ಸರ್ವಾಧಿಕಾರಿ ಪ್ರಜಾತಂತ್ರವಾದಿಯಾಗಬಹುದೇ?
ಸರಿಯಾಗಿ ಒಂದು ವರ್ಷದ ಕೆಳಗೆ ಇದೇ ಅಂಕಣದಲ್ಲಿನ ನನ್ನ ಒಂದು ಬರಹದಲ್ಲಿ ದೇಶದ ಪ್ರಜಾಪ್ರಭುತ್ವಕ್ಕೆ ಹೊಸತನ ಬರಬೇಕೆಂದು ಬಯಸಿದ್ದೆ. ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಲೋಕಸಭೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗಬಾರದು ಎಂಬ ಇಚ್ಛೆ ವ್ಯಕ್ತಪಡಿಸಿದ್ದೆ. ವಾಸ್ತವವಾಗಿ, ಅತಿ ದೊಡ್ಡ ಏಕೈಕ ಪಕ್ಷಕ್ಕೂ ಬಹುಮತಕ್ಕೆ ಗಣನೀಯ ಕೊರತೆ ಉಂಟಾಗಬೇಕೆಂಬುದು ನನ್ನ ಆಶಯವಾಗಿತ್ತು. ಏಕೆಂದರೆ ಸ್ವಭಾವತಃ ಸರ್ವಾಧಿಕಾರಿಯಾಗಿರುವ ನಮ್ಮ ಈಗಿನ ಪ್ರಧಾನಿ, ಅವರ ಪಕ್ಷ ಸಾರ್ವತ್ರಿಕ ಚುನಾವಣೆಯಲ್ಲಿ ಸತತ ಎರಡು ಬಾರಿ ಬಹುಮತ ಗಳಿಸಿದ ಮೇಲಂತೂ ಇನ್ನಷ್ಟು ಜಾಸ್ತಿಯೇ ಸರ್ವಾಧಿಕಾರಿ ನಿಲುವಿನೆಡೆಗೆ ಹೊರಳಿದ್ದರು.
ನನ್ನ ಆ ನಿರೀಕ್ಷೆ ಕಳೆದ ವರ್ಷದ ಜುಲೈ ವೇಳೆಗೆ ಮತ್ತು ಅದಾದ ಹಲವು ತಿಂಗಳುಗಳವರೆಗೂ ಅಸಂಭವ ಎಂದೇ ಕಾಣುತ್ತಿತ್ತು. 2024ರ ಫೆಬ್ರವರಿಯಲ್ಲಿ Foreign Affairsನಲ್ಲಿ ಪ್ರಕಟವಾದ ಲೇಖನದಲ್ಲಿ, ಪ್ರಧಾನಿಯ ನೀತಿಗಳನ್ನು ಕಟುವಾಗಿ ಟೀಕಿಸಲಾಗಿತ್ತು. ಆದರೂ ನಾನು ‘ಇಂಡಿಯಾ’ ಮೈತ್ರಿಕೂಟ ಮೋದಿ ಮತ್ತು ಬಿಜೆಪಿಯನ್ನು ಕೆಳಗಿಳಿಸಲು ಹೋರಾಡುತ್ತದೆ ಮತ್ತು ಸಂಸತ್ತಿನಲ್ಲಿ ಅವರ ಪ್ರಬಲ ಬಹುಮತ ಕಡಿಮೆಯಾಗಲಿದೆ ಎಂದು ಆಶಿಸಬಹುದು ಎಂದಿದ್ದೆ.
ಆ ತಿಂಗಳ ಕಡೆಯಲ್ಲಿ, ವರದಿಗಾರರೊಬ್ಬರು ಸಾಮಾನ್ಯ ತಿಳುವಳಿಕೆಗಿಂತ ಭಿನ್ನವಾಗಿ, ಪ್ರತಿಪಕ್ಷಗಳು ಪೈಪೋಟಿಯೊಡ್ಡುವುದು ಮಾತ್ರವಲ್ಲ, ಸಂಸತ್ತಿನಲ್ಲಿ ಬಿಜೆಪಿಗೆ ಬಹುಮತ ಇರದಂತೆ ಮಾಡಲಿವೆ ಎಂದು ನನಗೆ ಹೇಳಿದರು. ಅವರು ಪತ್ರಕರ್ತ ಅನಿಲ್ ಮಹೇಶ್ವರಿ. ಉತ್ತರ ಭಾರತವನ್ನು ನಿಕಟವಾಗಿ ಬಲ್ಲವರು. ಹಲವಾರು ದಶಕಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ವರದಿಗಾರಿಕೆಯಲ್ಲಿ ತೊಡಗಿದ್ಧಾರೆ. ಅವರು ಸಮಕಾಲೀನ ಇತಿಹಾಸದ ಕುರಿತು ಹಲವಾರು ಪುಸ್ತಕಗಳನ್ನು ಸಹ ಪ್ರಕಟಿಸಿದ್ದಾರೆ. ಅವುಗಳಲ್ಲಿ ಅವರು ಸಹ ಲೇಖಕರಾಗಿರುವ ‘The Power of the Ballot’ ಎಂಬ, ಭಾರತೀಯ ಚುನಾವಣೆಗಳ ಕುರಿತ ಪುಸ್ತಕವೂ ಒಂದು.
ಫೆಬ್ರವರಿ 25ರಂದು ಅನಿಲ್ ಮಹೇಶ್ವರಿ ನನಗೆ ಬರೆದ ಪತ್ರದಲ್ಲಿ, ನಿಮ್ಮ ಆತಂಕ ತಪ್ಪಾಗಿದೆ. ಈಗಿನ ಸನ್ನಿವೇಶದ ಆಧಾರದ ಮೇಲೆ ಹೇಳುವುದಾದರೆ, ಬಿಜೆಪಿ ಸುಮಾರು 230 ಸ್ಥಾನಗಳನ್ನು ಪಡೆಯಬಹುದು ಎಂದಿದ್ದರು.
ಒಂದು ವಾರದ ನಂತರ ಮಹೇಶ್ವರಿ, ‘ರಾಜಕೀಯ ಸ್ವಭಾವದಲ್ಲಿ ಸರ್ವಾಧಿಕಾರಿ ಲಕ್ಷಣಗಳನ್ನು ಹೊಂದಿರುವ ಮೋದಿ ಅನಿಶ್ಚಿತತೆಯಿಂದ ಬಳಲುತ್ತಿದ್ದಾರೆ ಎನ್ನಿಸುತ್ತದೆ. ಅವರು ಲೋಕಸಭೆಯ ಹಲವು ಸದಸ್ಯರ ಅಧಿಕಾರಾವಧಿಯನ್ನು ಕಡಿತಗೊಳಿಸಲು ವಿಫಲರಾಗಿದ್ದಾರೆ. ಈ ಬೆಳವಣಿಗೆ, ಬಿಜೆಪಿಯ ಬಲ 230 ಸ್ಥಾನಗಳಿಗೆ ಕುಸಿಯಬಹುದು ಎಂಬ ನನ್ನ ಅಭಿಪ್ರಾಯಕ್ಕೆ ಪೂರಕವಾಗಿದೆ’ ಎಂದು ಬರೆದಿದ್ದರು.
ಮಾರ್ಚ್ 18ರಂದು ಮಹೇಶ್ವರಿ ಅವರು ನನಗೆ ಮತ್ತೊಂದು ಮೇಲ್ ಕಳುಹಿಸಿದ್ದರು. ಅದರಲ್ಲಿ, ‘ನಾನು ಬಿಜೆಪಿಗೆ 230 ಸ್ಥಾನಗಳಷ್ಟೇ (ಯುಪಿಯಲ್ಲಿ 80ರಲ್ಲಿ 30) ಎಂದು ಮತ್ತೆ ಹೇಳುತ್ತಿದ್ದೇನೆ. ಮತದಾರರಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಬಿಜೆಪಿ ಮತದಾರರಲ್ಲಿ ಹುರುಪು ಕಾಣುತ್ತಿದೆ. ರಾಹುಲ್ ಗಾಂಧಿಯವರ ಸಾಮರ್ಥ್ಯದ ಬಗ್ಗೆ ನನ್ನ ಪೂರ್ವಾಗ್ರಹದ ಹೊರತಾಗಿಯೂ, ಅವರು ಬಿಜೆಪಿಯೇತರ ಪಕ್ಷಗಳಲ್ಲಿ ಪ್ರಭಾವಶಾಲಿಯಾಗಿದ್ದು, ಜನರನ್ನು ಸೆಳೆಯುವ ಏಕೈಕ ನಾಯಕರಾಗಿದ್ದಾರೆ’ ಎಂದು ಬರೆದಿದ್ದರು.
ಚುನಾವಣೆ ಪ್ರಾರಂಭವಾಗುವ ಒಂದು ತಿಂಗಳಿಗಿಂತ ಮುಂಚೆಯೇ ಅನಿಲ್ ಮಹೇಶ್ವರಿ ಭವಿಷ್ಯ ನುಡಿದಿದ್ದರು. ಮೊದಲ ಎರಡು ಹಂತಗಳ ಮತದಾನದ ನಂತರ ಕೆಲವು ವಿಶ್ಲೇಷಕರು, ಬಿಜೆಪಿ ಏಕಾಂಗಿಯಾಗಿಯೇ ಬಹುಮತ ಗಳಿಸುತ್ತದೆ ಎಂಬ ಸಮೀಕ್ಷೆದಾರರ ಭಾವನೆ ತಪ್ಪಾಗಿರಬಹುದು ಎಂದು ವಾದಿಸಿದರು. ಸಾಧಾರಣ ಗ್ರಹಿಕೆಗಳಿಗೆ ವಿರುದ್ಧವಾಗಿದ್ದ ಈ ಸಾರ್ವಜನಿಕ ಧ್ವನಿಗಳು ಈಗ ಪ್ರಶಂಸೆಗೆ ಪಾತ್ರವಾಗಿವೆ. ಖಾಸಗಿಯಾಗಿಯೂ ನೀಡಲಾದ ಅಭಿಪ್ರಾಯಗಳನ್ನು ಒಪ್ಪಬಹುದು ಎಂಬುದಕ್ಕೆ ಇವು ನಿದರ್ಶನಗಳೆಂದು ನಾನು ನಂಬುತ್ತೇನೆ.
ಸಮ್ಮಿಶ್ರ ಸರಕಾರಕ್ಕಾಗಿ ಆಶಿಸಿದ್ದ ನಾನು ಆ ಭರವಸೆಗೆ ವಿರುದ್ಧವಾದುದು ಕಾಣಿಸುತ್ತಿದ್ದ ಹೊತ್ತಿನಲ್ಲಿ 2023ರ ಜುಲೈನಲ್ಲಿ ಹೀಗೆ ಬರೆದಿದ್ದೆ: ‘ಭಾರತ ತುಂಬಾ ವಿಶಾಲ ಮತ್ತು ವೈವಿಧ್ಯಮಯ ದೇಶವಾಗಿದ್ದು, ಸಹಯೋಗ ಮತ್ತು ಸಮಾಲೋಚನೆಯನ್ನು ಹೊರತುಪಡಿಸಿಯೂ ಹೇಗಾದರೂ ದೇಶವನ್ನು ನಡೆಸಬೇಕು. ಆದಾಗ್ಯೂ, ಸಂಸತ್ತಿನಲ್ಲಿಯ ಹೆಚ್ಚಿನ ಬಹುಮತ ಆಡಳಿತ ಪಕ್ಷದಲ್ಲಿ ದುರಹಂಕಾರ ಮತ್ತು ಏನು ಮಾಡಿದರೂ ನಡೆಯುತ್ತದೆಂಬ ಭಾವನೆಯನ್ನು ಮೂಡಿಸುತ್ತದೆ. ಅಂತಹ ಬಹುಮತವನ್ನು ಹೊಂದಿರುವ ಪ್ರಧಾನ ಮಂತ್ರಿಯು ತನ್ನ ಕ್ಯಾಬಿನೆಟ್ ಸಹೋದ್ಯೋಗಿಗಳ ಮೇಲೆ ನಿರ್ದಾಕ್ಷಿಣ್ಯ ಸವಾರಿ ಮಾಡಲು, ಪ್ರತಿಪಕ್ಷಗಳನ್ನು ಅಗೌರವಿಸಲು, ಮಾಧ್ಯಮಗಳನ್ನು ನಿಯಂತ್ರಿಸಲು ಮತ್ತು ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ದುರ್ಬಲ ಗೊಳಿಸಲು ಮತ್ತು ತನ್ನ ಪಕ್ಷದ್ದಲ್ಲದ ಸರಕಾರಗಳಿರುವ ರಾಜ್ಯಗಳ ಹಕ್ಕುಗಳು, ಹಿತಾಸಕ್ತಿಗಳನ್ನು ಕಡೆಗಣಿಸಲು ಬಯಸುತ್ತಾನೆ.’
ಈ ಮೌಲ್ಯಮಾಪನವು ಗಣರಾಜ್ಯದ ನಾಗರಿಕನಾಗಿ ನನ್ನ ಸ್ವಂತ ಅನುಭವವನ್ನು ಆಧರಿಸಿತ್ತು. ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಬಹಳ ಹಿಂದೆಯೇ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರಲ್ಲಿ ಬಹುಮತವು ಸರ್ವಾಧಿಕಾರಿ ಧೋರಣೆಗಳನ್ನು ಪ್ರೇರೇಪಿಸಿದ ಕ್ರೂರ ರೂಪವನ್ನು ನಾನು ಕಣ್ಣಾರೆ ಕಂಡಿದ್ದೆ. ಮತ್ತೊಂದೆಡೆ, ಸಮ್ಮಿಶ್ರ ಸರಕಾರಗಳು ಅಧಿಕಾರದಲ್ಲಿದ್ದ ವರ್ಷಗಳಲ್ಲಿ ಪತ್ರಿಕಾ ಸ್ವಾತಂತ್ರ್ಯ, ನ್ಯಾಯಾಂಗದ ಸ್ವಾತಂತ್ರ್ಯ, ಹೆಚ್ಚು ದೃಢವಾದ ಒಕ್ಕೂಟ ವ್ಯವಸ್ಥೆ ಮತ್ತು ಸಂಸ್ಥೆಗಳ ಸ್ವಾಯತ್ತತೆ ಅಬಾಧಿತವಾಗಿದ್ದುದನ್ನು ನಾನು ನೋಡಿದ್ದೇನೆ.
1989ರಿಂದ 2014ರ ಅವಧಿಯಲ್ಲಿ ಯಾವುದೇ ಪಕ್ಷವು ಸಂಸತ್ತಿನಲ್ಲಿ ಬಹುಮತವನ್ನು ಪಡೆಯಲಿಲ್ಲ. ಈ ಅವಧಿಯು ಏಳು ಪ್ರಧಾನ ಮಂತ್ರಿಗಳನ್ನು ಕಂಡಿತು. ಅದರಲ್ಲಿ ನಾಲ್ವರು - ವಿ.ಪಿ. ಸಿಂಗ್, ಚಂದ್ರಶೇಖರ್, ದೇವೇಗೌಡ ಮತ್ತು ಗುಜ್ರಾಲ್ - ಎರಡು ವರ್ಷಗಳಿಗಿಂತ ಕಡಿಮೆ ಅವಧಿಗೆ ಅಧಿಕಾರದಲ್ಲಿದ್ದರು. ಮತ್ತೊಂದೆಡೆ, ಈ ಅವಧಿಯಲ್ಲಿ ಮೂವರು ಪ್ರಧಾನ ಮಂತ್ರಿಗಳು ಕನಿಷ್ಠ ಐದು ವರ್ಷಗಳ ಅವಧಿಯನ್ನು ಪೂರೈಸಿದರು. ಅವರೆಂದರೆ ಪಿ.ವಿ. ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್.
ಈಗ ತಮ್ಮ ಮೂರನೇ ಅವಧಿಯಲ್ಲಿ ಮೋದಿ, ಅವರ ಪಕ್ಷ ಬಹುಮತ ಪಡೆಯದೆಯೂ ಪ್ರಧಾನಿಯಾದವರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅವರ ಹಿಂದಿನ ಪ್ರತಿಯೊಬ್ಬರೂ ಅನುಭವ ಮತ್ತು ಮನೋಧರ್ಮದ ಮೂಲಕ ಇತರರ ಬೆಂಬಲದೊಂದಿಗೆ, ಇತರ ಪಕ್ಷಗಳ ಬೆಂಬಲದೊಂದಿಗೆ ಪರಿಣಾಮಕಾರಿಯಾಗಿ ಸರಕಾರವನ್ನು ನಡೆಸಲು ಪ್ರಯತ್ನಿಸಿದರಾದರೂ, ಮೋದಿ ಹಾಗಲ್ಲ. ನರಸಿಂಹ ರಾವ್ ಪ್ರಧಾನಿಯಾಗುವ ಮೊದಲು ಇಂದಿರಾ ಮತ್ತು ರಾಜೀವ್ ಅವರ ಸಂಪುಟದಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದರು. ವಾಜಪೇಯಿ ಪ್ರಧಾನಿಯಾಗುವ ಮೊದಲು ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷದ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದರು. ಸಿಂಗ್ ಆ ಹುದ್ದೆಗೆ ಏರುವ ಮೊದಲು ರಾವ್ ಸರಕಾರದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇದಲ್ಲದೆ, ರಾವ್, ವಾಜಪೇಯಿ ಮತ್ತು ಸಿಂಗ್ ಪ್ರತಿಪಕ್ಷದ ಸಂಸದರಾಗಿ, ರಾಜಕೀಯದಲ್ಲಿ ಸರಕಾರದಿಂದ ಹೊರಗಿದ್ದೂ ಬಹಳ ಸಮಯ ಕಳೆದಿದ್ದರು.
ಪ್ರಚಾರಕನಾಗಿ ಹಲವು ವರ್ಷ ಪಕ್ಷದ ಸಂಘಟಕರಾಗಿದ್ದ ಮೋದಿ ಇತರರೊಡನೆ ಅಥವಾ ಅವರ ಅಡಿಯಲ್ಲಿ ಕೆಲಸ ಮಾಡಿದ್ದಾರೆ ಎಂಬುದು ನಿಜ. ಆದರೆ ಅವರು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದಾಗಿನಿಂದ ಹಾಗಾಗಲಿಲ್ಲ. ಅವರು ಎಂದಿಗೂ ಕೇವಲ ಶಾಸಕ ಅಥವಾ ಸಂಸದರಾಗಿರಲಿಲ್ಲ ಮತ್ತು ರಾಜ್ಯ ಅಥವಾ ಕೇಂದ್ರ ಮಟ್ಟದಲ್ಲಿ ಮಂತ್ರಿಯಾಗಿರಲಿಲ್ಲ. 2001ರಿಂದ ಅವರಿಗೆ ಗೊತ್ತಿದ್ದದ್ದು ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗುವುದು ಹೇಗೆ ಎಂಬುದು. ವಾಸ್ತವವಾಗಿ, ಕಳೆದ ಇಪ್ಪತ್ಮೂರು ವರ್ಷಗಳಿಂದ ಅವರು ಕಳೆದಿರುವುದು ಬಿಗ್ ಬಾಸ್, ಟಾಪ್ ಬಾಸ್ ಮತ್ತು ಸುಪ್ರೀಂ ಬಾಸ್ ಆಗಿ ಮಾತ್ರ.
ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ದೊಡ್ಡ ಮಟ್ಟದಲ್ಲಿ ವ್ಯಕ್ತಿಪೂಜೆಯ ಸನ್ನಿವೇಶವನ್ನು ನಿರ್ಮಿಸಿದರು. ಒಬ್ಬ ವ್ಯಕ್ತಿ ಅಥವಾ ನಾಯಕನಾಗಿ ಅವರು ಮೊದಲು ತಮ್ಮ ರಾಜ್ಯವನ್ನು ಮತ್ತು ನಂತರ ತಮ್ಮ ದೇಶವನ್ನು ಸಮೃದ್ಧಿ ಮತ್ತು ಶ್ರೇಷ್ಠತೆಯ ಕಡೆಗೆ ಒಯ್ಯುವವರು ಎಂಬಂತೆ ತೋರಿಸಿಕೊಂಡರು. ಅಧಿಕಾರದ ಈ ವೈಯಕ್ತೀಕರಣದಲ್ಲಿ ಅವರು ಗಾಂಧಿನಗರ ಮತ್ತು ಹೊಸದಿಲ್ಲಿಯಲ್ಲಿನ ತಮ್ಮ ಸಂಪುಟದ ಸಹೋದ್ಯೋಗಿಗಳು ತಮಗೆ ಪೂರ್ಣ ಅಧೀನರಾಗಿರುವುದನ್ನು ಬಯಸಿದರು ಮತ್ತು ಯಾವಾಗಲೂ ಅವರೆಲ್ಲ ಹಾಗಿರುವಂತೆ ಮಾಡಿದರು. ರಾಜ್ಯ ಮತ್ತು ಕೇಂದ್ರ ಎರಡರಲ್ಲೂ ಸೇತುವೆ, ಹೆದ್ದಾರಿ, ರೈಲು ನಿಲ್ದಾಣ, ಆಹಾರ ಸಬ್ಸಿಡಿಗಳು ಹೀಗೆ ತಮ್ಮ ಸರಕಾರವು ಪ್ರಾರಂಭಿಸಿದ ಅಥವಾ ಪೂರ್ಣಗೊಳಿಸಿದ ಯಾವುದೇ ಹೊಸ ಯೋಜನೆಯ ಶ್ರೇಯಸ್ಸನ್ನು ಯಾವಾಗಲೂ ತಮ್ಮದೆಂದೇ ಬಿಂಬಿಸಿದರು.
ಅವರ ಈ ನಾರ್ಸಿಸಿಸಂನಲ್ಲಿ, ಮೋದಿ ಅವರದು ಅವರಿಗಿಂತ ಮೊದಲು ಸಮ್ಮಿಶ್ರ ಸರಕಾರಗಳನ್ನು ನಡೆಸಿದ್ದ ಪ್ರಧಾನಿಗಳಿಂದ ಬೇರೆಯದೇ ಆದ ಜಗತ್ತು. ರಾವ್ ಮತ್ತು ಸಿಂಗ್ ಕಡಿಮೆ ತೋರಿಕೆಯ ಮತ್ತು ಸ್ವಯಂ ಪರಿಣಾಮಕಾರಿ ವ್ಯಕ್ತಿತ್ವವನ್ನು ಹೊಂದಿದ್ದರು. ವಾಜಪೇಯಿ ಹೆಚ್ಚು ವರ್ಚಸ್ಸು ಮತ್ತು ಜನಪ್ರಿಯತೆ ಯನ್ನು ಹೊಂದಿದ್ದರೂ, ಎಂದಿಗೂ ತಮ್ಮನ್ನು ತಮ್ಮ ಪಕ್ಷದ, ತಮ್ಮ ಸರಕಾರದ ಅಥವಾ ದೇಶದ ಕೇಂದ್ರಬಿಂದು ಎಂದು ಪರಿಗಣಿಸಲಿಲ್ಲ. ಈ ಮೂವರೂ ಅನುಭವ ಮತ್ತು ಮನೋಧರ್ಮದ ಮೂಲಕ ತಮ್ಮ ಸಂಪುಟದ ಮಂತ್ರಿಗಳೊಂದಿಗೆ ಮತ್ತು ಒಂದು ಮಟ್ಟದವರೆಗೆ ಪ್ರತಿಪಕ್ಷದವರೊಂದಿಗೆ ಕೂಡ ಸಹಕಾರ ಮತ್ತು ಸಮಾಲೋಚನೆಯ ರೀತಿಯಲ್ಲಿ ಕೆಲಸ ಮಾಡಿದ್ದರು.
ಎಲ್ಲಾ ರೀತಿಯಿಂದಲೂ ಮೋದಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯನ್ನು ಹೊಂದಿದ್ದರು. ಹೊಸದಾಗಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಹೊಸ ಅವಧಿಯ ಮೊದಲ ನೂರು ದಿನಗಳ ಕಾರ್ಯಸೂಚಿಯನ್ನು ಬಹಳ ಬೇಗ ಬಹಿರಂಗಪಡಿಸುವುದಾಗಿ ಮುಂಚಿತವಾಗಿಯೇ ಘೋಷಿಸಿದ್ದರು. ಮೇ 10ರಂದು ‘ದಿ ಎಕನಾಮಿಕ್ ಟೈಮ್ಸ್’ ಮೋದಿ 3ನೇ ಅವಧಿಯ ಮೊದಲ 100 ದಿನಗಳಿಗಾಗಿ 50ರಿಂದ 70 ಗುರಿಗಳನ್ನು ಹೊಂದಿರುವುದಾಗಿ ವರದಿ ಮಾಡಿತ್ತು. ಮೂರು ವಾರಗಳ ಬಳಿಕ ಜೂನ್ 2ರಂದು ‘ಹಿಂದೂಸ್ತಾನ್ ಟೈಮ್ಸ್’, ಮೋದಿ ತಮ್ಮ ಮೂರನೇ ಅವಧಿಯ ಮೊದಲ 100 ದಿನಗಳ ಬಗ್ಗೆ ಚರ್ಚಿಸಲು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಬರೆದಿತ್ತು. ಸಭೆ ಅಧಿಕಾರಿಗಳೊಂದಿಗೆ ಮಾತ್ರವಾಗಿತ್ತು ಎಂಬುದನ್ನು ಗಮನಿಸಬೇಕು. ಗಾಂಧಿನಗರ ಮತ್ತು ಹೊಸದಿಲ್ಲಿಯಲ್ಲಿ ಕಳೆದ ಇಪ್ಪತ್ಮೂರು ವರ್ಷಗಳಿಂದ ಅವರು ಸರಕಾರವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಮಂತ್ರಿಗಳ ಅಭಿಪ್ರಾಯವನ್ನೆಂದೂ ಪಡೆದದ್ದೇ ಇರಲಿಲ್ಲ.
ಅದು ಬದಲಾದಂತೆ, ಇದು ಮೋದಿ 3.0 ಎಂದು ಭಾವಿಸಲಾಗಿತ್ತಾದರೂ ಅನಿರೀಕ್ಷಿತವಾಗಿ ಎನ್‌ಡಿಎ 2.0 ಆಗಿ ಮಾರ್ಪಟ್ಟಿದೆ. ಇದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ: ಸರ್ವಾಧಿಕಾರಿ ಪ್ರಜಾಪ್ರಭುತ್ವವಾದಿಯಾಗಬಹುದೇ? ತನ್ನನ್ನು ದೇವರು ಕಳಿಸಿದ್ದಾನೆ ಎಂದು ಇತ್ತೀಚೆಗೆ ಹೇಳಿಕೊಂಡ ಯಾರಾದರೂ ತನ್ನನ್ನು ಮನುಷ್ಯ ಮತ್ತು ದೋಷಪೂರಿತ ಎಂದು ಪರಿಗಣಿಸಲು ಮತ್ತು ಸಲಹೆಯನ್ನು ಸ್ವೀಕರಿಸಲು ಮತ್ತು ಇತರರಿಗೆ ಶ್ರೇಯಸ್ಸಿನ ಪಾಲು ನೀಡಲು ಸಾಧ್ಯವೇ? ಬಹುಮತವಿಲ್ಲದ ಮೋದಿ ತಮ್ಮ ಸಂಪುಟದ ಮಂತ್ರಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುವಲ್ಲಿ, ತಮ್ಮ ಸಂಸದರ ಮೇಲೆ ದರ್ಪ ತೋರಿಸದೆ ಇರುವಲ್ಲಿ, ಪ್ರತಿಪಕ್ಷಗಳ ಜೊತೆ, ಹಾಗೆಯೇ ತಮ್ಮ ಪಕ್ಷದ್ದಲ್ಲದ ರಾಜ್ಯ ಸರಕಾರಗಳ ವಿಷಯದಲ್ಲಿ ಹೆಚ್ಚು ಸೌಜನ್ಯದಿಂದ ವರ್ತಿಸುವಲ್ಲಿ ರಾವ್, ವಾಜಪೇಯಿ ಮತ್ತು ಸಿಂಗ್ ಅವರನ್ನು ಅನುಸರಿಸಬಹುದೇ?
ಈ ಪ್ರಶ್ನೆಗಳಿಗೆ ಪರಿಗಣಿಸಲಾದ ಉತ್ತರ ಸಿಗಲು ಹಲವು ತಿಂಗಳುಗಳು ಅಥವಾ ಹಲವು ವರ್ಷಗಳೇ ಹಿಡಿಯಬಹುದು. ಸದ್ಯಕ್ಕೆ ಮೋದಿಯವರ ಆಡಳಿತ ಶೈಲಿಯಲ್ಲಿ ಸಾಂಕೇತಿಕ ಬದಲಾವಣೆಯನ್ನು ನಾನು ನಿರೀಕ್ಷಿಸುತ್ತೇನೆ. ಸಂಸತ್ತಿನಲ್ಲಿ ಚರ್ಚೆಗೆ ಸ್ವಲ್ಪ ಹೆಚ್ಚು ಅವಕಾಶ ಸಿಗಬಹುದು. ವಿಪಕ್ಷದ ಸರಕಾರಗಳಿರುವ ರಾಜ್ಯಗಳಲ್ಲಿ ರಾಜ್ಯಪಾಲರ ನಡವಳಿಕೆಯಲ್ಲಿ ಸುಧಾರಣೆ ಕಾಣಿಸಬಹುದು. ಹಿರಿಯ ಮಂತ್ರಿಗಳು - ಹಾಗೆಯೇ ಸ್ವತಃ ಮೋದಿ ದೇಶದಲ್ಲಿನ ಮುಸ್ಲಿಮರನ್ನು ಕೆಟ್ಟವರೆಂದು ಸಾರ್ವಜನಿಕವಾಗಿ ಬಿಂಬಿಸುವುದನ್ನು ನಿಲ್ಲಿಸಬಹುದು. ಆದರೆ ಆಡಳಿತದ ವಿಧಾನದಲ್ಲಿ ಗಣನೀಯ ಬದಲಾವಣೆಗಳಾಗುತ್ತವೆಯೇ ಎಂಬುದನ್ನು ನೋಡಬೇಕಾಗಿದೆ. ಈ ಪ್ರಧಾನಿಯ ಪ್ರವೃತ್ತಿಯಾದ ಕೇಂದ್ರೀಕರಿಸುವಿಕೆ ಮತ್ತು ಪ್ರಾಬಲ್ಯ ಸಾಧಿಸುವಿಕೆಯು, ಅವರು ಇಲ್ಲಿಯವರೆಗೆ ಅನುಭವಿಸಿದ ಎರಡು ದಶಕಗಳ (ಮತ್ತು ಹೆಚ್ಚಿನ) ಕಡಿವಾಣವಿಲ್ಲದ ಅಧಿಕಾರದಿಂದ ಬಲಗೊಂಡಿರುವ ಪ್ರವೃತ್ತಿಯಾಗಿದೆ.