1924ರ ಬೆಳಗಾವಿ ಅಧಿವೇಶನದಲ್ಲಿ ಹಿಂದೂ ಮಹಾಸಭಾದ ದಲಿತ ದ್ರೋಹ!
ಭಾಗ- 2
‘ಪ್ರತ್ಯೇಕ ಪ್ರಾತಿನಿಧ್ಯ ಹಿಂದೂ ವಿರೋಧಿ’
- ಹಿಂದೂ ಮಹಾಸಭಾ
1924ರ ಬೆಳಗಾವಿಯ ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷತೆಯನ್ನು ಕಾಂಗ್ರೆಸ್‌ನ ಮುಖಂಡರೂ ಹಾಗೂ ಅದೇ ಸಮಯದಲ್ಲಿ ಹಿಂದೂ ಮಹಾಸಭಾದ ಸಂಸ್ಥಾಪಕರೂ ಆಗಿದ್ದ ಮದನಮೋಹನ ಮಾಳವೀಯ ಅವರು ವಹಿಸಿಕೊಳ್ಳುತ್ತಾರೆ. ಆ ಸಭೆಗೆ ಗಾಂಧಿ, ಅಲಿ ಸಹೋದರರು, ಮೋತಿಲಾಲ್ ನೆಹರೂ ಇನ್ನಿತರ ಮುಖಂಡರೂ ವೀಕ್ಷಕರಾಗಿ ಭಾಗವಹಿಸುತ್ತಾರೆ. ಅಧ್ಯಕ್ಷ ಭಾಷಣದಲ್ಲಿ ಮಾಳವೀಯ ಅವರು ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯವನ್ನು ಖಂಡತುಂಡವಾಗಿ ವಿರೋಧಿಸುತ್ತಾರೆ ಹಾಗೂ ಹಿಂದೂ ಆಧಿಪತ್ಯವನ್ನು ಖಾತರಿ ಮಾಡುವ ಹಾಗೂ ಯಾವುದೇ ಕೊಮು ಮೀಸಲಾತಿ ಮತ್ತು ಅಸ್ಪಶ್ಯ ಮೀಸಲಾತಿಯಿಲ್ಲದ ನೇರ ಚುನಾವಣಾ ಪದ್ಧತಿಯನ್ನು ಆಗ್ರಹಿಸುತ್ತಾರೆ. ಇದರ ಜೊತೆಗೆ ಮುಂದೆ ಸಂಭವಿಸಬಹುದಾದ ಯಾವುದೇ ರೀತಿಯ ಸಂವಿಧಾನ ಸುಧಾರಣೆಗಳ ಬಗ್ಗೆ ಹಿಂದೂಗಳ ಕಾರ್ಯಸೂಚಿಯನ್ನು ಪ್ರತ್ಯೇಕವಾಗಿ ರೂಪಿಸಿಕೊಳ್ಳಲು ಬೆಳಗಾವಿ ಅಧಿವೇಶನದಲ್ಲಿ ನಿರ್ಣಯಿಸುತ್ತಾರೆ.
ಹೀಗೆ 1924ರ ಬೆಳಗಾವಿ ಅಧಿವೇಶನದಲ್ಲಿ ಹಿಂದೂ ಮಹಾಸಭಾವು ಅಂಬೇಡ್ಕರ್ ಅವರ ನೇತೃತ್ವದಲ್ಲಿ ಪ್ರತ್ಯೇಕ ಪ್ರಜ್ಞಾವಂತ ಸಮುದಾಯ ಆಗ್ರಹಿಸುತ್ತಿದ್ದ ಅಸ್ಪಶ್ಯ ಅಸ್ಮಿತೆ, ಸ್ವಾಯತ್ತ ಸ್ವಾಭಿಮಾನಿ ರಾಜಕಾರಣವನ್ನು ತಿರಸ್ಕರಿಸುತ್ತದೆ ಮತ್ತು ಬೆಳಗಾವಿ ಅಧಿವೇಶನದ ನೆರಳಲ್ಲೇ ಹಿಂದೂ ಮಹಾ ಸಭಾ ತನ್ನ ಮುಂದಿನ ದ್ವೇಷಸಿಕ್ತ ಆಕ್ರಮಣಕಾರಿ ಹಿಂದುತ್ವ ರಾಜಕಾರಣಕ್ಕೆ ಬೇಕಾದ ರಾಜಕೀಯ ಘೋಷಣೆಗಳನ್ನು ರೂಪಿಸಿಕೊಳ್ಳುತ್ತದೆ.
ಈಗ ಸಂವಿಧಾನ ಸನ್ಮಾನ ಅಭಿಯಾನದ ಹೆಸರಲ್ಲಿ ತಾವೇ ನಿಜವಾದ ದಲಿತ ಸ್ನೇಹಿತರು ಮತ್ತು ಸಂವಿಧಾನ ಪ್ರೇಮಿಗಳು ಎಂದು ಪ್ರಚಾರ ಮಾಡುತ್ತಿರುವ ಸಂಘಿಗಳು ತಮ್ಮ ಪೂರ್ವಜರಾದ ಹಿಂದೂ ಮಹಾಸಭಾ 1924ರ ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್‌ನ ಜೊತೆ ಸೇರಿ ದಲಿತರ ಸ್ವಾಭಿಮಾನಿ ರಾಜಕಾರಣಕ್ಕೆ ಮಾಡಿದ ದ್ರೋಹದ ಬಗ್ಗೆ ಏನು ಹೇಳುತ್ತಾರೆ?
ಸ್ವತಂತ್ರ ದಲಿತ ಅಸ್ಮಿತೆಯ ವಿರುದ್ಧ ಮುಂದುವರಿದ ಹಿಂದುತ್ವ ಕುತಂತ್ರಗಳು
ಮುಂದೆ ದುಂಡು ಮೇಜಿನ ಸಭೆಯಲ್ಲಿ ಬ್ರಿಟಿಷರು ತಮ್ಮ ಅವಕಾಶವಾದಿ ರಾಜಕಾರಣದ ಭಾಗವಾಗಿ ಅಸ್ಪಶ್ಯರಿಗೆ ಪ್ರತ್ಯೇಕ ಪ್ರಾತಿನಿಧ್ಯಕ್ಕೆ ಒಪ್ಪಿಕೊಂಡರೂ, ಅದರ ವಿರುದ್ಧ ಗಾಂಧಿ ಯರವಾಡ ಜೈಲಿನಲ್ಲಿ ಆಮರಣ ಉಪವಾಸ ಕುಳಿತರು. ಆ ಮೂಲಕ ಸವರ್ಣೀಯ ಕಾಂಗ್ರೆಸ್ ಸೃಷ್ಟಿಸಿದ ಭಯೋತ್ಪಾದಕ ವಾತಾವರಣದಿಂದಾಗಿ ಅಂಬೇಡ್ಕರ್ ದುಂಡು ಮೇಜಿನಲ್ಲಿ ಗಳಿಸಿದ ಹಕ್ಕುಗಳನ್ನು ಬಿಟ್ಟುಕೊಡಬೇಕಾಯಿತು.
ಗಾಂಧಿ ನೇತೃತ್ವದಲ್ಲಿ ನಡೆದ ಈ ದಲಿತ ದ್ರೋಹಕ್ಕೆ ಮತ್ತು ಸ್ವತಂತ್ರ ರಾಜಕೀಯ ರಾಜಕಾರಣವನ್ನು ಸವರ್ಣೀಯ ಹಿಂದೂಗಳ ಹಂಗಿಗೆ ಒಳಪಡಿಸಿದ ಈ ಅನ್ಯಾಯಯುತ ಪೂನಾ ಒಪ್ಪಂದಕ್ಕೆ ಹಿಂದೂಗಳ ಪರವಾಗಿ ಸಹಿ ಹಾಕಿದ್ದು ಇದೇ ಮದನಮೋಹನ ಮಾಳವೀಯ ಅವರೇ. ಆನಂತರ ಅಂಬೇಡ್ಕರ್ ಹಿಂದೂ ಧರ್ಮ ತೊರೆಯುತ್ತೇನೆಂದು ಘೋಷಿಸಿದಾಗ ಮತ್ತು 1956ರಲ್ಲಿ ಬೌದ್ಧವನ್ನು ಅಪ್ಪಿಕೊಂಡಾಗ ಅವರನ್ನು ಹೀಯಾಳಿಸಿದ್ದು ಮತ್ತು ದಲಿತ ಸಮುದಾಯಕ್ಕೆ ಬೆದರಿಕೆ ಒಡ್ಡಿದ್ದು ಕೂಡ ಇದೇ ಹಿಂದೂ ಮಹಾಸಭಾವೇ.
1946ರಲ್ಲಿ ಸಂವಿಧಾನ ಸಭೆಗೆ ಪ್ರಾಂತೀಯ ಸಭೆಗಳಿಂದ ಆಯ್ಕೆ ಮಾಡುವ ಯೋಜನೆ ಘೋಷಿಸಿದಾಗ ಆವರೆಗೆ ತಾವು ಅಸ್ಪಶ್ಯರ ಪ್ರತ್ಯೇಕ ಪ್ರಾತಿನಿಧ್ಯದ ಪರ ಎಂದು ಸೋಗುಹಾಕಿದ್ದ ಬ್ರಿಟಿಷರು ದಿಢೀರನೆ ಹಿಂದೆ ಸರಿದು ಅಸ್ಪಶ್ಯರ ನಿಜವಾದ ಪ್ರತಿನಿಧಿ ಕಾಂಗ್ರೆಸೇ ಎಂಬ ಪ್ರತಿಪಾದನೆಯನ್ನು ಒಪ್ಪಿಕೊಂಡುಬಿಟ್ಟರು. ಆ ಮೂಲಕ ಅಂಬೇಡ್ಕರ್‌ಗೆ ಮತ್ತು ಅಸ್ಪಶ್ಯ ಸಮುದಾಯದ ಭವಿಷ್ಯಕ್ಕೆ ದ್ರೋಹ ಬಗೆದರು.
ಮತ್ತೊಂದು ಕಡೆ ಅಂಬೇಡ್ಕರ್ ಅವರು ಪ್ರಾಂತೀಯ ಸಭೆಗಾಗಲೀ ಮತ್ತು ಅಲ್ಲಿಂದ ಸಂವಿಧಾನ ಸಭೆಗೆ ಆಯ್ಕೆಯಾಗದಂತೆ ಕಾಂಗ್ರೆಸ್ ಕುತಂತ್ರ ಮಾಡಿದರೆ, ಅಂಬೇಡ್ಕರ್ ಅವರನ್ನು ಬಂಗಾಳ ಪ್ರಾಂತದಿಂದ ಆಯ್ಕೆ ಮಾಡುವ ಜೋಗೆಂದ್ರ ನಾಥ್ ಮಂಡಲರ ನೇತೃತ್ವದ ಪ್ರಯತ್ನಗಳನ್ನು ಹಿಂಸಾತ್ಮಕವಾಗಿ ಸೋಲಿಸಲು ಹಿಂದೂ ಮಹಾಸಭಾ ವಿಫಲ ಪ್ರಯತ್ನ ಮಾಡುತ್ತದೆ.
ಅಂಬೇಡ್ಕರ್ ಅವರ ಸ್ವತಂತ್ರ ಸ್ವಾಭಿಮಾನಿ ಅಸ್ಪಶ್ಯ ಅಸ್ಮಿತೆಯ ರಾಜಕಾರಣದ ಬಗ್ಗೆ ಮಾಳವೀಯ ಮತ್ತು ಮಹಾಸಭಾಗೆ ಎಷ್ಟು ದ್ವೇಷವಿತ್ತು ಎಂಬುದಕ್ಕೆ ಮತ್ತೊಂದು ಹೀನಾಯ ಉದಾಹರಣೆಯಿದೆ.
1942-46ರವರೆಗೆ ವೈಸ್‌ರಾಯ್ ಕೌನ್ಸಿಲ್‌ನ ಸದಸ್ಯರಾಗಿದ್ದ ಅಂಬೇಡ್ಕರ್ ಅವರು ಅಸ್ಪಶ್ಯರಲ್ಲಿ ಶಿಕ್ಷಣವನ್ನು ಹೆಚ್ಚಿಸಲು ಅದರಲ್ಲೂ ಉನ್ನತ ಶಿಕ್ಷಣವನ್ನು ಹೆಚ್ಚಿಸಲು ಮಹಾರಾಷ್ಟ್ರದಲ್ಲಿ ಪೀಪಲ್ಸ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸುತ್ತಾರೆ. ಅದರ ವತಿಯಿಂದ ಮುಂಬೈನಲ್ಲಿ ಸಿದ್ಧಾರ್ಥ ಕಾಲೇಜನ್ನು ಸ್ಥಾಪಿಸುತ್ತಾರೆ, ಅದಕ್ಕೆ ವೈಸರಾಯ್ ಸರಕಾರದಿಂದ 3 ಲಕ್ಷ ಅನುದಾನವನ್ನು ಪಡೆದುಕೊಳ್ಳುತ್ತಾರೆ.
1946ರಲ್ಲಿ ಶಾಸನ ಸಭೆಗೆ ಚುನಾವಣೆಗಳು ನಡೆದ ನಂತರ ಕಾಂಗ್ರೆಸ್‌ನಿಂದ ಪ್ರತಿನಿಧಿಯಾಗಿ ಆಯ್ಕೆಯಾಗುವ ಮದನಮೋಹನ ಮಾಳವೀಯ ಅವರ ಮಗ ಪಂಡಿತ ಗೋವಿಂದ ಮಾಳವೀಯ ಅವರು ಶಾಸನ ಸಭೆಯಲ್ಲಿ ಅಸ್ಪಶ್ಯರಿಗೆ ಮಾತ್ರ ಕಾಲೇಜನ್ನು ನಡೆಸುವುದು ಪ್ರತ್ಯೇಕತಾವಾದವೆಂದೂ, ಅಂತಹ ಪ್ರತ್ಯೇಕತವಾದಿ ಕಾಲೇಜಿಗೆ ಸರಕಾರ ಅನುದಾನ ಕೊಡುವುದು ಕಾನೂನು ಬಾಹಿರವೆಂದು ಪ್ರಶ್ನಿಸುತ್ತಾರೆ.
ಇದಕ್ಕೆ 1946ರ ಮಾರ್ಚ್ 26ರಂದು ಶಾಸನ ಸಭೆಯಲ್ಲೇ ಉತ್ತರಕೊಡುವ ಅಂಬೇಡ್ಕರ್ ಅವರು, ಗಾಜಿನ ಮನೆಯಲ್ಲಿರುವರು ಮತ್ತೊಬ್ಬರ ಮನೆಗೆ ಕಲ್ಲು ಹೊಡೆಯಬಾರದೆಂದು ಎಚ್ಚರಿಸುತ್ತಾರೆ. ಮೊದಲನೆಯದಾಗಿ ಸಿದ್ಧಾರ್ಥ ಕಾಲೇಜು ಕೇವಲ ಅಸ್ಪಶ್ಯರಿಗಾಗಿ ಮಾತ್ರ ನಡೆಸುತ್ತಿರುವ ಕಾಲೇಜಲ್ಲವೆಂದು ಸ್ಪಷ್ಟಪಡಿಸುತ್ತಾರೆ.
ಆನಂತರ ಈ ಬ್ರಾಹ್ಮಣೀಯ ಮಹಾಸಭಾದ ಸೋಗಲಾಡಿತನವನ್ನು ಬಯಲುಪಡಿಸುವ ಅಂಬೇಡ್ಕರ್, ಗೋವಿಂದ ಮಾಳವೀಯ ಅವರ ತಂದೆ ಮದನಮೋಹನ ಮಾಳವೀಯ ಅವರು ಸ್ಥಾಪಿಸಿದ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಹೇಗೆ ಕೇವಲ ಹಿಂದೂಗಳ ಸಂಸ್ಥೆಯಲ್ಲ, ಬದಲಿಗೆ ಹಿಂದೂಗಳಲ್ಲಿ ಒಂದು ಸಣ್ಣ ಸಮುದಾಯವಾದ ಬ್ರಾಹ್ಮಣರಿಗೆ ಮಾತ್ರ ಸೀಮಿತವಾದ ಸಂಸ್ಥೆಯಾಗಿದೆ ಎಂದು ಬಯಲು ಮಾಡುತ್ತಾರೆ. ಹಿಂದೂ ಧರ್ಮದ ಪಾಠವನ್ನು ವೇದಪಾರಂಗತರಾದರೂ ಬ್ರಾಹ್ಮಣೇತರರು ಮಾಡಬಾರದೆಂದು 1916ರಲ್ಲಿ ಬನಾರಸ್ ವಿಶ್ವ ವಿದ್ಯಾನಿಲಯ ಮಾಡಿದ ನಿರ್ಣಯವನ್ನು ನೆನಪಿಸುತ್ತಾರೆ. ಕೆಲವು ತಿಂಗಳ ಹಿಂದೆ ಹಿಂದೂ ಧರ್ಮಶಾಸ್ತ್ರದ ಅಧ್ಯಯನಕ್ಕೆ ಪ್ರವೇಶವನ್ನು ನಿರಾಕರಿಸಿದ್ದನ್ನು ವಿರೋಧಿಸಿ ಮೇಲ್ಜಾತಿ ಕಾಯಸ್ತ ವಿದ್ಯಾರ್ಥಿನಿ ಸತ್ಯಾಗ್ರಹ ಮಾಡಿದ್ದನ್ನು ನೆನಪಿಸುತ್ತಾರೆ. ಇದಕ್ಕಿಂತ ಬೇರೆ ಪ್ರತ್ಯೇಕತವಾದ ಹಾಗೂ ಹಿಂದೂ ಮಹಾಸಭೆಯವರ ಸೋಗಲಾಡಿತನ ಮತ್ತೊಂದು ಇದೆಯೇ ಎಂದೂ ಪ್ರಶ್ನಿಸುತ್ತಾರೆ.
(Dr. Babasaheb Ambedkar Writings and Speeches, Vol. 10, .354)
ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂಭ್ರಮ ನಡೆಯುವಾಗ ಅಂಬೇಡ್ಕರ್ ಮತ್ತು ಸಂವಿಧಾನದ ನಿಜವಾದ ನಿಷ್ಠರು ನಾವೇ ಎಂದು ಅಭಿಯಾನ ನಡೆಸುತ್ತಿರುವ ಸಂಘಿಗಳು ಇವೆಲ್ಲವನ್ನು ಬಹಿರಂಗವಾಗಿ ಒಪ್ಪಿಕೊಂಡು ಕ್ಷಮೆ ಕೇಳಬಲ್ಲರೇ?
ಕನಿಷ್ಠ ಈಗಲಾದರೂ ಶೋಷಿತ ತಳಸಮುದಾಯ ಈ ಬ್ರಾಹ್ಮಣೀಯ ಹಿಂದುತ್ವವಾದಿಗಳ ದಲಿತ ಪ್ರೇಮದ ಸೋಗಲಾಡಿತನವನ್ನು ಅರಿಯಬಲ್ಲರೇ?
ನಿಜವಾದ ಬ್ರಾಹ್ಮಣಶಾಹಿ ವಿರೋಧಿ, ಬಂಡವಾಳಶಾಹಿ ವಿರೋಧಿ- ಪ್ರಬುದ್ಧ ಸಮಾಜವಾದಿ ವಿಮೋಚನಾ ಸಂಗ್ರಾಮಕ್ಕೆ ಮುಂದಾಗಬಲ್ಲರೇ?