ಮೋದಿ-ಬೈಡನ್ ಒಪ್ಪಂದ: ಅಮೆರಿಕದ ಸೈನಿಕ ವಸಾಹತುವಾಯಿತೇ ಭಾರತ?!
ಅಮೆರಿಕದ ಅವಲಂಬನೆಯಿಂದ ಹೊರಬರದಂತೆ ಭಾರತ 'ಅಮೆರಿಕ ನಿರ್ಭರ'ವಾಗುವಂತೆ ಮೋದಿ ಸರಕಾರ ಮಾಡಿದೆ. ಇದು ಅಮೆರಿಕದ ಶತ್ರುಗಳನ್ನು ನಮ್ಮ ಶತ್ರುಗಳನ್ನಾಗಿಸುತ್ತದೆ. ಭಾರತಕ್ಕೆ ಬೇಡದಿದ್ದರೂ ಅಮೆರಿಕದ ಯುದ್ಧವನ್ನು ಭಾರತವು ಮಾಡುವಂತಹ ವಸಾಹತು ಸಂಬಂಧಕ್ಕೆ ಮೋದಿ ಸರಕಾರ ಭಾರತವನ್ನು ದೂಡಿದೆ. ಮನಮೋಹನ್ ಸಿಂಗ್ ಸರಕಾರ ಭಾರತದ ಅಣುಶಕ್ತಿ ಸಾರ್ವಭೌಮತೆಯನ್ನು ಅಮೆರಿಕಕ್ಕೆ ಬಿಟ್ಟುಕೊಟ್ಟರೆ ಮೋದಿ ಸರಕಾರ ಭಾರತದ ಸೈನಿಕ ಸಾರ್ವಭೌಮತೆಯನ್ನು ಮತ್ತು ವ್ಯೆಹತಾಂತ್ರಿಕ ಸ್ವಾತಂತ್ರ್ಯವನ್ನು ಅಮೆರಿಕಕ್ಕೆ ಮಾರಿಕೊಂಡಿದೆ. ಭಕ್ತರೇ, ಈಗ ಹೇಳಿ. ಇದು ದೇಶಪ್ರೇಮಿ ಸರಕಾರವೇ?
ಪ್ರಧಾನಿ ಮೋದಿಯವರ ಅಮೆರಿಕ ಭೇಟಿಯನ್ನು ಭಾರತದ ಭಟ್ಟಂಗಿ ಪತ್ರಿಕೆಗಳು ಪದಗಳಿಗೆ ಮುಜುಗರವಾಗುವಷ್ಟು ಹೊಗಳುತ್ತಿವೆ. ಆದರೆ ಈ ಭೇಟಿಯಾಗಿ ಒಂದು ವಾರ ಕಳೆಯುತ್ತಿದ್ದಂತೆ ಮೋದಿ ಸರಕಾರ ಅಮೆರಿಕದ ಜೋ-ಬೈಡನ್ ಸರಕಾರದೊಂದಿಗೆ ಮಾಡಿಕೊಂಡ ಒಪ್ಪಂದಗಳ ವಿವರಗಳು ಮತ್ತು ಸ್ವತಂತ್ರ ವಿಶ್ಲೇಷಣೆಗಳು ಈ ಭೇಟಿಯ ಅಸಲಿಯತ್ತನ್ನು ಹೊರಹಾಕುತ್ತಿವೆ. ಜೊತೆಗೆ ಬೈಡನ್ ಸರಕಾರ ಮೋದಿಯವರಿಗೆ ಕೊಟ್ಟ ವಿಶೇಷ ಮರ್ಯಾದೆಗಳ ಹಿಂದಿನ ಸಾಮ್ರಾಜ್ಯಶಾಹಿ ಹಿತಾಸಕ್ತಿಯನ್ನು ಬಯಲುಗೊಳಿಸುತ್ತಿವೆ ಹಾಗೂ ಪ್ರಧಾನಿ ಮೋದಿ ಈ ಒಪ್ಪಂದದ ಮೂಲಕ ಭಾರತವನ್ನು ಮತ್ತಷ್ಟು ಅಪಾಯಕ್ಕೆ ಒಡ್ಡಿರುವ ವಾಸ್ತವತೆಯನ್ನು ಬಿಚ್ಚಿಡುತ್ತಿವೆ. ಆದರೆ ಮೋದಿ ಭಕ್ತ ಪಡೆಗಳು ಮತ್ತು ಮಾಧ್ಯಮಗಳು ಮಾತ್ರ ಈ ಭೇಟಿಯಿಂದ ಮೋದಿಯು ಭಾರತವನ್ನು ಆತ್ಮನಿರ್ಭರದ ಹೆಸರಿನಲ್ಲಿ ಅಮೆರಿಕ ನಿರ್ಭರ ಮಾಡಿರುವ ಸತ್ಯವನ್ನು ಮರೆಮಾಚುತ್ತಾ ದೇಶಕ್ಕೆ ಅನ್ಯಾಯವನ್ನೇ ಎಸಗುತ್ತಿವೆ. ಅಮೆರಿಕದ ಪ್ರಜಾತಾಂತ್ರಿಕ ಸೋಗಲಾಡಿತನ
ಅವರ ಪ್ರಕಾರ ಅಮೆರಿಕ ಸರಕಾರ ಪ್ರಧಾನಿ ಮೋದಿಯವರಿಗೆ ನೀಡಿದ ಸರಕಾರಿ ಸತ್ಕಾರ, ಮನ್ನಣೆ, ಅಮೆರಿಕದ ಸಂಸತ್ತಿನಲ್ಲಿ ಎರಡೆರಡು ಬಾರಿ ಭಾಷಣ ಮಾಡಲು ಕೊಟ್ಟ ಅವಕಾಶ ಇವುಗಳೆಲ್ಲವೂ ಮೋದಿಯವರ ನೇತೃತ್ವವನ್ನು ಕೇವಲ ಭಾರತದ ಮಾತ್ರವಲ್ಲ ವಿಶ್ವವೇ ಮಾನ್ಯ ಮಾಡುತ್ತಿರುವುದರ ಸಂಕೇತ. ಆದರೆ ವಾಸ್ತವ ವೆಂದರೆ ಅಮೆರಿಕವು ಮೊದಲಿನಿಂದಲೂ ತನ್ನ ಹಿತಾಸಕ್ತಿಗೆ ಯಾರು ಪೂರಕರಾಗಿದ್ದಾರೊ ಅವರಿಗೆ ವಿಶೇಷ ಸತ್ಕಾರ ನೀಡುತ್ತಾ, ಅಮೆರಿಕದ ಆಧಿಪತ್ಯವನ್ನು ಪ್ರಶ್ನಿಸುವವರನ್ನು ಪ್ರಜಾತಂತ್ರವಿರೋಧಿಗಳೆಂದು ಬಣ್ಣಿಸುತ್ತಾ ಬಂದಿದೆ. ಸಮಕಾಲೀನ ಜಗತ್ತಿನಲ್ಲಿ ಯಾರ ಅಗತ್ಯ ತನಗಿದೆಯೋ ಅವರು ಎಷ್ಟೇ ದುಷ್ಟರಾಗಿದ್ದರೂ ಅವರು ಜಗತ್ತಿನ ಶಾಂತಿ ರಕ್ಷಕರೆಂದು ಅರ್ಥಾತ್ ಅಮೆರಿಕದ ಹಿತಾಸಕ್ತಿಯನ್ನು ವಿಸ್ತರಿಸುವ ಮಿತ್ರರೆಂದು ಬಣ್ಣಿಸಿ ಅಪ್ಪಿಕೊಳ್ಳುತ್ತದೆ. ಹಾಗೆ ನೋಡಿದರೆ ಅಮೆರಿಕ ಮತ್ತು ಸೋವಿಯತ್ ರಶ್ಯಗಳ ನಡುವೆ ಜಾಗತಿಕ ಆಧಿಪತ್ಯಕ್ಕೆ ಪೈಪೋಟಿ ಮತ್ತು ಶೀತಲ ಯುದ್ಧ ನಡೆಯುತ್ತಿದ್ದ ಇಡೀ ಅವಧಿಯಲ್ಲಿ ಅಮೆರಿಕ ಏಶ್ಯದಲ್ಲಿ ತನ್ನ ಪರಮಮಿತ್ರನೆಂದು ಭಾವಿಸಿದ್ದು ಪಾಕಿಸ್ತಾನವನ್ನೇ ಹೊರತು ಭಾರತವನ್ನಲ್ಲ. ಹಾಗೆಯೇ ತಾನು ಮಾತ್ರ ಜಗತ್ತಿನ ಪ್ರಜಾತಂತ್ರದ ರಕ್ಷಕ ಎಂದು ಕೊಚ್ಚಿಕೊಳ್ಳುವ ಅಮೆರಿಕ ತನ್ನ ಆರ್ಥಿಕ ಮತ್ತು ವ್ಯೆಹಾತ್ಮಾಕ ಹಿತಾಸಕ್ತಿಗಳನ್ನು ವಿಸ್ತರಿಸಿಕೊಳ್ಳಲು ಸೌದಿಯ ಸರ್ವಾಧಿಕಾರಿ ದೊರೆಗಳನ್ನು, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದ ಸೈನಿಕ ಸರ್ವಾಧಿಕಾರಿಗಳನ್ನು ಬೆಂಬಲಿಸುತ್ತಾ ಬಂದಿದೆ. ತನ್ನ ಆಸಕ್ತಿಗಳಿಗೆ ಮಣಿಯದ ನೈಜ ಪ್ರಜಾತಾಂತ್ರಿಕ ಸರಕಾರಗಳನ್ನು ಉರುಳಿಸಿದೆ ಮತ್ತು ಬಗ್ಗದ ನಾಯಕರನ್ನು ಕಗ್ಗೊಲೆ ಮಾಡಿಸಿದೆ. ಇದು ಅಮೆರಿಕದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷರ ಕಾಲದಲ್ಲಿಯೂ ನಡೆದಿದೆ. ಡೆಮಕ್ರಾಟ್ ಅಧ್ಯಕ್ಷರ ಕಾಲದಲ್ಲಿಯೂ ನಡೆದುಕೊಂಡು ಬಂದಿದೆ. ಹೀಗಾಗಿ ಅಮೆರಿಕದ ಅಧ್ಯಕ್ಷರಿಂದ ಸನ್ಮಾನಕ್ಕೊಳಗಾಗುವುದು ನೈಜ ದೇಶಭಕ್ತರಿಗೆ ಸಂದೇಹ ಹುಟ್ಟಿಸಬೇಕೇ ವಿನಾ ಸಂಭ್ರಮವನ್ನಲ್ಲ. ಅಮೆರಿಕದ ಕಬಂಧ ಅಪ್ಪುಗೆ ಪಡೆದವರಲ್ಲಿ
ಮೋದಿ ಮೊದಲಿಗರೇ?
ಮೊದಲನೆಯದಾಗಿ ಅಮೆರಿಕದಿಂದ ಈ ರೀತಿ ಭಾರತದ ಪ್ರಧಾನಿಯೊಬ್ಬರು ಸರಕಾರಿ ಸತ್ಕಾರಕ್ಕೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ತೀರಾ ಇತ್ತೀಚೆಗೆ ಎಂದರೆ 2008ರಲ್ಲಿ ಕಾಂಗ್ರೆಸ್ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಅಮೆರಿಕಕ್ಕೆ ಭೇಟಿಕೊಟ್ಟಾಗ ಆಗಿನ ಅಮೆರಿಕ ಅಧ್ಯಕ್ಷ ಬುಷ್ ಅವರು ಈಗ ಬೈಡನ್ ಕೊಟ್ಟ ಆತಿಥ್ಯಕ್ಕಿಂತ ಭರ್ಜರಿ ಆತಿಥ್ಯ ಕೊಟ್ಟಿದ್ದರು. ಆದರೆ ಅದಕ್ಕೆ ಕಾರಣ ಭಾರತವು ಅಮೆರಿಕದೊಂದಿಗೆ ನಾಗರಿಕ ಅಣುಶಕ್ತಿ ಯೋಜನೆಯ ಒಪ್ಪಂದಕ್ಕೆ ಒಪ್ಪಿಕೊಂಡು ಭಾರತದ ಇಡೀ ಅಣುಶಕ್ತಿ ಸಾರ್ವಭೌಮತೆಯನ್ನು ಅಮೆರಿಕದ ಆಸಕ್ತಿಗೆ ತಕ್ಕಂತೆ ಮತ್ತು ಅಮೆರಿಕವನ್ನು ಅವಲಂಬಿಸಿ ಮರುರೂಪಿಸಿಕೊಳ್ಳಲು ಒಪ್ಪಿಕೊಂಡಿದ್ದು. ಆವರೆಗೆ ಭಾರತ ರಶ್ಯ ಮತ್ತು ಅಮೆರಿಕ ಎರಡರ ಜೊತೆಗೂ ಸೈನಿಕ ಸಂಬಂಧ ಹೊಂದಿದ್ದರೂ ಈ ಹೊಸ ಯೋಜನೆಯ ಪ್ರಕಾರ ಭಾರತದ ಅಣುಶಕ್ತಿ ಭವಿಷ್ಯವನ್ನು ಸಂಪೂರ್ಣವಾಗಿ ಅಮೆರಿಕದ ಹಿತಾಸಕ್ತಿಗೆ ಅಧೀನಗೊಳಿಸಲು ಭಾರತ ಒಪ್ಪಿಕೊಂಡಿದ್ದಕ್ಕೆ ಬುಷ್ ಸರಕಾರ ಮತ್ತು ಅಲ್ಲಿನ ಮಾಧ್ಯಮಗಳು ಮನಮೋಹನ್ ಸಿಂಗರನ್ನು ಸತ್ಕರಿಸಿದ್ದವು ಮತ್ತು ಹೊಗಳಿದ್ದವು. ಈಗ ಮೋದಿ ಅಮೆರಿಕಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಮೆರಿಕದ ಆರ್ಥಿಕ ಮತ್ತು ಜಿಯೋ-ಪೊಲಿಟಿಕಲ್-ರಾಜಕೀಯ ಭೌಗೋಳಿಕ ಹಿತಾಸಕ್ತಿಗೆ ಭಾರತವನ್ನು ರೂಪಿಸುವ ಅಗತ್ಯ ಇನ್ನೂ ಹೆಚ್ಚಾಗಿದೆ. ಅಮೆರಿಕದ ಕಾರ್ಪೊರೇಟ್ ಬಂಡವಾಳಶಾಹಿಗಳಿಗೆ ತನ್ನ ಶರತ್ತಿಗನುಸಾರವಾಗಿ ಭಾರತದ ಬೃಹತ್ ಮಾರುಕಟ್ಟೆಯು ತೆರೆದುಕೊಳ್ಳುವುದು ಬೇಕಾಗಿದೆ. ಹಾಗೆಯೇ ಏಶ್ಯ ಭೂಭಾಗದಲ್ಲಿ ಅಮೆರಿಕದ ರಾಜಕೀಯ -ಭೌಗೋಳಿಕ ವಿಸ್ತರಣಾವಾದಿ ಹಿತಾಸಕ್ತಿಯ ಪರವಾಗಿ ನಿಲ್ಲಲು ಭಾರತ ಬೇಕಿದೆ. ಭಾರತವನ್ನು ಕೊಬ್ಬಿಸಿ ದೈತ್ಯ ಚೀನಾವನ್ನು
ಮಣಿಸಬೇಕಿದೆ ಅಮೆರಿಕ
ಏಕೆಂದರೆ ಬದಲಾಗುತ್ತಿರುವ ಜಾಗತಿಕ ರಾಜಕೀಯ-ಆರ್ಥಿಕ ಸಮೀಕರಣದಲ್ಲಿ ಚೀನಾ ದೇಶವು ಅಮೆರಿಕಕ್ಕೆ ಏಶ್ಯದಲ್ಲೂ ಮತ್ತು ಜಾಗತಿಕ ಮಾರುಕಟ್ಟೆಯಲ್ಲೂ ದೊಡ್ಡ ಪೈಪೋಟಿಯನ್ನು ನೀಡುತ್ತಿದೆ. ಇಂದು ಜಗತ್ತಿನಲ್ಲಿ ಅಮೆರಿಕವನ್ನು ಬಿಟ್ಟರೆ ಎರಡನೇ ದೊಡ್ಢ ಆರ್ಥಿಕತೆ ಚೀನಾ ದೇಶವಾಗಿದೆ. ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಎಂಬ ಜಗತ್ತಿನ ಇತಿಹಾಸದಲ್ಲೇ ಅತಿ ದೊಡ್ಡ ಮೂಲಭೂತ ಸೌಕರ್ಯಗಳ ಯೋಜನೆಗೆ ಭಾರತವನ್ನು ಬಿಟ್ಟು ಏಶ್ಯದ ಎಲ್ಲಾ ದೇಶಗಳು ಮತ್ತು ಬಹುಪಾಲು ಎಲ್ಲಾ ಯುರೋಪ್ ದೇಶಗಳೂ ಭಾಗಿಯಾಗಿವೆ. ಹಾಗೆಯೇ ಚೀನಾ ಸಹಕಾರ ಮತ್ತು ಆರ್ಥಿಕ ಬೆಂಬಲದ ಯೋಜನೆಗಳು ಆಫ್ರಿಕಾದ ಎಲ್ಲಾ ದೇಶಗಳಲ್ಲೂ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲೂ ಅಮೆರಿಕದ ವಿಸ್ತರಣೆಗೆ ಅಡ್ಡಿಯಾಗಿದೆ. ಅಷ್ಟು ಮಾತ್ರವಲ್ಲ, ಚೀನಾ ಉತ್ಪಾದಿಸುತ್ತಿರುವ ಅಗ್ಗದ ಮತ್ತು ಅತ್ಯುತ್ತಮ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳು ಅಮೆರಿಕದ ಭವಿಷ್ಯಕ್ಕೆ ಸವಾಲೊಡ್ಡುತ್ತಿದೆ. ಇದರ ಜೊತೆಗೆ ಕ್ಸಿ-ಜಿನ್‌ಪಿಂಗ್ ಅವರು ಸತತವಾಗಿ ಮೂರನೇ ಬಾರಿ ಚೀನಾದ ಅಧ್ಯಕ್ಷರಾಗಿ ಆಯ್ಕೆಯಾದ ಚೀನಾದ ನೆರೆಹೊರೆಯಲ್ಲಿ ಅಮೆರಿಕದ ಕೈವಾಡ ಮತ್ತು ವಿಸ್ತರಣೆಯನ್ನು ಸೈನಿಕವಾಗಿಯೂ ಹಿಮ್ಮೆಟ್ಟಿಸಲು ತೀರ್ಮಾನಿಸಿದೆ. ಹಾಗೆಯೇ ಚೀನಾ ಮತ್ತು ರಶ್ಯಗಳ ಮೈತ್ರಿಯೂ ಉಕ್ರೇನ್ ಯುದ್ಧದಲ್ಲಿ ರಶ್ಯ ಬೆಂಬಲಕ್ಕೆ ನಿಂತಿರುವುದೂ ಅಮೆರಿಕದ ವ್ಯೆಹತಾಂತ್ರಿಕ ಹಿನ್ನಡೆಗೆ ಕಾರಣವಾಗಿದೆ. ಈ ಎಲ್ಲಾ ವ್ಯೆಹತಾಂತ್ರಿಕ, ರಾಜಕೀಯ-ಭೌಗೋಳಿಕ ಮತ್ತು ಆರ್ಥಿಕ ಕಾರಣಗಳಿಗಾಗಿ ಅಮೆರಿಕಕ್ಕೆ ಜಾಗತಿಕವಾಗಿಯೂ ಮತ್ತು ಏಶ್ಯ ಭೂಭಾಗದಲ್ಲೂ ಚೀನಾ ವಿರುದ್ಧ ತನ್ನ ಪರವಾಗಿ ನಿಲ್ಲಬಲ್ಲ ನಂಬಿಗಸ್ಥ ಸರಕಾರವೊಂದರ ಅಗತ್ಯವಿತ್ತು. ಭಾರತ-ಚೀನಾ ಘರ್ಷಣೆ ಮತ್ತು ಅಮೆರಿಕ ಹಿತಾಸಕ್ತಿ ಆದರೆ ಮೋದಿಯವರು ಪ್ರಧಾನಿಯಾಗಿ ಬಂದ ಮೊದಲ ಐದು ವರ್ಷಗಳಲ್ಲಿ ಚೀನಾ ಅಧ್ಯಕ್ಷರ ಜೊತೆ ಸತತ 18 ಬಾರಿ ಸ್ನೇಹ ಮಾತುಕತೆಗಳು ನಡೆದಿತ್ತು. ಆದರೆ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ 2016ರಲ್ಲಿ ಆಯ್ಕೆಯಾದ ಮೇಲೆ ಅವರ ಸರಕಾರ ಅಮೆರಿಕದ ಮೊದಲ ಶತ್ರು ಚೀನಾ ಎಂದು ಗುರುತಿಸಿತು ಮತ್ತು ಮೋದಿ ಸರಕಾರವನ್ನು ಚೀನಾದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿತು. 2018ರಲ್ಲಿ ಭೂತಾನ್ ಬಳಿಯ ದೋಕ್ಲಾಮ್‌ನಲ್ಲಿ ಮತ್ತು 2020ರಲ್ಲಿ ಎಲ್‌ಎಸಿ ಬಳಿಯ ಗಲ್ವಾನ್ ಬಳಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಅನಗತ್ಯ ಸಂಘರ್ಷಗಳು ಮೋದಿ ಸರಕಾರದ ಬದಲಾದ ಧೋರಣೆ ಮತ್ತು ಪ್ರಚೋದನೆಗಳ ಭಾಗವೆಂದು ಭಾರತದ ಸೈನಿಕ ಪರಿಣಿತರೇ ವಿಶ್ಲೇಷಿಸಿದ್ದಾರೆ. ಇದರ ಭಾಗವಾಗಿ ಬಿಜೆಪಿಯ ಎಂಪಿಗಳೇ ಒಪ್ಪಿಕೊಳ್ಳುವಂತೆ ಭಾರತ ತನ್ನ ನಿಯಂತ್ರಣದಲ್ಲಿದ್ದ ಸಾವಿರಾರು ಕಿ.ಮೀ. ಭೂಭಾಗವನ್ನು ಕಳೆದುಕೊಂಡಿದೆ ಮತ್ತು ಚೀನಾ ಈವರೆಗೆ ಶಾಂತವಾಗಿದ್ದ ಈ ಗಡಿಭಾಗಗಳಲ್ಲಿ ಶಾಶ್ವತ ಸೌಕರ್ಯಗಳನ್ನು ನಿರ್ಮಿಸಿಕೊಂಡು ಶಾಶ್ವತ ಯುದ್ಧ ಸನ್ನದ್ಧ ವಲಯವನ್ನಾಗಿ ಪರಿವರ್ತಿಸಿದೆ. ಮೋದಿ ಸರಕಾರದ ನಡೆಸಿದ ಇಂತಹ ಅರಿವುಗೇಡಿ ದುಸ್ಸಾಹಸಗಳಿಗೆ ಅಮೆರಿಕದ ಬೆಂಬಲದ ಪ್ರೇರಣೆಯೂ ಇತ್ತೇ ಎಂಬುದು ಈಗ ಪ್ರಶ್ನೆಗೊಳ ಪಡುತ್ತಿದೆ. ಅದೇನೇ ಇದ್ದರೂ ಈ ಎಲ್ಲಾ ಕಾರಣಗಳಿಗಾಗಿ ಅಮೆರಿಕದ ಇಚ್ಛೆಗೆ ತಕ್ಕಂತೆ ಭಾರತಕ್ಕೆ ಚೀನಾ ಅನಗತ್ಯವಾಗಿ ಸಮಾನ ಶತ್ರುವಾಗಿಬಿಟ್ಟಿದೆ. ಮೋದಿ ಸರಕಾರದ ಈ ತಪ್ಪುವಿದೇಶಾಂಗ ನೀತಿಗಳೂ ಇಂದು ಭಾರತದ ಹಿತಾಸಕ್ತಿಯನ್ನು ಅಮೆರಿಕದ ಅಧೀನಗೊಳಿಸಿದೆ.
ಶತ್ರುವಿನ ಶತ್ರುವಾದರೆ ಪ್ರಜಾತಂತ್ರವೂ ಮಾಫಿ!
ಇದರ ಸಂಪೂರ್ಣ ದುರ್ಲಾಭವನ್ನು ಅಮೆರಿಕ ಪಡೆದುಕೊಳ್ಳುತ್ತಿದೆ. ಭಾರತವನ್ನು ಚೀನಾದ ವಿರುದ್ಧ ತನ್ನ ಅಸ್ತ್ರವನ್ನಾಗಿ ಬಳಸಿಕೊಳ್ಳುವ ವ್ಯೆಹತಂತ್ರದ ಭಾಗವಾಗಿಯೇ ಮೋದಿಯವರಿಗೆ ಅಪರೂಪದ ಆತಿಥ್ಯವನ್ನು ಕೊಟ್ಟಿದೆ. ವಾಸ್ತವವಾಗಿ ಭಾರತ ಮತ್ತು ಅಮೆರಿಕ ದೇಶಗಳು ಪ್ರಜಾತಾಂತ್ರಿಕ ಹಾಗೂ ಮಾನವ ಹಕ್ಕುಗಳ ಮೌಲ್ಯಗಳನ್ನು ಗೌರವಿಸುವಂಥ ಸಮಾನ ಮೌಲ್ಯಗಳುಳ್ಳ ದೇಶಗಳೆಂದು ಇಬ್ಬರೂ ನಾಯಕರು ಹೇಳಿಕೊಂಡರು. ಆದರೆ ಮೋದಿ ಸರಕಾರ ಹೇಗೆ ಪ್ರಜಾತಂತ್ರ ಮತ್ತು ಮಾನವ ಹಕುಗಳನ್ನು ದಮನ ಮಾಡುತ್ತಿದೆಯೆಂದು ನೆನಪಿಸುತ್ತಾ ಮೋದಿ ಭೇಟಿಯ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷರು ಮೋದಿಯನ್ನು ಎಚ್ಚರಿಸಬೇಕೆಂದು ಬಹುಪಾಲು ಅಮೆರಿಕದ ಮಾಧ್ಯಮಗಳು ಮುಖಪುಟ ಲೇಖನಗಳನ್ನು ಮತ್ತು ಸಂಪಾದಕೀಯಗಳನ್ನು ಬರೆದವು. ಮಾಜಿ ಅಧ್ಯಕ್ಷ ಒಬಾಮಾ ಅವರು ಈ ಬಗ್ಗೆ ಒಂದು ಟಿವಿ ಸಂದರ್ಶನವನ್ನೇ ಕೊಟ್ಟು ಮೋದಿ ಭಾರತದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಅಪಾಯದ ಬಗ್ಗೆ ಗಮನ ಸೆಳೆದಿದ್ದರು. ಅಮೆರಿಕದ ಸುಮಾರು 75 ಸಂಸದರು ಬೈಡನ್ ಅವರಿಗೆ ಬಹಿರಂಗ ಪತ್ರವನ್ನೇ ಬರೆದಿದ್ದರು. ಕೆಲವು ಪ್ರಖ್ಯಾತ ಸಂಸದರು ಅಮೆರಿಕದ ಸಂಸತ್ತಿನಲ್ಲಿ ಮೋದಿ ಭಾಷಣವನ್ನು ಬಹಿಷ್ಕರಿಸಿದರು. ಭಾರತದಲ್ಲಿ ತನ್ನ ಅಧಿಕಾರಾವಧಿಯಲ್ಲಿ ಒಂದು ಪತ್ರಿಕಾಗೋಷ್ಠಿಯನ್ನೂ ಎದುರಿಸದ ಮೋದಿ ಅಮೆರಿಕದಲ್ಲಿ ಅನಿವಾರ್ಯವಾಗಿ ಪತ್ರಿಕಾಗೋಷ್ಠಿಯನ್ನು ಮಾಡಬೇಕಾಯಿತು ಹಾಗೂ 'ವಾಲ್ ಸ್ಟ್ರೀಟ್ ಜರ್ನಲ್' ಪತ್ರಿಕೆಯ ಸಬ್ರಿನಾ ಸಿದ್ದೀಕಿ ಎಂಬವರಿಂದ ಒಂದೇ ಒಂದು ಪ್ರಶ್ನೆಯನ್ನು ಎದುರಿಸಬೇಕಾಯಿತು. ಆ ಪತ್ರಕರ್ತೆ ಮೋದಿ ಆಡಳಿತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹಿಂದುತ್ವದ ಪಡೆ ಆಕೆಯ ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ಮುಗಿಬಿದ್ದವು. ಇದನ್ನು ಕಂಡು ಭಾರತವನ್ನು ಆರೋಗ್ಯಕರ ಪ್ರಜಾತಂತ್ರ ಎಂದು ಬಣ್ಣಿಸಿದ್ದ ವೈಟ್ ಹೌಸೇ ದಿಗ್ಭ್ರಾಂತವಾಯಿತು. ಈ ಪಡೆಗಳು ಎಸಗುತ್ತಿರುವ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ಅಧಿಕೃತವಾಗಿ ಅಮೆರಿಕ ಸರಕಾರ ಖಂಡಿಸ ಬೇಕಾಯಿತು. ಆದರೆ ಒಬಾಮಾ ಹೇಳಿಕೆಯನ್ನು ಭಾರತದ ಮೋದಿ ಕ್ಯಾಬಿನೆಟ್‌ನ ಹಿರಿಯ ಮಂತ್ರಿಗಳೇ ಅತ್ಯಂತ ಕೀಳಾಗಿ ವಿರೋಧಿಸಿದರು! ಹೀಗೆ ಅಮೆರಿಕ ಸಮಾಜದ ಒಳಗೇ ಮೋದಿ ಸರಕಾರದ ಬಗ್ಗೆ ಇಷ್ಟೆಲ್ಲಾ ವಿರೋಧಗಳಿದ್ದರೂ ಬೈಡನ್ ಸರಕಾರ ಮೋದಿಯನ್ನು ತನ್ನ ಪರಮಾಪ್ತ ಮಿತ್ರನೆಂದು ಪರಿಗಣಿಸಿ ಅಪರೂಪದ ಆತಿಥ್ಯ ಕೊಟ್ಟಿದ್ದೇಕೆ? ಅದಕ್ಕೆ ಮೂರು ಕಾರಣಗಳಿವೆ. ಅ) ಅಮೆರಿಕದ ಆಳುವ ವರ್ಗಗಳಿಗೆ ತನ್ನ ಹಿತಾಸಕ್ತಿ ಮುಖ್ಯವೇ ಹೊರತು ಪ್ರಜಾತಂತ್ರ ಅಥವಾ ಮಾನವ ಹಕ್ಕುಗಳಲ್ಲ. ಆ) ಅಮೆರಿಕದ ಜಾಗತಿಕ ಆಧಿಪತ್ಯದ ರಥವನ್ನು ಎಳೆಯಲು ಭಾರತದಂಥ ಕುದುರೆಗಳು ಅದಕ್ಕೆ ಅಗತ್ಯ ಇ) ಅದರಷ್ಟೆ ಮುಖ್ಯವಾಗಿ ಈ ಭೇಟಿಯಲ್ಲಿ ಮೋದಿ ಸರಕಾರ ಅಮೆರಿಕದೊಡನೆ ಮಾಡಿಕೊಂಡಿರುವ ತಾಂತ್ರಿಕ ಮತ್ತು ಸೈನಿಕ ಒಪ್ಪಂದಗಳು ಅಮೆರಿಕದ ಕಂಪೆನಿಗಳಿಗೆ ಅತ್ಯಂತ ಲಾಭದಾಯಕವಾಗಿದೆ. ಮಾತ್ರವಲ್ಲದೆ ಏಶ್ಯ ಭೂಭಾಗದಲ್ಲಿ ಭಾರತವು ಈ ಒಪ್ಪಂದದಿಂದಾಗಿ ಅಮೆರಿಕದ ಅಘೋಷಿತ ಸೇನಾ ನೆಲೆಯಾಗುತ್ತಿದೆ.
ತಂತ್ರಜ್ಞಾನ ವರ್ಗಾವಣೆಯಲ್ಲ- ಹಳೆಯ ಸರಕುಗಳ ದುಬಾರಿ ಮಾರಾಟ
ಇದರಲ್ಲಿ ಮೊದಲೆರಡು ವಿಷಯಗಳನ್ನು ಈಗಾಗಲೇ ಚರ್ಚಿಸಿದ್ದೇವೆ. ಆದರೆ ಈ ಬಾರಿ ಮೋದಿಯವರ ಭೇಟಿ ಅತ್ಯಪೂರ್ವ ಮತ್ತು ಅತ್ಯಂತ ಫಲಪ್ರದ ಎಂದು ಹೇಳಲು ಸರಕಾರ ಪ್ರಧಾನವಾಗಿ ಆಧುನಿಕ ತಂತ್ರಜ್ಞಾನ ವರ್ಗಾವಣೆ ಮತ್ತು ಸೈನಿಕ ಪೂರೈಕೆ ಒಪ್ಪಂದಗಳ ಬಗ್ಗೆ ಹೇಳುತ್ತದೆ. ಆದರೆ ಮೋದಿ ಸರಕಾರ ಅದನ್ನು ಎಷ್ಟೇ ಉತ್ಪ್ರೇಕ್ಷಿಸಿ ಹೇಳಿದರೂ ಈಗ ಲಭ್ಯವಾಗುತ್ತಿರುವ ವಿವರಗಳನ್ನು ನೋಡಿದರೆ ಮೋದಿ ಸರಕಾರ ಭಾರತದ ಹಿತಾಸಕ್ತಿಯನ್ನು ಕಡೆಗಣಿಸಿ ಅಮೆರಿಕದ ಕಂಪೆನಿಗಳಿಗೆ ಮತ್ತು ಅಮೆರಿಕ ವಿಸ್ತರಣಾವಾದಿ ಹಿತಾಸಕ್ತಿಗೆ ಭಾರತವನ್ನು ಮಾರಿಕೊಂಡಿರುವುದು ಎದ್ದು ಕಾಣುತ್ತದೆ. ಮೊದಲಿಗೆ ತಂತ್ರಜ್ಞಾನದ ವರ್ಗಾವಣೆಯ ವಿಷಯವನ್ನೇ ನೋಡೋಣ. ಮೋದಿ-ಬೈಡನ್ ಜಂಟಿ ಹೇಳಿಕೆಯಲ್ಲಿ ಅಮೆರಿಕ ಮತ್ತು ಭಾರತ ಸೆಮಿ ಕಂಡಕ್ಟರ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಕ್ವಾಂಟಮ್ ತಂತ್ರಜ್ಞಾನ ಇನ್ನಿತ್ಯಾದಿಗಳಲ್ಲಿ ಜಂಟಿ ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಲಾಗಿದೆ. ಈವರೆಗೆ ಯಾವುದೇ ದೇಶಗಳಿಗೆ ಅದರಲ್ಲೂ ಅಮೆರಿಕದ ಜೊತೆ ಔಪಚಾರಿಕ ಮೈತ್ರಿ ಒಪ್ಪಂದಗಳನ್ನು ಮಾಡಿಕೊಳ್ಳದ ದೇಶಗಳಿಗೆ ತಂತ್ರಜ್ಞಾನ ವರ್ಗಾವಣೆಯನ್ನು ಅಮೆರಿಕ ಮಾಡಿಯೇ ಇಲ್ಲವೆಂದೂ, ಇದು ಮೋದಿಯವರ ಸಾಧನೆಯೆಂದೂ ಸರಕಾರ ಮತ್ತವರ ತುತ್ತೂರಿಗಳು ಹೇಳುತ್ತಿವೆ. ಆದರೆ ವಾಸ್ತವ ಏನು? -ಅಮೆರಿಕದ ಕಂಪ್ಯೂಟರ್ ಮತ್ತು ಕಮ್ಯುನಿಕೇಷನ್ ಇಂಡಸ್ಟ್ರಿಸ್ ಅಸೋಸಿಯೇಶನ್ (ಸಿಸಿಐಎ)ನವರು ಮೋದಿ ಅಮೆರಿಕಕ್ಕೆ ಬರುವ ಮುನ್ನ ಅಮೆರಿಕದ ಸಂವಹನ ಕ್ಷೇತ್ರದ ಉದ್ಯಮಗಳು ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿಲ್ಲವೆಂದು ಘೋಷಿಸಿದ್ದರು. ಅದಕ್ಕೆ ಕಾರಣ-ಕಂಪೆನಿಗಳ ಲಾಭದ ಭಾಗವನ್ನು ಭಾರತದಲ್ಲೇ ಹೂಡಬೇಕೆಂಬ ಹಾಗೂ ಸಂಗ್ರಹಿಸಿದ ಮಾಹಿತಿಯನ್ನು ಹಂಚಿಕೊಳ್ಳಬೇಕೆಂಬ, ಅವರ ತಂತ್ರಜ್ಞಾನದ ಕಾಪಿರೈಟ್ ಇತ್ಯಾದಿಗಳ ಆಸಕ್ತಿಗಳಿಗಾಗುವ ಧಕ್ಕೆಗಳು. (https://ccianet.org/library/ccia-digital-trade-barriers-india-2pager/)
ಹಾಗೆಯೇ ಅಮೆರಿಕವು ಭಾರತ ತನ್ನ ರ್ತುಗಳನ್ನು ಅಮೆರಿಕದಲ್ಲಿ ಸುರಿಯದಂತೆ ತಡೆಯಲು ಪ್ರಮಾಣ ನಿರ್ಬಂಧವನ್ನು ವಿಧಿಸಿತ್ತು. ಅದಕ್ಕೆ ಪ್ರತಿಯಾಗಿ ಭಾರತವು ಅಮೆರಿಕದಿಂದ ಮಾಡಿಕೊಳ್ಳುತ್ತಿದ್ದ ಆಮದುಗಳ ಮೇಲೆ ಹೆಚ್ಚುವರಿ ಸುಂಕಗಳನ್ನು ವಿಧಿಸಿತ್ತು. ಆದರೆ ಅದನ್ನು ತೆಗೆಯಬೇಕೆಂಬುದು ಅಮೆರಿಕದ ಉದ್ಯಮಿಗಳ ಒತ್ತಡವಾಗಿತ್ತು. ಮೋದಿಯವರು ಬೈಡನ್‌ರೊಂದಿಗೆ ಮಾಡಿಕೊಂಡ ಒಪ್ಪಂದದ ಭಾಗವಾಗಿ ಭಾರತದ ಹಿತಾಸಕ್ತಿಯನ್ನು ಬಲಿಗೊಟ್ಟು ಅಮೆರಿಕದ ಉದ್ಯಮಿಗಳ ಎಲ್ಲಾ ಶರತ್ತುಗಳನ್ನು ಒಪ್ಪಿಕೊಂಡಿದ್ದಾರೆ. -ಇಷ್ಟಾಗಿಯೂ ಅಮೆರಿಕ ನಮಗೆ ಅತ್ಯಾಧುನಿಕ ತಂತ್ರಜ್ಞಾನವನ್ನೇನೂ ವರ್ಗಾವಣೆ ಮಾಡುತ್ತಿಲ್ಲ. ಉದಾಹರಣೆಗೆ ಅಮೆರಿಕದ ಮೈಕ್ರಾನ್ ಕಂಪೆನಿ ಗುಜರಾತಿನಲ್ಲಿ ಸೆಮಿ ಕಂಡಕ್ಟರ್ ಉತ್ಪಾದನೆ ಮಾಡುವ ಒಪ್ಪಂದವನ್ನು ಮೋದಿಯವರ ಸಾಧನೆಯನ್ನಾಗಿ ಬಣ್ಣಿಸಲಾಗುತ್ತಿದೆ. ಆದರೆ ಮೋದಿ-ಬೈಡೆನ್ ಜಂಟಿ ಹೇಳಿಕೆಯಲ್ಲಿ ಸ್ಪಷ್ಟವಾಗಿ ಹೇಳಿರುವಂತೆ ಮೈಕ್ರಾನ್ ಸಂಸ್ಥೆ ಗುಜರಾತಿನಲ್ಲಿ ಸೆಮಿ ಕಂಡಕ್ಟರ್ ಉತ್ಪಾದನೆ ಮಾಡುತ್ತಿಲ್ಲ. ಬದಲಿಗೆ ಅಲ್ಲಿ ಅದು ಮಾಡುವುದು ಕೇವಲ ಚಿಪ್‌ಗಳ ಟೆಸ್ಟಿಂಗ್ ಮತ್ತು ಅಸೆಂಬ್ಲಿ-ಅಂದರೆ ಪರಿಶೀಲನೆ ಮತ್ತು ಜೋಡಣೆ. ಅಷ್ಟು ಮತ್ರವಲ್ಲ. ಅದಕ್ಕೆ ಬೇಕಿರುವ 2.5 ಬಿಲಿಯನ್ ಡಾಲರ್ ಅಂದರೆ 24,000 ಕೋಟಿ ರೂ. ಹೂಡಿಕೆಯಲ್ಲಿ ಮೈಕ್ರಾನ್ ಹೂಡುವುದು ಕೇವಲ ಶೇ.30 ಮಾತ್ರ. ಉಳಿದ ಶೇ.70 ಹೂಡಿಕೆಯನ್ನು ಕೇಂದ್ರ ಹಾಗೂ ಗುಜರಾತ್ ಸರಕಾರಗಳು ಮಾಡುತ್ತವೆ ಮತ್ತು ಇದು ಅತ್ಯಂತ ತಂತ್ರಜ್ಞಾನ ಕೇಂದ್ರಿತ ಮತ್ತು ಬಂಡವಾಳ ಸಾಂದ್ರಿತ ಉದ್ದಿಮೆಯಾಗಿರುವುದರಿಂದ ಇದು ಉದ್ಯೋಗಗಳನ್ನು ಸೃಷ್ಟಿ ಮಾಡುವುದಿಲ್ಲ. ಆಸಕ್ತರು ಹೆಚಿನ ವಿವರಗಳಿಗಾಗಿ ಈ ವೆಬ್ ಪೇಜಿನಲ್ಲಿರುವ ಮೋದಿ-ಬೈಡನ್ ಜಂಟಿ ಹೇಳಿಕೆಯನ್ನು ಗಮನಿಸಬಹುದು (https://www.whitehouse.gov/briefing-room/statements-releases/2023/06/22/joint-statement-from-the-united-states-and-india//)
-ಭಾರತದ ಲಘು ಯುದ್ಧ ವಿಮಾನಗಳಿಗೆ ಜನರಲ್ ಇಲೆಕ್ಟ್ರಿಕ್ (ಜೆಇ) ಕಂಪೆನಿಯು ಜೆಟ್ ಇಂಜಿನ್ ಪೂರೈಸಲು ಮತ್ತು ಅದನ್ನು ಭಾರತದಲ್ಲಿ ಉತ್ಪಾದಿಸಲು ಮಾಡಿಕೊಂಡಿರುವ ಒಪ್ಪಂದವನ್ನು ಕೂಡ ಮೋದಿ ಸಾಧನೆಯ ಪಟ್ಟಿಗೆ ಸೇರಿಸಲಾಗುತ್ತಿದೆ. ಆದರೆ ವಾಸ್ತವ ಬೇರೆಯೇ ಇದೆ. ಮೊದಲನೆಯದಾಗಿ ಜನರಲ್ ಇಲೆಕ್ಟ್ರಿಕ್ ಕಂಪೆನಿ ತನ್ನ ಸ್ವಾಮ್ಯದಲ್ಲಿರುವ ಯಾವುದೇ ಐಪಿಆರ್ ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾವಣೆ ಮಾಡುತ್ತಿಲ್ಲ. ಅದು ಭಾರತದಲ್ಲೇ ಕೆಲವು ಭಾಗಗಳನ್ನು ಉತ್ಪಾದಿಸಿದರೂ ಅದಕ್ಕೆ ಬೇಕಿರುವ ಪೂರಕ ಸಾಮಗ್ರಿಗಳು ಇಲ್ಲಿ ಲಭ್ಯವಿದ್ದರೆ ಅದನ್ನು ಕೊಳ್ಳುತ್ತದೆಯೇ ವಿನಾ ಉತ್ಪಾದನೆಯ ಇಂಜಿನಿಯರಿಂಗ್ ಡಿಸೆೈನ್ ಇತ್ಯಾದಿಗಳನ್ನು ವರ್ಗಾಯಿಸುವುದಿಲ್ಲ. ಎರಡನೆಯದಾಗಿ ಈ ಕಂಪೆನಿ ಒದಗಿಸುತ್ತಿರುವ ಇಂಜಿನ್ ಡಿಸೈನ್ 20 ವರ್ಷಗಳಷ್ಟು ಹಳೆಯದು. ನಾವು ಈಗಲೂ ಅಷ್ಟು ಹಳೆಯ ಜೆಟ್ ವಿಮಾನವನ್ನು ಬಳಸುತ್ತಿದ್ದೇವೆ ಎಂದು ಅದರ ಅರ್ಥ. ಏಕೆಂದರೆ ಆಧುನಿಕ ಯುದ್ಧ ವಿಮಾನ ಉತ್ಪಾದಿಸಲು ಬೇಕಾದ ಸ್ವದೇಸಿ ಜೆಟ್ ಇಂಜಿನ್ ತಂತ್ರಜ್ಞಾನ ವನ್ನು ಸಿದ್ಧಪಡಿಸಲು ಭಾರತ ಸರಕಾರ ಸ್ವಾಮ್ಯದ ಡಿಆರ್‌ಡಿಒ ಪ್ರಯತ್ನಿಸುತ್ತಿತ್ತು. ಆದರೆ ಆತ್ಮ ನಿರ್ಭರ ಎಂದು ಹೇಳುವ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಈ ಸ್ವದೇಶಿ ಪ್ರಯತ್ನಕ್ಕೆ ಹಣಕಾಸು ಕೊಡಲಿಲ್ಲ. ಈಗ ಜನರಲ್ ಇಲೆಕ್ಟ್ರಿಕ್ ಕಂಪೆನಿಯಿಂದ ಖರೀದಿ ಒಪ್ಪಂದವಾದ ಮೇಲೆ ಈ ಯೋಜನೆ ಆತ್ಮ ನಿರ್ಭರವಾಗುವ ಬದಲು ಸಂಪೂರ್ಣವಾಗಿ ಅಮೆರಿಕ ನಿರ್ಭರವಾಗುತ್ತದೆ. -ಮೋದಿ ಸಾಧನೆಯೆಂದು ಕೊಚ್ಚಿಕೊಳ್ಳುತ್ತಿರುವ ಮತ್ತೊಂದು ಅಂಶ ಮಾನವ ರಹಿತ ಮಿಲಿಟರಿ ರೀಪರ್ ಡ್ರೋನ್ ಖರೀದಿ. ಈ ಡ್ರೋನ್ ತಂತ್ರಜ್ಞಾನವನ್ನು ಈಗ ಯುದ್ಧಗಳಲ್ಲಿ ಬಳಸಲಾಗುತ್ತಿದೆ. ಆದರೆ ಮಿಲಿಟರಿ ಪರಿಣಿತರ ಪ್ರಕಾರ ಇಂತಹ ಭಾರೀ ಡ್ರೋನ್‌ಗಳು ಸೈನಿಕವಾಗಿ ಹಿಂದುಳಿದ ದೇಶಗಳ ಮೇಲೆ ಮೇಲಿಂದ ಬೇಹುಗಾರಿಕೆ ನಡೆಸಲು ಸೂಕ್ತವೇ ಹೊರತು ಆಧುನಿಕ ರಾಕೆಟ್ ಇತ್ಯಾದಿ ತಂತ್ರಜ್ಞಾನ ಉಳ್ಳ ಶತ್ರು ದೇಶಗಳ ಮೇಲಲ್ಲ. ಉದಾಹರಣೆಗೆ ಉಕ್ರೇನ್ ಯುದ್ಧದಲ್ಲಿ ಎರಡೂ ಕಡೆಯವರೂ ಈ ಡ್ರೋನ್ ಬಳಸುತ್ತಿಲ್ಲ. ಆದರೆ ಮೋದಿ-ಬೈಡನ್ ಒಪ್ಪಂದದ ಭಾಗವಾಗಿ ಭಾರತವು ಒಂದೊಂದು ಡ್ರೋನ್‌ಗೆ ಅಂದಾಜು 850 ಕೋಟಿ ರೂ. ತೆತ್ತು 25,000 ಕೋಟಿ ರೂ. ವೆಚ್ಚದಲ್ಲಿ ಇಂಥ ಹೆಚ್ಚು ಉಪಯೋಗಕ್ಕೆ ಬಾರದ ರೀಪರ್ ಡ್ರೋನ್ ಅನ್ನು ಖರೀದಿಸಿದೆ. ಆದರೆ, ಸೌದಿ ಹಾಗೂ ಇನ್ನಿತರ ಅಮೆರಿಕ ಮಿತ್ರ ದೇಶಗಳಿಗೆ ಅಮೆರಿಕ ಇದೇ ಡ್ರೋನ್ ಅನ್ನು ತಲಾ 150-200 ಕೋಟಿ ರೂ.ಗೆ ಮಾರಿದ ವರದಿಗಳಿವೆ. ಹೀಗೆ ಮೋದಿಯನ್ನು ಮಿತ್ರ ಎಂದು ಹೊಗಳುತ್ತ ಅಮೆರಿಕ ನಾಲ್ಕು ಪಟ್ಟು ಹೆಚ್ಚು ಲಾಭಕ್ಕೆ ತನ್ನ ಹಳೆಯ ಸರಕನ್ನು ಭಾರತಕ್ಕೆ ಮಾರಿದೆ. ಮೇಲಾಗಿ ಈ ಡ್ರೋನ್‌ನ ಯಾವ ತಂತ್ರಜ್ಞಾನವೂ ಭಾರತಕ್ಕೆ ವರ್ಗಾವಣೆಯಾಗಿಲ್ಲ.
ಭಾರತ -ಅಮೆರಿಕದ ಅಘೋಷಿತ ಸೇನಾ ನೆಲೆ?
ಎಲ್ಲಕ್ಕಿಂತ ಹೆಚ್ಚಾಗಿ ಅಮೆರಿಕದ ಜೊತೆ ನಾಲ್ಕು ಪ್ರಮುಖ ವ್ಯೆಹತಾಂತ್ರಿಕ ಒಪ್ಪಂದಗಳನು ಮಾಡಿಕೊಂಡು ಮೋದಿ ಸರಕಾರ ಭಾರತದ ಸೈನ್ಯವನ್ನು ಬಹುಪಾಲು ಅಮೆರಿಕಕರಣಗೊಳಿಸಿದೆ ಮತ್ತು ಆ ಮೂಲಕ ಭಾರತದ ಸೈನಿಕ ಸಿದ್ಧತೆಯು ಸಂಪೂರ್ಣವಾಗಿ ಅಮೆರಿಕವನ್ನು ಅವಲಂಬಿಸುವಂತೆ ಮಾಡಿದೆ. ಮೋದಿ-ಬೈಡನ್ ಒಪ್ಪಂದದ ಭಾಗವಾಗಿ ಮುಂದಿನ ಕೆಲವು ವರ್ಷಗಳಲ್ಲಿ ಭಾರತಕ್ಕೆ ಅಂದಾಜು 8 ಲಕ್ಷ ಕೋಟಿ ರೂ.ಗಳಷ್ಟು ಸೈನಿಕ ಪೂರೈಕೆಯನ್ನು ಅಮೆರಿಕದ ಕಂಪೆನಿಗಳೇ ಮಾಡಲಿವೆ. ಈವರೆಗೆ ನಮಗೆ ಬೇಕಿದ್ದ ಯುದ್ಧ ಶಸ್ತ್ರಾಸ್ತ್ರಗಳನ್ನು ಸ್ಥಳೀಯವಾಗಿ ಉತ್ಪಾದಿಸಿಕೊಳ್ಳುತ್ತಿದ್ದೆವು. ಆಧುನಿಕ ಶಸ್ತ್ರಾಸ್ತ್ರಗಳನ್ನು ಪ್ರಧಾನವಾಗಿ ರಶ್ಯ, ಅದರ ಜೊತೆಗೆ ಅಮೆರಿಕ, ಫ್ರಾನ್ಸ್ ಮತ್ತು ಇಸ್ರೇಲ್ ಗಳಿಂದ ಆಮದು ಮಾಡಿಕೊಳ್ಳುತ್ತಿದೆವು. ಆದರೆ ಮೋದಿ-ಬೈಡನ್ ಒಪ್ಪಂದದಿಂದಾಗಿ ನಮಗೆ ಬೇಕಿರುವ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳು ಇತರ ಮೂಲದಿಂದ ಅಗ್ಗದಲ್ಲಿ ಲಭ್ಯವಿದ್ದರೂ ಇನ್ನು ಮುಂದೆ ಭಾರತ ಅಮೆರಿಕದಿಂದಲೇ ಕೊಳ್ಳುವಂತಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಮೆರಿಕದ ನೌಕೆ, ವಿಮಾನ ಇತ್ಯಾದಿಗಳಿಗೆ ಭಾರತದಲ್ಲಿ ರಿಪೇರಿ, ಮರುಪೂರೈಕೆ ಇತ್ಯಾದಿಗಳನ್ನು ಒದಗಿಸುವ ಅಮೆರಿಕದ ಸಾಮಂತ ನೆಲೆಯಾಗಿ ಭಾರತ ಪರಿವರ್ತನೆಯಾಗಲಿದೆ. ಇದರಿಂದಾಗಿ ಅಮೆರಿಕದ ಅವಲಂಬನೆಯಿಂದ ಹೊರಬರದಂತೆ ಭಾರತ ಅಮೆರಿಕ ನಿರ್ಭರವಾಗುವಂತೆ ಮೋದಿ ಸರಕಾರ ಮಾಡಿದೆ. ಇದು ಅಮೆರಿಕದ ಶತ್ರುಗಳನ್ನು ನಮ್ಮ ಶತ್ರುಗಳನ್ನಾಗಿಸುತ್ತದೆ. ಭಾರತಕ್ಕೆ ಬೇಡದಿದ್ದರೂ ಅಮೆರಿಕದ ಯುದ್ಧವನ್ನು ಭಾರತವು ಮಾಡುವಂತಹ ವಸಾಹತು ಸಂಬಂಧಕ್ಕೆ ಮೋದಿ ಸರಕಾರ ಭಾರತವನ್ನು ದೂಡಿದೆ. ಮನಮೋಹನ್ ಸಿಂಗ್ ಸರಕಾರ ಭಾರತದ ಅಣುಶಕ್ತಿ ಸಾರ್ವಭೌಮತೆ ಯನ್ನು ಅಮೆರಿಕಕ್ಕೆ ಬಿಟ್ಟುಕೊಟ್ಟರೆ ಮೋದಿ ಸರಕಾರ ಭಾರತದ ಸೈನಿಕ ಸಾರ್ವಭೌಮತೆಯನ್ನು ಮತ್ತು ವ್ಯೆಹತಾಂತ್ರಿಕ ಸ್ವಾತಂತ್ರ್ಯವನ್ನು ಅಮೆರಿಕಕ್ಕೆ ಮಾರಿಕೊಂಡಿದೆ. ಭಕ್ತರೇ, ಈಗ ಹೇಳಿ. ಇದು ದೇಶಪ್ರೇಮಿ ಸರಕಾರವೇ?