‘ಒಂದು ದೇಶ-ಒಂದು ಚುನಾವಣೆ’: ಗಣತಂತ್ರದ ವಿರುದ್ಧ ಮೋದಿ ಕುತಂತ್ರ!
ಏಕಕಾಲಕ್ಕೆ ಚುನಾವಣೆ ನಡೆಯುವುದು ತಪ್ಪಿ, ಭಿನ್ನ ಭಿನ್ನ ವೇಳಾಪಟ್ಟಿಗಳಲ್ಲಿ ಚುನಾವಣೆ ನಡೆಯುವಂತಾದದ್ದು ಪ್ರಜಾತಂತ್ರದ ಪ್ರಬುದ್ಧತೆಯ ಸಂಕೇತವೇ ವಿನಾ ಅದು ಪ್ರಜಾತಂತ್ರದ ಲೋಪವಲ್ಲ.
ಆದರೆ ಸ್ಥಿರ ಸರಕಾರದ ಹೆಸರಿನಲ್ಲಿ ಜನರಿಗೆ ಉತ್ತರದಾಯಿಯಲ್ಲದ ಫ್ಯಾಶಿಸ್ಟ್ ಸರಕಾರದ ಸ್ಥಾಪನೆಯೇ ನಿಜವಾದ ಪ್ರಜಾತಂತ್ರವೇನೋ ಎಂಬ ಹುಸಿ ಕಲ್ಪನೆಯನ್ನು ಈ ‘ಒಂದು ದೇಶ-ಒಂದು ಚುನಾವಣೆ’ ಎಂಬ ಹೆಸರಿನಲ್ಲಿ ಚಲಾವಣೆಗೆ ಬಿಡಲಾಗಿದೆ.
ಹೀಗಾಗಿ ‘ಒಂದು ದೇಶ-ಒಂದು ಚುನಾವಣೆ’ ಎಂಬುದು ಸ್ಥಿರ ಸರಕಾರವೆಂಬ ಹುಸಿತನದಲ್ಲಿ ಫ್ಯಾಶಿಸ್ಟ್ ಸರಕಾರವನ್ನು ಸಂವಿಧಾನಬದ್ಧವಾಗಿ ಜಾರಿಗೆ ತರುವ ಹುನ್ನಾರವಾಗಿದೆ.
ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಮೋದಿಯವರ ಆದೇಶದಂತೆ ದೇಶಾದ್ಯಂತ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಜಾತಂತ್ರ ವಿರೋಧಿ ‘ಒಂದು ದೇಶ-ಒಂದು ಚುನಾವಣೆ’ ಯೋಜನೆಗೆ ಪೂರಕವಾದ ವರದಿಯನ್ನು ಕೊಟ್ಟಿದೆ. ಅಸಲು ಈ ಸಮಿತಿಯೇ ಒಂದು ಕಣ್ಣೊರೆಸುವ ಕ್ರಮವಾಗಿತ್ತು. ಏಕೆಂದರೆ ಸಮಿತಿಯ ಮುಂದೆ ಇದ್ದ ಪ್ರಶ್ನೆ ‘ಒಂದು ದೇಶ-ಒಂದು ಚುನಾವಣೆ’ಯ ಸಾಧಕ ಬಾಧಕಗಳನ್ನು ಅಧ್ಯಯನ ಮಾಡುವುದಾಗಿರಲಿಲ್ಲ. ಏಕೆಂದರೆ ಸಮಿತಿಯ ಮುಂದೆ ಸರಕಾರವಿಟ್ಟ ಸೂಚನೆಯೇ ‘ಒಂದು ದೇಶ-ಒಂದು ಚುನಾವಣೆ’ಯನ್ನು ಹೇಗೆ ಜಾರಿಗೊಳಿಸುವುದು ಎಂಬುದಾಗಿತ್ತು. ಹೀಗಾಗಿ ಈ ಸಮಿತಿ ಸರಕಾರದ ಈ ಆದೇಶಕ್ಕೆ ಪ್ರಜಾತಾಂತ್ರಿಕ ಸಮಾಲೋಚನೆಯ ಮೆರುಗು ತರುವ ನಾಟಕವನ್ನಷ್ಟೇ ಆಡಬೇಕಿತ್ತು. ಆದರೆ ಕೋವಿಂದ್ ಸಮಿತಿ ಆ ನಾಟಕವನ್ನೂ ಸರಿಯಾಗಿ ಆಡಿಲ್ಲ ಎಂಬುದು ವರದಿಯನ್ನು ನೋಡಿದರೆ ಅರ್ಥವಾಗುತ್ತದೆ.
ಕಳೆದ ಮಾರ್ಚ್‌ನಲ್ಲಿ ಕೋವಿಂದ್ ಸಮಿತಿ ಕೊಟ್ಟ ವರದಿಯನ್ನು ಇದೇ ಸೆಪ್ಟಂಬರ್ 18ರಂದು ಮೋದಿ ಸರಕಾರದ ಕ್ಯಾಬಿನೆಟ್ ಸಂಪೂರ್ಣವಾಗಿ ಒಪ್ಪಿಕೊಂಡಿರುವುದಾಗಿ ಘೋಷಿಸಿದೆ.
ಕೋವಿಂದ್ ಸಮಿತಿಯ ವರದಿಯನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಓದಬಹುದು
https://onoe.gov.in/HLC-Report-en
281 ಪುಟಗಳ ಸಾರ ಮತ್ತು 16,000 ಪುಟಗಳ ಅಡಕಗಳನ್ನು ಹೊಂದಿರುವ ಈ ವರದಿಯು ಒಂದು ಸುದೀರ್ಘ ಸರಕಾರಿ ಆದೇಶದಂತಿದೆ ಮತ್ತು ಈ ಯೋಜನೆಯನ್ನು ವಿರೋಧಿಸಿದ ದೇಶದ 16 ಪ್ರಮುಖ ವಿರೋಧ ಪಕ್ಷಗಳು ಮತ್ತು ಆಸಕ್ತರು ಎತ್ತಿದ ಯಾವುದೇ ಗಂಭೀರ ಪ್ರಶ್ನೆಗಳಿಗೆ ಉತ್ತರ ಕೊಡುವ ಗೋಜಿಗೂ ಹೋಗಿಲ್ಲ.
ವರದಿಯ ಮುಖ್ಯಾಂಶಗಳು
-‘ಒಂದು ದೇಶ-ಒಂದು ಚುನಾವಣೆ’ಯಿಂದಾಗಿ ಚುನಾವಣಾ ವೆಚ್ಚ ಕಡಿಮೆಯಾಗುತ್ತದೆ.
-ವರ್ಷದಲ್ಲಿ 300 ದಿನಗಳು ಚುನಾವಣೆ ನಡೆಯುತ್ತಿರುತ್ತದೆ (ಇದು ಶುದ್ಧ ಸುಳ್ಳು). ಆದ್ದರಿಂದ ಆಡಳಿತ ಮತ್ತು ವಿಕಾಸವಾಗುತ್ತಿಲ್ಲ. ಏಕಕಾಲಕ್ಕೆ ಚುನಾವಣೆ ನಡೆದರೆ ಆಡಳಿತ ಸುಗಮವಾಗಿ ಸಾಗುತ್ತದೆ.
-ಈ ಯೋಜನೆಯನ್ನು ಜಾರಿಗೆ ತರಲು 18 ಸಾಂವಿಧಾನಿಕ ತಿದ್ದುಪಡಿಗಳನ್ನು ತರಬೇಕು.
-ಇದನ್ನು ಎರಡು ಹಂತದಲ್ಲಿ ಜಾರಿ ಮಾಡಬೇಕು. ಮೊದಲ ಹಂತದಲ್ಲಿ ಲೋಕಸಭೆಗೆ ಮತ್ತು ರಾಜ್ಯ ಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ. ಇದಾದ 100 ದಿನಗಳ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ. ಎಲ್ಲಾ ಚುನಾವಣೆಗಳಿಗೂ ಏಕೀಕೃತ ಮತದಾರರ ಪಟ್ಟಿ.
-ಲೋಕಸಭಾ ಚುನಾವಣೆಯಾದ ನಂತರ ನಡೆಯುವ ಮೊದಲ ಅಧಿವೇಶನದ ದಿನವನ್ನು ರಾಷ್ಟ್ರಪತಿಗಳು ಐದು ವರ್ಷದ ಅವಧಿಯ ಆರಂಭದ ದಿನವನ್ನಾಗಿ ಘೋಷಿಸುವರು. ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಯ ಐದು ವರ್ಷಗಳ ಅವಧಿಯು ಆ ದಿನಾಂಕದಿಂದ ಪ್ರಾರಂಭವಾಗುತ್ತದೆ.
-ಒಂದು ವೇಳೆ ಅವಿಶ್ವಾಸ ಮತ ಇತ್ಯಾದಿಗಳಿಂದಾಗಿ ಸರಕಾರ ಕುಸಿದುಬಿದ್ದು ಮಧ್ಯಂತರ ಚುನಾವಣೆ ನಡೆದರೆ ಹೊಸ ಚುನಾವಣೆ ನಡೆಸಬಹುದು. ಆದರೆ ಆ ಶಾಸನ ಸಭೆ ಅಥವಾ ಲೋಕಸಭೆ ಮತ್ತು ಸರಕಾರದ ಅವಧಿ ಮೊದಲ ಐದು ವರ್ಷಗಳಲ್ಲಿ ಉಳಿಕೆಯ ಅವಧಿಗೆ ಮಾತ್ರವಾಗಿರುತ್ತದೆ.
ಇತ್ಯಾದಿ ಪ್ರಮುಖ ಶಿಫಾರಸುಗಳನ್ನು ಸಮಿತಿಯು ನೀಡಿದೆ.
ಈ ಶಿಫಾರಸುಗಳ ಮತ್ತು ಮೋದಿ ಸರಕಾರದ ಯೋಜನೆಯ ಮತಿಹೀನ ತರ್ಕಗಳನ್ನು ಹಾಗೂ ದುರುದ್ದೇಶಗಳನ್ನು ಅರ್ಥಮಾಡಿಕೊಳ್ಳುವ ಮುನ್ನ ಈ ಯೋಜನೆಯನ್ನು ಈ ಸರಕಾರ ನಿಜಕ್ಕೂ ಜಾರಿ ಮಾಡಲು ಬೇಕಾದ ಸಂಸದೀಯ ಸಾಮರ್ಥ್ಯವನ್ನು ಹೊಂದಿದೆಯೇ ಎಂಬುದನ್ನು ಗಮನಿಸೋಣ.
ಸಾಂವಿಧಾನಿಕ ತಿದ್ದುಪಡಿಗೆ ಬೇಕಾದ
ಬಹುಮತ ಮೋದಿ ಸರಕಾರಕ್ಕಿಲ್ಲ
ಕೋವಿಂದ್ ಸಮಿತಿಯೇ ಹೇಳಿರುವಂತೆ ‘ಒಂದು ದೇಶ-ಒಂದು ಚುನಾವಣೆ’ ಯೋಜನೆ ಜಾರಿಗೆ ಬರಲು ಕನಿಷ್ಠ 18 ಸಾಂವಿಧಾನಿಕ ತಿದ್ದುಪಡಿ ಗಳಾಗಬೇಕು. ಯಾವುದೇ ಸಾಂವಿಧಾನಿಕ ತಿದ್ದುಪಡಿಗಳಿಗೆ ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ 2/3ರಷ್ಟು ಬಹುಮತ ಸಿಗಬೇಕು. ಹಾಗೆಯೇ ರಾಜ್ಯಗಳ ಪಟ್ಟಿಯಲ್ಲಿರುವ ವಿಷಯಗಳಿಗೂ ಸಾಂವಿಧಾನಿಕ ತಿದ್ದುಪಡಿಯನ್ನು ತರುವಾಗ ಕನಿಷ್ಠ 16 ಶಾಸನ ಸಭೆಗಳು ಈ ತಿದ್ದುಪಡಿಗಳನ್ನು ಅನುಮೋದಿಸಬೇಕು. (ಇತ್ತೀಚೆಗೆ ಜಿಎಸ್‌ಟಿ ಮಸೂದೆ ಈ ರೀತಿಯಲ್ಲೇ ಜಾರಿಗೆ ಬಂದದ್ದು.)
ಒಂದು ಚುನಾವಣೆ ಪ್ರಸ್ತಾವವು ಸೂಚಿಸಿರುವಂತೆ ಲೋಕಸಭೆ ಮತ್ತು ವಿಧಾನ ಸಭೆಗಳಿಗೆ ಚುನಾವಣೆಯಾದ ನಂತರದ ನೂರು ದಿನಗಳೊಳಗೆ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆಗಳಾಗಬೇಕು ಮತ್ತು ಮೂರೂ ಚುನಾವಣೆಗಳಿಗೂ ಒಂದೇ ಮತದಾರರ ಪಟ್ಟಿಯನ್ನು ತಯಾರಿಸಬೇಕು. ಆದರೆ ಸ್ಥಳೀಯ ಸಂಸ್ಥೆಗಳು ರಾಜ್ಯಗಳ ಪಟ್ಟಿಯಲ್ಲಿರುವ ರಾಜ್ಯಗಳ ಪರಮಾಧಿಕಾರದ ವಿಷಯ. ಹೀಗಾಗಿ ಈ ತಿದ್ದುಪಡಿಗೆ ಲೋಕಸಭೆ ಮತ್ತು ರಾಜ್ಯ ಸಭೆಗಳ 2/3ರಷ್ಟು ಬಹುಮತ ಮಾತ್ರವಲ್ಲದೆ 16 ರಾಜ್ಯಗಳ ಶಾಸನ ಸಭೆಗಳ ಅನುಮೋದನೆಯೂ ಬೇಕು.
ಈಗ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಲೋಕಸಭೆಯ 543 ಸದಸ್ಯರಲ್ಲಿ 293 ಸದಸ್ಯರ ಬೆಂಬಲವನ್ನು ಹೊಂದಿದೆ. ಆದರೆ ಲೋಕಸಭೆಯಲ್ಲಿ 2/3 ಬಹುಮತಕ್ಕೆ 363 ಸದಸ್ಯರ ಅನುಮೋದನೆ ಬೇಕು. ಅಂದರೆ ಸುಮಾರು 70 ಸದಸ್ಯರ ಬೆಂಬಲದ ಕೊರತೆ ಕೇವಲ ಲೋಕಸಭೆಯಲ್ಲೇ ಈ ಮಸೂದೆಗೆ ಎದುರಾಗಲಿದೆ. ಹಾಗೆಯೇ ಇವತ್ತಿನ ಸಂದರ್ಭದಲ್ಲಿ ರಾಜ್ಯಸಭೆಯ 234 ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 119 ಸದಸ್ಯರನ್ನು ಹೊಂದಿದೆ. ಆದರೆ ಈಗಿರುವ ಸ್ಥಾನಬಲದಂತೆ ರಾಜ್ಯ ಸಭೆಯಲ್ಲಿ 2/3ರಷ್ಟು ಬಹುಮತ ಪಡೆಯಲು 156 ಸದಸ್ಯರ ಬೆಂಬಲ ಬೇಕು. ಎಂದರೆ ಒಂದಲ್ಲ, ಎರಡಲ್ಲ 27 ಸದಸ್ಯರ ಕೊರತೆ ರಾಜ್ಯ ಸಭೆಯಲ್ಲೂ ಇದೆ. ಇದಲ್ಲದೆ ಇವತ್ತಿನ ವೇಳೆಗೆ ಎನ್‌ಡಿಎ 19 ರಾಜ್ಯಗಳಲ್ಲಿ ಅಧಿಕಾರದಲ್ಲಿರುವುದು ನಿಜವಾದರೂ ಸಂಸತ್ತಿನಲ್ಲೇ ಈ ಮಸೂದೆಗೆ 2/3 ರಷ್ಟು ಬಹುಮತ ಸಿಗುವುದಿಲ್ಲ.
ಹೀಗಾಗಿಯೇ ಗೃಹಮಂತ್ರಿ ಅಮಿತ್ ಶಾ ಈ ಸಾಲಿನಲ್ಲೇ ‘ಒಂದು ದೇಶ-ಒಂದು ಚುನಾವಣೆ’ ಜಾರಿಗೆ ತರುವುದಾಗಿ ಕೊಚ್ಚಿಕೊಳ್ಳುತ್ತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಇತರ ಬಿಜೆಪಿ ನಾಯಕರು ಇದರ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗುವುದು ಎಂದೇ ಹೇಳುತ್ತಿದ್ದಾರೆ. ಅಲ್ಲದೆ ಕೋವಿಂದ್ ವರದಿಯ ಪ್ರಕಾರ ಐದು ವರ್ಷಗಳ ಅವಧಿ ಲೋಕಸಭೆಯ ಮೊದಲನೇ ಅಧಿವೇಶನದ ದಿನದಿಂದ ಪ್ರಾರಂಭವಾಗಬೇಕು. ಆದರೆ 18ನೇ ಲೋಕಸಭೆ ಎರಡು ಅಧಿವೇಶನಗಳನ್ನು ಮುಗಿಸಿದೆ. ಹೀಗಾಗಿ ಹೊಸ ಲೋಕಸಭೆಯ ಮೊದಲ ಅಧಿವೇಶನಕ್ಕೆ 2029ರ ತನಕ ಕಾಯಬೇಕು ಅಥವಾ ಮೋದಿ ಸರಕಾರ ಗುಪ್ತವಾದ ಮಧ್ಯಂತರ ಚುನಾವಣೆ ಯೋಜನೆಯನ್ನಾದರೂ ಹೊಂದಿರಬೇಕು.
ಹೀಗಾಗಿ ‘ಒಂದು ದೇಶ-ಒಂದು ಚುನಾವಣೆ’ ಯೋಜನೆ ಸದ್ಯಕ್ಕೆ ಜಾರಿಯಾಗುವ ಸಾಂವಿಧಾನಿಕ ಸಾಧ್ಯತೆಯೇ ಇಲ್ಲ. ಹಾಗಿದ್ದರೂ ಮೋದಿ ಸರಕಾರ ಅದರ ಬಗ್ಗೆ ತುರ್ತಾಗಿ ಕೊಚ್ಚಿಕೊಳ್ಳುತ್ತಿರುವುದಕ್ಕೆ ಪ್ರಧಾನ ಕಾರಣ ಹರ್ಯಾಣ, ಕಾಶ್ಮೀರ, ಮಹಾರಾಷ್ಟ್ರ ಚುನಾವಣೆಗಳ ಮೇಲೆ ಪ್ರಭಾವ ಬೀರುವುದೇ ಹೊರತು ಬೇರೇನಿಲ್ಲ.
ಉಳಿದಂತೆ ಕೋವಿಂದ್ ಸಮಿತಿ ಮತ್ತು ಮೋದಿ ಸರಕಾರ ‘ಒಂದೇ ಚುನಾವಣೆ’ಗೆ ಮುಂದಿಟ್ಟಿರುವ ಕೆಲವು ಹಾಸ್ಯಾಸ್ಪದ ತರ್ಕಗಳನ್ನು ಗಮನಿಸಿ.
ವರ್ಷದ 300 ದಿನಗಳೂ ಚುನಾವಣೆಗಳಿರುತ್ತವೆಯೇ?
‘ಒಂದೇ ಚುನಾವಣೆ’ಗೆ ಹಲವಾರು ಕುತರ್ಕಗಳನ್ನು ಮುಂದಿಡುತ್ತಿರುವ ಮೋದಿ ಸರಕಾರ ಮತ್ತು ಕೋವಿಂದ್ ಸಮಿತಿ ವರ್ಷಕ್ಕೆ 300 ದಿನಗಳು ಸರಕಾರ ಚುನಾವಣೆಯಲ್ಲೇ ಕಳೆಯುವುದರಿಂದ ಆಡಳಿತಕ್ಕೆ ಧಕ್ಕೆಯಾಗುತ್ತದೆ ಎಂಬ ಸುಳ್ಳನ್ನು ದೊಡ್ಡ ಕಾರಣವನ್ನಾಗಿ ಮುಂದಿಟ್ಟಿದೆ.
ಆದರೆ ಯಾವುದೇ ರಾಜ್ಯದಲ್ಲಿ ಐದು ವರ್ಷಗಳ ಅವಧಿಯಲ್ಲಿ ಸ್ಥಳೀಯ ಚುನಾವಣೆಗಳನ್ನು ಬಿಟ್ಟರೆ ಲೋಕಸಭೆ ಮತ್ತು ರಾಜ್ಯ ಶಾಸನಸಭೆಗಳಿಗೆ ಮಾತ್ರ ಚುನಾವಣೆ ನಡೆಯುತ್ತದೆ ಮತ್ತು ಹೆಚ್ಚೆಂದರೆ ತಲಾ ಮೂರು ತಿಂಗಳು ಚುನಾವಣಾ ಜ್ವರದಲ್ಲಿ ಆಡಳಿತ ಸ್ಥಗಿತವಾಗಬಹುದು. ಎಂದರೆ ಐದು ವರ್ಷಗಳಲ್ಲಿ 180 ದಿನಗಳೇ ವಿನಾ ಪ್ರತೀ ವರ್ಷ 300 ದಿನಗಳಲ್ಲ. ಇದನ್ನು ಬೇಕಿದ್ದಲ್ಲಿ ಚುನಾವಣಾ ಆಯೋಗ ಇನ್ನಷ್ಟು ಕಡಿಮೆ ಮಾಡಬಹುದು.
ಆದರೆ ಇತರ ರಾಜ್ಯಗಳಲ್ಲಿ ಚುನಾವಣೆ ನಡೆದರೆ ಅದು ಕೇಂದ್ರದ ಆಡಳಿತಕ್ಕೂ ಮತ್ತು ಚುನಾವಣೆ ಮುಗಿದ ರಾಜ್ಯಗಳ ಆಡಳಿತಕ್ಕೂ ಯಾವುದೇ ರೀತಿಯ ಧಕ್ಕೆ ಉಂಟು ಮಾಡುವುದಿಲ್ಲ.
ಉದಾಹರಣೆಗೆ ಈಗ ಹರ್ಯಣ ಮತ್ತು ಕಾಶ್ಮೀರದ ಚುನಾವಣೆ ನಡೆಯುತ್ತಿದೆ. ಆದರೆ ಕರ್ನಾಟಕದಲ್ಲಿ 2023ಕ್ಕೆ ಶಾಸನ ಸಭಾ ಚುನಾವಣೆ ಮತ್ತು 2024ರಲ್ಲಿ ಲೋಕಸಭಾ ಚುನಾವಣೆ ನಡೆದಾಗಿದೆ. ಈಗ ಹರ್ಯಾಣದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಕರ್ನಾಟಕದ ಆಡಳಿತಕ್ಕೇನೂ ಧಕ್ಕೆ ಇಲ್ಲ. ಹಾಗೆಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೇಗಿದ್ದರೂ ಪ್ರತ್ಯೇಕವಾಗಿಯೇ ನಡೆಯುವುದು. ಆದ್ದರಿಂದ 2028ರವರೆಗೆ ಕರ್ನಾಟಕದ ಆಡಳಿತಕ್ಕೂ ದೇಶದ ಇತರೆಡೆಗಳಲ್ಲಿ ನಡೆಯುವ ಚುನಾವಣೆಗಳಿಂದ ಯಾವ ಧಕ್ಕೆಯಿರಬಾರದು.
ಹಾಗೆಯೇ ಹರ್ಯಾಣ-ಕಾಶ್ಮೀರ ಚುನಾವಣೆಗಳು ನಡೆಯುತ್ತಿವೆ ಎಂದ ಮಾತ್ರಕ್ಕೆ ಕೇಂದ್ರದ ಆಡಳಿತಕ್ಕೆ ಏನೂ ಧಕ್ಕೆಯಾಗಿಲ್ಲ ಎಂಬುದಕ್ಕೆ ಕ್ಯಾಬಿನೆಟ್‌ನಲ್ಲಿ ‘ಒಂದು ದೇಶ-ಒಂದು ಚುನಾವಣೆ’ ತೀರ್ಮಾನ ತೆಗೆದುಕೊಂಡಿರುವುದು, 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಸೌಲಭ್ಯಒದಗಿಸುವ ತೀರ್ಮಾನ ತೆಗೆದುಕೊಂಡಿರುವುದೇ ಸಾಕ್ಷಿ.
ಹೀಗಾಗಿ ಇದು ಸುಳ್ಳು ವಾದ.
ವೆಚ್ಚಗಳು ಕಡಿಮೆಯಾಗುತ್ತವೆಯೇ?
ಮೋದಿ ಸರಕಾರ ಮತ್ತು ಕೋವಿಂದ್ ಸಮಿತಿ ಪ್ರಕಾರ 2014ರ ಚುನಾವಣೆ ನಡೆಸಲು ಭಾರತ ಸರಕಾರಕ್ಕೆ ಅಧಿಕೃತವಾಗಿ 3,870 ಕೋಟಿ ರೂ. ವೆಚ್ಚವಾಯಿತು. ಆಗಲೇ ಎಲ್ಲಾ ರಾಜ್ಯಗಳಲ್ಲೂ ಚುನಾವಣೆಗಳು ನಡೆದಿದ್ದರೆ ಹೆಚ್ಚುವರಿಯಾಗಿ 500 ಕೋಟಿ ರೂ. ಮಾತ್ರ ಖರ್ಚಾಗುತ್ತಿತ್ತು. ಆದರೆ ಪ್ರತ್ಯೇಕವಾಗಿ ಎಲ್ಲಾ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ 3ರಿಂದ 4,000 ಕೋಟಿ ರೂ. ವೆಚ್ಚ ಹೆಚ್ಚುವರಿಯಾಗಿದೆ.
ಆದರೆ ಇದೊಂದು ಹಸಿ ಸುಳ್ಳು. ಚುನಾವಣಾ ಆಯೋಗದ ಮತ್ತೊಂದು ಲೆಕ್ಕಾಚಾರದ ಪ್ರಕಾರವೇ ಏಕಕಾಲದಲ್ಲಿ ಚುನಾವಣೆ ನಡೆದರೆ 2019ರ ಲೆಕ್ಕಾಚಾರದಲ್ಲಿ 10 ಲಕ್ಷ ಬೂತುಗಳಲ್ಲಿ ಎರಡೆರಡು ಇವಿಎಂ ಯಂತ್ರಗಳಂತೆ 20 ಲಕ್ಷ ಯಂತ್ರಗಳು ಹಾಗೂ 3-4 ಲಕ್ಷ ವಿವಿಪ್ಯಾಟ್ ಯಂತ್ರಗಳಿಗಾಗಿ ಒಟ್ಟಾರೆಯಾಗಿ 10,000 ಕೋಟಿ ರೂ. ಬೇಕಾಗುತ್ತವೆ. ಈ ಎಲ್ಲಾ ಯಂತ್ರಗಳನ್ನು ಪ್ರತೀ 15 ವರ್ಷಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ!
ಎರಡನೆಯದಾಗಿ ಮಧ್ಯಂತರ ಚುನಾವಣೆಗಳ ಸಾಧ್ಯತೆಯನ್ನೇನೂ ಈ ಹೊಸ ವ್ಯವಸ್ಥೆ ತಡೆಗಟ್ಟುವುದಿಲ್ಲ. ತಡೆಗಟ್ಟಲು ಬಾರದು. ಆದರೆ ಈ ಕೋವಿಂದ್ ಸಮಿತಿ ಮಧ್ಯಂತರ ಚುನಾವಣೆಯ ಅವಧಿಯನ್ನು ಕಡಿತಗೊಳಿಸುತ್ತದೆ. ಆದರೆ ವೆಚ್ಚವನ್ನೇನೂ ಅಲ್ಲ. ಹೀಗಾಗಿ ಚುನಾವಣೆಗಳು ಕಡಿಮೆಯೂ ಅಗುವುದಿಲ್ಲ. ವೆಚ್ಚಗಳು ಕೂಡ ಕಡಿಮೆಯಾಗುವುದಿಲ್ಲ.
ಹೀಗೆ ಏಕಕಾಲಿಕ ಚುನಾವಣೆಗಳ ಬಗ್ಗೆ ಸರಕಾರ ಮುಂದಿಡುತ್ತಿರುವ ಎಲ್ಲಾ ವಾದಗಳೂ ಅಸಂಬದ್ಧವಾಗಿವೆ. ಅಸಂಗತವಾಗಿವೆ.
ಆದರೆ ಏಕಕಾಲಿಕ ಚುನಾವಣೆಗಳು ಸಾಂವಿಧಾನಿಕ ಪ್ರಜಾತಂತ್ರಕ್ಕೆ ಮತ್ತು ಭಾರತದ ಫೆಡರಲ್ ವ್ಯವಸ್ಥೆಗೆ ಮಾಡುವ ಅಪಾಯಗಳು ಮಾತ್ರ ಅಪಾರವಾಗಿದೆ.
ಫ್ಯಾಶಿಸ್ಟ್ ಪರಿಹಾರಗಳು
ಏಕಕಾಲಿಕ ಚುನಾವಣೆ ನಡೆದರೂ ಚುನಾಯಿತ ಪಕ್ಷ ಸದನದ ವಿಶ್ವಾಸ ಕಳೆದುಕೊಂಡಾಗ ಏಕಕಾಲಿಕ ವ್ಯವಸ್ಥೆ ಮುರಿಯುತ್ತದೆ. ಅದನ್ನು ತಡೆಯಲು ಚುನಾವಣಾ ಆಯೋಗ ಮತ್ತು ನೀತಿ ಆಯೋಗ ಹಾಗೂ ಬಿಜೆಪಿ ಮುಂದಿಡುತ್ತಿರುವ ಪರಿಹಾರ ಸಮಸ್ಯೆಗಿಂತ ಭೀಕರವಾಗಿದೆ.
ಅವಧಿ ಕಡಿತ-ಸರಕಾರದ ತಪ್ಪು-ಜನರಿಗೆ ಶಿಕ್ಷೆ
ಈಗಿರುವ ಪ್ರಜಾತಾಂತ್ರಿಕ ನಿಯಮಗಳಂತೆ ಐದು ವರ್ಷಗಳ ಕಾಲ ಆಡಳಿತ ನಡೆಸಲು ಚುನಾಯಿತವಾದ ಸರಕಾರವೊಂದು ಶಾಸನಸಭೆಯ ವಿಶ್ವಾಸವನ್ನು ಕಳೆದುಕೊಂಡರೆ ಅದು ಬಹುಮತವನ್ನು ಸಾಬೀತುಪಡಿಸಬೇಕು ಅಥವಾ ಅಧಿಕಾರ ಬಿಟ್ಟುಕೊಡಬೇಕು. ಬೇರೊಂದು ಪಕ್ಷದ ನಾಯಕರ ನೇತೃತ್ವದಲ್ಲಿ ಬಹುಮತವಿರುವ ಸರಕಾರ ಸ್ಥಾಪನೆಯಾಗಬೇಕು. ಅದಾಗದಿದ್ದಲ್ಲಿ ರಾಜ್ಯಪಾಲ/ರಾಷ್ಟ್ರಪತಿ ಆಡಳಿತ ಜಾರಿಯಾಗಿ ಆದಷ್ಟು ಬೇಗ ಮರುಚುನಾವಣೆ ನಡೆಯುತ್ತದೆ. ಅದರಲ್ಲಿ ಗೆದ್ದುಬಂದವರು ಮುಂದಿನ ಐದು ವರ್ಷಗಳ ಕಾಲ ಅಧಿಕಾರ ನಡೆಸುತ್ತಾರೆ.
ಆದರೆ ಕೋವಿಂದ್ ವರದಿಯ ಪ್ರಕಾರ ಸರಕಾರದ ಬಗ್ಗೆ ಅವಿಶ್ವಾಸ ಮೂಡಿ ಸರಕಾರದ ವಿಧಾನಮಂಡಲದ ಬೆಂಬಲ ಕಳೆದುಕೊಂಡಾಗ ಮಧ್ಯಂತರ ಚುನಾವಣೆ ನಡೆಯುತ್ತದೆ. ಆದರೆ ಅದು ಮೊದಲು ನಿಗದಿಯಾದ ಅವಧಿಯಲ್ಲಿ ಉಳಿಕೆ ಅವಧಿಗೆ ಮಾತ್ರ ಅಧಿಕಾರ ನಡೆಸುತ್ತದೆ. ಇದರಿಂದ ಜನರ ವೋಟಿನ ಮೌಲ್ಯವೇ ಹರಣವಾಗಲಿಲ್ಲವೇ? ಮತ್ತು ಅಲ್ಪಾವಧಿ ಮುಗಿದ ನಂತರ ಮತ್ತೆ ಇನ್ನೊಂದು ಚುನಾವಣೆ ನಡೆಸಬೇಕಿರುವುದರಿಂದ ವೆಚ್ಚವೂ ಹೆಚ್ಚಾಗುವುದಿಲ್ಲವೇ?
ಏಕಕಾಲಿಕ ಚುನಾವಣೆಯನ್ನು ಸಾಧ್ಯಗೊಳಿಸಲು ಈ ಬಗೆಯ ಅಪಾಯಕಾರಿ ತಾಂತ್ರಿಕ ಪರಿಹಾರಗಳನ್ನು ಒದಗಿಸುತ್ತಿರುವ ಕೋವಿಂದ್ ಸಮಿತಿ ಮತ್ತು ಮೋದಿ ಸರಕಾರ ಇದರಿಂದ ಜನರ ಸಾಂವಿಧಾನಿಕ ಹಕ್ಕುಗಳು ಹೇಗೆ ಬಲಿಯಾಗುತ್ತಿವೆ ಎಂಬುದನ್ನು ಮರೆಸುತ್ತಿದೆ.
ಬದುಕಿನ ಅಭಿಮತಕ್ಕಿಂತ ಭಾವೋದ್ವೇಗಕ್ಕೆ ಮತಾಧಿಕಾರ
ಹಾಗಿದ್ದರೂ ಮೋದಿ ಸರಕಾರವೇಕೆ ಒಂದೇ ಚುನಾವಣೆಯೆಂಬ ಮಾರಕ ಯೋಜನೆಯನ್ನು ಜಾರಿಗೊಳಿಸಲು ತುದಿಗಾಲಲ್ಲಿ ನಿಂತಿದೆ?
ಅಸಲು ಬಿಜೆಪಿ ಸರಕಾರಕ್ಕೆ ‘ಒಂದು ದೇಶ-ಒಂದು ಚುನಾವಣೆ’ಯ ವಿಷಯ ಏಕೆ ಮುಖ್ಯವಾಗಿದೆ?
IDFC Institute ಎಂಬ ಸಂಸ್ಥೆಯು 1999, 2004, 2009 ಮತ್ತು 2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ಲೋಕಸಭೆ ಮತ್ತು ರಾಜ್ಯಗಳ ಶಾಸನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆದ ರಾಜ್ಯಗಳ ಮತದಾನದ ಸ್ವರೂಪವನ್ನು ಅಧ್ಯಯನ ಮಾಡಿದೆ. ಅದರ ಪ್ರಕಾರ ಏಕಕಾಲದಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಚುನಾವಣೆ ನಡೆದರೆ ಮತದಾರರು ಒಂದೇ ಪಕ್ಷಕ್ಕೆ ವೋಟು ಹಾಕುವ ಸಾಧ್ಯತೆ ಶೇ.77ರಷ್ಟು ಹೆಚ್ಚು. ಕೆಲವು ರಾಜ್ಯಗಳಲ್ಲಿ ಅದು ಶೇ.85ರಷ್ಟು!! 1967ರ ಪೂರ್ವದ ಅವಧಿಯಲ್ಲೂ ಇದೇ ಸ್ವರೂಪದಲ್ಲೇ ಮತದಾನವಾಗಿವೆ.
ಅಮೆರಿಕದ ಮತ್ತೊಂದು ಅಧ್ಯಯನ ಸಂಸ್ಥೆಯ ಪ್ರಕಾರ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಜೊತೆಗೇ ಎಲ್ಲಾ ರಾಜ್ಯಗಳ ಶಾಸನಸಭಾ ಚುನಾವಣೆಗಳು ನಡೆದಿದ್ದರೆ ಬಹುಪಾಲು ರಾಜ್ಯಗಳಲ್ಲಿ ಬಿಜೆಪಿ ಅಪಾರ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿತ್ತು. ಆದರೆ ಒಂದು ವರ್ಷದ ನಂತರ ದಿಲ್ಲಿ ವಿಧಾನಸಭೆಗೆ ಮತ್ತು ಬಿಹಾರ ವಿಧಾನಸಭೆಗೆ ಚುನಾವಣೆ ನಡೆದದ್ದರಿಂದ ಆ ರಾಜ್ಯಗಳಲ್ಲಿ ಲೋಕಸಭೆಯಲ್ಲಿ ಅಪಾರ ಬಹುಮತ ಪಡೆದಿದ್ದ ಬಿಜೆಪಿಗೆ ಹೋಲಿಕೆಯಲ್ಲಿ ಅತ್ಯಂತ ಕಡಿಮೆ ವೋಟು ಮತ್ತು ಸೀಟುಗಳು ಮಾತ್ರ ದಕ್ಕಿದವು.
ಇದಕ್ಕೆ ಮುಖ್ಯ ಕಾರಣ ಲೋಕಸಭೆಯ ಚುನಾವಣೆಗಳಲ್ಲಿ ರಾಷ್ಟ್ರ, ಧರ್ಮ, ಭದ್ರತೆಯಂಥ ಭಾವನಾತ್ಮಕ ವಿಷಯಗಳು ಪ್ರಾಧಾನ್ಯತೆಯನ್ನು ಪಡೆದರೆ, ಸಾಮಾನ್ಯವಾಗಿ ರಾಜ್ಯಗಳ ಶಾಸನಸಭಾ ಚುನಾವಣೆಗಳಲ್ಲಿ ಬದುಕಿಗೆ ಸಂಬಂಧಪಟ್ಟ ವಿಷಯಗಳು ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತವೆ.
ಹೀಗಾಗಿ ಏಕಕಾಲದಲ್ಲಿ ಚುನಾವಣೆ ನಡೆದಾಗ ಬದುಕಿಗೆ ಸಂಬಂಧಪಟ್ಟ ವಿಷಯಗಳನ್ನು ಭಾವನಾತ್ಮಕ ವಿಷಯಗಳು ನುಂಗಿಹಾಕುತ್ತವೆ. ಹಾಗೂ ಪ್ರಾದೇಶಿಕ ಪಕ್ಷಗಳಿಗಿಂತ ರಾಷ್ಟ್ರೀಯ ಪಕ್ಷಗಳೇ ಹೆಚ್ಚಿನ ಮನ್ನಣೆಯನ್ನು ಪಡೆದುಕೊಳ್ಳುತ್ತವೆ.
ಇದು ಪ್ರಜಾತಂತ್ರದಲ್ಲಿ ಪ್ರಬುದ್ಧ ಮತದಾರರ ಪಾತ್ರವನ್ನು ಮತ್ತಷ್ಟು ಗೌಣಗೊಳಿಸಿ ಸರ್ವಾಧಿಕಾರಿ, ಹುಸಿ ರಾಷ್ಟ್ರವಾದಿ ರಾಜಕಾರಣಕ್ಕೆ ದಾರಿ ಮಾಡಿಕೊಡುತ್ತದೆ.
ಸ್ಥಿರ ಸರಕಾರವಲ್ಲ- ಫ್ಯಾಶಿಸ್ಟ್ ಸರಕಾರ
ವಾಸ್ತವದಲ್ಲಿ ಭಾರತವನ್ನೂ ಒಳಗೊಂಡಂತೆ ವಸಾಹತೋತ್ತರ ಪ್ರಜಾತಂತ್ರಗಳು ರೂಪದಲ್ಲಿ ಚುನಾವಣಾ ಪ್ರಜಾತಂತ್ರವನ್ನು ಅನುಸರಿಸಿದವು. ಪ್ರಾರಂಭದಲ್ಲಿ ಸ್ವಾತಂತ್ರ್ಯದ ಹಸಿರು ನಿರೀಕ್ಷೆಗಳು ಚುನಾವಣೆಯಲ್ಲಿ ಸ್ಥಿರ ಸರಕಾರವನ್ನು ಒದಗಿಸಿದವು. ಹೀಗಾಗಿಯೇ ಭಾರತದಲ್ಲೂ 1952-1967ರ ತನಕ ಲೋಕಸಭೆ ಮತ್ತು ರಾಜ್ಯದ ಶಾಸನ ಸಭೆಗಳಿಗೆ ಏಕಕಾಲದಲ್ಲೇ ಚುನಾವಣೆಗಳು ನಡೆಯುತ್ತಿದ್ದವು.
ಆದರೆ ಭಾರತದ ಚುನಾವಣಾ ಪ್ರಜಾತಂತ್ರಗಳು ಸಾರದಲ್ಲಿ ಅರೆ ಊಳಿಗಮಾನ್ಯ ಮತ್ತು ಬಂಡವಾಳಶಾಹಿ ಅಭಿವೃದ್ಧಿ ಮಾದರಿಯನ್ನೇ ಅನುಸರಿಸಿದ್ದರಿಂದ ದಿನಗಳೆದಂತೆ ಜನರಿಗೆ ಸ್ವಾತಂತ್ರ್ಯೋತ್ತರ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹೆಚ್ಚಾಗುತ್ತಾ ಹೋಯಿತು. ಇದರಿಂದಾಗಿ ಚುನಾವಣೆಗಳು ಅಸ್ಥಿರ ಸರಕಾರವನ್ನು ಕೊಡತೊಡಗಿದವು. ಆಯ್ಕೆಯಾದ ಸರಕಾರಗಳು ಅವಧಿಗೆ ಮುನ್ನ ಕುಸಿದು ಅಥವಾ ಆಗಿನ ಕಾಂಗ್ರೆಸ್ ಸರಕಾರ ತನ್ನ ನಿಲುವಿಗೆ ಒಪ್ಪದ ಸರಕಾರಗಳನ್ನು ವಜಾ ಮಾಡಿದ್ದರಿಂದಲೂ ಲೋಕಸಭಾ ಹಾಗೂ ಶಾನಸಭೆಗಳ ವೇಳಾಪಟ್ಟಿ ಬದಲಾದವು.
ಹೀಗಾಗಿ ಏಕಕಾಲಕ್ಕೆ ಚುನಾವಣೆ ನಡೆಯುವುದು ತಪ್ಪಿ, ಭಿನ್ನ ಭಿನ್ನ ವೇಳಾಪಟ್ಟಿಗಳಲ್ಲಿ ಚುನಾವಣೆ ನಡೆಯುವಂತಾದದ್ದು ಪ್ರಜಾತಂತ್ರದ ಪ್ರಬುದ್ಧತೆಯ ಸಂಕೇತವೇ ವಿನಾ ಅದು ಪ್ರಜಾತಂತ್ರದ ಲೋಪವಲ್ಲ.
ಆದರೆ ಸ್ಥಿರ ಸರಕಾರದ ಹೆಸರಿನಲ್ಲಿ ಜನರಿಗೆ ಉತ್ತರದಾಯಿಯಲ್ಲದ ಫ್ಯಾಶಿಸ್ಟ್ ಸರಕಾರದ ಸ್ಥಾಪನೆಯೇ ನಿಜವಾದ ಪ್ರಜಾತಂತ್ರವೇನೋ ಎಂಬ ಹುಸಿ ಕಲ್ಪನೆಯನ್ನು ಈ ‘ಒಂದು ದೇಶ-ಒಂದು ಚುನಾವಣೆ’ ಎಂಬ ಹೆಸರಿನಲ್ಲಿ ಚಲಾವಣೆಗೆ ಬಿಡಲಾಗಿದೆ.
ಹೀಗಾಗಿ ‘ಒಂದು ದೇಶ-ಒಂದು ಚುನಾವಣೆ’ ಎಂಬುದು ಸ್ಥಿರ ಸರಕಾರವೆಂಬ ಹುಸಿತನದಲ್ಲಿ ಫ್ಯಾಶಿಸ್ಟ್ ಸರಕಾರವನ್ನು ಸಂವಿಧಾನಬದ್ಧವಾಗಿ ಜಾರಿಗೆ ತರುವ ಹುನ್ನಾರವಾಗಿದೆ.