ಬಾಬಾ ಅವರ ಸಂಗೀತ ಕುಟುಂಬ
ಗುರು ಅಲ್ಲಾವುದ್ದೀನ್ ಖಾನ್ ಜೊತೆ ರವಿಶಂಕರ್ ಮತ್ತು ಅಲಿ ಅಕ್ಬರ್ ಖಾನ್
1974ರ ಕೊನೆಯಲ್ಲಿ ಹೊಸದಿಲ್ಲಿಯ ಮಾಡರ್ನ್ ಶಾಲೆಯಲ್ಲಿ ಶಾಮಿಯಾನದ ಕೆಳಗೆ ಕುಳಿತಿದ್ದಾಗ ನಾನು ಮೊದಲ ಬಾರಿಗೆ ಶ್ರೇಷ್ಠತೆಯ ಸನ್ನಿಧಿಯಲ್ಲಿದ್ದೇನೆಂಬ ಭಾಸವಾಗಿತ್ತು. ನಾನು ಆಗಷ್ಟೆ ಕಾಲೇಜಿಗೆ ಸೇರಿದ್ದೆ ಮತ್ತು ಸ್ನೇಹಿತರ ಗುಂಪು ಸಂಗೀತ ಕಚೇರಿಯನ್ನು ಕೇಳಲು ನನ್ನನ್ನು ಕರೆದುಕೊಂಡು ಹೋಗಿತ್ತು. ಅಲಿ ಅಕ್ಬರ್ ಖಾನ್ ಅವರ ಸರೋದ್ ವಾದನ, ರವಿಶಂಕರ್ ಅವರ ಸಿತಾರ್ ಮತ್ತು ಅಲ್ಲಾರಖಾ ಖಾನ್ ತಬಲಾ ಇತ್ತು. ಅವರು ಯಾವ ರಾಗಗಳನ್ನು ನುಡಿಸುತ್ತಿದ್ದರು ಎಂದು ಈಗ ನನಗೆ ನೆನಪಿಲ್ಲ. ಆದರೆ ನಾನು ಸಂಪೂರ್ಣವಾಗಿ ಮೋಡಿಗೊಳಗಾಗಿದ್ದೆ ಮತ್ತು ಅಲಿ ಅಕ್ಬರ್ ಮತ್ತು ರವಿಶಂಕರ್ ಇಬ್ಬರ ಗುರುಗಳಾಗಿದ್ದ ಅಲ್ಲಾವುದ್ದೀನ್ ಖಾನ್ ಅವರ ನೆನಪಿಗಾಗಿ ಸಂಗೀತ ಕಚೇರಿ ನಡೆಯುತ್ತಿತ್ತು ಎಂಬುದು ನನಗೆ ನೆನಪಿದೆ.
ದಿಲ್ಲಿಯಲ್ಲಿನ ಆ ರಾತ್ರಿಯವರೆಗೆ ನನ್ನ ಸಂಗೀತದ ಅಭಿರುಚಿ ಹೆಚ್ಚಾಗಿ ಬಾಬ್ ಡೈಲನ್ ಮತ್ತು ಬೀಟಲ್ಸ್ ಅಷ್ಟಕ್ಕೇ ಸೀಮಿತವಾಗಿತ್ತು. ಮುಹಮ್ಮದ್ ರಫಿ ಮತ್ತು ಲತಾ ಮಂಗೇಶ್ಕರ್ ಅವರನ್ನು ಆಗೀಗ ಆಲಿಸುತ್ತಿದ್ದೆ. ನಿಧಾನವಾಗಿ, ಇಬ್ಬರು ಹಿರಿಯ ಸ್ನೇಹಿತರ ಸೂಚನೆಯ ಮೇರೆಗೆ ಇಬ್ಬರೂ ಬಂಗಾಳಿಗಳಾಗಿದ್ದುದು ಬಹುಶಃ ಕಾಕತಾಳೀಯವಲ್ಲ - ನಾನು ನಮ್ಮ ಶಾಸ್ತ್ರೀಯ ಸಂಗೀತವನ್ನು ಹೆಚ್ಚು ಹೆಚ್ಚು ಕೇಳಲು ಪ್ರಾರಂಭಿಸಿದೆ. ದಿಲ್ಲಿ ಸ್ಟೇಷನ್ ಹೆಚ್ಚಾಗಿ ಶಾಸ್ತ್ರೀಯ ಸಂಗೀತಕ್ಕೆ ಮೀಸಲಿಟ್ಟ ಸಮಯ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದ ಮಧ್ಯದ್ದಾಗಿದ್ದುದರಿಂದ ಆಲ್ ಇಂಡಿಯಾ ರೇಡಿಯೊ ಕೇಳಲು ನಾನು ತರಗತಿಗಳಿಗೆ ಗೈರು ಹಾಜರಾಗುತ್ತಿದ್ದೆ. ಕ್ರಿಕೆಟ್ ಅಭ್ಯಾಸ ಮತ್ತು ರಾತ್ರಿಯ ಊಟದ ನಂತರ ಮತ್ತೆ ರೇಡಿಯೊದಲ್ಲಿ ಇನ್ನಷ್ಟು ಸಂಗೀತ ಕೇಳಲು ಪ್ರಯತ್ನಿಸುತ್ತಿದ್ದೆ.
ಇತ್ತೀಚಿನ ದಿನಗಳಲ್ಲಿ ನಾನು ಹೆಚ್ಚಾಗಿ ಯೂಟ್ಯೂಬ್ನಲ್ಲಿ ಸಂಗೀತವನ್ನು ಕೇಳುತ್ತೇನೆ. ಆದರೂ ಸಾಧ್ಯವಾದಾಗ ಬೆಂಗಳೂರಿನಲ್ಲಿ ಸಂಗೀತ ಕಚೇರಿಗಳಿಗೆ ಹೋಗುತ್ತೇನೆ ಮತ್ತು ದೀರ್ಘ ವಿಮಾನ ಪ್ರಯಾಣಗಳಲ್ಲಿ ಜೊತೆಗಿರಲು ನೂರಾರು ಸೀಡಿಗಳನ್ನು ಹೊಂದಿರುವ ಐಪ್ಯಾಡ್ ಅನ್ನು ಒಯ್ಯುತ್ತೇನೆ. ಐವತ್ತು ವರ್ಷಗಳ ಹಿಂದೆ ಹೊಸದಿಲ್ಲಿಯ ಮಾಡರ್ನ್ ಶಾಲೆಯಲ್ಲಿ ಆದ ಆ ರೂಪಾಂತರದ ರಾತ್ರಿಯ ನೆನಪು ಇತ್ತೀಚೆಗೆ, ಸುರ್ಬಹಾರ್ನಲ್ಲಿ ಅನ್ನಪೂರ್ಣ ದೇವಿ ನುಡಿಸುವ ಮಂಜ್ಖಮಾಜ್ ಕಿರು ಅವಧಿಯ, ಆದರೆ ಸಂಪೂರ್ಣವಾಗಿ ಮಾಂತ್ರಿಕ ರೆಕಾರ್ಡಿಂಗ್ ಅನ್ನು ಕೇಳುತ್ತಿದ್ದಾಗ ಮರುಕಳಿಸಿತು. ನಾನು ಆ ತುಣುಕನ್ನು ಮೊದಲು ಕೇಳಿದ್ದೆ; ಆದರೆ ಈಗ ಹೇಗೋ ಅದು ಎಲ್ಲಾ ಹಳೆಯದರ ಬಗ್ಗೆ, ಸಾಮಾನ್ಯವಾಗಿ ನಮ್ಮ ಸಂಗೀತ ಪರಂಪರೆಗೆ ಮಾತ್ರವಲ್ಲ, ನಿರ್ದಿಷ್ಟವಾಗಿ ಒಂದು ಸಂಗೀತ ಘರಾನಾವರೆಗೆ ಯೋಚಿಸುವಂತೆ ಮಾಡಿತು. ಅನ್ನಪೂರ್ಣ ಅಲಿ ಅಕ್ಬರ್ ಅವರ ಸಹೋದರಿ ಮತ್ತು ರವಿಶಂಕರ್ ಅವರ ಮೊದಲ ಪತ್ನಿ. ಅವರೂ ಅವರ ತಂದೆ ಅಲ್ಲಾವುದ್ದೀನ್ ಖಾನ್ ಅವರಿಂದಲೇ ಕಲಿತರು; ಮತ್ತು ಅವರು ಆಯ್ಕೆ ಮಾಡಿದ ವಾದ್ಯ ಸುರ್ಬಹಾರ್. ದುರಂತವೆಂದರೆ, ಅವರ ಸಾರ್ವಜನಿಕ ವೃತ್ತಿಜೀವನವು ಅವರ ವಿವಾಹದ ಕಾರಣದಿಂದಾಗಿ ಮೊಟಕುಗೊಂಡಿತು; ಅಂದಿನಿಂದ ಅವರು ಏಕಾಂತದಲ್ಲಿ ವಾಸಿಸುತ್ತಿದ್ದರು. ಆದರೂ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದನ್ನು ಮುಂದುವರಿಸಿದರು. ಅವರಲ್ಲಿ ಮಹಾನ್ ಕೊಳಲುವಾದಕ ಹರಿಪ್ರಸಾದ್ ಚೌರಾಸಿಯಾ ಕೂಡ ಒಬ್ಬರು. (ಅನ್ನಪೂರ್ಣ ಅವರ ಜೀವನ ಮತ್ತು ಪರಂಪರೆ ನಿರ್ಮಲ್ ಚಂದರ್ ಅವರ ಇತ್ತೀಚಿನ ಎ-6 ಆಕಾಶ್ ಗಂಗಾ ಸಾಕ್ಷ್ಯಚಿತ್ರದ ವಿಷಯವಾಗಿದೆ).
ಅನ್ನಪೂರ್ಣ ಅವರ ಸಂಗೀತವನ್ನು ಕೇಳುವುದು, 1974ರಲ್ಲಿ ದಿಲ್ಲಿಯಲ್ಲಿ ಅಲಿ ಅಕ್ಬರ್ ಮತ್ತು ರವಿಶಂಕರ್ ಅವರ ನುಡಿಸುವಿಕೆಯನ್ನು ಕುರಿತು ಯೋಚಿಸುವುದು, ವರ್ಷಗಳ ಹಿಂದೆ ನಾನು ಓದಿದ ಅಲ್ಲಾವುದ್ದೀನ್ ಖಾನ್ ಅವರ ಕುರಿತಾದ ವೇದ್ ಮೆಹ್ತಾ ಅವರ ಪ್ರಬಂಧದ ಕಡೆ ನನ್ನನ್ನು ಹೊರಳಿಸಿತು. ಆ ವ್ಯಕ್ತಿಯೊಂದಿಗಿನ ಸಂದರ್ಶನಗಳನ್ನು ಆಧರಿಸಿದ ಮೆಹ್ತಾ ಅವರ ಕಥೆಯು ಶ್ರೀಮಂತ ಮತ್ತು ವರ್ಣಮಯವಾಗಿದೆ. ಆದರೂ ಅದನ್ನು ಓದುವಾಗ ಪುರಾಣ ಮತ್ತು ಕಾದಂಬರಿಗಳು ಎಲ್ಲಿ ಕೊನೆಗೊಳ್ಳುತ್ತವೆ ಮತ್ತು ವಾಸ್ತವ ಮತ್ತು ಸತ್ಯವು ಎಲ್ಲಿ ಪ್ರಾರಂಭವಾಗುತ್ತದೆ ಎಂದು ಆಶ್ಚರ್ಯವಾಗುತ್ತದೆ. ಈ ಪ್ರಬಂಧವು ಈಗ ಬಾಂಗ್ಲಾದೇಶದಲ್ಲಿರುವ ದೂರದ ಹಳ್ಳಿಯಿಂದ ಶಿಕ್ಷಕರನ್ನು ಹುಡುಕುತ್ತಾ ಕೋಲ್ಕತಾಗೆ ಬರುವ, ಭಿಕ್ಷೆ ಬೇಡುತ್ತಾ ಓಡಾಡುವ ಅಲ್ಲಾವುದ್ದೀನರ ಪ್ರವಾಸವನ್ನು ವಿವರಿಸುತ್ತದೆ. ಅವರ ಧೈರ್ಯಕ್ಕೆ ಗುರುಗಳ ಸೂಚನೆಯಿಂದ ಪ್ರತಿಫಲ ದೊರೆಯಿತು. ಕೋಲ್ಕತಾದಿಂದ ಕುತೂಹಲಕಾರಿ ಶಿಷ್ಯ ಅಲ್ಲಿ ಒಬ್ಬ ದಂತಕಥೆಯಂಥ ವೀಣಾವಾದಕರಿಂದ ಕಲಿಯಲು ರಾಂಪುರಕ್ಕೆ ಹೋದರು. ಅಲ್ಲಾವುದ್ದೀನ್ ರಾಂಪುರದ ನವಾಬನ ಗಾಡಿಯ ಮುಂದೆ ಧಾವಿಸುವವರೆಗೂ ಆ ವ್ಯಕ್ತಿ ಅವನನ್ನು ಭೇಟಿಯಾಗಲು ನಿರಾಕರಿಸಿದರು. ನಂತರ ಅಲ್ಲಾವುದ್ದೀನ್ ತನ್ನನ್ನು ಕರೆದುಕೊಂಡು ಹೋಗುವಂತೆ ಉಸ್ತಾದರ ಮನವೊಲಿಸಿದರು.
ನಂತರ ಅಲ್ಲಾವುದ್ದೀನ್ ಮಧ್ಯ ಭಾರತದ ಸಣ್ಣ ರಾಜ್ಯವಾದ ಮೈಹಾರ್ಗೆ ತೆರಳಿದರು. ಅಲ್ಲಿ ಅವರು ತಮ್ಮ ಜೀವನದುದ್ದಕ್ಕೂ ಸಂಗೀತ ನುಡಿಸುತ್ತಾ ಮತ್ತು ಕಲಿಸುತ್ತಾ ಇದ್ದರು. ಅವರ ವಿದ್ಯಾರ್ಥಿಗಳಲ್ಲಿ ಈಗಾಗಲೇ ಉಲ್ಲೇಖಿಸಲಾದ ಮೂವರಲ್ಲದೆ, ಸಿತಾರ್ ವಾದಕ ನಿಖಿಲ್ ಬ್ಯಾನರ್ಜಿ ಮತ್ತು ಕೊಳಲುವಾದಕ ಪನ್ನಾಲಾಲ್ ಘೋಷ್ರಂತಹ ಪ್ರಸಿದ್ಧ ಶ್ರೇಷ್ಠರು ಮತ್ತು ಮೈಹಾರ್ನ ಮಹಾರಾಜರು ಸೇರಿದ್ದಾರೆ. ಕಲಿಸದಿದ್ದಾಗ ಅವರು ದಿನಕ್ಕೆ ಐದು ಸಲ ನಮಾಝ್ ಮಾಡುತ್ತಿದ್ದರು ಮತ್ತು ಪಟ್ಟಣದ ಹಿಂದೂ ದೇವಾಲಯದಲ್ಲಿ ಪ್ರಾರ್ಥಿಸುತ್ತಿದ್ದರು. ಆದರೆ ಸಾರ್ವತ್ರಿಕವಾಗಿ ‘ಬಾಬಾ’ (ತಮ್ಮ ಸ್ಥಳೀಯ ಬಂಗಾಳಿಯಲ್ಲಿ ತಂದೆ, ಆದರೆ ಹಿಂದೂಸ್ತಾನಿಯಲ್ಲಿ ಗೌರವಾನ್ವಿತ ಪ್ರಾಚೀನ ಋಷಿ) ಎಂದು ಪ್ರಸಿದ್ಧರಾದರು.
ಮೆಹ್ತಾ ಅವರ ಪ್ರಬಂಧದಿಂದ (ಇದು ಅವರ 1970ರ ಪುಸ್ತಕ ಪೋರ್ಟ್ರೇಟ್ ಆಫ್ ಇಂಡಿಯಾದಲ್ಲಿದೆ), ನಾನು ಕ್ರಮವಾಗಿ ಅಂಜನಾ ರಾಯ್ ಮತ್ತು ಸಹನಾ ಗುಪ್ತಾ ಅವರ ಬಾಬಾ ಅಲ್ಲಾವುದ್ದೀನ್ ಖಾನ್ರ ಎರಡು ಇತ್ತೀಚಿನ ಜೀವನಚರಿತ್ರೆ ಕೃತಿಗಳಿಗೆ ಹೊರಳಿದ್ದೇನೆ. ಇಬ್ಬರೂ ಬರಹಗಾರರು ಬಾಬಾ ಅವರ ವಿದ್ಯಾರ್ಥಿಗಳ ಮಕ್ಕಳಾಗಿ ಬೆಳೆದರು; ಮತ್ತು ಈ ಕಾರಣಕ್ಕಾಗಿ ಅವರ ಪುಸ್ತಕಗಳು, ವಿಶೇಷವಾಗಿ ಸಂಗೀತದ ಅರ್ಥದಲ್ಲಿ, ಮೆಹ್ತಾ ಅವರು ಬರೆದುದಕ್ಕಿಂತ ಹೆಚ್ಚು ಮಹತ್ವದ್ದಾಗಿವೆ. ಅವರು ಅಲ್ಲಾವುದ್ದೀನ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಪ್ರಯಾಣ, ಅನೇಕ ವಿಭಿನ್ನ ವಾದ್ಯಗಳಲ್ಲಿನ ಅವರ ಪಾಂಡಿತ್ಯ, ಭಾರತೀಯ ಸಂಗೀತಕ್ಕಾಗಿ ಅವರು ಕಂಡುಕೊಂಡ ಆರ್ಕೆಸ್ಟ್ರಾ ಮತ್ತು ಅನೇಕ ಹೊಸ ಜೋಡ್ ರಾಗಗಳ ಬಗ್ಗೆಯೆಲ್ಲ ಹೇಳುತ್ತಾರೆ. ನಿರೂಪಣೆ ಸಾಂದರ್ಭಿಕವಾಗಿ ಪೂಜ್ಯಭಾವನೆಯತ್ತ ಒಲವು ತೋರುತ್ತದೆ; ಮೆಹ್ತಾಗೆ ಸಂಬಂಧಿಸಿದಂತೆ, ಇಂಗ್ಲಿಷ್ ಅನುವಾದದಲ್ಲಿ ಓದಲಾದ ಬಾಬಾ ಅವರ ಕೇಂದ್ರ ಶಿಕ್ಷಣ ಸೂತ್ರವನ್ನು ಉಲ್ಲೇಖಿಸಲಾಗಿಲ್ಲ: ‘ಕಲಿಸುವುದು ಮತ್ತು ಪೆಟ್ಟು ಕೊಡುವುದು ಒಟ್ಟಿಗೆ ನಡೆಯುತ್ತದೆ ಎಂಬ ಹಳೆಯ ಕಲ್ಪನೆಯನ್ನು ನಾನು ಬೆಂಬಲಿಸುತ್ತೇನೆ’. 1970ರ ದಶಕದಲ್ಲಿ ನನ್ನ ಬಂಗಾಳಿ ಸ್ನೇಹಿತರಿಂದ ನಾನು ಕೇಳಿದ ಕಥೆಗಳು ಈ ಹೇಳಿಕೆಯ ಸಿಂಧುತ್ವವನ್ನು ದೃಢಪಡಿಸುತ್ತವೆ. ಅಲಿ ಅಕ್ಬರ್ ಮತ್ತು ರವಿಶಂಕರ್, ಮತ್ತು ಕೆಲವೊಮ್ಮೆ ಮೈಹಾರ್ನ ಮಹಾರಾಜ ಕೂಡ ತಮ್ಮ ಶಿಕ್ಷಕರ ಸಿಟ್ಟಿಗೆ ತುತ್ತಾಗಿ ಪೆಟ್ಟು ತಿಂದವರೇ ಆಗಿದ್ದರು.
ನಮ್ಮ ಸಮಕಾಲೀನ ಸಂವೇದನೆಯು ಅಲ್ಲಾವುದ್ದೀನ್ ಖಾನ್ ಅವರ ಪಾತ್ರದ ಈ ಅಂಶವನ್ನು ಅಸಹ್ಯಕರವಾಗಿ ಕಾಣಬಹುದು. ನನಗೂ ಸಹ ಹಾಗೆ ಕಂಡಿದೆ. ಆದರೂ ಅವರ ಮಗಳು ಅನ್ನಪೂರ್ಣ ದೇವಿ ಸಹನಾ ಗುಪ್ತಾ ಅವರ ಪುಸ್ತಕಕ್ಕೆ ಬರೆದ ಮುನ್ನುಡಿಯ (ಇಂಗ್ಲಿಷ್ನಲ್ಲಿ ಅವರು ತಂದೆಯ ಬಗ್ಗೆ ಬರೆದ ಏಕೈಕ ವಿಷಯವಾಗಿರಬಹುದು) ಕೊನೆಯ ಪ್ಯಾರಾಗಳಲ್ಲಿ ನನಗೆ ಸಮಾಧಾನ (ಮತ್ತು ಪೋಷಣೆ) ಸಿಗುತ್ತದೆ. ‘ಬಾಬಾ ತಮ್ಮ ಜೀವನದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಮೈಹಾರ್ನಲ್ಲಿ ಸಂಗೀತ ನುಡಿಸುವುದು, ಕಲಿಸುವುದು ಮತ್ತು ಅವರ ದೈವಿಕ ಕೊಡುಗೆಯನ್ನು ಹಂಚಿಕೊಳ್ಳುವುದರಲ್ಲಿ ಕಳೆದರು. ಅವರ ಶಿಷ್ಯರಲ್ಲಿ ಇಪ್ಪತ್ತನೇ ಶತಮಾನದ ಕೆಲವು ಅತ್ಯುತ್ತಮ ಶ್ರೇಣೀಕೃತ ವಾದ್ಯಗಾರರ ಪ್ರಭಾವಶಾಲಿ ತಂಡವೂ ಸೇರಿದೆ’’ ಎಂದು ಅದು ಉಲ್ಲೇಖಿಸುತ್ತದೆ. ಅನ್ನಪೂರ್ಣ ಈ ಆಭರಣಗಳಿಂದ ಅಲಂಕರಿಸಲ್ಪಟ್ಟ ವಿದ್ಯಾರ್ಥಿಗಳನ್ನು ಪಟ್ಟಿ ಮಾಡುತ್ತಾರೆ: ಅಲಿ ಅಕ್ಬರ್, ರವಿಶಂಕರ್, ಪನ್ನಾಲಾಲ್ ಘೋಷ್, ನಿಖಿಲ್ ಬ್ಯಾನರ್ಜಿ ಮೊದಲಾದವರು. ತಾವು ಇತರರಂತೆ ತಮ್ಮ ವಾದ್ಯದಲ್ಲಿ ಪರಿಣತಿ ಹೊಂದಿದ್ದರೂ ಈ ಪಟ್ಟಿಯಲ್ಲಿ ಸೇರಿಸದೆ ಬಿಟ್ಟಿದ್ದಾರೆ. ನಂತರ ಈ ಅತ್ಯಂತ ಪ್ರತಿಧ್ವನಿಸುವ ಕೊನೆಯ ಸಾಲು ಬರುತ್ತದೆ: ‘ಎಲ್ಲಕ್ಕಿಂತ ಹೆಚ್ಚಾಗಿ, ಬಾಬಾ ಬಹುಶಃ ನನ್ನ ಜೀವನದಲ್ಲಿ ನಾನು ತಿಳಿದಿರುವ ಅತ್ಯಂತ ಜಾತ್ಯತೀತ ವ್ಯಕ್ತಿ’.
ಇದೇ ರೀತಿ, ಅಂಜನಾ ರಾಯ್ ಬರೆಯುತ್ತಾರೆ, ‘ಅಲ್ಲಾವುದ್ದೀನ್ ಖಾನ್ ಕ್ಷುಲ್ಲಕ ಮನಸ್ಸಿನ ಜನಾಂಗೀಯ ಕೇಂದ್ರಿತ ರಾಷ್ಟ್ರೀಯವಾದಿಯಾಗಿರಲಿಲ್ಲ. ಅವರ ದೇಶಭಕ್ತಿ ವಿಶಾಲ ವಿಶ್ವ ದೃಷ್ಟಿಕೋನದಲ್ಲಿ ಬೆರೆತುಹೋಯಿತು. ಅವರು ಹೆಸರಿನ ಬಲ ಭಾಗವನ್ನು - ಉಪನಾಮವನ್ನು - ನೋಡಲು ಎಂದಿಗೂ ತಲೆ ಕೆಡಿಸಿಕೊಂಡಿರಲಿಲ್ಲ. ಅದು ಅವರು ಸಂಬಂಧಪಟ್ಟ ವ್ಯಕ್ತಿಯ ಜಾತಿ ಅಥವಾ ಪಂಥವನ್ನು ಸೂಚಿಸುತ್ತದೆ ಎಂದು ಪರಿಗಣಿಸಿದರು. ಅವರು ಹಿಂದೂ-ಮುಸ್ಲಿಮ್ ಏಕತೆ ಮತ್ತು ಎಲ್ಲಾ ನಂಬಿಕೆಗಳು ಮತ್ತು ಪಂಥಗಳ ಆರೋಗ್ಯಕರ ಬೆರೆಯುವಿಕೆಯನ್ನು ಬಯಸಿದರು.’
ಐದು ದಶಕಗಳಿಂದ ನಾನು ಅಲ್ಲಾವುದ್ದೀನ್ ಖಾನ್ ಅವರ ಶಿಷ್ಯರ ಸಂಗೀತವನ್ನು ಕೇಳಿದ್ದೇನೆ ಮತ್ತು ಸ್ವಲ್ಪ ಹೆಚ್ಚೇ ಕೇಳಿದ್ದೇನೆ. ಆದರೂ, ಧಾರ್ಮಿಕ ಮತಾಂಧರು ಮತ್ತು ಕ್ರಿಕೆಟ್ ದುರಭಿಮಾನಿಗಳಿಗಿಂತ ಭಿನ್ನವಾಗಿ, ಸಂಗೀತ ಪ್ರೇಮಿಗಳು ಸಂಕುಚಿತವಾಗಿರುವುದಕ್ಕಿಂತ ಹೆಚ್ಚಾಗಿ ಸಾರ್ವತ್ರಿಕವಾಗಿರುತ್ತಾರೆ. ಹೀಗೆ ಇತರ ಕೈಗಳಿಂದ ತರಬೇತಿ ಪಡೆದ ಮಹಾನ್ ವಾದ್ಯಗಾರರು ಸಹ ನನಗೆ ಅಪಾರ ಆನಂದವನ್ನು ನೀಡಿದ್ದಾರೆ; ಅವರಲ್ಲಿ ಬಿಸ್ಮಿಲ್ಲಾ ಖಾನ್, ವಿಲಾಯತ್ ಖಾನ್, ಅಬ್ದುಲ್ ಹಲೀಮ್ ಜಾಫರ್ ಖಾನ್, ಎನ್. ರಾಜಮ್, ಬುದ್ಧದೇವ್ ದಾಸ್ಗುಪ್ತಾ ಮತ್ತು ರಾಧಿಕಾ ಮೋಹನ್ ಮೊಯಿತ್ರಾ ಸೇರಿದ್ದಾರೆ. ಅದೇನೇ ಇದ್ದರೂ, ಬಾಬಾ ಅವರ ಸಂಗೀತ ಕುಟುಂಬವು - ಹಿಂದೂಸ್ತಾನಿ ವಾದ್ಯಗಾರರ ವಿಷಯಕ್ಕೆ ಬಂದರೆ - ದಶಕಗಳಲ್ಲಿ ನನಗೆ ಅತ್ಯಂತ ಸಾಮೂಹಿಕ ಸಂತೋಷವನ್ನು ನೀಡಿದೆ. ನಾನು ಅವರ ಅತ್ಯಂತ ಪ್ರಸಿದ್ಧ ಶಿಷ್ಯರ ಸಂಗೀತವನ್ನು ಮತ್ತು ಸರೋದ್ ವಾದಕರಾದ ಶರಣ್ ರಾಣಿ, ಬಹದ್ದೂರ್ ಖಾನ್ ಮತ್ತು ರಾಜೀವ್ ತಾರಾನಾಥ್ ಅವರಂತಹ ಅತ್ಯುತ್ತಮ ಕೌಶಲ್ಯ ಹೊಂದಿರುವ ಘರಾನಾ ಕಲಾವಿದರ ಸಂಗೀತವನ್ನು ಹೆಚ್ಚಾಗಿ ಕೇಳುತ್ತೇನೆ. ಪ್ರತಿಯೊಬ್ಬರೂ ವಿಭಿನ್ನ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದವರು. ಮೊದಲ ಎರಡು ತಲೆಮಾರುಗಳಿಗೆ ಬಾಬಾ ಅವರೇ ಗುರು. ಮೂರನೆಯದಕ್ಕೆ ಅವರ ಮಗ ಅಲಿ ಅಕ್ಬರ್ ತರಬೇತಿ ನೀಡಿದ್ದಾರೆ.
ನಾನು ಸಂಗೀತ ವಿದ್ವಾಂಸನಲ್ಲ, ಸಂಗೀತ ರಸಿಕನೂ ಅಲ್ಲ; ಕೇವಲ ಉತ್ಸಾಹಭರಿತ ಹವ್ಯಾಸಿ ಕೇಳುಗ. ಈ ಅಂಕಣವನ್ನು ಆ ಉತ್ಸಾಹದಲ್ಲಿ ಬರೆಯಲಾಗಿದೆ; ಮತ್ತು ಅಲ್ಲಾವುದ್ದೀನ್ ಖಾನ್ ಅವರ ಸಂಗ್ರಹ ಮತ್ತು ಅವರು ಹುಟ್ಟುಹಾಕಿದ ಸಂಗೀತ ಪರಂಪರೆಯಿಂದ ಕೆಲವು ವೈಯಕ್ತಿಕ ಮೆಚ್ಚಿನವುಗಳನ್ನು ನಾನು ತೀರ್ಮಾನಿಸುವುದು ಅದೇ ಉತ್ಸಾಹದಲ್ಲಿ. ಇವು ಅನ್ನಪೂರ್ಣ ದೇವಿಯ ಮೇಲೆ ತಿಳಿಸಿದ ಮಂಜ್ಖಮಾಜ್; ರವಿಶಂಕರ್ ಅವರ ಪಹಾಡಿ ಜಿಂಜೋಟಿ; ಅಲಿ ಅಕ್ಬರ್ ಖಾನ್ ಅವರ ಛಾಯನತ್; ನಿಖಿಲ್ ಬ್ಯಾನರ್ಜಿ ಅವರ ಒಂದು ಗಂಟೆ ಹದಿಮೂರು ನಿಮಿಷಗಳ ರಾಗೇಶ್ವರಿ; ಪನ್ನಾಲಾಲ್ ಘೋಷ್ ಅವರ ಹಂಸಧ್ವನಿ; ಮತ್ತು ಬಹದ್ದೂರ್ ಖಾನ್ ಅವರ ನಟ ಬಿಲಾವಲ್. ಮೈಹಾರ್ ಘರಾನಾದ ಕೆಲವು ಅದ್ಭುತ ಜುಗಲ್ಬಂದಿಗಳು ಆನ್ಲೈನ್ನಲ್ಲಿವೆ: ಅಲಿ ಅಕ್ಬರ್ ಮತ್ತು ನಿಖಿಲ್ ಬ್ಯಾನರ್ಜಿ; ಅಲಿ ಅಕ್ಬರ್ ಮತ್ತು ರವಿಶಂಕರ್; 1950ರ ದಶಕದಲ್ಲಿ ರವಿಶಂಕರ್ ಮತ್ತು ಅನ್ನಪೂರ್ಣ ದಂಪತಿ ಒಟ್ಟಿಗೆ ನುಡಿಸುವುದನ್ನು ರೆಕಾರ್ಡ್ ಮಾಡಲಾಗಿದೆ. ನಂತರದವರು ಸಂಗೀತ ಕಚೇರಿಯನ್ನು ತೊರೆದರು ಅಥವಾ ಹೊರಹೋಗಬೇಕಾಯಿತು. ಬಾಬಾ ಮತ್ತು ಬಾಬಾ ಅಲ್ಲದವರನ್ನು, ಉತ್ತರ ಮತ್ತು ದಕ್ಷಿಣ, ಹಿಂದೂಸ್ತಾನಿ ಮತ್ತು ಕರ್ನಾಟಕ, ಮುಸ್ಲಿಮ್ ಮತ್ತು ಹಿಂದೂಗಳನ್ನು ವಿಲೀನಗೊಳಿಸುವ ಒಂದು ಕಾಲಾತೀತ ಜುಗಲ್ಬಂದಿಯನ್ನು ನಾನು ಉಲ್ಲೇಖಿಸಲೇಬೇಕು. ಇದು ಯಮನ್/ಕಲ್ಯಾಣಿಯಾಗಿದ್ದು, ಸರೋದ್ನಲ್ಲಿ ಅಲಿ ಅಕ್ಬರ್ ಖಾನ್ ಮತ್ತು ವೀಣೆಯಲ್ಲಿ ದೊರೆಸ್ವಾಮಿ ಅಯ್ಯಂಗಾರ್ ನುಡಿಸಿದ್ದಾರೆ. ತಬಲಾದಲ್ಲಿ ಚತುರ್ ಲಾಲ್ ಮತ್ತು ಮೃದಂಗದಲ್ಲಿ ರಾಮಯ್ಯ ಎಂ.ಎಸ್. ನುಡಿಸಿದ್ಧಾರೆ. ಇದನ್ನು ಸುಮಾರು ಅರುವತ್ತು ವರ್ಷಗಳ ಹಿಂದೆ, ಬೆಂಗಳೂರಿನ ಲಲಿತಾ ಮತ್ತು ಶಿವರಾಮ್ ಉಭಯಕರ್ ಅವರ ಮನೆಯಲ್ಲಿ ಧ್ವನಿಮುದ್ರಿಸಲಾಗಿದೆ.ಶ್ರಿ