ಗಣರಾಜ್ಯದೊಡನೆ ಪಯಣ

2020ರ ಎಪ್ರಿಲ್ 22ರಂದು ನಾನು ಟ್ವಿಟರ್ನಲ್ಲಿ (ಆಗ ಇನ್ನೂ X ಆಗಿರಲಿಲ್ಲ) ಸಾರ್ವಜನಿಕ ಸೇವಕ, ರಾಜತಾಂತ್ರಿಕ, ಬರಹಗಾರ ಮತ್ತು ವಿದ್ವಾಂಸ ಗೋಪಾಲಕೃಷ್ಣ ಗಾಂಧಿಯವರ 75ನೇ ಹುಟ್ಟುಹಬ್ಬವನ್ನು ಉಲ್ಲೇಖಿಸಿ ಒಂದು ಥ್ರೆಡ್ ಅನ್ನು ಪೋಸ್ಟ್ ಮಾಡಿದ್ದೆ. ಆ ಥ್ರೆಡ್ ಅವರು ದೇಶಕ್ಕೆ ನೀಡಿದ ಕೊಡುಗೆಗಳು, ಅವರ ಪಾತ್ರದ ಔದಾರ್ಯ, ಘನತೆ ಮತ್ತು ಕೊನೆಯಲ್ಲಿ ನಾನು ಅವರಿಗೆ ಸಲ್ಲಿಸಬೇಕಾದ ವೈಯಕ್ತಿಕ ಋಣದ ಬಗ್ಗೆ ಇತ್ತು. ಆಧುನಿಕ ಭಾರತೀಯ ಇತಿಹಾಸ ಮತ್ತು ಮಹಾತ್ಮಾ ಗಾಂಧಿಯವರ ಬಗ್ಗೆ ನನಗೆ ಬೇರಾರಿಗಿಂತಲೂ ಹೆಚ್ಚು ಕಲಿಸಿದ್ದವರು ಗೋಪಾಲ್ ಗಾಂಧಿ ಎಂದು ನಾನು ಆಗ ಬರೆದಿದ್ದೆ.
ಐದು ವರ್ಷಗಳ ನಂತರ, ಅವರ ೮೦ನೇ ಹುಟ್ಟುಹಬ್ಬಕ್ಕೆ ಮೊದಲು ಗೋಪಾಲ್ ಗಾಂಧಿ ಅವರು ತಮ್ಮ ಸ್ವಂತ ಜೀವನದೊಂದಿಗೆ ಸಮಾನಾಂತರವಾಗಿ ಸಾಗಿದ ಗಣರಾಜ್ಯದ ಪ್ರಗತಿ ಮತ್ತು ಹಿಂಜರಿತದ ಬಗ್ಗೆ ಶ್ರೀಮಂತ, ಸೂಕ್ಷ್ಮ, ಆನಂದದಾಯಕ ಮತ್ತು ಅಪಾರ ಮಟ್ಟದಲ್ಲಿ ಶೈಕ್ಷಣಿಕವೆನ್ನಿಸುವ ಪುಸ್ತಕವನ್ನು ನಮಗೆ ಉಡುಗೊರೆಯಾಗಿ ನೀಡುವ ಮೂಲಕ ನನ್ನನ್ನು (ಮತ್ತು ಇತರ ಅನೇಕ ಭಾರತೀಯರನ್ನು) ತಮ್ಮ ಋಣದಲ್ಲಿ ಇನ್ನಷ್ಟು ದೃಢವಾಗಿ ಇರಿಸಿದ್ದಾರೆ. ಈ ನಿರೂಪಣೆ ವೈಯಕ್ತಿಕ ನೆನಪುಗಳನ್ನು ದೊಡ್ಡ ಐತಿಹಾಸಿಕ ಘಟನೆಗಳ ವಿವರಣೆಗಳೊಂದಿಗೆ ಹೆಣೆಯುತ್ತದೆ. ಎರಡನೆಯದು ಅವರ ಅಸಾಧಾರಣ ಓದುವ ವ್ಯಾಪ್ತಿ ಮತ್ತು ಭಾರತದ ಬಗ್ಗೆ ಅವರ ಆಳವಾದ ತಿಳುವಳಿಕೆಯನ್ನು ಆಧರಿಸಿದೆ. ಈ ಗದ್ಯ ಅದ್ಭುತವಾದ ಮತ್ತು ಹಿಂದೆಂದೂ ನೋಡಿರದ ಹಲವಾರು ಪ್ರಮುಖರ ಛಾಯಾಚಿತ್ರಗಳು ಮತ್ತು ಬರಹಗಾರ ಮತ್ತು ಅವರ ದೇಶದ ಪ್ರಕ್ಷುಬ್ಧ ಪ್ರಯಾಣದಲ್ಲಿನ ವಿದ್ಯಮಾನಗಳಿಂದ ಸಮೃದ್ಧವಾಗಿದೆ ಮತ್ತು ವ್ಯಕ್ತಿಗತ ಚಿತ್ರಗಳ ಬಗ್ಗೆ (ಹಿಂದಿ, ಇಂಗ್ಲಿಷ್, ಬಂಗಾಳಿ ಅಥವಾ ತಮಿಳು ಭಾಷೆಗಳಲ್ಲಿ ತಯಾರಿಸಲಾಗಿದೆ) ಅನೇಕ ಕೋಮಲ ಉಲ್ಲೇಖಗಳಿವೆ; ಸಾಹಿತ್ಯ, ಪಾಂಡಿತ್ಯ ಮತ್ತು ಸಾರ್ವಜನಿಕ ಸೇವೆಯಷ್ಟೇ ಸಿನೆಮಾ ಕೂಡ ಗೋಪಾಲ್ ಗಾಂಧಿಯವರ ಜೀವನವನ್ನು ರೂಪಿಸಿರುವುದು ಸ್ಪಷ್ಟ.
Undying Light: A Personal History of Independent India ಎಂಬ ಶೀರ್ಷಿಕೆಯನ್ನು ಹೊಂದಿರುವ ಈ ಪುಸ್ತಕ ಸ್ವಾತಂತ್ರ್ಯದ ಮೊದಲ, ತುಂಬಿದ ವರ್ಷಗಳ ಎದ್ದುಕಾಣುವ ವಿವರಗಳೊಂದಿಗೆ ಪ್ರಾರಂಭವಾಗುತ್ತದೆ. ಇದು ಮಹಾತ್ಮಾ ಗಾಂಧಿಯವರ ಕೊನೆಯ ಉಪವಾಸಗಳು ಮತ್ತು ಅವರ ಸಾವು ಮತ್ತು ನೆಹರೂ-ಪಟೇಲ್ ಬಿರುಕು ಮತ್ತು ಅವರ ಸಾಮರಸ್ಯವನ್ನು ಒಳಗೊಂಡಿದೆ. ನಂತರ ನಿರೂಪಣೆ ಕಾಲಾನುಕ್ರಮದಲ್ಲಿ ಮುಂದುವರಿಯುತ್ತದೆ. ಪ್ರತೀ ವರ್ಷ ಅದಕ್ಕೆ ಮೀಸಲಾದ ಸಣ್ಣ, ಸ್ಪಷ್ಟವಾದ ಅಧ್ಯಾಯದಿಂದ ಗುರುತಿಸಲ್ಪಟ್ಟಿದೆ. ಕಳೆದ ಒಂದೂವರೆ ದಶಕದ ಏಕೀಕೃತ ಅಧ್ಯಾಯದೊಂದಿಗೆ ಕೊನೆಗೊಳ್ಳುತ್ತದೆ.
ಸ್ವಾತಂತ್ರ್ಯ ಮತ್ತು ವಿಭಜನೆಗೆ ಸ್ವಲ್ಪ ಮೊದಲು ಜನಿಸಿದ, ಗಣರಾಜ್ಯದೊಂದಿಗೆ ಬೆಳೆದ ಗೋಪಾಲ್ ಗಾಂಧಿಯವರ ಮನಸ್ಸನ್ನು ಸದ್ದಿಲ್ಲದೆ ದೇಶಭಕ್ತರಾದ ಅವರ ಪೋಷಕರು-ದೇವದಾಸ್ ಮತ್ತು ಲಕ್ಷ್ಮೀ ರೂಪಿಸಿದರು. ತಮ್ಮ ಮೇಲೆ, ಹಾಗೆಯೇ ಅವರ ಒಡಹುಟ್ಟಿದವರಾದ ತಾರಾ, ರಾಜಮೋಹನ್ ಮತ್ತು ರಾಮಚಂದ್ರ ಅವರ ಮೇಲೂ ಪೋಷಕರ ಪ್ರಭಾವವನ್ನು ಪ್ರೀತಿ ಮತ್ತು ಕಳಕಳಿಯಿಂದ ಚಿತ್ರಿಸಲಾಗಿದೆ. ಪ್ರಸಿದ್ಧ ಮತ್ತು ವಿವಾದಾತ್ಮಕ ಪ್ರಧಾನ ಮಂತ್ರಿಗಳಿಂದ ಹಿಡಿದು ಪ್ರಚಾರವಿಲ್ಲದ ಶಿಕ್ಷಕರು ಮತ್ತು ಸಾಮಾಜಿಕ ಕಾರ್ಯಕರ್ತರವರೆಗೆ ನೂರಾರು ಇತರ ಕುತೂಹಲಕಾರಿ ಅಥವಾ ಪ್ರಭಾವಶಾಲಿ ಪಾತ್ರಗಳು ಪುಸ್ತಕದ ಪುಟಗಳಲ್ಲಿವೆ.
ಈ ಪುಸ್ತಕದ ಕೇಂದ್ರ ವ್ಯಕ್ತಿ ಲೇಖಕರ ತಾಯಿಯ ಅಜ್ಜ ಸಿ. ರಾಜಗೋಪಾಲಾಚಾರಿ (ರಾಜಾಜಿ). ಅವರು ಸ್ವತಂತ್ರ ಭಾರತದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು. ಅವರು ಒಂದು ಕಾಲದಲ್ಲಿ ತಮ್ಮ ಪ್ರೀತಿಯ ಕಾಂಗ್ರೆಸ್ ಅನ್ನು ತೊರೆದು ಸ್ವತಂತ್ರ ಎಂಬ ವಿರೋಧ ಪಕ್ಷವನ್ನು ಸ್ಥಾಪಿಸುವ ಮೊದಲು, ಆರ್ಥಿಕತೆಯನ್ನು ಸರಕಾರದ ಸಂಕೋಲೆಗಳಿಂದ ಮುಕ್ತಗೊಳಿಸುವ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದರು. ಗೋಪಾಲ್ ಗಾಂಧಿ ರಾಜಾಜಿಯನ್ನು ‘ನನ್ನ ಜೀವನದ ಮೇಲಿನ ಏಕೈಕ ದೊಡ್ಡ ಪ್ರಭಾವಿ’ ಎಂದು ಕರೆಯುತ್ತಾರೆ. ಅವರಿಂದ ತಾವು ನ್ಯಾಯಯುತ ಸಂವಿಧಾನ, ಸಮಾನತೆ ಮತ್ತು ವಾಕ್ ಸ್ವಾತಂತ್ರ್ಯವನ್ನು ಆಧರಿಸಿದ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯವನ್ನು ಗೌರವಿಸುವ ಸರಕಾರದ ಕಲ್ಪನೆಯನ್ನು ಗ್ರಹಿಸಿದ್ದಾಗಿ ಹೇಳುತ್ತಾರೆ.
ಪದೇ ಪದೇ ಕಾಣಿಸಿಕೊಳ್ಳುವ ಎರಡನೇ ವ್ಯಕ್ತಿ ಅಪ್ರತಿಮ ಶಾಸ್ತ್ರೀಯ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ. ಗೋಪಾಲ್ ಗಾಂಧಿ ಚಿಕ್ಕ ಹುಡುಗನಾಗಿದ್ದಾಗ ಅವರನ್ನು ಪ್ರೀತಿಸುತ್ತಿದ್ದರು ಮತ್ತು ಅವರ ಸಂಗೀತ ಮತ್ತು ವ್ಯಕ್ತಿತ್ವ ಅವರ ಮೇಲೆ ಶಾಶ್ವತವಾದ ಪ್ರಭಾವ ಬೀರಿತು. ಮೂರನೆಯ ಪ್ರಮುಖ ಪ್ರಭಾವಿ ಸಮಾಜವಾದಿ ಮತ್ತು ಸಮಾಜ ಸೇವಕ ಜಯಪ್ರಕಾಶ್ ನಾರಾಯಣ್. ಅವರನ್ನು ಅವರ ಪ್ರಾಮಾಣಿಕತೆ, ಶಾಂತ ಮಾತು, ಉತ್ತಮ ನೋಟಕ್ಕಾಗಿ ಮತ್ತು ಅವರ ಅತ್ಯಾಧುನಿಕ ಇಂಗ್ಲಿಷ್ಗಾಗಿ ಯುವ ಗೋಪಾಲ್ ಗೌರವಿಸುತ್ತಿದ್ದರು. ಅವರ ಅಭಿಮಾನಿಯ ಆಹ್ವಾನದ ಮೇರೆಗೆ, ಜೆಪಿ ಭಾರತ-ಚೀನಾ ಸಂಘರ್ಷದ ಉತ್ತುಂಗದಲ್ಲಿ ದಿಲ್ಲಿಯ ಸೈಂಟ್ ಸ್ಟೀಫನ್ಸ್ ಕಾಲೇಜಿಗೆ ಉಪನ್ಯಾಸ ನೀಡಲು ಬಂದರು. ನಿಧಾನವಾದ, ಪ್ರಮಾಣಬದ್ಧ ಸ್ವರದಲ್ಲಿ, ಸ್ವಾತಂತ್ರ್ಯ ಹೋರಾಟದ ವರ್ಷಗಳಲ್ಲಿ ರಾಷ್ಟ್ರೀಯತೆಯ ಅರ್ಥವೇನೆಂದು ಮೊದಲಾರ್ಧದಲ್ಲಿ ಅವರು ಉತ್ಕಟವಾಗಿ ಮಾತನಾಡಿದರು. ವಸಾಹತುಶಾಹಿ ನಿರ್ಮೂಲನೆ, ಸ್ವಾಭಿಮಾನ, ಸ್ವಾವಲಂಬನೆ, ಆತ್ಮ ವಿಶ್ವಾಸವನ್ನು ಅದರ ಸಾಧನವಾಗಿ ಅಹಿಂಸಾತ್ಮಕ ಅಸಹಕಾರದೊಂದಿಗೆ ಮರಳಿ ಪಡೆಯುವುದು ಎಂದರು. ದ್ವಿತೀಯಾರ್ಧದಲ್ಲಿ ರಾಷ್ಟ್ರೀಯತೆಯ ಅರ್ಥವೇನೆಂದು-ಅಸಹಿಷ್ಣುತೆಯನ್ನು ಇಂಧನವಾಗಿಟ್ಟುಕೊಂಡು, ಕತ್ತಿ ಝಳಪಿಸುತ್ತ ನೆರೆಯವರಿಗೆ ಬೆದರಿಕೆ ಹಾಕುವ ದೇಶಭಕ್ತಿ-ಹೇಳಿದರು.
ಈ ನೆನಪು ವರ್ತಮಾನಕ್ಕೆ ನೇರವಾಗಿ ಸಂಬಂಧಿಸಿದೆ. ಹಾಗೆಯೇ 1960ರ ದಶಕದಲ್ಲಿ ಭಾರತ ಸರಕಾರ ಅಧಿಕೃತ ಬಳಕೆಯಿಂದ ಇಂಗ್ಲಿಷ್ ಅನ್ನು ನಿರ್ಮೂಲನೆ ಮಾಡಲು ಮಾಡಿದ ಪ್ರಯತ್ನಗಳ ಬಗ್ಗೆಯೂ ಸಹ ಹೇಳಲಾಗಿದೆ. ‘ನಾನು ಹಿಂದಿಯನ್ನು ಪ್ರೀತಿಸುತ್ತಿದ್ದೆ, ಅದರ ಸಾಮ್ರಾಜ್ಯಶಾಹಿ ಆಡಂಬರಗಳನ್ನು ದ್ವೇಷಿಸುತ್ತಿದ್ದೆ ಮತ್ತು ಈ ವಿಷಯದ ಬಗ್ಗೆ ರಾಜಾಜಿಯವರ ಬಲವಾದ ನಿಲುವಿನಿಂದ ಪ್ರಭಾವಿತನಾಗಿ, ಶೀಘ್ರದಲ್ಲೇ ಪ್ರಸ್ತಾವಿತ ಕ್ರಮವನ್ನು ಬದಲಾಯಿಸ ಲಾಗದಂತೆ ವಿರೋಧಿಸಿದೆ’ ಎಂದು ಬರೆಯುತ್ತಾರೆ.
ನಿರೂಪಣೆಯಲ್ಲಿ ಪ್ರಾಬಲ್ಯ ಹೊಂದಿರುವುದು ದೇಶದ ಪ್ರಯಾಣ. ಪ್ರಮುಖ ಘಟನೆಗಳು ಮತ್ತು ವಿವಾದಗಳನ್ನು ಅದರೊಂದಿಗೆ ವ್ಯಾಖ್ಯಾನ ಸಹಿತವಾಗಿ ವಿವರಿಸಲಾಗಿದೆ. ಹಿನ್ನೆಲೆಯಲ್ಲಿ, ಕರ್ನಾಟಕ ಸಂಗೀತ ಕಚೇರಿಯಲ್ಲಿ ಗಾಯಕನಿಗೆ ಪಿಟೀಲು ವಾದಕನಂತೆ ಪಾತ್ರವನ್ನು ನಿರ್ವಹಿಸುವುದು ಲೇಖಕರ ಸ್ವಂತ ಪ್ರಯಾಣ. ಗೋಪಾಲ್ ಗಾಂಧಿಯವರು ತಂಜಾವೂರಿನಲ್ಲಿ ಐಎಎಸ್ ಅಧಿಕಾರಿಯಾಗಿ ಮೊದಲ ಬಾರಿಗೆ ನಿಯೋಜನೆ ಗೊಂಡಾಗ, ಅವರು ಸಿರಿಯನ್ ಕ್ರಿಶ್ಚಿಯನ್, ತಮಿಳು ಜೈನ ಮತ್ತು ಮುಸ್ಲಿಮರೊಂದಿಗೆ ಕೆಲಸ ಮಾಡಿದರು. ಅವರು ತಮ್ಮ ಹೆಚ್ಚು ಉನ್ನತ ಹುದ್ದೆಗಳ ಬಗ್ಗೆ (ಅಧ್ಯಕ್ಷರ ಕಾರ್ಯದರ್ಶಿಯಾಗಿ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದುದೂ ಸೇರಿದಂತೆ) ಮತ್ತು ಮೂರು ಖಂಡಗಳ ನಾಲ್ಕು ದೇಶಗಳಲ್ಲಿ ಐದು ಪ್ರತ್ಯೇಕ ಹುದ್ದೆಗಳಲ್ಲಿ ವಿದೇಶದಲ್ಲಿ ದೇಶವನ್ನು ಪ್ರತಿನಿಧಿಸಿದ ಬಗ್ಗೆ ತೀವ್ರವಾದ ಒಳನೋಟದೊಂದಿಗೆ ಬರೆಯುತ್ತಾರೆ. ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ರಾಜಕೀಯದ ಬಗ್ಗೆ ಅವರ ವಿವರಣೆಗಳು ವಿಶೇಷವಾಗಿ ಮೌಲಿಕವಾಗಿವೆ.
ಪುಸ್ತಕ ತೋರಿಸುವಂತೆ, ಗೋಪಾಲ್ ಗಾಂಧಿಯವರು ಭಾರತವನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ತಿಳಿದಿದ್ದಾರೆ. ಆದರೂ ಬಹುಶಃ ಅವರು ತಮಿಳರು, ಬಂಗಾಳಿಗಳು ಮತ್ತು ದಿಲ್ಲಿವಾಲರನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಮತ್ತು ತಿಳಿದಿದ್ದಾರೆ. ಗಮನಾರ್ಹವಾಗಿ, ಈಶಾನ್ಯ ಮತ್ತು ಕಾಶ್ಮೀರದ, ತೊಂದರೆ ಗೊಳಗಾದ ಗಡಿ ಪ್ರದೇಶಗಳ ಬಗ್ಗೆಯೂ ವಿವರಗಳಿವೆ.
ದಿ ಅನ್ಡೈಯಿಂಗ್ ಲೈಟ್ ಅನೇಕ ಹೃದಯಸ್ಪರ್ಶಿ ಕಥೆಗಳನ್ನು ಒಳಗೊಂಡಿದೆ. ಒಂದು ಕಥೆ ರಾಜಾಜಿ ಮತ್ತು ಅವರ ಮಗಳು ನಾಮಗಿರಿ ಹೈದರಾಬಾದ್ ಭೇಟಿಗೆ ಸಂಬಂಧಿಸಿದೆ. ಆ ದಂಗೆಕೋರ ಊಳಿಗಮಾನ್ಯ ರಾಜ್ಯ ಅಂತಿಮವಾಗಿ ಒಕ್ಕೂಟದ ಭಾಗವಾದ ನಂತರ, ನಿಜಾಮ ಗವರ್ನರ್ ಜನರಲ್ ಮಗಳಿಗೆ ವಜ್ರ ಖಚಿತ ಹಾರವನ್ನು ಉಡುಗೊರೆಯಾಗಿ ನೀಡಿದ. ಅಂತಹ ಆಡಂಬರದ ಆಭರಣಗಳು ವಿಧವೆಯೊಬ್ಬಳಿಗೆ ಸೂಕ್ತವಲ್ಲ ಎಂದು ರಾಜಾಜಿ ಅದನ್ನು ಹಿಂದಿರುಗಿಸಿದರು. ಆದರೆ ನಾಮಗಿರಿ ಆಕೆಯ ತಂದೆಯನ್ನು ಗದರಿಸಿ, ‘ನಾವು ಗಾಂಧಿಯವರ ಶಿಷ್ಯರು ಮತ್ತು ನಮ್ಮ ಬಳಿ ಬೆಲೆಬಾಳುವ ವಸ್ತುಗಳಿಲ್ಲ’ ಎಂದು ನಿಜಾಮನಿಗೆ ಹೇಳಬೇಕಿತ್ತು ಎಂದು ಹೇಳಿದರು.
ಮತ್ತೊಂದು ಕಥೆ ರಾಜಾಜಿಯವರ ಹಳೆಯ ಸ್ನೇಹಿತ ಮತ್ತು ರಾಜಕೀಯ ಪ್ರತಿಸ್ಪರ್ಧಿ ಇ.ವಿ. ರಾಮಸ್ವಾಮಿ (ಪೆರಿಯಾರ್) ಅವರಿಗೆ ಸಂಬಂಧಿಸಿದೆ. ಅವರು ರಾಜಾಜಿಯನ್ನು ತಮ್ಮ ಎರಡನೇ ಮದುವೆಗೆ ಸಾಕ್ಷಿಯಾಗಲು ಕೇಳಿಕೊಂಡರು. ರಾಜಾಜಿ ನಿರಾಕರಿಸಿದರು. ಅವರು ಒಪ್ಪಿಕೊಂಡಿದ್ದರೆ, ತಮಿಳು ಗ್ರಾಮಾಂತರದಲ್ಲಿ ಬ್ರಾಹ್ಮಣ ಮತ್ತು ಬ್ರಾಹ್ಮಣೇತರರ ನಡುವಿನ ಸಂವಾದದಲ್ಲಿ ಒಂದು ದೊಡ್ಡ ಸಾಧ್ಯತೆ ತೆರೆದುಕೊಳ್ಳುತ್ತಿತ್ತು ಎಂದು ಗೋಪಾಲ್ ಹೇಳುತ್ತಾರೆ.
ಗೋಪಾಲ್ ಗಾಂಧಿಗೆ ಎಲ್ಲವೂ ಇದ್ದ ತಮ್ಮ ಕುಟುಂಬದ ಹಿನ್ನೆಲೆಯ ಬಗ್ಗೆ ಮತ್ತು ಇದು ಅವರಿಗೆ ಹೇಗೆ ಸಹಾಯ ಮಾಡಿತು ಮತ್ತು ಸಾಂದರ್ಭಿಕವಾಗಿ ಅಡ್ಡಿಯಾಯಿತು ಎಂಬುದರ ಬಗ್ಗೆ ಆಳವಾಗಿ ತಿಳಿದಿದೆ. ಅವರ ಬಾಲ್ಯ ಮತ್ತು ಹೊಸದಿಲ್ಲಿಯ ತಮ್ಮ ಮನೆಯಿಂದ ಒಳಗೆ ಮತ್ತು ಹೊರಗೆ ಬಂದ ಅಸಾಧಾರಣ ವ್ಯಕ್ತಿಗಳ ಬೆರಗುಗೊಳಿಸುವ ಶ್ರೇಣಿಯ ಬಗ್ಗೆ ಪ್ರಸ್ತಾವಿಸುತ್ತ, ಹರಿಜನ ಸೇವೆಯ ಆನುವಂಶಿಕ ಪ್ರಭಾವಲಯವನ್ನು ಹೊಂದಿದ್ದ ನಮ್ಮ ಕುಟುಂಬದ ಆಪ್ತ ಸ್ನೇಹಿತರಲ್ಲಿ ಒಬ್ಬ ದಲಿತನನ್ನೂ ಕಾಣಲಿಲ್ಲ. ಅದಕ್ಕೆ ಮುಸ್ಲಿಮ್, ಕ್ರಿಶ್ಚಿಯನ್ ಮತ್ತು ಸಿಖ್ ಸ್ನೇಹಿತರಿದ್ದರು. ಅದಕ್ಕೆ ಅಮೆರಿಕದ ಕಪ್ಪು ಸಮುದಾಯಗಳಿಂದ ಸ್ನೇಹಿತರಿದ್ದರು, ಪ್ರಪಂಚದಾದ್ಯಂತದ ಯಹೂದಿ ಸ್ನೇಹಿತರು ಇದ್ದರು, ಆದರೆ ಒಬ್ಬ ಭಾರತೀಯ ದಲಿತನೂ ಇರಲಿಲ್ಲ ಎಂದು ಗೋಪಾಲ್ ಬರೆಯುತ್ತಾರೆ.
ಲೇಖಕರ ಚಿಂತನಶೀಲ ಬುದ್ಧಿವಂತಿಕೆ ಕೆಲವು ದೊಡ್ಡ ಐತಿಹಾಸಿಕ ತೀರ್ಪುಗಳಲ್ಲಿಯೂ ವ್ಯಕ್ತವಾಗುತ್ತದೆ. ಕೆಲವು ಇಲ್ಲಿವೆ:
‘‘ದೇಶ ಇಂದು ಅವರ ಮನಸ್ಸು ಮತ್ತು ಸಂದೇಶಗಳನ್ನು ಅಧ್ಯಯನ ಮಾಡದೆ ಅವರ ಚಿತ್ರಗಳನ್ನು ಹೇಗೆ ಹೊಗಳುತ್ತದೆ ಎಂಬುದನ್ನು ನೋಡಿದರೆ ನೆಹರೂ, ಪಟೇಲ್ ಮತ್ತು ಅಂಬೇಡ್ಕರ್ ಮೂವರೂ ತಮಾಷೆ, ನಿರಾಶೆ ಮತ್ತು ಆತಂಕಕ್ಕೆ ಒಳಗಾಗುತ್ತಿದ್ದರು’’
‘‘ನೆಹರೂ ಭಾರತದಿಂದ ಇಂದಿರಾ ಭಾರತಕ್ಕೆ ಆದ ಪರಿವರ್ತನೆ ಶ್ರದ್ಧೆಯಿಂದ ಶ್ರಮಿಸುವ ಯುಗದಿಂದ ಚಡಪಡಿಕೆಯಿಂದ ವರ್ತಿಸುವ ಯುಗಕ್ಕೆ ಆದ ಪರಿವರ್ತನೆ ಯಾಗಿತ್ತು. ಭಾರತಕ್ಕೆ ಸೇವೆ ಸಲ್ಲಿಸಲು ನೇಮಿಸಲ್ಪಟ್ಟ ವ್ಯಕ್ತಿಯಿಂದ-ನೆಹರೂ-ಇಂದಿರಾ ಅವರ ಸೇವೆಗೆ ನಿಯೋಜಿತವಾದ ಹಂತಕ್ಕೆ ಆದ ಬದಲಾವಣೆಯಾಗಿತ್ತು’’.
ನರೇಂದ್ರ ಮೋದಿಯವರ ಪ್ರಧಾನಿ ಅವಧಿಯ ಬಗ್ಗೆ: ‘ಅವರು ಹಳೆಯ ದೋಣಿ, ಎಸ್.ಎಸ್. ಇಂಡಿಯಾದಲ್ಲಿ ಹೊಸ ಕ್ಯಾಪ್ಟನ್ ಆಗಿರಲಿಲ್ಲ, ಬದಲಿಗೆ ಹೊಸ ದೋಣಿ, ಎಸ್.ಎಸ್. ಭಾರತ್ನಲ್ಲಿ ಹೊಸ ಚುಕ್ಕಾಣಿ ಹಿಡಿದಿದ್ದರು. ಹಳೆಯ ಹಡಗು ಪ್ರಜಾಸತ್ತಾತ್ಮಕ ಗಣರಾಜ್ಯವಾದ ಮತ್ತು ಜಾತ್ಯತೀತತೆ ಎಂಬ ಎರಡು ಹಬೆಯ ಜೆಟ್ಗಳಿಂದ ನಡೆಸಲ್ಪಡುತ್ತಿತ್ತು; ಹೊಸದು ಬಹುಸಂಖ್ಯಾತ ರಾಷ್ಟ್ರೀಯತೆ ಮತ್ತು ಹಿಂದುತ್ವದಿಂದ ನಡೆಸಲ್ಪಡುತ್ತಿತ್ತು’.
ಇದನ್ನು ಓದಿದಾಗ ನಾನು ಈ ನಿರೂಪಣೆಯಲ್ಲಿ ಒಂದೆರಡು ನೂರು ಪುಟಗಳಷ್ಟು (ಮತ್ತು ಮೂವತ್ತು ವರ್ಷಗಳಷ್ಟು) ಹಿಂದಕ್ಕೆ, ಗೋಪಾಲ್ ಗಾಂಧಿಯವರ ದಿನಚರಿಯ ಕೆಲ ಆಯ್ದ ಭಾಗಗಳಿಗೆ ಹೋದೆ. ಡಿಸೆಂಬರ್ 1992ರಲ್ಲಿ ಬಾಬರಿ ಮಸೀದಿ ಧ್ವಂಸವನ್ನು ಉಲ್ಲೇಖಿಸಿ, ಅದರಲ್ಲಿ ಹೀಗೆ ಬರೆಯಲಾಗಿದೆ: ‘ಜನವರಿ 30, 1948ರ ನಂತರ ಇದು ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ಕ್ಷಣ ಎಂದು ನಾನು ಭಾವಿಸುತ್ತೇನೆ’, ನಂತರ, ‘ನಾವು ನಾಗರಿಕತೆಯ ಕುಸಿತದ ಅಂಚಿನಲ್ಲಿದ್ದೇವೆಯೇ?’ ಎಂದು ಪ್ರಶ್ನಿಸಿದ್ದಾರೆ.
ಕೊನೆಯ ಪುಟಗಳಲ್ಲಿ, ಲೇಖಕರು ಭಾರತ ಇಂದು ಎದುರಿಸುತ್ತಿರುವ ಕೆಲವು ಪ್ರಮುಖ ಸಮಸ್ಯೆಗಳನ್ನು ಗುರುತಿಸುತ್ತಾರೆ. ಅವುಗಳಲ್ಲಿ ಅತಿರೇಕದ ಪರಿಸರ ನಾಶ, ಜನಾಂಗೀಯ ದ್ವೇಷಗಳು, ಸಂಸ್ಥೆಗಳ ಸ್ವಾಯತ್ತತೆ ಕ್ಷೀಣಿಸುತ್ತಿರುವುದು ಮತ್ತು ಭೂತಕಾಲದ ಶಸ್ತ್ರಾಸ್ತ್ರೀಕರಣ ಸೇರಿವೆ. ಇವು ಗೋಪಾಲ್ ಗಾಂಧಿ ತಮ್ಮ ಯೌವನದಲ್ಲಿ ಅಳವಡಿಸಿಕೊಂಡ ಮತ್ತು ತಮ್ಮ ಪ್ರೌಢಾವಸ್ಥೆಯ ಉದ್ದಕ್ಕೂ ಶ್ರೇಷ್ಠವಾಗಿ ಸಾಕಾರಗೊಳಿಸಿದ ಗಣರಾಜ್ಯದ ಆದರ್ಶಗಳಿಗೆ ಅಗಾಧ ಸವಾಲುಗಳನ್ನು ಒಡ್ಡುತ್ತವೆ. ಅದೇನೇ ಇದ್ದರೂ, ಪುಸ್ತಕ ಈ ಸದ್ದಿಲ್ಲದ ಭರವಸೆಯ ಸಾಲಿನಿಂದ ಕೊನೆಗೊಳ್ಳುತ್ತದೆ: ‘ಭಾರತದ ಬೆಳಕು ಮಂಕಾಗಬಹುದು; ಅದು ಸಾಯಲು ಸಾಧ್ಯವಿಲ್ಲ, ಸಾಯುವುದಿಲ್ಲ’.