ಹಿಂದುತ್ವ ಮತ್ತು ಭಾರತೀಯ ವಿಜ್ಞಾನ
ವೈಜ್ಞಾನಿಕ ಸಂಶೋಧನೆಯ ಉನ್ನತ ಕೇಂದ್ರಗಳ ನಿರ್ದೇಶಕರಾದ ಇಬ್ಬರು ಗಣ್ಯರೊಡನೆ 2009ರಲ್ಲಿ ನಾನು ಊಟಕ್ಕೆ ಜೊತೆಯಾಗಿದ್ದೆ. ವಿದೇಶದಲ್ಲಿನ ಸಂಶೋಧಕರಿಂದ ಬೋಧಕ ವರ್ಗದ ಉದ್ಯೋಗಗಳಿಗಾಗಿ ಅರ್ಜಿಗಳ ಸಾಲೇ ಬಂದಿರುವುದರ ಬಗ್ಗೆ ಅವರು ಹೇಳುತ್ತಿದ್ದರು. ಅದು ಅಭೂತಪೂರ್ವವಾದುದಾಗಿತ್ತು. ಅವರು ಉದ್ಯೋಗಗಳಿಗಾಗಿ ವಿದೇಶದಲ್ಲಿ ನೆಲೆಸಿರುವ ಭಾರತೀಯ ವಿಜ್ಞಾನಿಗಳಿಗೆ ಹೆಚ್ಚು ಪರಿಚಿತರಾಗಿದ್ದರು. ಆ ಸಮಯದಲ್ಲೂ ಹಾಗೇ ನಡೆಯುತ್ತಿತ್ತು. ಆದರೆ ಆಗ ಇನ್ನೊಂದು ಬಗೆಯಲ್ಲಿ ಪಶ್ಚಿಮದಿಂದ ಭಾರತಕ್ಕೆ ವೈಜ್ಞಾನಿಕ ಪ್ರತಿಭೆಯ ಗಣನೀಯ ಹರಿವನ್ನು ಕಾಣಬಹುದಿತ್ತು.
ಭಾಗಶಃ ಇರುವ ಈ ವಿರುದ್ಧ ದಿಕ್ಕಿನ ಪ್ರತಿಭಾ ಪಲಾಯನಕ್ಕೆ ಹಲವಾರು ಕಾರಣಗಳಿದ್ದವು. ಜಾಗತಿಕ ಆರ್ಥಿಕ ಬಿಕ್ಕಟ್ಟು ಪಾಶ್ಚಿಮಾತ್ಯ ವಿಶ್ವವಿದ್ಯಾನಿಲಯಗಳಲ್ಲಿ ಹಣದ ಹರಿವು ಕಡಿಮೆಯಾಗಲು ಕಾರಣವಾಗಿತ್ತು. ಅವು ಹೊಸ ಬೋಧಕರನ್ನು ನೇಮಿಸಿಕೊಳ್ಳಲು ಸಾಕಷ್ಟು ಹಣವನ್ನು ಹೊಂದಿರಲಿಲ್ಲ. ಅದೇ ವೇಳೆ, ಭಾರತ ಸಂಶೋಧನೆ ಮತ್ತು ವಿದ್ಯಾರ್ಥಿವೇತನಕ್ಕಾಗಿ ಹೆಚ್ಚು ಖರ್ಚು ಮಾಡುತ್ತಿತ್ತು. ಕೇಂದ್ರ ಸರಕಾರ ಭಾರತೀಯ ವೈಜ್ಞಾನಿಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು (IISER) ಎಂಬ ಉನ್ನತ ಗುಣಮಟ್ಟದ ಸಂಶೋಧನಾ ಕೇಂದ್ರಗಳ ಸರಣಿಯನ್ನೇ ಸ್ಥಾಪಿಸಿತ್ತು. ಹಲವಾರು ಹೊಸ ಐಐಟಿಗಳು ಕೂಡ ಬಂದಿದ್ದವು. ಇವೆಲ್ಲವೂ ಪ್ರತಿಭಾವಂತ ಬೋಧಕರನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸಿದ್ದವು.
1940 ಮತ್ತು 1950ರ ದಶಕಗಳಲ್ಲಿ, ವಿದೇಶದಲ್ಲಿ ಪಿಎಚ್‌ಡಿ ಪಡೆದ ಕೆಲವು ಉತ್ತಮ ವಿದ್ವಾಂಸರು ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರತಿಷ್ಠಿತ ಸ್ಥಾನಗಳನ್ನು ಪಡೆಯಬಹುದಾಗಿದ್ದರೂ ಭಾರತಕ್ಕೆ ಮರಳಿದ್ದರು. (ಇ.ಕೆ. ಜಾನಕಿ ಅಮ್ಮಾಳ್, ಹೋಮಿ ಭಾಭಾ, ಎಂ.ಎಸ್. ಸ್ವಾಮಿನಾಥನ್, ಸತೀಶ್ ಧವನ್ ಮತ್ತು ಉಬೈದ್ ಸಿದ್ದೀಕಿಯಂತಹ ವಿಶ್ವಮಟ್ಟದ ವಿಜ್ಞಾನಿಗಳೆಲ್ಲ ಅಂಥವರ ಸಾಲಿನಲ್ಲಿದ್ದರು.) ಹಾಗೆ ಬರಲು ಮೊದಲ ಕಾರಣ ಅವರ ದೇಶಪ್ರೇಮವಾಗಿತ್ತು. ಅವರೆಲ್ಲ ರಾಷ್ಟ್ರೀಯ ಚಳವಳಿಯ ಸಮಯದಲ್ಲಿ ಬೆಳೆದವರಾಗಿದ್ದರು ಮತ್ತು ಅದರ ಮೌಲ್ಯಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು. ಭಾರತ ಸ್ವತಂತ್ರವಾದ ಬಳಿಕ, ಅದರ ಭವಿಷ್ಯವನ್ನು ರೂಪಿಸುವಲ್ಲಿ ನೆರವಾಗುವುದಕ್ಕಾಗಿ ಅವರು ತಮ್ಮ ತಾಯ್ನಾಡಿಗೆ ಮರಳಲು ಬಯಸಿದ್ದರು.
ಆದರೂ, ನಂತರದ ದಶಕಗಳಲ್ಲಿ ವಿದೇಶದಲ್ಲಿ ಪಿಎಚ್‌ಡಿ ಮಾಡಿದವರು ಕೆಲಸ ಮಾಡಲು ವಿದೇಶದಲ್ಲಿಯೇ ಉಳಿಯುವುದು ಹೆಚ್ಚಿತು. ಏಕೆಂದರೆ, ಹೆಚ್ಚಿನ ವಿಜ್ಞಾನಿಗಳಿಗೆ ದೇಶಭಕ್ತಿ ಸಾಮಾನ್ಯವಾಗಿ ಪ್ರಾಥಮಿಕ ಪ್ರೇರಣೆಯಲ್ಲ. ಅವರು ಸ್ವತಂತ್ರ ಸಂಶೋಧನೆಗಳನ್ನು ಮುಂದುವರಿಸುವ ಸ್ವಾತಂತ್ರ್ಯವನ್ನು ಬಯಸುತ್ತಾರೆ. ಜೊತೆಗೆ ಉತ್ತಮ ಬದುಕಿನ ಅವಕಾಶ, ಕುಟುಂಬವನ್ನು ಬೆಳೆಸುವ ಸಾಮಾಜಿಕ ವಾತಾವರಣವನ್ನು ಬಯಸುತ್ತಾರೆ. ಅವರು ತಮ್ಮ ದೇಶದಲ್ಲಿ ಕೆಲಸ ಮಾಡಲು ಬಯಸುವುದು ಕೂಡ ಅವರ ಈ ಇತರ ಅಗತ್ಯಗಳು ಒದಗುವಂತಿದ್ದರೆ ಮಾತ್ರ.
2009ರಲ್ಲಿ ಬೆಂಗಳೂರಿನಲ್ಲಿ ನಾನು ಆ ತಜ್ಞರೊಡನೆ ಮಾತನಾಡಿದ್ದ ವರ್ಷ, ಭಾರತೀಯ ವೈಜ್ಞಾನಿಕ ಪರಿಸರ ವ್ಯವಸ್ಥೆ ಇತ್ತೀಚಿನ ದಿನಗಳಲ್ಲಿ ಇದ್ದುದಕ್ಕಿಂತ ಹೆಚ್ಚು ಭರವಸೆದಾಯಕವಾಗಿ ಕಂಡಿತ್ತು. ಆರ್ಥಿಕತೆ ಅಭಿವೃದ್ಧಿ ಹೊಂದುತ್ತಿತ್ತು ಮತ್ತು ಅದು ಶೈಕ್ಷಣಿಕ ಸಂಬಳಗಳ ಹೆಚ್ಚಳಕ್ಕೆ ಕಾರಣವಾಗಿತ್ತು. ಸಾಮಾಜಿಕ ಸಂರಚನೆಯಲ್ಲಿ ಕೂಡ ಕಳೆದ ದಶಕಗಳಿಗಿಂತ ಹೆಚ್ಚು ಸಹಿಷ್ಣುತೆ, ಹೆಚ್ಚು ಹೊಂದಿಕೊಳ್ಳುವಿಕೆ ಕಾಣಿಸಿತ್ತು. 1990ರ ದಶಕ ಮತ್ತು 2000ದ ದಶಕದ ಆರಂಭದಲ್ಲಿನ ಕೋಮು ಧ್ರುವೀಕರಣ ಕಡಿಮೆಯಾದಂತೆ ಕಂಡುಬಂದಿತ್ತು.
ಸ್ವತಂತ್ರ ಸಂಶೋಧನೆಯನ್ನು ಮುಂದುವರಿಸಲು ಬಯಸುವ ಯುವ ವಿಜ್ಞಾನಿಗೆ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಸ್ಥಿರತೆಯ ನಿರೀಕ್ಷೆಯೊಂದಿಗೆ ಭಾರತದಲ್ಲಿ ಉದ್ಯೋಗವನ್ನು ಹುಡುಕಲು 1999 ಅಥವಾ 1989 ಅಥವಾ 1979ಕ್ಕಿಂತಲೂ 2009 ಉತ್ತಮ ಸಮಯವಾಗಿತ್ತು. ಹಾಗಾಗಿ, ವಿದೇಶದಲ್ಲಿ ಶಿಕ್ಷಣ ಪಡೆದ ಹೆಚ್ಚಿನ ವಿಜ್ಞಾನಿಗಳು ಪಶ್ಚಿಮಕ್ಕೆ ಬೆನ್ನು ತಿರುಗಿಸಿ, ತಾಯ್ನಾಡಿನಲ್ಲಿ ಕೆಲಸ ಮಾಡಲು ಮರಳುತ್ತಿದ್ದರು.
ಹದಿನೈದು ವರ್ಷಗಳ ನಂತರ ಈಗ ವಿದೇಶದಲ್ಲಿ ಪಿಎಚ್‌ಡಿ ಮುಗಿಸಿ ಭಾರತಕ್ಕೆ ಮರಳಲು ಬಯಸುವ ಯುವ ವಿಜ್ಞಾನಿಗೆ ಪರಿಸ್ಥಿತಿ ಮನ ಸೆಳೆಯುವಂತಿದೆಯೇ? ನನಗೆ ಅದರ ಬಗ್ಗೆ ಗಂಭೀರ ಅನುಮಾನವಿದೆ. ವೈಜ್ಞಾನಿಕ ಸಂಶೋಧನೆಗೆ ನರೇಂದ್ರ ಮೋದಿ ನೇತೃತ್ವದ ಪ್ರಸ್ತುತ ಸರಕಾರ ಡಾ.ಮನಮೋಹನ್ ಸಿಂಗ್ ನೇತೃತ್ವದ ಸರಕಾರಕ್ಕಿಂತ ಹೆಚ್ಚು ಪ್ರತಿಕೂಲಕರವಾಗಿದೆ ಎಂಬುದು ನನ್ನ ಅನುಮಾನಕ್ಕೆ ಕಾರಣ. ಸ್ವತಃ ವಿದ್ವಾಂಸರೂ ವಿಶ್ವದ ಎರಡು ಶ್ರೇಷ್ಠ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆದವರೂ ಆಗಿದ್ದ ಡಾ. ಸಿಂಗ್ ಆಧುನಿಕ ವಿಜ್ಞಾನದ ಕೊಡುಗೆಗಳನ್ನು ಆಳವಾಗಿ ಕೊಂಡಾಡುವವರಾಗಿದ್ದರು.
ಇನ್ನೊಂದೆಡೆ ಮೋದಿ ಸ್ವಯಂ ಕಲಿಕೆಯ ಧೋರಣೆಯವರಾಗಿದ್ದು, ಬೌದ್ಧಿಕ ವಂಶಾವಳಿಯನ್ನು ಹೊಂದಿರುವವರ ಬಗ್ಗೆ ತಿರಸ್ಕಾರವನ್ನು ಹೊಂದಿದ್ದಾರೆ (ಹಾರ್ವರ್ಡ್‌ಗಿಂತಲೂ ತಾನು ಕಠಿಣ ಪರಿಶ್ರಮಕ್ಕೆ ಆದ್ಯತೆ ನೀಡುವುದಾಗಿ ಅವರು ಹೇಳುವುದನ್ನು ಗಮನಿಸಬಹುದು). ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆದ ಪುರುಷರು (ಬಹುಶಃ ಮಹಿಳೆಯರು ಕಡಿಮೆ) ದುರಹಂಕಾರಿ ಮತ್ತು ತಮ್ಮ ಬಗ್ಗೆ ಗರ್ವಿಷ್ಟರಾಗಿರುತ್ತಾರೆ ಎಂಬುದು ನಿಜವಿರಬಹುದು. ಆದರೆ ವೈಜ್ಞಾನಿಕ ಸಂಶೋಧನೆಯ ಸದೃಢ ಮೂಲಸೌಕರ್ಯವಿಲ್ಲದೆ ಯಾವುದೇ ಆರ್ಥಿಕತೆ ಅಥವಾ ದೇಶ ನಿರಂತರ ಪ್ರಗತಿಯನ್ನು ಕಾಣಲು ಸಾಧ್ಯವಿಲ್ಲ.
ಇದು ಐಐಟಿಗಳನ್ನು ಸ್ಥಾಪಿಸಿದ ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಅನ್ನು ಬಲವಾಗಿ ಬೆಂಬಲಿಸಿದ ಜವಾಹರಲಾಲ್ ನೆಹರೂ ಮತ್ತು ಐಐಎಸ್‌ಇಆರ್‌ಗಳನ್ನು ಸ್ಥಾಪಿಸಲು ಸಹಾಯ ಮಾಡಿದ ಡಾ. ಮನಮೋಹನ್ ಸಿಂಗ್ ಅವರ ಸ್ಪಷ್ಟ ಚಿಂತನೆಯಾಗಿತ್ತು. ನೆಹರೂ ಮತ್ತು ಸಿಂಗ್ ನಡುವಿನ ಪ್ರಧಾನಿಗಳು ಮೂಲಭೂತ ಸಂಶೋಧನೆಗಳನ್ನು, ವಿಶೇಷವಾಗಿ ವಿಜ್ಞಾನಗಳಲ್ಲಿ ಅತ್ಯಂತ ಪ್ರಮುಖವಾದ ಭೌತಶಾಸ್ತ್ರಕ್ಕೆ ಪ್ರತಿಸ್ಪರ್ಧಿಯಾಗಿದ್ದ ಜೀವಶಾಸ್ತ್ರದಲ್ಲಿನ ಸಂಶೋಧನೆಗಳನ್ನು ಪ್ರೋತ್ಸಾಹಿಸಿದ್ದರು. 1980ರ ಹೊತ್ತಿಗೆ ಸ್ವದೇಶಿ ಸಂಸ್ಥೆಗಳು ಅತ್ಯುತ್ತಮ ಪಿಎಚ್‌ಡಿ ಪದವೀಧರರ ಹೊರಹೊಮ್ಮುವಿಕೆಗೆ ಕಾರಣವಾಗಿದ್ದವು. ಭಾರತೀಯ ವಿಜ್ಞಾನ ದೇಶೀಯವಾಗಿ ತರಬೇತಿ ಪಡೆದ ಪ್ರತಿಭೆಗಳಷ್ಟೇ ದೊಡ್ಡ ಪ್ರಮಾಣದಲ್ಲಿ ವಿದೇಶದಿಂದ ಓದಿ ಹಿಂದಿರುಗುವವರನ್ನೂ ಆಕರ್ಷಿಸುವಂತಾಗಿತ್ತು.
2014ರಿಂದ ಇದೆಲ್ಲವೂ ಬದಲಾಗಿದೆ. ನರೇಂದ್ರ ಮೋದಿಯವರಿಗೆ ತಂತ್ರಜ್ಞಾನದ ಕಡೆಗೆ ಗಮನದಿಂದ ರಾಜಕೀಯ ಲಾಭವಾಗಬಹುದು. ಹಾಗಾಗಿಯೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಅವರು ಪ್ರೋತ್ಸಾಹಿಸುತ್ತಿರುವುದು. ಆದರೂ ಅವರು ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನೆಗಳನ್ನು ಉತ್ತೇಜಿಸಲು ಅಷ್ಟೇನೂ ಆಸಕ್ತಿ ಹೊಂದಿಲ್ಲ. ಹೀಗಾಗಿಯೇ ಅವರು ಹಿಂದುತ್ವವಾದಿಗಳಿಗೆ ಐಐಟಿಗಳ ಕಾರ್ಯಚಟುವಟಿಕೆಯಲ್ಲಿ ಬೇಕಂತಲೇ ಹಸ್ತಕ್ಷೇಪ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ಹಿಂದೆ ಈ ಸಂಸ್ಥೆಗಳ ನಿರ್ದೇಶಕರನ್ನು ಅವರ ಶೈಕ್ಷಣಿಕ ಯೋಗ್ಯತೆಯಿಂದ ಮಾತ್ರ ಆಯ್ಕೆ ಮಾಡಲಾಗುತ್ತಿತ್ತು. ಮೋದಿ ಸರಕಾರದಲ್ಲಿ ಈ ಹುದ್ದೆಗಳಿಗೆ ಪರಿಗಣಿತವಾಗುವವರ ಅಂತಿಮ ಪಟ್ಟಿಯನ್ನು ಬಲಪಂಥೀಯ ಪ್ರಮುಖರು ಬಿಡದೆ ಪರಿಶೀಲಿಸುತ್ತಾರೆ. ಅವರ ಧೋರಣೆಯನ್ನು ಅನುಸರಿಸುವವರನ್ನೇ ಆಯ್ಕೆ ಮಾಡಲಾಗುತ್ತದೆ. ಅಧಿಕಾರಕ್ಕೆ ಬಂದ ನಂತರ ಐಐಟಿಗಳ ಕೆಲ ನಿರ್ದೇಶಕರು ಸಂಘಿ ಸಿದ್ಧಾಂತಕ್ಕೆ ದೊಡ್ಡ ಮಟ್ಟದಲ್ಲಿ ಉಪಕಾರ ತೀರಿಸುತ್ತಾರೆ. ಮಾಂಸಾಹಾರಿ ಭಾರತೀಯರ ಅವಹೇಳನ ಮಾಡುತ್ತಾರೆ. ಕ್ಯಾಂಪಸ್‌ನಲ್ಲಿ ಗೋಶಾಲೆಗಳನ್ನು ತೆರೆಯುತ್ತಾರೆ. ಸ್ವತಂತ್ರ ಆಲೋಚನೆಯ ವಿದ್ವಾಂಸರನ್ನು ತಮ್ಮ ವಿದ್ಯಾರ್ಥಿಗಳೊಂದಿಗೆ ಮಾತನಾಡದಂತೆ ತಡೆಯುತ್ತಾರೆ.
ಹಿಂದುತ್ವ ಹೇಗೆ ಭಾರತೀಯ ವಿಜ್ಞಾನದ ಮೇಲೆ ತನ್ನ ಸೈದ್ಧಾಂತಿಕ ಹೇರುವಿಕೆಯನ್ನು ನಡೆಸಿದೆ ಎಂಬುದಕ್ಕೆ ಕಳೆದ ತಿಂಗಳು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್‌ಟಿ) ಕಾರ್ಯದರ್ಶಿ ನೀಡಿದ ಟ್ವೀಟ್‌ಗಳ ಸರಣಿ ಸ್ಪಷ್ಟ ನಿದರ್ಶನ. ರಾಮ ನವಮಿಯಂದು ಅಯೋಧ್ಯೆಯ ಹೊಸ ದೇವಾಲಯದಲ್ಲಿ ಸೂರ್ಯನ ಬೆಳಕು ವಿಗ್ರಹದ ಮೇಲೆ ಬೆಳಗುವಂಥ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದ್ದಕ್ಕಾಗಿ ಬೆಂಗಳೂರಿನ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯನ್ನು ಆ ಟ್ವೀಟ್‌ಗಳಲ್ಲಿ ಹೇರಳವಾಗಿ ಹೊಗಳಲಾಯಿತು.
ಹಾಗೆ ಟ್ವೀಟ್‌ಗಳನ್ನು ಮಾಡಿದ್ದ ಆ ವ್ಯಕ್ತಿ, ಸರಕಾರದ ವೈಜ್ಞಾನಿಕ ವಿಭಾಗದ ಕಾರ್ಯದರ್ಶಿಯಾಗಿ ಕೆಲಸವನ್ನು ವಹಿಸಿಕೊಳ್ಳುವ ಮೊದಲು ಕಾನ್ಪುರದಲ್ಲಿರುವ ಅತ್ಯುತ್ತಮ ಐಐಟಿಯೊಂದರ ನಿರ್ದೇಶಕರಾಗಿದ್ದರು. ಹೀಗಾಗಿ ಅವರ ಟ್ವೀಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಟು ಟೀಕೆಗಳು ಬಂದವು. ಭಾರತೀಯ ವಿಜ್ಞಾನದ ದೊಡ್ಡ ಕೊಡುಗೆ ಎಂದು ಕಾರ್ಯದರ್ಶಿ ಹೊಗಳುತ್ತಿರುವುದನ್ನು ಒಬ್ಬ ಬುದ್ಧಿವಂತ ಪ್ರೌಢಶಾಲಾ ವಿದ್ಯಾರ್ಥಿ ಕೂಡ ಮಾಡಬಹುದಾದಂಥದ್ದು ಎಂದು ಟೀಕಿಸುವವರೆಗೂ ಕೆಲ ಟೀಕಾಕಾರರು ಹೋದರು.
ಭಾರತದಲ್ಲಿ ಹಲವಾರು ದಶಕಗಳ ಕಾಲ ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗುವ ಮೊದಲು ಅಮೆರಿಕದ ಶ್ರೇಷ್ಠ ವಿಶ್ವವಿದ್ಯಾನಿಲಯವೊಂದರಲ್ಲಿ ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಿದ ಸ್ನೇಹಿತರೊಬ್ಬರ ಬಳಿ ನಾನು ವಿಷಯ ಪ್ರಸ್ತಾಪಿಸಿದೆ. ಅವರು, ಹೇಗೆ ಮಸೂರಗಳು ಮತ್ತು ಕನ್ನಡಿಗಳನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಿ ಮತ್ತು ಆಯಕಟ್ಟಿನ ಸೂಕ್ತ ಸ್ಥಳಗಳಲ್ಲಿ ಇರಿಸಿ, ಸೌರ ಮತ್ತು ಚಂದ್ರನ ಚಕ್ರಗಳ ನಡುವಿನ ವ್ಯತ್ಯಾಸಗಳು/ ಸಂಯೋಗಗಳನ್ನು ಲೆಕ್ಕಹಾಕಿ, ಅಯೋಧ್ಯೆಯಲ್ಲಿ ಗೊತ್ತುಪಡಿಸಿದ ವಿಗ್ರಹದ ಮೇಲೆ ಸೂರ್ಯನ ಬೆಳಕು ಬೀಳುವಂತೆ ಮಾಡಲಾಗಿದೆ ಎಂಬುದನ್ನು ತಾಳ್ಮೆಯಿಂದ ನನಗೆ ವಿವರಿಸಿದರು. ವಿಜ್ಞಾನ ಹೀಗೆ ಅತ್ಯಾಧುನಿಕವಾಗಿದೆ. ಆದರೆ ಯಾವುದೇ ರೀತಿಯಲ್ಲಿ ಅಷ್ಟೊಂದು ಅತಿಯಾಗಿ ಹೊಗಳುವ ಮಟ್ಟಕ್ಕೇನೂ ಅರ್ಹವಾದ ಕೆಲಸ ಅದಲ್ಲ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಧರ್ಮನಿಷ್ಠ ಹಿಂದೂ ಆಗಿರುವ ಸಾಧ್ಯತೆಯಿದೆ. ಆದರೂ, ಪ್ರಧಾನಮಂತ್ರಿ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ದೇವಾಲಯವನ್ನು ಉದ್ಘಾಟಿಸಿದ್ದು ಆಧ್ಯಾತ್ಮಿಕ ಕಾರಣಗಳಿಗಿಂತ ಹೆಚ್ಚಾಗಿ ರಾಜಕೀಯ ಕಾರಣಕ್ಕೆ ಎಂಬುದು ಅವರಿಗೆ ಖಚಿತವಾಗಿ ಗೊತ್ತಿದೆ. ಕೇವಲ ವಿಗ್ರಹದ ಮೇಲೆ ಬೆಳಕು ಬೀಳುವಂತೆ ಮಾಡುವುದಕ್ಕಿಂತ ಹೆಚ್ಚು ಮಹತ್ವದ ವೈಜ್ಞಾನಿಕ ಕೆಲಸವನ್ನು ಮಾಡುವ ಹೊಣೆಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಹೊಂದಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ತಿಳಿದಿರಬೇಕು. ಅದೇನೇ ಇದ್ದರೂ, ಪ್ರತಿಷ್ಠಿತ ಸಂಸ್ಥೆ ಇದುವರೆಗೆ ಮಾಡಿರಬಹುದಾದ ಅತ್ಯಂತ ಕ್ಷುಲ್ಲಕ ವೈಜ್ಞಾನಿಕ ಕೆಲಸಗಳಲ್ಲಿ ಒಂದನ್ನು ಅವರು ಹಾಡಿ ಹೊಗಳಿದರು. ಅದು ಪ್ರಧಾನಿಯ ಇಷ್ಟದ ರಾಜಕೀಯ ಯೋಜನೆಗೆ ಸಂಬಂಧಿಸಿರುವುದು ಮತ್ತು ಮತದಾನ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು ನಡೆದಿರುವುದು ಕಾಕತಾಳೀಯವಾಗಿರಲು ಸಾಧ್ಯವಿಲ್ಲ.
ಒಬ್ಬ ರಾಜಕೀಯ ನಾಯಕನನ್ನು ಮೆಚ್ಚಿಸುವ ಮತ್ತು ಕೃತಜ್ಞತೆ ಸಲ್ಲಿಸುವ ಬಯಕೆಯ ಈ ಸಿಕೋಫಾನ್ಸಿ ಸ್ವಭಾವ ಭಾರತೀಯ ಅಧಿಕಾರಿಗಳಲ್ಲಿ ಸ್ವಾಭಾವಿಕವಾಗಿ ಬರುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಯ ನಡವಳಿಕೆ ಪ್ರಾಯಶಃ ಅಂಥದ್ದಾಗಿದೆ. ಅದೇನೇ ಇದ್ದರೂ ಅದು ತೀವ್ರ ದುಃಖಕರ ಸಂಗತಿ.
ಪತ್ರಿಕಾ ಮಾಧ್ಯಮಗಳ ಮೇಲಿನ ಮೋದಿ ಸರಕಾರದ ದಾಳಿಗಳು, ನಾಗರಿಕ ಸೇವೆಗಳು ಮತ್ತು ರಾಜತಾಂತ್ರಿಕ ವಿಭಾಗಗಳ ರಾಜಕೀಕರಣ, ಸಶಸ್ತ್ರ ಪಡೆಗಳನ್ನು ಮತೀಯ ವಾಗಿಸುವ ಪ್ರಯತ್ನಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಮೇಲಿನ ನಿಯಂತ್ರಣ ಇವುಗಳೆಲ್ಲವೂ ವ್ಯಾಪಕವಾಗಿ ಗಮನಕ್ಕೆ ಬರುತ್ತಿವೆ. ದೇಶದಲ್ಲಿ ವೈಜ್ಞಾನಿಕತೆಯನ್ನು ದುರ್ಬಲಗೊಳಿಸುವ ನಡೆಯನ್ನು ಮಾತ್ರ ಅಷ್ಟಾಗಿ ಗಮನಿಸಿ ದಂತಿಲ್ಲ. ಬಹುಶಃ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಯ ತಪ್ಪಾದ (ಹಾಗೆಯೇ ಸಮಯ ಮೀರಿದ) ಟ್ವೀಟ್‌ಗಳು ಅಂತಿಮವಾಗಿ ಈ ಸರಕಾರ ವೈಜ್ಞಾನಿಕತೆಗೆ ತಂದಿಟ್ಟಿರುವ ಹಾನಿಯ ಬಗ್ಗೆ ನಮ್ಮನ್ನು ಎಚ್ಚರಿಸುತ್ತವೆ.
ನಾಝಿಗಳ ಜನಾಂಗೀಯ ಸಿದ್ಧಾಂತ ಜರ್ಮನ್ ವಿಜ್ಞಾನವನ್ನು ನಾಶ ಮಾಡಿತು. ಮಾರ್ಕ್ಸ್ ವಾದದ ರಾಜಕೀಯ ಸಿದ್ಧಾಂತಗಳು ರಶ್ಯದ ವಿಜ್ಞಾನವನ್ನು ದಶಕಗಳಷ್ಟು ಹಿಂದಕ್ಕೆ ತಳ್ಳಿದವು. ಈಗ, ನಮ್ಮ ದೇಶದಲ್ಲಿ ನಮ್ಮ ಅತ್ಯುತ್ತಮ ಸಂಸ್ಥೆಗಳಲ್ಲಿನ ಸಂಶೋಧಕರಿಗೆ ತಮ್ಮ ಕೆಲಸವನ್ನು ಹಿಂದೂಗಳು, ಹಿಂದುತ್ವ ಮತ್ತು ನರೇಂದ್ರ ಮೋದಿಯವರ ಇನ್ನಷ್ಟು ವೈಭವೀಕರಣ ಮಾಡಲು ಒತ್ತಾಯಿಸಲಾಗುತ್ತಿದೆ. ಇದು ವಿಜ್ಞಾನದ ಅಭ್ಯಾಸ ಮತ್ತು ಭಾರತದ ವಿಜ್ಞಾನಿಗಳ ನೈತಿಕತೆಯ ಮೇಲೆ ಯಾವ ಪರಿಣಾಮ ಬೀರುತ್ತದೆ? ವಿಜ್ಞಾನದ ಆಸಕ್ತಿಗಳು ರಾಜಕೀಯ ಮತ್ತು ಧರ್ಮದ ಹಿತಾಸಕ್ತಿಗಳಿಗೆ ಸಂಪೂರ್ಣವಾಗಿ ಅಧೀನವಾಗಿರುವಾಗ, ಇಲ್ಲಿ ಕೆಲಸ ಮಾಡುವ ಯಾವುದೇ ಅದ್ಭುತ ಸಂಶೋಧಕರು ವಿದೇಶದಿಂದ ಬರುವ ಪ್ರಲೋಭನಕಾರಿ ಕೊಡುಗೆಗಳನ್ನು ನಿರ್ಲಕ್ಷಿಸಲು ಹೇಗೆ ಸಾಧ್ಯ? ಮತ್ತು ವಿದೇಶಗಳಲ್ಲಿ ಓದಿದ ಯಾವ ವಿಜ್ಞಾನಿಗಳು ಹೇಗೆ ತಮ್ಮ ತಾಯ್ನಾಡಿನಲ್ಲಿ ಕೆಲಸಕ್ಕೆ ಮರಳಿಯಾರು?