರಿನಲ್ಲಿ ಮಸೀದಿಯಿಂದ ಹೊರದಬ್ಬಿತು.
ಆದರೆ ಇದರಿಂದ ನ್ಯಾಯಕ್ಕೆ ದ್ರೋಹವಾಗಿದ್ದರೂ ದೇಶದಲ್ಲಿ ಶಾಂತಿ ನೆಲೆಗೊಳ್ಳಬಹುದು ಹಾಗೂ ಬಾಬರಿ ಮಸೀದಿ ಯನ್ನು ನೆಪವಾಗಿಸಿಕೊಂಡು ಸಂಘ ಪರಿವಾರ ಮತ್ತು ಬಿಜೆಪಿ ತಮ್ಮ ದ್ವೇಷ ರಾಜಕಾರಣವನ್ನು ದೇಶಾದ್ಯಂತ ವಿಸ್ತರಿಸುತ್ತಿರುವುದಕ್ಕೆ ಅಂತಿಮ ತಡೆಯೊಡ್ಡಬಹುದು ಎಂಬುದು ಸುಪ್ರೀಂ ಕೋರ್ಟಿನ ಈ ಅನಿವಾರ್ಯ ರಾಜಿ ನ್ಯಾಯಕ್ಕೆ ಕಾರಣವಾಗಿರಬಹುದೆಂದು ಬಹಳಷ್ಟು ಜನ ಭಾವಿಸಿದ್ದರು.
ಅದರೆ ಒಂದೆಡೆ ಬಾಬರಿಯ ಗೋರಿಯ ಮೇಲೆ ರಾಮಮಂದಿರವನ್ನು ಸಮರೋಪಾದಿಯಲ್ಲಿ ಕಟ್ಟುತ್ತಲೇ ಸಂಘ ಪರಿವಾರದ ಫ್ಯಾಶಿಸ್ಟರು ವಾರಣಾಸಿಯ ಜ್ಞಾನವಾಪಿ ಮಸೀದಿ ಹಾಗೂ ಮಥುರಾ ಮಸೀದಿಗಳ ವಿಷಯದಲ್ಲೂ ಸಮರಕ್ಕೆ ಮುಂದಾಗಿದ್ದಾರೆ. ಹೀಗಾಗಿ ಬಾಬರಿ ಪ್ರಕರಣದಲ್ಲಿ ಅಧರ್ಮದ ವಿಜಯವು ಸಂಘ ಪರಿವಾರವನ್ನು ಸುಮ್ಮನಾಗಿಸುವ ಬದಲಿಗೆ ಅವರ ದುಷ್ಟ ರಾಜಕಾರಣಕ್ಕೆ ಮತ್ತಷ್ಟು ಕಸುವು ತುಂಬಿದೆ. ಹೀಗಾಗಿಯೇ ತೀರ್ಪು ಬಂದ ಮರುವರ್ಷದಿಂದಲೇ ಅವರು ಜ್ಞಾನವಾಪಿ ಮಸೀದಿ, ಮಥುರಾ ಮಸೀದಿ ವಿವಾದಗಳಿಗೂ ಅಂತಿಮ ಪರಿಹಾರ ಪಡೆದುಕೊಳ್ಳಲು ಕೋರ್ಟ್‌ಗಳಲ್ಲಿ ಸುಳ್ಳು ದಾವೆ ಸಲ್ಲಿಸಲು ಪ್ರಾರಂಭಿಸಿದರು.
ಜ್ಞಾನವಾಪಿ ಮಸೀದಿಯಲ್ಲಿ ಶೃಂಗಾರ ಗೌರಿ ಪೂಜೆಗೆ ಪ್ರತಿದಿನವೂ ಅವಕಾಶ ಕೊಡಬೇಕು ಎಂದು ಶುರುವಾದ ಅಹವಾಲು, ಈಗ ಜ್ಞಾನವಾಪಿ ಮಸೀದಿಯಡಿಯಲ್ಲಿ ಶಿವದೇಗುಲ ಇರುವುದರಿಂದ ಅದನ್ನು ಬಿಟ್ಟುಕೊಡಬೇಕೆಂದು ಆದೇಶಿಸಬೇಕೆಂಬ ಅಹವಾಲಾಗಿ ಪರಿವರ್ತನೆಗೊಂಡಿದೆ.
ಅದರ ಭಾಗವಾಗಿಯೇ, ಜ್ಞಾನವಾಪಿ ಮಸೀದಿಯ ಕೆಳಗೆ ಶಿವ ದೇವಾಲಯವಿತ್ತೋ ಇಲ್ಲವೋ ಎಂದು ಪರಿಶೀಲನೆ ಮಾಡಲು ಎಎಸ್‌ಐ(ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ)ಗೆ ಅವಕಾಶ ಮಾಡಿಕೊಡಬೇಕೆಂದು ಸಂಘ ಪರಿವಾರ ಮುಂದಿಟ್ಟ ಅಹವಾಲನ್ನು ವಾರಣಾಸಿಯ ಕೋರ್ಟ್, ಅಲಹಾಬಾದಿನ ಹೈಕೋರ್ಟ್ ಮಾತ್ರವಲ್ಲದೆ ಇದೀಗ ಮುಖ್ಯನ್ಯಾಯಮೂರ್ತಿ ಚಂದ್ರಚೂಡ್ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಕೂಡಾ ಸಮ್ಮತಿಸಿದೆ. ಆ ಮೂಲಕ ಜ್ಞಾನವಾಪಿ ಮಸೀದಿಯು ಮತ್ತೊಂದು ಬಾಬರಿ ಮಸೀದಿ ಮಾಡುವ ಸಂಘ ಪರಿವಾರದ ಕುತಂತ್ರಕ್ಕೆ ಬಲಿ ಬಿದ್ದಿದೆ. ಈ ಆದೇಶವನ್ನು ಬಾಬರಿ ಮಸೀದಿ ತೀರ್ಪಿನ ಪೀಠದ ಭಾಗವಾಗಿದ್ದ ಹಾಗೂ ಈಗ ಭಾರತದ ಮುಖ್ಯ ನ್ಯಾಯಾಧೀಶರಾಗಿರುವ ನ್ಯಾ. ಚಂದ್ರಚೂಡ್ ಅವರ ನೇತೃತ್ವದ ತ್ರಿಸದಸ್ಯ ಪೀಠವೇ ನೀಡಿರುವುದು ಬಾಬರಿ ಮಸೀದಿ ತೀರ್ಪು ಮಾಡಿದ್ದ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.
ತಾವು ಜ್ಞಾನವಾಪಿ ಮಸೀದಿಯ ಧಾರ್ಮಿಕ ಸ್ವರೂಪದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಬದಲಿಗೆ ಮಸೀದಿಯ ಕೆಳಗೆ ಶಿವಮಂದಿರವಿತ್ತೇ ಎಂದು ವೈಜ್ಞಾನಿಕವಾಗಿ ತಿಳಿದುಕೊಳ್ಳಲು ಮಾತ್ರ ಸಮೀಕ್ಷೆಯನ್ನು ಆದೇಶಿಸುತ್ತಿದ್ದೇವೆ. ಇದರಿಂದ ಯಾರಿಗೂ ಹಾನಿಯಿಲ್ಲ ಎಂಬ ಆತ್ಮವಂಚಕ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಸಮರ್ಥಿಸಿಕೊಳ್ಳಲು ನೀಡಿದೆ.
ಆದರೆ ಸಂಘ ಪರಿವಾರದವರಿಗೆ ಬೇಕಿರುವುದು ಅಲ್ಲಿ ಶಿವಮಂದಿರವಿತ್ತೋ ಇಲ್ಲವೋ ಎಂಬ ಸತ್ಯವಲ್ಲ. ಅಲ್ಲಿ ಶಿವಮಂದಿರವಿರಲಿಲ್ಲ ಎಂಬ ತೀರ್ಮಾನ ಬಂದರೂ ಅವರು ಅದನ್ನು ಒಪ್ಪುವುದಿಲ್ಲ. ಬಾಬರಿ ಮಸೀದಿ ಪ್ರಕರಣವೇ ಅದಕ್ಕೆ ದೊಡ್ಡ ಸಾಕ್ಷಿ.
ಬಾಬರಿ ಮಸೀದಿ ಪ್ರಕರಣ ಮತ್ತು ಎಎಸ್‌ಐ ವರದಿ
ಬಾಬರಿ ಮಸೀದಿ ಇದ್ದ ಜಾಗದಲ್ಲಿ ಭವ್ಯವಾದ ರಾಮಮಂದಿರವಿತ್ತು. ಅದನ್ನು ನಾಶಮಾಡಿಯೇ ೧೫೨೮ರಲ್ಲಿ ಬಾಬರ್ ಮಸೀದಿಯನ್ನು ನಿರ್ಮಿಸಿದ ಎಂಬ ಪ್ರಚಾರವನ್ನು ಸಂಘಪರಿವಾರ ಬಹಳ ಯಶಸ್ವಿಯಾಗಿ ದೇಶದುದ್ದಕ್ಕೂ ನಡೆಸಿ ಹಿಂದೂ-ಮುಸ್ಲಿಮರ ನಡುವೆ ಅಳಿಸಲಾಗದ ಕಂದರವನ್ನು ಸೃಷ್ಟಿಸಿದೆ. ಈ ಅನ್ಯಾಯದ ತೀರ್ಪಿನ ಬಗ್ಗೆ ಬಹುಸಂಖ್ಯಾತರು ವಹಿಸುತ್ತಿರುವ ಮೌನಕ್ಕೆ ಸಂಘಪರಿವಾರದ ಈ ಪ್ರಚಾರವನ್ನು ಜನಸಾಮಾನ್ಯರು ನಿಜವೆಂದು ಒಪ್ಪಿಕೊಂಡುಬಿಟ್ಟಿರುವುದೂ ಒಂದು ಕಾರಣವೆಂದರೆ ತಪ್ಪಲ್ಲ.
ಈ ಪ್ರಚಾರದ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಲು ೨೦೦೩ರಲ್ಲಿ ಅಲಹಾಬಾದ್ ಹೈಕೋರ್ಟ್ ಭಾರತೀಯ ಪುರಾತತ್ವ ಇಲಾಖೆಗೆ (ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ- ಎಎಸ್‌ಐ) ವಿವಾದಿತ ಜಾಗದಲ್ಲಿ ಉತ್ಖನನ ಮಾಡಿ ಮಂದಿರವಿತ್ತೇ ಎಂದು ಪರಿಶೀಲನೆ ಮಾಡಿ ವರದಿ ಸಲ್ಲಿಸಲು ಸೂಚಿಸಿತು. ಎಎಸ್‌ಐ ಬಾಬರಿ ಮಸೀದಿ ಇದ್ದ ಜಾಗವನ್ನು ಉತ್ಖನನವನ್ನು ಮಾಡಿದ ರೀತಿ, ಬಳಸಿದ ವಿಧಾನ ಮತ್ತು ತಂತ್ರಜ್ಞಾನ ಹಾಗೂ ಅದರ ಮೇಲ್ವಿಚಾರಣೆ ವಹಿಸಿದ್ದ ಅಧಿಕಾರಿಗಳ ಏಕಪಕ್ಷೀಯತೆಯ ಬಗ್ಗೆ ೧೪ ದೂರುಗಳು ಸಲ್ಲಿಕೆಯಾಗಿತ್ತು. ಹೀಗಾಗಿ ನಂತರದ ಅವಧಿಯಲ್ಲಿ ಅದರ ಮುಖ್ಯಸ್ಥರಾಗಿದ್ದ ಮಣಿ ಎಂಬವರನ್ನು ಕೆಳಗಿಳಿಸಲಾಗಿತ್ತು. ನಂತರ ಎಎಸ್‌ಐ ತಲುಪಿದ ಅಭಿಪ್ರಾಯಗಳ ವೈಜ್ಞಾನಿಕತೆ ಮತ್ತು ತಾರ್ಕಿಕತೆಗಳ ಬಗ್ಗೆ ಹಲವಾರು ಪ್ರಸಿದ್ಧ ಪುರಾತತ್ವ ಸಂಶೋಧಕರು ತೀವ್ರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು.
ಅದೇನೇ ಇರಲಿ. ಅದರ ನಡುವೆಯೂ ಎಎಸ್‌ಐ ನೀಡಿದ್ದ ವರದಿಯು ಮಸೀದಿಯ ಕೆಳಗೆ ಮಂದಿರವಿತ್ತೆಂದು ಖಚಿತಪಡಿಸಲಿಲ್ಲವೆಂದು ಹೈಕೋರ್ಟೇ ಹೇಳಿತ್ತು. ಆದರೂ ಸಂಘಪರಿವಾರವು ಮಸೀದಿಯ ಕೆಳಗೆ ಮಂದಿರವಿತ್ತೆಂದು ಎಎಸ್‌ಐ ಸಾಬೀತುಪಡಿಸಿದೆಯೆಂದು ಸುಳ್ಳು ಪ್ರಚಾರ ಮುಂದುವರಿಸಿತ್ತು.
ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ೧,೦೫೪ ಪುಟದ ತೀರ್ಪಿನಲ್ಲಿ ಸುಮಾರು ೨೦೦ ಪುಟಗಳಷ್ಟು ವಿವರವಾಗಿ ಚರ್ಚಿಸುತ್ತದೆ. ತೀರ್ಪಿನ ೪೪೭ನೇ ಪ್ಯಾರಾದಿಂದ ೫೮೦ನೇ ಪ್ಯಾರಾಗಳವರೆಗೂ ಎಎಸ್‌ಐ ನ ವರದಿ, ಸಾಕ್ಷಿಯಾಗಿ ಅದರ ಮೌಲ್ಯ, ಈ ಪ್ರಕರಣದಲ್ಲಿ ಅದಕ್ಕಿರುವ ಬೆಲೆ ಇತ್ಯಾದಿಗಳನ್ನು ಕೂಲಂಕಷವಾಗಿ ವಿಶ್ಲೇಷಿಸುವ ಸುಪ್ರೀಂ ಕೋರ್ಟ್ ಖಚಿತವಾಗಿ ಈ ಕೆಳಗಿನ ತೀರ್ಮಾನಗಳನ್ನು ಹೇಳುತ್ತದೆ:
ಅ) ಎಎಸ್‌ಐ ವರದಿಯು ಮಸೀದಿಯ ಕೆಳಗೆ ಮಂದಿರವಿತ್ತೆಂದು ಹೇಳುವುದಿಲ್ಲ.
ಆ) ಅದರ ಪ್ರಕಾರ ಮಸೀದಿ ಇದ್ದ ಜಾಗದಲ್ಲಿ ೧೨ನೇ ಶತಮಾನಕ್ಕೆ ಸಂಬಂಧಪಟ್ಟ ಕೆಲವು ಇಸ್ಲಾಮೇತರ ಅವಶೇಷಗಳು ಮಾತ್ರ ಕಂಡುಬಂದಿವೆ. ಆದರೆ ಅವು ಒಂದು ರಾಮಮಂದಿರದ ಅವಶೇಷಗಳಂತೂ ಅಲ್ಲವೆಂಬುದನ್ನು ಎಎಸ್‌ಐ ಖಚಿತಪಡಿಸುತ್ತದೆ.
ಇ) ಈ ಅವಶೇಷಗಳು ೧೨ನೇ ಶತಮಾನಕ್ಕೆ ಸಂಬಂಧಪಟ್ಟವು. ಮಸೀದಿ ನಿರ್ಮಾಣವಾಗಿರುವುದು ೧೫೨೮ರಲ್ಲಿ. ಇವೆರಡರ ನಡುವೆ ೪೦೦ ವರ್ಷಗಳಷ್ಟು ಕಾಲಾವಧಿ ಇದೆ. ಈ ಸುದೀರ್ಘ ಕಾಲಾವಧಿಯಲ್ಲಿ ಇಲ್ಲಿದ್ದ ನಿರ್ಮಾಣವು ಪ್ರಾಕೃತಿಕ ಕಾರಣದಿಂದಲೂ ನಾಶವಾಗಿರಬಹುದು.
ಈ) ಹಾಗೂ ಅಲ್ಲಿ ಇದ್ದ ಕಟ್ಟಡವನ್ನು ನಿರ್ನಾಮಗೊಳಿಸಿಯೇ ಮಸೀದಿಯನ್ನು ಕಟ್ಟಲಾಗಿದೆಯೆನ್ನುವುದಕ್ಕೆ ಯಾವ ಪುರಾವೆಯನ್ನು ಈ ಉತ್ಖನನ ಒದಗಿಸುವುದಿಲ್ಲ.
ಹೀಗೆ ಎಎಸ್‌ಐ ವರದಿಯು ಮಸೀದಿಯ ಕೆಳಗೆ ಮಂದಿರವಿತ್ತೆಂಬ ಅಭಿಪ್ರಾಯವನ್ನು ಹೇಳಿಲ್ಲವೆಂದು ಸುಪ್ರೀಂ ಕೋರ್ಟ್ ಖಚಿತಪಡಿಸುತ್ತದೆ ಮತ್ತು ಈ ಕಾರಣದಿಂದ ರಾಮಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆಯೆಂಬ ವಾದಕ್ಕೆ ಅರ್ಥವಿಲ್ಲವೆಂದು ಅಭಿಪ್ರಾಯಪಡುತ್ತದೆ.
ಆದರೆ ಸಂಘ ಪರಿವಾರ ಮಾತ್ರ ಆ ವರದಿಯನ್ನು ಒಪ್ಪಿಕೊಳ್ಳಲಿಲ್ಲ. ಬದಲಿಗೆ ಅಲ್ಲಿ ರಾಮಮಂದಿರವಿತ್ತು ಎಂಬುದು ಬಹುಸಂಖ್ಯಾತರ ಧಾರ್ಮಿಕ ನಂಬಿಕೆ, ಒಂದು ಧಾರ್ಮಿಕ ನಂಬಿಕೆಗೆ ಸಾಕ್ಷಿ-ಪುರಾವೆಗಳು ಇರುವುದಿಲ್ಲ. ಅದು ಬಹುಸಂಖ್ಯಾತರ ನಂಬಿಕೆಯಾದ್ದರಿಂದ ಕೋರ್ಟ್ ಅದನ್ನು ಗೌರವಿಸಬೇಕು ಎಂಬುದಷ್ಟೇ ಅವರ ವಾದವಾಗಿತ್ತು.
ಹಾಗಿದ್ದ ಮೇಲೆ ಜ್ಞಾನವಾಪಿ ಮಸೀದಿಯ ಕೆಳಗೆ ಶಿವಮಂದಿರವಿತ್ತೋ ಇಲ್ಲವೋ ಎಂಬ ಸಮೀಕ್ಷೆ ಯಾರಿಗೆ ಸಹಾಯ ಮಾಡುತ್ತದೆ. ಈಗಾಗಲೇ ಮೊದಲೆರಡು ದಿನಗಳ ಸಮೀಕ್ಷೆಯ ಬಗ್ಗೆ ಎಎಸ್‌ಐ ಅಧಿಕೃತವಾಗಿ ಯಾವ ಹೇಳಿಕೆಯನ್ನು ನೀಡಿರದಿದ್ದರೂ ಸಂಘೀ ಮಾಧ್ಯಮಗಳು ಶಿವಮಂದಿರದ ಕುರುಹುಗಳು ಕಂಡು ಬಂದಿವೆ ಎಂಬ ದುರುದ್ದೇಶ ಪೂರಿತ ಪ್ರಚಾರ ಪ್ರಾರಂಭಿಸಿವೆ.
ಸಂಘ ಪರಿವಾರಕ್ಕೆ ಬೇಕಿರುವುದು ಇಷ್ಟೆ. ಸುಳ್ಳು ವದಂತಿ. ಇನ್ನು ಅಂತಿಮ ವರದಿ ಏನೇ ಬಂದರೂ ಅದನು ತಿರುಚಲಾಗಿದೆ ಎಂದು ಪ್ರಚಾರ ಮಾಡುತ್ತಾ 2024ರ ಚುನಾವಣೆಗೆ ಮುನ್ನ ಶಿವಮಂದಿರ ವಿಮೋಚನಾ ಚಳವಳಿ ಪ್ರಾರಂಭಿಸುತ್ತವೆ. ಇವೆಲ್ಲವೂ ಸುಪ್ರೀಂ ಕೋರ್ಟಿಗೆ ಗೊತ್ತಿರದ ಸಂಗತಿಗಳೇ?
ಎಲ್ಲಕ್ಕಿಂತ ಹೆಚ್ಚಾಗಿ ಬಾಬರಿ ತೀರ್ಪಿನಲ್ಲಿ ಹಾಲಿ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ಅವರೂ ಇದ್ದ ನ್ಯಾಯಪೀಠ ಬಹಳ ಮುಖ್ಯವಾಗಿ ಇಂಥಾ ವಿವಾದಗಳಲ್ಲಿ 1991ರಲ್ಲಿ ಜಾರಿಯಾದ Places Of Worship (special provisions) Act-೧೯೯೧- ಉಪಾಸನಾ ಕೇಂದ್ರಗಳ ವಿಶೇಷ ಅವಕಾಶಗಳ ಕಾಯ್ದೆಯ ತತ್ವವನ್ನು ಎತ್ತಿ ಹಿಡಿಯುತ್ತದೆ.
೧೯೯೧ರ ಯಥಾಸ್ಥಿತಿ ಕಾಯ್ದೆ ಜ್ಞಾನವಾಪಿ ಪ್ರಕರಣಕ್ಕೆ ಏಕೆ ಅನ್ವಯಿಸುತ್ತಿಲ್ಲ?
ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಐವರು ಸದಸ್ಯರ ಸಾಂವಿಧಾನಿಕ ಪೀಠ ಕೊಟ್ಟ ತೀರ್ಪಿನ ಪ್ಯಾರಾ ೭೮-೮೨ರಲ್ಲಿ ವಿಶೇಷವಾಗಿ ೧೯೯೧ರಲ್ಲಿ ಸಂಸತ್ತಿನಲ್ಲಿ ಅನುಮೋದಿಸಲಾದ ಉಪಾಸನಾ ಸ್ಥಳಗಳ (ವಿಶೇಷ ಅವಕಾಶ) ಕಾಯ್ದೆಯನ್ನು ಉಲ್ಲೇಖಿಸುತ್ತದೆ. ಈ ಕಾಯ್ದೆಯು ಬಾಬರಿ ಮಸೀದಿ ವಿವಾದವೊಂದನ್ನು ಹೊರತುಪಡಿಸಿ ಭಾರತದಲ್ಲಿ ಹಾಲಿ ನಡೆಯುತ್ತಿರುವ ಅಥವಾ ಮುಂದೆ ಹುಟ್ಟಿಕೊಳ್ಳುವ ಯಾವುದೇ ಐತಿಹಾಸಿಕ ಧಾರ್ಮಿಕ ಸ್ಥಳಗಳ ಸ್ವರೂಪದ ಬಗೆಗಿನ ಯಾವುದೇ ವಿವಾದವನ್ನು ಈ ಕಾಯ್ದೆಯನ್ವಯವೇ ತೀರ್ಮಾನಿಸಬೇಕು ಎಂದು ಹೇಳುತ್ತದೆ ಮತ್ತು ಈ ಕಾಯ್ದೆಯ ಪ್ರಕಾರ ಬಾಬರಿ ಮಸೀದಿ-ರಾಮ ಮಂದಿರವನ್ನು ಹೊರತುಪಡಿಸಿ ಮಿಕ್ಕೆಲ್ಲಾ ಧಾರ್ಮಿಕ ಸ್ಥಳಗಳನ್ನೂ ಅದು ೧೯೯೧ರ ಆಗಸ್ಟ್ ೧೫ರಂದು ಯಾವ ಧಾರ್ಮಿಕ ಸ್ವರೂಪದಲ್ಲಿತ್ತೋ ಅದೇ ಸ್ವರೂಪದಲ್ಲೇ ಉಳಿಸಿಕೊಳ್ಳಬೇಕೆಂದು ನಿರ್ದೇಶಿಸುತ್ತದೆ ಮತ್ತು ಅದನ್ನು ಉಲ್ಲಂಘಿಸಿ ಒಂದು ಉಪಾಸನಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಯಾವುದೇ ರೀತಿಯಲ್ಲಿ ಬದಲಾಯಿಸುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುತ್ತದೆ.
ಉದಾಹರಣೆಗೆ ಈ ಕಾಯ್ದೆಯ ಸೆಕ್ಷನ್ ೪ ಸ್ಪಷ್ಟವಾಗಿ ಹೀಗೆ ಹೇಳುತ್ತದೆ:
1) It is hereby declared that the religious character of a place of worship existing on the 15th day of August, 1947 shall continue to be the same as it existed on that day.
(ಎಲ್ಲಾ ಉಪಾಸನಾ ಸ್ಥಳ ಧಾರ್ಮಿಕ ಸ್ವರೂಪವನ್ನು 1947 ರ ಆಗಸ್ಟ್ 15 ರಂದು ಯಾವ ಸ್ವರೂಪದಲ್ಲಿತ್ತೋ ಅದೇ ಸ್ವರೂಪದಲ್ಲಿ ಉಳಿಸಿಕೊಳ್ಳಬೇಕೆಂದು ಘೋಷಿಸಲಾಗಿದೆ)
2) If on the commencement of this act, any suit, appeal, or other proceeding with respect to the conversion of the religious character of any place of worship, existing on the 15th day of August, 1947, is pending before any court, tribunal or other authority, the same shall abate, and no suit, appeal, or other proceeding with respect to any such matter shall lie on or after such commencement in any court, tribunal or other authority.
(ಈ ಕಾಯ್ದೆಯು ಪ್ರಾರಂಭವಾಗುವ ಮುನ್ನ 1947 ರ ಆಗಸ್ಟ್ 15 ಕ್ಕೆ ಮುನ್ನ ಯಾವುದೇ ಉಪಾಸನಾ ಕೇಂದ್ರಗಳ ಧಾರ್ಮಿಕ ಸ್ವರೂಪಕ್ಕೆ ಸಂಬಂಧಪಟ್ಟ ವ್ಯಾಜ್ಯಗಳು ನಡೆಯುತ್ತಿದ್ದರೆ ಅವು ಇದರಂತೆ ಮುಂದುವರಿಯುತ್ತವೆ ಮತ್ತು ಈ ಕಾಯ್ದೆಯ ಅನುಷ್ಠಾನವು ಪ್ರಾರಂಭವಾದ ಮೇಲೆ ಈ ಕಾಯ್ದೆಗೆ ವ್ಯತಿರಿಕ್ತವಾದ ಯಾವುದೇ ವ್ಯಾಜ್ಯಗಳು ಯಾವುದೇ ನ್ಯಾಯಾಲಯಗಳಲ್ಲಿ ಮುಂದುವರಿಯುವಂತಿಲ್ಲ)
ಸೆಕ್ಷನ್ 7:
The provision of this Act shall have effect not withstanding anything inconsistent therewith contained in any other law for the time being in force any instrument having effect by virtue of any law other than this Act.
(ಈ ವಿಷಯಕ್ಕೆ ಸಂಬಂಧಪಟ್ಟಂತೆ ಈ ಕಾನೂನಿಗೆ ವ್ಯತಿರಿಕ್ತವಾಗಿರುವ ಯಾವುದೇ ಇತರ ಕಾನೂನುಗಳಿದ್ದರೂ ಅವು ಉರ್ಜಿತವಲ್ಲ. ಅವೆಲ್ಲದರ ಮೇಲೆ ಇದೇ ಕಾನೂನು ಅನ್ವಯವಾಗಬೇಕು)
ವಾಸ್ತವದಲ್ಲಿ ಬಾಬರಿ ತೀರ್ಪಿನಲ್ಲಿ ನ್ಯಾ. ಚಂದ್ರಚೂಡ್ ಅವರೂ ಇದ್ದ ಸಾಂವಿಧಾನಿಕ ಪೀಠ 1991ರ ಈ ಕಾಯ್ದೆಯನ್ನು ಭಾರತದ ಸಂವಿಧಾನದ ಮೌಲ್ಯವಾದ ಸೆಕ್ಯುಲರಿಸಂನ ರಕ್ಷಕ ಎಂದೆಲ್ಲಾ ಬಣ್ಣಿಸುವುದು ಮಾತ್ರವಲ್ಲದೆ ಈ ಕಾಯ್ದೆ ನಮ್ಮ ಸಂವಿಧಾನದ ಮೂಲ ರಚನೆಯಷ್ಟೆ ಮಹತ್ವದ್ದು ಎಂದೆಲ್ಲ ಕೊಂಡಾಡುತ್ತದೆ.
ಹಾಗಿದ್ದಲ್ಲಿ ಈ ಕಾಯ್ದೆಯನ್ನು ಜ್ಞಾನವಾಪಿ ವಿವಾದಕ್ಕೆ ಏಕೆ ಅನ್ವಯಿಸಿ ಸಂಘ ಪರಿವಾರದ ಹುನ್ನಾರಕ್ಕೆ ತಡೆಯೊಡ್ಡುತ್ತಿಲ್ಲ. ಮೊದಲನೆಯದಾಗಿ ಎಎಸ್‌ಐ ಸಮೀಕ್ಷೆಯು ತಮಗೆ ವ್ಯತಿರಿಕ್ತವಾಗಿ ಬಂದರೆ ಸಂಘ ಪರಿವಾರ ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದು ಬಾಬರಿ ಪ್ರಕರಣದಲ್ಲೇ ಸಾಬೀತಾಗಿದೆ. ಎರಡನೆಯದಾಗಿ ಸಮೀಕ್ಷೆ ಇನ್ನು ನಡೆಯುತ್ತಿರುವಾಗಲೇ ಶಿವಮಂದಿರದ ಕುರುಹುಗಳು ಕಂಡು ಬಂದಿದೆ ಎಂಬ ಸುಳ್ಳು ಪ್ರಚಾರವನ್ನು ಪ್ರಾರಂಭಿಸಿವೆ.
ಎಲ್ಲಕ್ಕಿಂತ ಹೆಚ್ಚಾಗಿ ಸಮೀಕ್ಷೆಯಲ್ಲಿ ಶಿವಮಂದಿರವೋ ಅಥವಾ ಮತ್ತೊಂದು ಉಪಾಸನಾ ಮಂದಿರವೋ ಇದ್ದ ಕುರುಹುಗಳು ಕಂಡುಬಂದರೂ ಅದರ ತಾತ್ಪರ್ಯ ಮತ್ತು ಅದರ ಪರಿಣಾಮಗಳೇನು? ಒಂದು ವೇಳೆ ಅಲ್ಲಿ ಮಸೀದಿಯಲ್ಲದ ಕುರುಹುಗಳಿದ್ದರೆ ಆಗ ಸುಪ್ರೀಂ ಕೋರ್ಟ್ ಏನು ಮಾಡುತ್ತದೆ?
ಬಾಬರಿ ಮಸೀದಿ ತೀರ್ಪಿನಲ್ಲಿ ಈ ಪ್ರಶ್ನೆಯ ಬಗ್ಗೆ ಸಾಂವಿಧಾನಿಕ ಪೀಠ ಪರೋಕ್ಷವಾಗಿ ಉತ್ತರಿಸುತ್ತದೆ. ಇತಿಹಾಸದಲ್ಲಿ ಆಗಿ ಹೋದ ನ್ಯಾಯಾನ್ಯಾಯಗಳಿಗೆ ವರ್ತಮಾನದ ಕಾನೂನಿನಲ್ಲಿ ನ್ಯಾಯವನ್ನು ಹುಡುಕಬಾರದೆಂದೂ ೬೩೯ನೇ ಪ್ಯಾರಾದಲ್ಲಿ ಹೇಳುತ್ತದೆ. ವಿವಿಧ ಜನಾಂಗ, ಸಿದ್ಧಾಂತ, ಬಣ್ಣ ಹಾಗೂ ಧರ್ಮಗಳ ಹಿನ್ನೆಲೆಯವರಾದ ನಾವು ಇತಿಹಾಸದಲ್ಲಿ ನಮ್ಮನಮ್ಮ ಹಿನ್ನೆಲೆಗೆ ಅನುಸಾರವಾಗಿ ನ್ಯಾಯ ಹಾಗೂ ಕಾನೂನನ್ನು ಕಟ್ಟಿಕೊಳ್ಳುತ್ತಾ ಬಂದಿದ್ದೇವೆ. ಆದರೆ ೧೯೫೦ರಲ್ಲಿ ನಾವೆಲ್ಲರೂ ಒಮ್ಮತದಿಂದ ಸಮಾನತೆ, ಭ್ರಾತೃತ್ವದ ಮೌಲ್ಯಗಳನ್ನು ಆಧರಿಸಿ ಒಂದು ಸಂವಿಧಾನವನ್ನು ರೂಪಿಸಿಕೊಂಡಿದ್ದೇವೆ. ಹೀಗಾಗಿ ಅದೇ ನಮಗೆ ಆಧಾರವಾಗಬೇಕೇ ವಿನಾ ಇತಿಹಾಸವಲ್ಲವೆಂದೂ ಸ್ಪಷ್ಟಪಡಿಸುತ್ತದೆ.
ಹಾಗೂ ಅ ನಿಟ್ಟಿನಲ್ಲಿ 1991 ರ ಯಥಾಸ್ಥಿತಿ ಕಾಯ್ದೆಯನ್ನು ಪದೇಪದೇ ಉಲ್ಲೇಖಿಸುತ್ತದೆ. ಅಂತಿಮವಾಗಿ ಸುಪ್ರೀಂ ಕೋರ್ಟ್ ಸಹ ಒಂದು ವೇಳೆ ಎಎಸ್‌ಐ ವರದಿಯಲ್ಲಿ ಇತರ ಧಾರ್ಮಿಕ ಕುರುಹುಗಳಿವೆ ಎಂಬ ವರದಿ ಬಂದರೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂಬ ತೀರ್ಪು ಕೊಡಬಹುದು.
ಆದರೆ ಸಂಘ ಪರಿವಾರ ಅದನ್ನು ಬಳಸಿಕೊಂಡು ಕೇವಲ ಜ್ಞಾನವಾಪಿ ಮಸೀದಿ ಮಾತ್ರವಲ್ಲ ದೇಶದಲ್ಲಿರುವ ಎಲ್ಲಾ ಚಾರಿತ್ರಿಕ ಮಸೀದಿಗಳನ್ನು ಕೆಡವಿ ಮಂದಿರವನ್ನು ಹುಡುಕಬೇಕೆಂಬ ವಿದ್ವೇಷವನ್ನೇ ಹುಟ್ಟುಹಾಕುತ್ತಾರೆ. ಏಕೆಂದರೆ ಜ್ಞಾನವಾಪಿಯಲ್ಲಿ ಅವರು ಎಎಸ್‌ಐ ಸಮೀಕ್ಷೆ ಕೇಳಿರುವುದು ಅಕಡೆಮಿಕ್ ಕಾರಣಗಳಿಗಾಗಿ ಅಲ್ಲ. ದ್ವೇಷ ರಾಜಕಾರಣಕೆ ನ್ಯಾಯಂಗದ ಪರೋಕ್ಷ ಸಮ್ಮತಿ ಇದೆ ಎಂಬ ಅಭಿಪ್ರಾಯವನ್ನು ಮೂಡಿಸಲು.
ಸುಪ್ರೀಂ ಕೋರ್ಟ್ ಜ್ಞಾನವಾಪಿ ಪ್ರಕರಣದಲ್ಲಿ ೧೯೯೧ರ ಯಥಾಸ್ಥಿತಿ ಕಾಯ್ದೆಯ ಅವಕಾಶಗಳನ್ನು ಬಳಸಿಕೊಂಡು ಸಂಘ ಪರಿವಾರದ ಹುನ್ನಾರವನ್ನು ಪ್ರಾರಂಭದಲ್ಲೇ ತಿರಸ್ಕರಿಸದೆ ಎಎಸ್‌ಐ ಸಮೀಕ್ಷೆಗೆ ಅವಕಾಶ ಮಾಡಿಕೊಟ್ಟು ಸಂಘ ಪರಿವಾರದ ಅಜೆಂಡಾಗಳಿಗೆ ಬಲಿಯಾಗಿದೆ. ಮತ್ತೊಮ್ಮೆ ಅಧರ್ಮ ಮತ್ತು ಅನ್ಯಾಯಕ್ಕೆ ಜಯವಾಗಲು ಅವಕಾಶ ಮಾಡಿಕೊಟ್ಟಿದೆ.
ಬಾಬರಿ ಮಸೀದಿ ಪ್ರಕರಣದಲ್ಲೂ ಸುಪ್ರೀಂ ಕೋರ್ಟ್ ಪ್ರಾರಂಭದಲ್ಲಿ ದೊಡ್ಡ ದೊಡ್ಡ ಮಾತಾಡಿ ಅಂತಿಮವಾಗಿ ಮಸೀದಿ ನಾಶಕ್ಕೆ ನ್ಯಾಯಮುದ್ರೆಯನ್ನು ಒತ್ತಿಬಿಟ್ಟಿತಲ್ಲವೇ?