ಬಿರುಕುಗಳ ಸರಣಿ
ಅತಿ ಪ್ರಯಾಸದ ಮತ್ತು ಸುದೀರ್ಘವೆನ್ನಿಸಿದ ಈ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಇನ್ನು ಮೂರೇ ದಿನಗಳಲ್ಲಿ ಹೊರಬೀಳಲಿದೆ. ಯಾವುದೇ ಪಕ್ಷ/ಮೈತ್ರಿ ಮುಂದಿನ ಸರಕಾರವನ್ನು ರಚಿಸಿದರೂ ಚುನಾವಣಾ ಪ್ರಚಾರದಲ್ಲಿ ನೇಪಥ್ಯಕ್ಕೆ ಸರಿದುಹೋಗಿರುವ ಗಂಭೀರ ಸವಾಲುಗಳನ್ನು ಎದುರಿಸಲೇಬೇಕಾಗುತ್ತದೆ. ಭಾರತವಂತೂ ಬಿರುಕುಗಳ ಸರಣಿಯಿಂದ ನಲುಗಿಹೋಗಿದ್ದು, ಅದನ್ನು ಸಮರ್ಪಕವಾಗಿ ಪರಿಹರಿಸದಿದ್ದರೆ ನಮ್ಮ ಗಣರಾಜ್ಯದ ಭವಿಷ್ಯವೇ ದುರ್ಬಲಗೊಳ್ಳಬಹುದು.
ಮೊದಲ ಬಿರುಕೆಂದರೆ, ಪಕ್ಷ ವ್ಯವಸ್ಥೆಯ ಭ್ರಷ್ಟಾಚಾರ. ರಾಜಕೀಯ ಪಕ್ಷಗಳು, ಅದರ ನಾಯಕರ ಮುಕ್ತ ಆಯ್ಕೆಗೆ ಅವಕಾಶವಿರುವ ಮತ್ತು ಪಕ್ಷದ ಇತರರಿಗೆ ಉತ್ತರದಾಯಿಯಾಗಿರಬಲ್ಲ ಆಂತರಿಕ ಪ್ರಜಾಪ್ರಭುತ್ವವನ್ನು ಹೊಂದಿರಬೇಕು. ಭಾರತದ ರಾಜಕೀಯ ಇಂದು ಈ ಮಾದರಿಯಿಂದ ಪೂರ್ತಿಯಾಗಿ ಹೊರತಾಗಿದೆ. ಪಕ್ಷಗಳು ಒಂದೋ ವ್ಯಕ್ತಿಪೂಜೆಯಲ್ಲಿ ತೊಡಗಿವೆ, ಇಲ್ಲವೇ ಕುಟುಂಬದ ಸಂಸ್ಥೆಗಳಾಗಿಬಿಟ್ಟಿವೆ. ಮೊದಲನೆಯ ವಿಧಕ್ಕೆ ಬಿಜೆಪಿ ಅತ್ಯಂತ ಗಮನಾರ್ಹ ಉದಾಹರಣೆಯಾಗಿದೆ. ಕಳೆದ ದಶಕದುದ್ದಕ್ಕೂ ಇಡೀ ಪಕ್ಷ ವ್ಯವಸ್ಥೆ ಹಾಗೆಯೇ ಸರಕಾರಿ ವ್ಯವಸ್ಥೆಯ ಬಹುತೇಕ ಭಾಗ ಕೂಡ - ನರೇಂದ್ರ ಮೋದಿಯನ್ನು, ಇರುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ, ಅತಿಮಾನುಷ ಮತ್ತು ಅರೆದೈವಿಕ ವ್ಯಕ್ತಿಯೆಂಬಂತೆ ಬಿಂಬಿಸುವಲ್ಲಿ ತೊಡಗಿದ್ದು, ಜನರು ಆರಾಧಿಸಬೇಕು ಮತ್ತು ಪ್ರಶ್ನಿಸದೆ ಅನುಸರಿಸಬೇಕು ಎಂಬ ಒತ್ತಾಯವನ್ನು ಅದು ಹೇರುತ್ತಿದೆ. ಹಾಗಿದ್ದರೂ, ತಮ್ಮದೇ ಆದ ಹೆಚ್ಚು ಭೌಗೋಳಿಕ ನೆಲೆಗಳಲ್ಲಿ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಕೇರಳದಲ್ಲಿ ಪಿಣರಾಯಿ ವಿಜಯನ್, ದಿಲ್ಲಿಯಲ್ಲಿ ಅರವಿಂದ ಕೇಜ್ರಿವಾಲ್, ಆಂಧ್ರದಲ್ಲಿ ಜಗನ್‌ಮೋಹನ್ ರೆಡ್ಡಿ ಮತ್ತು ಒಡಿಶಾದಲ್ಲಿ ನವೀನ್ ಪಟ್ನಾಯಕ್ ಎಲ್ಲರೂ ತಮ್ಮ ರಾಜ್ಯದ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ತಮ್ಮ ಮನಸ್ಸಾಕ್ಷಿಯಿಂದ ಕಂಡುಕೊಂಡಂತೆ ಕೆಲಸ ಮಾಡುತ್ತಿದ್ದಾರೆ.
ಪ್ರಜಾಸತ್ತಾತ್ಮಕ ಘಟಕಗಳೆಂದು ಬಿಂಬಿಸಿಕೊಳ್ಳುತ್ತಿರುವ ಕುಟುಂಬದ ಪಕ್ಷಗಳ ಅತಿರೇಕಗಳೂ ಕಡಿಮೆಯಿಲ್ಲ. ಪಕ್ಷ ಕಟ್ಟಲು ದಶಕಗಳ ಕಾಲ ದುಡಿದವರನ್ನು ಹಿಂದಿಕ್ಕಿ ಪ್ರಿಯಾಂಕಾ ಗಾಂಧಿಯವರನ್ನು ರಾತ್ರೋರಾತ್ರಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ಕಾಂಗ್ರೆಸ್ ಸಹಜವಾಗಿಯೇ ಇಲ್ಲಿ ಪ್ರಮುಖ ಅಪರಾಧಿ. ಗಾಂಧಿಗಳ ಮಾತು ಮೀರದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ತಮ್ಮ ಪುತ್ರ ಕರ್ನಾಟಕದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಇರುವಾಗಲೂ, ತಮ್ಮ ಅಳಿಯನನ್ನು ತಾವು ಸ್ಪರ್ಧಿಸುತ್ತಿದ್ದ ಗುಲ್ಬರ್ಗಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರು. ಹಾಗೆಯೇ, ಬಿಹಾರದ ಆರ್‌ಜೆಡಿ, ಉತ್ತರ ಪ್ರದೇಶದ ಎಸ್‌ಪಿ ಮತ್ತು ತಮಿಳುನಾಡಿನ ಡಿಎಂಕೆ ಎಲ್ಲವೂ ಶಾಶ್ವತವಾಗಿ ಒಂದೇ ಕುಟುಂಬದವರ ನಿಯಂತ್ರಣದಲ್ಲಿವೆ.
ಈ ವಿಷಯದಲ್ಲಿ ಭಾರತ ನಾವು ಅಳವಡಿಸಿಕೊಂಡ ರಾಜಕೀಯ ವ್ಯವಸ್ಥೆಯಾದ ಗ್ರೇಟ್ ಬ್ರಿಟನ್‌ಗಿಂತ ಎಷ್ಟರ ಮಟ್ಟಿಗೆ ಬೇರೆಯೇ ಆಗಿದೆ ಎಂಬುದನ್ನು ಗಮನಿಸಬಹುದು. ಅಲ್ಲಿ ಪ್ರಧಾನಿ ರಿಷಿ ಸುನಕ್ ಸುತ್ತ ಯಾವುದೇ ವ್ಯಕ್ತಿಪೂಜೆ ಇಲ್ಲ. ಪ್ರಮುಖ ವಿರೋಧ ಪಕ್ಷವಾದ ಲೇಬರ್ ಪಾರ್ಟಿಯ ನಾಯಕ ಕೀರ್ ಸ್ಟಾರ್ಮರ್ ರಾಜಕೀಯ ಕುಟುಂಬದಿಂದ ಬಂದವರಲ್ಲ. ಅವರಿಬ್ಬರೂ ಇಂದು ತಾವಿರುವ ಸ್ಥಾನಕ್ಕೆ ಏರಿರುವುದು ಕಠಿಣ ಪರಿಶ್ರಮ ಮತ್ತು ತಮ್ಮನ್ನು ಬೆಂಬಲಿಸಲು ಪಕ್ಷದ ಎಲ್ಲರ ವಿಶ್ವಾಸ ಗಳಿಸುವ ಮೂಲಕ. ಒಮ್ಮೆ ಅವರು ತಮ್ಮ ಪಕ್ಷದವರ ವಿಶ್ವಾಸ ಅಥವಾ ಗೌರವವನ್ನು ಕಳೆದುಕೊಂಡರೆ, ಅವರು ಸದ್ದಿಲ್ಲದೆ ಅಧಿಕಾರ ಬಿಟ್ಟು ಹೋಗುತ್ತಾರೆ. ಆ ಜಾಗಕ್ಕೆ ಅವರ ಹಾಗೆಯೇ ರಾಜಕೀಯ ಕುಟುಂಬದವರಾಗಿರದೆಯೂ, ಇಡೀ ರಾಷ್ಟ್ರಕ್ಕಾಗಿ ದನಿಯೆತ್ತುತ್ತಾರೆ ಎಂದು ನಂಬಿಸಲು ವ್ಯರ್ಥ ಪ್ರಯತ್ನಿಸದೆಯೂ ಸ್ವಪ್ರಯತ್ನದಿಂದ ಅರ್ಹತೆ ಪಡೆದವರು ಬರುತ್ತಾರೆ.
ಭಾರತದಲ್ಲಿ ಪಕ್ಷ ವ್ಯವಸ್ಥೆ ಭ್ರಷ್ಟವಾಗಿದೆ ಮತ್ತು ತುಕ್ಕು ಹಿಡಿದಿದೆ. ಇದರ ನಡುವೆ, ದೇಶದ ವ್ಯವಸ್ಥೆ ಅನಿಯಂತ್ರಿತ ಮತ್ತು ವಿಲಕ್ಷಣವಾಗಿದೆ. ನಾಗರಿಕ ಸೇವೆಗಳು ಮತ್ತು ಪೊಲೀಸರು ಸಂವಿಧಾನಕ್ಕನುಗುಣವಾಗಿ ಸ್ವಾಯತ್ತ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ವಾಸ್ತವವಾಗಿ, ಅವರು ತಮ್ಮ ರಾಜಕೀಯ ನಾಯಕರ ಇಷ್ಟಕ್ಕೆ ನಡೆದುಕೊಳ್ಳುತ್ತಿದ್ದು, ದೊಡ್ಡ ಮಟ್ಟದಲ್ಲಿ ರಾಜಿಯಾಗಿದ್ದಾರೆ. ಇದು, ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಐಎಎಸ್ ಅಥವಾ ಐಪಿಎಸ್ ಅಧಿಕಾರಿಗೆ ಭಡ್ತಿ ಮತ್ತು ಆದ್ಯತೆ ಅವರ ವೃತ್ತಿಪರ ಹೆಚ್ಚುಗಾರಿಕೆಗಿಂತಲೂ ಮಂತ್ರಿಗಳಿಗೆ ಹತ್ತಿರವಾಗಿರುವ ಮೂಲಕ ಆಗುತ್ತಿರುವುದರೊಂದಿಗೆ ಸಾಬೀತಾಗಿದೆ. ಇದರ ಜೊತೆಗೇ, ಚುನಾವಣಾ ಆಯೋಗದಂತಹ ನಿಯಂತ್ರಕ ಸಂಸ್ಥೆಗಳು ಸಾಕಷ್ಟು ಸ್ವತಂತ್ರವಾಗಿರದೆ, ಆಡಳಿತ ಪಕ್ಷದ ಒತ್ತಡಕ್ಕೆ ಮಣಿಯುತ್ತಿರುವುದು ವ್ಯಾಪಕವಾಗಿ ಕಾಣಿಸುತ್ತಿದೆ.
ನಾಗರಿಕರನ್ನು ವಿಚಾರಣೆಯಿಲ್ಲದೆ ಜೈಲಿಗೆ ಹಾಕಲು ಮತ್ತು ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುವಂತೆ ಮಾಡಲು ಅವಕಾಶವಿರುವ ಕಾನೂನುಗಳ ಕಾರಣದಿಂದ ಭಾರತದ ಪ್ರಜಾಸತ್ತಾತ್ಮಕ ರುಜುವಾತುಗಳು ಮತ್ತಷ್ಟು ಕ್ಷೀಣಿಸುತ್ತಿವೆ. ಈ ಕಾನೂನುಗಳನ್ನು ರಾಜಕೀಯ ವಿರೋಧಿಗಳನ್ನು, ವಾಸ್ತವವಾಗಿ ಯಾವುದೇ ರೀತಿಯ ಭಿನ್ನಮತೀಯರನ್ನು ಬೆದರಿಸಲು ಮತ್ತು ದನಿಯೆತ್ತದಿರುವಂತೆ ಮಾಡಲು ಬಳಸಲಾಗಿದೆ. ಕಾನೂನಿನ ಈ ದುರುಪಯೋಗದಲ್ಲಿ ನ್ಯಾಯಾಲಯಗಳ ಪಾಲಿದೆ. ನ್ಯಾಯಾಧೀಶರು ಜಾಮೀನು ನೀಡುವಲ್ಲಿ ಅತ್ಯಂತ ವಿಳಂಬ ಮಾಡುತ್ತಾರೆ ಮತ್ತು ಅಚ್ಚರಿಯೆಂದರೆ, ಸುಸಂಸ್ಕೃತ ಸಮಾಜದಲ್ಲಿ ಇರಬಾರದಾಗಿದ್ದ ಯುಎಪಿಎಯಂತಹ ಕಾನೂನುಗಳು ಕಾನೂನು ಪುಸ್ತಕದಲ್ಲಿ ಉಳಿಯಲು ಅವಕಾಶ ಮಾಡಿದ್ದಾರೆ.
ಸರಳವಾಗಿ ಹೇಳುವುದಾದರೆ, ಈ ರಾಜಕೀಯ ನ್ಯೂನತೆಗಳು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಅದರಲ್ಲೂ ಪ್ರಜಾಪ್ರಭುತ್ವದ ತಾಯಿ ಎಂಬ ಅಬ್ಬರದ ಹೇಳಿಕೆಗಳ ಹಿಂದೆ ಅವಿತಿವೆ. ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ ಎಂಬ ಮತ್ತೊಂದು ವಾದ ಕೂಡ ಪಾಪಗಳ ರಾಶಿಯನ್ನು ಮರೆಮಾಚುತ್ತದೆ. ಆರ್ಥಿಕ ಉದಾರೀಕರಣ ನಿಜವಾಗಿಯೂ ಬಡತನದ ತೀವ್ರತೆಗೆ ಕಾರಣವಾಗಿದೆ. ಅದು ಅಸಮಾನತೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದಲ್ಲದೆ, ರಾಷ್ಟ್ರೀಯ ಆದಾಯದ ಏರಿಕೆ ಉದ್ಯೋಗಗಳಲ್ಲಿ ಸೂಕ್ತವಾದ ಬೆಳವಣಿಗೆಯನ್ನು ಕಂಡಿಲ್ಲ. ಭಾರತ ಬಿಲಿಯನೇರ್‌ಗಳನ್ನು ಬೆಳೆಸುವಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದ್ದರೂ, ವಿದ್ಯಾವಂತ ಯುವಕರನ್ನು ನಿರುದ್ಯೋಗ ಅತಿಯಾಗಿ ಕಾಡುತ್ತಿದೆ. ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪ್ರಮಾಣವೂ ಕಡಿಮೆಯಿದೆ.
ಭಾರತದ ಆರ್ಥಿಕ ದಾಖಲೆ ಕಲಸುಮೇಲೋಗರ ವಾಗಿದೆ. ಮತ್ತದರ ಪರಿಸರ ದಾಖಲೆ ಕೂಡ ಹಾನಿಕಾರಕವಾಗಿದೆ. ಭಾರತದ ಆರ್ಥಿಕ ಉತ್ಕರ್ಷದ ಶೋಪೀಸ್ ನಗರವಾದ ಬೆಂಗಳೂರಿನಲ್ಲಿಯ ನೀರಿನ ಬಿಕ್ಕಟ್ಟು ಮತ್ತು ಭಾರತದ ಜಾಗತಿಕ ಉನ್ನತಿಯ ಶೋಪೀಸ್ ನಗರವಾದ ಹೊಸದಿಲ್ಲಿಯಲ್ಲಿನ ತೀವ್ರ ವಾಯುಮಾಲಿನ್ಯ ನಮ್ಮ ಜೀವನವನ್ನು ನಿಯಂತ್ರಿಸುವ ಜೈವಿಕ ಭೌತಿಕ ವಾಸ್ತವಗಳನ್ನು ನಾವು ಎಷ್ಟು ನಿರ್ಲಕ್ಷಿಸಿದ್ದೇವೆ ಎಂಬುದರ ಅಭಿವ್ಯಕ್ತಿಗಳಾಗಿವೆ. ನಮ್ಮ ವಿಷಕಾರಕ ಗಾಳಿ, ಕುಸಿಯುತ್ತಿರುವ ನೀರಿನ ಕೋಷ್ಟಕಗಳು, ಕಲುಷಿತ ಮಣ್ಣು ಮತ್ತು ಕಣ್ಮರೆಯಾಗುತ್ತಿರುವ ಜೈವಿಕ ವೈವಿಧ್ಯತೆ ಇವೆಲ್ಲದಕ್ಕೂ ವರ್ತಮಾನದಲ್ಲಿ ಭಾರೀ ಬೆಲೆ ತೆರಬೇಕಾಗಿದೆ. ಮತ್ತಿವು ನೂರಾರು ಮಿಲಿಯನ್ ಭಾರತೀಯರ ಆರೋಗ್ಯ ಮತ್ತು ಜೀವನೋಪಾಯವನ್ನು ದುರ್ಬಲಗೊಳಿಸುತ್ತವೆ. ಅವರು ಭವಿಷ್ಯದ ಬಗ್ಗೆ ಅತಿಯಾದ ಸಂಪನ್ಮೂಲ, ಅತಿಯಾದ ಬಂಡವಾಳವನ್ನು ಬೇಡುವ ನಮ್ಮ ಕೈಗಾರಿಕೀಕರಣದ ಮಾದರಿ ಸಮರ್ಥನೀಯವಾಗಿದೆಯೇ ಎಂಬ ಕಳವಳಕಾರಿ ಪ್ರಶ್ನೆಗಳನ್ನು ಎತ್ತುತ್ತಾರೆ. ಭಾರತದ ಪರಿಸರ ಬಿಕ್ಕಟ್ಟು ಹವಾಮಾನ ಬದಲಾವಣೆಯಿಂದ ಸಂಭವಿಸುತ್ತಿದೆ ಎಂಬುದನ್ನು ನಾನು ಇಲ್ಲಿ ಹೇಳಬೇಕು. ಹವಾಮಾನ ಬದಲಾವಣೆಯು ಸಮಸ್ಯೆಯನ್ನು ತೀವ್ರಗೊಳಿಸುತ್ತದೆ, ಹೌದು. ಆದರೆ ಅದು ಅಸ್ತಿತ್ವದಲ್ಲಿಲ್ಲದಿದ್ದರೂ, ನಮ್ಮದೇ ಆದ ಅಗಾಧವಾದ ಪರಿಸರ ಸವಾಲುಗಳನ್ನು ಇನ್ನೂ ಎದುರಿಸಬೇಕಾಗುತ್ತದೆ.
ನಮ್ಮ ಪಕ್ಷ ವ್ಯವಸ್ಥೆಯ ಅಸಮರ್ಪಕ ನಡೆಗಳು, ದೇಶದೊಳಗಿನ ಆಳವಾದ ಪ್ರಜಾಪ್ರಭುತ್ವ ವಿರೋಧಿ ಸ್ವಭಾವ, ನಮ್ಮ ಆರ್ಥಿಕ ಮಾದರಿಯ ಕೊರತೆಗಳು, ನಮ್ಮ ನೈಸರ್ಗಿಕ ನೆಲೆಗಳ ನಾಶ -ಈ ಎಲ್ಲಾ ಸಮಸ್ಯೆಗಳು ಆಳವಾದ ಹಿನ್ನೆಲೆಯನ್ನು ಹೊಂದಿವೆ. ಹಲವು ದಶಕಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಇದರ ಹೆಚ್ಚಿನ ಹೊಣೆ ಹೊರಬೇಕಾಗುತ್ತದೆ. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಈ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಂಡಿವೆ.
ನಾವು ಕೋಮು ಸಮಸ್ಯೆ ಎಂದು ಯಾವುದನ್ನು ಕರೆಯುತ್ತೇವೆಯೋ ಅದೂ ಹೊಸದೇನಲ್ಲ. ಪಾಕಿಸ್ತಾನದ ಸೃಷ್ಟಿಯಾದಾಗಿನಿಂದಲೂ, ಭಾರತದಲ್ಲಿ ಉಳಿದುಕೊಂಡಿರುವ ಮುಸ್ಲಿಮರ ಪಾಲಿಗೆ ಸುರಕ್ಷೆ ಇಲ್ಲವಾಗಿದೆ. ಪಾಕಿಸ್ತಾನ ತನ್ನ ಅಲ್ಪಸಂಖ್ಯಾತರಿಗೆ ಏನೇ ಮಾಡಿದರೂ ಭಾರತದಲ್ಲಿ ಅವರು ಸಮಾನ ಪೌರತ್ವದ ಹಕ್ಕುಗಳನ್ನು ಹೊಂದುತ್ತಾರೆ ಎಂಬ ಭರವಸೆಯನ್ನು ಭಾರತೀಯ ಮುಸ್ಲಿಮರಲ್ಲಿ ತುಂಬಲು ಪ್ರಧಾನಿಯಾಗಿ ಜವಾಹರಲಾಲ್ ನೆಹರೂ ಶ್ರಮಿಸಿದರು. ಆದರೂ ಮುಸ್ಲಿಮರು ವಿಭಜನೆಯ ಭಾರವನ್ನು ಹೊರಬೇಕಾಯಿತು. ಅವರನ್ನು ಆಗಾಗ ಅನುಮಾನ ಮತ್ತು ಹಗೆತನದಿಂದ ನಡೆಸಿಕೊಳ್ಳಲಾಗುತ್ತಿತ್ತು. ರಾಜೀವ್ ಗಾಂಧಿಯವರ ಅವಧಿಯಲ್ಲಿ ಧರ್ಮಗಳ ನಡುವಿನ ಸಂಬಂಧಗಳು ಮತ್ತಷ್ಟು ಹದಗೆಟ್ಟವು.
2014ರ ನಂತರ, ಸ್ವತಂತ್ರ ರಾಷ್ಟ್ರವಾಗಿ ನಮ್ಮ ಇತಿಹಾಸದಲ್ಲಿ ಮೊದಲ ಬಾರಿಗೆ ಕೇಂದ್ರದ ಆಡಳಿತಾರೂಢ ಪಕ್ಷ ತನ್ನ ಹಿಂದೂ ಬಹುಸಂಖ್ಯಾತ ಮಹತ್ವಾಕಾಂಕ್ಷೆಗಳನ್ನು ಸ್ಪಷ್ಟವಾಗಿ ಮುನ್ನೆಲೆಗೆ ತಂದ ಪರಿಣಾಮವಾಗಿ, ಭಾರತದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯದ ಅಭದ್ರತೆಗಳು ಬಹುಪಟ್ಟು ಹೆಚ್ಚಾಗಿವೆ. ಪ್ರಧಾನಿ ತನ್ನನ್ನು ತಾನು ಒಂದು ರೀತಿಯ ಹಿಂದೂ ಸಾಮ್ರಾಟನೆಂದು ತೋರಿಸಿಕೊಂಡಿರುವುದು, ಹಿಂದೂ ಬಹುಸಂಖ್ಯಾತರು ಯುಗಯುಗಗಳಿಂದಲೂ ಹೊಂದಿದ್ದ ಎಲ್ಲಾ ಭರವಸೆಗಳನ್ನು ಪೂರೈಸಲು ಪರಮಾತ್ಮನೇ ತನ್ನನ್ನು ಭೂಮಿಗೆ ಕಳುಹಿಸಿದ್ದಾನೆ ಎಂಬೆಲ್ಲ ರಾಜಕೀಯ ಭಾಷಣಗಳಲ್ಲಿ ತೊಡಗಿರುವುದು ಹೆಚ್ಚುತ್ತಿರುವ ಧಾರ್ಮಿಕತೆಯ ಪಾತ್ರವನ್ನು ಸೂಚಿಸುತ್ತಿದೆ. ಪರಿಣಾಮವಾಗಿ ಭಾರತೀಯ ಮುಸ್ಲಿಮರು ಭಯಭೀತರಾಗಿದ್ದಾರೆ ಮತ್ತು ಹಿಂದೆಂದೂ ಇದು ಇಷ್ಟರ ಮಟ್ಟಿಗೆ ಅವರನ್ನು ಕಾಡಿರಲಿಲ್ಲ. ಇದು ಭವಿಷ್ಯದಲ್ಲಿ ಎಲ್ಲಿಗೆ ಮುಟ್ಟಲಿದೆ ಎಂಬುದನ್ನು ಹೇಳಲಿಕ್ಕಾಗದು.
ನಾನು ಹೇಳಬಯಸುವ ಕೊನೆಯ ಸಮಸ್ಯೆಯೆಂದರೆ ಕೇಂದ್ರ ಸರಕಾರ ಮತ್ತು ರಾಜ್ಯಗಳ ನಡುವಿನ ಸಂಬಂಧ. 1959ರಲ್ಲಿ ಕಮ್ಯುನಿಸ್ಟ್ ನೇತೃತ್ವದ ಕೇರಳ ಸರಕಾರವನ್ನು ಜವಾಹರಲಾಲ್ ನೆಹರೂ ವಜಾಗೊಳಿಸಿದ ಬಗ್ಗೆ ಮತ್ತು ಇಂದಿರಾ ಗಾಂಧಿಯವರು 356ನೇ ವಿಧಿಯನ್ನು ಇನ್ನೂ ಹೆಚ್ಚಾಗಿ ಬಳಸಿದ್ದರ ಬಗ್ಗೆ ಮಾತನಾಡಲು ಬಿಜೆಪಿ ಬೆಂಬಲಿಗರು ಹೆಚ್ಚು ಇಷ್ಟಪಡುತ್ತಾರೆ. ಆದರೆ ವಿಪಕ್ಷಗಳ ನೇತೃತ್ವದ ರಾಜ್ಯ ಸರಕಾರಗಳ ವಿಚಾರದಲ್ಲಿ ಅವರದೇ ನಡವಳಿಕೆ ಮಾತ್ರ ಅತ್ಯಂತ ಪ್ರತಿಕೂಲಕರವಾಗಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದ ಆಡಳಿತ ಬಿಜೆಪಿ ಸರಕಾರವಿಲ್ಲದ ರಾಜ್ಯಗಳ ನ್ಯಾಯಸಮ್ಮತ ಹಿತಾಸಕ್ತಿಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ. ಅದು ಕಾನೂನುಬದ್ಧವಾಗಿ ಚುನಾಯಿತರಾದ ಮುಖ್ಯಮಂತ್ರಿಗಳನ್ನು ಅಸಭ್ಯ ಭಾಷೆಯಲ್ಲಿ ಲೇವಡಿ ಮಾಡಿದೆ. ಪ್ರತೀ ಹಂತದಲ್ಲಿಯೂ ಕಾನೂನುಬದ್ಧವಾಗಿ ಚುನಾಯಿತ ಸರಕಾರಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ರಾಜ್ಯಪಾಲರನ್ನು ನೇಮಿಸಿದೆ. ಗಣರಾಜ್ಯೋತ್ಸವದ ಪರೇಡ್‌ನಂತಹ ಪ್ರಮುಖ ಸಾಂಕೇತಿಕ ಕಾರ್ಯಕ್ರಮಗಳಲ್ಲಿ ವಿಪಕ್ಷಗಳ ಸರಕಾರವಿರುವ ರಾಜ್ಯಗಳು ಪ್ರತಿನಿಧಿಸುವುದನ್ನೇ ಇಲ್ಲವಾಗಿಸಲಾಗಿದೆ. ಭಾರತದ ಪ್ರತಿಯೊಂದು ರಾಜ್ಯವನ್ನು ಬಿಜೆಪಿಯೇ ಆಳುವಂತಾಗುವವರೆಗೂ ಸುಮ್ಮನಿರುವುದಿಲ್ಲ ಎಂದು ಅವರು ಇತರ ಎಲ್ಲಾ ರೀತಿಯಿಂದಲೂ ತೋರಿಸಿಕೊಂಡಿದ್ದಾರೆ. ಅವರ ಈ ನಡವಳಿಕೆ ನಿರಂಕುಶವಾದದ ಅತಿ ಸ್ಪಷ್ಟ ಪ್ರದರ್ಶನವಾಗಿದೆ.
ಸಾರ್ವತ್ರಿಕ ಚುನಾವಣೆಯಲ್ಲಿ ನೂರಾರು ಮಿಲಿಯನ್ ಭಾರತೀಯರು ಮತ ಚಲಾಯಿಸುವ ಗಮನಾರ್ಹ ಸಾಧನೆಯನ್ನು ಈಗಷ್ಟೇ ಕಂಡಿದ್ದೇವೆ. ಆದರೂ ಈ ಮತಗಳು ಚಲಾವಣೆಯಾಗಿರುವುದು ರಾಜಿ ಮಾಡಿಕೊಂಡ ಸಾರ್ವಜನಿಕ ಸಂಸ್ಥೆಗಳು, ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳು, ಕುಸಿಯುತ್ತಿರುವ ಆರ್ಥಿಕತೆ, ಹಾಳಾದ ಪರಿಸರ, ಧಾರ್ಮಿಕ ಅಲ್ಪಸಂಖ್ಯಾತರನ್ನು ಕಾಡುತ್ತಿರುವ ಆಳವಾದ ಅಭದ್ರತೆಯ ಭಾವನೆ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲೆ ಹೆಚ್ಚುತ್ತಿರುವ ಒತ್ತಡದ ಸನ್ನಿವೇಶದ ಹಿನ್ನೆಲೆಯಲ್ಲಿ ಎಂಬುದು ಸ್ಪಷ್ಟವಿದೆ. ಕೇಂದ್ರದಲ್ಲಿ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಅದರ ಆದ್ಯ ಕರ್ತವ್ಯವೆಂದರೆ ಈ ದೋಷಗಳನ್ನು ನಿವಾರಿಸಲು ಮತ್ತು ತಗ್ಗಿಸಲು ಪ್ರಯತ್ನಿಸುವುದು. ಅದು ನಿಜವಾಗಿಯೂ ಹಾಗಾಗುತ್ತದೆಯೆ ಎಂಬುದು ಈಗಿನ ಪ್ರಶ್ನೆ.