ನೆಹರೂ ಮತ್ತು ಪಟೇಲ್
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಅರವತ್ತನೇ ವರ್ಷದ ಪುಣ್ಯತಿಥಿ ಆಚರಣೆಗೆ ಹೆಚ್ಚುಕಡಿಮೆ ಒಂದು ವಾರವಿದೆ. ನೆಹರೂ ಅವರ ರಾಜಕೀಯ ಜೀವನದಲ್ಲಿನ ಒಂದು ಪ್ರಮುಖ ಅಂಶವಾಗಿದ್ದ ವಲ್ಲಭಭಾಯಿ ಪಟೇಲ್ ಅವರೊಂದಿಗಿನ ಸಹಯೋಗದ ಬಗ್ಗೆ ಈ ಅಂಕಣದಲ್ಲಿ ಹೇಳುತ್ತಿದ್ದೇನೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮತ್ತು ಸ್ವಾತಂತ್ರ್ಯಾನಂತರದ ಆರಂಭಿಕ ವರ್ಷಗಳಲ್ಲಿ ಈ ಇಬ್ಬರೂ ನಾಯಕರು ಪರಸ್ಪರ ಹೆಗಲೆಣೆಯಾಗಿ ದುಡಿದವರು. ಕ್ರಿಕೆಟ್ ತಂಡದ ಸದಸ್ಯರಾಗಿ ಅಥವಾ ವಿವಾಹದಲ್ಲಿ ಸಂಗಾತಿಗಳಾಗಿ ಅಥವಾ ಕಂಪೆನಿಯಲ್ಲಿ ನಿರ್ದೇಶಕರಾಗಿ ಒಟ್ಟಿಗೇ ಕೆಲಸ ಮಾಡುವ ಯಾವುದೇ ಇಬ್ಬರು ವ್ಯಕ್ತಿಗಳಂತೆ ಅವರಿಬ್ಬರೂ ತಮ್ಮದೇ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಆದರೂ, ಅವರ ಸಂಬಂಧವನ್ನು ಇಡಿಯಾಗಿ ನೋಡಿದರೆ, ಅದು ಒಂದು ಜೊತೆಗಾರಿಕೆಯಾಗಿತ್ತು. ಅದರಲ್ಲಿ ಅವರ ವಿಶಿಷ್ಟ ಸಾಮರ್ಥ್ಯಗಳು ಅವರಿಬ್ಬರೂ ತುಂಬಾ ಆಳವಾಗಿ ಪ್ರೀತಿಸಿದ ನೆಲದ ಸೇವೆಗಾಗಿ ಒಟ್ಟುಗೂಡಿದ್ದವು. ಆದರೆ ನೆಹರೂ ಅವರನ್ನು ನಿಂದಿಸುವ ಮತ್ತು ಪಟೇಲರನ್ನು ಹೇಗಾದರೂ ಹೊಗಳುವ ಯಾವುದೇ ಅವಕಾಶವನ್ನು ಕಳೆದುಕೊಳ್ಳದ ನರೇಂದ್ರ ಮೋದಿ ಮತ್ತವರ ಪಕ್ಷದವರು ಅವರಿಬ್ಬರ ನಡುವಿನ ಈ ಪೂರಕತೆಯನ್ನು ನಿರಾಕರಿಸಿದ್ದಾರೆ.
ಬ್ರಿಟಿಷರ ಆಳ್ವಿಕೆಯಿದ್ದಾಗ, ನೆಹರೂ ಮತ್ತು ಪಟೇಲ್ ಅವರು ಕಾಂಗ್ರೆಸ್ ಅನ್ನು ಭಾರತೀಯ ಸಮಾಜದ ಬಹುಪಾಲು ವರ್ಗಗಳ ಸಾಮೂಹಿಕ ಸಂಘಟನೆಯಾಗಿಸಲು ನೆರವಾದರು. ಇಬ್ಬರೂ ಹಲವು ವರ್ಷ ಜೈಲಿನಲ್ಲಿ ಕಳೆದರು. ಸ್ವತಂತ್ರ ಭಾರತದ ಮೊದಲ ಕ್ಯಾಬಿನೆಟ್‌ನಲ್ಲಿ ಅವರ ಕೆಲಸ ಹೆಚ್ಚು ಮಹತ್ವದ್ದಾಗಿತ್ತು. ಬ್ರಿಟಿಷರು ಈ ದೇಶವನ್ನು ಒಡೆದ ಮತ್ತು ಶಿಥಿಲ ಸ್ಥಿತಿಯಲ್ಲಿ ಬಿಟ್ಟುಹೋದರು. ಜಾತಿ, ವರ್ಗ ಮತ್ತು ಲಿಂಗ ಅಸಮಾನತೆಗಳು ತೀವ್ರವಾಗಿದ್ದವು. ಐನೂರು ಸಂಸ್ಥಾನಗಳ ಏಕೀಕರಣವಾಗಬೇಕಿತ್ತು. ಲಕ್ಷಾಂತರ ನಿರಾಶ್ರಿತರ ಪುನರ್ವಸತಿ ಸಮಸ್ಯೆ ಇತ್ತು. ಅದೇನೇ ಇದ್ದರೂ, ದೇಶವು ಏಕೀಕೃತವಾಗಿತ್ತು ಮತ್ತು 1947 ಮತ್ತು 1950 ರ ನಡುವೆ ಪ್ರಜಾಸತ್ತಾತ್ಮಕ ಮಾದರಿಯ ಅಡಿಯಲ್ಲಿ ತರಲಾಯಿತು. ಅದರಲ್ಲಿ ಅನೇಕ ಗಮನಾರ್ಹ ದೇಶಭಕ್ತರ ಪಾತ್ರವಿತ್ತು. ಅವರಲ್ಲಿ ಬಹುಶಃ ನೆಹರೂ ಮತ್ತು ಪಟೇಲ್ ಪ್ರಮುಖರಾಗಿದ್ದರು.
ಗಣರಾಜ್ಯದ ಅಡಿಪಾಯವನ್ನು ನಿರ್ಮಿಸುವಲ್ಲಿ ನೆಹರೂ ಮತ್ತು ಪಟೇಲ್ ಅವರ ಕೊಡುಗೆಗಳನ್ನು ‘India after Gandhi’ ಎಂಬ ನನ್ನ ಪುಸ್ತಕದಲ್ಲಿ ಮತ್ತು ರಾಜಮೋಹನ್ ಗಾಂಧಿಯವರ ಅದ್ಭುತ ಮತ್ತು ಸರಿಸಾಟಿಯಿಲ್ಲದ ಪಟೇಲ್ ಜೀವನ ಚರಿತ್ರೆಯಂತಹ ಇತರ ಕೃತಿಗಳಲ್ಲಿ ವಿವರಿಸಲಾಗಿದೆ. ನೆಹರೂ ಅವರು ಮಹಿಳೆಯರಿಗೆ ಮತ್ತು ಜನಾಂಗೀಯ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಸಮಾನ ಹಕ್ಕುಗಳ ಭರವಸೆ ನೀಡುವ ಮೂಲಕ ಭಾರತದ ಭಾವನಾತ್ಮಕ ಏಕೀಕರಣದ ಮೇಲೆ ಗಮನವಿಟ್ಟರು. ಅವರು ಸಾರ್ವತ್ರಿಕ ಮತದಾನಕ್ಕೆ ಅವಕಾಶವಿರುವ ಬಹುಪಕ್ಷೀಯ ಪ್ರಜಾಪ್ರಭುತ್ವವನ್ನು ಶಕ್ತಿಯುತ ಎಂದು ಪ್ರತಿಪಾದಿಸಿದರು ಮತ್ತು ಯುವಜನರಿಗೆ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದರು. ಪಟೇಲ್ ರಾಜಪ್ರಭುತ್ವದ ಸಂಸ್ಥಾನಗಳನ್ನು ಒಕ್ಕೂಟದಡಿ ತರುವ ಮೂಲಕ ಭಾರತದ ಪ್ರಾದೇಶಿಕ ಏಕೀಕರಣದ ಮೇಲೆ ಗಮನವಿಟ್ಟಿದ್ದರು. ಅವರು ನಾಗರಿಕ ಸೇವೆಗಳನ್ನು ಸುಧಾರಿಸುವಲ್ಲಿ ಮತ್ತು ಸಂವಿಧಾನದ ಬಗ್ಗೆಯೂ ಒಮ್ಮತವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.
ಭಾರತೀಯರು ಎಷ್ಟು ಅದೃಷ್ಟವಂತರು ಎಂಬುದನ್ನು ಇತಿಹಾಸವು ದಾಖಲಿಸುತ್ತದೆ. ನಮ್ಮ ರಾಷ್ಟ್ರದ ಆ ಸಂಘರ್ಷದ ವರ್ಷಗಳಲ್ಲಿ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡಿದ್ದ ನೆಹರೂ ಮತ್ತು ಪಟೇಲ್ ಇದ್ದರು. ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ, ಅವರು ಪರಸ್ಪರರ ಬಗ್ಗೆ ಅಪಾರ ಗೌರವವನ್ನು ವ್ಯಕ್ತಪಡಿಸಿದ್ದಿದೆ. ಸೆಪ್ಟಂಬರ್ 1948ರಲ್ಲಿ ಪಟೇಲ್ ಅವರು ತಮ್ಮ ಮತ್ತು ನೆಹರೂ ಅವರ ದಾರಿ ಬೇರೆಯಾಗುತ್ತಿದೆ ಎಂದು ಭಾವಿಸಿದ್ದ ತಮ್ಮ ಕಿರಿಯ ಸಹವರ್ತಿಗೆ ತಪ್ಪು ಭಾವನೆ ನಿವಾರಿಸಲು ಪತ್ರ ಬರೆದಿದ್ದರು. ‘‘ಆ ವಿಷಯದಲ್ಲಿ ಸಂಪೂರ್ಣ ಸತ್ಯವಿಲ್ಲ. ಸಹಜವಾಗಿ, ಎಲ್ಲಾ ಪ್ರಾಮಾಣಿಕರಲ್ಲಿ ಇರುವಂತೆ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿವೆ. ಆದರೆ ನಮ್ಮ ನಡುವಿನ ಪರಸ್ಪರ ಗೌರವ, ಅಭಿಮಾನ ಮತ್ತು ವಿಶ್ವಾಸದ ನಡುವೆ ಯಾವುದೇ ವ್ಯತ್ಯಾಸವಿದೆ ಎಂದು ಅದರ ಅರ್ಥವಲ್ಲ’’ ಎಂದು ಅದರಲ್ಲಿ ಅವರು ಹೇಳಿದ್ದರು. ಒಂದು ವರ್ಷದ ನಂತರ, ನೆಹರೂ ಅವರ 60ನೇ ಜನ್ಮದಿನದಂದು ಪಟೇಲ್ ಅವರು, ‘‘ನಿಕಟ ಮತ್ತು ವೈವಿಧ್ಯಮಯ ಕಾರ್ಯ ಕ್ಷೇತ್ರಗಳಲ್ಲಿ ಪರಸ್ಪರ ಅರಿತಿರುವ ನಾವು ಸ್ವಾಭಾವಿಕವಾಗಿ ಒಬ್ಬರನ್ನೊಬ್ಬರು ಇಷ್ಟಪಡುತ್ತೇವೆ. ವರ್ಷಗಳು ಕಳೆದಂತೆ ನಮ್ಮ ನಡುವಿನ ಪ್ರೀತಿ ಹೆಚ್ಚುತ್ತಿದೆ. ನಾವು ದೂರವಿರುವಾಗ ಮತ್ತು ನಮ್ಮ ಸಮಸ್ಯೆಗಳು ಮತ್ತು ತೊಂದರೆಗಳನ್ನು ಬಗೆಹರಿಸಿಕೊಳ್ಳಲು ಪರಸ್ಪರ ಸಲಹೆಗಳನ್ನು ಪಡೆಯಲು ಸಾಧ್ಯವಾಗದಿದ್ದಾಗ ನಾವು ಪರಸ್ಪರ ಎಷ್ಟು ನೆನೆಸಿಕೊಳ್ಳುತ್ತೇವೆ ಎಂಬುದು ಜನರಿಗೆ ತಿಳಿಯದು’’ ಎಂದು ಬರೆದಿದ್ದರು.
ಈ ಅಭಿಮಾನ ಮರುಕಳಿಸಿತು. ಆಗಸ್ಟ್ 1947ರಲ್ಲಿ, ನೆಹರೂ ಅವರು ಪಟೇಲ್ ಅವರಿಗೆ ಪತ್ರ ಬರೆದರು. ಅವರನ್ನು ಸಚಿವ ಸಂಪುಟದ ಪ್ರಬಲ ಸ್ತಂಭ ಎಂದು ಶ್ಲಾಘಿಸಿದರು. ಮೂರು ವರ್ಷಗಳ ನಂತರ ಪಟೇಲ್ ನಿಧನರಾದಾಗ, ನೆಹರೂ ಅವರು ತಮ್ಮ ದಿವಂಗತ ಸ್ನೇಹಿತ ಮತ್ತು ಸಹೋದ್ಯೋಗಿಯನ್ನು ‘‘ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಮಹಾನ್ ನಾಯಕನಾಗಿದ್ದವರು ಮತ್ತು ಕಷ್ಟಕಾಲದಲ್ಲಿ ಮತ್ತು ಗೆಲುವಿನ ಹೊತ್ತಿನಲ್ಲಿ ಉತ್ತಮ ಸಲಹೆ ನೀಡಿದ್ದವರು’’ ಎಂದು ಬಣ್ಣಿಸಿದ್ದರು. ಪಟೇಲರ ಸಾಟಿಯಿಲ್ಲದ ಧೈರ್ಯ, ಕಠಿಣ ಶಿಸ್ತಿನ ಪ್ರಜ್ಞೆ ಮತ್ತು ಸಂಘಟನೆಯ ಪ್ರತಿಭೆಯನ್ನು ಶ್ಲಾಘಿಸಿದ ನೆಹರೂ, ವಿಶೇಷವಾಗಿ ಹಳೆಯ ಭಾರತೀಯ ಸಂಸ್ಥಾನಗಳ ಕಷ್ಟಕರ ಮತ್ತು ಸಂಕೀರ್ಣ ಸಮಸ್ಯೆಯನ್ನು ನಿಭಾಯಿಸಿದ ರೀತಿಯಲ್ಲಿ ಅವರ ಪ್ರತಿಭೆ ಕಂಡಿತ್ತು ಎಂದು ಹೇಳಿದ್ದರು. ಅಖಂಡ ಮತ್ತು ಬಲಿಷ್ಠ ಭಾರತ ಅವರ ಗುರಿಯಾಗಿತ್ತು ಮತ್ತು ಅದನ್ನು ಕೌಶಲ್ಯ ಮತ್ತು ಸಂಕಲ್ಪದಿಂದ ಸಾಧಿಸಲು ಹೊರಟವರಾಗಿದ್ದರು ಎಂದು ನೆನೆದ ನೆಹರೂ ತಮ್ಮ ಶ್ರದ್ಧಾಂಜಲಿಯ ಕಡೆಯಲ್ಲಿ, ‘‘ಈ ದೇಶದ ಜನರು ಪಟೇಲರ ಉಜ್ವಲ ಮಾದರಿಯನ್ನು, ಅವರ ಕರ್ತವ್ಯನಿಷ್ಠೆ, ಅವರ ದೃಢತೆ, ಅವರ ಶಿಸ್ತಿನ ಪ್ರಜ್ಞೆಯನ್ನು ಅನುಸರಿಸಬೇಕು ಮತ್ತು ಆ ಮೂಲಕ, ಅವರು ಕಟ್ಟಿದ ಸ್ವತಂತ್ರ ಮತ್ತು ಬಲವಾದ ಮತ್ತು ಸಮೃದ್ಧ ಭಾರತವನ್ನು ಅದರ ನಿರಂತರ ಬೆಳವಣಿಗೆಯ ಜೊತೆಯಲ್ಲಿಯೇ ಅರಿಯುವುದಾಗಬೇಕು’’ ಎಂದಿದ್ದರು.
ನೆಹರೂ ಮತ್ತು ಪಟೇಲ್ ಸ್ವಾತಂತ್ರ್ಯದ ಮೊದಲು ಮತ್ತು ನಂತರ ಹೇಗೆ ಒಡನಾಡಿಗಳೂ ಸಹೋದ್ಯೋಗಿಗಳೂ ಆಗಿದ್ದರು ಎಂಬುದನ್ನು ಐತಿಹಾಸಿಕ ಪಾಂಡಿತ್ಯಪೂರ್ಣ ಕೃತಿಗಳು ದಾಖಲಿಸುತ್ತವೆ. ಹಾಗಾದರೆ ಇಂದೇಕೆ ಅವರಿಬ್ಬರನ್ನೂ ವಿರೋಧಿಗಳು ಮತ್ತು ಪ್ರತಿಸ್ಪರ್ಧಿಗಳಾಗಿ ಬಿಂಬಿಸುವುದು ನಡೆದಿದೆ?
ಇಲ್ಲಿ ಮೂಲ ಪ್ರಮಾದ ಜವಾಹರಲಾಲ್ ನೆಹರೂ ಅವರ ಸ್ವಂತ ಕುಟುಂಬದ್ದಾಗಿದೆ. ಜನವರಿ 1966ರಲ್ಲಿ ನೆಹರೂ ಅವರ ಉತ್ತರಾಧಿಕಾರಿಯಾಗಿ ಪ್ರಧಾನಿಯಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕೇವಲ ಅರವತ್ತೊಂದನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಕಾಂಗ್ರೆಸ್ ಮುಖ್ಯಸ್ಥರು ಆಗ ಇಂದಿರಾ ಗಾಂಧಿಯನ್ನು ಶಾಸ್ತ್ರಿಯವರ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದರು. ಅವರನ್ನು ನಿಯಂತ್ರಿಸಬಹುದು ಎಂಬುದು ಕಾಂಗ್ರೆಸ್ ನಾಯಕರ ಭಾವನೆಯಾಗಿತ್ತು. ಆದರೆ ಇಂದಿರಾ ಗಾಂಧಿಯವರು ಪಕ್ಷದ ಮೇಲೆ ತಮ್ಮ ಅಧಿಕಾರವನ್ನು ಚಲಾಯಿಸತೊಡಗಿದಾಗ ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಬಾಂಗ್ಲಾದೇಶ ಯುದ್ಧದ ಸಮಯ ದಲ್ಲಿಯಂತೂ ಅವರು ಪಕ್ಷ ಮತ್ತು ಸರಕಾರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ, ಕಾಂಗ್ರೆಸ್ ಅನ್ನು ಕುಟುಂಬ ಸಂಸ್ಥೆಯಾಗಿ ಪರಿವರ್ತಿಸಲು ಶುರು ಮಾಡಿದರು.
ಶ್ರೀಮತಿ ಗಾಂಧಿಯವರು ರಾಷ್ಟ್ರ ನಿರ್ಮಾಣದಲ್ಲಿನ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಗಳನ್ನು ಸಂಪೂರ್ಣವಾಗಿ ಗಮನಿಸಲಿಲ್ಲ. 1974ರಲ್ಲಿ ಅವರು ಪ್ರಧಾನಿಯಾಗಿದ್ದಾಗ, ರಾಷ್ಟ್ರೀಯ ಪೊಲೀಸ್ ಅಕಾಡಮಿಗೆ ಸರ್ದಾರ್ ಅವರ ಹೆಸರನ್ನು ಇಡಲಾಯಿತಾದರೂ, ಅವರು ತನ್ನ ತಂದೆಯ ನೆನಪನ್ನು ಸ್ಥಾಯಿಯಾಗಿಸುವುದಕ್ಕೆ ಹೆಚ್ಚು ಒತ್ತು ನೀಡಿದರು. ಉದಾಹರಣೆಗೆ, ಹೊಸ ವಿಶ್ವವಿದ್ಯಾನಿಲಯಕ್ಕೆ ನೆಹರೂ ಹೆಸರಿಡಲಾಯಿತು. ರಾಜೀವ್ ಗಾಂಧಿಯವರು ಪ್ರಧಾನಿಯಾದಾಗ, ಪಟೇಲ್ ಮತ್ತಿತರ ರಾಷ್ಟ್ರೀಯವಾದಿಗಳನ್ನು ಬದಿಗೆ ಸರಿಸಿ ನೆಹರೂ ಅವರನ್ನು ವೈಭವೀಕರಿಸುವುದು ಹೆಚ್ಚಿತು. 1989ರಲ್ಲಿ ನೆಹರೂ ಶತಮಾನೋತ್ಸವದ ಸಮಯದಲ್ಲಿಯೂ ಅವೇ ನಡೆದವು. ಅದೇ ಸಮಯದಲ್ಲಿ, ರಾಜೀವ್ ತನ್ನ ತಾಯಿಯನ್ನೂ ತನ್ನ ಅಜ್ಜನ ಮಟ್ಟಕ್ಕೇ ಏರಿಸಲು ಯತ್ನಿಸಿದರು. ರಾಜಧಾನಿಯ ವಿಮಾನ ನಿಲ್ದಾಣಕ್ಕೆ ತಾಯಿಯ ಹೆಸರನ್ನು ಇಟ್ಟರು.
ಕಾಂಗ್ರೆಸ್ ಇತಿಹಾಸವನ್ನು ಒಂದೇ ಕುಟುಂಬದ ಕಥೆಯನ್ನಾಗಿಸುವ ಕೆಲಸವನ್ನು ಇಂದಿರಾ ಮತ್ತು ರಾಜೀವ್ ಪ್ರಾರಂಭಿಸಿದರು. 1998ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಸೋನಿಯಾ ಗಾಂಧಿಯವರು ಈ ಪ್ರಕ್ರಿಯೆಯನ್ನು ಮುಂದುವರಿಸಿದರು. ಪಕ್ಷದ ಇತಿಹಾಸದ ಕುರಿತ ಅವರ ತಿಳುವಳಿಕೆಯಲ್ಲಿ ವಲ್ಲಭಭಾಯಿ ಪಟೇಲ್ ಅವರಿಗೆ, ಹಾಗೆಯೇ ಆಝಾದ್, ಕಾಮರಾಜ್, ಸರೋಜಿನಿ ನಾಯ್ಡು ಮತ್ತು ಇತರ ಅನೇಕ ಕಾಂಗ್ರೆಸಿಗರಿಗೆ ಯಾವುದೇ ಜಾಗವಿರಲಿಲ್ಲ. ಸೋನಿಯಾರ ಕಾಂಗ್ರೆಸ್ ಮಹಾತ್ಮಾ ಗಾಂಧಿಯವರ ದಿಕ್ಕಿನಲ್ಲಿ ಅಪರೂಪಕ್ಕೊಮ್ಮೆ ನಡೆಯಿತು. ಇಲ್ಲದೇ ಹೋಗಿದ್ದರೆ ಪಕ್ಷದ ಇತಿಹಾಸವನ್ನು ಒಂದು ಕುಟುಂಬದ ಇತಿಹಾಸದೊಂದಿಗೆ ಸಮೀಕರಿಸುವುದು ನಡೆದುಹೋಗುತ್ತಿತ್ತು. ನೆಹರೂ, ಇಂದಿರಾ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ರಾಜೀವ್ ಅವರನ್ನು ಗೌರವಿಸಲು ಕಾಂಗ್ರೆಸ್ ನಾಯಕರು ಒತ್ತು ಕೊಟ್ಟರು. 2004 ಮತ್ತು 2014ರ ನಡುವೆ ಹಲವಾರು ಪ್ರತಿಷ್ಠಿತ ಸಾರ್ವಜನಿಕ ಯೋಜನೆಗಳಿಗೆ ರಾಜೀವ್ ಗಾಂಧಿಯವರ ಹೆಸರನ್ನು ಇಡಲಾಯಿತು. ಹಾಗೆಯೇ ಅವರ ಜನ್ಮದಿನಾಚರಣೆ ಮತ್ತು ಪುಣ್ಯತಿಥಿಗೂ ಸಾರ್ವಜನಿಕ ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡಲಾಯಿತು.
ಆರೆಸ್ಸೆಸ್ ಪ್ರಚಾರಕರಾಗಿ ನರೇಂದ್ರ ಮೋದಿಯವರು ಕೆ.ಎಸ್. ಹೆಡಗೇವಾರ್ ಮತ್ತು ಎಂ.ಎಸ್. ಗೋಳ್ವಾಲ್ಕರ್ ಅವರ ಆರಾಧನೆಯನ್ನು ಕಲಿತಿದ್ದರು. ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ದೀನದಯಾಳ್ ಉಪಾಧ್ಯ ಅವರನ್ನು ಗೌರವಿಸುವಂತೆ ಮೋದಿಯವರನ್ನು ಕೇಳಲಾಯಿತು. ಅವರು ಗುಜರಾತಿನ ಮುಖ್ಯಮಂತ್ರಿಯಾದ ನಂತರ ತಮ್ಮ ವೃತ್ತಿಜೀವನದಲ್ಲಿ ತಡವಾಗಿಯಾದರೂ ವಲ್ಲಭಭಾಯಿ ಪಟೇಲ್ ಅವರ ಕಡೆ ಗಮನ ಹರಿಸಿದರು. ತಮ್ಮ ಪ್ರಧಾನಿಯಾಗುವ ಆಕಾಂಕ್ಷೆಯನ್ನು ತೋರಿಸಿಕೊಳ್ಳುವಾಗ ಪಟೇಲ್ ಅವರ ಸಾರ್ವಜನಿಕ ವೈಭವೀಕರಣವನ್ನು 2012ರ ವೇಳೆಗೆ ತೀವ್ರಗೊಳಿಸಿದರು. ಮೋದಿಯವರ ಜೊತೆಜೊತೆಗೇ ಬಿಜೆಪಿ ಕೂಡ ಪಟೇಲರನ್ನು ಹೊಗಳಲು ಪ್ರಾರಂಭಿಸಿತು.
ಲೇಖಕ ಗೋಪಾಲಕೃಷ್ಣ ಗಾಂಧಿಯವರು ಟೀಕಿಸಿದಂತೆ, ನೆಹರೂ ನಂತರದ ಕಾಂಗ್ರೆಸ್ ಪಟೇಲ್ ಅವರನ್ನು ತಿರಸ್ಕರಿಸಿದ್ದರಿಂದಲೇ ನರೇಂದ್ರ ಮೋದಿಯವರ ಬಿಜೆಪಿ ಅವರನ್ನು ತಪ್ಪಾಗಿ ಕಾಣುವ ಹಾಗಾಯಿತು. ಅದು ಗುಜರಾತ್‌ನಲ್ಲಿ ಪಟೇಲರ ಭವ್ಯವಾದ ಸ್ಮಾರಕವನ್ನು ನಿರ್ಮಿಸಿದೆ ಮತ್ತು ಪ್ರತಿಯೊಂದು ಅವಕಾಶಕ್ಕೂ ಅವರ ಹೆಸರನ್ನು ಬಳಸಲಾಗುತ್ತದೆ. ಆಜೀವ ಕಾಂಗ್ರೆಸಿಗರೊಬ್ಬರು ಬಿಜೆಪಿಯ ಸಾಂಕೇತಿಕ ಆಸ್ತಿಯಾಗಿದ್ದಾರೆ ಎಂಬುದು ದುರಂತ ವ್ಯಂಗ್ಯ.
ಜವಾಹರಲಾಲ್ ನೆಹರೂ ಅವರನ್ನು ಇಷ್ಟಪಡದಿರಲು ಮೋದಿ ಮತ್ತು ಬಿಜೆಪಿಗೆ ಸಾಕಷ್ಟು ಕಾರಣಗಳಿವೆ. ನೆಹರೂ ಅವರ ಸೆಕ್ಯುಲರಿಸಂ ಬಿಜೆಪಿಯ ಬಹುಸಂಖ್ಯಾತವಾದಕ್ಕೆ ತೊಡಕಾಗಿದೆ. ಎಲ್ಲರೂ ಒಂದೇ ಎಂಬ ನೆಹರೂ ನಿಲುವು ಬಿಜೆಪಿಯ ಅನ್ಯದ್ವೇಷಕ್ಕೆ ವಿರುದ್ಧವಾಗಿದೆ. ಆಧುನಿಕ ವಿಜ್ಞಾನದ ಬಗ್ಗೆ ನೆಹರೂ ಒಲವು, ಪ್ರಾಚೀನ ಹಿಂದೂಗಳು ಎಲ್ಲವನ್ನೂ ತಿಳಿದಿದ್ದರು ಎಂಬ ಬಿಜೆಪಿಯ ಮೂಢ ನಂಬಿಕೆಗೆ ವಿರುದ್ಧವಾಗಿದೆ. ನೆಹರೂ ಅವರ ಅತ್ಯುತ್ಕೃಷ್ಟ ಜೀವನ ಪ್ರೀತಿಯು ಬಿಜೆಪಿಯ ಒಣ ನೈತಿಕ ಕಟ್ಟಳೆಗಳಿಗೆ ಸವಾಲು ಹಾಕುತ್ತದೆ. ಆದಾಗ್ಯೂ, ಮೋದಿ ಮತ್ತು ಬಿಜೆಪಿಯು ನೆಹರೂ ಅವರ ಅವಹೇಳನಕ್ಕೆ ಅವರ ಮಹಾನ್ ಒಡನಾಡಿ ವಲ್ಲಭಭಾಯಿ ಪಟೇಲ್ ಅವರನ್ನು ಬಳಸಿಕೊಂಡ ರೀತಿ ಪಟೇಲ್ ಅವರನ್ನೇ ದಿಗ್ಭ್ರಮೆಗೊಳಿಸಬಹುದಾಗಿದ್ದ ಮಟ್ಟದ್ದು. ಸೋನಿಯಾ ಗಾಂಧಿಯವರ ಕುಟುಂಬದ ಇತಿಹಾಸ ಮತ್ತು ಕಾಂಗ್ರೆಸ್ ಇತಿಹಾಸದ ಸಮೀಕರಣವನ್ನು ಸರ್ದಾರ್ ತಮಾಷೆಯಾಗಿ ನೋಡಬಹುದಾಗಿತ್ತು. ಆದರೆ ನಿಜ ಜೀವನದಲ್ಲಿ ಮತ್ತು ರಾಷ್ಟ್ರವನ್ನು ಕಟ್ಟುವಲ್ಲಿ ಜೊತೆಯಾಗಿದ್ದವರನ್ನು ಒಡೆಯುವಲ್ಲಿ ಬಿಜೆಪಿ ತನ್ನ ಹೆಸರು ಮತ್ತು ಪರಂಪರೆಯನ್ನು ವಿನಾಶಕಾರಿ ರೀತಿಯಲ್ಲಿ ಬಳಸಿದ ಬಗ್ಗೆ ಪಟೇಲರ ಕೋಪಕ್ಕೆ ಯಾವುದೇ ಮಿತಿಯಿರಲು ಸಾಧ್ಯವಿರಲಿಲ್ಲ.
ಜವಾಹರಲಾಲ್ ನೆಹರೂ ಮತ್ತು ವಲ್ಲಭಭಾಯಿ ಪಟೇಲ್ ಅವರು ಸ್ವತಂತ್ರ ಭಾರತದಲ್ಲಿ ರಾಷ್ಟ್ರ ಮತ್ತು ರಾಜಕೀಯವನ್ನು ರೂಪಿಸಿದ ಅನೇಕ ಜೊತೆಗಾರರಲ್ಲಿ ಮೊದಲಿಗರು. ನಂತರದ ಉದಾಹರಣೆಗಳಲ್ಲಿ ಇಂದಿರಾ ಗಾಂಧಿ ಮತ್ತು ಪಿ.ಎನ್. ಹಕ್ಸರ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ, ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಮತ್ತು ಇತ್ತೀಚೆಗೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸೇರಿದ್ದಾರೆ. ದೇಶದ ಪ್ರಜೆ ಮತ್ತು ಇತಿಹಾಸಕಾರನಾಗಿ ಬರೆಯುವಾಗ, ಆ ನಿರ್ಣಾಯಕ ಆರಂಭಿಕ ವರ್ಷಗಳಲ್ಲಿ ನೆಹರೂ ಮತ್ತು ಪಟೇಲ್ ಇದ್ದ ಕಾರಣಕ್ಕೆ ಭಾರತೀಯರು ತುಂಬಾ ಅದೃಷ್ಟವಂತರು ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ನಮ್ಮ ಆಧುನಿಕ ಇತಿಹಾಸದಲ್ಲಿನ ಎಲ್ಲಾ ರಾಜಕೀಯ ಜೊತೆಗಾರಿಕೆಯಲ್ಲಿ ಅವರದು ಉದಾತ್ತವಾದದ್ದಾಗಿತ್ತು. ಜೊತೆಗೆ ಅತ್ಯಂತ ಅಗತ್ಯವೂ ಆಗಿತ್ತು.