ಮೋದಿ ಬಾಂಡ್ : ಬ್ರಹ್ಮಾಂಡ ಭ್ರಷ್ಟಾಚಾರ, ಮಹಾನ್ ವಿಶ್ವಾಸದ್ರೋಹ
ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಯಲುಗೊಳಿಸಲು ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ 2024ರ ಫೆಬ್ರವರಿ 15ರಂದು ಆದೇಶ ನೀಡಿದ ನಂತರ ಬಯಲಾಗುತ್ತಿರುವ ಅರೆ ಬರೆ ವಿವರಗಳು ಮತ್ತು ಪೂರ್ತಿ ವಿವರಗಳನ್ನು ಕೊಡದಿರಲು ಸರಕಾರ ಮತ್ತು ಎಸ್‌ಬಿಐ ಆಡುತ್ತಿರುವ ನಾಟಕಗಳು ಈ ದೇಶವು ನಿಜಕ್ಕೂ ಒಂದು ಪ್ರಜಾತಂತ್ರವಾಗುಳಿದಿದೆಯೇ ಅಥವಾ ಒಂದು ಕಾರ್ಪೊರೇಟೋಕ್ರಸಿಯಾಗಿದೆಯೇ ಎಂಬ ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಷ್ಟು ಮಾತ್ರವಲ್ಲ, ಭಾರತದ ಚುನಾವಣೆಗಳಲ್ಲಿ ಸಾವಿರಾರು ಕೋಟಿ ಕಪ್ಪುಹಣ ಬಿಳಿಯಾಗಲು ಈ ಎಲೆಕ್ಟೊರಲ್ ಬಾಂಡ್ ಅನುಕೂಲ ಮಾಡಿಕೊಟ್ಟಿದೆಯೆಂಬುದನ್ನು ಸಹ ಈ ವಿವರಗಳು ಬಯಲು ಮಾಡಿವೆ. ಹೀಗಾಗಿ ಇದು ಕೇವಲ ಒಂದು ಚುನಾವಣಾ ಹಣಕಾಸು ಹಗರಣವಲ್ಲ. ಬದಲಿಗೆ ಈ ದೇಶದ ಜನತೆಗೆ ಹಾಗೂ ಪ್ರಜಾತಂತ್ರಕ್ಕೆ ಪ್ರಧಾನವಾಗಿ ಬಿಜೆಪಿ ಮತ್ತು ಒಂದಷ್ಟು ಪ್ರಮಾಣದಲ್ಲಿ ಉಳಿದೆಲ್ಲಾ ಪಕ್ಷಗಳು ಬಗೆದಿರುವ ಮಹಾನ್ ವಿಶ್ವಾಸದ್ರೋಹವಾಗಿದೆ.
ಕಪ್ಪುಹಣವನ್ನು ಕಾರ್ಪೊರೇಟ್ ಕಳ್ಳಾಟವನ್ನು ಹೆಚ್ಚಿಸಿದ ಎಲೆಕ್ಟೊರಲ್ ಬಾಂಡ್
ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಪಕ್ಷಗಳ ಹಣಕಾಸಿನ ಮೂಲಗಳು ಮೊದಲಿನಿಂದಲೂ ಅಷ್ಟು ಪಾರದರ್ಶಕವಾಗಿಯೂ ಇರಲಿಲ್ಲ. ಜನಾಧಾರಿತವಾಗಿಯೂ ಇರಲಿಲ್ಲ. ಹೀಗಾಗಿಯೇ ನಮ್ಮ ಚುನಾವಣಾ ವ್ಯವಸ್ಥೆ ಮತ್ತು ಆಯ್ಕೆಯಾದ ಸರಕಾರಗಳು ರೂಪದಲ್ಲಿ ಪ್ರಜಾತಾಂತ್ರಿಕವಾಗಿದ್ದರೂ ಸಾರದಲ್ಲಿ ಜನಪರವಾಗಿಯೇನೂ ಇರಲಿಲ್ಲ. ಸ್ವಾತಂತ್ರ್ಯಾನಂತರದಲ್ಲಿ ದೊಡ್ಡ ದೊಡ್ಡ ಭೂಮಾಲಕರು ಮತ್ತು ಉದ್ಯಮಪತಿಗಳು ತಮ್ಮ ಪರವಾದ ನೀತಿಗಳನ್ನು ಜಾರಿಗೆ ತರಲು ಆಗಿನ ಅತಿ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಸರಕಾರದ ಸಾಮೀಪ್ಯವನ್ನೂ ಹೊಂದಿದ್ದವು ಮತ್ತು ಹಣಕಾಸು ಪೂರೈಕೆಯನ್ನು ಮಾಡುತ್ತಿದ್ದವು. ಆದ್ದರಿಂದಲೇ ಸ್ವಾತಂತ್ರ್ಯಾನಂತರ ಘೋಷಿತವಾದ ಭೂ ಸುಧಾರಣೆಗಳು ಸಮಾಜವಾದಿ-ಕಮ್ಯುನಿಸ್ಟ್ ಚಳವಳಿಗಳು ಬೇರುಬಿಟ್ಟಿದ್ದ ಜಾಗಗಳಲ್ಲಿ ಬಿಟ್ಟರೆ ಬೇರೆಲ್ಲೂ ಜಾರಿಯಾಗಲೇ ಇಲ್ಲ. ಕರ್ನಾಟಕವನ್ನೂ ಒಳಗೊಂಡಂತೆ. ಆಗಿನ ಕಾಲದಲ್ಲಿ ಸಮಾಜವಾದಿ-ಕಮ್ಯುನಿಸ್ಟ್ ಹಿನ್ನೆಲೆಯ ಪಕ್ಷಗಳನ್ನು ಹೊರತು ಪಡಿಸಿದರೆ ಮಿಕ್ಕೆಲ್ಲಾ ಪಕ್ಷಗಳ ಪ್ರಧಾನ ಹಣಕಾಸು ಮೂಲ ಜಮೀನ್ದಾರರು, ದೊಡ್ಡ ದೊಡ್ಡ ವರ್ತಕರು ಮತ್ತು ಉದ್ಯಮಿಗಳೇ ಆಗಿರುತ್ತಿದ್ದರು. ಮೇಲ್ನೋಟಕ್ಕೆ ಶಾಸನ ಸಭೆ ಮತ್ತು ಸಂಸತ್ತಿಗೆ ಸ್ಪರ್ಧಿಸುವ ಅಭ್ಯರ್ಥಿಯ ವೆಚ್ಚಕ್ಕೆ ಮೇಲ್ಮಿತಿಯನ್ನು ಚುನಾವಣಾ ಆಯೋಗ ಹಾಕಿದರೂ ಅದು ಹಾಸ್ಯಾಸ್ಪದವಾದ ಮಿತಿಯಾಗಿಯೇ ಉಳಿದಿದೆ. (ಉದಾಹರಣೆಗೆ ಚುನಾವಣಾ ಆಯೋಗದ 2022ರ ಅದೇಶದ ಪ್ರಕಾರ ಒಂದು ಶಾಸನ ಸಭೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಗರಿಷ್ಠ 40 ಲಕ್ಷ ರೂ. ಹಾಗೂ ಸಂಸತ್ ಕ್ಷೇತ್ರದ ಅಭ್ಯರ್ಥಿ ಗರಿಷ್ಠ 90 ಲಕ್ಷ ರೂ. ವೆಚ್ಚವನ್ನು ಮಾಡಬಹುದು. ಈ ಗರಿಷ್ಠ ಮಿತಿಯಲ್ಲಿ ಗ್ರಾಮಪಂಚಾಯತ್ ಚುನಾವಣೆೆಗಳೂ ಕೂಡ ನಡೆಯುವುದಿಲ್ಲ ಎಂಬುದು ಎಲ್ಲರೂ ಬಲ್ಲ ವಿಷಯ). ಆದರೆ ಅದೇ ಸಮಯದಲ್ಲಿ ಆಯೋಗವು ಪಕ್ಷಗಳ ಒಟ್ಟಾರೆ ವೆಚ್ಚದ ಮೇಲೆ ಯಾವುದೇ ನಿಬಂಧನೆಯನ್ನು ಹೇರುವುದಿಲ್ಲ!
ಇದರ ಜೊತೆಗೆ ಚುನಾವಣೆಯ ಪಾರದರ್ಶಕತೆಯನ್ನು ಹೆಚ್ಚಿಸುವ ಸಲುವಾಗಿ ಕಾರ್ಪೊರೇಟ್ ದೇಣಿಗೆಯ ಮೇಲೂ ಮೋದಿ ಸರಕಾರ ಬರುವವರೆಗೆ ಕೆಲವು ನಿಯಂತ್ರಣಗಳಿದ್ದವು. ಕೇವಲ ಲಾಭ ಮಾಡುವ ಕಂಪೆನಿಗಳು ಮಾತ್ರ ದೇಣಿಗೆ ಕೊಡಬಹುದು ಮತ್ತು ಆ ಪ್ರಮಾಣ ಹಿಂದಿನ ಮೂರು ವರ್ಷಗಳ ಲಾಭದ ಸರಾಸರಿಯ ಶೇ. 7.5ನ್ನು ಮೀರಬಾರದು ಇತ್ಯಾದಿಗಳು. ಇದಲ್ಲದೆ ಯಾವ ಕಂಪೆನಿ ಯಾವ ಪಕ್ಷಕ್ಕೆ ಎಷ್ಟು ಹಣ ದೇಣಿಗೆ ಕೊಟ್ಟವು ಎಂಬ ಮಾಹಿತಿಯೂ ಸಿಗುವ ವ್ಯವಸ್ಥೆಯಿತ್ತು.
ಆದರೆ 1991ರ ನಂತರ ಕಾಂಗ್ರೆಸ್‌ನ ನೇತೃತ್ವದಲ್ಲಿ ಮತ್ತು ಬಿಜೆಪಿಯ ಸಮ್ಮತಿಯೊಂದಿಗೆ ಉದಾರೀ ಕರಣ-ಖಾಸಗೀಕರಣ-ಜಾಗತೀಕರಣದ ನೀತಿಗಳ ಮೂಲಕ ಸಾರ್ವಜನಿಕ ಸಂಪತ್ತನ್ನು ಖಾಸಗೀಕರಿಸುವ ಯೋಜನೆಗಳು ಜಾರಿಯಾಗತೊಡಗಿದವು. ಇದು ಕಾರ್ಪೊರೇಟ್ ಕಂಪೆನಿಗಳು ಆಳುವ ಪಕ್ಷಗಳ ಒಲವನ್ನು ಪಡೆದುಕೊಳ್ಳಲು ಪೈಪೋಟಿಯನ್ನು ಹುಟ್ಟುಹಾಕಿತು. ಅದರ ಭಾಗವಾಗಿ ಈ ಅತಿಲಾಭದ ದುರಾಸೆಯ ಕಂಪೆನಿಗಳು ಚುನಾವಣಾ ಪಕ್ಷಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೋಟ್ಯಂತರ ರೂ.ಗಳನ್ನು ಚುನಾವಣಾ ನಿಧಿ ಕೊಡಲಾರಂಭಿಸಿದವು. ಇದು ಇಡೀ ಚುನಾವಣಾ ವ್ಯವಸ್ಥೆಯನ್ನು ಜನರಿಂದ ದೂರ ಕಾರ್ಪೊರೇಟ್‌ಗೆ ಹತ್ತಿರ ಕೊಂಡೊಯ್ದಿದ್ದು ಮಾತ್ರವಲ್ಲದೆ ಅಪಾರ ಭ್ರಷ್ಟಾಚಾರಕ್ಕೂ, ಅಕ್ರಮ ನೀತಿಗಳಿಗೂ ದಾರಿ ಮಾಡಿಕೊಟ್ಟಿತು. ಪ್ರತ್ಯುಪಕಾರದ ಉದ್ದೇಶದಿಂದ ಕಾರ್ಪೊರೇಟ್‌ಗಳು ಕೊಡುತ್ತಿದ್ದ ಚುನಾವಣಾ ದೇಣಿಗೆಯಿಂದಾಗಿ ಚುನಾವಣಾ ವೆಚ್ಚ ಮುಗಿಲುಮುಟ್ಟಿತು. ಕಾರ್ಪೊರೇಟ್ ಪರವಲ್ಲದವರು ಚುನಾವಣೆಯಲ್ಲಿ ಗೆಲ್ಲುವುದಿರಲಿ ಭಾಗವಹಿಸುವುದೂ ಕಷ್ಟವಾಗತೊಡಗಿತು.
ರಾಜಕಾರಣದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಪೊಳ್ಳು ಪ್ರಚಾರದ ಮೂಲಕ 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಕಾರ್ಪೊರೇಟ್ ಪ್ರಾಯೋಜಿತ ಚುನಾವಣಾ ಹಣಕಾಸು ಭ್ರಷ್ಟಾಚಾರವನ್ನು ಮತ್ತೊಂದು ಮಜಲಿಗೇ ಮುಟ್ಟಿಸಿತು.
ಎಲೆಕ್ಟೊರಲ್ ಬಾಂಡ್ ಮತ್ತು ಮೋದಿ ಬ್ರಾಂಡ್ ಭ್ರಷ್ಟಾಚಾರ
ಮೋದಿ ಸರಕಾರ 2017ರಲ್ಲಿ ಎಲೆಕ್ಟೊರಲ್ ಬಾಂಡ್ ವ್ಯವಸ್ಥೆಯನ್ನು ಜಾರಿಗೆ ತಂದಿತು. ಈ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ ಅಥವಾ ಕಂಪೆನಿ ತನ್ನ ಅಕೌಂಟು ಮತ್ತು ಗುರುತಿನ ವಿವರಗಳನ್ನು ಕೊಟ್ಟು ಚೆಕ್ ಅಥವಾ ಇತರ ಡಿಜಿಟಲ್ ಮಾದರಿಯ ಮೂಲಕ ಸರಕಾರ ನಿಗದಿಗೊಳಿಸಿದ ಎಸ್‌ಬಿಐ ಶಾಖೆಯಲ್ಲಿ ಚುನಾವಣಾ ದೇಣಿಗೆಗೆಂದೇ ಮುದ್ರಿಸಲಾದ 1,000 ಮೌಲ್ಯದಿಂದ 1 ಕೋಟಿ ಮೌಲ್ಯದ ಎಲೆಕ್ಟೊರಲ್ ಬಾಂಡ್ ಗಳನ್ನು ಖರೀದಿಸಬಹುದು. ಅದನ್ನು ಆ ವ್ಯಕ್ತಿ ಅಥವಾ ಕಂಪೆನಿ ತನಗಿಷ್ಟ ಬಂದ ಯಾವುದೇ ಪಕ್ಷಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ತಲುಪಿಸಬಹುದು. ಹೀಗೆ ಬಾಂಡುಗಳನ್ನು ಪಡೆದ ಪಕ್ಷವು ಬ್ಯಾಂಕಿಗೆ ಅದನ್ನು ಕೊಟ್ಟು ಹಣವನ್ನು ಪಡೆದುಕೊಳ್ಳಬಹುದು. ಈ ಇಡೀ ಪ್ರಕ್ರಿಯೆಯಲ್ಲಿ ಯಾವ ಕಂಪೆನಿ ಎಷ್ಟು ಖರೀದಿ ಮಾಡಿತು ಮತ್ತು ಯಾವ ಪಕ್ಷಕ್ಕೆ ಕೊಟ್ಟಿತು ಎಂಬುದು ಸರಕಾರಕ್ಕೆ ಅಥವಾ ಪಡೆದುಕೊಂಡ ಪಕ್ಷಗಳಿಗಾಗಲೀ ಗೊತ್ತಾಗುವುದಿಲ್ಲ. ಈ ಅನಾಮಧೇಯತೆ ಕಾರ್ಪೊರೇಟ್ ಕಂಪೆನಿಗಳಿಗೆ ಪಕ್ಷಗಳಿಗೆ ಹಣ ದೇಣಿಗೆ ನೀಡಲು ಪ್ರೋತ್ಸಾಹಿಸುತ್ತದೆ ಮತ್ತು ಇಡೀ ವ್ಯವಹಾರ ಡಿಜಿಟಲ್ ಮಾದರಿಯಲ್ಲಿ ನಗದಿಲ್ಲದೆ ನಡೆಯುವುದರಿಂದ ಚುನಾವಣೆಯಲ್ಲಿ ಕಪ್ಪುಹಣ ಚಲಾವಣೆ ತಡೆಯಬಹುದು ಎಂಬುದು ಮೋದಿ ಸರಕಾರದ ಪ್ರತಿಪಾದನೆಯಾಗಿತ್ತು.
ಆದರೆ ಈ ಮೋದಿ ಬಾಂಡ್ ಯೋಜನೆಯು ಲಾಭ ಮಾಡುವ ಕಂಪೆನಿಗಳು ಮಾತ್ರ ದೇಣಿಗೆ ಕೊಡಬಹುದು ಎಂದಿದ್ದ ನಿಯಮವನ್ನು ಬದಲಾಯಿಸಿ ನಷ್ಟ ಮಾಡುತ್ತಿರುವ ಕಂಪೆನಿಗಳೂ ಕೂಡ ದೇಣಿಗೆ ನೀಡಬಹುದು ಎಂದು ತಿದ್ದುಪಡಿ ಮಾಡಿತು. ನಷ್ಟದ ಕಂಪೆನಿ ಏಕೆ ದೇಣಿಗೆ ಕೊಡುತ್ತದೆ? ಯಾರಿಗೆ ಕೊಡುತ್ತದೆ?.
ಹಾಗೆಯೇ ವಿದೇಶ ಶೆಲ್ ಕಂಪೆನಿಗಳೂ ಕೂಡ ದೇಣಿಗೆ ಕೊಡುವಂಥ ಮಾರ್ಪಾಡನ್ನು ಮಾಡಿತು. ಎಲ್ಲಕಿಂತ ಹೆಚ್ಚಾಗಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಯಾರಿಂದ ಹಣ ಪಡೆದುಕೊಂಡೆ ಎನ್ನುವ ವಿವರವನ್ನು ಮತ್ತು ಕಂಪೆನಿಗಳು ತಮ್ಮ ಶೇರುದಾರರಿಂದ ಮತ್ತು ಸರಕಾರದಿಂದ ಬಾಂಡ್ ವ್ಯವಹಾರವನ್ನು ಸಂಪೂರ್ಣವಾಗಿ ಗೋಪ್ಯವಾಗುಳಿಸುವ ತಿದ್ದುಪಡಿಯನ್ನು ತಂದಿತು.
ಅಷ್ಟು ಮಾತ್ರವಲ್ಲ. ಈಗ ಜಗಜ್ಜಾಹೀರಾಗಿರುವ (ಪೂನಂ ಅಗರ್‌ವಾಲ್ ಎಂಬ ಪತ್ರಕರ್ತರು ಬಯಲು ಮಾಡಿರುವ) ಮಾಹಿತಿಯ ಪ್ರಕಾರ ಪ್ರತಿಯೊಂದು ಬಾಂಡುಗಳ ಮೇಲೂ ಒಂದು ಸರಣಿ ಸಂಖ್ಯೆ ಮತ್ತು ಬರಿಗಣ್ಣಿಗೆ ಗೋಚರವಾಗದ ಮತ್ತು ಅಲ್ಫಾ ನ್ಯುಮರಿಕಲ್ ಸಂಖ್ಯೆ ಇರುತ್ತದೆ. ಇದರಿಂದ ಎಸ್‌ಬಿಐ ಮತ್ತು ಮೋದಿ ಸರಕಾರ ಎರಡಕ್ಕೂ ಯಾವ ಕಂಪೆನಿ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಕೊಟ್ಟಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಜನರಿಗೆ ಮತ್ತು ದೇಣಿಗೆ ಪಡೆಯದ ಪಕ್ಷಗಳಿಗೆ ಮಾತ್ರ ಗೊತ್ತಾಗುವುದಿಲ್ಲ. ಅಷ್ಟೆ.
ಮೊನ್ನೆ ಚುನಾವಣಾ ಆಯೋಗವು ಸುಪ್ರೀಂ ಕೋರ್ಟಿಗೆ 2019ರಲ್ಲಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾದ ವಿವರಗಳನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಡಿಎಂಕೆ, ಎನ್‌ಸಿಪಿ ಮತ್ತು ಆಪ್ ಪಕ್ಷಗಳು ತಮಗೆ ಯಾವ ಕಂಪೆನಿಗಳು ದೇಣಿಗೆಯನ್ನು ಬಾಂಡ್ ಮೂಲಕ ನೀಡಿವೆ ಎಂಬ ವಿವರವನ್ನು ಬಯಲು ಮಾಡಿವೆ. ಹಾಗಿದ್ದಲ್ಲಿ ಕಂಪೆನಿಗಳು ಪಕ್ಷಗಳಿಗೆ ದೇಣಿಗೆ ಕೊಟ್ಟಾಗ ಅದನ್ನು ಇಂಥಾ ಪಕ್ಷಗಳಿಗೆ ಇಂಥಾ ನಿರೀಕ್ಷೆಗಳನ್ನು ಇಟ್ಟುಕೊಂಡೇ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿರುತ್ತಾರಲ್ಲವೇ? ಹಾಗಿದ್ದಲ್ಲಿ ಕಂಪೆನಿಯ ನಿರೀಕ್ಷೆಗಳನ್ನು ಈಡೇರಿಸಲು ಚುನಾವಣಾ ಬಾಂಡ್ ಪಡೆದುಕೊಳ್ಳುವುದು ಭ್ರಷ್ಟಾಚಾರವಲ್ಲವೇ?
ಎಲೆಕ್ಟೊರಲ್ ಬಾಂಡ್ ಅಲ್ಲ ಮೋದಿ ಬಾಂಡ್
ಹೀಗಾಗಿ ಇದು ಎಲೆಕ್ಟೊರಲ್ ಬಾಂಡ್ ಅಲ್ಲ. ಮೂಲಭೂತವಾಗಿ ಮೋದಿ ಬಾಂಡ್ ಎನ್ನುವುದು ಕೂಡಲೇ ಬಯಲಿಗೆ ಬರಲಾರಂಭಿಸಿತು. 2018ರಲ್ಲೇ ಈ ಯೋಜನೆಯ ಅಪ್ರಜಾತಾಂತ್ರಿಕ ಹಾಗೂ ಕಾರ್ಪೊರೇಟ್ ಪರ ನಿಗೂಢ ನೀತಿಗಳ ವಿರುದ್ಧ ಸುಪ್ರೀಂನಲ್ಲಿ ದಾವೆಗಳನ್ನು ಜನಪರ ವ್ಯಕ್ತಿಗಳು ಮತ್ತು ಸಂಸ್ಥೆಗಳು ಹೂಡಿದರು. 2019ರ ಎಪ್ರಿಲ್ 12 ರಂದು ಒಂದು ಮಧ್ಯಂತರ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಯಾವ ಪಕ್ಷಗಳಿಗೆ ಎಷ್ಟು ದೇಣಿಗೆ ಸಿಕ್ಕಿದೆ ಎಂಬ ವಿವರವನ್ನು ಕಾಲಕಾಲಕ್ಕೆ ಪ್ರಕಟಿಸಲು ಆದೇಶ ನೀಡಿ ಉಳಿದಂತೆ ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಎಂಬ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟಿಗೆ ಸಲ್ಲಿಸಲು ಆದೇಶ ನೀಡಿತ್ತು.
ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಮಾನದನ್ವಯ ಹೊರಬಂದಿರುವ ಮಾಹಿತಿಗಳನ್ನೇ ನೋಡಿದರೆ 2018-2024ರ ಅವಧಿಯಲ್ಲಿ ಒಟ್ಟಾರೆಯಾಗಿ ಎಲೆಕ್ಟೊರಲ್ ಬಾಂಡುಗಳಿಂದ 16,492 ಕೋಟಿ ರೂ.ಗಳಷ್ಟು ದೇಣಿಗೆಯನ್ನು ಕಂಪೆನಿಗಳು ಇತರ ಚುನಾವಣಾ ಪಕ್ಷಗಳಿಗೆ ಕೊಟ್ಟಿವೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ ಸಿಂಹಪಾಲು 8,250 ಕೋಟಿ ರೂ. ಕೇವಲ ಬಿಜೆಪಿ ಬೊಕ್ಕಸವನ್ನು ಸೇರಿದೆ. ಉಳಿದಂತೆ ರಾಜ್ಯಮಟ್ಟದಲ್ಲಿ ಅಧಿಕಾರದಲ್ಲಿರುವ ಟಿಎಂಸಿ, ಕಾಂಗ್ರೆಸ್, ಡಿಎಂಕೆ, ಜೆಡಿಎಸ್, ಬಿಜೆಡಿ ಯಂಥ ಪಕ್ಷಗಳಿಗೆ ನರಿಪಾಲು ಸಂದಿದೆ. ಆಡಳಿತರೂಢ ಪಕ್ಷಕ್ಕೆ ಕಂಪೆನಿಗಳು ನಿಧಿ ಕೊಡುವ ಉದ್ದೇಶವೇ ತಮಗೆ ಬೇಕಿರುವ ಪ್ರಯೋಜನವನ್ನು ಪಡೆದುಕೊಳ್ಳಲಲ್ಲವೇ? ಇದಕ್ಕಿಂತ ಶಾಸನಬದ್ಧ ಭ್ರಷ್ಟಾಚಾರ ಮತ್ತೊಂದಿರಲು ಸಾಧ್ಯವೇ?
ಸುಪ್ರೀಂ ತೀರ್ಪು-ಎಸ್‌ಬಿಐ ಮತ್ತು ಮೋದಿ ಸರಕಾರದ ಕಳ್ಳಾಟಗಳು
ಮೋದಿ ಸರಕಾರದ ಎಲ್ಲಾ ಕಿರುಕುಳದ ನಡುವೆಯೂ ನಿವೃತ್ತ ಸೇನಾಧಿಕಾರಿ ಬಾತ್ರ, ಕಾರ್ಯಕರ್ತ ಚೊಕ್ಕರ್, ಎಡಿಆರ್ ಸಂಸ್ಥೆ, ಪ್ರಶಾಂತ್ ಭೂಷಣ್‌ರಂಥ ವಕೀಲರು, ರಿಪೋರ್ಟರ್ಸ್ ಕಲೆಕ್ಟಿವ್‌ನಂಥ ಪರ್ಯಾಯ ಮಾಧ್ಯಮಗಳು ಹಾಗೂ ಎಡಪಕ್ಷಗಳು ನಡೆಸಿದ ನಿರಂತರ ಪ್ರಯತ್ನ ಹಾಗೂ ಕಾನೂನು ಸಮರವು ಫಲಿಸಿ, 2024ರ ಫೆಬ್ರವರಿ 15 ರಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಎಲೆಕ್ಟೊರಲ್ ಬಾಂಡ್ ವ್ಯವಸ್ಥೆಯನ್ನು ರದ್ದುಗೊಳಿಸಿತು ಮತ್ತು ಮತದಾರರಿಗೆ ತಾವು ಮತ ನೀಡುವ ಪಕ್ಷಗಳು ಯಾರಿಂದ ದೇಣಿಗೆ ಪಡೆಯುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಪಡೆಯುವ ಹಕ್ಕಿದೆ ಎಂದೂ, ಕಂಪೆನಿಗಳು ಪಕ್ಷಗಳಿಗೆ ದೇಣಿಗೆ ನೀಡಿದಾಗ ಆ ಪಕ್ಷವು ಅಧಿಕಾರಕ್ಕೆ ಬಂದಾಗ ‘ಉಪಕಾರಕ್ಕೆ ಪ್ರತ್ಯುಪಕಾರ’ ಮಾಡಿದ್ದಾರೆಯೇ ಎಂಬುದರ ಮಾಹಿತಿ ಒಂದು ಪ್ರಜಾತಂತ್ರಕ್ಕೆ ಅತ್ಯವಶ್ಯ ಎಂದು ಮತದಾರರ ಹಕ್ಕನ್ನು ಎತ್ತಿಹಿಡಿಯಿತು ಹಾಗೂ 2019ರ ಎಪ್ರಿಲ್ 12ರ ನಂತರ 2024ರವರೆಗೆ ನಡೆದಿರುವ ಎಲೆಕ್ಟೊರಲ್ ಬಾಂಡ್ ವ್ಯವಹಾರದ ‘ಎಲ್ಲ ಮಾಹಿತಿಗಳನ್ನು’ ಎಸ್‌ಬಿಐ ಮಾರ್ಚ್ 6ರ ಒಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕೆಂದೂ, ಮಾರ್ಚ್ 13ರ ಒಳಗೆ ಚುನಾವಣಾ ಆಯೋಗ ಅದನ್ನು ತನ್ನ ವೆಬ್‌ಸೈಟಿನಲ್ಲಿ ಬಹಿರಂಗಗೊಳಿಸಬೇಕೆಂದೂ ಆದೇಶಿಸಿತು.
ಆದರೆ ಮೋದಿ ಸರಕಾರ ಮತ್ತು ಎಸ್‌ಬಿಐ ಇದನ್ನು ಜಾರಿ ಮಾಡುವ ಯಾವ ಉದೇಶವನ್ನು ಹೊಂದಿರಲಿಲ್ಲ. ಹೀಗಾಗಿ ಮಾರ್ಚ್ 4ರಂದು ಎಸ್‌ಬಿಐ ತನಗೆ ಎಲ್ಲಾ ವಿವರಗಳನ್ನು ಬಹಿರಂಗಗೊಳಿಸಲು ಜೂನ್ 30ರ ತನಕ ಸಮಯ ಬೇಕೆಂದು ಕೇಳಿತು. ಮಾರ್ಚ್ 14ರಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬ್ಯಾಂಕಿಗೆ ಛೀಮಾರಿ ಹಾಕಿ ಕೂಡಲೇ ಎಲ್ಲಾ ವಿವರಗಳನ್ನು ನೀಡಲು ಆದೇಶಿಸಿತು.
ಮಾರ್ಚ್ 15ರ ಸಂಜೆ ಚುನಾವಣಾ ಆಯೋಗದ ವೆಬ್‌ಸೈಟಿನಲ್ಲಿ ಪ್ರಕಟವಾದ ವಿವರಗಳಲ್ಲಿ ಸಂಪೂರ್ಣ ಮಾಹಿತಿ ಇರಲಿಲ್ಲ. ಎಲ್ಲಕಿಂತ ಮುಖ್ಯವಾಗಿ ಯಾವ ಕಂಪೆನಿ ಯಾವ ಪಕ್ಷಕ್ಕೆ ಹಣ ಕೊಟ್ಟಿದೆ ಎಂಬ ಮಾಹಿತಿಯನ್ನು ನಿಖರವಾಗಿ ತಿಳಿಸುವ ಸೀರಿಯಲ್ ನಂಬರ್ ಮತ್ತು ಅಲ್ಫಾ ನ್ಯುಮರಿಕಲ್ ನಂಬರ್ ಅನ್ನು ನೀಡಿರಲಿಲ್ಲ. ಇದಿಲ್ಲದೆ ಯಾವ ಕಂಪೆನಿಗಳು ಎಷ್ಟು ಹಣ ಕೊಟ್ಟಿವೆ ಎಂದು ತಿಳಿಯುತ್ತದಾದರೂ, ಯಾವ ಪಕ್ಷಕ್ಕೆ ಕೊಟ್ಟಿದ್ದು ಎಂದು ನಿಖರವಾಗಿ ತಿಳಿಯುವುದಿಲ್ಲ. ಸರಕಾರದ ಉದ್ದೇಶವೂ ಇದೇ ಆಗಿತ್ತು ಎಂಬುದು ಮಾರ್ಚ್ 18 ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ಸ್ಪಷ್ತಪಡಿಸಿತು.
ಮಾರ್ಚ್ 18ರಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಎಸ್‌ಬಿಐಗೆ ಛೀಮಾರಿ ಹಾಕಿ ತಮ್ಮ ಆದೇಶದಲ್ಲಿ ಎಲ್ಲಾ ವಿವರಗಳನ್ನು ಕೊಡತಕ್ಕದ್ದು ಎಂದು ಹೇಳಿದ ಮೇಲೆ ಅದರಲ್ಲಿ ಸೀರಿಯಲ್ ನಂಬರ್ ಮತ್ತು ಅಲ್ಫಾ ನ್ಯುಮರಿಕಲ್ ನಂಬರ್ ಕೊಡಬಾರದು ಎಂದು ಹೇಗೆ ಅರ್ಥಮಾಡಿ ಕೊಂಡಿರಿ ಎಂದು ತರಾಟೆಗೆ ತೆಗೆದುಕೊಂಡಿತು ಹಾಗೂ ಮಾರ್ಚ್ 21ರೊಳಗೆ ಎಲ್ಲಾ ವಿವರಗಳನ್ನು ನೀಡಲು ಆದೇಶ ನೀಡಿದೆ.
ಆದರೆ ಆದೇಶ ನೀಡಿದ ತರುವಾಯ ಭಾರತದ ದೊಡ್ಡ ಉದ್ಯಮ ಸಂಸ್ಥೆಗಳ ಒಕ್ಕೂಟವಾಗಿರುವ CII, FICCI, ASSOCHAM ಪರವಾಗಿ ಅವಸರ ಅವಸರವಾಗಿ ಮೌಖಿಕ ಮಧ್ಯಪ್ರವೇಶ ಮಾಡಿದ ಮಾಜಿ ಸರಕಾರಿ ಅಡ್ವಕೇಟ್ ಜನರಲ್ ಮುಕುಲ್ ರೊಹಟಗಿಯವರು ಯಾವ ಕಾರಣಕ್ಕೂ ಅಲ್ಫಾ ನ್ಯುಮರಿಕಲ್ ನಂಬರ್ ಅನ್ನು ಬಹಿರಂಗಗೊಳಿಸುವ ಆದೇಶ ನೀಡಬಾರದೆಂದು ಕೋರ್ಟನ್ನು ಗೋಗರೆಯತೊಡಗಿದರು. ಅದೇ ಸಮಯದಲ್ಲಿ ಸರಕಾರದ ಪ್ರತಿನಿಧಿಯಾದ ತುಷಾರ್ ಮೆಹ್ತಾರವರು ಸುಪ್ರೀಂನ ಈ ಆದೇಶವನ್ನು ಕೆಲವರು ಸರಕಾರದ ಮತ್ತು ಸರಕಾರದ ಪಕ್ಷಕ್ಕೆ ದೇಣಿಗೆ ಕೊಟ್ಟ ಕಂಪೆನಿಗಳ ತೇಜೋವಧೆ ಮಾಡಲು ಬಳಸಿಕೊಳ್ಳುತ್ತಿದ್ದಾರೆಂದೂ ಮತ್ತು ಅದನ್ನು ತಡೆಗಟ್ಟಬೇಕೆಂದೂ ಅಹವಾಲು ಮಾಡಿದರು. ಮತ್ತೊಂದು ಕಡೆ ಎಸ್‌ಬಿಐ ಪರ ವಕೀಲ ಹರೀಶ್ ಸಾಳ್ವೆ ಈ ಆದೇಶವು ಕಂಪೆನಿಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ಸರಣಿಯು ಪ್ರಾರಂಭವಾಗದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
ಒಟ್ಟಿನಲ್ಲಿ ಅರೆ ಮನಸ್ಸಿನಿಂದ ಸುಪ್ರೀಂ ಆದೇಶವನ್ನು ಪಾಲಿಸಬೇಕಾಗಿ ಬಂದ ಸರಕಾರವು ಸಾಧ್ಯವಾದಷ್ಟು ಅದಕ್ಕೆ ಅಡೆತಡೆಯನ್ನೊಡ್ಡುತ್ತಲೇ ಬಂದಿದೆ. ದೇಶದ ಸಂವಿಧಾನ, ಚುನಾವಣೆಯ ಪಾವಿತ್ರ್ಯತೆಗಳಿಗಿಂತ ಸರಕಾರಕ್ಕೆ ಕಾರ್ಪೊರೇಟ್ ಕಂಪೆನಿಗಳ ಲಾಭ ಮತ್ತದರ ಗೋಪ್ಯತೆಯೇ ಪ್ರಧಾನವಾಗಿರುವುದು ಸ್ಪಷ್ಟ.
ಇದಕ್ಕೆ ಕಾರಣವಿದೆ. ಈವರೆಗೆ ಬಯಲಾಗಿರುವ ಮಾಹಿತಿಗಳನ್ನೇ ಆಧಾರವಾಗಿಟ್ಟುಕೊಂಡು ರಿಪೋರ್ಟರ್ಸ್ ಕಲೆಕ್ಟಿವ್, ನ್ಯೂಸ್ ಮಿನಿಟ್, ನ್ಯೂಸ್ ಲಾಂಡ್ರಿ, ಸ್ಕ್ರೋಲ್, ದಿ ಕ್ವಿಂಟ್‌ನಂಥ ಪರ್ಯಾಯ ಮಾಧ್ಯಮಗಳು ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್, ದಿ ಹಿಂದೂ ಇನ್ನಿತರ ಪ್ರಧಾನಧಾರೆ ಮಾಧ್ಯಮಗಳು ಹೇಗೆ ನಿರ್ದಿಷ್ಟ ಕಂಪೆನಿಗಳು ಎಲೆಕ್ಟೊರಲ್ ಬಾಂಡನ್ನು ನೀಡಿದ ಮೇಲೆ ಲಾಭದಾಯಕ ಯೋಜನೆಗಳನ್ನು ಅಕ್ರಮವಾಗಿ ಪಡೆದುಕೊಂಡಿವೆ ಎಂದು ಅಧ್ಯಯನಪೂರ್ವಕವಾಗಿ ಬಯಲುಗೊಳಿಸಲು ಪ್ರಾರಂಭಿಸಿವೆ. ಇದರ ಪ್ರಧಾನ ಫಲಾನುಭವಿ ಆಡಳಿತ ರೂಢ ಬಿಜೆಪಿ ಪಕ್ಷ. ಉಳಿದ ಪಕ್ಷಗಳದ್ದು ನರಿಪಾಲು. ಮಾರ್ಚ್ 21ಕ್ಕೆ ಅಲ್ಫಾ ನ್ಯುಮರಿಕಲ್ ನಂಬರ್ ಬಯಲಾದ ಮೇಲೆ ಇದರ ಬಗ್ಗೆ ಇನ್ನಷ್ಟು ನಿಖರತೆ ಲಭ್ಯವಾಗುತ್ತದೆ.
ಆದರೂ ಈವರೆಗೆ ಲಭ್ಯವಾಗಿರುವ ಮಾಹಿತಿಗಳೇ ಮೋದಿ ಸರಕಾರದ ಸ್ವಾತಂತ್ರ್ಯಾನಂತರದಲ್ಲೇ ಯಾವ ಸರಕಾರಗಳೂ ಮಾಡಿರದಷ್ಟು ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮಾಡಿರುವುದು, ಮಾಡುತ್ತಿರುವುದು ಸ್ಪಷ್ಟಗೊಳಿಸುತ್ತದೆ. ಅದರ ಕೆಲವೇ ಕೆಲವು ಝಲಕ್‌ಗಳು ಕೆಳಗಿವೆ.
ಮೋದಿ ಬಾಂಡ್‌ನ ಹಗಲು ದರೋಡೆ
ಕಳೆದ ಐದು ವರ್ಷಗಳಲ್ಲಿ ಸುಮಾರು 1,200 ಕಂಪೆನಿಗಳು ಮತ್ತು ವ್ಯಕ್ತಿಗಳು 16,000 ಕೋಟಿ ರೂ. ಎಲೆಕ್ಟೊರಲ್ ಬಾಂಡ್ ಖರೀದಿ ಮಾಡಿವೆ. ಖರೀದಿಯಾದ ಬಾಂಡ್‌ಗಳಲ್ಲಿ ಒಂದು ಕೋಟಿ ರೂ. ಮೌಲ್ಯದ ಬಾಂಡಿನ ಪ್ರಮಾಣ ಶೇ. 96. ಬಾಂಡ್ ಖರೀದಿ ಮಾಡಿದ ಕಂಪೆನಿಗಳಲ್ಲಿ ಮೂಲಭೂತ ಸೌಕರ್ಯ, ಗಣಿಗಾರಿಕೆ, ಔಷಧ ಕಂಪೆನಿಗಳೇ ಹೆಚ್ಚು. ಈ ಕಂಪೆನಿಗಳು ಕೇಂದ್ರ ಸರಕಾರದ ಕೃಪಾಕಟಾಕ್ಷವಿಲ್ಲದೆ ಅಕ್ರಮ ಲಾಭವನ್ನು ಮಾಡಲಾಗುವುದಿಲ್ಲ. ಸುಮಾರು 40ಕ್ಕೂ ಹೆಚ್ಚು ಕಂಪೆನಿಗಳು ತಮ್ಮ ಆದಾಯದ 10-40 ಪಟ್ಟು ಹೆಚ್ಚು ದೇಣಿಗೆಯನ್ನು ನೀಡಿವೆ. ಸುಮಾರು 25ಕ್ಕೂ ಹೆಚ್ಚು ಕಂಪೆನಿಗಳು ತಮ್ಮ ಮೇಲೆ ಐಟಿ ಅಥವಾ ಈ.ಡಿ. ರೇಡ್ ಆದ ಒಂದೆರಡು ತಿಂಗಳಿನಲ್ಲಿ ಎಲೆಕ್ಟೊರಲ್ ಬಾಂಡ್ ಖರೀದಿ ಮಾಡಿವೆ. ಐಟಿ ಮತ್ತು ಈ.ಡಿ. ಕೇಂದ್ರ ಸರಕಾರದ ಸುಪರ್ದಿನಲ್ಲಿರುವ ಸಂಸ್ಥೆಗಳು. ಉತ್ತರಾ ಖಂಡದಲ್ಲಿ ಕುಸಿತವಾದ ಸುರಂಗ ನಿರ್ಮಾಣ ಕಾಂಟ್ರಕ್ಟ್ ಪಡೆದಿರುವ ನವಯುಗ್ ಸಂಸ್ಥೆ ದುರಂತದ ಪೂರ್ವ ಮತ್ತು ಆ ನಂತರ ಎಲೆಕ್ಟೊರಲ್ ಬಾಂಡ್ ಖರೀದಿ ಮಾಡಿವೆ. ಕೋವಿಡ್ ಕಾಲಘಟ್ಟದಲ್ಲಿ ಅತಿ ಹೆಚ್ಚು ಶುಲ್ಕ ವಸೂಲಿ ಅಪರಾಧ ಮಾಡಿದ್ದ, ಅಸಮರ್ಪಕ ಕೋವಿಡ್ ಕಿಟ್ ಸರಬರಾಜು ಮಾಡಿದ್ದ, ಅತಿ ಹೆಚ್ಚು ದರಗಳಿಗೆ ವ್ಯಾಕ್ಸಿನ್ ಸರಬರಾಜು ಮಾಡಿ ಕೋವಿಡ್ ಕಾಲದಲ್ಲೂ ಸಾವಿರಾರು ಕೋಟಿ ರೂ. ಲಾಭ ಮಾಡಿದ್ದ ಯಶೋದಾ ಹಾಸ್ಪಿಟಲ್ಸ್, ಹೆಟಿರೋ ಮೆಡಿಕಲ್ಸ್, ಟೊರೆನ್ಟ್ ಮೆಡಿಕಲ್ಸ್, ಸೀರಮ್ ಇನ್‌ಸ್ಟಿಟ್ಯೂಟ್ ಆಫ್‌ಇಂಡಿಯಾಗಳು ಕೋವಿಡ್ ಕಾಲದಲ್ಲಿ ನೂರಾರು ಕೋಟಿ ರೂ. ಎಲೆಕ್ಟೊರಲ್ ಬಾಂಡ್ ಖರೀದಿ ಮಾಡಿವೆ. ಕೋವಿಡ್ ಕಾಲದ ನಿಯಂತ್ರಣಗಳೆಲ್ಲಾ ಕೇಂದದ ಮೋದಿ ಸರಕಾರದ ಸುಪರ್ದಿಯಲ್ಲಿದ್ದವು.
ಎರಡನೇ ಅತಿ ದೊಡ್ಡ ದೇಣಿಗೆದಾರ ಮೇಘ ಇಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಯಂತೂ 1,200 ಕೋಟಿ ರೂ. ದೇಣಿಗೆ ನೀಡಿದೆ ಹಾಗೂ ಕೇಂದ್ರ ಸರಕಾರದ ಉಸ್ತುವಾರಿಯಲ್ಲಿರುವ 1.08 ಲಕ್ಷ ಕೋಟಿ ರೂ.ಗೂ ಹೆಚ್ಚು ಕಾಂಟ್ರಾಕ್ಟ್ ಪಡೆದುಕೊಂಡಿವೆ. ಅದರಲ್ಲಿ ಸರಕಾರದ ಸಿಎಜಿ ಸಂಸ್ಥೆ ಅಪಾಯಕಾರಿ ಎಂದು ಹೇಳಿರುವ 38,000 ಸಾವಿರ ಕೋಟಿ ರೂ. ಮೊತ್ತದ ತೆಲಂಗಾಣದ ಕಾಲೇಶ್ವರ ನೀರಾವರಿ ಯೋಜನೆಯೂ ಒಂದು. ಆದಿತ್ಯಬಿರ್ಲಾ, ಬಲ್ಡೊಟಾ ಮಾಲಕತ್ವದ ಗಣಿ ಕಂಪೆನಿಗಳು ಹಲವು ನೂರುಕೋಟಿ ಎಲೆಕ್ಟೊರಲ್ ಬಾಂಡ್ ಖರೀದಿ ಮಾಡಿದ ಕೆಲವು ವಾರ ಗಳಲ್ಲೇ ಪರಿಸರ ನಿಯಮಗಳನ್ನೇ ಬದಲಾಯಿಸಿ ಯೋಜನೆಗೆ ಕೇಂದ್ರವು ಅನುಮತಿ ನೀಡಿದೆ. ಇದಲ್ಲದೆ ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೂ ಈ ಸಂಸ್ಥೆಯ ಫಲಾನುಭವಿಯಾಗಿರುವ ಸೂಚನೆಗಳಿವೆ.
ಈವರೆಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅತಿ ಹೆಚ್ಚು ಎಲೆಕ್ಟೊರಲ್ ಬಾಂಡ್- 1,238 ಕೋಟಿ ರೂ. ಖರೀದಿ ಮಾಡಿರುವುದು ಲಾಟರಿ ಕಿಂಗ್ ಸ್ಯಾನ್ಟಿಯಾಗೋ ಮಾರ್ಟಿನ್ ಮಾಲಕತ್ವದ ಫ್ಯೂಚರ್ ಗೇಮಿಂಗ್ ಕಂಪೆನಿ. 1988ರಲ್ಲಿ ಈತ ಬರ್ಮಾದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕೊಯಮತ್ತ್ತೂರು ನಿವಾಸಿ. ಆದರೆ ಡಿಎಂಕೆ, ಸಿಪಿಎಂ, ಕಾಂಗ್ರೆಸ್ ಮತ್ತು ಅಂತಿಮವಾಗಿ ಬಿಜೆಪಿಯ ಸಖ್ಯವನ್ನು ಪಡೆದುಕೊಂಡು ಬಹಳ ಬೇಗನೆ ಭಾರತದ ಲಾಟರಿ ಕಿಂಗ್ ಆಗಿ ಬೆಳೆದ. ಈತ ಸಿಕ್ಕಿಂ ಸರಕಾರ ಒಂದಕ್ಕೆ ಹಾಕಿರುವ ಟೋಪಿಯ ಮೊತ್ತ ರೂ. 4,000 ಕೋಟಿ. ಈತನ ಹೆಂಡತಿ ಮತ್ತು ಮಗ ಈಗ ಬಿಜೆಪಿಯ ನಾಯಕರು.
ಇವು ಕೇವಲ ಕೆಲವು ಉದಾಹರಣೆಗಳು ಮಾತ್ರ. ಈ ಎಲೆಕ್ಟೊರಲ್ ಬಾಂಡ್ ಹಗರಣ ಭಾರತದ ಅತಿದೊಡ್ಡ ಭ್ರಷ್ಟಾಚಾರದ ಹಗರಣವಾಗಿದೆ. ಹಲವು ಸಾವಿರ ಕೋಟಿ ರೂ. ಪಕ್ಷ ದೇಣಿಗೆ ಪಡೆದುಕೊಂಡು ಪ್ರಧಾನವಾಗಿ ಮೋದಿ ಸರಕಾರ ಲಕ್ಷಾಂತರ ಕೋಟಿ ರೂ. ಸ್ವತ್ತನ್ನು, ಕಾಂಟ್ರಾಕ್ಟನ್ನು ದೇಣಿಗೆ ನೀಡಿದವರಿಗೆ ನೀಡಿದೆ. ಐಟಿ-ಈ.ಡಿ.ಗಳನ್ನು ಗೂಂಡಾಗಳಂತೆ ಬಳಸಿಕೊಂಡು ಬಾಂಡ್ ದರೋಡೆ ಮಾಡಿದೆ.
ಮತ್ತೊಂದು ಕಡೆ ಸಣ್ಣ ಪ್ರಮಾಣದಲ್ಲಿ ಇತರ ವಿರೋಧ ಪಕ್ಷಗಳೂ ಇದನ್ನೇ ತಮ್ಮ ರಾಜ್ಯಗಳಲ್ಲಿ ಮಾಡಿವೆ. ಭಾರತದ ಡೆಮಾಕ್ರಸಿಯನ್ನು ಹೀಗೆ ಕಾರ್ಪೊರೇಟೋಕ್ರಸಿ ಮಾಡಿರುವುದು, ಅದರ ಪ್ರಧಾನ ಪಾಲು ಮೋದಿ ಸರಕಾರದ್ದು ಮತ್ತು ಬಿಜೆಪಿ ಪಕ್ಷದ್ದು. ಈ ಕಾರಣಕ್ಕೆ ಭಾರತದ ಪ್ರಜಾತಂತ್ರದ ಪ್ರಧಾನ ಶತ್ರು ಬಿಜೆಪಿಯೇ. ಆದರೆ ಉಳಿದ ಪಕ್ಷಗಳದ್ದು ಇದರಲ್ಲಿ ನರಿಪಾಲಿದೆ.
ಎಲೆಕ್ಟೊರಲ್ ಬಾಂಡ್ ರದ್ದಾದ ಮಾತ್ರಕ್ಕೆ ಪ್ರಜಾತಂತ್ರದ ಮೇಲೆ ಕಾರ್ಪೊರೇಟ್‌ಗಳ ನಿಯಂತ್ರಣ ತಪ್ಪುವುದಿಲ್ಲ. ಏಕೆಂದರೆ Center For Media Studies ಎಂಬ ಸಂಸ್ಥೆ ಮಾಡಿರುವ ಅಧ್ಯಯನದ ಪ್ರಕಾರ 2019ರಲ್ಲಿ ಬಿಜೆಪಿ ಚುನಾವಣೆಗೆ ಮಾಡಿರುವ ವೆಚ್ಚ 27,000 ಕೋಟಿ ರೂ. ಅದರಲ್ಲಿ ಎಲೆಕ್ಟೊರಲ್ ಬಾಂಡಿನ ಪಾಲು ಹೆಚ್ಚೆಂದರೆ 4,000 ಕೋಟಿ ರೂ. ಅಂದರೆ ಬಿಜೆಪಿಯ ಚುನಾವಣಾ ವೆಚ್ಚದ ಶೇ. 15ರಷ್ಟು ಮಾತ್ರ.
ಆದ್ದರಿಂದ ಪರ್ಯಾಯವಾದಿಗಳು ತಮ್ಮ ವಿರೋಧವನ್ನು ಭ್ರಷ್ಟಾಚಾರದ ಪ್ರಮಾಣಕ್ಕೆ ಮತ್ತು ಎಲೆಕ್ಟೊರಲ್ ಬಾಂಡ್‌ಗೆ ಮಾತ್ರ ಸೀಮಿತ ಮಾಡಿದರೆ ಪ್ರಜಾತಂತ್ರವನ್ನು ರಕ್ಷಿಸಲಾಗದು. ಅಲ್ಲವೇ?