ವಿನಾಶಕ ಮೋದಿ ದಶಕ: ಬರ್ಬರಗೊಂಡ ಭಾರತದ ದುರ್ಭರ ವರದಿಗಳು
ಭಾಗ- 1
ಒಂದು ಸರಕಾರ ನಿರಂತರವಾಗಿ ಹತ್ತು ವರ್ಷ ಬಹುಮತದಿಂದ ಆಡಳಿತ ನಡೆಸಿದರೆ, ಒಂದು ದೇಶದ ಇತಿಹಾಸ ಮತ್ತು ವರ್ತಮಾನವನ್ನು ಬದಲಿಸಿಬಿಡಬಹುದು. 1984ರ ನಂತರ ಅಂತಹ ಅವಕಾಶ ಸಿಕ್ಕಿದ್ದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ. ಆದರೆ ಮೋದಿ ಸರಕಾರ ತನಗೆ ಸಿಕ್ಕ ಅವಕಾಶದಲ್ಲಿ ಭಾರತವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದಿರಲಿ, ಭಾರತವನ್ನು ಚುನಾವಣಾ ಸರ್ವಾಧಿಕಾರವನ್ನಾಗಿ ಮಾಡಿಬಿಟ್ಟಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೋದಿ ದಶಕ (2014-2024-?) ಒಂದು ಅತ್ಯಂತ ದುರ್ಭರ ದಶಕವಾಗಿ ದಾಖಲಾಗಲಿದೆ. ಭಾರತದ ಮತ್ತು ಅಂತರ್‌ರಾಷ್ಟ್ರೀಯ ಘನತೆಯುಳ್ಳ ಸ್ವತಂತ್ರ ಸಂಸ್ಥೆಗಳು ಭಾರತದ ರಾಜಕೀಯ, ಸಾಮಾಜಿಕ, ಮಾನವ ಅಭಿವೃದ್ಧಿ, ಪ್ರಜಾತಾಂತ್ರಿಕ ಗುಣಮಟ್ಟಗಳ ಬಗ್ಗೆ ಮಾಡಿರುವ ಅಧ್ಯಯನಗಳು ಭಾರತವು ಮೋದಿ ದಶಕದಲ್ಲಿ ಅಧಃಪತನದತ್ತ ಸರಿಯುತ್ತಿವೆ ಎಂದು ಸಾರಿ ಸಾರಿ ಹೇಳುತ್ತಿವೆ.
ಇತ್ತೀಚೆಗೆ ಬಿಡುಗಡೆಯಾದ ಮಾಧ್ಯಮ ಸ್ವಾತಂತ್ರ್ಯದ ಸೂಚ್ಯಂಕವಂತೂ ಭಾರತದಲ್ಲಿನ ಮಾಧ್ಯಮ ಸ್ವಾತಂತ್ರ್ಯದ ಪರಿಸ್ಥಿತಿ ನೇಪಾಳ, ಪಾಕಿಸ್ತಾನ ಮತ್ತು ಫೆಲೆಸ್ತೀನ್‌ಗಿಂತ ಹೀನಾಯವಾಗಿದೆ ಎಂದು ದಾಖಲಿಸಿದೆ.
ಸಾಮಾನ್ಯವಾಗಿ ಒಂದು ಪ್ರಜಾತಾಂತ್ರಿಕ ಸರಕಾರವು ತನ್ನ ಆಡಳಿತವು ಜನಪರವಾಗಿದೆಯೇ ಇಲ್ಲವೇ ಎಂಬ ಬಗ್ಗೆ ಮೂರನೇ ಮತ್ತು ತಟಸ್ಥ ವರದಿಯನ್ನು ಆಧರಿಸಿರುತ್ತದೆ. ತಮ್ಮ ಆಡಳಿತವೇ ಕೊಡುವ ವರದಿಯು ಅಧಿಕಾರಸ್ಥರನ್ನು ಓಲೈಸುವ ದೃಷ್ಟಿಕೋನವನ್ನು ಹೊಂದಿರುತ್ತದೆ.-ಸತ್ಯಕ್ಕೆ ಹತ್ತಿರವಾಗಿರುವುದಿಲ್ಲ ಎಂಬುದು ಅದರ ಹಿಂದಿನ ತರ್ಕ.
ಆದರೆ ಒಂದು ಸರ್ವಾಧಿಕಾರಿ ಸರಕಾರಕ್ಕೆ ಸತ್ಯ ಮತ್ತು ಜನಹಿತಕ್ಕಿಂತ ಸುಳ್ಳು ಮತ್ತು ಅಧಿಕಾರವೇ ಜೀವನಾಡಿ. ಹೀಗಾಗಿ ಅವು ಯಾವುದೇ ಮೂರನೇ ಅಥವಾ ತಟಸ್ಥ ವರದಿಗಳಿಗೆ ಅವಕಾಶವನ್ನೇ ಕೊಡುವುದಿಲ್ಲ. ಅಂತಹ ವರದಿಗಳನ್ನು ಒಪ್ಪಿಕೊಳ್ಳುವುದೂ ಇಲ್ಲ.
ಕಳೆದ ಐದಾರು ವರ್ಷಗಳಿಂದ ಮೋದಿ ಸರಕಾರವೂ ಇದೇ ಧೋರಣೆಯನ್ನು ಅನುಸರಿಸಿಕೊಂಡು ಬಂದಿದೆ. ಮೋದಿ ಸರಕಾರದ ಸಾಧನೆಯನ್ನು ಒಪ್ಪಿಕೊಳ್ಳದ ಎಲ್ಲ ಅಂತರ್‌ರಾಷ್ಟ್ರೀಯ ವರದಿಗಳನ್ನು ಅದು ತಿರಸ್ಕರಿಸಿದೆ. ಕೇವಲ ವಿದೇಶಿ ವರದಿಗಳನ್ನಲ್ಲ. ತನ್ನದೇ ಸರಕಾರದ ಅಧೀನ ಸಂಸ್ಥೆಗಳು ಮೋದಿ ಗಾಥೆಗೆ ಅಪಸ್ವರ ತೆಗೆದರೆ ಅಂತಹ ವರದಿಯನ್ನೂ ಮೋದಿ ಸರಕಾರ ತಿರಸ್ಕರಿಸುವುದು ಮಾತ್ರವಲ್ಲ, ಸಂಸ್ಥೆಗಳ ಮುಖ್ಯಸ್ಥರನ್ನೂ ಅಮಾನತು, ವಜಾ ಅಥವಾ ವರ್ಗಾವಣೆ ಮಾಡುತ್ತಾ ಬಂದಿದೆ.
ಹೀಗಾಗಿ ಮೋದಿಯ ಭಜನೆ ಮಾಡುವ ಭಾರತ ಸರಕಾರದ ಅಂಕಿಅಂಶಗಳು ಈಗ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅವಹೇಳನಕ್ಕೆ ಗುರಿಯಾಗುತ್ತಿವೆ. ಅಂತರ್‌ರಾಷ್ಟ್ರೀಯ ಮಟ್ಟದ ಯಾವ ಘನತೆಯುಳ್ಳ ಸಂಸ್ಥೆಗಳೂ ಮೋದಿ ಸರಕಾರದ ಅಂಕಿಅಂಶಗಳನ್ನು ವಿಶ್ವಾಸಾರ್ಹವೆಂದು ಪರಿಗಣಿಸುತ್ತಿಲ್ಲ. ಇದು ವಿಶ್ವಗುರು ಭಾರತಕ್ಕೆ ಕಳೆದ ಹತ್ತುವರ್ಷಗಳಲ್ಲಿ ಗಳಿಸಿಕೊಟ್ಟಿರುವ ಸ್ಥಾನ ಮಾನ.
ಭಾರತ ವಿರೋಧಿ ಮೋದಿ ಭಕ್ತ ಮಂಡಳಿ ಒಪ್ಪಲಿ-ಬಿಡಲಿ. ಮೋದಿ ಅವಧಿಯಲ್ಲಿ ಭಾರತದಲ್ಲಿ ಆರ್ಥಿಕತೆ ಮತ್ತಷ್ಟು ದುರ್ಭರವಾಗುತ್ತಾ, ಸಮಾಜವು ಹೆಚ್ಚೆಚ್ಚು ಬರ್ಬರಗೊಳ್ಳುತ್ತಿರುವುದನ್ನೂ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದ ಹಲವಾರು ಸ್ವಾಯತ್ತ ಮತ್ತು ಗೌರವಾನ್ವಿತ ಸಂಸ್ಥೆಗಳು ಬಯಲುಗೊಳಿಸಿವೆ.
ಅವುಗಳ ವರದಿಯಲ್ಲಿ ಬರ್ಬರವಾಗುತ್ತಿರುವ ಭಾರತದ ಅಸಲಿ ಪರಿಸ್ಥಿತಿಯ ಚಿತ್ರಗಳು ಹೀಗೆ ಬಯಲುಗೊಂಡಿವೆ:
1. ಹಸಿವಿನ ಸೂಚ್ಯಂಕ: ದುರ್ಭರ, ಗಂಭೀರ, ಕುಸಿತ ನಿರಂತರ
ಈ ಬಾರಿ ಜಾಗತಿಕ ಹಸಿವಿನ ಸೂಚ್ಯಂಕದ ಅಧ್ಯಯನಕ್ಕಾಗಿ ಪರಿಶೀಲಿಸಲಾದ 125 ದೇಶಗಳಲ್ಲಿ ಭಾರತವು 111ನೇ ಸ್ಥಾನವನ್ನು ಪಡೆದಿದೆ.
ಒಂದು ದೇಶದ ಹಸಿವಿನ ಸೂಚ್ಯಂಕವನ್ನು ನಿಗದಿ ಮಾಡಲು ಈ ಅಧ್ಯಯನವು ನಾಲ್ಕು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ:
1. ಒಟ್ಟಾರೆ ಅಪೌಷ್ಟಿಕತೆ, 2.ಮಕ್ಕಳಲ್ಲಿ ಎತ್ತರಕ್ಕೆ ತಕ್ಕನಾದ ತೂಕವಿಲ್ಲದಿರುವಿಕೆ(ಚೈಲ್ಡ್ ವೇಸ್ಟಿಂಗ್), 3. ಮಕ್ಕಳಲ್ಲಿ ವಯಸ್ಸಿಗೆ ತಕ್ಕ ಎತ್ತರವಿಲ್ಲದಿರುವಿಕೆ(ಚೈಲ್ಡ್ ಸ್ಟಂಟಿಂಗ್), 4. ಶಿಶು ಮರಣದ ಪ್ರಮಾಣ.
ಜಾಗತಿಕ ಹಸಿವಿನ ಸೂಚ್ಯಂಕ (Global Hunger Index)- 2023ರ ಅಧ್ಯಯನದ ಪ್ರಕಾರ ಭಾರತ 111ನೇ ಸ್ಥಾನದಲ್ಲಿದೆ.
ಮಾತ್ರವಲ್ಲದೆ ಒಟ್ಟಾರೆಯಾಗಿ ಕೇವಲ 28.7 ಅಂಕಗಳನ್ನು ಪಡೆದುಕೊಂಡಿರುವ ಭಾರತದ ಪರಿಸ್ಥಿತಿಯನ್ನು ಗಂಭೀರ ಎಂದು ವರದಿಯು ಘೋಷಿಸಿದೆ.
ಅಷ್ಟು ಮಾತ್ರವಲ್ಲ, ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತದ ಹಸಿವಿನ ಸೂಚ್ಯಂಕ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಹೋಗುತ್ತಿದೆ ಎಂಬುದನ್ನು ಈ ವರದಿಯು ಪರೋಕ್ಷವಾಗಿ ಸೂಚಿಸುತ್ತದೆ.
ಭಾರತದ ಬಗ್ಗೆ ಪೂರ್ಣ ವರದಿಯನ್ನು ಆಸಕ್ತರು ಇಲ್ಲಿ ಪರಿಶೀಲಿಸಬಹುದು:
https://www.globalhungerindex.org/india.html#:~:text=India's 2023 GHI score is,GHI Severity of Hunger Scale.
ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಭಾರತ ಸರಕಾರದ National Family Helath Suvey (NFHS)- 2019-20ರ ವರದಿಯೂ ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ. ಈ ಸರಕಾರಿ ವರದಿಯ ಪ್ರಕಾರವೇ ಗುಜರಾತನ್ನೂ ಒಳಗೊಂಡಂತೆ ಭಾರತದ ಹತ್ತು ದೊಡ್ಡರಾಜ್ಯಗಳಲ್ಲಿ ಚೈಲ್ಡ್ ಸ್ಟಂಟಿಂಗ್ ಹೆಚ್ಚಾಗಿದೆ. ಚೈಲ್ಡ್ ವೇಸ್ಟಿಂಗ್ ಪ್ರಮಾಣವೂ ಯಾವ ಸುಧಾರಣೆಯನ್ನೂ ಕಾಣದೆ ಮೊದಲಿದ್ದಂತೇ ಇದೆ ಅಥವಾ ಇನ್ನೂ ಕುಸಿದಿದೆ. ಸಾಮಾನ್ಯವಾಗಿ ಅಪೌಷ್ಟಿಕತೆಗೆ ಆಹಾರದ ಕೊರತೆಯು ಪ್ರಧಾನ ಕಾರಣ ಹಾಗೂ ಅದರ ಜೊತೆಗೆ ಮೂಲಭೂತ ಸೌಕರ್ಯಗಳ ಲಭ್ಯತೆ ಮತ್ತು ಉತ್ತಮ ಪರಿಸರದ ಕೊರತೆಯೂ ಕಾರಣವಾಗಿವೆ. ಆದರೆ ಈ ಸರಕಾರಿ ವರದಿಯ ಪ್ರಕಾರವೇ ಗುಜರಾತನ್ನೂ ಒಳಗೊಂಡಂತೆ ಈ ದೊಡ್ಡ ರಾಜ್ಯಗಳಲ್ಲಿ ಶೇ. 67 ಜನರ ಮನೆಗಳಲ್ಲಿ ಕುಡಿಯುವ ನೀರಿನ ಸೌಕರ್ಯವಿಲ್ಲ. ಶೇ. 21ರಷ್ಟು ಮನೆಗಳಿಗೆ ಶೌಚಾಲಯವಿಲ್ಲ ಹಾಗೂ ಶೇ. 40ರಷ್ಟು ಮನೆಗಳಿಗಿನ್ನೂ ಗ್ಯಾಸ್ ಸಿಲಿಂಡರ್ ಸೌಕರ್ಯವಿಲ್ಲ. ಈ ರಾಜ್ಯಗಳ ಸ್ಲಂಗಳಲ್ಲಿನ ಶೇ. 21ರಷ್ಟು ಮನೆಗಳು ರೇಷನ್ ಕಾರ್ಡ್ ಸೌಲಭ್ಯ ಹೊಂದಿಲ್ಲ.
ಆಸಕ್ತರು ವರದಿಯನ್ನು ಈ ವಿಳಾಸದಲ್ಲಿ ಪಡೆಯಬಹುದು:
http://rchiips.org/nfhs/NFHS-4Report.shtml
ಅಷ್ಟು ಮಾತ್ರವಲ್ಲ. ಕೋವಿಡ್ ಕಾಲಘಟ್ಟದಲ್ಲಿ ಭಾರತ ವಿಶ್ವಕ್ಕೇ ಗುರುವಾಗಿ ನಿರ್ವಹಿಸಿದೆ ಎಂದು ಮೋದಿ ಸರಕಾರ ಕೊಚ್ಚಿಕೊಳ್ಳುತ್ತದೆ. ಆದರೆ ವಾಸ್ತವ ಅದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆಯೆಂದು ಹಲವಾರು ಸ್ವಾಯತ್ತ ಸಂಸ್ಥೆಗಳ ವರದಿಗಳು ಸ್ಪಷ್ಟಪಡಿಸಿವೆ. ಉದಾಹರಣೆಗೆ ‘ರೈಟ್ ಟು ಫುಡ್ ಕ್ಯಾಂಪೇನ್’ ಸಂಸ್ಥೆಯು ಕೋವಿಡ್ ಅವಧಿಯಲ್ಲಿ ದೇಶದ ಹಲವಾರು ಭಾಗಗಳಲ್ಲಿ ಭೇಟಿ ಮಾಡಿ, ಸಂತ್ರಸ್ತರ ಅನುಭವಗಳನ್ನಾಧರಿಸಿದ ‘ಹಂಗರ್ ವಾಚ್’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಈ ಅವಧಿಯಲ್ಲಿ ಶೇ. 27ರಷ್ಟು ಮಂದಿ ಪ್ರತೀ ರಾತ್ರಿ ಹೊಟ್ಟೆಗಿಲ್ಲದೆ ಮಲಗಿದ್ದಾರೆ. ಪ್ರತೀ 20 ಮನೆಗಳಲ್ಲಿ ಒಂದು ಮನೆಯಲ್ಲಿ ಒಲೆಯನ್ನೇ ಹಚ್ಚಿರಲಿಲ್ಲ. ಇದು ಹೆಚ್ಚಾಗಿ ಕಂಡುಬಂದಿದ್ದು ಮೋದಿಯವರ ಗುಜರಾತಿನಲ್ಲಿ ಎಂದು ಕೂಡಾ ಆ ವರದಿ ಸ್ಪಷ್ಟಪಡಿಸುತ್ತದೆ.
ಇನ್ನಷ್ಟು ವಿವರಗಳನ್ನು ಆಸಕ್ತರು ಇಲ್ಲಿ ಪಡೆದುಕೊಳ್ಳಬಹುದು:
https://thewire.in/rights/hunger-watch-survey-lockdown
2. ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ: ಸತತ ಕುಸಿತ
ಒಂದು ದೇಶವು ನಿಜಕ್ಕೂ ಸ್ವತಂತ್ರವಾಗಿದೆಯೇ ಎಂದು ಪರಿಗಣಿಸಲು ಆ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಷ್ಟರ ಮಟ್ಟಿಗೆ ಕಾಪಾಡಲಾಗುತ್ತಿದೆ ಎಂಬ ಮಾನದಂಡವು ಅತಿ ಮುಖ್ಯ. ಅದರಲ್ಲೂ ಒಂದು ದೇಶದಲ್ಲಿ ಸಮಾಜ ದ ಮತ್ತು ಸರಕಾರದ ನೀತಿ ಮತ್ತು ಧೋರಣೆಗಳನ್ನು ಮುಕ್ತವಾಗಿ ಟೀಕಿಸುವ ಸ್ವಾತಂತ್ರ್ಯದ ಮಾನದಂಡಗಳು ಅರ್ಥಾತ್ ಪತ್ರಿಕಾ ಸ್ವಾತಂತ್ರ್ಯವನ್ನು ಎಷ್ಟರ ಮಟ್ಟಿಗೆ ಪಾಲಿಸಲಾಗುತ್ತಿದೆ ಎನ್ನುವುದೇ ಒಂದು ದೇಶವು ನಿಜಕ್ಕೂ ಪ್ರಜಾತಾಂತ್ರಿಕವಾಗಿದೆಯೇ ಎಂಬುದನ್ನು ತೀರ್ಮಾನಿಸುತ್ತದೆ. ಇದನ್ನು ಅಳೆಯಲು ಜಗತ್ತಿನ ಮಾಧ್ಯಮ ಲೋಕದ ಸ್ವತಂತ್ರ ಮಾಧ್ಯಮ ಸಂಸ್ಥೆಯಾದ ‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್’ ಎಂಬ ಸಂಸ್ಥೆಯು Press Freedom Index-‘ಮಾಧ್ಯಮ ಸ್ವಾತಂತ್ರ್ಯದ ಸೂಚ್ಯಂಕ’ವನ್ನು ಬಳಸುತ್ತವೆ.
ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಒಂದೇ ಸಮನೆ ಕುಸಿಯುತ್ತಿದೆ ಎಂಬುದನ್ನು ಅದರ ವಾರ್ಷಿಕ ವರದಿಗಳು ಸ್ಪಷ್ಟಪಡಿಸುತ್ತವೆ. ಉದಾಹರಣೆಗೆ ಜಗತ್ತಿನ 180 ದೇಶಗಳಲ್ಲಿ ಭಾರತವು 2014ರಲ್ಲಿ 132ನೇ ಸ್ಥಾನದಲ್ಲಿತ್ತು. ಆದರೆ 2018ರಲ್ಲಿ ಭಾರತದ ಸ್ಥಾನ 138ಕ್ಕೆ ಕುಸಿಯಿತು.
2019ರಲ್ಲಿ ಮೋದಿ ಸರಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲಂತೂ ಸ್ವತಂತ್ರ ಮಾಧ್ಯಮದ ಮೇಲೆ ಸರಕಾರದ ದಾಳಿ ತೀವ್ರವಾಗಿ ನಡೆಯುತ್ತಿದೆ. ಸಿಪಿಜೆ (ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ಜರ್ನಲಿಸ್ಟ್) ಸಂಸ್ಥೆಯ ಪ್ರಕಾರ ಸ್ವತಂತ್ರ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿಯಾಗಿರುವ ದೇಶಗಳಲ್ಲಿ ಭಾರತ ಬಹು ಮುಖ್ಯವಾದುದು. 2019ರ ನಂತರ 27 ಪತ್ರಕರ್ತರು ಹತ್ಯೆಗೀಡಾಗಿರುವುದಲ್ಲದೆ 2022ರಲ್ಲಿ 292 ಪತ್ರಕರ್ತರನ್ನು ಸೆರೆಗೆ ದೂಡಲಾಗಿದೆ. ಇತ್ತೀಚೆಗೆ ಬಂಧಿತರಾದ ‘ನ್ಯೂಸ್ ಕ್ಲಿಕ್’ ಪತ್ರಿಕೆಯ ಸಂಪಾದಕರನ್ನು ಒಳಗೊಂಡಂತೆ 16 ಪತ್ರಕರ್ತರನ್ನು ಕರಾಳ ಭಯೋತ್ಪಾದಕ ನಿಗ್ರಹ ಕಾಯ್ದೆಯಡಿ ಬಂಧಿಸಲಾಗಿದೆ. ಇವರೆಲ್ಲರೂ ಮೋದಿ ಸರಕಾರದ ನೀತಿಗಳ ಜನವಿರೋಧಿತನದ ಕಟು ಟೀಕಾಕಾರರಾಗಿದ್ದರು.
(https://cpj.org/asia/india/)
ಈ ಎಲ್ಲಾ ಕಾರಣಗಳಿಂದ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನ 180 ದೇಶಗಳಲ್ಲಿ 159ನೇ ಸ್ಥಾನಕ್ಕೆ ಕುಸಿದಿದೆ. ಅಂದರೆ 2014ರಿಂದ 2024ರ ನಡುವೆ 17 ಸ್ಥಾನಗಳ ಕುಸಿತ. ಸದಾ ಸಂಘರ್ಷದ ವಾತಾವರಣದಲ್ಲಿರುವ ಫೆಲೆಸ್ತೀನ್, ಇಸ್ರೇಲ್, ಶ್ರೀಲಂಕಾ ದೇಶಗಳೂ ಮಾಧ್ಯಮ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿವೆ!
ಆಸಕ್ತರು ಪೂರ್ತಿ ವರದಿಯನ್ನು ಈ ವಿಳಾಸದಲ್ಲಿ ಓದಬಹುದು:
https://rsf.org/en/classement/2023/asia-pacific