ಗ್ರೇಟ್ ನಿಕೋಬಾರ್ ದ್ವೀಪದ ಯೋಜಿತ ವಿನಾಶ

ಭಾರತದಲ್ಲಿನ ಸಾರ್ವಜನಿಕ ಚರ್ಚೆಯಲ್ಲಿ ರಾಷ್ಟ್ರೀಯ ಮಾಧ್ಯಮ ಎಂಬುದಕ್ಕಿಂತಲೂ ತಪ್ಪು ದಾರಿಗೆಳೆಯುವ ಇನ್ನಾವುದೇ ಪದವಿಲ್ಲ. ಇದರಲ್ಲಿ ಬರುವ ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಟೀವಿ ಚಾನೆಲ್‌ಗಳು ತಾವು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ರಾಷ್ಟ್ರದ ಬಗ್ಗೆ ಸಂಕುಚಿತ ಮತ್ತು ಅಸ್ಪಷ್ಟ ದೃಷ್ಟಿಕೋನ ಹೊಂದಿವೆ. ಅವು ಭಾರತವನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ ಮಾತ್ರ ನೋಡುತ್ತವೆ. ಅಧಿಕಾರಕ್ಕೆ ಭೌಗೋಳಿಕವಾಗಿ ಹತ್ತಿರವಾಗಿರುವುದೆಂದರೆ ಅವುಗಳಿಗೆ ಮೋಹ ಮತ್ತು ತೃಪ್ತಿ. ಹಾಗಾಗಿ, ಪತ್ರಿಕೆಗಳ ಅಭಿಪ್ರಾಯ ಪುಟಗಳಲ್ಲಿ ಕ್ಯಾಬಿನೆಟ್ ಮಂತ್ರಿಗಳ ತಪ್ಪು ತಿಳುವಳಿಕೆಯಿಂದ ಕೂಡಿದ ತೀರ್ಮಾನದಂತಹ ಹೇಳಿಕೆಗಳೇ ಹೇರಳವಾಗಿ ಕಾಣಿಸುತ್ತವೆ. ಮತ್ತು ದೂರದರ್ಶನ ಈ ದೇಶದ ವೈವಿಧ್ಯ ಮತ್ತು ಸಂಕೀರ್ಣತೆಯನ್ನು ವಿವಿಧ ಪಕ್ಷಗಳ ರಾಜಕಾರಣಿಗಳ ನಡುವಿನ ಕೂಗಾಟದ ಮಟ್ಟಕ್ಕೆ ಇಳಿಸಿದೆ. ಪರಿಣಾಮವಾಗಿ, ರಾಷ್ಟ್ರೀಯ ಪತ್ರಿಕೆಗಳಲ್ಲಿ ಸ್ಥಳ ಕುಗ್ಗುತ್ತಿದೆ ಮತ್ತು ರಾಷ್ಟ್ರೀಯ ದೂರದರ್ಶನದಲ್ಲಿ ವಿವಿಧ ಸಮುದಾಯಗಳು ಮತ್ತು ದೇಶದ ವಿವಿಧ ಭಾಗಗಳಲ್ಲಿನ ಜೀವನದ ವಿವರವಾದ, ತಳಮಟ್ಟದ ತನಿಖೆಗಳು ಪೂರ್ತಿಯಾಗಿ ಇಲ್ಲವಾಗಿವೆ.
ರಾಷ್ಟ್ರೀಯ ಮಾಧ್ಯಮದ ಬಗ್ಗೆ ನನ್ನ ಅನುಮಾನ ಇಷ್ಟು ವರ್ಷಗಳಲ್ಲಿ ಸ್ಥಿರವಾಗಿ ಬೆಳೆದಿದೆ. ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಗರಣದ ಕುರಿತು ಎರಡು ಅತ್ಯುತ್ತಮ ಲೇಖನಗಳ ಸಂಕಲನಗಳಿಂದ ಇದು ದೃಢವಾಗಿದೆ. ಎನ್‌ಸಿಆರ್‌ನಲ್ಲಿ ಸುಸಜ್ಜಿತ ದೂರದರ್ಶನ ಸ್ಟುಡಿಯೋದಲ್ಲಿ ಹಗರಣದ ಬಗ್ಗೆ ಖಂಡಿತವಾಗಿಯೂ ಎಂದಿಗೂ ಚರ್ಚೆ ನಡೆಯುವುದಿಲ್ಲ. ನಾನು ಉಲ್ಲೇಖಿಸುತ್ತಿರುವ ಹಗರಣ ಗ್ರೇಟ್ ನಿಕೋಬಾರ್ ದ್ವೀಪದ ಯೋಜಿತ ವಿನಾಶ. ಚೆನ್ನೈ ಮೂಲದ ಫ್ರಂಟ್‌ಲೈನ್ ನಿಯತಕಾಲಿಕೆಯ 2025 ಮಾರ್ಚ್ 3ರ ವಿಶೇಷ ಸಂಚಿಕೆಯಲ್ಲಿ ಮತ್ತು ಭಾರತದ ವಿವಿಧ ಭಾಗಗಳಲ್ಲಿನ ಸ್ವತಂತ್ರ ವೆಬ್‌ಸೈಟ್‌ಗಳು ಮತ್ತು ನಿಯತಕಾಲಿಕೆಗಳು ಪ್ರಕಟಿಸಿದ ಲೇಖನಗಳನ್ನು ಒಳಗೊಂಡಿರುವ ಪಂಕಜ್ ಸೇಖ್ಸಾರಿಯಾ ಸಂಪಾದಕತ್ವದ ಪುಸ್ತಕದಲ್ಲಿ ಈ ಹಗರಣದ ಬಗ್ಗೆ ಓದುತ್ತಿದ್ದೇನೆ. ಅವರ ಲೇಖನಗಳ ಸಂಗ್ರಹದ ಹೆಸರು The Great Nicobar Betrayal. ದುರ್ಬಲ ದ್ವೀಪವನ್ನು ಗೊತ್ತಿದ್ದೇ ವಿಪತ್ತಿಗೆ ತಳ್ಳುವುದು ಎಂಬ ಉಪ ಶೀರ್ಷಿಕೆ ಈ ಪುಸ್ತಕಕಕ್ಕಿದೆ. ಸೇಖ್ಸಾರಿಯಾ ಸ್ವತಃ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹಲವು ವರ್ಷಗಳಿಂದ ಸಂಶೋಧನೆ ನಡೆಸಿದ್ದಾರೆ ಮತ್ತು ಅವರ ಸಂಪಾದಕತ್ವದ ಸಂಪುಟಕ್ಕೆ ಬರೆದವರು ಸಹ. ಆ ಭೂಪ್ರದೇಶದ ಬಗ್ಗೆ ಸ್ವತಃ ತಿಳಿದವರಾಗಿದ್ದಾರೆ.
ಈ ಪ್ರಬಂಧಗಳು, ಗ್ರೇಟ್ ನಿಕೋಬಾರ್ ದ್ವೀಪದ ಸಮಗ್ರ ಅಭಿವೃದ್ಧಿ ಎಂಬ ಆರ್ವೆಲಿಯನ್ ಹೆಸರಿನ, ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡುವ ಕೇಂದ್ರ ಸರಕಾರದ ಯೋಜನೆಯ ಬಗ್ಗೆ ಹೇಳುತ್ತವೆ. ಪ್ರಸಕ್ತ ಇದರ ವೆಚ್ಚ 80,000 ಕೋಟಿ ರೂ.ಗಳೆಂದು (ಮತ್ತು ಹೆಚ್ಚಾಗುವುದು ಖಚಿತ) ಅಂದಾಜಿಸಲಾಗಿದ್ದು, ಈ ದುರ್ಬಲ ದ್ವೀಪದಲ್ಲಿ, ಟ್ರಾನ್ಸ್‌ಶಿಪ್‌ಮೆಂಟ್ ಬಂದರು, ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮುಖ್ಯ ಭೂಭಾಗದಿಂದ ಹಲವಾರು ಲಕ್ಷ ವಲಸಿಗರಿಗೆ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಲಾದ ಪಟ್ಟಣವನ್ನು ನಿರ್ಮಿಸುವ ಉದ್ದೇಶವನ್ನು ಇದು ಹೊಂದಿದೆ.
910 ಚದರ ಕಿಲೋಮೀಟರ್ ಅಂದಾಜು ವಿಸ್ತೀರ್ಣವಿರುವ ಗ್ರೇಟ್ ನಿಕೋಬಾರ್, ನಿಕೋಬಾರ್ ದ್ವೀಪಗಳ ಗುಂಪಿನಲ್ಲಿ ಅತಿ ದೊಡ್ಡದಾಗಿದೆ. ಅದು ಅಂಡಮಾನ್ ಮತ್ತು ನಿಕೋಬಾರ್ ಎಂದು ಕರೆಯಲಾಗುವ ದ್ವೀಪಸಮೂಹದ ಭಾಗವಾಗಿದೆ. ಗಮನಾರ್ಹವಾಗಿ, ಈ ದ್ವೀಪ ಭೂಕಂಪನದ ಅಸ್ಥಿರ ವಲಯದಲ್ಲಿದೆ. ಕಳೆದ ದಶಕದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಭೂಕಂಪಗಳನ್ನು ಇದು ಕಂಡಿದೆ. 2004ರಲ್ಲಿ ಗ್ರೇಟ್ ನಿಕೋಬಾರ್ ಸುನಾಮಿಯಿಂದ ಧ್ವಂಸಗೊಂಡಿತು. ಇದರ ಹೊರೆಯನ್ನು ದ್ವೀಪದ ಸ್ಥಳೀಯ ಬುಡಕಟ್ಟು ಜನಾಂಗದವರು ಅನುಭವಿಸಬೇಕಾಯಿತು. ಅವರಲ್ಲಿ ನೂರಾರು ಜನರು ಸಾವನ್ನಪ್ಪಿದರು ಮತ್ತು ಇನ್ನೂ ಅನೇಕರು ತಮ್ಮ ಮನೆಗಳನ್ನು ಕಳೆದುಕೊಂಡರು.
ಸುನಾಮಿ ಅನಿರೀಕ್ಷಿತ ಮತ್ತು ತಡೆಯಲಾರದಂಥದ್ದಾಗಿತ್ತು. ಆದರೆ ಈ ಹೊಸ ಯೋಜನೆ ಭಾರತ ಸರಕಾರವು ದ್ವೀಪದ ನೈಸರ್ಗಿಕ ಮತ್ತು ಸಾಂಸ್ಕೃತಿಕ ಸಮಗ್ರತೆಯ ಮೇಲೆ ಉದ್ದೇಶಪೂರ್ವಕವಾಗಿ, ಯೋಜಿತವಾಗಿ ನಡೆಸಿದ ದಾಳಿಯಾಗಿದೆ. ದೈತ್ಯ ಆಮೆ ಗೂಡುಕಟ್ಟುವ ಸ್ಥಳಗಳನ್ನು ನಾಶಪಡಿಸುವ ಮೂಲಕ ಮತ್ತು ಇತರ ಅನೇಕ ಪರಿಸರ ಹಾನಿಯನ್ನು ಉಂಟುಮಾಡುವ ಮೂಲಕ ಬಂದರನ್ನು ನಿರ್ಮಿಸಲಾಗುತ್ತದೆ. ಪಟ್ಟಣಕ್ಕಾಗಿ ಸುಮಾರು 130 ಚದರ ಕಿಲೋಮೀಟರ್ ವಿಸ್ತೀರ್ಣದ ಶ್ರೀಮಂತ ನೈಸರ್ಗಿಕ ಅರಣ್ಯವನ್ನು ನಾಶಪಡಿಸಲಾಗುತ್ತದೆ. ಇದರಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ಮರಗಳಿವೆ. ದ್ವೀಪದಲ್ಲಿ ಅನೇಕ ಅಪರೂಪದ ಮತ್ತು ಸಾಮಾನ್ಯವಾಗಿ ಸ್ಥಳೀಯ ಜಾತಿಯ ಸಸ್ಯಗಳು, ಕೀಟಗಳು, ಪಕ್ಷಿಗಳು, ಪ್ರಾಣಿಗಳು ಮತ್ತು ಸರೀಸೃಪಗಳಿವೆ. ಇವೆಲ್ಲವೂ ಈಗ ಅವು ವಾಸಿಸುವ ಭೂಮಿ ಮತ್ತು ಸಮುದ್ರ ಎರಡೂ ನೈಸರ್ಗಿಕ ಆವಾಸಸ್ಥಾನಗಳ ಜೊತೆಗೇ ಅಪಾಯದಲ್ಲಿದೆ.
ಇಂತಹ ಪರಿಸರ ಹಾನಿ ಒಂದೆಡೆಯಾದರೆ ಇದರ ನಡುವೆ, ದ್ವೀಪದ ಸ್ಥಳೀಯ ನಿವಾಸಿಗಳು ಅಂಚಿನಲ್ಲಿರುವುದು ಮತ್ತು ತೀವ್ರ ಬಡತನದಂಥ ಸಾಮಾಜಿಕ ಬಿಕ್ಕಟ್ಟುಗಳೂ ಇವೆ. ಇದು ಬುಡಕಟ್ಟು ಸಮುದಾಯಗಳನ್ನು ರಕ್ಷಿಸುವ ಸಾಂವಿಧಾನಿಕ ನಿಬಂಧನೆಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ದ್ವೀಪದಲ್ಲಿನ ಈಗಿನ ಜನಸಂಖ್ಯೆ 8,500; ಯೋಜನೆ ಪೂರ್ಣ ಪ್ರಮಾಣದಲ್ಲಿ ಮುಂದುವರಿದರೆ ಅದು ನಲವತ್ತು ಪಟ್ಟು ಹೆಚ್ಚಾಗಲಿದೆ. ಮುಖ್ಯ ಭೂಭಾಗದ ಈ ಜನಸಂಖ್ಯಾ ವಸಾಹತುಶಾಹಿಯ ಪರಿಣಾಮವಾಗಿ ದ್ವೀಪದ ಸಂಸ್ಕೃತಿ ಮತ್ತು ಪರಿಸರದ ಮೇಲೆ ಉಂಟಾಗುವ ಪರಿಣಾಮ ಅಗಾಧ ಮತ್ತು ಬದಲಾಯಿಸಲಾಗದಂಥದ್ದು. ಇತ್ತೀಚಿನ ಪ್ರಬಂಧವೊಂದರಲ್ಲಿ, ದ್ವೀಪಗಳ ಬಗ್ಗೆ ವ್ಯಾಪಕ ಕ್ಷೇತ್ರ ಅನುಭವ ಹೊಂದಿರುವ ಇಬ್ಬರು ವಿದ್ವಾಂಸರಾದ ಅಜಯ್ ಸೈನಿ ಮತ್ತು ಅನ್ವಿತಾ ಅಬ್ಬಿ ಬರೆದಿರುವ ಪ್ರಕಾರ, ಗ್ರೇಟ್ ನಿಕೋಬಾರ್ ಮೆಗಾಪ್ರಾಜೆಕ್ಟ್ ಕೇವಲ ಪರಿಸರ ವಿಕೋಪವಲ್ಲ; ಇದು ಅಭಿವೃದ್ಧಿಯ ವೇಷದಲ್ಲಿ ನಡೆಸಲಾಗುತ್ತಿರುವ ಭಾಷೆ ಮತ್ತು ಸಂಸ್ಕೃತಿ ಹತ್ಯೆಯ ಉದ್ದೇಶಪೂರ್ವಕ, ಘೋರ ಕೃತ್ಯವಾಗಿದೆ.
The Great Nicobar Betrayalನ ಒಂದು ಭಾವನಾತ್ಮಕ ಭಾಗದಲ್ಲಿ ಸಂರಕ್ಷಣಾವಾದಿ ಮನೀಶ್ ಚಾಂಡಿ 1990ರ ದಶಕದಲ್ಲಿ ದ್ವೀಪಕ್ಕೆ ತಾವು ಮೊದಲ ಸಲ ಭೇಟಿ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಅವರು ಮತ್ತು ಅವರ ಸಹೋದ್ಯೋಗಿಗಳು ಅದ್ಭುತ ಪಕ್ಷಿವಿಜ್ಞಾನಿ ರವಿ ಶಂಕರನ್ ಅವರನ್ನು ಭೇಟಿಯಾಗುತ್ತಾರೆ. ಶಂಕರನ್ ಅವರು ಸಣ್ಣ ವಯಸ್ಸಿನಲ್ಲೇ ದುರಂತಮಯ ಸಾವನ್ನಪ್ಪುವ ಮೊದಲು ನಿಕೋಬಾರ್ ಮೆಗಾಪೋಡ್‌ನಲ್ಲಿ ತಮ್ಮ ಹೆಗ್ಗುರುತು ಅಧ್ಯಯನಗಳನ್ನು ನಡೆಸುತ್ತಿದ್ದರು. ಶಂಕರನ್ ತಮ್ಮನ್ನು ಭೇಟಿಯಾದವರಿಗೆ, ಅಧ್ಯಯನ ಪ್ರಾರಂಭಿಸುವ ಮೊದಲು ಪ್ರತೀ ಹಳ್ಳಿಯ ಮುಖ್ಯಸ್ಥರಿಂದ ಅನುಮತಿ ಪಡೆಯಬೇಕು ಎಂದು ಹೇಳಿದ್ದರು. ‘‘ನೆನಪಿಡಿ, ಇದು ಅವರ ಭೂಮಿ; ಅವರ ಜಾಗ ಮತ್ತು ಅವರ ಹಕ್ಕುಗಳು ನಮ್ಮದಕ್ಕಿಂತ ಹೆಚ್ಚು ಮುಖ್ಯ’’ ಎಂದು ಶಂಕರನ್ ಹೇಳಿದ್ದರು. ಈ ದುಬಾರಿ ಮತ್ತು ವಿನಾಶಕಾರಿ ಹೊಸ ಯೋಜನೆಯನ್ನು ಕಾರ್ಯಗತಗೊಳಿಸುವವರು ಈ ಮಹತ್ವದ ಸಲಹೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಹೊಸದಿಲ್ಲಿ ಯಾವುದೇ ಪಾರದರ್ಶಕತೆ, ಯಾವುದೇ ಹೊಣೆಗಾರಿಕೆ ಮತ್ತು ಅದರಿಂದ ಹೆಚ್ಚು ಪರಿಣಾಮ ಎದುರಿಸುವ ಜನರೊಂದಿಗೆ ಯಾವ ಸಮಾಲೋಚನೆ ಇಲ್ಲದೆ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಸಾಮಾಜಿಕ ಮತ್ತು ಪರಿಸರ ಪರಿಭಾಷೆಯಲ್ಲಿ, ಈ ಯೋಜನೆ ವಿನಾಶವನ್ನು ತರುತ್ತದೆ. ಆರ್ಥಿಕ ಆಧಾರದ ಮೇಲೆ ಇದನ್ನು ಸಮರ್ಥಿಸಲಾಗುವುದಿಲ್ಲ. ಫ್ರಂಟ್‌ಲೈನ್‌ನಲ್ಲಿನ ಲೇಖನದಲ್ಲಿ ಎಂ. ರಾಜಶೇಖರ್ ಅವರು ಬಂದರು ಮತ್ತು ಪ್ರವಾಸೋದ್ಯಮದಿಂದ ಬರುವ ಸಂಭಾವ್ಯ ಆದಾಯದ ಹರಿವು ಯೋಜನೆಯನ್ನು ಆರ್ಥಿಕವಾಗಿ ಕಾರ್ಯಸಾಧ್ಯವಾಗಿಸಲು ತುಂಬಾ ಕಡಿಮೆ ಎಂದು ವಾದಿಸುತ್ತಾರೆ. ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ಇಷ್ಟೊಂದು ಹಣವನ್ನು ಮುಳುಗಿಸುವ ಮೂಲಕ, ಭಾರತ ಸರಕಾರ ವಾಸ್ತವವಾಗಿ ಖಾಸಗಿ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಸಹಾಯಧನ ನೀಡುತ್ತದೆ.
ಈ ಪ್ರಬಂಧಗಳನ್ನು ಓದುವಾಗ, ಪರಿಸರ ವಿಜ್ಞಾನವನ್ನು ರಕ್ಷಿಸಲು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಇರುವ ಸಾರ್ವಜನಿಕ ಸಂಸ್ಥೆಗಳು ಮತ್ತು ಬುಡಕಟ್ಟು ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಇರುವ ಸಂಸ್ಥೆಗಳ ತಪ್ಪುಗಳು ಆಘಾತಕಾರಿಯಾಗಿವೆ. ಸೇಖ್ಸಾರಿಯಾ ಸಂಪಾದಿಸಿರುವ ಸಂಪುಟ ಮತ್ತು ಫ್ರಂಟ್‌ಲೈನ್‌ನ ವಿಶೇಷ ಸಂಚಿಕೆಯಲ್ಲಿರುವ ಪ್ರಬಂಧಗಳು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ಪರಿಸರ ಮತ್ತು ಅರಣ್ಯ ಸಚಿವಾಲಯ, ಭಾರತೀಯ ವನ್ಯಜೀವಿ ಸಂಸ್ಥೆ, ನೀತಿ ಆಯೋಗ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯ ವಾಸ್ತವಾಂಶಗಳ ಬಗ್ಗೆ ಯಾವುದೇ ಎಚ್ಚರಿಕೆಯ ಅಥವಾ ಕಠಿಣ ಮೌಲ್ಯಮಾಪನವಿಲ್ಲದೆ ಹೇಗೆ ಆತುರದಿಂದ ಅನುಮತಿಗಳನ್ನು ನೀಡಿತು ಎಂಬುದನ್ನು ವಿವರವಾಗಿ ದಾಖಲಿಸುತ್ತವೆ.
ಒಂದು ಕಾಲದಲ್ಲಿ ಕೆಲ ಪ್ರಸಿದ್ಧ ವಿಜ್ಞಾನಿಗಳ ಸಹಭಾಗಿತ್ವ ತೀವ್ರವಾಗಿ ತೊಂದರೆ ಉಂಟುಮಾಡುತ್ತದೆ. 2018ರ ಲೇಖನವೊಂದರಲ್ಲಿ, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಮಾಜಿ ನಿರ್ದೇಶಕರನ್ನು ಸೆಖ್ಸಾರಿಯಾ ಉಲ್ಲೇಖಿಸಿದ್ದಾರೆ. ಅವರು ಈ ಯೋಜನೆಯನ್ನು ಅತ್ಯಂತ ಕಳವಳಕಾರಿ ಎಂದು ಕರೆದಿದ್ದರು ಮತ್ತು ಕಾರ್ಯಗತಗೊಳಿಸಿದರೆ, ಇದು ಉಳಿದಿರುವ ಈ ಕೊನೆಯ ಜಾಗತಿಕ ಸಮುದ್ರ ಜೀವವೈವಿಧ್ಯ ತಾಣಗಳಿಗೆ ವಿನಾಶವನ್ನುಂಟು ಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದರು. ಗ್ರೇಟ್ ನಿಕೋಬಾರ್‌ನಂತಹ ದ್ವೀಪಗಳು ಅವುಗಳ ಜೀವವೈವಿಧ್ಯ ಮತ್ತು ಆಂತರಿಕ ಪರಿಸರ ಮೌಲ್ಯಗಳನ್ನು ರಾಷ್ಟ್ರೀಯ ಆಸ್ತಿಗಳಾಗಿ ಮತ್ತು ರಾಷ್ಟ್ರದ ಭವಿಷ್ಯದ ಸಮೃದ್ಧಿಗಾಗಿ ರಕ್ಷಿಸಿಕೊಳ್ಳಲು ಯೋಜನೆಯನ್ನು ಸ್ಥಗಿತಗೊಳಿಸಬೇಕೆಂದು ಆ ವಿಜ್ಞಾನಿ ಒತ್ತಾಯಿಸಿದ್ದರು. ಕೆಲ ವರ್ಷಗಳ ನಂತರ ಸರಕಾರಿ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಾಗ ಅದೇ ವಿಜ್ಞಾನಿ ಯಾವುದನ್ನು ಅಪಾಯಕಾರಿ ಎಂದು ತಾವೇ ಹೇಳಿದ್ದರೊ ಅದೇ ಯೋಜನೆಗೆ ಒಪ್ಪಿಗೆ ನೀಡಿದರು.
ಆದರೂ, ಕೆಲ ಕಿರಿಯ ವಿಜ್ಞಾನಿಗಳು ಸ್ವತಂತ್ರ ಮತ್ತು ಸ್ಪಷ್ಟ ದೃಷ್ಟಿಯುಳ್ಳವರಾಗಿ ಉಳಿದಿದ್ದಾರೆ. ಫ್ರಂಟ್‌ಲೈನ್‌ನ ಹನ್ನೆರಡು ಪುಟಗಳಿಗೂ ಹೆಚ್ಚು ವಿಸ್ತಾರದ (ಮತ್ತು ನಿಕಟವಾಗಿ ಅಡಿಟಿಪ್ಪಣಿ ಹೊಂದಿರುವ) ವ್ಯಾಪಕವಾದ ವಿಶ್ಲೇಷಣೆಯಲ್ಲಿ, ಪರಿಸರಶಾಸ್ತ್ರಜ್ಞ ರೋಹನ್ ಆರ್ಥರ್ ಮತ್ತು ಟಿ.ಆರ್. ಶಂಕರ್ ರಾಮನ್ ದ್ವೀಪದ ಶ್ರೀಮಂತ ಜೀವವೈವಿಧ್ಯವನ್ನು ದಾಖಲಿಸುತ್ತಾರೆ ಮತ್ತು ಬುಡಕಟ್ಟು ಸಮುದಾಯಗಳು ಹಾಗೂ ಅವುಗಳ ನೈಸರ್ಗಿಕ ಸುತ್ತಮುತ್ತಲಿನ ಪ್ರದೇಶಗಳ ನಡುವಿನ ಆಳವಾದ ಸಂಬಂಧಗಳ ಬಗ್ಗೆ ಮಾತನಾಡುತ್ತಾರೆ. ನಂತರ ಯೋಜನೆಯು ಪ್ರಸ್ತಾಪಿಸಿದ ಪರಿಹಾರಾತ್ಮಕ ಅರಣ್ಯೀಕರಣ ಮತ್ತು ಹಾನಿಗೊಳಗಾದ ಹವಳ ದಿಬ್ಬಗಳ ಪುನಃಸ್ಥಾಪನೆ ಯೋಜನೆಗಳನ್ನು ಟೊಳ್ಳು ಮತ್ತು ಕಾರ್ಯಸಾಧ್ಯವಲ್ಲವೆಂದು ತೋರಿಸುತ್ತಾರೆ. ಅವರು ತಮ್ಮ ಸಂಶೋಧನೆಗಳ ಆಧಾರದ ಮೇಲೆ, ಯೋಜಿತ ಪರಿಸರ ವಿಪತ್ತನ್ನು ಉಪಶಮನ ಪರಿಹಾರಗಳೊಂದಿಗೆ ಮೌಲ್ಯೀಕರಿಸದಿರುವುದು ವೈಜ್ಞಾನಿಕ ಸಮುದಾಯವಾಗಿ ನಮ್ಮ ಕರ್ತವ್ಯವಾಗುತ್ತದೆ ಎಂದು ಒತ್ತಾಯಿಸುತ್ತಾರೆ.
ಸೇಖ್ಸಾರಿಯಾ ಸಂಪಾದಿಸಿದ ಸಂಗ್ರಹಕ್ಕೆ ತಮ್ಮ ಮುನ್ನುಡಿಯಲ್ಲಿ, ದೇಶದ ಪ್ರಮುಖ ಪರಿಸರಶಾಸ್ತ್ರಜ್ಞ ಮಾಧವ್ ಗಾಡ್ಗೀಳ್, ‘‘ಆಳುವ ವರ್ಗಗಳು ಎಂದಿಗೂ ಪರಿಸರ ಅಥವಾ ಸಾಮಾನ್ಯ ಜನರ ಹಿತಾಸಕ್ತಿ ಉದ್ದೇಶದೊಂದಿಗೆ ಕೆಲಸ ಮಾಡುವುದಿಲ್ಲ ಎಂಬುದು ಜಾಗತಿಕ ಅನುಭವ. ಈ ಪ್ರಮುಖ ಹಿತಾಸಕ್ತಿಗಳನ್ನು ಎತ್ತಿಹಿಡಿಯಲು ಸರಕಾರಗಳನ್ನು ಯಾವಾಗಲೂ ಒತ್ತಾಯಿಸುವುದು ಜನರ ಚಳವಳಿಗಳು ಮಾತ್ರ’’ ಎಂದು ಬರೆದಿದ್ದಾರೆ. ಈ ಸಂದರ್ಭದಲ್ಲಿ, ಗ್ರೇಟ್ ನಿಕೋಬಾರ್ ಯೋಜನೆಯನ್ನು ಹಡಗು ಅಥವಾ ವಾಣಿಜ್ಯ ಸಚಿವಾಲಯ ನಿರ್ವಹಿಸುತ್ತಿಲ್ಲ, ಬದಲಾಗಿ ಗೃಹ ಸಚಿವಾಲಯ ನಿರ್ವಹಿಸುತ್ತಿದೆ ಎಂಬುದು ಆತಂಕಕಾರಿ. ಯೋಜನೆಯ ಬಗ್ಗೆ ಇನ್ನಷ್ಟು ಟೀಕೆಗಳನ್ನು ತಡೆಯುವ ಸಲುವಾಗಿ ಹೀಗೆ ಮಾಡಲಾಗಿದೆ. ವಾಸ್ತವವಾಗಿ, ಪತ್ರಕರ್ತರು ಈಗ ದ್ವೀಪಕ್ಕೆ ಭೇಟಿ ನೀಡುವುದು ಹೆಚ್ಚು ಕಷ್ಟಕರವಾಗಿದೆ. ಗೌಪ್ಯತೆ ಮತ್ತು ದಮನದ ವಾತಾವರಣದಲ್ಲಿ, ದುರುದ್ದೇಶಪೂರಿತ ಮತ್ತು ದುಬಾರಿ ಯೋಜನೆಯ ಸಂಭಾವ್ಯ ಹಾನಿಕಾರಕ ಪರಿಣಾಮಗಳ ದಾಖಲೀಕರಣ ಇನ್ನಷ್ಟು ಮಹತ್ವದ್ದಾಗಿದೆ. ಈ ಲೇಖನದ ಆಧಾರವಾಗಿ ಕ್ಷೇತ್ರ ಅಧ್ಯಯನಗಳನ್ನು ರೂಪಿಸಿರುವ ಬರಹಗಾರರು ಮತ್ತು ವಿದ್ವಾಂಸರು ನಮ್ಮ ಆಡಳಿತಗಾರರನ್ನು ಹೊಣೆಗಾರರನ್ನಾಗಿಸುವ ಧೈರ್ಯ ಮಾಡುವುದರ ಜೊತೆಗೆ ನಮ್ಮ ರಾಷ್ಟ್ರೀಯ ಮಾಧ್ಯಮ ನಾಚಿಕೆಪಡುವಂತೆ ಮಾಡಿದ್ದಕ್ಕಾಗಿ ನಮ್ಮ ಸಾಮೂಹಿಕ ಕೃತಜ್ಞತೆಗೆ ಅರ್ಹರು.