ಕ್ರಿಕೆಟ್: ವ್ಯವಹಾರ ಮತ್ತು ರಾಜಕೀಯ
Photot: PTI
ಕ್ರಿಕೆಟ್ನಲ್ಲಿ, ಬೌಲರ್ಗಳು ಬೌಲ್ ಮಾಡುವ ಎರಡು ತುದಿಗಳು ಸಾಮಾನ್ಯವಾಗಿ ಹೆಸರುಗಳನ್ನು ಹೊಂದಿರುತ್ತವೆ. ಲಾರ್ಡ್ಸ್ ಕ್ರಿಕೆಟ್ ಮೈದಾನದ ಸಂದರ್ಭದಲ್ಲಿ ಅಂತಹ ಎರಡು ತುದಿಗಳೆಂದರೆ, ಪೆವಿಲಿಯನ್ ಮತ್ತು ನರ್ಸರಿ. ಲಂಡನ್ನಲ್ಲಿರುವ ಇನ್ನೊಂದು ದೊಡ್ಡ ಮೈದಾನ ದಿ ಓವಲ್ನಲ್ಲಿ ಒಂದು ತುದಿಯನ್ನು ಸದಸ್ಯರ ಪೆವಿಲಿಯನ್ ಎಂದು ಕರೆದರೆ, ಇನ್ನೊಂದಕ್ಕೆ ಸಮೀಪದಲ್ಲಿಯೇ ಇರುವ ಸುರಂಗ ನಿಲ್ದಾಣ ವಾಕ್ಸ್ಹಾಲ್ ಹೆಸರನ್ನು ಇಡಲಾಗಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಕ್ರಮವಾಗಿ ಮೆಂಬರ್ಸ್ ಎಂಡ್ ಮತ್ತು ಗ್ರೇಟ್ ಸದರ್ನ್ ಸ್ಟ್ಯಾಂಡ್ ಎಂಡ್ ಇದೆ. ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ಪೆವಿಲಿಯನ್ ಎಂಡ್ ಮತ್ತು ಹೈಕೋರ್ಟ್ ಎಂಡ್ ಅನ್ನು ಕಾಣಬಹುದು.
ಓಲ್ಡ್ ಟ್ರಾಫರ್ಡ್ನಲ್ಲಿನ ಎರಡು ತುದಿಗಳಿಗೆ, ತವರು ನೆಲದ ಇಬ್ಬರು ಶ್ರೇಷ್ಠ ವೇಗದ ಬೌಲರ್ಗಳ ಗೌರವಾರ್ಥ ಇಡಲಾಗಿರುವ ಬ್ರಿಯಾನ್ ಸ್ಟಾಥಮ್ ಮತ್ತು ಜಿಮ್ಮಿ ಆ್ಯಂಡರ್ಸನ್ ಕೂಡ ಅಂತಹ ಉತ್ತಮ ಹೆಸರುಗಳಾಗಿರಬಹುದು. ವಾಂಖೆಡೆ ಸ್ಟೇಡಿಯಂನಲ್ಲಿ ಆಟಕ್ಕೆ ಪ್ರಾಯೋಜಕರ ಅಗತ್ಯವಿದೆ ಎಂಬ ಅಂಶದ ದೃಷ್ಟಿಯಿಂದ, ಕಡಿಮೆ ಆಕರ್ಷಕವಾಗಿರುವ, ಆದರೆ ಅರ್ಥವಾಗುವಂಥದ್ದಾಗಿರುವ ಮತ್ತು ಬಹುಶಃ ಸ್ವೀಕಾರಾರ್ಹವಾಗಿರುವ ಎರಡು ತುದಿಗಳ ಹೆಸರುಗಳು ಕ್ರಮವಾಗಿ ಗಾರ್ವೇರ್ ಮತ್ತು ಟಾಟಾ.
ಬೌಲರ್ಗಳು ಬೌಲ್ ಮಾಡುವ ಎರಡು ತುದಿಗಳಿಗೆ ಇಡಲಾಗುವ ನಿರ್ದಿಷ್ಟ ಹೆಸರುಗಳ ಹಿಂದೆ ಕನಿಷ್ಠ ಮೂರು ಉದ್ದೇಶಗಳು ಇರುತ್ತವೆ. ಮೊದಲನೆಯದಾಗಿ, ಪ್ರೇಕ್ಷಕರು ತಮ್ಮ ಟಿಕೆಟ್ಗಳನ್ನು ಪಡೆದ ನಿರ್ದಿಷ್ಟ ಸ್ಟ್ಯಾಂಡ್ನಲ್ಲಿ ತಮ್ಮ ಆಸನಗಳನ್ನು ಹುಡುಕುವುದಕ್ಕೆ ಮೈದಾನಕ್ಕೆ ಹೋಗಲು ಅದು ನೆರವಾಗುತ್ತದೆ. ಎರಡನೆಯದಾಗಿ, ಮೈದಾನದಲ್ಲಿ ಇರದ ಅಭಿಮಾನಿಗಳಿಗಾಗಿ ವೀಕ್ಷಕ ವಿವರಣೆಗೆ ಅದು ಹೆಚ್ಚು ರಂಗನ್ನು ನೀಡುತ್ತದೆ. ವಿಶೇಷವಾಗಿ ದೂರದರ್ಶನದ ನೇರ ಪ್ರಸಾರಕ್ಕಿಂತ ಮುಂಚಿನ ದಿನಗಳಲ್ಲಿ, ಓವಲ್ನಲ್ಲಿನ ಟೆಸ್ಟ್ ಪಂದ್ಯದ ಸಮಯದಲ್ಲಿ ಬೌಲರ್ ವಾಕ್ಸ್ಹಾಲ್ ಎಂಡ್ನಿಂದ ಬರುತ್ತಿದ್ದಾರೆ ಎಂದು ರೇಡಿಯೊದಲ್ಲಿ ಕೇಳುವುದು ಅದ್ಭುತವಾಗಿರುತ್ತಿತ್ತು. ಮೂರನೆಯದಾಗಿ, ಆಟಗಾರರಿಗೆ, ಅದರಲ್ಲಿಯೂ ತಂಡದ ನಾಯಕರಿಗೆ, ಯಾವ ತುದಿಯು ಯಾವ ರೀತಿಯ ಬೌಲರ್ಗೆ ಮತ್ತು ಪಂದ್ಯದ ಯಾವ ಹಂತದಲ್ಲಿ ಅನುಕೂಲಕರವಾಗಲಿದೆ ಎಂದು ನಿರ್ಣಯಿಸಲು ಅದು ನೆರವಾಗುತ್ತದೆ.
ಕ್ರಿಕೆಟ್ ಸ್ಟೇಡಿಯಂನ ತುದಿಗಳಿಗೆ ಇಡಲಾಗುವ ಹೆಸರುಗಳು ಕಲ್ಲಿನಲ್ಲಿ ಕೆತ್ತಿದವೇನೂ ಅಲ್ಲ. ಅವುಗಳನ್ನು ಆ ಹೆಸರುಗಳಿಂದ ಕರೆಯಲಾಗುತ್ತದೆ ಮತ್ತು ಕೆಲವೊಮ್ಮೆ ಬದಲಾಗಲೂಬಹುದು. ರೇಡಿಯೊ ಪ್ರಸಾರಗಳು ಮತ್ತು ಮುದ್ರಣದ ಪುರಾವೆಗಳಿಂದ ನಾನು ತಿಳಿದಿರುವಂತೆ ಚೆನ್ನೈನ ಚೆಪಾಕ್ ಸ್ಟೇಡಿಯಂನ ಒಂದು ತುದಿಯನ್ನು ‘ವಾಲಾಜಾ ರೋಡ್’ ಎಂಡ್ ಎಂದು ಕರೆಯಲಾಗುತ್ತಿತ್ತು. ನನ್ನ ಮೂವತ್ತೈದನೇ ವಯಸ್ಸಿನಲ್ಲೊಮ್ಮೆ ಚೆನ್ನೈನಲ್ಲಿ ಆಟೋ ರಿಕ್ಷಾವನ್ನು ಹತ್ತಿದಾಗ ಅದು ವಾಲಾಜಾ ರಸ್ತೆಯಲ್ಲಿಯೇ ಸಾಗಿದ್ದುದು ತಿಳಿದು ನಾನು ಪುಳಕ ಅನುಭವಿಸಿದ್ದೆ.
ಕೆಲವು ವರ್ಷಗಳ ಹಿಂದೆ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಮಾಜಿ ಕ್ರಿಕೆಟ್ ನಿರ್ವಾಹಕರ ನೆನಪಿಗಾಗಿ ವಾಲಾಜಾ ರೋಡ್ ಹೆಸರಿನ ಬದಲು ಆ ತುದಿಗೆ ವಿ. ಪಟ್ಟಾಭಿರಾಮನ್ ಅವರ ಹೆಸರನ್ನು ಮರುನಾಮಕರಣ ಮಾಡಲು ನಿರ್ಧರಿಸಿತು. ಆದರೂ, ಜನರ ಮನಸ್ಸಿನಲ್ಲಿ ಈಗಲೂ ಹಳೆಯ ಹೆಸರೇ ಅಚ್ಚೊತ್ತಿರುವುದರಿಂದ, ಹಳೆಯ ಹೆಸರನ್ನೇ ಬಳಸಲಾಗುತ್ತಿದೆ.
ನರೇಂದ್ರ ಮೋದಿ ಸ್ಟೇಡಿಯಂ ೨೦೨೧ರಲ್ಲಿ ಉದ್ಘಾಟನೆಯಾಗಿ, ಆ ವರ್ಷದ ಫೆಬ್ರವರಿಯಲ್ಲಿ ಅದರ ಮೊದಲ ಟೆಸ್ಟ್ ಪಂದ್ಯವನ್ನು ಆಯೋಜಿಸಿದಾಗ, ಎರಡು ತುದಿಗಳಿಗೆ ಅದಾನಿ ಮತ್ತು ಅಂಬಾನಿ ಹೆಸರಿಟ್ಟಿದ್ದು ಗಮನಕ್ಕೆ ಬಂದಿತ್ತು. ಅದು ತಿಳಿದಾಗ ತಮಾಷೆ, ಆಕ್ರೋಶ ಮತ್ತು ಬೇಸರದಂತಹ ಮಿಶ್ರ ಭಾವನೆಗೆ ಕಾರಣವಾಗಿತ್ತು. ನಿಜ, ತಮ್ಮ ಹೆಸರಿನ ಕ್ರಿಕೆಟ್ ಮೈದಾನಗಳಲ್ಲಿ ಕಾರ್ಪೊರೇಟ್ಗಳು ಹಣ ಪಾವತಿಸುವ ಪೂರ್ವನಿದರ್ಶನಗಳಿವೆ-ವಾಂಖೆಡೆ ಸ್ಟೇಡಿಯಂನಲ್ಲಿ ಟಾಟಾ ಮತ್ತು ಗಾರ್ವೇರ್ ಅವರಂತೆಯೇ. ಆದರೆ ಒಂದು ಕಾಲದ ಸರ್ದಾರ್ ಪಟೇಲ್ ಸ್ಟೇಡಿಯಂಗೆ ಮೋದಿ ಹೆಸರಿಟ್ಟವರು ನಂತರ ಹೆಚ್ಚುವರಿಯಾಗಿ ಅದಾನಿ ಮತ್ತು ಅಂಬಾನಿ ಪ್ರಚಾರಕ್ಕೂ ಇಳಿದದ್ದು ಅವರ ಆತ್ಮಸಾಕ್ಷಿಯ ಕೊರತೆಯನ್ನು ಸ್ಪಷ್ಟವಾಗಿ ತೋರಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಇಬ್ಬರು ಉದ್ಯಮಿಗಳು ಬೆಳೆಯುತ್ತಿರುವ ರೀತಿ ಈಗಾಗಲೇ ಸಾಕಷ್ಟು ಟೀಕೆಗಳನ್ನೂ ಎದುರಿಸಿದೆ. ಭಾರತ ಸರಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರು ದೇಶದಲ್ಲಿ ಚಾಲ್ತಿಯಲ್ಲಿದ್ದ ‘ಕಳಂಕಿತ ಬಂಡವಾಳಶಾಹಿಯ ೨ಎ ಮಾದರಿ’ಯನ್ನು ಉಲ್ಲೇಖಿಸುವವರೆಗೂ ಹೋಗಿದ್ದರು. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕುಟುಂಬ ಯೋಜನೆಯ ಹಳೆಯ ಘೋಷಣೆಯನ್ನೇ ಇಟ್ಟುಕೊಂಡು, ‘‘ಹಮ್ ದೋ, ಹಮಾರೇ ದೋ’’ ಎಂದು ಟೀಕಿಸಿದ್ದೂ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ, ಈ ಇಬ್ಬರು ಉದ್ಯಮಿಗಳಿಗೆ ವಿಶೇಷವಾಗಿ ಸಹಾಯ ಮಾಡುತ್ತಿದ್ದರು ಎಂಬುದು ಇದರ ಅರ್ಥ.
ಅಹಮದಾಬಾದ್ನ ಹೊಸ ಸ್ಟೇಡಿಯಂನಲ್ಲಿನ ಆ ಮೊದಲ ಟೆಸ್ಟ್ ಪಂದ್ಯವನ್ನು ದೂರದರ್ಶನದಲ್ಲಿ ವೀಕ್ಷಿಸಿದಾಗ, ಅದರ ಪ್ರಾಯೋಜಕರ ಗುರುತುಗಳು ಸ್ಕೋರ್ಬೋರ್ಡ್ನ ಸ್ವಲ್ಪ ಮೇಲೆ ಕಾಂಕ್ರಿಟ್ ಬಾರ್ಗಳಲ್ಲಿ ಪ್ರತಿ ತುದಿಯಲ್ಲಿ ಒಂದರಂತೆ ಗೋಚರಿಸುವುದನ್ನು ನಾನು ಗಮನಿಸಿದ್ದೆ. ಅವುಗಳಿಗಿಂತಲೂ ಮೇಲಕ್ಕೆ ದೊಡ್ಡದಾಗಿ ‘ನರೇಂದ್ರ ಮೋದಿ ಸ್ಟೇಡಿಯಂ’ ಎಂಬುದು ಕಾಣಿಸುತ್ತಿತ್ತು. ಈ ರೀತಿಯಾಗಿ, ಈ ಇಬ್ಬರು ಉದ್ಯಮಿಗಳ ಹೆಸರುಗಳು ಬಹಿರಂಗವಾಗಿ ಪ್ರಧಾನಿ ಹೆಸರಿನೊಂದಿಗೆ ಸಂಬಂಧ ಹೊಂದಿದ್ದವು. ಇದು ಅವರ ಸಾಂಕೇತಿಕ ಮತ್ತು ಪ್ರಾಯಶಃ ವಾಸ್ತವಿಕ ಸಾಮೀಪ್ಯದ ಸ್ಪಷ್ಟ ಕಾಣಿಸಿಕೊಳ್ಳುವಿಕೆಯಾಗಿತ್ತು.
ನಾನು ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ನೋಡದ, ಟೆಸ್ಟ್ ಕ್ರಿಕೆಟ್ನ ಪಕ್ಷಪಾತಿ. ಐಪಿಎಲ್ ೨೦೨೨ರ ಸಮಯದಲ್ಲಿ ನರೇಂದ್ರ ಮೋದಿ ಕ್ರೀಡಾಂಗಣ ಗುಜರಾತ್ ಟೈಟಾನ್ಸ್ನ ತವರು ಮೈದಾನವಾಗಿದ್ದಾಗ ಮತ್ತು ಪಂದ್ಯಾವಳಿಯ ಅಂತಿಮ ಪಂದ್ಯಕ್ಕೆ ಆತಿಥ್ಯ ವಹಿಸಿದ್ದಾಗ ಎರಡು ತುದಿಗಳನ್ನು ಏನೆಂದು ಕರೆಯಲಾಯಿತು ಎಂಬುದರ ಕುರಿತು ನಾನು ಖಚಿತವಾಗಿ ಹೇಳಲಾರೆ. ಆದರೆ, ಮಾರ್ಚ್ ೨೦೨೩ರ ಎರಡನೇ ವಾರದಲ್ಲಿ ಆಸ್ಟ್ರೇಲಿಯ ವಿರುದ್ಧ ಅಹಮದಾಬಾದ್ನಲ್ಲಿ ಟೆಸ್ಟ್ ಪಂದ್ಯ ನಡೆದಾಗ, ಅದಾನಿ ಎಂಡ್ ಇನ್ನೂ ಹಾಗೇ ಇತ್ತು. ಅಂಬಾನಿ ಎಂಡ್ ಅನ್ನು ಮರುನಾಮಕರಣ ಮಾಡಿ, ಜಿಯೋ ಎಂಡ್ ಎಂದು ಕರೆಯಲಾಗಿತ್ತು. ಇದು ವಾಣಿಜ್ಯ ಉತ್ಪನ್ನವನ್ನು ಮುಂಭಾಗ ಮತ್ತು ಕೇಂದ್ರದಲ್ಲಿರಿಸಿ, ಅದರಿಂದ ಪ್ರಚಾರ ಮತ್ತು ಲಾಭ ಪಡೆಯುವ ಕುಟುಂಬವನ್ನು ದೂರವಿಡುವ ಮರುಬ್ರ್ಯಾಂಡಿಂಗ್ನ ಒಂದು ಕಲಾತ್ಮಕ ಕ್ರಿಯೆಯಾಗಿದೆ. ಅದು, ಈ ಅಂಬಾನಿ ಇನ್ನು ಮುಂದೆ ಆ ಮೋದಿಯೊಂದಿಗೆ ನೇರವಾಗಿ ಸಂಬಂಧ ಹೊಂದಲು ಬಯಸುವುದಿಲ್ಲ ಎನ್ನಿಸುವಂತಿತ್ತು. ಸಂಪರ್ಕವನ್ನು ಸಾರ್ವಜನಿಕವಾಗಿ ಇಟ್ಟುಕೊಳ್ಳುವುದರಲ್ಲಿ ಅದಾನಿಗೆ ಆಸಕ್ತಿಯಿದ್ದರೂ, ಅದು ನಿಷ್ಠೆ ಅಥವಾ ಪ್ರತಿಷ್ಠೆಯ ಗುರುತೆಂದು ಹೇಳಲು ಆಗದಂತಿದೆ.
ನಾನು ಐಪಿಎಲ್ ಅನ್ನು ತಿರಸ್ಕರಿಸಿದರೂ, ಸಾಂದರ್ಭಿಕವಾಗಿ ದೇಶಗಳ ನಡುವಿನ ಸೀಮಿತ ಓವರ್ಗಳ ಪಂದ್ಯಗಳನ್ನು ನೋಡುತ್ತೇನೆ. ಈ ವಿಶ್ವಕಪ್ನ ಉದ್ಘಾಟನಾ ಪಂದ್ಯವನ್ನು ತಪ್ಪಿಸಿಕೊಂಡೆ. ಆದರೆ ಅಕ್ಟೋಬರ್ ೧೪ರ ಶನಿವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಕೆಲವು ಗಂಟೆಗಳ ಕಾಲ ನೋಡಿದೆ. ಅಹಮದಾಬಾದ್ ಸ್ಟೇಡಿಯಂನ ಎರಡು ತುದಿಗಳು ಇನ್ನು ಯಾವುದೇ ಹೆಸರನ್ನು ಹೊಂದಿರುವುದಿಲ್ಲ ಎಂಬುದನ್ನು ಆಸಕ್ತಿಯಿಂದ ಗಮನಿಸಿದೆ. ಒಂದು ಕಾಲದಲ್ಲಿ ಕ್ರಮವಾಗಿ ‘ಅದಾನಿ ಎಂಡ್’ ಮತ್ತು ‘ಅಂಬಾನಿ/ಜಿಯೋ ಎಂಡ್’ ಹೊಂದಿದ್ದ ದೃಶ್ಯಾವಳಿಗಳ ಹಿಂದಿನ ಕಾಂಕ್ರಿಟ್ ಬಾರ್ಗಳು ಯಾವುದೇ ಅಕ್ಷರಗಳಿಲ್ಲದೆ ಬಿಳಿಯಾಗಿದ್ದವು. ಮತ್ತೊಂದೆಡೆ, ಮೇಲಿನ ಹಂತದ ಕಾಂಕ್ರಿಟ್ನಲ್ಲಿ ‘ನರೇಂದ್ರ ಮೋದಿ ಸ್ಟೇಡಿಯಂ’ ಇನ್ನೂ ಅದ್ಭುತವಾಗಿ ಕಾಣಿಸುತ್ತಿತ್ತು.
ಈ ಹಠಾತ್ ಅಳಿಸುವಿಕೆಯ ಬಗ್ಗೆ ಸತ್ಯಾನ್ವೇಷಕ ಕ್ರಿಕೆಟ್ ಪ್ರೇಮಿಯೊಬ್ಬರು ಕೇಳಲು ಬಯಸುವ ಹಲವು ಪ್ರಶ್ನೆಗಳಿವೆ. ಅದಾನಿ ಮತ್ತು ಅಂಬಾನಿ ತಮ್ಮ ಹೆಸರಿನ ಈ ತುದಿಗಳನ್ನು ಹೊಂದುವ ಆರಂಭಿಕ ಸವಲತ್ತಿಗೆ ಎಷ್ಟು ಪಾವತಿಸಿದ್ದರು? ನಂತರ ಅವರ ಹೆಸರನ್ನು ತೆಗೆದುಹಾಕಿದಾಗ ಅವರಿಗೆ ಪರಿಹಾರ ನೀಡಲಾಗಿದೆಯೇ? ಈ ಬಗ್ಗೆ ಅವರೊಡನೆ ಸಮಾಲೋಚನೆ ನಡೆಸಲಾಗಿದೆಯೇ? ಅಹಮದಾಬಾದ್ ಕ್ರೀಡಾಂಗಣದಲ್ಲಿ ಒಮ್ಮೆ ಧೈರ್ಯವಾಗಿ ಪ್ರದರ್ಶಿಸಿದ ಕ್ರಿಕೆಟ್, ವ್ಯವಹಾರ ಮತ್ತು ರಾಜಕೀಯದ ನಡುವಿನ ಸಂಪರ್ಕವನ್ನು ಸಂಪೂರ್ಣವಾಗಿ ಅಳಿಸಿಹಾಕಲು ಯಾರು ಕಾರಣ?
ನರೇಂದ್ರ ಮೋದಿ ಅವರು ಭಾರತ ಕಂಡ ಅತ್ಯಂತ ಗುಟ್ಟು ಮಾಡುವ ಪ್ರಧಾನಿ. ಅವರ ಹಿಂದಿನ ಮತ್ತು ಈಗಿನ ಅನೇಕ ವಿಚಾರಗಳ ಬಗ್ಗೆ, ಅವರ ವೈಯಕ್ತಿಕ ಜೀವನ ಅಥವಾ ಅವರ ರಾಜಕೀಯ ಜೀವನದ ಬಗ್ಗೆ ಯಾವುದೇ ವಿಶ್ವಾಸಾರ್ಹ ಮಾಹಿತಿ ಇಲ್ಲ(ಮಾಹಿತಿ ಹಕ್ಕು ಕಾಯ್ದೆಯನ್ನು ಸಮಗ್ರವಾಗಿ ತೆಗೆದುಹಾಕುವುದು ಸಂಪೂರ್ಣವಾಗಿ ವ್ಯಕ್ತಿಯ ಸ್ವಭಾವ ಮತ್ತು ಆತನ ಆಡಳಿತಕ್ಕೆ ಅನುಗುಣವಾಗಿದೆ). ಆದರೂ, ವಿಶ್ವಾಸಾರ್ಹ ಮಾಹಿತಿ ಇಲ್ಲವಾದಾಗ, ಜಾಣ ಊಹಾಪೋಹಗಳು ಸಹಜ. ಅದಾನಿ ಮತ್ತು ಅಂಬಾನಿ ಹೆಸರಿನ ತುದಿಗಳನ್ನು ಇಲ್ಲವಾಗಿಸುವ ಯೋಚನೆ ಪ್ರಧಾನ ಮಂತ್ರಿ ಕಚೇರಿಯಿಂದ ಬಂದಿದ್ದಾಗಿರಬಹುದೇ ಹೊರತು ಆ ಉದ್ಯಮಿಗಳಿಂದಲ್ಲ. ಕ್ರೋನಿ ಕ್ಯಾಪಿಟಲಿಸಂ ಬಗ್ಗೆ ಈಗ ಸಾಕಷ್ಟು ವ್ಯಾಪಕ ಆರೋಪಗಳು ನರೇಂದ್ರ ಮೋದಿಯವರ ಮೇಲೆ ಬಂದಿರಬಹುದು. ಈ ಆರೋಪಗಳು ಮುಂದುವರಿದರೆ ಮತ್ತು ಮತ್ತಷ್ಟು ನಿಜವೆನ್ನಿಸತೊಡಗಿದರೆ ಆಮೇಲೆ ಅದು ರಾಜಕೀಯವಾಗಿ ದೊಡ್ಡ ನಷ್ಟಕ್ಕೆ ಕಾರಣವಾದೀತು ಎಂಬುದು ಅವರಿಗೆ ಗೊತ್ತಿದೆ.
ಆದ್ದರಿಂದ ಬಹುಶಃ ಇಬ್ಬರೂ ಉದ್ಯಮಿಗಳೊಂದಿಗಿನ ಸಾರ್ವಜನಿಕ ಒಡನಾಟವನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಬಂದಿರಬಹುದು. ಆದರೂ, ಪ್ರಧಾನ ಮಂತ್ರಿಯ ವ್ಯಕ್ತಿತ್ವ ಆರಾಧನೆ ಅಖಂಡವಾಗಿ ಉಳಿಯಬೇಕು ಮತ್ತು ಅದು ಮುಂದುವರಿಯಲು ಜನಪ್ರಿಯ ಕ್ರೀಡೆ ಕ್ರಿಕೆಟ್ ಸೇರಿದಂತೆ - ಸಾಧ್ಯವಿರುವ ಎಲ್ಲ ವಿಧಾನಗಳನ್ನು ಬಳಸುವುದನ್ನು ಮುಂದುವರಿಸಬೇಕು. ಹೀಗಾಗಿಯೇ ನರೇಂದ್ರ ಮೋದಿ ಸ್ಟೇಡಿಯಂ ಈ ವಿಶ್ವಕಪ್ನ ಅತಿ ಹೆಚ್ಚು ಗಮನ ಸೆಳೆಯುವ ಎರಡು ಪಂದ್ಯಗಳ-ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ಮತ್ತು ಪಂದ್ಯಾವಳಿಯ ಫೈನಲ್ ಪಂದ್ಯ ಆತಿಥ್ಯ ವಹಿಸಿರುವುದು.
ಲಾರ್ಡ್ಸ್, ಓಲ್ಡ್ ಟ್ರಾಫರ್ಡ್, ಈಡನ್ ಗಾರ್ಡನ್ಸ್ ಮತ್ತು ಚೆಪಾಕ್ ಕ್ರೀಡಾಂಗಣಗಳಂತೆಯೇ, ಅಹಮದಾಬಾದ್ನ ಪ್ರಮುಖ ಕ್ರಿಕೆಟ್ ಸ್ಟೇಡಿಯಂ ಒಮ್ಮೆ ನಿರ್ದಿಷ್ಟ ಹೆಸರುಗಳನ್ನು ಹೊಂದಿರುವ ಎರಡು ತುದಿಗಳನ್ನು ಹೊಂದಿತ್ತು. ಈಗ ಅದು ಇಲ್ಲವಾಗಿದೆ. ಈ ಪರಿಸ್ಥಿತಿಯೇ ಮುಂದುವರಿಯುತ್ತದೆಯೇ? ಅಥವಾ ಗುಜರಾತ್ ಮತ್ತು ಭಾರತದಲ್ಲಿನ ಕ್ರಿಕೆಟ್ ಆಯೋಜಕರು ಈ ಉದ್ಯಮಿಗಳಿಗೆ ಇತರ ಪರ್ಯಾಯಗಳನ್ನು ಕಂಡುಕೊಳ್ಳುತ್ತಾರೆಯೇ? ಅಹಮದಾಬಾದ್ ಸ್ಟೇಡಿಯಂನ ತುದಿಗಳು ಈಗ ಬಹುಶಃ ಗುಜರಾತಿ ಮೂಲದ ಇಬ್ಬರು ಶ್ರೇಷ್ಠ ಕ್ರಿಕೆಟಿಗರಾದ ವಿನೂ ಮಂಕಡ್ ಮತ್ತು ಕೆ.ಎಸ್. ರಣಜಿತ್ಸಿನ್ಹಾಜಿ ಅವರ ಹೆಸರನ್ನು ಹೊಂದಿರಬೇಕು ಎಂದು ಕ್ರಿಕೆಟ್ ಪ್ರೇಮಿ ಸ್ನೇಹಿತರೊಬ್ಬರು ಬಯಸುತ್ತಾರೆ. ಆದರೆ ಅದರ ಬದಲಾಗಿ, ಮತ ಸೆಳೆಯುವ ಕಾರಣಗಳಿಗಾಗಿ ಮೋದಿ ಸರಕಾರ ಅಂಬೇಡ್ಕರ್ ಮತ್ತು ಸಾವರ್ಕರ್ ಅವರ ಹೆಸರನ್ನು ಇಡಲು ಮುಂದಾಗಬಹುದು ಎಂದು ಇನ್ನೊಬ್ಬ (ಹೆಚ್ಚು ರಾಜಕೀಯ ಎಚ್ಚರವುಳ್ಳ) ಸ್ನೇಹಿತ ಭಾವಿಸುತ್ತಿದ್ದಾರೆ.
ಮೊದಲ ಸಲಹೆ ಉದಾತ್ತವಾಗಿದೆ; ಎರಡನೆಯದು, ಸಿನಿಕತನದ್ದು. ಆದರೂ, ಪ್ರತಿಯೊಬ್ಬ ಪ್ರಜಾಸತ್ತಾತ್ಮಕವಾದಿ ಅಸಹ್ಯಪಟ್ಟುಕೊಳ್ಳುವುದಕ್ಕಿರುವ ಮೂಲ ಕಾರಣಕ್ಕೆ ಕ್ರೀಡಾಂಗಣಕ್ಕೆ ಹೆಸರಿಡುವುದೇ ಉತ್ತರವಾಗಲಾರದು. ಸಾರ್ವಜನಿಕವಾಗಿ ಲಾಭ ಮಾಡಿಕೊಳ್ಳುವ ಉದ್ದೇಶದ ಇಂತಹ ಪ್ರದರ್ಶನಗಳು ಹಿಂದೆ ನಿರಂಕುಶ ಪ್ರಭುತ್ವಗಳಾದ ಹಿಟ್ಲರ್ನ ಜರ್ಮನಿ, ಸ್ಟಾಲಿನ್ನ ರಶ್ಯ ಮತ್ತು ಕಿಮ್ ಇಲ್ ಸುಂಗ್ನ ಉತ್ತರ ಕೊರಿಯಾಗಳಿಗಷ್ಟೇ ಸೀಮಿತವಾಗಿದ್ದವು. ಅಲ್ಲಿ ಅಧಿಕಾರಸ್ಥ ಸರ್ವಾಧಿಕಾರಿಯ ಹೆಸರನ್ನು ಜನಪ್ರಿಯಗೊಳಿಸಲು ಕ್ರೀಡಾ ಸ್ಥಳಗಳ ಬಳಕೆಯಾಗುತ್ತಿತ್ತು. ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವ ದೇಶದಲ್ಲಿ ಹಿಂದೆಂದೂ ಇಂಥದೊಂದು ನಡೆ ದೂರದಿಂದಲೂ ಸಾಧ್ಯವಾಗಿರಲಿಲ್ಲ. ನರೇಂದ್ರ ಮೋದಿ ಬದುಕಿರುವಾಗಲೇ ಮತ್ತು ಅಧಿಕಾರದಲ್ಲಿರುವಾಗಲೇ ನರೇಂದ್ರ ಮೋದಿ ಕ್ರೀಡಾಂಗಣ ಅಸ್ತಿತ್ವದಲ್ಲಿರುವುದು ಕ್ರಿಕೆಟ್ ಆಟವನ್ನು ಅಗ್ಗವಾಗಿಸಿದೆ ಮಾತ್ರವಲ್ಲ, ದೇಶಕ್ಕೂ ನಾಚಿಕೆಗೇಡು.