ಕುಮಾರ ಗಂಧರ್ವ ಅವರನ್ನು ಆಲಿಸುತ್ತ
ವೃತ್ತಿಪರ ಭಾಷಣಕಾರನಾಗಿರುವುದರ ಕೆಲವು ಅಪಾಯಗಳಲ್ಲಿ - ಸಾಮಾನ್ಯವಾಗಿ ಸಂತೋಷದಾಯಕ ಮತ್ತು ಲಾಭದಾಯಕ ವೃತ್ತಿ ಭಾಷಣದ ನಂತರ ಸಿಗುವ ಉಡುಗೊರೆಗಳು. ಈ ಉಡುಗೊರೆಗಳು ದೊಡ್ಡದಿರುತ್ತವೆ ಮತ್ತು ನಿಷ್ಪ್ರಯೋಜಕವಾಗಿರುತ್ತವೆ. ಉದಾಹರಣೆಗೆ, ಮರದ ಹಲಗೆಯ ಮೇಲಿನ ಲೋಹದ ಹಾಳೆಯಲ್ಲಿ ಆತಿಥೇಯ ಸಂಸ್ಥೆಯ ಹೆಸರು ಮತ್ತು ಲೋಗೋ ಇರುತ್ತದೆ. ಸಾಂದರ್ಭಿಕವಾಗಿ, ಪುಷ್ಪಗುಚ್ಛದಂಥವು ಕಲಾತ್ಮಕವಾಗಿ ಹಿತಕರವಾಗಿರುತ್ತವೆ. ಆದರೂ ಕಾರ್ಯಕ್ರಮ ಬೆಂಗಳೂರಿನಲ್ಲಲ್ಲದೆ ಬೇರೆ ಯಾವುದಾದರೂ ಸ್ಥಳದಲ್ಲಿದ್ದರೆ ಹೂವುಗಳು ಮನೆಗೆ ತಲುಪುವ ಮುಂಚೆಯೇ ಒಣಗುತ್ತವೆ.
ಮೂರು ದಶಕಗಳ (ಮತ್ತು ಮುಂದುವರಿದಿರುವ) ಸಾರ್ವಜನಿಕ ಬದುಕಿನಲ್ಲಿ ಒಟ್ಟಾರೆಯಾಗಿ ನಾನು ಸ್ವೀಕರಿಸಿದ ಉತ್ತಮವಾದ, ಮನೆಗೆ ತಂದಿಟ್ಟ ಉಡುಗೊರೆ ದಿಲ್ಲಿ ವಿಶ್ವವಿದ್ಯಾನಿಲಯದ ಶಿಕ್ಷಣ ಸಂಸ್ಥೆಯಿಂದ ಬಂದದ್ದು. ಅದು 2000ದ ವರ್ಷ. ಏನು ಮಾತಾಡಿದ್ದೆ ಎಂಬುದನ್ನು ಮರೆತಿದ್ದೇನೆ (ಇಂಥ ವಿಸ್ಮತಿ ಪ್ರಾದೇಶಿಕತೆಯೊಂದಿಗೆ ಬರುತ್ತದೆ). ಆದರೆ ಭಾಷಣದ ನಂತರ ನಾನು ಉಡುಗೊರೆಯಾಗಿ ಪಡೆದದ್ದನ್ನು ಸ್ಪಷ್ಟವಾಗಿ ನೆನಪಿಟ್ಟಿದ್ದೇನೆ. ಅದು ಕುಮಾರ ಗಂಧರ್ವರ ಸಂಗೀತದ ಎಂಟು ಸಂಪುಟಗಳ ಸಿಡಿ ಸೆಟ್ ಆಗಿತ್ತು. ಸಂಸ್ಥೆಯ ನಿರ್ದೇಶಕಿ ಪ್ರೊ.ಅನಿತಾ ರಾಂಪಾಲ್ ಅವರು ಈ ಉಡುಗೊರೆಯನ್ನು ಆಯ್ಕೆ ಮಾಡಿದ್ದರು. 1970ರ ದಶಕದಲ್ಲಿ ನಾನು ಮತ್ತು ಅವರು ವಿದ್ಯಾರ್ಥಿಗಳಾಗಿದ್ದಾಗಿನ ದಿನಗಳನ್ನು, ನಾನು ಕೆಲವೊಮ್ಮೆ ಅವರ ಗೆಳೆಯ (ನಂತರ ಪತಿ), ಭೌತಶಾಸ್ತ್ರಜ್ಞ ವಿನೋದ್ ರೈನಾ ಅವರ ಸಹವಾಸದಲ್ಲಿ ಶಾಸ್ತ್ರೀಯ ಸಂಗೀತ ಕಛೇರಿಗಳಿಗೆ ಹೋಗುತ್ತಿದ್ದುದನ್ನು ನೆನಪಿಸಿಕೊಳ್ಳಬೇಕು.
ಈ ಕಛೇರಿಗಳಲ್ಲಿ ಒಂದು ಕುಮಾರ ಗಂಧರ್ವ ಆವರದು. ಅವರು ಪತ್ನಿ ವಸುಂಧರಾ ಕೊಮ್ಕಲಿ ಜೊತೆಗಿದ್ದರು. ಅದು (ನನಗೆ ನೆನಪಿರುವಂತೆ) ಮಂಡಿ ಹೌಸ್ ಬಳಿಯ ಎಫ್‌ಐಸಿಸಿಐ ಆಡಿಟೋರಿಯಂನಲ್ಲಿ ನಡೆದಿತ್ತು. ಇಬ್ಬರೂ ಪೂರ್ತಿ ಎರಡು ಗಂಟೆಗಳ ಕಾಲ, ಕುಮಾರ ಅವರು ರಚಿಸಿದ ಭಜನೆಗಳು ಮತ್ತು ಅವರು ಸಂಗೀತ ವೇದಿಕೆಗೆಂದು ಅಳವಡಿಸಿದ ಜಾನಪದ ರಾಗಗಳನ್ನು ಹಾಡಿದರು. ಅದು ಅದ್ಭುತವಾಗಿತ್ತು. ನಾನು ಕೊನೆಯ ಒಂದು ಸಾಲಿನಲ್ಲಿ ಕುಳಿತಿದ್ದರೂ ಸಂಗೀತದ ಭವ್ಯವಾದ ಮಾಧುರ್ಯ ನನ್ನನ್ನು ತಲುಪಿತ್ತು.
ಅನಿತಾ ರಾಂಪಾಲ್ ಅವರು ನನಗೆ ಉಡುಗೊರೆಯಾಗಿ ನೀಡಿದ ಸಿಡಿಗಳಲ್ಲಿ ಆ ದಿನ ಕುಮಾರ ಗಂಧರ್ವ ಅವರು ಹಾಡಿದ ಕೆಲವು ಭಜನೆಗಳು ಮತ್ತು ಇನ್ನೂ ಬೇರೆಯವಿದ್ದವು. ಅವರೇ ಸಂಯೋಜಿಸಿದ್ದ ಸಣ್ಣ ಅವಧಿಯ ಕೆಲವು ಪ್ರಸ್ತುತಿಗಳಿದ್ದವು. ಭಾವಗೀತಾತ್ಮಕ ಹಮೀರ್ ಮತ್ತು ಭವ್ಯವಾದ ಶಂಕರದಂಥ ದೀರ್ಘ ಖಯಾಲ್‌ನ ರಾಗಗಳು ಇದ್ದವು. ನಾನು ವಿಶೇಷವಾಗಿ ಪತ್ಮಂಜರಿಯಲ್ಲಿನ ಅಸಾಧಾರಣ ಹದಿನೈದು ನಿಮಿಷಗಳ ಖಯಾಲ್ ಅನ್ನು ಇಷ್ಟಪಟ್ಟಿದ್ದೇನೆ. ಅದು ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿ ಹಾಡುವ ಅಥವಾ ನುಡಿಸುವ ರಾಗ.
ನನ್ನ ಕೈಗೆ ಬಂದ ಬಳಿಕ ಒಂದು ದಶಕ ಕಾಲ ಈ ಸಿಡಿಗಳನ್ನು ಮನೆಯಲ್ಲಿ ಮತ್ತೆ ಮತ್ತೆ ಆಲಿಸಿದ್ದೇನೆ. 2010ರಲ್ಲಿ ಅಥವಾ ಅದರ ಆಸುಪಾಸಿನಲ್ಲಿ ನಾನು ಐಪಾಡ್ ಅನ್ನು ಕೊಂಡ ನಂತರ ಇವೆಲ್ಲವೂ ಅಲ್ಲಿಗೆ ಹೋದವು ಮತ್ತು ಈಗ ವಿಶೇಷವಾಗಿ ದೀರ್ಘ ಅವಧಿಯ ವಿಮಾನ ಪ್ರಯಾಣದ ವೇಳೆ ಆಲಿಸುತ್ತೇನೆ. ಆ ಸಿಡಿಗಳು (ಪ್ರಸಿದ್ಧವಾದ ನಿರ್ಗುಣ ಭಜನೆಗಳನ್ನೂ ಒಳಗೊಂಡಂತೆ) ಒಂದು ಅತ್ಯುತ್ತಮ ಸಂಗ್ರಹವಾಗಿದ್ದರೂ, ಅವು ಕುಮಾರ ಗಂಧರ್ವ ಸ್ವತಃ ಸಂಯೋಜಿಸದ ಯಾವುದನ್ನೂ ಒಳಗೊಂಡಿಲ್ಲ. ಅದೇನೇ ಇದ್ದರೂ, ಅವರು ಸಾಕಷ್ಟು ನಿಕಟ ಸಂಬಂಧವನ್ನು ಹೊಂದಿರುವ ‘ಜಮುನಾ ಕಿನಾರೆ ಮೊರ ಗಾಂವ್’ ಅದರಲ್ಲಿದೆ.
ಕುಮಾರ ಗಂಧರ್ವರ ಎಲ್ಲಾ ಗಾಯನ ನನಗೆ ಆಪ್ತ. ಆದರೆ ಜಮುನಾ ಕಿನಾರೆಗೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ವೈಯಕ್ತಿಕ ಸಂಬಂಧವಿದೆ. ನಾನು ಹುಟ್ಟಿ ಬೆಳೆದದ್ದು ಡೆಹ್ರಾಡೂನ್‌ನ ಅರಣ್ಯ ಸಂಶೋಧನಾ ಸಂಸ್ಥೆಯ ಕ್ಯಾಂಪಸ್‌ನಲ್ಲಿ. ನನ್ನ ಹೆತ್ತವರ ಮನೆ ಕ್ಯಾಂಪಸ್‌ನ ಉತ್ತರದ ತುದಿಯಲ್ಲಿ, ಟೋನ್ಸ್ ಎಂಬ ನದಿಯ ಮೇಲಿರುವ ಬೆಟ್ಟದ ತುದಿಯಲ್ಲಿತ್ತು. ಸ್ಥಳೀಯ ಉಪಭಾಷೆಯಲ್ಲಿ ‘ತಾನ್ಸ್’ ಎಂದು ಉಚ್ಚರಿಸಲಾಗುತ್ತದೆ. ಅದು ಪಶ್ಚಿಮ ಉತ್ತರಾಖಂಡದ ಅನೇಕ ನದಿಗಳಿಗೆ ಬಳಸಲಾಗುವ ಹೆಸರು. (ನನ್ನ ಸಾಧಾರಣ ಟೋನ್ಸ್, ಅನಿಯಮಿತವಾಗಿ ನೀರನ್ನು ಹೊಂದಿರುವಂಥದ್ದು. ಅದರ ಮೇಲ್ಭಾಗದಲ್ಲಿರುವ ಜಮುನಾದ ಮುಖ್ಯ ಉಪನದಿಯಾಗಿರುವ ಪ್ರಬಲ ಮತ್ತು ದೀರ್ಘಕಾಲಿಕವಾಗಿ ಹರಿಯುವ ಟೋನ್ಸ್‌ಗಿಂತ ಇದು ಬೇರೆ.)
ಡೆಹ್ರಾಡೂನ್‌ನ ಅರಣ್ಯ ಸಂಶೋಧನಾ ಸಂಸ್ಥೆಯ ಕ್ಯಾಂಪಸ್‌ನಲ್ಲಿನ ನನ್ನ ಮನೆಯ ಸಮೀಪದ ಟೋನ್ಸ್, ಆಸಾನ್ ತಲುಪಲು ಪಶ್ಚಿಮಕ್ಕೆ ಹರಿಯುತ್ತದೆ. ಅದು ಕೆಲವು ಮೈಲುಗಳ ನಂತರ ಪಶ್ಚಿಮದಲ್ಲಿ ಜಮುನಾವನ್ನು ಸೇರುತ್ತದೆ. ಆದ್ದರಿಂದ, ಸ್ವಲ್ಪಮಟ್ಟಿಗೆ ಮತ್ತು ಕ್ಷಮಿಸಬಹುದಾದ ಉತ್ಪ್ರೇಕ್ಷೆಯೊಂದಿಗೆ, ನಾನು ‘ಜಮುನಾ ಕಿನಾರೆ ಮೊರ ಗಾಂವ್’ ಎಂದು ಹೇಳಿಕೊಳ್ಳುತ್ತೇನೆ. ನನ್ನ ಕುಗ್ರಾಮ ಈ ಮಹಾನ್ ಮತ್ತು ಅತ್ಯಂತ ಪ್ರೀತಿಪಾತ್ರವಾದ ನದಿಯ ಉಪನದಿಯ ದಡದಲ್ಲಿದೆ ಮತ್ತು ಕುಟುಂಬ ಪ್ರವಾಸಗಳು ನಮಗೆ ಅತ್ಯಂತ ಸಂತೋಷವನ್ನು ನೀಡಿದ್ದು ಪೌಂಟಾ ಸಾಹಿಬ್‌ನ ಪವಿತ್ರ ಸಿಖ್ ದೇಗುಲದ ಬಳಿ ವೇಗವಾಗಿ ಧಾವಿಸುವ ಜಮುನಾ ಬೆಟ್ಟಗಳಿಂದ ಬಯಲು ಪ್ರದೇಶಕ್ಕೆ ಇಳಿಯುವಾಗ.
ಕುಮಾರ ಗಂಧರ್ವ ಅವರ ಜಮುನಾ ಕಿನಾರೆ ಪ್ರಸ್ತುತಿ ಯೂಟ್ಯೂಬ್‌ನಲ್ಲಿ ಸುಲಭವಾಗಿ ಲಭ್ಯವಿರುತ್ತದೆ ಮತ್ತು ನಾನು ಪಾಲ್ಗೊಳ್ಳಬೇಕಾದ ಕಷ್ಟಕರ ಸಭೆಗೆ ಮೊದಲು ಅದನ್ನು ಕೇಳಲು ತೆಗೆದುಕೊಳ್ಳುತ್ತೇನೆ. ಆಗೀಗೊಮ್ಮೆ ನಾನು ತಂದೆಯನ್ನಲ್ಲ, ಮಗನನ್ನು ಆಲಿಸುತ್ತೇನೆ. ಮುಕುಲ್ ಶಿವಪುತ್ರ ಅವರ ಜಮುನಾ ಕಿನಾರೆ ಆವೃತ್ತಿ ವಿಭಿನ್ನ ರೀತಿಯಲ್ಲಿ ಚಲಿಸುವ ಸಮಾನ ಸಾಮರ್ಥ್ಯವನ್ನು ಹೊಂದಿದೆ. ಇದು ದೀರ್ಘವಾಗಿದೆ ಮತ್ತು ನಿಧಾನವಾಗಿ, ಹೆಚ್ಚು ಧ್ಯಾನಸ್ಥವಾಗಿದೆ. ಮುಕುಲ್ ಅವರ ಸಂಗೀತದ ಸಾಕಷ್ಟು ಭಾಗ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಇದು ಅವರದೇ ಆದ ವಿಲಕ್ಷಣ, ಅಗ್ರಾಹ್ಯ ಮತ್ತು ಪ್ರಾಯಶಃ ಪಳಗಿಸಲಾಗದ ಪ್ರತಿಭೆಯನ್ನು ಬಹಿರಂಗಪಡಿಸುತ್ತದೆ. ನಾನು ಅವರ ಜೈಜಯವಂತಿ, ಕೇದಾರ ಮತ್ತು ಖಮಾಜ್ ಅನ್ನು ತುಂಬಾ ಪ್ರೀತಿಸುತ್ತೇನೆ.
ಈ ತಿಂಗಳ ಆರಂಭದಲ್ಲಿ, ಕುಮಾರ ಗಂಧರ್ವರ ಪ್ರತಿಭಾನ್ವಿತ ಪುತ್ರಿ ಕಲಾಪಿನಿ ಕೊಮ್ಕಲಿ ಹಾಡಿರುವ ಜಮುನಾ ಕಿನಾರೆಯನ್ನು ನಾನು ಲೈವ್ ಆಗಿ ಕೇಳಿದೆ. ಬೆಂಗಳೂರಿನಲ್ಲಿ ಅವರ ಸಂಗೀತ ಕಛೇರಿ ಅವರ ತಂದೆಯ ಜನ್ಮ ಶತಮಾನೋತ್ಸವದ ಅಂಗವಾಗಿತ್ತು. ಕಾರ್ಯಕ್ರಮ ಒಂದು ಸಂಕ್ಷಿಪ್ತ ಸ್ಲೈಡ್ ಶೋನೊಂದಿಗೆ ಪ್ರಾರಂಭವಾಯಿತು. ಕುಮಾರ ಅವರ ಜೀವನದ ವಿವಿಧ ಹಂತಗಳ ಮತ್ತು ವಿವಿಧ ಸಂದರ್ಭಗಳ ಛಾಯಾಚಿತ್ರಗಳು ಅವಾಗಿದ್ದವು. 1991ರಲ್ಲಿ ಧಾರವಾಡದಲ್ಲಿ ಮಲ್ಲಿಕಾರ್ಜುನ್ ಮನ್ಸೂರ್ ಜೊತೆಯಲ್ಲಿ ಅವರಿದ್ದ ಚಿತ್ರವೊಂದು ನನ್ನನ್ನು ಹೆಚ್ಚು ಆವರಿಸಿತ್ತು.
ಮಲ್ಲಿಕಾರ್ಜುನ್ ಮನ್ಸೂರ್ ಅವರು ಬಾಂಬೆ ಕರ್ನಾಟಕ ಎಂದು ಕರೆಯಲ್ಪಡುವ ಪ್ರದೇಶದ ಸಾಂಸ್ಕೃತಿಕ ರಾಜಧಾನಿಯಾಗಿರುವ ಧಾರವಾಡದಲ್ಲಿ ಒಂದೂವರೆ ದಶಕದ ಅವಧಿಯಲ್ಲಿ ಜನಿಸಿದ ಗಮನಾರ್ಹವಾದ ಗಾಯಕರಲ್ಲಿ ಹಿರಿಯರಾಗಿದ್ದರು. ಕುಮಾರ್ ಗಂಧರ್ವ ಈ ಸಾಲಿನಲ್ಲಿ ಕಿರಿಯರಾಗಿದ್ದರು. ಇತರ ಸದಸ್ಯರೆಂದರೆ, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಮತ್ತು ಬಸವರಾಜ ರಾಜಗುರು. ಅವರ ಸ್ನೇಹಿತ ಮತ್ತು ಸಹ ಸಂಗೀತಗಾರ ತನ್ನ ಮನೆ ಬಾಗಿಲಿಗೆ ಇದ್ದಕ್ಕಿದ್ದಂತೆ ಬಂದಾಗ, ಮಲ್ಲಿಕಾರ್ಜುನ್ ಅವರು ಕೊನೆಯ ಬಾರಿಗೆ ತಮ್ಮ ಅಣ್ಣನನ್ನು ನೋಡಲು ಬಂದಿದ್ದಾರೆ ಎಂದು ಭಾವಿಸಿದರು. ಯಾಕೆಂದರೆ ಅವರು ಕುಮಾರ ಅವರಿಗಿಂತ ಸಾಕಷ್ಟು ಹಿರಿಯರಾಗಿದ್ದರು. ಕೆಲವು ತಿಂಗಳುಗಳ ನಂತರ ಕುಮಾರ ಅವರು ನಿಧನರಾದಾಗ ಆ ಹಿರಿಯರು, ಚಿಕ್ಕವನು ತನ್ನ ಮುಂದೆಯೇ ಹೋದನೆಂದು ದುಃಖಿತರಾಗಿದ್ದರು. (ಮಲ್ಲಿಕಾರ್ಜುನ್ ಅವರು ಸ್ವಲ್ಪ ಸಮಯದ ನಂತರ ನಿಧನರಾದರು).
ಕಲಾಪಿನಿ ತನ್ನ ಬೆಂಗಳೂರಿನ ಸಂಗೀತ ಕಛೇರಿಯನ್ನು ತನ್ನ ತಂದೆಯ ಮೂರು ಸಂಯೋಜನೆಗಳೊಂದಿಗೆ ಭೀಮಪಲಾಸಿ ರಾಗದಲ್ಲಿ ಪ್ರಾರಂಭಿಸಿದರು. ಇದು ಗಂಭೀರ, ವಿದ್ವತ್ಪೂರ್ಣವಾಗಿತ್ತು. ರಾಗ ಮತ್ತು ನಿರೂಪಣೆಯು ಆ ಗುಣಲಕ್ಷಣಗಳಿಗೆ ಸರಿಯಾದ ಕಾರಣವನ್ನು ನೀಡಿತು. ನಂತರ ಅವರು ಕುಮಾರ ಗಂಧರ್ವ ಅವರು ಶೋಧಿಸಿದ ಜೋಡ್ ರಾಗಗಳಲ್ಲಿ ಒಂದಾದ ಶ್ರೀ ಕಲ್ಯಾಣ್‌ನಲ್ಲಿ ಸಣ್ಣ ಸಂಯೋಜನೆಯನ್ನು ಹಾಡಿದರು. ಮುಂದೆ ಮಧ್ಯಪ್ರದೇಶದ ಒಣ ಪ್ರದೇಶವಾದ ಮಾಲ್ವಾದಲ್ಲಿನ ಜಾನಪದ ಗೀತೆಯನ್ನು ತೆಗೆದುಕೊಂಡರು. ಸ್ವತಃ ಬಾಂಬೆಯಲ್ಲಿ ತರಬೇತಿ ಪಡೆದ ಕನ್ನಡಿಗ ಕುಮಾರ ಗಂಧರ್ವ ಅವರು ಗಂಭೀರ ಹೃದ್ರೋಗ ಇರುವುದು ಗೊತ್ತಾದ ಬಳಿಕ ಅಲ್ಲಿಂದ ಸ್ಥಳಾಂತರಗೊಂಡಿದ್ದರು.
ಸಂಗೀತ ಕಛೇರಿ ನಡೆಯುತ್ತಿದ್ದಾಗ, ‘ಜಮುನಾ ಕಿನಾರೆ ಮೊರ ಗಾಂವ್’ ಇರುತ್ತದೆ ಎಂದು ನಾನು ಆಶಿಸಿದ್ದೆ. ನಾನು ಚಿಕ್ಕವನಿದ್ದಾಗ, ನನ್ನದೇ ಆದ ಕೋರಿಕೆಯನ್ನು ಅದರೆದುರು ಕೂಗುತ್ತಿದ್ದೆ ಅಥವಾ ಅದನ್ನು ಕಾಗದದ ಚೂರಿನ ಮೇಲೆ ಬರೆದು ಕಳುಹಿಸುತ್ತಿದ್ದೆ. ಆದಾಗ್ಯೂ, ಬೆಳೆದಂತೆ ಹೆಚ್ಚಿನ ಸ್ವಯಂಪ್ರಜ್ಞೆ ಬರುತ್ತದೆ. ಆದ್ದರಿಂದ ನಾನು ಮೌನವಾಗಿದ್ದೆ. ಸಂತೋಷದ ಸಂಗತಿಯೆಂದರೆ, ಕಲಾಪಿನಿ ಅವರು ನನಗೆ ಮಾತ್ರವಲ್ಲದೆ ಹೆಚ್ಚಿನ ಪ್ರೇಕ್ಷಕರಿಗೆ ವಿಶೇಷವಾಗಿ ಕುಮಾರ ಗಂಧರ್ವ ಅವರೊಂದಿಗೆ ಸಂಬಂಧಿಸಿದ ಹಾಡು ಎಂದು ತಿಳಿದಿರುವುದರಿಂದ ಇರಬೇಕು, ಆ ಹಾಡಿನೊಂದಿಗೆ ಕೊನೆಗೊಳಿಸಿದರು. ಅವರು ಜಮುನಾ ಕಿನಾರೆಯನ್ನು ತನ್ನ ತಂದೆಯ ಶೈಲಿಯಲ್ಲಿ ಬಹಳ ಉತ್ಸಾಹದಿಂದ ಹಾಡಿದರು. ಅವರಂತೆಯೆ ನಾನೂ ನನ್ನ ಕಣ್ಣುಗಳನ್ನು ಮುಚ್ಚಿ ನನ್ನ ಬಾಲ್ಯಕ್ಕೆ ಮರಳಿದೆ. ಜಮುನಾದ ಜಲಾನಯನ ಪ್ರದೇಶದ ಕಾಡುಗಳು ಮತ್ತು ಹಾದಿಗಳ ಮೂಲಕ ನನ್ನ ಆ ದಿನಗಳನ್ನು ನೆನೆದಿದ್ದೆ.
ಮರುದಿನ ಬೆಳಗ್ಗೆ ನಾನು ಯೂಟ್ಯೂಬ್‌ಗೆ ಹೋಗಿ, ‘ಕುಮಾರ್ ಗಂಧರ್ವ/ವಸುಂಧರಾ ಕೋಮ್ಕಲಿ ಭಜನ್ ಕನ್ಸರ್ಟ್ ನ್ಯೂಡೆಲ್ಲಿ 1978’ ಎಂದು ಟೈಪ್ ಮಾಡಿದೆ. ಗಮನಾರ್ಹವಾಗಿ, ಒಂದು ಲಿಂಕ್ ಸಿಕ್ಕಿತ್ತು. ಸಂಪೂರ್ಣವಾಗಿ ಒಂದು ಗಂಟೆ ಐವತ್ತು ನಿಮಿಷಗಳ ಸಂಗೀತ ಕಛೇರಿ ಮತ್ತು @digvijaypatil2207 ಹ್ಯಾಶ್‌ಟ್ಯಾಗ್ ಬಳಸಿ ಕಲಿತ ಕೇಳುಗರು ಪ್ರೀತಿಯಿಂದ ಗುರುತಿಸಿದ್ದ ಹತ್ತೊಂಭತ್ತು ಹಾಡುಗಳನ್ನು ಒಳಗೊಂಡಿದ್ದ ಲಿಂಕ್ ಅದಾಗಿತ್ತು. (https://www.youtube.com/watch?v=QKsXewM02ug ನೋಡಿ). ಲಿಂಕ್‌ನಲ್ಲಿ ಸಂಗೀತ ಕಾರ್ಯಕ್ರಮದ ದಿನಾಂಕವನ್ನು ಸಹ ಗುರುತಿಸಲಾಗಿದೆ: 20ನೇ ಆಗಸ್ಟ್ 1978. ನಾನು ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದ ಕೊನೆಯ ವರ್ಷದ ಮೊದಲ ತಿಂಗಳು ಅದು. ಈಗ ಈ ಲಿಂಕ್ ಅನ್ನು ನಾನು ಯೂಟ್ಯೂಬ್‌ನಲ್ಲಿ ಕೇಳುವ ಕುಮಾರ ಗಂಧರ್ವ ಅವರ ಇತರ ರೆಕಾರ್ಡಿಂಗ್‌ಗಳಿಗೆ ಮತ್ತು ಪ್ರೊ.ಅನಿತಾ ರಾಂಪಾಲ್ ಅವರು ನನಗೆ ಉಡುಗೊರೆಯಾಗಿ ನೀಡಿದ ಎಂಟು ಅದ್ಭುತ ಸಿಡಿಗಳಿಗೆ ಸೇರಿಸಬಹುದು. ಅದು ಇನ್ನೂ ಜೀವಂತವಾಗಿದೆ ಮತ್ತು ನನ್ನ ಐಪಾಡ್‌ನಲ್ಲಿ ಸಕ್ರಿಯವಾಗಿದೆ.
ಕುಮಾರ ಗಂಧರ್ವ ಅವರನ್ನು ಆಲಿಸುತ್ತ ನಾನು ಬೆಳೆದಿದ್ದೇನೆ ಮತ್ತು ಅವರ ಅವಿನಾಶಿ ಸಂಗೀತ ನನ್ನ ದಿನಗಳ ಕೊನೆಯವರೆಗೂ ನನ್ನೊಂದಿಗೆ ಇರುತ್ತದೆ. ನಾನು ಈ ಭೂಮಿಯನ್ನು ತೊರೆಯಲಿರುವಾಗ, ದಯಾಮಯಿ ಗೆಳೆಯರು ಅಥವಾ ಕುಟುಂಬದ ಸದಸ್ಯರು ನಾನು ಕೇಳುವ ಕೊನೆಯ ಶಬ್ದಗಳು ಈ ಸಂಗೀತ ಮಾಂತ್ರಿಕ ಹಾಡುವ ‘ಜಮುನಾ ಕಿನಾರೆ ಮೊರ ಗಾಂವ್’ ಆಗಿರುತ್ತದೆ ಎಂಬುದನ್ನು ತಿಳಿದಿರುತ್ತಾರೆ ಎಂದು ಭಾವಿಸುತ್ತೇನೆ.