ಇತಿಹಾಸದ ಹುಣ್ಣುಗಳು, ‘ಭಾರತ’ದ ಕುರುಡುಗಳು ಮತ್ತು ಹಿಂದುತ್ವದ ಹುನ್ನಾರಗಳು
ಮಣಿಪುರದ ದುರಂತ ಕಥನ
ಭಾಗ-3
ಆ ಸಮಯದಲ್ಲಿ ಬ್ರಿಟಿಷರ ಒಡೆದಾಳುವ ನೀತಿ ಮತ್ತು ಸುಲಿಗೆಗಳ ವಿರುದ್ಧ, ರಾಜರ ಮತ್ತು ಅವರ ಪೋಷಣೆಯಲ್ಲಿದ್ದ ಇತರ ಊಳಿಗಮಾನ್ಯ ಅಧಿಕಾರಿಗಳ ವಿರುದ್ಧ, ಜನರನ್ನು ಸುಲಿಗೆ ಮಾಡುತ್ತಿದ್ದ ಮಾರ್ವಾಡಿ ವ್ಯಾಪಾರಿಗಳ ವಿರುದ್ಧ ಅಸ್ಸಾಮ್, ತ್ರಿಪುರಾ, ಮಣಿಪುರದ ಹಲವಾರು ಪ್ರಾಂತಗಳಲ್ಲಿ ರೈತಾಪಿಗಳು ದೊಡ್ಡ ಪ್ರತಿರೋಧ ತೋರಿಸಲು ಪ್ರಾರಂಭಿಸಿದ್ದರು. ಮಣಿಪುರದಲ್ಲಿ ಅಕ್ಕಿ ರಫ್ತಿನ ವಿರುದ್ಧ ಪ್ರಾರಂಭವಾದ ಮಣಿಪುರ ಮಹಿಳೆಯರ ಹೋರಾಟ- ನೂಪಿ ಲಾನ್- ನಂತರ ಹಿಜಾಮ್ ಇರಾಬೋಟ್ ಎಂಬ ಮಣಿಪುರಿ ಕಮ್ಯುನಿಸ್ಟರ ನಾಯಕತ್ವದಲ್ಲಿ ದೊಡ್ಡ ಊಳಿಗಮಾನ್ಯ ವಿರೋಧಿ ಹಾಗೂ ಮಣಿಪುರ ಸಾರ್ವಭೌಮತೆಯ ಸಮಾಜವಾದಿ ಹೋರಾಟವಾಗಿ ಮುನ್ನಡೆಯಿತು. ಮತ್ತೊಂದು ಕಡೆ ನಾಗಾಗಳು ತನ್ನ ಸಾರ್ವಭೌಮತೆಗಾಗಿ ಪ್ರತ್ಯೇಕ ನಾಗಾ ನ್ಯಾಶನಲ್ ಕೌನ್ಸಿಲ್ ರಚಿಸಿಕೊಂಡು ಹೋರಾಟ ಪ್ರಾರಂಭಿಸಿದ್ದರು. ಅದೇನೇ ಇದ್ದರೂ ಬ್ರಿಟಿಷರಿಗೆ 1937ರ ಹೊತ್ತಿಗೆ ಕಾಡು ಮತ್ತು ಕಣಿವೆಗಳು ಒಟ್ಟಿಗೆ ಇರಲಾರವೆಂಬ ವಸಾಹತು ಧೋರಣೆಯಲ್ಲಿಯೇ ಆಡಳಿತಾತ್ಮಕ ರಚನೆಗಳನ್ನು ಮಾಡಿಟ್ಟಿದ್ದರು. ಸ್ವತಂತ್ರ ಭಾರತ ಕುರುಡುಗಳು ಹಾಗೂ ಬಗೆಹರಿಯದ
ಕಾಡು-ಕಣಿವೆಯ ಬಿರುಕುಗಳು
1947ರಲ್ಲಿ ಅಧಿಕಾರ ಹಸ್ತಾಂತರ ಮಾಡಿ ಬ್ರಿಟಿಷರು ಭಾರತ ಬಿಟ್ಟು ಹೋಗುವ ವೇಳೆಗೆ ಬ್ರಿಟಿಷ್ ಭಾರತದ ಭಾಗವಾಗಿದ್ದ ಅಸ್ಸಾಮ್ ಹಾಗೂ ಅದರ ಭಾಗವಾಗಿಯೇ ಇದ್ದ ಈಗಿನ ಅರುಣಾಚಲ ಪ್ರದೇಶ, ಮೇಘಾಲಯ, ಮಿಜೋರಾಂಗಳು ಭಾರತದ ಭಾಗವಾದರೂ ತ್ರಿಪುರಾ ಮತ್ತು ಮಣಿಪುರ ರಾಜಸಂಸ್ಥಾನಗಳಾಗಿ ಪ್ರತ್ಯೇಕವಾಗಿಯೇ ಉಳಿದಿದ್ದವು. ಆದರೂ 1946ರಲ್ಲೇ ಇಡೀ ಭಾರತದಾದ್ಯಂತ ವ್ಯಾಪಿಸುತ್ತಿದ್ದ ಪ್ರಜಾತಾಂತ್ರಿಕ ಅಲೆಗೆ ಮಣಿದು ಮಣಿಪುರದ ಆಗಿನ ಮೈತೈ ರಾಜ ಬೋಧ ಚಂದ್ರ ಸಿಂಗ್ ತಾನು ಸಾಂವಿಧಾನಿಕ ಮುಖ್ಯಸ್ಥನಾಗಿ ಉಳಿದು ಸಂಸ್ಥಾನದಲ್ಲಿ ಜನರಿಂದ ಆಯ್ಕೆಯಾದ ಸರಕಾರಕ್ಕೆ ಅಧಿಕಾರ ನೀಡುವ ಸುಧಾರಣೆಗಳನ್ನು 1947ರಲ್ಲಿ ಜಾರಿ ಮಾಡಿದ. ಆದರೆ ಆಸ್ತಿ ಹಾಗೂ ಇನ್ನಿತರ ಕೀಲಕ ಅಧಿಕಾರ ರಾಜನ ಬಳಿಯೇ ಇತ್ತು. ಈ ನಾಮಕಾವಸ್ಥೆ ಸುಧಾರಣೆಯ ವಿರುದ್ಧ ಹಿಜಾಮ್ ಇರಾಬೋಟ್ ನೇತೃತ್ವದಲ್ಲಿ 1949ರಲ್ಲಿ ದೊಡ್ಡ ಸಶಸ್ತ್ರ ದಂಗೆ ಸ್ಫೋಟವಾಗುತ್ತದೆ. ಈ ಜನದಂಗೆಯಲ್ಲಿ ನಾಗಾ, ಕುಕಿಗಳು ಕೂಡ ಮೈತೈಗಳ ಜೊತೆಗೂಡಿ ಭಾಗವಹಿಸುತ್ತಾರೆ. ಇದರಿಂದ ಹೆದರಿದ ರಾಜನನ್ನು ಶಿಲ್ಲಾಂಗಿಗೆ ಕರೆಸಿಕೊಂಡ ಸರ್ದಾರ್ ಪಟೇಲರ ಸರಕಾರ ಆತನ ಆರ್ಥಿಕ ಆಸಕ್ತಿಗಳನ್ನು ಜನರಿಂದ ರಕ್ಷಿಸುವ ವಾಗ್ದಾನವನ್ನು ಮಾಡಿ 1949ರ ಅಕ್ಟೋಬರ್ 15ರಂದು ಮಣಿಪುರದ ಜನರ ಸಮ್ಮತಿ ಇಲ್ಲದೆ ರಾಜ್ಯವನ್ನು ಭಾರತಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಇದೇ ರೀತಿ ಜನರ ದಂಗೆಗಳಿಗೆ ಬೆದರಿದ ತ್ರಿಪುರಾ ರಾಜನೂ ಭಾರತವನ್ನು ಸೇರಿಕೊಳ್ಳುತ್ತಾನೆ.
ಹೀಗೆ ಹಿಂದಿರುಗಿ ನೋಡಿದರೆ ಭಾರತದ ಒಕ್ಕೂಟದಲ್ಲಿ ಇತರ ಸಂಸ್ಥಾನಗಳ ಜನರು ತಮ್ಮ ಒಪ್ಪಿಗೆಯಿಂದ ಸೇರಿಕೊಂಡಿದ್ದರೆ ಮಣಿಪುರ, ತ್ರಿಪುರಾ, ನಾಗಾಲ್ಯಾಂಡಿನ ಜನತೆಯ ಸಮ್ಮತಿಗೆ ವಿರುದ್ಧವಾಗಿ ಅಲ್ಲಿನ ರಾಜರ ಊಳಿಗಮಾನ್ಯ ಹಿತಾಸಕ್ತಿಗಳನ್ನು ರಕ್ಷಿಸುವ ಭರವಸೆಯ ಮೇರೆಗೆ ಜನತೆಯ ಪ್ರಜಾತಂತ್ರದ ಆಶಯಗಳಿಗೆ ವಿರುದ್ಧವಾಗಿ ಅವು ಭಾರತ ಒಕ್ಕೂಟವನ್ನು ಸೇರಿಕೊಂಡವು. ಈವರೆಗೆ ಸ್ವತಂತ್ರವಾಗಿ ಬದುಕಿದ್ದ ಮಣಿಪುರ ಭಾರತ ಒಕ್ಕೂಟದಲ್ಲಿ ಜನಾಡಳಿತಕ್ಕೆ ಯಾವುದೇ ವಿಶೇಷ ಪ್ರಾತಿನಿಧ್ಯವಿಲ್ಲದ ‘ಸಿ’ ವರ್ಗದ ರಾಜ್ಯವಾಗಿ ಸೇರ್ಪಡೆಯಾಯಿತು. ಇದರಿಂದ ಮಣಿಪುರದ ಜನತೆಯ ಅಸಮಾಧಾನ ಹೆಚ್ಚಾದ್ದರಿಂದ 1963ರಲ್ಲಿ ಅದನ್ನು ಒಂದು ಜನ ಪರಿಷತ್ತಿರುವ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಲಾಯಿತು. ಮುಂದುವರಿದ ಆಕ್ರೋಶವನ್ನು ಹದ್ದುಬಸ್ತಿನಲ್ಲಿಡಲು 1971ರಲ್ಲಿ ಒಂದು ಪ್ರತ್ಯೇಕ ರಾಜ್ಯದ ಸ್ಥಾನಮಾನನೀಡಲಾಯಿತು. ಅದರ ಜೊತೆಗೆ ಮಣಿಪುರದ ರಾಜ್ಯ ಶಾಸನ ಸಭೆಗೆ ಒಳಪಟ್ಟು ಗುಡ್ಡಗಾಡು ಜನರಿಗೆ ಸ್ವಾಯತ್ತ ಅಧಿಕಾರ ನೀಡುವ 371 -ಸಿ ತಿದ್ದುಪಡಿಯನ್ನು ಸಂವಿಧಾನಕ್ಕೆ ತರಲಾಯಿತು. ಆರನೇ ಶೆಡ್ಯೂಲಿಗೆ ಸೇರಿಸದ ಮೋಸ
ಸಂವಿಧಾನವನ್ನು ರಚಿಸುವಾಗಲೇ ಭಾರತದ ಗುಡ್ಡಗಾಡು ಆದಿವಾಸಿ ಜನರಿಗೆ ವಿಶೇಷ ಅಧಿಕಾರ ನೀಡುವ ಹಾಗೂ ಅವರ ಅನನ್ಯತೆಯನ್ನು ಕಾಪಾಡಿಕೊಳ್ಳುವ ಅಧಿಕಾರ ನೀಡುವ ಆಶಯವುಳ್ಳ 5ನೇ ಶೆಡ್ಯೂಲನ್ನು ಸೇರಿಸಲಾಗಿತ್ತು. ಹಾಗೆಯೇ ಅಸ್ಸಾಮ್ ಹಾಗೂ ಇತರ ಈಶಾನ್ಯ ಪ್ರಾಂತಗಳ ಸಾಂಸ್ಕೃತಿಕ ಹಾಗೂ ರಾಜಕೀಯ ಅಧಿಕಾರಕ್ಕೆ ಅವಕಾಶ ಮಾಡಿಕೊಡುವ ಆರನೇ ಶೆಡ್ಯೂಲನ್ನು ರಚಿಸಲಾಗಿತ್ತು. ಆದರೆ ಮಣಿಪುರವು ಭಾರತದ ಸಂವಿಧಾನ ರಚನೆ ಪೂರ್ಣವಾಗುವ ಹೊತ್ತಿಗೆ ಭಾರತ ಒಕ್ಕೂಟಕ್ಕೆ ಇನ್ನೂ ಸೇರಿರಲಿಲ್ಲ. ಆದ್ದರಿಂದ ಮಣಿಪುರ ಆರನೇ ಶೆಡ್ಯೂಲಿಗೆ ಸೇರಲಿಲ್ಲ. ಆದರೆ 1971ರ ನಂತರ ಸಂವಿಧಾನ ತಿದ್ದುಪಡಿಯಾಗಿ ಮಣಿಪುರ ಪ್ರತ್ಯೇಕ ರಾಜ್ಯವಾಗಿ ಇಷ್ಟು ವರ್ಷಗಳು ಕಳೆದ ನಂತರವೂ ಮಣಿಪುರವನ್ನು ಆರನೇ ಶೆಡ್ಯೂಲಿಗೆ ಸೇರಿಸುವ ಪ್ರಯತ್ನವನ್ನು ಈವರೆಗೆ ಮಣಿಪುರವನ್ನು ಆಳಿದ ಕಾಂಗ್ರೆಸ್ ಸರಕಾರವಗಾಲೀ, ಈಗ ಆಳುತ್ತಿರುವ ಬಿಜೆಪಿ ಸರಕಾರವಾಗಲೀ ಅಥವಾ ಕೇಂದ್ರದ ಕಾಂಗ್ರೆಸ್, ಬಿಜೆಪಿ ಯಾವುದೇ ಸರಕಾರಗಳಾಗಲೀ ಮಾಡದೆ ಮಣಿಪುರದ ಗುಡ್ಡಗಾಡು ಜನಾಂಗ, ಕುಕಿ-ನಾಗಾ-ಚಿನ್-ಜೋ ಸಮುದಾಯದ ಜನಗಳಿಗೆ ನಿರಂತರ ದ್ರೋಹ ಬಗೆಯುತ್ತಲೇ ಬಂದಿವೆ. ಇದರಿಂದ ಮಣಿಪುರದ ಒಳಗೆ ಕಣಿವೆಯಲ್ಲಿ ವಾಸಿಸುವ ಮೈತೈ ಜನಾಂಗದ ಅಭಿವೃದ್ಧಿಗೂ ಹಾಗೂ ಗುಡ್ಡಗಾಡು ಜನಾಂಗದ ಅಭಿವೃದ್ಧಿಗೂ ಅಜಗಜಾಂತರದ ವ್ಯತ್ಯಾಸ ಉಂಟಾಗಿದೆ. ರಸ್ತೆ, ಸೌಕರ್ಯ, ಶಿಕ್ಷಣ, ಆರೋಗ್ಯ, ಸಂಸ್ಕೃತಿ, ವಸತಿ, ಉದ್ಯೋಗ ಇನ್ನಿತರ ಯಾವುದೇ ಕ್ಷೇತ್ರಗಳಲ್ಲೂ ಒಂದು ನಿಜವಾದ ಅಧಿಕಾರವಿರುವ ಆರನೇ ಶೆಡ್ಯೂಲಿಗೆ ಸೇರಿರುವ ಸ್ವಾಯತ್ತ ಗುಡ್ಡಗಾಡು ಪ್ರಾಧಿಕಾರ ಇದ್ದರೆ ಏನು ಅಭಿವೃದ್ಧಿ ಆಗಬಹುದಿತ್ತೋ ಅದರಲ್ಲಿ ಶೇ. 10ರಷ್ಟು ಕೂಡ ಈ ವ್ಯವಸ್ಥಿತ ದ್ರೋಹದಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಆಗಿಲ್ಲ.
ಗುಡ್ಡಗಾಡು ಜನರಿಗೆ 19 ಸೀಟುಗಳ ಮೀಸಲಾತಿ ಇದೆ. ಹೀಗಾಗಿ ಗುಡ್ಡುಗಾಡು ಜನರ ಅರ್ಥಾತ್ ಕುಕಿ-ನಾಗಾ-ಚಿನ್-ಜೋ ಜನರ ಪರವಾಗಿ ರೂಪಿಸಬಹುದಾದ ಯಾವುದೇ ಸಲಹೆಗಳೂ ಶಾಸನ ಸಭೆಯಲ್ಲಿ ಜಾರಿಯಾಗುತ್ತಿಲ್ಲ. ಇದರ ಜೊತೆಗೆ 2015ರಲ್ಲಿ ಆಗಿನ ಮಣಿಪುರದ ಕಾಂಗ್ರೆಸ್ ಸರಕಾರ ಮಣಿಪುರದ ಹಿತಾಸಕ್ತಿಯನ್ನು ರಕ್ಷಿಸುವ ಹೆಸರಿನಲ್ಲಿ ಮೈತೈ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕಾಗಿ 1951ಕ್ಕೆ ಮುಂಚೆ ಮಣಿಪುರದ ವಾಸಿಗಳಾಗಿದ್ದೇವೆಂದು ಸಾಬೀತು ಮಾಡುವ ಜನರನ್ನು ಮಾತ್ರ ಮಣಿಪುರಿಗಳೆಂದು ಪರಿಗಣಿಸಿ ಹಾಗೆ ಸಾಬೀತು ಮಾಡಲು ಸಾಧ್ಯವಿಲ್ಲದವರಿಗೆ ಮಣಿಪುರದಲ್ಲಿ ಜಮೀನು ಕೊಳ್ಳುವ, ವ್ಯವಹಾರ ಮಾಡುವ ಅವಕಾಶ ನಿರಾಕರಿಸುವ ಮಸೂದೆಯನ್ನು ತರಾತುರಿಯಲ್ಲಿ ತಂದಿತ್ತು. ಅದಕ್ಕೆ ರಾಷ್ಟ್ರಪತಿಗಳ ಪರವಾನಿಗೆ ಸಿಗದ ಕಾರಣ ನನೆಗುದಿಗೆ ಬಿದ್ದರೂ ಕುಕಿ-ನಾಗಾ ಸಮುದಾಯಗಳಿಗೆ ಮೈತೈ ಸರಕಾರದ ಬಗ್ಗೆ ಆಳವಾದ ಅನುಮಾನವನ್ನು ಬಿತ್ತಿತು. ಒಟ್ಟಾರೆಯಾಗಿ ಬ್ರಿಟಿಷರ ಆಳದಲ್ಲಿ ಅವರ ವಸಾಹತುಶಾಹಿ ಹಿತಾಸಕ್ತಿಗಳ ಭಾಗವಾಗಿ ಹೆಚ್ಚಾದ ಕಾಡು-ಕಣಿವೆಯ ನಡುವಿನ ತಾರತಮ್ಯಗಳು ಸ್ವತಂತ್ರ ಭಾರತದ ಎಲ್ಲಾ ಸರಕಾರಗಳೂ ಹೆಚ್ಚು ಮಾಡಿದವು. ಅದರ ಜೊತೆಗೆ 1958ರಲ್ಲಿ ಜಾರಿಯಾದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ(AFSPA)ಗಳು ಭಾರತದ ಬಗ್ಗೆ ಭಾರತದ ಪರವಾದ ಪಕ್ಷಗಳ ಬಗ್ಗೆ ಸಂತ್ರಸ್ತ ನಾಗಾ, ಕುಕಿ ಸಮುದಾಯಗಳಲ್ಲಿ ಅಪಾರವಾದ ಆಕ್ರೋಶವನ್ನೇ ಹುಟ್ಟುಹಾಕಿದೆ. ಅದರ ಭಾಗವಾಗಿಯೇ 70, 80, 90ರ ದಶಕದಲ್ಲಿ ಅಸ್ಸಾಮ್, ಮಣಿಪುರ, ನಾಗಾಲ್ಯಾಂಡ್ ಮತ್ತು ತ್ರಿಪುರಾಗಳಲ್ಲಿ ಭಾರತದಿಂದ ಬೇರ್ಪಡುವ ಹಾಗೂ ಆಯಾ ಸಮುದಾಯಗಳ ಸಾರ್ವಭೌಮತೆಗಾಗಿ ಸಶಸ್ತ್ರ ಹೋರಾಟಗಳು ಹುಟ್ಟಿಕೊಂಡವು. ಅಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಇವೆಲ್ಲವನ್ನು ಅತ್ಯಂತ ಕ್ರೂರವಾಗಿ ದಮನ ಮಾಡಿದ್ದಲ್ಲದೆ ಪ್ರತಿರೋಧವನ್ನು ತಣಿಸಲು ಅಸ್ಸಾಮಿನಿಂದ ಬೇರ್ಪಡಿಸಿ ನಾಗಾಲ್ಯಾಂಡ್, ಮಿಜೋರಾಂ, ಅರುಣಾಚಲ ಮತ್ತು ಮೇಘಾಲಯ ರಾಜ್ಯಗಳನ್ನು ಸೃಷ್ಟಿಸಿತು.
ಸಾರಾಂಶದಲ್ಲಿ ಭಾರತವು ಈ ಗುಡ್ಡಗಾಡು ಸಮುದಾಯಗಳ ಹಿತಾಸಕ್ತಿಗಳ ಬಗ್ಗೆ ಕುರುಡನ್ನೇ ವ್ಯಕ್ತಪಡಿಸಿದ್ದರಿಂದ ಮಣಿಪುರದಂತಹ ರಾಜ್ಯಗಳಲ್ಲಿ ಈಗಾಗಲೇ ಇದ್ದ ಕಾಡು-ಕಣಿವೆ ಅರ್ಥಾತ್ ಮೈತೈ ಮತ್ತು ನಾಗಾ-ಕುಕಿಗಳ ನಡುವಿನ ವೈರುಧ್ಯ ಹಂಚಿಕೊಂಡು ತಿನ್ನುವ ನೆಲೆಯಲ್ಲಿ ಬಗೆಹರಿಯದೇ ಹಾಗೆಯೇ ಉಳಿಯಿತು ಮತ್ತು ಹೆಚ್ಚಾಗತೊಡಗಿತು. ಅದರಲ್ಲೂ 1991ರ ನಂತರ ದೇಶದ ಆರ್ಥಿಕತೆಯಲ್ಲೇ ಸರಕಾರದ ಪಾತ್ರ ಕಿರಿದಾಗುತ್ತಿದ್ದಂತೆ, ರಾಜಕೀಯ ಹಿಂದುವೀಕರಣಗೊಳ್ಳುತ್ತಿದ್ದಂತೆ ಈಶಾನ್ಯ ಭಾರತದ ಬಿರುಕುಗಳು ಕೂಡ ಮತ್ತಷ್ಟು ಹೆಚ್ಚತೊಡಗಿತು.
ಬಿರುಕುಗಳಲ್ಲಿ ಅರಳಿದ ಕಮಲ- ಹಿಂದುತ್ವದ ಹುನ್ನಾರಗಳು
ಈ ಬಿರುಕುಗಳನ್ನು ಕಡಿಮೆ ಮಾಡಲು ಇದ್ದ ಏಕೈಕ ದಾರಿ ಸರ್ವರಿಗೂ ಸಮಬಾಳು ಮತ್ತು ಸರ್ವರಿಗೂ ಸಮಪಾಲು ಎಂಬ ಸಾಂವಿಧಾನಿಕ ಮಾರ್ಗದರ್ಶನ ಮತ್ತು ಇತಿಹಾಸದಲ್ಲಿ ಅತಿ ಹೆಚ್ಚು ತಾರತಮ್ಯಕ್ಕೆ ಗುರಿಯಾದವರಿಗೆ ಪ್ರಥಮ ಆದ್ಯತೆ ಎಂಬ ಸಾಮಾಜಿಕ ನ್ಯಾಯ ದರ್ಶನ. ಆದರೆ 1991ರ ನಂತರ ಈ ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾಗಿ ಬಲವಿದ್ದವನು ಮಾತ್ರ ಬದುಕಬೇಕೆಂಬ ಆರ್ಥಿಕನೀತಿಗಳು ಮತ್ತು ಅದರ ಸಾಮಾಜಿಕ-ಸಾಂಸ್ಕೃತಿಕ ಮುಖವಾದ ಹಿಂದೂರಾಷ್ಟ್ರದ ದ್ವೇಷ ರಾಜಕಾರಣ ಎಲ್ಲಾ ವಲಯವನ್ನು ಆವರಿಸಿಕೊಳ್ಳತೊಡಗಿತು.
ಅದರ ಭಾಗವಾಗಿಯೇ ಸಂಘಪರಿವಾರ ಕಳೆದ ಮೂರು ದಶಕಗಳಿಂದ ಈಶಾನ್ಯ ಭಾರತದಲ್ಲಿ ಭಾರತದ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯಿಂದ ಉಂಟಾಗಿರುವ ಬಿರುಕುಗಳಿಗೆ ಹಿಂದೂ- ಕ್ರಿಶ್ಚಿಯನ್ ಎಂಬ ಆಯಾಮವನ್ನು ನೀಡಿ ಸಂತ್ರಸ್ತರನ್ನೇ ಪರಸ್ಪರ ಎತ್ತಿಕಟ್ಟುತ್ತಿದೆ. ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ಲೋಕದಲ್ಲಿ ಅತಿಕ್ರಮ ಪ್ರವೇಶ ನೀಡಿ ಅಲ್ಲಿನ ಆದಿವಾಸಿ ಪಂಗಡಳ ಆಚಾರ ವಿಚಾರಗಳಿಗೆ ಹಿಂದೂ ಬ್ರಾಹ್ಮಣೀಯ ವ್ಯಾಖ್ಯಾನವನ್ನು ನೀಡುತ್ತಾ ಅವನ್ನು ಸಾಂಸ್ಕೃತಿಕವಾಗಿ ಹಿಂದುತ್ವದ ತೆಕ್ಕೆಗೆ ತಂದುಕೊಳ್ಳುತ್ತಿದೆ.
ಉದಾಹರಣೆಗೆ 2017ರಿಂದ ಗುಜರಾತಿನ ಮಾಧವಪುರದಲ್ಲಿ ರುಕ್ಮಿಣಿ- ಕೃಷ್ಣನ ಕಲ್ಯಾಣೋತ್ಸವವನ್ನು ಆಚರಿಸಲಾಗುತ್ತಿದೆ. ಈಗ ಸಂಘಪರಿವಾರದವರು ಹುಟ್ಟುಹಾಕಿರುವ ಹೊಸ ಕಥನ ರುಕ್ಮಿಣಿ ಅರುಣಾಚಲ ಪ್ರದೇಶದ ಮಿಶ್ಮಿ ಬುಡಕಟ್ಟಿಗೆ ಸೇರಿದವಳೆಂದೂ, ಆಕೆ ಸ್ವಯಂವರಕ್ಕೆ ಸಿದ್ಧವಿಲ್ಲದೆ ಸ್ವಇಚ್ಛೆಯಿಂದ ಗುಜರಾತಿನಿಂದ ಬಂದಿದ್ದ ಕೃಷ್ಣನಿಗೆ ಒಲಿದು ಆತನ ಜೊತೆಗೆ ಓಡಿಹೋದಳೆಂದು ಕಥೆಯನ್ನು ಹುಟ್ಟುಹಾಕಲಾಗಿದೆ. 2018ರಲ್ಲಿ ಈ ಮಾಧವಪುರ ಸಮಾವೇಶದಲ್ಲಿ ಈಶಾನ್ಯ ಭಾರತದ ಎಲ್ಲಾ ಬಿಜೆಪಿ ಮುಖ್ಯಮಂತ್ರಿಗಳೂ ಭಾಗವಹಿಸಿದ್ದರು. ಅಲ್ಲಿ ಮಾತಾಡಿದ ಮಣಿಪುರದ ಮುಖ್ಯಮಂತ್ರಿ ಬಿರೇನ್ ಸಿಂಗ್ ‘‘ಇದರಿಂದ ಮಣಿಪುರವು ಸ್ವಾತಂತ್ಯಾ ನಂತರದಲ್ಲಿ ಮಾತ್ರವಲ್ಲದೆ ಸಹಸ್ರಾರು ವರ್ಷಗಳಿಂದ ಭಾರತದ ಭಾಗವಾಗಿತ್ತು ಎಂಬುದು ದೃಢಪಡುತ್ತದೆ’’ ಎಂದು ಹೇಳಿದ್ದರು. ಮೈತೈ ಸಮುದಾಯಗಳ ನಡುವೆಯೂ ಇದೇ ಕಥನವನ್ನು ಈಗ ದೊಡ್ದದಾಗಿ ಹರಿಬಿಡಲಾಗಿದೆ. ಅಸ್ಸಾಮನ್ನು ಮಹಾಭಾರತದಲ್ಲಿ ಉಲ್ಲೇಖವಾಗಿರುವ ಪ್ರಾಗ್ಜೋತಿಶ್ಯಪುರವೆಂದೂ, ಕಾಮರೂಪವೆಂದೂ, ಅರುಣಾಚಲದಲ್ಲಿ ಹರಿಯುವ ಲೋಹಿತ್ ನದಿಯ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖವಿದೆಯೆಂಬ ಕಥನವನ್ನು ಹರಿಬಿಡಲಾಗಿದೆ. ಪ್ರಕೃತಿ ಆರಾಧನೆ ಮಾಡುವ ಡೊನಿ-ಪೊಳೊ, ಹೆರಕ, ಜೆಲೆಯಾಮ್ಗ್ರಾಂಗ್, ತನ್ಸ್ಗಾ ಬುಡಕಟ್ಟುಗಳ ದೇವರುಗಳಿಗೆ ದೇವಸ್ಥಾನವನ್ನು ಕಟ್ಟಿಕೊಟ್ಟು ಅಲ್ಲಿ ಅವರ ದೇವರುಗಳೊಂದಿಗೆ ಹನುಮಾನ್, ವಿಷ್ಣುವನ್ನು ಪೂಜಿಸುವಂತೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ತಮ್ಮ ಬುಡಕಟ್ಟು ಅನನ್ಯತೆಯನ್ನು ಸ್ವಪ್ರೇರಣೆಯಿಂದ ಕಳೆದು ಕೊಂಡು ಬ್ರಾಹ್ಮಣೀಯ ಹಿಂದುತ್ವದ ಅಧೀನರಾಗುವ ಪ್ರಕ್ರಿಯೆ ನಡೆಯುತ್ತಿದೆ. ಇದರ ಜೊತೆಗೆ ಇತಿಹಾಸದಲ್ಲಿ ಬ್ರಿಟಿಷರ ಜೊತೆ ಸಂಘರ್ಷ ಮಾಡಿದ್ದ ಅಥವಾ ಮೊಗಲ್ ಸಾಮ್ರಾಟರೊಂದಿಗೆ ಸಂಘರ್ಷ ಮಾಡಿದ್ದ ಬುಡಕಟ್ಟು ನಾಯಕರಿಗೆ ಹಿಂದುತ್ವದ ರಕ್ಷಕರೆಂಬ ಕಥನವನ್ನು ಸೃಷ್ಟಿಸಿ ಸಮುದಾಯದ ಐಕಾನ್ ಗಳನ್ನಾಗಿ ಮಾಡಿ ಸಂಘದ ರಾಜಕಾರಣದ ಏಜೆಂಟರಾಗಿ ಪರಿವರ್ತಿಸಿಕೊಳ್ಳುತ್ತಿದೆ.
ಅದರ ಭಾಗವಾಗಿಯೇ ಬಿರೇನ್ ಸಿಂಗ್ ಮೈತೈ ಮತ್ತು ಕುಕಿ-ನಾಗಾಗಳ ನಡುವಿನ ತಾರತಮ್ಯ ವಿರೋಧಿ ಸಂಘರ್ಷವನ್ನು ಕ್ರಿಶ್ಚಿಯನ್ ಕುಕಿ ಹಾಗೂ ಹಿಂದೂ ಮೈತೈಗಳ ಸಂಘರ್ಷವನ್ನಾಗಿ ಪರಿವರ್ತಿಸುತ್ತಿದ್ದಾರೆ. ಇದಕ್ಕೆ ಆರೆಸ್ಸೆಸ್ನ ಸಂಪೂರ್ಣ ಸಹಕಾರ ಮತ್ತು ಆಶೀರ್ವಾದವಿದೆ. ಈ ಉದ್ದೇಶಕ್ಕಾಗಿಯೇ ಮೈತೈ ಲೀಪುನ್ ಮತ್ತು ಆರಂಭೈ ತೆನ್ಗೋಲ್ ಎಂಬ ಸಶಸ್ತ್ರ ಯುವ ಆಕ್ರಮಣಕಾರಿ ಪಡೆಗಳನ್ನು ತಯಾರು ಮಾಡಲಾಗಿದೆ. ಮೇ 4ರ ನಂತರ ವ್ಯವಸ್ಥಿತವಾಗಿ ನಡೆದ ಕುಕಿಗಳ ಕಗ್ಗೊಲೆ, 200ಕ್ಕೂ ಹೆಚ್ಚು ಚರ್ಚುಗಳ ವಿಧ್ವಂಸ, ಕುಕಿ ಹೆಣ್ಣುಮಕ್ಕಳ ಅತ್ಯಾಚಾರ, ಬೆತ್ತಲೆ ಮೆರವಣಿಗೆ ಇತ್ಯಾದಿಗಳೆಲ್ಲದರ ಹಿಂದೆ ಈ ಎರಡು ಮೈತೈ ದುರಭಿಮಾನಿ ಹಾಗೂ ಹಿಂದುತ್ವವಾದಿ ಸಂಘಟನೆಗಳ ನೇರ ಪಾತ್ರವಿದೆ. ಅವರಲ್ಲಿ ಒಬ್ಬರೂ ಈವರೆಗೆ ಬಂಧಿತರಾಗಿಲ್ಲ. ಮೈತೈ ಲೀಪುನ್ ನಾಯಕನಾದ ಪ್ರಮೋತ್ ಸಿಂಗ್, ‘ದ ವೈರ್’ ಪತ್ರಿಕೆಯಲ್ಲಿ ಕರಣ್ ಥಾಪರ್ಗೆ ಕೊಟ್ಟ ಸಂದರ್ಶನದಲ್ಲಿ ಇಡೀ ಕುಕಿ ಜನಾಂಗದ ಮೇಲೆ ಮೈತೈ ಜನಾಂಗ ಯುದ್ಧ ಸಾರಿದೆಯೆಂದೂ, ಈ ಯುದ್ಧದಲ್ಲಿ ಭಾರತ ಸರಕಾರ ತಮ್ಮ ಜೊತೆಗಿರುತ್ತದೆ ಎಂಬ ಭರವಸೆ ತನಗಿದೆಯೆಂದೂ ಸ್ಪಷ್ಟವಾಗಿ ಹೇಳಿದ್ದ ಹಾಗೂ ಪ್ರತಿಯೊಬ್ಬ ಕುಕಿಯನ್ನು ಒಂದೋ ಕೊಂದು ಹಾಕುವುದಾಗಿ ಅಥವಾ ದೇಶ ಬಿಟ್ಟು ತೊಲಗಿಸುವುದಾಗಿ ಘೋಷಿಸಿದ್ದ. ಆದ್ದರಿಂದ ಇದು ಭಾರತ ವರ್ಸಸ್ ಕುಕಿ ಯುದ್ಧವೆಂದು ಪರಿಗಣಿಸುವುದಾಗಿಯೂ ಹೇಳಿದ್ದ.
ಮೈತೈ ಸಮುದಾಯದ ಮಹಿಳೆಯರೂ ಸೇರಿದಂತೆ ಹೆಚ್ಚು ಕಡಿಮೆ ಬಹುಪಾಲು ಮೈತೈ ಸಮುದಾಯ ಈ ಜನಾಂಗೀಯ ಹಾಗೂ ಧರ್ಮ ದ್ವೇಷವನ್ನು ಅಂತರಂಗೀಕರಿಸಿಕೊಂಡಿದೆ. ವಾಸ್ತವವಾಗಿ ಮಣಿಪುರ ಹಿಂಸಾಚಾರ ಪ್ರಾರಂಭವಾಗಿ ಮೂರು ತಿಂಗಳು ಕಳೆಯುತ್ತಿದ್ದರೂ ಪ್ರಧಾನಿಯ ಮೌನದ ಹಿಂದೆ ಈ ಬೀಭತ್ಸ ಕ್ರೌರ್ಯದ ಸಮರ್ಥನೆ ಇದೆ. ಇದು ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆಯ ಹಿಂದಿರುವ ಚಾರಿತ್ರಿಕ ಹಾಗೂ ವರ್ತಮಾನದ ಘೋರ ಹಾಗೂ ಪಾಶವೀ ಹಿನ್ನೆಲೆ. ಇದು ಕೇವಲ ಹಲವು ಹೆಣ್ಣುಮಕ್ಕಳ ಅತ್ಯಾಚಾರಕ್ಕೆ ಮರುಗುವುದರಿಂದ ಬಗೆಹರಿಯುವ ಸಮಸ್ಯೆಯಲ್ಲ ಅಥವಾ ಅ ಇಬ್ಬರು ಮಹಿಳೆಯರ ಅತ್ಯಾಚಾರ ಮಾಡಿದವರನ್ನು ಬಂಧಿಸುವುದರಿಂದ ಬಗೆಹರಿಸುವ ಸಮಸ್ಯೆಯೂ ಅಲ್ಲ. ಮಣಿಪುರದಲ್ಲಿ ನಡೆಯುತ್ತಿರುವುದು ಹಿಂದುತ್ವದ ಅರ್ಥಾತ್ ಭಾರತೀಯ ಫ್ಯಾಶಿಸಂನ ಕ್ರೌರ್ಯದ ಮತ್ತೊಂದು ಹಂತದ ಪ್ರಯೋಗ. ಇಲ್ಲಿ ಅತ್ಯಾಚಾರವಾಗುತ್ತಿರುವುದು, ಕೊಲೆಯಾಗುತ್ತಿರುವುದು ಕುಕಿಗಳಲ್ಲ. ಭಾರತದ ಕನಸು. ಹೀಗಾಗಿ ಭಾರತವನ್ನು ಉಳಿಸಿಕೊಳ್ಳಬೇಕೆಂದರೆ ಸಂತ್ರಸ್ತ ಕುಕಿಗಳಿಗಾಗಿ ಕಂಬನಿ ಮಿಡಿಯುತ್ತಲೇ, ಪಾಶವೀಕರಣಗೊಳ್ಳುತ್ತಿರುವ ಮೈತೈ ಸಮುದಾಯದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಲೇ ಈ ಎಲ್ಲಾ ಸಮಸ್ಯೆಗಳ ಬೇರಿನಲ್ಲಿರುವ ಐತಿಹಾಸಿಕ ಅಸಮಾನತೆಯನ್ನು, ತಾರತಮ್ಯವನ್ನು ನಿವಾರಿಸಲು ಸಮಬಾಳು-ಸಮಪಾಲಿನ ರಾಜಕಾರಣವನ್ನು, ಸಾಮಾಜಿಕ ನ್ಯಾಯದ ಮೌಲ್ಯವನ್ನು ಬೇರೂರಿಸುವ ನಿರಂತರ ಪ್ರಯತ್ನವನ್ನು ಮಾಡಬೇಕಿದೆ. ಅಲ್ಲವೇ?