‘ಸೆಕ್ಯುಲರ್-ಸೋಶಿಯಲಿಸ್ಟ್’ : ಕೇವಲ ಪದಗಳೋ ಅಥವಾ ಈಡೇರದ ಸಂವಿಧಾನದೊಳಗಿನ ಅಂತರ್ಧಾರೆಯೋ?
ಭಾಗ-1
ಸಂಸತ್ ನಡಾವಳಿಯ ಕಾರ್ಯಸೂಚಿಯನ್ನು ವಿರೋಧ ಪಕ್ಷಗಳಿಂದಲೂ ರಹಸ್ಯವಾಗಿಟ್ಟು ಮೋದಿ ಸರಕಾರ ಹೊಸ ಸಂಸತ್ತಿನ ಭವನದೊಳಗೆ ನಡೆಸಿದ ಪ್ರಥಮ ವಿಶೇಷ ಅಧಿವೇಶನ ಮುಗಿದಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಪೋಸ್ಟ್ -ಡೇಟೆಡ್ ಚೆಕ್ ರೀತಿ, ಕನ್ನಡಿಯೊಳಗಿನ ಗಂಟಿನ ರೀತಿ ಮಂಡಿಸಿ, ಅದರಿಂದ ಪುಗಸಟ್ಟೆ ಪ್ರಚಾರ ಪಡೆದುಕೊಂಡಿದ್ದನ್ನು ಬಿಟ್ಟರೆ ಈ ಅಧಿವೇಶನವನ್ನು ಏಕೆ ಕರೆಯಲಾಗಿತ್ತು ಎಂಬುದು ವಿರೋಧ ಪಕ್ಷಗಳಿಗಿರಲಿ ಮೋದಿ-ಶಾರವರ ಕ್ಯಾಬಿನೆಟ್ ಸಹೋದ್ಯೋಗಿಗಳಿಗೂ ಸ್ಪಷ್ಟವಾಗಿರಲಿಕ್ಕಿಲ್ಲ.
ಹೊಸ ಭವನದಲ್ಲಿ ಮೊದಲನೇ ಅಧಿವೇಶನ ನಡೆಯುವಾಗಲೂ ರಾಷ್ಟ್ರಾಧ್ಯಕ್ಷೆ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸುವ ಶಿಷ್ಟಾಚಾರವನ್ನು ಮೋದಿ ಸರಕಾರ ಪಾಲಿಸಲಿಲ್ಲ. ಅದಕ್ಕೆ ಪ್ರಮುಖ ಕಾರಣ ಆಂತರ್ಯದಲ್ಲಿ ಮನುಧರ್ಮವನ್ನೇ ತುಂಬಿಕೊಂಡ ಮೋದಿ ಸರಕಾರಕ್ಕೆ ಇಂದಿನ ರಾಷ್ಟ್ರಾಧ್ಯಕ್ಷೆ ಮಹಿಳೆಯೂ, ಆದಿವಾಸಿಯೂ ಹಾಗೂ ವಿಧವೆಯೂ ಆಗಿರುವುದು ಅಮಂಗಳವೆನಿಸಿರಬಹುದು ಎಂದು ಇಡೀ ದೇಶವೇ ಆಕ್ಷೇಪಿಸುತ್ತಿದೆ. ಇದರಿಂದಾಗಿ ಹೊಸ ಸಂಸತ್ ಭವನದಲ್ಲಿ ಮೋದಿ ಸರಕಾರ ಅಂಬೇಡ್ಕರ್ ವಿರಚಿತ ಸಂವಿಧಾನಕ್ಕೆ ಬದಲಾಗಿ ಮನುಸ್ಮತಿಯೇ ಬುನಾದಿಯಾಗುಳ್ಳ ಹೊಸ ಸಂವಿಧಾನವನ್ನಾಗಿ ಜಾರಿ ಮಾಡಲಿದೆಯೇ ಎಂಬ ಅನುಮಾನವೂ ದಟ್ಟವಾಗುತ್ತಿದೆ.
ಈ ಅನುಮಾನಕ್ಕೆ ಮತ್ತೊಂದು ಬಲವಾದ ಕಾರಣವೂ ಇದೆ. ಹೊಸ ಸಂಸತ್ ಭವನದಲ್ಲಿ ನಡೆದ ಮೊದಲ ಅಧಿವೇಶನದ ಮೊದಲ ದಿನ ಮೋದಿ ಸರಕಾರ ಎಲ್ಲಾ ಸಂಸದರಿಗೂ ಸಂವಿಧಾನದ ಪ್ರತಿಯನ್ನು ಹಂಚಿತ್ತು. ಆದರೆ ಆ ಸಂವಿಧಾನದ ಪ್ರತಿಯ ಮುನ್ನುಡಿಯಲ್ಲಿ ಸಂವಿಧಾನ ರಚನಾ ಸಮಯದಿಂದಲೂ ಬಿಜೆಪಿ-ಸಂಘಪರಿವಾರ ವಿರೋಧಿಸಿಕೊಂಡು ಮತ್ತು ದ್ವೇಷಿಸಿಕೊಂಡು ಬಂದಿರುವ ‘ಸೆಕ್ಯುಲರ್’ (ಧರ್ಮ ನಿರಪೇಕ್ಷ) ಮತ್ತು ‘ಸೋಶಿಯಲಿಸ್ಟ್’ (ಸಮಾಜವಾದಿ) ಪದಗಳನ್ನು ಕೈಬಿಟ್ಟಿತ್ತು. ಇದರ ಬಗ್ಗೆ ಸಂಸತ್ತಿನಲ್ಲಿ ವಿರೋಧ ವ್ಯಕ್ತವಾದಾಗ ಬಿಜೆಪಿ ತಾನು ಹಂಚಿದ್ದು ಮೂಲ ಸಂವಿಧಾನವೆಂದೂ, ಮೂಲ ಸಂವಿಧಾನದ ಮುನ್ನುಡಿಯಲ್ಲಿ ‘ಸೆಕ್ಯುಲರ್-ಸೊಷಿಯಲಿಸ್ಟ್’ ಪದಗಳಿರಲಿಲ್ಲವೆಂದೂ, ಅದನ್ನು ಎಮರ್ಜೆನ್ಸಿ ಸಮಯದಲ್ಲಿ ಇಂದಿರಾ ಸರಕಾರ ಸೇರಿಸಿದ್ದೆಂದು ಎಂಬ ಅರ್ಧ ಸತ್ಯದ ಸಮಜಾಯಿಶಿಯ ಪ್ರಚಾರವನ್ನು ಅಬ್ಬರದಿಂದ ಮಾಡುತ್ತಿದೆ.
ಇದು ಹಾಲಿ ಸಂವಿಧಾನವನ್ನು ಸಾವಿರ ಇರಿತಗಳ ಮೂಲಕ ಗಾಯಗೊಳಿಸಿ ಸಾಯಿಸುವ ಬಿಜೆಪಿ-ಸಂಘಪರಿವಾರದ ಯೋಜಿತ ಷಡ್ಯಂತ್ರದ ಭಾಗವಾಗಿದೆ. ಆದ್ದರಿಂದಲೇ ಈ ಬಗ್ಗೆ ಮೋದಿ ಸರಕಾರ ಮತ್ತದರ ಪಟಾಲಂ ನಡೆಸುತ್ತಿರುವ ಸುಳ್ಳುಗಳ ಪ್ರಚಾರವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಮತ್ತು ಹಿಮ್ಮೆಟ್ಟಿಸುವ ಅಗತ್ಯವಿದೆ.
ಮೋದಿ ಸರಕಾರವು ‘ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ’ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ಮಾಡುತ್ತಿರುವ ಅಪಪ್ರಚಾರವನ್ನು ಅರ್ಥಮಾಡಿಕೊಳ್ಳಬೇಕೆಂದರೆ ನಮ್ಮ ಸಂವಿಧಾನದ ನೈಜ ಆಶಯಗಳನ್ನು ಅರ್ಥಮಾಡಿಕೊಳ್ಳಬೇಕು. ಅದರ ಭಾಗವಾಗಿರುವ ಹೇಗೆ ‘ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ’ ಎಂಬ ಪರಿಕಲ್ಪನೆಗಳನ್ನು ಹಾಗೂ ಆ ಪರಿಕಲ್ಪನೆಗಳು ಕೇವಲ ಸಂವಿಧಾನದ ಮುನ್ನುಡಿಯಲ್ಲಿ ಪದಗಳಾಗಿ ಮಾತ್ರವಲ್ಲದೆ ಇಡೀ ಸಂವಿಧಾನದ ಉದ್ದಕ್ಕೂ ಅಂತರ್ಗತ ಆಶಯವಾಗಿ, ಅಂತರ್ಧಾರೆಯಾಗಿ ಹರಿದಿದೆ ಎಂಬುದನ್ನು ಗ್ರಹಿಸಿಕೊಳ್ಳುವ ಅಗತ್ಯವಿದೆ.
ಅದಕ್ಕೂ ಮೊದಲು ಸಂವಿಧಾನದ ಮುನ್ನುಡಿಯಲ್ಲಿ ‘ಸೆಕ್ಯುಲರ್-ಸೋಷಿಯಲಿಸ್ಟ್’ ಪದ ಸೇರ್ಪಡೆಯಾದ ಬಗ್ಗೆ ಮೋದಿ ಸರಕಾರ ಹೇಳುತ್ತಿರುವ ಅರ್ಧ ಸತ್ಯದ ಸಾರವನ್ನು ಪರಿಶೀಲಿಸೋಣ.
42ನೇ ತಿದ್ದುಪಡಿ- ಅನ್ವರ್ಥ ಪದಗಳ ಸೇರ್ಪಡೆ, ಅನರ್ಥ ಪ್ರಕ್ರಿಯೆ
ಮೋದಿ ಸರಕಾರ ಹೇಳುತ್ತಿರುವುದರಲ್ಲಿ ಅರ್ಧ ಸತ್ಯವಿದೆ. ೧೯೫೦ರ ಜನವರಿ ೨೬ ರಂದು ಭಾರತದ ಜನರು ತಮಗೆ ತಾವೇ ಅರ್ಪಿಸಿಕೊಂಡ ಸಂವಿಧಾನದ ಮುನ್ನ್ನುಡಿಯಲ್ಲಿ ‘ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್’ ಪದಗಳಿರಲಿಲ್ಲ. ಅದನ್ನು ದೇಶದ ಮೇಲೆ ತುರ್ತುಸ್ಥಿತಿ ಹೇರಿದ ಸಂದರ್ಭದಲ್ಲಿ ಇಂದಿರಾಗಾಂಧಿ ಸರಕಾರ ಜಾರಿ ಮಾಡಿದ ೪೨ನೇ ಸಂವಿಧಾನ ತಿದ್ದುಪಡಿಯ ಮೂಲಕ ಸೇರಿಸಲಾಗಿತ್ತು. ಆ ತಿದ್ದುಪಡಿ ಮಾಡಿದ ಹಲವಾರು ಮಾರ್ಪಾಡುಗಳಲ್ಲಿ ಸಂವಿಧಾನದ ಮುನ್ನುಡಿಗೆ ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಪದಗಳ ಸೇರ್ಪಡೆಯೂ ಒಂದಾಗಿತ್ತು. ಇಂದಿರಾ ಅವರು ಜಾರಿ ಮಾಡಿದ ತುರ್ತುಸ್ಥಿತಿ ಈ ದೇಶದ ಪ್ರಜಾತಂತ್ರದ ಮೇಲೆ ನಡೆಸಿದ ಘೋರ ಹಲ್ಲೆ. ಹೀಗಾಗಿ ಸಂವಿಧಾನದ ಮುನ್ನುಡಿಗೆ ಇಂತಹ ಮಹತ್ತರ ಆಶಯಗಳ ಸೇರ್ಪಡೆಯನ್ನು ತುರ್ತುಸ್ಥಿತಿಯಂತಹ ಸರ್ವಾಧಿಕಾರದ ಸಂದರ್ಭದಲ್ಲಿ ಸೇರಿಸಿದ್ದು ಖೇದಕರ. ಇದು ಇಂದಿರಾ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೂ ಈ ಆಶಯಗಳ ಮಹತ್ವದ ಬಗ್ಗೆ ಎಷ್ಟು ಬದ್ಧತೆ ಇತ್ತು ಎಂಬ ಪ್ರಶ್ನೆಯನ್ನು ಮೂಡಿಸಲೇ ಬೇಕು.
ಆದರೆ ಆಗಲೂ ಆ ತಿದ್ದುಪಡಿಗಳನ್ನು ಇಂದಿರಾ ಸರಕಾರ ಸಂವಿಧಾನ ತಿದ್ದುಪಡಿಯೆಂಬ ಪ್ರಕ್ರಿಯೆಯ ಮೂಲಕ ಸೇರಿಸಿತು. ವಿರೋಧ ಪಕ್ಷದ ನಾಯಕರುಗಳನ್ನೆಲ್ಲ ಜೈಲಿಗಟ್ಟಿ ಸಂಸತ್ತಿನಲ್ಲಿ ಮಾತ್ರ ಚರ್ಚೆ ಎಂಬ ಪ್ರಹಸನವನ್ನು ನಡೆಸಿ ಇಂದಿರಾ ಸರಕಾರ ಈ ತಿದ್ದುಪಡಿ ಮಾಡಿತ್ತು. ಅಷ್ಟರ ಮಟ್ಟಿಗೆ ಆ ಪ್ರಕ್ರಿಯೆ ಹಾಸ್ಯಾಸ್ಪದವಾಗಿತ್ತು.
ಆದರೆ ಈಗ ಬಿಜೆಪಿ ಸರಕಾರ ಅದಕ್ಕಿಂತ ಹಾಸ್ಯಾಸ್ಪದವಾದ ಹಾಗೂ ಆತಂಕಕಾರಿಯಾದ ರೀತಿಯಲ್ಲಿ ವಿರೋಧ ಪಕ್ಷಗಳನ್ನು ಮತ್ತು ಸಂಸತ್ತನ್ನು ಗಣನೆಗೇ ತೆಗೆದುಕೊಳ್ಳದಂತೆ ತನಗಿಷ್ಟಬಂದಂತೆ ತಿದ್ದುಪಡಿ ಮಾಡಿದ ಸಂವಿಧಾನವನ್ನು ಹಂಚಿದೆ. ಅದೂ ಅಧಿವೇಶನ ನಡೆಯುವ ಬಾಗಿಲಿನಲ್ಲಿ!
ಇದು ತುರ್ತುಸ್ಥಿತಿಯಲ್ಲಿ ಇಂದಿರಾ ಸರಕಾರ ಸಂವಿಧಾನಕ್ಕೆ ಮಾಡಿದ ಅಪಮಾನಕ್ಕಿಂತ ಘನಘೋರವಾದ ಅಪಮಾನವಾಗಿದೆ.
ಸಂವಿಧಾನದ ಮುನ್ನುಡಿ-ಸಂವಿಧಾನದ ಅಂತರ್ಗತ ಭಾಗ
ಏಕೆಂದರೆ ಪ್ರಾರಂಭದಲ್ಲಿ ದೇಶದ ಸಂವಿಧಾನದಲ್ಲಿ ಮುನ್ನುಡಿಯ ಸ್ಥಾನವೇನು ಎಂಬ ಬಗ್ಗೆ ಸಾಕಷ್ಟು ಗೊಂದಲವಿತ್ತು.
ಆದರೆ
-1973ರ ಕೇಶವಾನಂದ ಭಾರತಿ ಪ್ರಕರಣದಲ್ಲಿ ಭಾರತದ ಸುಪ್ರೀಂ ಕೋರ್ಟಿನ 13 ಸದಸ್ಯರ ಪೀಠ ‘‘ಸಂವಿಧಾನದ ಮುನ್ನುಡಿಯು ಸಂವಿಧಾನದ ಅಂತರ್ಗತವಾದ ಭಾಗವಾಗಿದ್ದು ಅದು ಸಂವಿಧಾನದ ಮೂಲ ರಚನೆಗೆ ಸಂಬಂಧಿಸಿದ ವಿಷಯಗಳನ್ನೊಳಗೊಂಡಿದೆ’’ ಎಂದು ಸ್ಪಷ್ಟವಾಗಿ ಅಭಿಪ್ರಾಯಿಸಿತು. ಮುಂದುವರಿದು ‘‘ಸಂಸತ್ತಿಗೆ ಸಂವಿಧಾನದ ಮೂಲ ರಚನೆಯನ್ನು (basic structure of the constitution) ಬದಲಿಸುವ ಅಧಿಕಾರವಿಲ್ಲ’’ ಎಂದು ಅತ್ಯಂತ ಸ್ಪಷ್ಟವಾಗಿ ಘೋಷಿಸಿತು.
-1995ರಲ್ಲಿ ಜೀವವಿಮಾ ನಿಗಮ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಭಾರತದ ಸಂವಿಧಾನದ ಮುನ್ನುಡಿಯು ಸಂವಿಧಾನದ ಅಂತರ್ಗತ ಭಾಗವಾಗಿದ್ದು, ಅದು ಸಂವಿಧಾನದ ಮೂಲ ರಚನೆಯಾಗಿದೆ ಎಂದು ಸ್ಪಷ್ಟಪಡಿಸಿತು ಹಾಗೂ 1973ರಿಂದಲೂ ಸುಪ್ರೀಂ ಕೋರ್ಟ್ ಹತ್ತಾರು ಪ್ರಕರಣಗಳಲ್ಲಿ ಸಂವಿಧಾನದ ಮೂಲ ರಚನೆಗೆ ಸಂಸತ್ತು ತಿದ್ದುಪಡಿ ಮಾಡುವಂತಿಲ್ಲವೆಂದು ಪದೇಪದೇ ಆದೇಶಿಸುತ್ತಲೇ ಬಂದಿದೆ.
ಅಂದರೆ, ಸಾರದಲ್ಲಿ ಮುನ್ನುಡಿಯಲ್ಲಿರುವ ಅಂಶಗಳು ಸಂವಿಧಾನದ ಮೂಲ ರಚನೆಯ ಭಾಗವಾಗಿವೆ. ಆದರೂ ಮೋದಿ ಸರಕಾರ ಸಂವಿಧಾನದ ಮುನ್ನುಡಿಗೇ ಅರ್ಥಾತ್ ಸಂವಿಧಾನದ ಮೂಲ ರಚನೆಗೆ ಯಾವುದೇ ಸಾಂವಿಧಾನಿಕ ಪ್ರಕ್ರಿಯೆ ಇಲ್ಲದೆ ಬೇಕಾಬಿಟ್ಟಿ ತಿದ್ದುಪಡಿ ಮಾಡುವ ದಾರ್ಷ್ಟ್ಯ ತೋರುತ್ತಿದೆ.
ಮೂಲ ಸಂವಿಧಾನದ ಹೆಸರಲ್ಲಿ ಈವರೆಗೆ ಆಗಿರುವ 128 ತಿದ್ದುಪಡಿಗಳ ನಿರಾಕರಣೆ?
ಮೋದಿ ಪಾಳಯದ ಮತ್ತೊಂದು ಹುಸಿ ವಾದ. ತಾವು ಹಂಚಿದ್ದು ಮೂಲ ಸಂವಿಧಾನ. ಅದರಲ್ಲಿ ಈ ಸೇರ್ಪಡೆಗಳು ಇರಲಿಲ್ಲ ಎಂಬುದು. ಆದರೆ ಪ್ರಶ್ನೆಯೇನೆಂದರೆ ಮೊನ್ನೆ ಮಹಿಳಾ ಮೀಸಲಾತಿಯ ತಿದ್ದುಪಡಿಯನ್ನು ಸೇರಿಸಿ ಮೂಲ ಸಂವಿಧಾನಕ್ಕೆ ಈವರೆಗೆ 128 ತಿದ್ದುಪಡಿಗಳನ್ನು ಮಾಡಲಾಗಿದೆ. ಬಿಜೆಪಿ ಮೇಲ್ಜಾತಿ ಮಧ್ಯಮ ವರ್ಗಗಳಿಗೆಂದೇ ಜಾರಿ ಮಾಡಿರುವ ಮೀಸಲಾತಿ ತಿದ್ದುಪಡಿಯಾದ 103ನೇ ಸಂವಿಧಾನ ತಿದ್ದುಪಡಿಯೂ ಈ 128 ತಿದ್ದುಪಡಿಗಳಲ್ಲಿ ಒಂದು. ಈ ತಿದ್ದುಪಡಿಗಳಲ್ಲಿ 103ನೇ ತಿದ್ದುಪಡಿಯಂತಹ ಕೆಲವು ತಿದ್ದುಪಡಿಗಳನ್ನು ಹೊರತುಪಡಿಸಿದರೆ ಬಹುಪಾಲು ತಿದ್ದುಪಡಿಗಳು ಸಂವಿಧಾನದ ಮೂಲ ಆಶಯಗಳಾದ ಸಾಮಾಜಿಕ ನ್ಯಾಯದ ಆಶಯಗಳ ಮುಂದುವರಿಕೆಯಾಗಿದೆ.
ಮೂಲ ಸಂವಿಧಾನವೆಂದರೆ ಈ ತಿದ್ದುಪಡಿಗಳಿಲ್ಲದ ಸಂವಿಧಾನ ಎಂದಾಗುವುದಿಲ್ಲವೇ?
ಅಂದರೆ ಸಂವಿಧಾನದ ತಿದ್ದುಪಡಿಗಳ ಮೂಲಕ ಸಂವಿಧಾನವು ವಿಕಸನಗೊಂಡಿರುವುದರ ನಿರಾಕರಣೆ ಎಂದಾಗುವುದಿಲ್ಲವೇ? ಹಾಗೂ ಅದು ಭಾರತದ ಜನತೆ ಕಳೆದ 75 ವರ್ಷಗಳಲ್ಲಿ ಸಾಧಿಸಿರುವ ಸಾಂವಿಧಾನಿಕ ಮುನ್ನಡೆಗಳನ್ನು ತಿರಸ್ಕರಿಸುವುದು ಎಂದಾಗುವುದಿಲ್ಲವೇ?
ಹೀಗಾಗಿ ಬಿಜೆಪಿಯ ಮೂಲ ಸಂವಿಧಾನಕ್ಕೆ ಮರಳುವ ಉದ್ದೇಶ ಅದನ್ನು ಇನ್ನಷ್ಟು ಹಿಂದಕ್ಕೆ ಎಳೆಯುವ ಹುನ್ನಾರದ ಭಾಗವೇ ಆಗಿದೆ ಎಂಬುದರಲ್ಲಿ ಸಂದೇಹವಿಲ್ಲ.
ಇದರ ಜೊತೆಗೆ ಸಂವಿಧಾನದ ವಿರುದ್ಧ ನಡೆಸುತ್ತಿರುವ ಈ ದಾಳಿಗೆ ಅವರು ಸ್ವಯಂ ಅಂಬೇಡ್ಕರ್ ಅವರನ್ನೇ ತಪ್ಪಾಗಿ ಉಲ್ಲೇಖಿಸುತ್ತಾ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
‘ಸೆಕ್ಯುಲರ್-ಸಮಾಜವಾದಿ’ ಸೇರ್ಪಡೆಯನ್ನು ಅಂಬೇಡ್ಕರ್ ವಿರೋಧಿಸಿದ್ದರೇ?
ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನದ ಮುನ್ನುಡಿಯ ಬಗೆಗಿನ ಚರ್ಚೆಯನ್ನು ಅತ್ಯಂತ ಕೊನೆಗೆ ಕೈಗೆತ್ತಿಕೊಳ್ಳಲಾಗಿತ್ತು. ಈ ಬಗ್ಗೆ ಹಲವಾರು ಚರ್ಚೆಗಳು ನಡೆದು ೧೭-೧೦-೧೯೪೯ರಂದು ಸಂವಿಧಾನದ ಮುನ್ನುಡಿಯನ್ನು ಅಂಗೀಕರಿಸಲಾಗಿತ್ತು.
ಚರ್ಚೆಯ ಭಾಗವಾಗಿ ಸಂವಿಧಾನದ ಮುನ್ನುಡಿಯಲ್ಲಿ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಪದಗಳನ್ನು ಸೇರಿಸಲು ಕೆಲವು ಸದಸ್ಯರು ಆಗ್ರಹಪಡಿಸಿದ್ದರು. ಅದಕ್ಕೆ ಅಂಬೇಡ್ಕರ್ ಅವರು ‘‘ಆ ಎರಡೂ ಆಶಯಗಳು ನಮ್ಮ ಸಂವಿಧಾನದಲ್ಲಿ ಅಂತರ್ಧಾರೆಯಾಗಿ ಹರಿದಿರುವುದರಿಂದ ಅದನ್ನು ವಿಶೇಷವಾಗಿ ಉಲ್ಲೇಖಿಸುವ ಅಗತ್ಯವಿಲ್ಲ’’ ಎಂದು ಉತ್ತರಿಸಿದ್ದರೇ ವಿನಾ ಆ ಪ್ರಸ್ತಾಪಗಳನ್ನು ವಿರೋಧಿಸಿರಲಿಲ್ಲ.
ಉದಾಹರಣೆಗೆ ಕೆ.ಟಿ. ಶಾ ಎಂಬ ಸಂವಿಧಾನ ಸಭೆಯ ಮಾನ್ಯ ಸದಸ್ಯರು ಮುನ್ನುಡಿಯಲ್ಲಿ ಸಮಾಜವಾದ ಎಂಬ ಪದವನ್ನು ಸ್ಪಷ್ಟವಾಗಿ ಸೇರಿಸಬೇಕೆಂಬ ತಿದ್ದುಪಡಿಯನ್ನು ಸೂಚಿಸಿದಾಗ ಅಂಬೇಡ್ಕರ್ ಕೊಟ್ಟ ಉತ್ತರ ಇದನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ.
ಈ ಬಗ್ಗೆ 15-11-1948ರಂದು ಕೆ.ಟಿ. ಶಾ ಅವರ ಪ್ರಸ್ತಾವನೆಗೆ ದೀರ್ಘವಾಗಿ ಉತ್ತರಿಸುತ್ತಾ ಅಂಬೇಡ್ಕರ್ ಅವರು:
‘‘ಇಂದು ಶೋಷಕ ಬಂಡವಾಳಶಾಹಿ ಸಮಾಜಕ್ಕಿಂತ ಸಮಾಜವಾದಿ ಸಮಾಜ ಉತ್ತಮವೆಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಮುಂದಿನ ಪೀಳಿಗೆ ಬಂಡವಾಳಶಾಹಿ ಸಮಾಜಕ್ಕೆ ವಿರುದ್ಧವಾಗಿ ಸಮಾಜವಾದಕ್ಕಿಂತ ಉತ್ತಮವಾದ ಮತ್ತೊಂದು ವ್ಯವಸ್ಥೆಯನ್ನು ಹುಡುಕಬಹುದು.’’ ಮುಂದುವರಿದು ‘‘..ಅಷ್ಟು ಮಾತ್ರವಲ್ಲ. ಸಂವಿಧಾನದಲ್ಲಿ ಈಗ ಅಡಕಗೊಳಿಸಲಾಗಿರುವ ಪರಿಚ್ಛೇದ ೪ರ ಪ್ರಭುತ್ವ ನಿರ್ದೇಶನಾ ತತ್ವಗಳೆಲ್ಲಾ ಸಮಾಜವಾದಿ ಆಶಯಗಳನ್ನು ಪಾಲಿಸುವಂತೆ ಪ್ರಭುತ್ವಕ್ಕೆ ಮಾರ್ಗದರ್ಶನ ಮಾಡುತ್ತಿದೆ’’ ಎಂದು ಹೇಳುತ್ತಾರೆ.
ಹೀಗಾಗಿ ಅಂಬೇಡ್ಕರ್ ಅವರು ಸಂವಿಧಾನವು ಮತ್ತು ಅದರ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಪ್ರಭುತ್ವವು ಪಕ್ಕಾ ಸೆಕ್ಯುಲರ್ ಹಾಗೂ ಸಮಾಜವಾದಿಯಾಗಿಯೇ ಇರಬೇಕೆಂದು ನಿರೀಕ್ಷಿಸಿದ್ದರು. ಸಂವಿಧಾನದ ಮುನ್ನುಡಿಯಲ್ಲಿ ಅ ಪದಗಳಿರಬೇಕೇ ಬೇಡವೇ ಎಂಬ ಬಗ್ಗೆ ಅವರ ಅಭಿಪ್ರಾಯ ತಾಂತ್ರಿಕ ಸ್ವರೂಪದ್ದೇ ವಿನಾ ತಾತ್ವಿಕ ರೂಪದ್ದಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ.
( https://eparlib.nic.in/bitstream/123456789/ 763023/1/cad_15-11-1948.pdf ) ವಾಸ್ತವವಾಗಿ ಸಂವಿಧಾನವನ್ನು ಗಮನವಿಟ್ಟು ಓದಿದರೆ ‘ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ’ ಆಶಯಗಳು ಮತ್ತು ಅದಕ್ಕೆ ಸಂಬಂಧಪಟ್ಟ ಕಲಮುಗಳು ಮೂಲ ಸಂವಿಧಾನದ ಮುನ್ನುಡಿಯಲ್ಲೂ ಮತ್ತು ನಂತರದ ಭಾಗಗಳಲ್ಲೂ ಸ್ಪಷ್ಟವಾಗಿ ಉಲ್ಲೇಖಗೊಂಡಿರುವುದು ಕುರುಡರಿಗೂ ಕಂಡೀತು..
ಮೂಲ ಸಂವಿಧಾನ ಮತ್ತು ಸೆಕ್ಯುಲರಿಸಂ
ಸೆಕ್ಯುಲರಿಸಂ ಎಂಬುದಕ್ಕೆ ಜಗತ್ತಿನಲ್ಲಿ ಹಲವಾರು ರೀತಿಯ ಕ್ರಾಂತಿಕಾರಿ ಮತ್ತು ಮಧ್ಯಮಮಾರ್ಗಿ ವ್ಯಾಖ್ಯಾನಗಳಿವೆ. ಅವೆಲ್ಲವೂ ಸಂವಿಧಾನ ರಚನಾ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆಯಾಗಿವೆ. ಅಷ್ಟೆಲ್ಲಾ ಚರ್ಚೆ ಮತ್ತು ವಾದ ಮತ್ತು ಪ್ರತಿವಾದಗಳ ನಂತರ ಭಾರತದ ಸಂವಿಧಾನ ಸಭೆ ಒಪ್ಪಿಕೊಂಡ ಸೆಕ್ಯುಲರಿಸಂ ನ ವ್ಯಾಖ್ಯಾನದ ಅಂಶಗಳೆಂದರೆ:
- ಭಾರತದ ಪ್ರಭುತ್ವ ಯಾವ ಒಂದು ಮತಧರ್ಮವನ್ನೂ ಪಾಲಿಸುವುದಿಲ್ಲ.
-ಭಾರತದ ಪ್ರಭುತ್ವ ದೇಶದಲ್ಲಿ ಎಲ್ಲಾ ಮತಧರ್ಮಗಳೊಂದಿಗೂ ಸಮಾನ ಸಾಮೀಪ್ಯವನ್ನು ಕಾಪಾಡಿಕೊಳ್ಳುತ್ತದೆ.
-ಭಾರತದ ಪ್ರಭುತ್ವ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ತಾನೂ ಒಪ್ಪುವ ಮತಧರ್ಮವನ್ನು ಅನುಸರಿಸುವ ಅಥವಾ ಅನುಸರಿಸದಿರುವ ಸ್ವಾತಂತ್ರ್ಯವನ್ನು ನೀಡುತ್ತದೆ.
-ಭಾರತದ ಪ್ರಭುತ್ವ ವ್ಯಕ್ತಿಯ ಮತಧರ್ಮವನ್ನು ಆಧರಿಸಿ ಯಾವುದೇ ತಾರತಮ್ಯವನ್ನು ಮಾಡುವುದಿಲ್ಲ.
ಇದನ್ನೇ ಭಾರತದ ಸಂವಿಧಾನದ ಆರ್ಟಿಕಲ್ 14, 15 , 25, 26, ಮತ್ತು 27 ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಸ್ಪಷ್ಟ ಪಡಿಸುತ್ತದೆ. ಉದಾಹರಣೆಗೆ ಆರ್ಟಿಕಲ್ 25 ಹೀಗೆ ಹೇಳುತ್ತದೆ:
‘‘25. Freedom of conscience and free profession, practice and propagation of religion
(1) Subject to public order, morality and health and to the other provisions of this Part, all persons are equally entitled to freedom of conscience and the right freely to profess, practise and propagate religion''
(ಅಂದರೆ, ಭಾರತದ ಪ್ರಭುತ್ವವು ಪ್ರತಿಯೊಬ್ಬ ವ್ಯಕ್ತಿಯ ಆತ್ಮ ಸಾಕ್ಷಿಯ ಸ್ವಾತಂತ್ರ್ಯ ಹಾಗೂ ತಾನು ಒಪ್ಪುವ ಮತಧರ್ಮದ ಪ್ರತಿಪಾದನೆ, ಆಚರಣೆ ಮತ್ತು ಪ್ರಚಾರದ ಸ್ವಾತಂತ್ರ್ಯವನ್ನು ಖಾತರಿ ಮಾಡುತ್ತದೆ)
ಇದನ್ನೇ ಅತ್ಯಂತ ಸ್ಪಷ್ಟವಾಗಿ ಮೂಲ ‘ಸಂವಿಧಾನದ ಮುನ್ನುಡಿ’ಯಲ್ಲಿ ಹೀಗೆ ಹೇಳಲಾಗಿದೆ:
‘‘... ಭಾರತದ ಎಲ್ಲಾ ಪ್ರಜೆಗಳಿಗೆ ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ದೊರಕಿಸುವುದಕ್ಕಾಗಿ ಸಂವಿಧಾನವನ್ನು ರೂಪಿಸಲಾಗಿದೆ’’ ಎಂದು ‘ಸಂವಿಧಾನದ ಮುನ್ನುಡಿ’ ಯಾವುದೇ ಅನುಮಾನಕ್ಕೆ ಅವಕಾಶವಿಲ್ಲದಂತೆ ಘೋಷಿಸುತ್ತದೆ.
ಈ ಮೇಲಿನ ವಿವರಗಳನ್ನೇ ‘ಸೆಕ್ಯುಲರಿಸಂ’ ಎಂದು ಒಂದೇ ಪದದಲ್ಲಿ ಹೇಳಲಾಗುತ್ತದೆ.. ಹಾಗಿದ್ದಲ್ಲಿ ಮೂಲ ಸಂವಿಧಾನದಲ್ಲಾಗಲೀ, ಮುನ್ನುಡಿಯಲ್ಲಾಗಲೀ ಸೆಕ್ಯುಲರಿಸಂ ಇರಲಿಲ್ಲ ಎಂದು ಹೇಗೆ ಹೇಳಲು ಸಾಧ್ಯ?
ವಿವರಗಳನ್ನು ಉಳಿಸಿಕೊಂಡು ಅದರ ಶೀರ್ಷಿಕೆಯನ್ನು ಕಿತ್ತುಹಾಕುವುದರ ಹಿಂದಿನ ಹುನ್ನಾರವೇನಿರಬಹುದು?