ಒಳಮೀಸಲಾತಿ: ಅರೆಮನಸ್ಕ ಸರಕಾರದ ಪೂರಕ ನಿರ್ಧಾರಗಳು ಹಾಗೂ ಮುಂದಿರುವ ಸವಾಲುಗಳು
‘ಅಂತೂ ಇಂತೂ ಎಂಟು ವರ್ಷಕ್ಕೆ ಮಗ ದಂಟು ಅಂದ’ ಅನ್ನುವಂತೆ ಕೊನೆಗೂ ಸಿದ್ದರಾಮಯ್ಯನವರ ಸರಕಾರ ಒಳಮೀಸಲಾತಿಯನ್ನು ಜಾರಿಗೊಳಿಸುವ ಕಡೆಗೆ ಮತ್ತೊಂದು ಹೆಜ್ಜೆ ಮುಂದಿಡುವುದಾಗಿ ಘೋಷಿಸಿದೆ. ಸರಕಾರದ ಈ ತೀರ್ಮಾನಕ್ಕೆ ಕಳೆದ ಮೂವತ್ತು ವರ್ಷಗಳಿಂದ ಒಳಮೀಸಲಾತಿ ಹೋರಾಟಗಾರರು ನಡೆಸುತ್ತಿರುವ ಹೋರಾಟಗಳ ಜೊತೆಗೆ ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಮಸ್ಕಿಯಿಂದ ಹಿಡಿದು ಮೊನ್ನೆ ತುಮಕೂರಿನವರೆಗೆ ನಡೆಸಿದ ರ್ಯಾಲಿ, ಮೆರವಣಿಗೆ, ಘೇರಾವ್, ಬಂದ್‌ಗಳಂತಹ ನಿರಂತರ ಹೋರಾಟಗಳ ಕಾವು ತಟ್ಟಿರುವುದು ಪ್ರಧಾನ ಕಾರಣ.
ಅದರ ಜೊತೆಗೆ ಉಪ ಚುನಾವಣೆಗಳು ಘೋಷಣೆಯಾದ ಮೇಲೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳದಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರುವುದು ಖಚಿತವಾಗಿರುವುದು ಹಾಗೂ ಬಿಜೆಪಿ ಮತ್ತು ಸಂಘಪರಿವಾರ ಕಾಂಗ್ರೆಸ್‌ನ ಈ ಬಿರುಕುಗಳನ್ನು ಬಳಸಿಕೊಂಡು ಸಮುದಾಯವನ್ನು ದೊಡ್ಡ ಮಟ್ಟದಲ್ಲಿ ತನ್ನೆಡೆಗೆ ಸೆಳೆಯಲು ಹೊರಟಿರುವುದು ಇನ್ನೆರಡು ಹೆಚ್ಚುವರಿ ಕಾರಣ.
ಹೀಗಾಗಿ ಸರಕಾರದ ಈ ತೀರ್ಮಾನ ಸಾಮಾಜಿಕ ನ್ಯಾಯದ ಪರವಾಗಿ ಸಹಜವಾಗಿ ಮರದಲ್ಲೇ ಮಾಗಿದ ಹಣ್ಣಲ್ಲ. ಬದಲಿಗೆ ಜನ ಹೋರಾಟಗಳು ಗುದ್ದಿ ಗುದ್ದಿ ಮಾಗಿಸಿದ ಹಣ್ಣು.
ಅದೇನೇ ಇದ್ದರೂ ಇದೇ ಅಕ್ಟೋಬರ್ 28ರಂದು ಕ್ಯಾಬಿನೆಟ್ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಸರಕಾರದ ಹಿರಿಯ ಸಚಿವರುಗಳು ಒಳಮೀಸಲಾತಿ ಜಾರಿ ಮಾಡುವ ದಿಕ್ಕಿನೆಡೆಗೆ ಮುಖ ಮಾಡಿರುವ ಕ್ರಮಗಳನ್ನು ಘೋಷಿಸಿದ್ದಾರೆ. ಆದರೆ ಒಳಮೀಸಲಾತಿಯ ವಿಷಯ ಕ್ಯಾಬಿನೆಟ್‌ನ ಪೂರ್ವ ನಿರ್ಧಾರಿತ ಕಾರ್ಯಸೂಚಿಯ ಭಾಗವಾಗಿಯಲ್ಲದೆ ಹೆಚ್ಚುವರಿಯಾಗಿ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಯಿತು ಎಂಬ ವರದಿಯೂ ಇದೆ. ಅದೇನೇ ಇದ್ದರೂ ಕ್ಯಾಬಿನೆಟ್ ಒಳಮೀಸಲಾತಿಯ ವಿಷಯದ ಬಗ್ಗೆ ತನ್ನ ಅಧಿಕೃತ ನಿರ್ಧಾರವನ್ನು ಕ್ಯಾಬಿನೆಟ್ ಮೀಟಿಂಗಿನ ವಿಸ್ತರಣೆಯೇ ಆದ ಅಧಿಕೃತ ಪತ್ರಿಕಾ ಗೋಷ್ಠಿಯಲ್ಲಿ ಘೋಷಣೆ ಮಾಡಿದೆ. ಹೀಗಾಗಿ ಆ ವ್ಯತ್ಯಾಸಗಳಿಗೆ ಏನೂ ಮಹತ್ವವಿಲ್ಲ. ಆದರೆ ಈ ವಿಷಯ ಮೂಲ ಕಾರ್ಯಸೂಚಿಯಾಗದಿರುವುದು ಸರಕಾರದಲ್ಲಿ ಈ ಬಗ್ಗೆ ಇನ್ನೂ ಮುಂದುವರಿದಿರುವ ಭಿನ್ನಾಭಿಪ್ರಾಯಗಳ ಸೂಚಿಯೇ ಎಂಬ ಪ್ರಶ್ನೆ ಕೆಲವರಲ್ಲಿ ಹುಟ್ಟಿ ಹಾಕಿರುವುದಂತೂ ನಿಜ.
ಮರುಳು ಮಾಡುವುದೇ ಮತ್ತೊಂದು ಆಯೋಗ?
ಅದೇನೇ ಇರಲಿ. ಸರಕಾರ ಕ್ಯಾಬಿನೆಟ್‌ನಲ್ಲಿ ಒಳಮೀಸಲಾತಿ ಜಾರಿಯ ಬಗ್ಗೆ ಈ ಮೂರೂ ಕ್ರಮಗಳನ್ನು ಘೋಷಿಸಿದೆ:
-ಒಳಮೀಸಲಾತಿ ಜಾರಿಗೆ ಬೇಕಿರುವ ದತ್ತಾಂಶಗಳ ಸಂಗ್ರಹ ಹೇಗೆ ಎಂಬುದರ ಬಗ್ಗೆ ಅಧ್ಯಯನ ಮಾಡಿ ಸರಕಾರಕ್ಕೆ ಸಲಹೆ ನೀಡಲು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚನೆ.
-ಅದಕ್ಕೆ ಮೂರು ತಿಂಗಳ ಗಡುವು.
-ಮತ್ತು ಆ ಗಡುವಿನವರೆಗೆ ಸರಕಾರಿ ಹುದ್ದೆಗಳ ಹೊಸ ನೇಮಕಾತಿಗೆ ನಿಲುಗಡೆ.
ಸರಕಾರದ ಈ ಘೋಷಣೆಯು ಅದರಲ್ಲೂ ಒಳಮೀಸಲಾತಿ ಬಗ್ಗೆ ತೀರ್ಮಾನ ತೆಗೆದುಕೊಳ್ಳುವವರೆಗೆ ಸರಕಾರಿ ನೇಮಕಾತಿಗಳ ನಿಲುಗಡೆಯ ತೀರ್ಮಾನದಿಂದಾಗಿ ಇದು ಮತ್ತೊಂದು ವಿಳಂಬ ನೀತಿಯಲ್ಲ ಎಂಬ ಸಮಾಧಾನವನ್ನು ಹಾಗೂ ಕಾಲಮಿತಿಯಲ್ಲಿ ಒಳಮೀಸಲಾತಿ ಜಾರಿಯಾಗಬಹುದೆಂಬ ಭರವಸೆಯನ್ನು ಹುಟ್ಟಿಸಿದೆ.
ಆದರೂ ಹಲವರಲ್ಲಿ ಈ ಮತ್ತೊಂದು ಆಯೋಗ, ಮತ್ತೆ ಮೂರು ತಿಂಗಳು ಗಡುವುಗಳು ಮತ್ತೆ ಸಮುದಾಯವನ್ನು ಮೋಸಗೊಳಿಸುವ ವಿಳಂಬ ತಂತ್ರವೇ ಎಂಬ ಅನುಮಾನವನ್ನೂ ಕೂಡ ಹೋಗಲಾಡಿಸಿಲ್ಲ. ಆ ಅನುಮಾನ ಮೂಡಲು ಒಳಮೀಸಲಾತಿ ವಿಷಯದಲ್ಲಿ ಸರಕಾರ ನಡೆದುಕೊಂಡು ಬಂದ ರೀತಿನೀತಿಗಳೇ ಕಾರಣ. ಏಕೆಂದರೆ ಸದಾಶಿವ ಆಯೋಗ ವರದಿಯನ್ನು ಇದೇ ಕಾರಣಕ್ಕೆ ನೇಮಕ ಮಾಡಿದ್ದರೂ, ಅದು 2012ರಲ್ಲೇ ವರದಿ ಕೊಟಿದ್ದರೂ ಅಧಿಕಾರ ಮಾಡಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುವೂ ಅದನ್ನು ಬಹಿರಂಗಗೊಳಿಸಲಿಲ್ಲ. ಬದಲಿಗೆ ವರದಿಯು ಯೋಜಿತವಾಗಿ ಸೋರಿಕೆಯಾಗಿ ದಲಿತ ಸಮುದಾಯಗಳಲ್ಲಿ ಪರಸ್ಪರ ಪೂರ್ವಗ್ರಹಗಳನ್ನು ಮೂಡಿಸಿತ್ತು. ಹಾಗೆ ನೋಡಿದರೆ ಸದಾಶಿವ ಆಯೋಗವನ್ನು ಸರಕಾರ ಬಹಿರಂಗಗೊಳಿಸಿದ್ದರೂ ಅದನ್ನು ಜಾರಿಗೊಳಿಸುವ ಶಾಸನಾತ್ಮಕ ಅಧಿಕಾರ ರಾಜ್ಯ ಸರಕಾರಗಳಿಗೆ ಈವರೆಗೆ ಇರಲಿಲ್ಲ. ಆದರೂ ಎಲ್ಲಾ ಪಕ್ಷಗಳೂ ತಾವು ಅಧಿಕಾರಕ್ಕೆ ಬಂದರೆ ಸದಾಶಿವ ವರದಿ ಜಾರಿಗೆ ತರುತ್ತೇವೆ ಎಂದು ಪೊಳ್ಳು ಭರವಸೆಗಳನ್ನು ಕೊಡುತ್ತಲೇ ಜನರನ್ನು ಮೋಸಮಾಡುತ್ತಾ ಬಂದವು.
ಸುಪ್ರೀಂ ತೀರ್ಪು ಮತ್ತು ಷರತ್ತುಗಳು
ಆದರೆ 2024ರ ಆಗಸ್ಟ್ 1ರ ಸುಪ್ರೀಂ ತೀರ್ಮಾನ ಒಳಮೀಸಲಾತಿಯನ್ನು ಜಾರಿ ಮಾಡುವ ಶಾಸನಾತ್ಮಕ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ಒದಗಿಸಿದೆ. ಆದರೆ ಅದಕ್ಕೆ ಒಂದೇ ಒಂದು ಷರತ್ತು ಎಂದರೆ ಒಳಮೀಸಲಾತಿಯನ್ನು ಪಡೆದುಕೊಳ್ಳುವ ಸಮುದಾಯಗಳು ಅದಕ್ಕೆ ಅರ್ಹರೆಂದು ರಾಜ್ಯ ಸರಕಾರ ವೈಜ್ಞಾನಿಕ ಹಾಗೂ ವಾಸ್ತವಿಕ ಅಂಕಿಅಂಶಗಳನ್ನು ಒದಗಿಸಬೇಕು. ರಾಜ್ಯ ಸರಕಾರ ಮಾಡುವ ಒಳವರ್ಗೀಕರಣಕ್ಕೆ ಪೂರಕವಾದ ವೈಜ್ಞಾನಿಕ ಹಾಗೂ ನಿಖರ ಅಂಕಿಅಂಶಗಳಿಲ್ಲವಾದಲ್ಲಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಆ ಬಗೆಯ ವರ್ಗೀಕರಣವನ್ನು ರದ್ದು ಮಾಡಬಹುದು.
ಹೀಗಾಗಿ ಸರಕಾರಗಳಿಗೆ ಈಗ ಒಳಮೀಸಲಾತಿ ಮಾಡುವ ಅಧಿಕಾರವಿದೆ. ಆದರೆ ಅದಕ್ಕೆ ಬೇಕಿರುವ ವಾಸ್ತವಿಕ ಮತ್ತು ವೈಜ್ಞಾನಿಕ ಅಂಕಿಅಂಶಗಳನ್ನು ಮಾತ್ರ ಅವು ಸಂಗ್ರಹಿಸಬೇಕು.
ಕರ್ನಾಟಕದಂತ ರಾಜ್ಯಗಳಿಗೆ ಅದೂ ಕೂಡ ದೊಡ್ಡ ಕಷ್ಟವಲ್ಲ.
ಆದ್ದರಿಂದ ಕರ್ನಾಟಕ ಸರಕಾರ ಅಕ್ಟೊಬರ್ 28ರಂದು ಕೈಗೊಂಡ ಈ ತೀರ್ಮಾನವನ್ನು ಸುಪ್ರೀಂಕೋರ್ಟ್ ತೀರ್ಪು ಬಂದ ಮರುದಿನ- ಆಗಸ್ಟ್ 2ರಂದೇ ಮಾಡಿದ್ದರೆ ಈ ವೇಳೆಗೆ ಒಳಮೀಸಲಾತಿ ಜಾರಿ ಮಾಡುವ ದಿಕ್ಕಿನಲ್ಲಿ ಎರಡನೇ ಹೆಜ್ಜೆಯನ್ನು ಇಡಬಹುದಾಗಿತ್ತು. ಏಕೆಂದರೆ ಸುಪ್ರೀಂ ತೀರ್ಪಿನ ಅನ್ವಯ ಒಳಮೀಸಲಾತಿಯ ಬಗ್ಗೆ ಸರಕಾರದ ಅ ಆದೇಶ ಊರ್ಜಿತವಾಗಬೇಕೆಂದರೆ ಕರ್ನಾಟಕ ಸರಕಾರ ಮೂರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿದೆ.
ಕರ್ನಾಟಕ ಪ್ರಬುದ್ಧತೆಯಿಂದ ಬಗೆಹರಿಸಿಕೊಳ್ಳಬೇಕಾದ ಮೂರು ಸಮಸ್ಯೆಗಳು
-ಮೊದಲನೆಯದು, ಒಳಮೀಸಲಾತಿಯ ಬಗ್ಗೆ ಪರಿಶಿಷ್ಟ ಜಾತಿಗಳೊಳಗಿನ ಹಲವು ಸಮುದಾಯಗಳಲ್ಲಿ ಇರುವ ಕೆಲವು ಸಕಾರಣ ಆತಂಕಗಳು ಮತ್ತು ಕೆಲವು ಪಟ್ಟಭದ್ರ ಪೂರ್ವಗ್ರಹಗಳು.
-ಎರಡನೆಯದು ಪ್ರಮಾಣವಾರು ಒಳಮೀಸಲಾತಿಯನ್ನು ನಿಗದಿ ಪಡಿಸಲು ಬೇಕಾದ ಉಪಜಾತಿಗಳ ಜನಸಂಖ್ಯಾ ಪ್ರಮಾಣದ ನಿಗದಿಯಲ್ಲಿ ಇರುವ ಕೆಲವು ತಾಂತ್ರಿಕ ತೊಡಕುಗಳು. ಉದಾಹರಣೆಗೆ ಒಂದು ಭಾಗದಲ್ಲಿ ಆದಿ ಕರ್ನಾಟಕ ಎಂದು ಕರೆಸಿಕೊಳ್ಳಲ್ಪಡುವವರು ಎಡಗೈ ಸಂಬಂಧಿತ ಸಮುದಾಯವಾಗಿದ್ದರೆ ಮತ್ತೊಂದು ಕಡೆ ಬಲಗೈ ಸಂಬಂಧಿತ ಸಮುದಾಯವಾಗಿರುತ್ತದೆ. ಹಾಗೆಯೇ ಆದಿ ದ್ರಾವಿಡ, ಆದಿ ಆಂಧ್ರ ಜಾತಿ ಕೂಟಗಳು. ಇವು ಅಧಿಗಮಿಸಲಾಗದ ತೊಡಕುಗಳೇನೂ ಅಲ್ಲ. ಇವು ವಾಸ್ತವಿಕ ಸಮಸ್ಯೆ ಎಂದು ಎಲ್ಲರೂ ಗುರುತಿಸಿದಲ್ಲಿ ಪರಿಹಾರದ ಮಾರ್ಗಗಳು ತಾನಾಗಿಯೇ ತೆರೆದುಕೊಳ್ಳುತ್ತವೆ.
-ಮೂರನೆಯದಾಗಿ ಎಡಗೈ, ಬಲಗೈ ಎಂಬ ವಿಶಾಲ ವರ್ಗೀಕರಣದ ವ್ಯಾಪ್ತಿಯೊಳಗೆ ಮುಂದುವರಿದರೆ ತಾವು ಮುಂದೆಯೂ ಅಲಕ್ಷಿತವಾಗಬಹುದಾದ್ದರಿಂದ ಒಳಮೀಸಲಾತಿ ವರ್ಗೀಕರಣ ಮಾಡುವಾಗ ತಮ್ಮನ್ನು ಪ್ರತ್ಯೇಕವಾಗಿ ಪರಿಗಣಿಸಬೇಕೆಂದು ಮುಂದಿಡುತ್ತಿರುವ ಆಗ್ರಹ.
ಈ ಮೂರೂ ವಿಷಯಗಳು ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿ ಮಾಡುವ ಮುನ್ನ ಸರಕಾರ ಹಾಗೂ ಸಮಾಜ ಸಾಮಾಜಿಕ ನ್ಯಾಯದ ಮಾನದಂಡದಲ್ಲಿ ಬಗೆಹರಿಸಬೇಕಿರುವ ಸಮಸ್ಯೆಗಳು.
ಅಸಲು ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಬಹುದು ಎಂಬ ಪ್ರಶ್ನೆಯನ್ನು ಹಾಕಿಕೊಂಡರೆ ಪ್ರಸಕ್ತ ಕಾಲ-ಸಂದರ್ಭದ ಮಿತಿಯಲ್ಲಿ ಸಿಗಬಹುದಾದ ಪರಿಹಾರ ಸುಲಭವಾಗಿ ಸಿಗುತ್ತಿತ್ತು. ಆದರೆ ದೇಶಾದ್ಯಂತ ಹಾಗೂ ಕರ್ನಾಟಕದಲ್ಲೂ ಎಲ್ಲಾ ಪಕ್ಷಗಳು ಮತ್ತು ಸರಕಾರಗಳು ಈ ವಾಸ್ತವಿಕ ಸಮಸ್ಯೆಗಳನ್ನು ಒಳಮೀಸಲಾತಿಯನ್ನು ಜಾರಿ ಮಾಡದಿರಲು ನೆಪವಾಗಿ ಬಳಸಿಕೊಳ್ಳುತ್ತಿರುವುದರಿಂದ ಮಾತ್ರ ಅವು ಇನ್ನೂ ಸಮಸ್ಯೆಗಳಾಗಿ ಉಳಿದಿವೆಯಷ್ಟೆ.
ಹೀಗಾಗಿ ಸಮಾಜ, ಸರಕಾರ ಮತ್ತು ಆಯೋಗ ಒಳಮೀಸಲಾತಿಯ ಜಾರಿಗೆ ಮುಂಚೆ ಬಗೆಹರಿಸಿಕೊಳ್ಳಬೇಕಿರುವ ಸಮಸ್ಯೆಗಳ ಬಗ್ಗೆಯೂ ಸಮರೋಪಾದಿಯಲ್ಲಿ ತೊಡಗಿಕೊಳ್ಳಬೇಕಿದೆ.
ಒಳಮೀಸಲಾತಿ ಜಾರಿಗೆ ಅಡ್ಡಿಯಿರುವ ತೊಡಕುಗಳನ್ನು ನಿವಾರಿಸಿಕೊಳ್ಳಲು ಮುಂದಿನ ಹೆಜ್ಜೆಗಳು
- ಸರಕಾರ ಮತ್ತು ಪಕ್ಷದ ಒಳಗೆ ಮತ್ತು ಹೊರಗೆ ಹಂಚಿಕೊಂಡು ತಿನ್ನಲು ಸಿದ್ಧವಿಲ್ಲದ, ಒಳಮೀಸಲಾತಿಯನ್ನು ವಿರೋಧಿಸುವ ಪಟ್ಟಭದ್ರ ಹಿತಾಸಕ್ತಿಗಳಿಗೆ ಮುಂದೆಯೂ ಮಣಿಯದ ಗಟ್ಟಿ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳಬೇಕು. ಪಟ್ಟಭದ್ರ ಹಿತಾಸಕ್ತಿಗಳನ್ನು ಜೊತೆ ಮಾತುಕತೆಯಾಡಿ ಒಪ್ಪಿಸಲು ಸಾಧ್ಯವಿಲ್ಲ. ಅದರಿಂದ ಕಾಂಗ್ರೆಸ್ ಸರಕಾರ ಮುಂದೆಯೂ ರಾಜಕೀಯ ನಷ್ಟದ ಲೆಕ್ಕಾಚಾರದಲ್ಲಿ ಒಳಮೀಸಲಾತಿಯನ್ನು ನನೆಗುದಿಗೆ ಹಾಕದಂತೆ ಸಾಮಾಜಿಕ ನ್ಯಾಯವಾದಿಗಳು ನಿರಂತರ ಕಾವಲು ಕಾಯಬೇಕು. ಒಂದು ಕಾವಲು ಸಮಿತಿಯನ್ನು ರಚಿಸಿಕೊಳ್ಳಬೇಕು.
- ಒಳಮೀಸಲಾತಿಯನ್ನು ಜಾರಿ ಮಾಡುವಾಗ ಜಾತಿವಾರು ಮತ್ತು ಉಪಜಾತಿವಾರು ಸಂಖ್ಯಾ ಗಣತಿಯಲ್ಲಿ ಏರ್ಪಟ್ಟಿರುವ ತೊಡಕುಗಳಿಂದಾಗಿ ಈವರೆಗೆ ಹೆಚ್ಚು ಸೌಲಭ್ಯ ಪಡೆಯದ ಸಮುದಾಯಗಳಿಗೆ ಅನ್ಯಾಯವಾಗಬಹುದು ಎಂಬ ಸಹಜ ಅನುಮಾನ ಮತ್ತು ಆತಂಕಗಳಿವೆ. ಸಮಾಜ ಹಾಗೂ ಸರಕಾರ ಈ ಸಕಾರಣ ಆತಂಕವನ್ನು ಪರಿಗಣಿಸಿ ಅದನ್ನು ದೂರಗೊಳಿಸಬೇಕು ಮತ್ತು ಸೂಕ್ತ ಹಾಗೂ ಸಮ್ಮತ ಪರಿಹಾರೋಪಾಯಗಳನ್ನು ಹುಡುಕಬೇಕು. ವಿಶೇಷವಾಗಿ ಆದಿ ದ್ರಾವಿಡ, ಆದಿ ಕರ್ನಾಟಕ ವರ್ಗೀಕರಣದಿಂದ ಉಂಟಾಗಿರುವ ಪ್ರಮಾಣವಾರು ಜಾತಿ ಜನಸಂಖ್ಯೆಯ ಏರುಪೇರಿನ ವಿಷಯದಲ್ಲಿ.
- ಪರಿಶಿಷ್ಟ ಜಾತಿಗಳ ವಿಶಾಲ ವರ್ಗೀಕರಣಕ್ಕೆ ಒಳಪಡಲು ಒಪ್ಪದ ಹಾಗೂ ಒಳಮೀಸಲಲ್ಲಿ ಪ್ರತ್ಯೇಕವಾಗಿ ಪರಿಗಣಿಸಲ್ಪಡಲು ಆಗ್ರಹಿಸುತ್ತಿರುವ ಮೈಕ್ರೋ ಸಮುದಾಯಗಳ ಆಗ್ರಹದಲ್ಲಿ ಸಾಮಾಜಿಕ ನ್ಯಾಯವಿದೆ. ಸರಕಾರ ಮತ್ತು ಸಮುದಾಯಗಳು ಸಹಾನುಭೂತಿಯಿಂದ ಮತ್ತು ಮೈಕ್ರೋ ಸಮುದಾಯಗಳ ಹಿತಾಸಕ್ತಿಗೆ ಪೂರಕವಾಗಿ ಅದನ್ನು ಪರಿಗಣಿಸಬೇಕು.
-ಇವೆಲ್ಲವೂ ಕಾಲಮಿತಿಯಲ್ಲಿ ಸಂಪೂರ್ಣಗೊಳ್ಳಲು ಸಮುದಾಯ ಹಾಗೂ ಪ್ರಗತಿಪರ ಸಮಾಜ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕಾರ್ಯೋನ್ಮುಖರಾಗಬೇಕು.
-ಸರಕಾರವು ಅಕ್ಟೋಬರ್ ಮುಗಿಯುವ ಮುನ್ನ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಿ, ಕಾರ್ಯಸೂಚಿಯನ್ನು ಒದಗಿಸಿ, ಕಚೇರಿ, ಸಿಬ್ಬಂದಿ, ವಾಹನ ಹಾಗೂ ಅಗತ್ಯವಿರುವ ಎಲ್ಲಾ ಅನುಕೂಲಗಳನ್ನು ಜೊತೆಜೊತೆಗೆ ಒದಗಿಸಬೇಕು. ಆಯೋಗವು ಪರಿಣಿತರ ಸಹಕಾರವನ್ನು ಮಾತ್ರವಲ್ಲದೆ ಸಮುದಾಯದ ವಿವೇಕವನ್ನು ಬಳಸಿಕೊಳ್ಳಬೇಕು. ಅಂತಹ ವ್ಯವಸ್ಥೆಯು ಆಯೋಗದ ಕಾರ್ಯಸೂಚಿಯಲ್ಲೇ ಇರಬೇಕು.
-ಆಗಸ್ಟ್‌ನಲ್ಲೇ ಸುಪ್ರೀಂ ತೀರ್ಪು ಬಂದರೂ ತೀರ್ಮಾನ ತೆಗೆದುಕೊಳ್ಳಲು ಸರಕಾರ ಹಿಂಜರಿದಿದ್ದರಿಂದ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಹೀಗಾಗಿ ಆಯೋಗ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಎಲ್ಲಾ ಸಹಕಾರವನ್ನು ಕೊಟ್ಟು ನವೆಂಬರ್ ಅಂತ್ಯದೊಳಗೆ ತನ್ನ ವರದಿಯನ್ನು ಕೊಡಲು ಸೂಚಿಸಬೇಕು ಹಾಗೂ ಸಂಪುಟ ತೀರ್ಮಾನ ತೆಗೆದುಕೊಂಡು ಡಿಸೆಂಬರ್ 6ರ ಅಂಬೇಡ್ಕರ್ ಪರಿನಿರ್ವಾಣದ ದಿನದಿಂದ ಒಳಮೀಸಲಾತಿ ಜಾರಿ ಮಾಡಬೇಕು.
ಪಾಲಿನ ಗಾತ್ರದ ಕಡಿತ ಹಾಗೂ ಸಂಪತ್ತಿನ ಮೀಸಲಾತಿ ಪ್ರಶ್ನೆ?
ಒಳಮೀಸಲಾತಿ ಪಾಲಿನ ಹಂಚಿಕೆಯಲ್ಲಿರುವ ತಾರತಮ್ಯವನ್ನು ಸರಿಪಡಿಸಬಹುದು. ಆದರೆ ಪಾಲಿನ ಗಾತ್ರವೇ ಕಡಿಮೆಯಾಗುತ್ತಿರುವ ಅನ್ಯಾಯವನ್ನು ಹೇಗೆ ತಡೆಗಟ್ಟುವುದು?
ಸಾಮಾಜಿಕವಾಗಿ ಅನ್ಯಾಯಕ್ಕೆ ಗುರಿಯಾಗಿರುವ ಸಮುದಾಯಗಳ ಸಂವಿಧಾನ ಬದ್ಧ ಪಾಲನ್ನು ಕೋರ್ಟು ಹಾಗೂ ಸರಕಾರಗಳೇ ಕಡಿಮೆ ಮಾಡುತ್ತಾ ಬರುತ್ತಿವೆ.
1994ರ ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅನಗತ್ಯವಾಗಿ ದಲಿತ ಮತ್ತು ಒಬಿಸಿ ಮೀಸಲಾತಿಯ ಮೇಲ್ಮಿತಿಯನ್ನು ಶೇ. 50ಕ್ಕೆ ಸೀಮಿತಗೊಳಿಸಿದೆ. ಇದರಿಂದಾಗಿ ದಲಿತ ಮತ್ತು ಒಬಿಸಿಗಳ ಒಟ್ಟಾರೆ ಜನಸಂಖ್ಯೆ ಹೆಚ್ಚಿದ್ದರೂ ಸಂವಿಧಾನದಲ್ಲಿ ಹೇಳಿರುವಂತೆ ಜನಸಂಖ್ಯೆಯ ಅನುಪಾತಕ್ಕೆ ತಕ್ಕಂತೆ ಮೀಸಲಾತಿ ದಕ್ಕುತ್ತಿಲ್ಲ. ಶೇ. 50ರ ಮೇಲ್ಮಿತಿ ತೆಗೆದರೆ ಮೀಸಲಾತಿ ಮತ್ತು ಒಳಮೀಸಲಾತಿಯ ಪಾಲಿನ ಪ್ರಮಾಣವೂ ಹೆಚ್ಚಾಗುತ್ತದೆ. ಆದರೆ ಅದನ್ನು ಮಾಡಲು ಶೋಷಿತರೆಲ್ಲರ ಬಲವಾದ ಏಕತೆ ಬೇಕಿದೆ.
ಹಾಗೆಯೇ 1991ರ ನಂತರ ಉದಾರೀಕರಣ-ಖಾಸಗೀಕರಣ- ಜಾಗತೀಕರಣ ನೀತಿಗಳ ಮೂಲಕ ಸರಕಾರವೇ ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳ ಸಂಖೆಯನ್ನು ತೀವ್ರವಾಗಿ ಕಡಿತ ಮಾಡುತ್ತಿದೆ. ಅದರಿಂದಾಗಿ ಮೀಸಲಾತಿ ಫಲಾನುಭವಿಗಳ ಸಂಖ್ಯೆಯೂ ಕೂಡ ತೀವ್ರವಾಗಿ ಕಡಿತವಾಗುತ್ತಿದೆ. ಆದ್ದರಿಂದ ಉದ್ಯೋಗ ಮತ್ತು ಶಿಕ್ಷಣಾವಕಾಶಗಳ ಪಾಲಿನ ಗಾತ್ರ ಹೆಚ್ಚಬೇಕೆಂದರೆ ಸರಕಾರವನ್ನೇ ಖಾಸಗೀಕರಿಸುವ ಮಾರುಕಟ್ಟೆ ಪರ ಆರ್ಥಿಕ ನೀತಿಗಳ ವಿರುದ್ಧವೂ ಸಮರ ಸಾರಬೇಕಿದೆ. ಇದಕ್ಕೆ ಎಲ್ಲಾ ಬಡವರ ಏಕತೆ ಗಟ್ಟಿಯಾಗಬೇಕಿದೆ.
ಇವೆಲ್ಲಕ್ಕಿಂತ ಹೆಚ್ಚಾಗಿ ಕಳೆದ 75 ವರ್ಷಗಳಲ್ಲಿ ಮೀಸಲಾತಿಯಿಂದ ಲಾಭ ಪಡೆದ ದಲಿತ ಸಮುದಾಯದ ಒಟ್ಟು ಪ್ರಮಾಣ ಶೇ. 2ನ್ನು ದಾಟಿಲ್ಲ ಮತ್ತು ಒಬಿಸಿ ಸಮುದಾಯಗಳ ಪ್ರಮಾಣ ಶೇ. 10ನ್ನು ದಾಟಿಲ್ಲ. ಹೀಗಾಗಿ ಸಮುದಾಯದ ಉಳಿದ ಶೇ.90-98ರಷ್ಟು ಜನತೆಗೆ ಮೀಸಲಾತಿಯಿಂದಾಗಲೀ ಅಥವಾ ಒಳಮೀಸಲಾತಿಯಿಂದಾಗಲೀ ಯಾವ ಪ್ರಯೋಜನವೂ ಇಲ್ಲ.
ಹೀಗಾಗಿ ಬಹುಪಾಲು ಬಹುಜನ ಸಮುದಾಯ ಸಂಪತ್ತು ಮತ್ತು ಅವಕಾಶಗಳಲ್ಲಿ ಪಾಲಿಲ್ಲದೆ ಆಧುನಿಕ ಕೂಲಿ ಗುಲಾಮಗಿರಿಯತ್ತ ಸಾಗುತ್ತಿದೆ. ಈ ದೇಶದ ಶೇ. 30ರಷ್ಟು ಸಂಪತ್ತು ಶೇ. 1ರಷ್ಟು ಜನರ ಬಳಿ ಸಂಗ್ರಹವಾಗಿದೆ. ದೇಶದ ಶೇ. 10ರಷ್ಟು ಸಂಪತ್ತು ಮಾತ್ರ ದೇಶದ ಶೇ. 60ರಷ್ಟು ದಮನಿತ ಜನತೆಗೆ ದಕ್ಕಿದೆ. ಅದು ಕೂಡ ಈಗ ಮತ್ತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರ್ಪೊರೇಟ್ ಕುಳಗಳು ಕಸಿಯುತ್ತಿವೆ. ಹೀಗಾಗಿ ಇಡೀ ದಮನಿತ ಸಮುದಾಯಗಳಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ದೊರೆಯಬೇಕೆಂದರೆ ದೇಶದ ಸಂಪತ್ತಿನ ಮೇಲೆ ಕಾರ್ಪೊರೇಟ್ ಕುಳಗಳಿಗಿರುವ ಮೀಸಲಾತಿ ರದ್ದಾಗಿ ಸಮಾನವಾಗಿ ಹಂಚಿಕೆಯಾಗಬೇಕಿದೆ.
ಇವೆಲ್ಲವೂ ಆಗಲು ಸಮಾನತೆಗಾಗಿ ಮತ್ತೊಂದು ಸ್ವಾತಂತ್ರ್ಯ ಹೋರಾಟವೇ ಕಟ್ಟಬೇಕಿದೆ.
ಆದು ಸಾಧ್ಯವಾಗಬೇಕೆಂದರೆ ಒಳಮೀಸಲಾತಿ ಮತ್ತು ಮೀಸಲಾತಿಯ ಗೊಂದಲಗಳನ್ನು ಬಗೆಹರಿಸಿಕೊಂಡು ಅದರ ಪರಿಣಾಮಕಾರಿ ಬಳಕೆಯನ್ನು ಮಾಡಿಕೊಳ್ಳುತ್ತಲೇ ಅದರಾಚೆಗೆ ಇರುವ ಸಮುದಾಯದ ಪಾಲಿಗಾಗಿ ದಮನಿತರೆಲ್ಲರ ನಡುವೆ ಹೆಬ್ಬಂಡೆಯಂಥ ಒಗ್ಗಟ್ಟು ಮೂಡಬೇಕಿದೆ.
ಆ ಬೃಹತ್ ಸವಾಲಿನ ಮುನ್ನೋಟವಿದ್ದರೆ ಎದುರಿಗಿರುವ ಒಳಮೀಸಲಾತಿಯ ಸವಾಲುಗಳನ್ನು ಮತ್ತಷ್ಟು ಸೋದರ ಭಾವದಿಂದ ಬಗೆಹರಿಸಿಕೊಳ್ಳಬಹುದು.
ಅಲ್ಲವೇ?