ಬಾಬರಿ ಮಸೀದಿಯ ಕೆಳಗೆ ರಾಮ ಮಂದಿರ: ಸುಪ್ರೀಂ ಕೋರ್ಟ್ ಹೇಳಿದ್ದೇನು?
Photo: PTI
ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ಉದ್ಘಾಟನೆಯಾಗುತ್ತಿರುವುದು ಕೇವಲ ರಾಮಮಂದಿರವಲ್ಲ- ರಾಷ್ಟ್ರ ಮಂದಿರ. ರಾಮ ಸಕಲ ಹಿಂದೂಗಳ ದೇವರು ಮಾತ್ರವಲ್ಲ, ಅಂದು ಮುಸ್ಲಿಮರು ಕೂಡ ರಾಮನಾಮ ಪಠಣ ಮಾಡಬೇಕೆಂದು ಅರೆಸ್ಸೆಸ್ ನಾಯಕರು ಕರೆಕೊಡುತ್ತಿದ್ದಾರೆ. 2024ರ ಎಪ್ರಿಲ್ - ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ರಾಮಮಂದಿರ ಉದ್ಘಾಟನೆಯನ್ನು ಮತ್ತು ಆ ನಂತರದ ಪ್ರಸಾದ ವಿತರಣೆ, ದರ್ಶನ ಇತ್ಯಾದಿಗಳನ್ನು ಬಳಸಿಕೊಳ್ಳುವುದು ಸ್ಪಷ್ಟ. ಆ ಕಾರಣದಿಂದಲೇ ರಾಮಮಂದಿರದ ಎಲ್ಲಾ ಹಂತದ ನಿರ್ಮಾಣ ಪರಿಪೂರ್ಣಗೊಳ್ಳುವುದು 2025ಕ್ಕೇ ಆದರೂ 2024ರ ಚುನಾವಣೆಗೆ ಮುನ್ನವೇ ಉದ್ಘಾಟನೆ ಮಾಡಲಾಗುತ್ತಿದೆ.
ಈ ಕುತಂತ್ರದ ಮುಂದುವರಿಕೆಯಾಗಿ ಎಲ್ಲಾ ರಾಜಕೀಯ ಪಕ್ಷಗಳನ್ನು ಆರೆಸ್ಸೆಸ್-ಬಿಜೆಪಿಯ ಮಂದಿರ ನಿರ್ಮಾಣದ ಟ್ರಸ್ಟಿನ ಹೆಸರಿನಲ್ಲಿ ಜನವರಿ 22ರಂದು ರಾಮ ಪ್ರಾಣಪ್ರತಿಷ್ಠಾಪನೆಗೆ ಆಹ್ವಾನಿಸುತ್ತಿದೆ. ಅದಕ್ಕೆ ಹಾಜರಾಗದವರನ್ನು ಹಿಂದೂ ದ್ರೋಹಿಗಳೆಂದು ಬಣ್ಣಿಸುವುದು ಇದರ ಹಿಂದಿನ ರಾಜಕೀಯ ಹುನ್ನಾರ. ಈ ಹುನ್ನಾರ ಹಗಲಿನಷ್ಟೇ ಸ್ಪಷ್ಟವಾಗಿದ್ದರೂ ಚುನಾವಣೆಯಲ್ಲಿ ಹಿಂದೂ ವೋಟುಗಳನ್ನು ಕಳೆದುಕೊಳ್ಳಬಹುದೆಂಬ ಹುಸಿ ಭೀತಿಯಿಂದ ಕಾಂಗ್ರೆಸ್ ಆದಿಯಾಗಿ ಬಹುಪಾಲು ವಿರೋಧ ಪಕ್ಷಗಳು ಮಂದಿರ ನಿರ್ಮಾಣದ ಹಿಂದಿನ ಕೋಮು ರಾಜಕೀಯವನ್ನು ಹಾಗೂ ಮಸೀದಿ ಕೆಡವಿ ಮಂದಿರ ಕಟ್ಟುತ್ತಿರುವ ಹಿಂದಿನ ಆಧಾರ್ಮಿಕತೆಯನ್ನು, ರಾಜಕೀಯ ಅನೈತಿಕತೆಯನ್ನು ಖಂಡಿಸಲಾಗದಷ್ಟು ಅವಕಾಶವಾದ ವ್ಯಕ್ತಪಡಿಸುತ್ತಿವೆ. ಇದಕ್ಕೆ ಹೊರತಾದ ನಿಲುವು ವ್ಯಕ್ತಪಡಿಸಿರುವ ಎಡಪಕ್ಷಗಳು ಅದರಲ್ಲೂ ಸಿಪಿಎಂ ಪಕ್ಷ ಧರ್ಮವು ಖಾಸಗಿಯಾದದ್ದು ಮತ್ತು ಒಂದು ಸೆಕ್ಯುಲರ್ ದೇಶದಲ್ಲಿ ಒಬ್ಬ ಪ್ರಧಾನಿ ಮಂದಿರ ಉದ್ಘಾಟನೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಹೇಳಿಕೆ ನೀಡಿ ಆ ಕಾರಣಕ್ಕೆ ಆರೆಸ್ಸೆಸ್ ಆಹ್ವಾನ ನಿರಾಕರಣೆ ಮಾಡಿದೆ. ಆದರೆ ಎಡಪಕ್ಷಗಳೂ ಕೂಡ ಮಸೀದಿಯನ್ನು ಕೆಡವಿ ಮಂದಿರ ಕಟ್ಟುತ್ತಿರುವುದು ಅಧಾರ್ಮಿಕತೆ, ಹೀಗಾಗಿ ಈ ಮಂದಿರ ಸಂವಿಧಾನದ ಮೇಲಿನ ದಾಳಿಯ ಸ್ಮಾರಕ ಎಂದು ಹೇಳುವ ರಾಜಕೀಯ ದೃಢತೆಯನ್ನು ತೋರಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಆರೆಸ್ಸೆಸ್- ಬಿಜೆಪಿಯ ಈ ರಾಜಕೀಯ ಹುನ್ನಾರಕ್ಕೆ ಸಾಮಾನ್ಯ ಹಿಂದೂಗಳು ಸುಲಭವಾಗಿ ಬಲಿಬೀಳುತ್ತಿದ್ದಾರೆ. ಮಂದಿರ ನಿರ್ಮಾಣದ ಹಿಂದಿನ ಕೋಮುವಾದಿ ರಾಜಕೀಯವನ್ನು ಮತ್ತು ಇದ್ದ ಮಸೀದಿಯನ್ನು ಕೆಡವಿ ಮಂದಿರ ಕಟ್ಟುವುದರ ಹಿಂದಿನ ಅಧಾರ್ಮಿಕತೆಯನ್ನು ವಿರೋಧಿಸುವವರನ್ನು ಹಿಂದೂದ್ರೋಹಿ-ದೇಶದ್ರೋಹಿ ಎಂಬ ಆರೆಸ್ಸೆಸ್ ಪ್ರಚಾರವನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಆರೆಸ್ಸೆಸ್ ಪ್ರಜ್ಞಾಪೂರ್ವಕವಾಗಿ ರೂಪಿಸುತ್ತಿದೆ.
ಈ ಸಮ್ಮತಿಯ ಉತ್ಪಾದನೆಗೆ ಅವರು ಬಳಸುತ್ತಿರುವ ಅತ್ಯಂತ ಪ್ರಧಾನವಾದ ಸುಳ್ಳು- ರಾಮನು ಹುಟ್ಟಿದ ಜಾಗವಾದ ಅಯೋಧ್ಯೆಯ ಆ ಜಾಗವು ರಾಮಜನ್ಮಸ್ಥಾನವಾಗಿತ್ತು. ಅಲ್ಲೊಂದು ರಾಮಮಂದಿರವಿತ್ತು. 1528ರಲ್ಲಿ ಮೊಗಲ್ ದೊರೆ ಬಾಬರ್ನ ದಳಪತಿ ಮೀರ್ ಬಾಕಿ ರಾಮ ಮಂದಿರವನ್ನು ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಿದ. ಹೀಗಾಗಿ ಬಾಬರಿ ಮಸೀದಿಯೆಂಬುದು ಹಿಂದೂಗಳ ಮೇಲಿನ ದಾಳಿಯ ಪುರಾತನ ಸ್ಮಾರಕವಾಗಿತ್ತು. ಮೋದಿ ಸರಕಾರ ಮಂದಿರ ಕೆಡವಿ ಮಸೀದಿ ನಿರ್ಮಿಸಿದ ಜಾಗದಲ್ಲಿ ಮಸೀದಿಯನ್ನು ಕೆಡವಿ ಮಂದಿರ ನಿರ್ಮಿಸಿ ಕಳಂಕ ನಿವಾರಿಸಿದೆ.
ಅಷ್ಟು ಮಾತ್ರವಲ್ಲ. 2003ರಲ್ಲಿ ಮಸೀದಿಯ ಜಾಗದಲ್ಲಿ ಉತ್ಖನನ ನಡೆಸಿದ ಸರಕಾರದ ಪುರಾತತ್ವ ಇಲಾಖೆ (ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ-ಎಎಸ್ಐ) ಮಸೀದಿಯ ಕೆಳಗೆ ರಾಮಮಂದಿರವಿತ್ತೆಂದು ವರದಿ ನೀಡಿದೆ. ಆ ವರದಿಯನ್ನು ಸುಪ್ರೀಂಕೋರ್ಟ್ ಕೂಡ ಒಪ್ಪಿಕೊಂಡಿದೆ ಎಂಬ ಬಹುದೊಡ್ಡ ಅಪಪ್ರಚಾರವನ್ನು ತಮ್ಮ ಸುಳ್ಳಿನ ಸಮರ್ಥನೆ ಬಳಸಿಕೊಂಡು ಸಾಮಾನ್ಯ ಹಿಂದೂಗಳ ನೈತಿಕ ಪ್ರಜ್ಞೆಯನ್ನು ಭ್ರಷ್ಟಗೊಳಿಸುತ್ತಿದ್ದಾರೆ.
ಆದರೆ ನಿಜಕ್ಕೂ ಬಾಬರಿ ಮಸೀದಿಯ ಕೆಳಗೆ ರಾಮಮಂದಿರವಿತ್ತೇ? ಎಎಸ್ಐ ವರದಿ ಮಸೀದಿಯ ಕೆಳಗೆ ರಾಮಮಂದಿರವಿತ್ತೆಂದು ಹೇಳಿತ್ತೇ? ಸುಪ್ರೀಂ ಕೋರ್ಟ್ ಕೂಡ ಮಸೀದಿಯ ಕೆಳಗೆ ರಾಮಮಂದಿರವಿತ್ತೆಂದು ಒಪ್ಪಿಕೊಂಡಿತ್ತೇ? ಇದನ್ನು ದೈವಭಕ್ತಿಯ ಕಾರಣಕ್ಕೆ ಬಿಜೆಪಿಯ ರಾಮ ಮಂದಿರವನ್ನು ಸಮರ್ಥಿಸುತ್ತಿರುವ ಸಾಮಾನ್ಯ ಹಿಂದೂಗಳು ತಿಳಿದುಕೊಳ್ಳುವುದು ಅತ್ಯವಶ್ಯ.
ಎಎಸ್ಐ ವರದಿ ಮತ್ತದರ ರಾಜಕೀಯ
ಬಾಬರಿ ಮಸೀದಿ ಇದ್ದ ಜಾಗದಲ್ಲಿ ಭವ್ಯವಾದ ರಾಮಮಂದಿರವಿತ್ತು. ಅದನ್ನು ನಾಶಮಾಡಿಯೇ 1528ರಲ್ಲಿ ಬಾಬರ್ ಮಸೀದಿಯನ್ನು ನಿರ್ಮಿಸಿದ ಎಂಬ ಪ್ರಚಾರವನ್ನು ಸಂಘಪರಿವಾರ ಬಹಳ ಯಶಸ್ವಿಯಾಗಿ ದೇಶದುದ್ದಕ್ಕೂ ನಡೆಸಿ ಹಿಂದೂ-ಮುಸ್ಲಿಮರ ನಡುವೆ ಅಳಿಸಲಾಗದ ಕಂದರವನ್ನು ಸೃಷ್ಟಿಸಿದೆ.
ಈ ಪ್ರಚಾರದ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಲು 2003ರಲ್ಲಿ ಅಲಹಾಬಾದ್ ಹೈಕೋರ್ಟ್ ಭಾರತೀಯ ಪುರಾತತ್ವ ಇಲಾಖೆಗೆ (ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ- ಎಎಸ್ಐ) ವಿವಾದಿತ ಜಾಗದಲ್ಲಿ ಉತ್ಖನನ ಮಾಡಿ ಮಂದಿರವಿತ್ತೇ ಎಂದು ಪರಿಶೀಲನೆ ಮಾಡಿ ವರದಿ ಸಲ್ಲಿಸಲು ಸೂಚಿಸಿತು.
ಆದರೆ ೧೯೯೪ರಲ್ಲಿ ರಾಷ್ಟ್ರಪತಿಯವರು ಮಸೀದಿಯ ಕೆಳಗೆ ರಾಮಮಂದಿರವಿತ್ತೇ ಎಂದು ಅಭಿಪ್ರಾಯ ತಿಳಿಸಲು ಕೋರಿದಾಗ ಸುಪ್ರೀಂ ಕೋರ್ಟ್ನ ಐದು ಜನರ ಪೀಠವು ಕೋರ್ಟುಗಳು ಇಂತಹ ವಿಷಯಗಳಲ್ಲಿ ಮಧ್ಯಪ್ರವೇಶ ಮಾಡಬಾರದೆಂದು ಖಚಿತವಾಗಿ ಹೇಳಿದ್ದರೂ ಅದಕ್ಕಿಂತ ನ್ಯಾಯಾಂಗದ ಶ್ರೇಣೀಕರಣದಲ್ಲಿ ಕೆಳಗಿರುವ ಮೂರು ಸದಸ್ಯರ ಹೈಕೋರ್ಟ್ ಇದನ್ನು ಪರಿಗಣನೆಗೆ ತೆಗೆದುಕೊಂಡಿದ್ದೇ ಮೊದಲನೆ ತಪ್ಪು. ಅದರ ಬಗ್ಗೆ ತಮಗೆ ಯಾವುದೇ ಪರಿಣಿತಿ ಇಲ್ಲದಿದ್ದರೂ ಅದರ ಬಗ್ಗೆ ವ್ಯಾಖ್ಯಾನ ನೀಡಿ ತೀರ್ಪು ನೀಡಿದ್ದು ಎರಡನೇ ಮಹಾಪರಾಧ! ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು ವಾಜಪೇಯಿಯವರ ಬಿಜೆಪಿ ಸರಕಾರ ಮತ್ತು ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದದ್ದು ಬಿಎಸ್ಪಿ-ಬಿಜೆಪಿ ನೇತೃತ್ವ ಸಮ್ಮಿಶ್ರ ಸರಕಾರ. (ಬೇರೆ ಪಕ್ಷಗಳ ಸರಕಾರಗಳಿದ್ದಿದ್ದರೂ ಇದಕ್ಕಿಂತ ಭಿನ್ನ ನಡೆಯನ್ನೇನೂ ನಿರೀಕ್ಷಿಸುವಂತಿರಲಿಲ್ಲ ಎನ್ನುವುದು ಬೇರೆ ಮಾತು.)
ಅದೇನೇ ಇರಲಿ ಅಲಹಾಬಾದ್ ಹೈಕೋರ್ಟಿನ ಆದೇಶದ ಮೇರೆಗೆ ಎಎಸ್ಐ ಬಾಬರಿ ಮಸೀದಿ ಇದ್ದ ಜಾಗವನ್ನು ಉತ್ಖನನ ಮಾಡಿತು. ಆದರೆ ಅದು ಪ್ರಾರಂಭದಿಂದಲೂ ಏಕಪಕ್ಷೀಯವಾಗಿತ್ತು ಮತ್ತು ಈಗಾಗಲೇ ವೈಜ್ಞಾನಿಕವೆಂದು ಸಾಬೀತಾದ ಮಾರ್ಗಗಳನ್ನು ಅನುಸರಿಸದೆ ರಾಮಮಂದಿರವಿತ್ತೆಂಬ ನಿರ್ಧಾರಕ್ಕೆ ಬರಲು ಧಾವಿಸುತ್ತಿತ್ತು ಎಂದು ಉತ್ಖನನದ ಭಾಗವಾಗಿದ್ದ ಸುಪ್ರಿಯಾ ಶರ್ಮ ಹಾಗೂ ಇನ್ನಿತರ ಪರಿಣಿತರು ಕಾಲಕಾಲಕ್ಕೆ ಸರಕಾರದ ಮತ್ತು ಕೋರ್ಟಿನ ಗಮನಕ್ಕೆ ತರುತ್ತಿದ್ದರು. ಉತ್ಖನನಕ್ಕೆ ಬಳಸಿದ ವಿಧಾನ ಮತ್ತು ತಂತ್ರಜ್ಞಾನ ಹಾಗೂ ಅದರ ಮೇಲ್ವಿಚಾರಣೆ ವಹಿಸಿದ್ದ ಅಧಿಕಾರಿಗಳ ಏಕಪಕ್ಷೀಯತೆಯ ಬಗ್ಗೆ 14 ದೂರುಗಳು ಸಲ್ಲಿಕೆಯಾಗಿತ್ತು. ಹೀಗಾಗಿ ನಂತರದ ಅವಧಿಯಲ್ಲಿ ಅದರ ಮುಖ್ಯಸ್ಥರಾಗಿದ್ದ ಮಣಿ ಎಂಬವರನ್ನು ಕೆಳಗಿಳಿಸಲಾಗಿತ್ತು. (ಈ ಮಹಾಶಯರು ಆರೆಸ್ಸೆಸ್ನ ಈ ಅಜೆಂಡಾಗೆ ನೀಡಿದ ಬಾಡಿಗೆ ಸೇವೆಯನ್ನು ಪರಿಗಣಿಸಿ 2016ರಲ್ಲಿ ಮೋದಿ ಸರಕಾರ ನ್ಯಾಷನಲ್ ಮ್ಯೂಸಿಯಂನ ಡಿ.ಜಿ.ಯನ್ನಾಗಿ ನೇಮಿಸಿ ಋಣ ಸಂದಾಯ ಮಾಡಿತು.) ನಂತರ ಎಎಸ್ಐ ತಲುಪಿದ ಅಭಿಪ್ರಾಯಗಳ ವೈಜ್ಞಾನಿಕತೆ ಮತ್ತು ತಾರ್ಕಿಕತೆಗಳ ಬಗ್ಗೆ ಹಲವಾರು ಪ್ರಸಿದ್ಧ ಪುರಾತತ್ವ ಸಂಶೋಧಕರು ತೀವ್ರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು.
ಎಎಸ್ಐಯವರು ಹೊರ ಆವರಣದಲ್ಲಿ ಪಾಳು ಬಿದ್ದಿದ್ದ ಇಟ್ಟಿಗೆಗಳನ್ನೆಲ್ಲಾ ಒಟ್ಟು ಸೇರಿಸಿ ಪಿಲ್ಲರ್ ಸ್ವರೂಪದ ರಚನೆ ಇತ್ತೆಂದು ಸಾಬೀತುಮಾಡಲು ನಡೆಸಿದ ಪ್ರಯತ್ನ ಮತ್ತು ಅದರ ಹಿಂದಿನ ಉದ್ದೇಶಗಳ ಬಗ್ಗೆ ಕೆಲವು ಇತಿಹಾಸಕಾರರು ಸುಪ್ರೀಂ ಕೋರ್ಟಿಗೂ ದೂರು ಸಲ್ಲಿಸಿದ್ದರು. ಅಲ್ಲದೆ ಉತ್ಖನನದಲ್ಲಿ ಕಂಡ ಅವಶೇಷಗಳ ಕಾಲಾವಧಿಯನ್ನು ನಿರ್ಧಾರ ಮಾಡಲು ಎಎಸ್ಐ ಅನುಸರಿಸಿದ ಮಾದರಿ ಅತ್ಯಂತ ಕಳಪೆಯಾಗಿದೆಯೆಂದು ನ್ಯಾಯಾಲಯಗಳ ಗಮನಕ್ಕೂ ತರಲಾಗಿತ್ತು.
ಆದರೂ ಈ ಉತ್ಖನನವನ್ನು ಆಧರಿಸಿ ಎಎಸ್ಐಯವರು ನೀಡಿದ ವರದಿ ಇನ್ನೂ ಹಾಸ್ಯಾಸ್ಪದವಾಗಿತ್ತು. ವಾಸ್ತವವಾಗಿ ಇದನ್ನು ಕಂಡು ರೋಸಿಹೋಗಿದ್ದ ಈ ದೇಶದ ಗಣ್ಯಾತಿಗಣ್ಯ ಇತಿಹಾಸಕಾರರಾದ ಸೂರಜ್ ಭಾನ್, ಡಿ.ಎಮ್.ಝಾಮ್, ಆರ್.ಎಸ್. ಶರ್ಮಾ ಮತ್ತು ಅಲಿಯವರು ಆ ಉತ್ಖನನದ ವರದಿಯ ಬಗ್ಗೆ ತಮ್ಮ ಅಭಿಪ್ರಾಯ ನೀಡಲು ಅವಕಾಶ ಕೊಡಬೇಕೆಂದು ಕೋರಿದ್ದರು. ಅದಕ್ಕೆ ಪ್ರತಿವಾದಿಗಳಾಗಿದ್ದ ಮುಸ್ಲಿಮ್ ಸಂಘಟನೆಗಳೂ ಒಪ್ಪಿಕೊಂಡಿದ್ದವು. ಆದರೆ ಸರಕಾರ ಅದರ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ತೋರಿತು. ಆದರೂ ಈ ಇತಿಹಾಸಕಾರರು ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ‘ದೇಶಕ್ಕೊಂದು ಇತಿಹಾಸಕಾರರ ವರದಿ’ಯನ್ನು ನೀಡಿದರು. ಅದರಲ್ಲಿ ಅವರು ಆ ಆವರಣದಲ್ಲಿ ದೊರೆತ ಅವಶೇಷಗಳಲ್ಲಿ ಬಳಸಿರುವ ಸುರ್ಕಿ, ಪಿಲ್ಲರ್ ತರಹ ಕಾಣುವ ರಚನೆಗಳು ವಾಸ್ತವವಾಗಿ ಪಿಲ್ಲರ್ಗಳಲ್ಲ ಎಂಬುದನ್ನು ಮತ್ತು ಇನ್ನಿತರ ಹಲವಾರು ಪುರಾವೆಗಳನ್ನು ತೋರಿಸಿ ಅದು ಇಸ್ಲಾಮಿಕ್ ಕಟ್ಟಡವೇ ವಿನಃ ಮಂದಿರವಾಗಿರಲಾರದು ಎಂದು ಸಾಬೀತು ಪಡಿಸಿದ್ದರು. ಅದನ್ನು ಕೋರ್ಟಿಗೂ ಸಲ್ಲಿಸಿದ್ದರು. ಮಧ್ಯಕಾಲೀನ ಭಾರತದ ಬಗ್ಗೆ ಅಧಿಕೃತ ಆಕರವೆಂದೇ ಪ್ರಸಿದ್ಧರಾಗಿರುವ ಖ್ಯಾತ ಇತಿಹಾಸ ತಜ್ಞ ಇರ್ಫಾನ್ ಹಬೀಬರ ಪ್ರಕಾರವಂತೂ ಬಾಬರಿ ಮಸೀದಿಯನ್ನು ಈಗಾಗಲೇ ಪತನಗೊಂಡಿದ್ದ ದರ್ಗಾ ಅಥವಾ ಮಸೀದಿಯ ಅವಶೇಷಗಳ ಮೇಲೆ ಕಟ್ಟಲಾಗಿದೆ.
ಅಲಹಾಬಾದ್ ಹೈಕೋರ್ಟ್ ಕೂಡಾ ಎಎಸ್ಐ ವರದಿ ಒಪ್ಪಿಕೊಳ್ಳಲಿಲ್ಲ!
ಅಯೋಧ್ಯೆಯ ವಿಷಯದ ಬಗ್ಗೆ 2010ರಲ್ಲಿ ತೀರ್ಪು ನೀಡಿದ ಹೈಕೋರ್ಟ್ನ ಮೂವರು ನ್ಯಾಯಾಧೀಶರ ರಾಮಭಕ್ತ ಪೀಠ ಕೂಡ ವರದಿಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲಿಲ್ಲ!
ನ್ಯಾ. ಖಾನ್ರವರು ಇಲ್ಲಿ ಮಸೀದಿ ಕಟ್ಟುವ ಮುನ್ನ ರಾಮಮಂದಿರವಿತ್ತು ಎಂದು ಹೇಳಲಾಗುವುದಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ. ಮಸೀದಿಯ ಕೆಳಗೆ ಹಿಂದೂ ಧಾರ್ಮಿಕ ಸ್ವರೂಪದ ಕಟ್ಟಡವಿದ್ದಿರಬಹುದೆಂಬ ಅಭಿಪ್ರಾಯಕ್ಕೆ ಬಂದರೂ ಅದು ರಾಮಮಂದಿರವೇ ಆಗಿತ್ತೆಂದೂ ಅಥವಾ ಅದನ್ನು ಕೆಡವಿಯೇ ಕಟ್ಟಲಾಗಿದೆಯೆಂದೂ ತೀರ್ಮಾನಕ್ಕೆ ಬರಲು ಆಗುವುದಿಲ್ಲವೆಂದು ಹೇಳುತ್ತಾರೆ.
ನ್ಯಾ. ಅಗರ್ವಾಲ್ರವರೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನ್ಯಾ. ಶರ್ಮಾ ಮಾತ್ರ ವಿಶ್ವಹಿಂದೂ ಪರಿಷತ್ತಿನ ಲಾಯರ್ ಹಾಗೂ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಮುಂದಿಟ್ಟ ವಾದವನ್ನು ಯಾವುದೇ ತಿದ್ದುಪಡಿಯಿಲ್ಲದೆ ಒಪ್ಪಿಕೊಳ್ಳುತ್ತಾರೆ. ಅವರ ಪ್ರಕಾರ ಅಲ್ಲಿ ಮಸೀದಿ ಕಟ್ಟುವ ಮುಂಚೆ ಸಾಕ್ಷಾತ್ ಶ್ರೀರಾಮ ಮಂದಿರವೇ ಅಸ್ತಿತ್ವದಲ್ಲಿತ್ತು. ಅದನ್ನು ಕೆಡವಿಯೇ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ.
ಅದೇನೇ ಇರಲಿ. ಅಲಹಾಬಾದ್ ಹೈಕೋರ್ಟಿನ ಪ್ರಮುಖ ಅಭಿಪ್ರಾಯ ‘‘ಎಎಸ್ಐ ನೀಡಿದ್ದ ವರದಿಯು ಮಸೀದಿಯ ಕೆಳಗೆ ಮಂದಿರವಿತ್ತೆಂದು ಖಚಿತಪಡಿಸಲಿಲ್ಲ’’ವೆಂಬುದೇ ಆಗಿತ್ತು. ಆದರೂ ಸಂಘಪರಿವಾರವು ಮಸೀದಿಯ ಕೆಳಗೆ ಮಂದಿರವಿತ್ತೆಂದು ಎಎಸ್ಐ ಸಾಬೀತುಪಡಿಸಿದೆಯೆಂದು ಸುಳ್ಳು ಪ್ರಚಾರ ಮುಂದುವರಿಸಿತು.
ಸುಪ್ರೀಂ ಕೋರ್ಟ್: ಮಸೀದಿಯ ಕೆಳಗೆ ರಾಮಮಂದಿರ ಇರಲಿಲ್ಲ!
ಅಂತಿಮವಾಗಿ ವಿವಾದವು 2010ರಲ್ಲೇ ಸುಪ್ರೀಂ ಕೋರ್ಟು ತಲುಪಿತು. ಮತ್ತು ಅದರ ಬಗ್ಗೆ ೨೦೧೯ರ ವೆಂಬರ್ ೫ರಂದು ಸುಪ್ರೀಂ ಕೋರ್ಟಿನ ಐವರು ಸದಸ್ಯರ ಸಾಂವಿಧಾನಿಕ ಪೀಠ ತನ್ನ ತೀರ್ಮಾನವನ್ನು ನೀಡಿತು. ಅದರಲ್ಲಿ ಮಂದಿರದ ಕೆಳಗೆ ಮಸೀದಿಯಿತ್ತೇ ಎಂಬ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ೧,೦೫೪ ಪುಟದ ತೀರ್ಪಿನಲ್ಲಿ ಸುಮಾರು ೨೦೦ ಪುಟಗಳಷ್ಟು ವಿವರವಾಗಿ ಚರ್ಚಿಸುತ್ತದೆ.
ಆಸಕ್ತರು ಅದನ್ನು ಈ ವೆಬ್ ವಿಳಾಸದಲ್ಲಿ ಓದಬಹುದು:/https://www.sci.gov.in/pdf/JUD_2.pdf
ತೀರ್ಪಿನ 447ನೇ ಪ್ಯಾರಾದಿಂದ 580ನೇ ಪ್ಯಾರಾಗಳವರೆಗೂ ಎಎಸ್ಐ ನ ವರದಿ, ಸಾಕ್ಷಿಯಾಗಿ ಅದರ ಮೌಲ್ಯ, ಈ ಪ್ರಕರಣದಲ್ಲಿ ಅದಕ್ಕಿರುವ ಬೆಲೆ ಇತ್ಯಾದಿಗಳನ್ನು ಕೂಲಂಕಷವಾಗಿ ವಿಶ್ಲೇಷಿಸುವ ಸುಪ್ರೀಂ ಕೋರ್ಟ್ 788ನೇ ಪ್ಯಾರಾದಲ್ಲಿ ಖಚಿತವಾಗಿ ಈ ಕೆಳಗಿನ ತೀರ್ಮಾನಗಳನ್ನು ಹೇಳುತ್ತದೆ:
“…While the ASI report has found the existence of ruins of a pre-existing structure, the report does not provide: (a) The reason for the destruction of the pre-existing structure; and (b) Whether the earlier structure was demolished for the purpose of the construction of the mosque. (ii) Since the ASI report dates the underlying structure to the twelfth century, there is a time gap of about four centuries between the date of the underlying structure and the construction of the mosque. No evidence is available to explain what transpired in the course of the intervening period of nearly four centuries; (iii) The ASI report does not conclude that the remnants of the pre-existing structure were used for the purpose of constructing the mosque…. No evidence is available in a case of this antiquity on (i) the cause of destruction of the underlying structure; and (ii) whether the pre-existing structure was demolished for the construction of the mosque. Title to the land must be decided’’ ಎಂದರೆ ‘‘ಎಎಸ್ಐ ವರದಿಯು ಮಸೀದಿಯ ಕೆಳಗೆ ಅದಕ್ಕೆ ಹಿಂದಿನ ಕಟ್ಟಡದ ಅವಶೇಶಗಳನ್ನು ಗುರುತಿಸಿದ್ದರೂ, ಎಎಸ್ಐ ವರದಿಯು: ಅ) ಮಸೀದಿಪೂರ್ವದ ಕಟ್ಟಡದ ಪತನಕ್ಕೆ ಕಾರಣಗಳನ್ನು ಒದಗಿಸುವುದಿಲ್ಲ. ಆ) ಮಸೀದಿಯನ್ನು ನಿರ್ಮಿಸುವ ಕಾರಣಕ್ಕಾಗಿಯೇ ಅಲ್ಲಿದ್ದ ಕಟ್ಟಡವನ್ನು ಉರುಳಿಸಲಾಯಿತೇ ಎಂಬುದನ್ನು ಸ್ಪಷ್ಟಪಡಿಸುವುದಿಲ್ಲ ಇ) ಮಸೀದಿ ಪೂರ್ವ ಕಟ್ಟಡದ ಅಂದಾಜು ಕಾಲಮಾನ ೧೨ನೇ ಶತಮಾನದ್ದು ಎಂದು ವರದಿಯು ಹೇಳುತ್ತದೆ. ಅಂದರೆ ಈ ಹಿಂದಿನ ಕಟ್ಟಡಕ್ಕೂ ಹಾಗೂ ಮಸೀದಿ ನಿರ್ಮಾಣಕ್ಕೂ ನಡುವೆ ೪೦೦ ವರ್ಷಗಳ ಅಂತರವಿದೆ. ಈ 400ವರ್ಷಗಳಲ್ಲಿ ಏನು ಸಂಭವಿಸಿರಬಹುದು ಎಂಬುದನ್ನು ವಿವರಿಸಬಲ್ಲ ಯಾವ ಸಾಕ್ಷ್ಯಗಳೂ ಲಭ್ಯವಿಲ್ಲ. ಈ) ವರದಿಯು ಪತನಗೊಂಡಿದ್ದ ಕಟ್ಟಡಗಳ ಅವಶೇಷಗಳನ್ನು ಮಸೀದಿ ನಿರ್ಮಾಣದಲ್ಲಿ ಬಳಸಲಾಗಿದೆ ಎಂಬ ತೀರ್ಮಾನಕ್ಕೆ ಬಂದಿಲ್ಲ. ..ಹೀಗಾಗಿ ಹಿಂದಿನ ಕಟ್ಟಡದ ನಾಶದ ಕಾರಣವಾಗಲೀ, ಮಸೀದಿಯನ್ನು ಕಟ್ಟಲೆಂದೇ ಆ ಕಟ್ಟಡವನ್ನು ನಾಶ ಮಾಡಲಾಗಿದೆ ಎಂಬ ತೀರ್ಮಾನಕ್ಕೆ ಬರುವ ಯಾವ ಪುರಾವೆಯಾಗಲೇ ಲಭ್ಯವಾಗಿಲ್ಲ. ಹೀಗಾಗಿ ಯಾವುದೇ ಸಿವಿಲ್ ವ್ಯಾಜ್ಯಗಳನ್ನು ಸಾಕ್ಷಿ ಮತ್ತು ಸ್ಥಾಪಿತವಾಗಿರುವ ಕಾನೂನು ನಿಯಮಗಳನ್ನು ಆಧರಿಸಿ ಮಾತ್ರ ತೀರ್ಮಾನ ಮಾಡಬೇಕು’’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಕ್ಕೆ ಬರುತ್ತದೆ. ಮಾತ್ರವಲ್ಲ ಇದೇ ಕಾರಣಗಳಿಗಾಗಿ ಎಎಸ್ಐ ವರದಿಯನ್ನು ತನ್ನ ಅಂತಿಮ ತೀರ್ಪಿಗೆ ಪುರಾವೆಯನ್ನಾಗಿ ಬಳಸುವುದಿಲ್ಲ.
ಮತ್ತೊಂದು ಪ್ಯಾರಾದಲ್ಲಿ ಎಎಸ್ಐ ಬಳಸಿರುವ ಉತ್ಖನನ ವಿಧಾನದ ಬಗ್ಗೆ ಪರಿಣಿತರು ಎತ್ತಿದ್ದ ತಕರಾರುಗಳನ್ನು ಗಮನಕ್ಕೆ ತೆಗೆದುಕೊಳ್ಳುತ್ತದೆ ಹಾಗೂ ಕೆಲವು ಪರಿಣಿತರು ಹೇಳುವಂತೆ ಮಸೀದಿಯ ಕೆಳಗಿದ್ದ ಕಟ್ಟಡವು ಬೌದ್ಧ, ಜೈನ ಸ್ವರೂಪದ್ದು ಅಥವಾ ವೃತ್ತಾಕಾರದ ಆ ಕಾಲದ ಶೈವ ಪಂಥದ್ದೂ ಕೂಡ ಆಗಿರಬಹುದು ಅಥವಾ ಇಸ್ಲಾಮಿಕ್ ಕಟ್ಟಡವೂ ಆಗಿರಬಹುದು ಎಂಬ ವ್ಯಾಖ್ಯಾನವನ್ನು ಗಮನಿಸುತ್ತದೆ.
ಅಂತಿಮವಾಗಿ ಸುಪ್ರೀಂ ಕೋರ್ಟ್:
* ಮಸೀದಿಯ ಕೆಳಗೆ ಇಸ್ಲಾಮೇತರ ಕಟ್ಟಡವೊಂದರ ಅವಶೇಷ ಕಂಡುಬಂದಿದೆ. ಆದರೆ ಅದು ರಾಮಮಂದಿರ ಎಂಬ ಯಾವ ಪುರಾವೆಯೂ ಸಿಕ್ಕಿಲ್ಲ.
* ಮಸೀದಿಯ ಕೆಳಗಿನ ಕಟ್ಟಡದ ಕಾಲಮಾನ ಅಂದಾಜು 12ನೇ ಶತಮಾನದ್ದು. ಅಂದರೆ ಮಸೀದಿಗೂ ಹಾಗೂ ಹಿಂದಿನ ಕಟ್ಟಡಕ್ಕೂ 400 ವರ್ಷಗಳ ಅಂತರವಿದೆ. ಹೀಗಾಗಿ ಈ ಅವಧಿಯಲ್ಲಿ ಅದು ಯಾವ ಕಾರಣಕ್ಕೆ ಕುಸಿದಿರಬಹುದು ಎಂಬ ಯಾವುದೇ ಸಾಕ್ಷಿ ದೊರಕಿಲ್ಲ.
* ಮಸೀದಿಯ ಕೆಳಗಿದ್ದ ಕಟ್ಟಡವನ್ನು ಮಸೀದಿಯನ್ನು ಕಟ್ಟಲೆಂದೇ ಕೆಡವಲಾಗಿದೆಯೆಂಬ ತೀರ್ಮಾನಕ್ಕೆ ಬರಲಾಗುವುದಿಲ್ಲಎಂದು ಖಚಿತವಾಗಿ ಘೋಷಿಸುತ್ತದೆ. ಆದ್ದರಿಂದ ಸುಪ್ರೀಂ ಕೋರ್ಟ್ ರಾಮಮಂದಿರವನ್ನು ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆಯೆಂಬ ವಾದವನ್ನು ಪುರಸ್ಕರಿಸಿಲ್ಲ.
ಅಷ್ಟು ಮಾತ್ರವಲ್ಲ. ಮಸೀದಿಯ ಒಳಾವರಣದ ಪ್ರವೇಶಕ್ಕೆ ಸಂಬಂಧಪಟ್ಟಂತೆ 1857-58ರಲ್ಲಿ ಹಿಂದೂ-ಮುಸ್ಲಿಮರ ನಡುವೆ ಘರ್ಷಣೆಯಾಗಿತ್ತು ಎಂಬ ಪುರಾವೆಯನ್ನು ಪರಿಗಣಿಸುವ ಸುಪ್ರೀಂ ಕೋರ್ಟ್ 1857ರಿಂದ ಮಂದಿರದ ಒಳಾವರಣದಲ್ಲಿ ಅಂದರೆ ವಿವಾದಿತವಾದ 2.77 ಎಕರೆಯಲ್ಲಿ ಮುಸ್ಲಿಮರು ನಿರಂತರವಾಗಿ ನಮಾಝ್ ಮಾಡುತ್ತಾ ಬಂದಿದ್ದರೆಂಬುದನ್ನು ಒಪ್ಪಿಕೊಳ್ಳುತ್ತದೆ ಹಾಗೂ 1936ರಲ್ಲಿ ಮುಸ್ಲಿಮರು ನಮಾಝ್ ಮಾಡದಂತೆ ಹಿಂದೂಗಳು ಕಾನೂನುಬಾಹಿರವಾಗಿ ತಡೆದರು ಎಂಬುದನ್ನು ದಾಖಲಿಸುತ್ತದೆ. ಹಾಗೂ ಅಂತಿಮವಾಗಿ 1949ರ ಡಿಸೆಂಬರ್ 22ರ ಮಧ್ಯರಾತ್ರಿ ಕೆಲವರು ಕಾನೂನುಬಾಹಿರವಾಗಿ ನಡುಗುಮ್ಮಟದ ಅಡಿಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ತಂದಿಟ್ಟು ಮಸೀದಿಯ ಪಾವಿತ್ರ್ಯವನ್ನು ನಾಶಗೊಳಿಸಿದರು ಮತ್ತು ಆದ್ದರಿಂದಲೇ ಮುಸ್ಲಿಮರು ಅಲ್ಲಿ ನಮಾಝ್ ಮಾಡದಂತಾಗಿ ಅವರನ್ನು ಅಲ್ಲಿಂದ ಕಾನೂನುಬಾಹಿರವಾಗಿ ಹೊರಗಟ್ಟಲಾಯಿತು ಎಂಬುದನ್ನೂ ಸಹ ಒಪ್ಪಿಕೊಳ್ಳುತ್ತದೆ ಹಾಗೂ 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿನ್ನು ಕೆಡವಿದ್ದು ಒಂದು ಹೀನಾಯ ಅಪರಾಧವೆಂದು ಸಹ ಸುಪ್ರೀಂ ಒಪ್ಪಿಕೊಳ್ಳುತ್ತದೆ.
ಹೀಗೆ ಸುಪ್ರೀಂ ಕೋರ್ಟ್ನ ಪ್ರಕಾರ ಕ್ರಿ.ಶ. 1528ರಿಂದ ಅಲ್ಲಿ ಮಸೀದಿಯಿದ್ದದ್ದು ನಿಜ. ಆ ಮಸೀದಿಯ ಕೆಳಗೆ ರಾಮಮಂದಿರವಿರಲಿಲ್ಲ ಅಥವಾ ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ್ದಲ್ಲ ಎಂಬುದೂ ನಿಜ. ಹಾಗೆಯೇ ಏನಿಲ್ಲವೆಂದರೂ 1857ರಿಂದ 1949ರವರೆಗೆ ಅಲ್ಲಿ ನಮಾಝ್ ಮಾಡುತ್ತಿದ್ದದ್ದು ನಿಜ.
ಆದರೂ ಸುಪ್ರೀಂ ಕೋರ್ಟ್ ಅತ್ಯಂತ ಅನ್ಯಾಯಯುತವಾಗಿ ಬಲವಿದ್ದವರ ಮತ್ತು ಬಹುಸಂಖ್ಯಾತರ ನಂಬಿಕೆಯನ್ನು ಅಲ್ಪಸಂಖ್ಯಾತರು ಒದಗಿಸುವ ಸಾಕ್ಷಿ ಪುರಾವೆಗಳಿಗಿಂತ ಮೌಲಿಕ ಎಂಬ ಹೊಸ ನ್ಯಾಯ ಸಂಹಿತೆಯನ್ನು ಹುಟ್ಟುಹಾಕಿ ಮಸೀದಿಯನ್ನು ಕೆಡವಿದವರಿಗೇ ಮಂದಿರ ಕಟ್ಟಲು ಅವಕಾಶ ಮಾಡಿಕೊಟ್ಟಿತು. ಈಗ ವಿಷಯ ನಿಜವಾದ ಧಾರ್ಮಿಕರ ಮತ್ತು ನ್ಯಾಯವಂತರ ಕೋರ್ಟಿನಲ್ಲಿದೆ. ಮಸೀದಿಯ ಕೆಳಗೆ ರಾಮಮಂದಿರವಿತ್ತೆಂಬುದು ಸುಳ್ಳೆಂದು ಎಎಸ್ಐ ಉತ್ಖನನ, ಅಲಹಬಾದ್ ಹೈಕೋರ್ಟು ಹಾಗೂ ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟಪಡಿಸಿದೆ. ಹಾಗಿದ್ದ ಮೇಲೆ ಸುಳ್ಳು ಉನ್ಮಾದ ಸೃಷ್ಟಿಸಿ ಮಸೀದಿ ಕೆಡವಿ ಮಂದಿರ ಕಟ್ಟಿರುವುದು ಅಧಾರ್ಮಿಕವಲ್ಲವೇ? ಅನೈತಿಕವಲ್ಲವೇ?
ಹಾಗೆ ನೋಡಿದರೆ ಅಯೋಧ್ಯೆಯಲ್ಲಿ ಮತ್ತು ಆಸುಪಾಸಿನಲ್ಲಿ ನೂರಾರು ರಾಮಮಂದಿರಗಳಿವೆ. ೧೫ನೇ ಶತಮಾನದ ತನಕ ಅಯೋಧ್ಯೆಯೇ ರಾಮಜನ್ಮಭೂಮಿಯೆಂಬ ಪ್ರಸ್ತಾಪವಿರಲಿಲ್ಲ. ತುಳಸಿದಾಸರ ‘ರಾಮಚರಿತಮಾನಸ’ದಲ್ಲಿ ಅಯೋಧ್ಯೆಯಲ್ಲಿನ ಬಾಬರಿ ಮಸೀದಿಯ ಸ್ಥಾನವೇ ರಾಮಜನ್ಮಸ್ಥಾನವೆಂಬ ಉಲ್ಲೇಖವಿಲ್ಲ. ತುಳಸಿದಾಸರು 1511-1623ರ ತನಕ ಜೀವಿಸಿದ್ದರು. 1528ರಲ್ಲಿ ರಾಮಜನ್ಮಭೂಮಿಯನ್ನು ಕೆಡವಿ ಬಾಬರಿ ಮಸೀದಿಯನ್ನು ಕಟ್ಟಿದ್ದರೆ ಅವರ ರಾಮಚರಿತಮಾನಸದಲ್ಲಿ ಅಥವಾ ಆ ನಂತರದ ಇತರ ಯಾವುದೇ ದಾಖಲೆಗಳಲ್ಲಿ ಇರಬೇಕಿತ್ತಲ್ಲವೇ?
ಅದರೆ ಬಾಬರಿ ಮಸೀದಿಯ ಕೆಳಗೇ ರಾಮಜನ್ಮಭೂಮಿಯಿತ್ತೆಂಬುದು ಈ ದೇಶದಲ್ಲಿ ಧರ್ಮವನ್ನು ಕೊಂದು ಹುಟ್ಟಿದ ಕೋಮುವಾದ, ಇಂದಿನ ಹಿಂದುತ್ವವಾದಿ ದಾಳಿಕೋರರು ಹುಟ್ಟಿಹಾಕುತ್ತಿರುವ ರಕ್ತಸಿಕ್ತ ರಾಜಕೀಯ ಪ್ರಚಾರವೇ ಹೊರತು ಸತ್ಯವಲ್ಲ.
ಹೀಗಾಗಿ ಬಾಬರಿ ಮಸೀದಿ ಕೆಡವಿ ಕಟ್ಟಲಾಗುತ್ತಿರುವ ಬಿಜೆಪಿಯ ರಾಮಂದಿರವನ್ನು ನೈಜ ಧಾರ್ಮಿಕ , ನೈತಿಕ ಹಿಂದೂಗಳೆಲ್ಲರೂ ಅಧರ್ಮದ ಸ್ಮಾರಕವೆಂದು ತಿರಸ್ಕರಿಸಿದರೆ ಮಾತ್ರ ಈ ದೇಶದಲ್ಲಿ ನ್ಯಾಯ, ನೀತಿ ಧರ್ಮಗಳು ಉಳಿಯಬಲ್ಲವು.