ಮೋದಿ 3.0 ಬಜೆಟ್- ಅದೇ ಸರಕಾರ- ಅದೇ ಕಾರ್ಪೊರೇಟ್ ಪರ ಬಜೆಟ್
ಮೋದಿ 3.0 ಸರಕಾರ ತನ್ನ ಮೊದಲ ಬಜೆಟ್ ಮಂಡಿಸಿದೆ. ಈ ಬಾರಿ ಬಹುಮತ ಬರದಿದ್ದರೂ ಹೇಗೆ ಅದೇ ಪ್ರಧಾನಿ, ಅದೇ ಗೃಹಮಂತ್ರಿ , ಅದೇ ಮಂತ್ರಿ ಮಂಡಲ, ಅದೇ ಸ್ಪೀಕರ್, ಅದೇ ಅಹಂಕಾರ- ದುರಹಂಕಾರಗಳನ್ನು ಮೋದಿ ಸರಕಾರ ಮುಂದುವರಿಸುತ್ತಾ ಬಂದಿದೆಯೋ ಅದೇ ರೀತಿ ಬಜೆಟ್ ಕೂಡ ಹಳೆಯ ಮೋದಿ ಸರಕಾರದ ಕಾರ್ಪೊರೇಟ್‌ರ ಜನವಿರೋಧಿ ಮತ್ತು ಬಜೆಟ್‌ಗಳ ಮುಂದುವರಿಕೆಯೇ ಆಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ವಾಸ್ತವವಾಗಿ ಈ ಚುನಾವಣೆಯಲ್ಲಿ ಸರಕಾರ ಸಂವಿಧಾನ ವಿರೋಧಿ ಮತ್ತು ಯುವಕರ ವಿರೋಧಿ ಎಂದು ಭಾರತದ ಶೋಷಿತರು ಮತ್ತು ಯುವಕರು ಹಿಂದಿಗಿಂತ ಹೆಚ್ಚು ಅರ್ಥಮಾಡಿಕೊಂಡಿದ್ದು ಬಿಜೆಪಿಗೆ ಬಹುಮತ ಬರದಿರಲು ಪ್ರಧಾನ ಕಾರಣವಾಗಿತ್ತು. ಹೀಗಾಗಿಯೇ ಎದೆಯಲ್ಲಿ ಸಂವಿಧಾನ ಘೋಷಿಸುವ ಸಾಮಾಜಿಕ ಸಮಾನತೆ ಮತ್ತು ಧರ್ಮ ನಿರಪೇಕ್ಷತೆಯ ಬಗ್ಗೆ ಅಪಾರ ದ್ವೇಷವಿದ್ದರೂ ಮೋದಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸುವ ಮುನ್ನ ಸಂವಿಧಾನವನ್ನು ತಲೆ ಮೇಲೆ ಇಟ್ಟುಕೊಳ್ಳುವ ನಾಟಕವಾಡಿದರು.
ಅದೇ ರೀತಿ ಈ ಬಜೆಟ್‌ನಲ್ಲೂ ತಾನು ಯುವಜನರ ಪರ, ನಿರುದ್ಯೋಗಿಗಳ ಪರ ಎಂದು ತೋರಿಸಿಕೊಳ್ಳುವ ನಾಟಕವನ್ನು ಮೋದಿ ಸರಕಾರ ಮಾಡಿದೆ ಹಾಗೂ ವಿಕಸಿತ ಭಾರತ ಕಟ್ಟಲು ಯುವಕರು, ಬಡವರು, ಮಹಿಳೆಯರು ಮತ್ತು ರೈತರು ಎಂಬ ನಾಲ್ಕು ಜಾತಿಗಳನ್ನೂ ಸಬಲೀಕರಿಸಲು ಹೆಚ್ಚು ಒತ್ತು ಕೊಡುವುದಾಗಿ ಹೇಳಲಾಗಿದೆ. ಆದರೆ ಬಜೆಟ್‌ನ ವಿವರಗಳನ್ನು ಮತ್ತು ಪರಿಣಾಮಗಳನ್ನು ನೋಡಿದರೆ ಇವೆಲ್ಲಾ ಬಣದ ಬಲೂನುಗಳು ಎಂಬುದು ಸಾಬೀತಾಗತ್ತದೆ.
ಕಾರ್ಪೊರೇಟ್ ಔದಾರ್ಯಕ್ಕೆ ಯುವಜನರ ಭವಿಷ್ಯದ ಬಲಿ
ಉದಾಹರಣೆಗೆ ಬಜೆಟ್‌ಗೆ ಮುನ್ನ ಪ್ರಕಟವಾದ ಇಕನಾಮಿಕ್ ಸರ್ವೇಯಲ್ಲಿ ಅತ್ಯಂತ ಸ್ಪಷ್ಟವಾಗಿ ಯುವಜನರ ನಿರುದ್ಯೋಗ ಹೆಚ್ಚಾಗುತ್ತಿದೆ, ಕಾರ್ಪೊರೇಟ್ ಕಂಪೆನಿಗಳು ಉದ್ಯೋಗ ಸೃಷ್ಟಿಸುತ್ತಿಲ್ಲ, ಅಸಂಘಟಿತ ವಲಯದಲ್ಲೂ ಉದ್ಯೋಗಗಳು ತೀವ್ರಗತಿಯಲ್ಲಿ ಕಡಿಮೆಯಾಗುತ್ತಿವೆ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಅದೇ ರೀತಿ ಕೃಷಿಯಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟನ್ನು ಸ್ಪಷ್ಟಪಡಿಸಿತ್ತು.
ಮೊದಲನೆಯದಾಗಿ ಮೋದಿ ಕಾಲದಲ್ಲಿ ಭಾರತದ ಯುವಜನತೆ ಎದುರಿಸುತ್ತಿರುವ ಅತಿ ದೊಡ್ಡ ಸಾವು-ಬದುಕಿನ ಸವಾಲು ದುಬಾರಿ ಶಿಕ್ಷಣ ಮತ್ತು ನಿರುದ್ಯೋಗ. ಅದರ ಬಗ್ಗೆ ಈ ಬಜೆಟ್‌ನಲ್ಲಿ ಮೋದಿ ಸರಕಾರ ಮಾಡಿರುವ ಬಣ್ಣದ ಮಾತಿನ ಮೋಸವನ್ನು ನೋಡಿ.
ಮೋದಿ ಸರಕಾರದ 2020ರ ರಾಷ್ಟ್ರೀಯ ಶಿಕ್ಷಣ ನೀತಿಯು ತಳಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಮತ್ತು ರಿಯಾಯತಿ ಶಿಕ್ಷಣವನ್ನು ಕೊಡುವುದನ್ನು ಹಂತಹಂತವಾಗಿ ತೆಗೆಯುವ ಪ್ರಸ್ತಾನ ಮಾಡಿದೆ ಹಾಗೂ ಇಡೀ ಶಿಕ್ಷಣವನ್ನು ಹೆಚ್ಚೆಚ್ಚು ಖಾಸಗೀಕರಿಸುತ್ತಿದೆ. ಶಿಕ್ಷಣದ ಮೇಲೆ ಸರಕಾರಿ ವೆಚ್ಚ ಕಡಿಮೆಯಾಗುತ್ತಿರುವುದರಿಂದ ಸರಕಾರಿ ಹಾಸ್ಟೆಲ್, ಸರಕಾರಿ ಕಾಲೇಜು ಇತ್ಯಾದಿಗಳು ವೇಗವಾಗಿ ಕಡಿಮೆಯಾಗುತ್ತಾ ಹೋಗಿದೆ. ಆದ್ದರಿಂದಲೇ ಕಾಲೇಜುಗಳಿಂದ ಹೊರಬೀಳುತ್ತಿರುವ ಲಕ್ಷಾಂತರ ಯುವಕರು ಯಾವುದೇ ಕೌಶಲ್ಯ ವಿಲ್ಲದೆ ಉದ್ಯೋಗ ಮಾರುಕಟ್ಟೆಯಲ್ಲಿ ತಿರಸ್ಕರಿಸಲ್ಪಡುತ್ತಿದ್ದಾರೆ. ಆದ್ದರಿಂದ ನಿರುದ್ಯೋಗ ಮತ್ತು ಯುವಕರ ಆತ್ಮಹತ್ಯೆ ಎಲ್ಲವೂ ಜಾಸ್ತಿಯಾಗಿದೆ. ಆದರೆ ಸರಕಾರ ಯುವಕರು ನಿರುದ್ಯೋಗಿಗಳಾಗಿರುವುದಕ್ಕೆ ಕೌಶಲ್ಯದ ಕೊರತೆ ಎಂದು ಹೇಳುತ್ತಾ ಬಾಧಿತರ ಮೇಲೆ ಹೊಣೆ ಹೊರಿಸುತ್ತಿದೆ.
ಆದರೆ ಯುವಜನರು ಕೌಶಲ್ಯವಂತರಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಅರ್ಹರಾಗಬೇಕಿದ್ದರೆ, ಅದರಲ್ಲೂ ಬಡ ಹಾಗೂ ತಳಸಮುದಾಯಗಳ ಯುವಜನತೆಗೆ ಸರಕಾರವು ಮತ್ತೆ ಉನ್ನತ ಶಿಕ್ಷಣದಲ್ಲಿ ಹೆಚ್ಚುವರಿಯಾಗಿ ಹೂಡಿಕೆ ಮಾಡಿ, ಸ್ಕಾಲರ್‌ಶಿಪ್, ಫೇಲ್‌ಶಿಪ್ ಯೋಜನೆಗಳ ಖಾತರಿ ಕೊಡಬೇಕಿತ್ತು.ಅದರ ಭಾಗವಾಗಿ ಕೌಶಲ್ಯದ ಶಿಕ್ಷಣವನ್ನೂ ಸಾರ್ವತ್ರಿಕವಾಗಿ ಎಲ್ಲರಿಗೂ ದೊರಕಿಸಬೇಕಿತ್ತು.
ಅದರ ಬದಲಿಗೆ ಈ ಬಜೆಟ್‌ನಲ್ಲಿ ಯುವಕರ ಮೇಲೆ ಒತ್ತು ಎಂದು ಹೇಳುತ್ತಾ ಮೋದಿ ಸರಕಾರ ಬಡ ಯವಕರ ಶಿಕ್ಷಣಕ್ಕೆ 7.5 ಲಕ್ಷ ರೂ. ಸಾಲ ಕೊಡಿಸುವ ಪ್ರಸ್ತಾವ ಮಾಡಿದೆಯೇ ವಿನಾ ಉಚಿತ ಅಥವಾ ರಿಯಾಯತಿ ಸರಕಾರಿ ಶಿಕ್ಷಣದ ಪ್ರಸ್ತಾಪವನ್ನೇ ಇಟ್ಟಿಲ್ಲ. ಈ ಸಾಲವನ್ನು ತೀರಿಸಲೇಬೇಕು. ಹೀಗಾಗಿ ಸಾಲ ಯೋಜನೆ ಉನ್ನತ ಶಿಕ್ಷಣದ ಖಾಸಗಿ ಉನ್ನತ ಸಂಸ್ಥೆಗಳ ಲಾಭವನ್ನು ಪರೋಕ್ಷವಾಗಿ ಹೆಚ್ಚಿಸುತ್ತಾ ಕೋಟ್ಯಂತರ ಯುವಜನರನ್ನು ಉನ್ನತ ಶಿಕ್ಷಣದಿಂದ ಹೊರಗಟ್ಟುವ ಯೋಜನೆಯೇ ಆಗಿದೆ.
ಹಾಗೆ ನೋಡಿದರೆ, ಶಿಕ್ಷಣದ ಜವಾಬ್ದಾರಿಯನ್ನು ಖಾಸಗಿಗೆ ಬಿಟ್ಟುಕೊಟ್ಟಿರುವುದರಿಂದಲೇ ಶಿಕ್ಷಣದ ಮೇಲಿನ ಮೋದಿ ಸರಕಾರದ ವೆಚ್ಚ ಕಡಿಮೆಯಾಗುತ್ತಲೇ ಬಂದಿದೆ. 2023 ರಲ್ಲಿ ಶಿಕ್ಷಣದ ಮೇಲೆ 1.16 ಲಕ್ಷ ರೂ. ಕೋಟಿ ವೆಚ್ಚ ಮಾಡುತ್ತೇವೆಂದು ಬೊಗಳೆ ಬಿಟ್ಟಿದ್ದರೂ ಅಸಲಿ ವೆಚ್ಚ ಮಾಡಿದ್ದು ಕೇವಲ 1.08 ಲಕ್ಷ ರೂ. ಕೋಟಿ ಮಾತ್ರ. ಈ 2023-24 ರ ಸಾಲಿನಲ್ಲಿ 1.25 ಲಕ್ಷ ರೂ. ಕೋಟಿ ವೆಚ್ಚ ಮಾಡುತ್ತೇವೆಂದು ಬೊಗಳೆ ಬಿಡಲಾಗಿದೆ. ಅಂದರೆ ಹೆಚ್ಚಿಸಿರುವುದು ಕೇವಲ 9 ಸಾವಿರ ಕೋಟಿ ರೂ. ಮಾತ್ರ. ಹಣದುಬ್ಬರವನ್ನು ಸೇರಿಸಿ ಲೆಕ್ಕ ಹಾಕಿದರೆ ಇದು ಹೆಚ್ಚಳವೇ ಅಲ್ಲ. ಬದಲಿಗೆ ಹೋದವರ್ಷಕ್ಕಿಂತ ಕಡಿತ.
ಹಾಗೆಯೇ ಯುವಜನರನ್ನು ಬಾಧಿಸುತ್ತಿರುವ ನಿರುದ್ಯೋಗ ನಿವಾರಿಸಲು ಇಕನಾಮಿಕ್ ಸರ್ವೇ ಸ್ಪಷ್ಟಪಡಿಸುವಂತೆ ಸರಕಾರ ಆಧರಿಸಬೇಕಿದ್ದದ್ದು ಕಾರ್ಪೊರೇಟ್ ಕ್ಷೇತ್ರವನ್ನಲ್ಲ. MSME - ಸಣ್ಣ ಉದ್ಯಮಗಳ ಅಸಂಘಟಿತ ಕ್ಷೇತ್ರವನ್ನು .
ಆದರೆ ಈ ಬಜೆಟ್‌ನಲ್ಲಿ ಮೋದಿ ಸರಕಾರ ಉದ್ಯೋಗ ಸೃಷ್ಟಿಯ ಹೆಸರಲ್ಲಿ ಘೋಷಿಸಿರುವ ಯೋಜನೆಗಳಾದರೂ ಎಂಥವು ?
500 ದೊಡ್ಡ ಕಂಪೆನಿಗಳಲ್ಲಿ ಅಪ್ರೆಂಟಿಸ್ ತರಬೇತಿ, ಸಂಘಟಿತ ಕ್ಷೇತ್ರದಲ್ಲಿ ಕೆಲಸಕ್ಕೆ ಸೇರುವ ಹೊಸ ಉದ್ಯೋಗಿಗೆ ಮೂರು ತಿಂಗಳ ಸಂಬಳ, ಪ್ರಾವಿಡೆಂಟ್ ಫಂಡ್ ಪಾಲನ್ನು ಸರಕಾರ ಕಟ್ಟುವುದು.
ಇವೆಲ್ಲಾ ಕಾರ್ಪೊರೇಟ್ ಕಂಪೆನಿಗಳನ್ನು ಆಧರಿಸುವ ಮತ್ತ್ತು ಅವನ್ನು ಕೊಬ್ಬಿಸುವ ಯೋಜನೆಗಳೇ! 2023-24ರ ಇಕಾನಾಮಿಕ್ ಸರ್ವೇ ಹೇಳುವಂತೆ ಕಾರ್ಪೊರೇಟ್ ವಲಯದಲ್ಲಿ ಸಾಮಾನ್ಯರ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಮತ್ತು ಲಾಭಕೋರ ಕಾರ್ಪೊರೇಟಿಗರು ಕಳೆದ ಮೂರು ವರ್ಷಗಳಲ್ಲಿ ಮೂರ್ನಾಲ್ಕು ಪಟ್ಟು ಹೆಚ್ಚಿಸಿಕೊಂಡಿರುವ ಲಾಭವನ್ನು ವೈಯಕ್ತಿಕ ಸಂಪತ್ತು ಐಷಾರಾಮಗಳಿಗೆ ವೆಚ್ಚ ಮಾಡುತ್ತಿದ್ದಾರೆ. ಉದ್ಯೋಗ ಸೃಷ್ಟಿಯಲ್ಲಲ್ಲ. ಆದರೂ ಮತ್ತೊಮ್ಮೆ ಸರಕಾರ ಅದೇ ಕಾರ್ಪೊರೇಟ್ ಕ್ಷೇತ್ರವನ್ನೇ ನೆಚ್ಚಿಕೊಳ್ಳುತ್ತಿದೆೆ.
ಈ ಪ್ರಕ್ರಿಯೆಯಲ್ಲಿ ಮೋದಿ ಸರಕಾರ ಉದ್ಯೋಗ ಸೃಷ್ಟಿಸುವ ತನ್ನ ಜವಾಬ್ದಾರಿಯನ್ನು ನಿರಾಕರಿಸುತ್ತಿದೆ .
ಹಾಗೆಯೇ ಇಡೀ ಬಜೆಟ್‌ನಲ್ಲಿ ಸರಕಾರಿ ಉದ್ಯೋಗವನ್ನು ಹೆಚ್ಚಿಸುವ ಅಥವಾ ಖಾಲಿ ಇರುವ ಸರಕಾರಿ ಉದ್ಯೋಗವನ್ನು ತುಂಬುವ ಯಾವೊಂದು ಮಾತೂ ಆಡಿಲ್ಲ.
ಇದಕ್ಕಿಂತ ದ್ರೋಹ ಮತ್ತೊಂದುಂಟೆ?
ಅನ್ನದಾತನ ತಟ್ಟೆ ಕಸಿಯುವ ಬಜೆಟ್
ಇನ್ನು ರೈತರ ಬಗ್ಗೆ ಅದು ಆಡಿರುವ ಬಣ್ಣಬಣ್ಣದ ರೈತ ದ್ರೋಹಿ ಮಾತುಗಳು. ಅದು ರೈತರ ಸಬ್ಸಿಡಿ ಇತ್ಯಾದಿಗಳಿಗೆ ಎತ್ತಿಟ್ಟಿರುವ ಹಣದ ಗಾತ್ರವನ್ನು ನೋಡಿದರೆ ಗೊತ್ತಾಗುತ್ತದೆ.
ಉದಾಹರಣೆಗೆ ರಸಗೊಬ್ಬರ ಸಬ್ಸ್ಸಿಡಿ 2022-24 ರಲ್ಲಿ 2.5 ಲಕ್ಷ ಕೋಟಿ ರೂ. ಯಷ್ಟಿತ್ತು. ಅದನ್ನು ಮೋದಿ ಸರಕಾರ 2023-24 ರಲ್ಲಿ 1.75 ಲಕ್ಷ ರೂ. ಕೋಟಿಗಿಳಿಸಿತು. ಈ ಸಾಲಿನಲ್ಲಿ ಅದನ್ನು 1.64 ಲಕ್ಷ ರೂ. ಕೋಟಿಗೆ ಇಳಿಸಲಾಗಿದೆ. ಅಂದರೆ ರೈತ ಪರ ಸರಕಾರ ಎಂದು ಕೊಚ್ಚಿಕೊಳ್ಳುವ ಮೋದಿ ಸರಕಾರ ಕಳೆದ ಎರಡು ವರ್ಷಗಳಲ್ಲಿ ರಸಗೊಬ್ಬರ ಸಬ್ಸಿಡಿಯನ್ನು 60,000 ಕೋಟಿ ರೂ.ನಷ್ಟು ಕಡಿತ ಮಾಡಿದೆ.
ಬಡವರ ಹಸಿವು ಹೆಚ್ಚಿಸುವ ಬಜೆಟ್
ವಿಕಸಿತ ಭಾರತಕ್ಕಾಗಿ ಬಡವರಿಗೆ ಒತ್ತು ಎಂದು ಬಣ್ಣಿಸಿಕೊಳ್ಳುವ ಮೋದಿ ಬಜೆಟ್ ಬಡವರಿಗೆ ಮಾಡಿರುವುದೇನು?
ಉದಾಹರಣೆಗೆ ಉಚಿತ ಪಡಿತರಕ್ಕಾಗಿ ಕೊಡುತ್ತಿದ್ದ ಆಹಾರ ಸಬ್ಸಿಡಿ 2022-23 ರಲ್ಲಿ 2.72 ಲಕ್ಷ ರೂ. ಕೋಟಿ ಯಷ್ಟಿದ್ದರೆ ಅದನ್ನು 2023-24 ರಲ್ಲಿ 2.12 ಲಕ್ಷ ಕೋಟಿಗಿಳಿಸಿತ್ತು. 2023-24 ಸಾಲಿನಲ್ಲಿ ಅದನ್ನು 2.05 ಲಕ್ಷ ಕೋಟಿಗೆ ಮತ್ತೆ ಇಳಿಸಲಾಗಿದೆ. ಅಂದರೆ ಎರಡು ವರ್ಷಗಳಲ್ಲಿ ಬಡವರಿಗೆ ಅನ್ನದ ಪಾಲು 70,000 ಕೋಟಿ ರೂ. ಕಡಿತ.
ಫೆಡರಲ್ ವಿರೋಧಿ ಬಜೆಟ್- ರಾಜ್ಯದ ಪಾಲು ಇನ್ನಷ್ಟು ಕಡಿತ:
ಇಷ್ಟು ಮಾತ್ರವಲ್ಲ ತನ್ನ ಅತ್ಯಂತ ಫೆಡರಲ್ ವಿರೋಧಿ ನೀತಿಯನ್ನು ಯಾವುದೇ ಲಜ್ಜೆ ಇಲ್ಲದೆ ಬಜೆಟ್‌ನಲ್ಲಿ ಮೋದಿ ಸರಕಾರ ಮತ್ತೊಮ್ಮೆ ತೋರಿಸಿಕೊಂಡಿದೆ. ಅದು ರಾಜ್ಯಗಳಿಗೆ ಕೇಂದ್ರದ ಹಣಕಾಸು ಸಂಪನ್ಮೂಲದ ವರ್ಗಾವಣೆಯ ವಿಷಯದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ.
ಉದಾಹರಣೆಗೆ ವಿವಿಧ ಯೋಜನೆಗಳ ಬಾಬತ್ತಿನಲ್ಲಿ ಮೋದಿ ಸರಕಾರ 2023-24ರ ಬಜೆಟ್‌ನಲ್ಲಿ 3.24 ಲಕ್ಷ ಕೋಟಿ ರೂ. ವರ್ಗಾಯಿಸುವುದಾಗಿ ಭರವಸೆ ನೀಡಿತ್ತು. ಆದರೆ 2023-24 ಪರಿಷ್ಕೃತ ಬಜೆಟ್‌ನಲ್ಲಿ ಮೋದಿ ಸರಕಾರ ಹೇಳಿಕೊಂಡಿರುವಂತೆ ವರ್ಗಾಯಿಸಿರುವುದು ಕೇವಲ 2.73 ಲಕ್ಷ ಕೋಟಿ ರೂ. ಮಾತ್ರ. ಅಂದರೆ ರಾಜ್ಯಗಳಿಗೆ ಹೋದ ವರ್ಷ 50,000 ಕೋಟಿ ರೂ. ಪಂಗನಾಮ. ಈ 2024-25ರ ಸಾಲಿನಲ್ಲಂತೂ ಅದು ಅಂದಾಜು ಮಾಡಿರುವುದೇ 3.22 ಲಕ್ಷ ಕೋಟಿ ರೂ. ವರ್ಗಾಯಿಸಲು. ಅಂದರೆ 2023ರ ಬಜೆಟ್ ಅಂದಾಜಿಗಿಂತಲೂ ಕಡಿಮೆ .
ಕಾರ್ಪೊರೇಟುಗಳನ್ನು ಕೊಬ್ಬಿಸಿ ಬಡ- ಮಧ್ಯಮ ವರ್ಗದವರನ್ನು ನಿತ್ರಾಣಗೊಳಿಸುವ ಬಜೆಟ್
ಮತ್ತೊಂದು ಕಡೆ ಬಜೆಟ್ ಆದಾಯ ತೆರಿಗೆ ರಿಯಾಯಿತಿ ಕೊಟ್ಟಿದೆ ಎಂದು ತುತ್ತೂರಿ ಮಾಧ್ಯಮಗಳು ಸುಳ್ಳು ಬಜಾಯಿಸುತ್ತಿವೆ. ಆದರೆ ಸರಕಾರ ಪಡೆದುಕೊಳ್ಳುತ್ತಿರುವ ಆದಾಯದ ಬಗೆಯನ್ನು ನೋಡಿದರೆ ಕಾರ್ಪೊರೇಟ್ ಪತಿಗಳು ಮೂರು ನಾಲ್ಕು ಪಟ್ಟು ಆದಾಯಗಳನ್ನು ಹೆಚ್ಚಿ ಸಿಕೊಳ್ಳುತ್ತಿದ್ದರೂ ಅವರನ್ನು ಮುಟ್ಟದೆ ಮೋದಿ ಸರಕಾರ ಬಡವರು ಮತ್ತು ಶ್ರೀ ಸಾಮಾನ್ಯರು ಕಟ್ಟುವ ETU ತೆರಿಗೆ ಮತ್ತು ಆದಾಯ ತೆರಿಗೆಯನ್ನು ಹೆಚ್ಚಿಸುವ ಮೂಲಕ ತುಂಬಿಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ಉದಾಹರಣೆಗೆ ಇಕನಾಮಿಕ್ ಸರ್ವೇಯೇ ಹೇಳುವಂತೆ ಕೇವಲ 33,000 ಕಾರ್ಪೊರೇಟ್ ಕಂಪೆನಿಗಳು ಕಳೆದ ಒಂದು ವರ್ಷದಲ್ಲಿ 14 ಲಕ್ಷ ಕೋಟಿ ರೂ. ಹೆಚ್ಚುವರಿ ಲಾಭ ಮಾಡಿವೆ. ಅವುಗಳ ಬಳಿ ಈ ದೇಶದ ಶೇ.64 ರಷ್ಟು ಸಂಪತ್ತಿದೆ. ಅಂದರೆ ಅಂದಾಜು 200 ಲಕ್ಷ ಕೋಟಿ ರೂ. ಆದರೆ ಈ ವರ್ಗದಿಂದ 2024-25ರಲ್ಲಿ ಹೆಚ್ಚೆಂದರೆ 10 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವುದಾಗಿ ಮೋದಿ ಸರಕಾರ ಬಜೆಟ್‌ನಲ್ಲಿ ಘೋಷಿಸಿದೆ. ಆದರೆ ಮಧ್ಯಮ ವರ್ಗದಿಂದ 11 ಲಕ್ಷ ಕೋಟಿ ರೂ. ಆದಾಯ ತೆರಿಗೆಯನ್ನು ನಿರೀಕ್ಷಿಸುತ್ತಿದೆ. ಪ್ಲಾಸ್ಟಿಕ್ ಚೊಂಬು, ಔಷಧಿ, ಇನ್ನಿತ್ಯಾದಿ ಶ್ರೀ ಸಾಮಾನ್ಯರ ನಿತ್ಯ ಬಳಕೆಯ ವಸ್ತುಗಳ ಮೇಲೂ ಹೆಚ್ಚಿಸಿರುವ GST ಮೂಲಕ 25 ಲಕ್ಷ ಕೋಟಿ ರೂ. ಅದರಲ್ಲಿ ಕೇಂದ್ರದ ಪಾಲು 10 ಲಕ್ಷ ಕೋಟಿ ಇದು ವಿಷಯ. ಆದ್ದರಿಂದಲೇ ಮೋದಿ 3.0 ಎಂದರೆ ಕಾರ್ಪೊರೇಟ್‌ಗಳಿಗೆ 3, ಬಡ ಭಾರತೀಯರಿಗೆ ಕೇವಲ 0..ಎಂದರ್ಥ... ಅಲ್ಲವೇ?