ಮಣಿಪುರ ಸಂಘರ್ಷಕ್ಕೆ ಹೊಣೆಗಾರರು
ಕಳೆದ ಹದಿನೈದು ದಿನಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಸುದ್ದಿಗಳು ಎರಡು. ಕ್ರಿಕೆಟ್ ವಿಶ್ವಕಪ್ ಪಂದ್ಯಗಳು ಮೊದಲನೆಯದಾದರೆ, ಹಮಾಸ್ ದಾಳಿಗೆ ಪ್ರತೀಕಾರವಾಗಿ ಗಾಝಾದ ಮೇಲಿನ ಇಸ್ರೇಲ್ ಭಯಂಕರ ಬಾಂಬ್ ದಾಳಿ ಎರಡನೆಯದು. ಇವೆರಡರ ಕುರಿತ ನಮ್ಮ ಗೀಳುಗಳಲ್ಲಿ, ಆರು ತಿಂಗಳುಗಳೇ ಕಳೆದಿರುವ ಮಣಿಪುರ ಸಂಘರ್ಷದ ವಿಷಣ್ಣತೆಯ ಹೆಗ್ಗುರುತನ್ನು ಬಹುತೇಕ ಗಮನಿಸದೆಯೇ ಕಳೆದಿದ್ದೇವೆ.
ಮಣಿಪುರದಲ್ಲಿ ಮೊದಲು ಹಿಂಸಾಚಾರ ಭುಗಿಲೆದ್ದ ಕೆಲವು ವಾರಗಳ ನಂತರ, ನಾನು ಅದರ ಬಗ್ಗೆ ‘ದಿ ಟೆಲಿಗ್ರಾಫ್’ನಲ್ಲಿ ಬರೆದಿದ್ದೇನೆ ಮತ್ತು ಅಲ್ಲಿನ ಪರಿಸ್ಥಿತಿಯ ಗಂಭೀರತೆಯನ್ನು ನಾವು ಗುರುತಿಸಬೇಕೆಂದು ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿಯೂ ಒತ್ತಾಯಿಸಿದ್ದೇನೆ. ನನ್ನ ಮಾತುಗಳಿಂದ ಪ್ರೇರಿತವಾದ ಒಂದು ಅದ್ಭುತ ವ್ಯಂಗ್ಯಾತ್ಮಕ ಹೇಳಿಕೆ ಹೀಗಿದೆ: ‘ಬಿಜೆಪಿಯ ಸಮಸ್ಯೆಯೆಂದರೆ, ಅವರು ಮಣಿಪುರವನ್ನು ರಾಷ್ಟ್ರೀಯ ಬಿಕ್ಕಟ್ಟು ಎಂದು ಪರಿಗಣಿಸುವುದಿಲ್ಲ. ಫ್ರಾನ್ಸ್ ನಲ್ಲಿನ ಪ್ರತಿಭಟನೆಗಳು ರಾಷ್ಟ್ರೀಯ ಬಿಕ್ಕಟ್ಟು ಎಂದು ಅವರು ನಂಬುತ್ತಾರೆ. ಪಾಕಿಸ್ತಾನಿ ಮಹಿಳೆ ಭಾರತೀಯ ಪುರುಷನನ್ನು ಮದುವೆಯಾಗುವುದು ರಾಷ್ಟ್ರೀಯ ಬಿಕ್ಕಟ್ಟು. ಬಿಜೆಪಿಯ ಒಬ್ಬ ಸದಸ್ಯನೂ ಭೇಟಿ ನೀಡದ ಸಣ್ಣ ಹಳ್ಳಿಯಲ್ಲಿ ಒಬ್ಬ ಮುಸಲ್ಮಾನನು ಹಿಂದೂವನ್ನು ಮದುವೆಯಾಗುವುದು ರಾಷ್ಟ್ರೀಯ ಬಿಕ್ಕಟ್ಟು. ಓಪನ್‌ಹೈಮರ್ ಚಲನಚಿತ್ರ ರಾಷ್ಟ್ರೀಯ ಬಿಕ್ಕಟ್ಟು. ಇವು ಬಿಜೆಪಿಯ ಪಾಲಿಗೆ ರಾಷ್ಟ್ರೀಯ ಕಾಳಜಿಯ ವಿಷಯಗಳು.’
ಈ ಅಂಕಣವು ಮಣಿಪುರದ ಬಿಕ್ಕಟ್ಟಿನ ಕಡೆಗೆ ಮತ್ತೊಮ್ಮೆ ಗಮನವನ್ನು ಸೆಳೆಯುವ ನಿಟ್ಟಿನಲ್ಲಿ ಬಹುಶಃ ಒಂದು ವ್ಯರ್ಥ ಪ್ರಯತ್ನ. ಈಗ ಅದು ಏಳನೇ ತಿಂಗಳಿಗೆ ಕಾಲಿಟ್ಟಿದೆ. ಮಣಿಪುರದ ಕುರಿತ ನನ್ನ ವೈಯಕ್ತಿಕ ಆಸಕ್ತಿಯು ಮೊದಲು ಒಬ್ಬ ಇತಿಹಾಸಕಾರನ ದೃಷ್ಟಿಯದ್ದಾಗಿತ್ತು. ೧೯೪೯ರಲ್ಲಿ ರಾಜ್ಯವು ಹೇಗೆ ಸ್ವತಂತ್ರ ಭಾರತದ ಭಾಗವಾಯಿತು ಮತ್ತು ಅದು ಹೇಗೆ ಮುನ್ನಡೆದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಕೆಲವು ವರ್ಷಗಳ ಹಿಂದೆ ಮಣಿಪುರಕ್ಕೆ ಭೇಟಿ ನೀಡಿದಾಗ, ಅದರ ನೈಸರ್ಗಿಕ ಸೌಂದರ್ಯ, ಅದರ ಸಂಗೀತ ಮತ್ತು ನೃತ್ಯ ಸಂಪ್ರದಾಯಗಳ ಶ್ರೀಮಂತಿಕೆ, ಅಲ್ಲಿನ ಮಹಿಳೆಯರ ಸ್ವಾತಂತ್ರ್ಯ ಮತ್ತು ಆಗಲೂ ಕಂಡುಬರುತ್ತಿದ್ದ ರಾಜ್ಯದ ಮೂರು ಪ್ರಮುಖ ಜನಾಂಗೀಯ ಗುಂಪುಗಳಾದ ಮೈತೈಗಳು, ನಾಗಾಗಳು ಮತ್ತು ಕುಕಿಗಳ ನಡುವಿನ ಪೈಪೋಟಿಯ ಸಂಬಂಧಗಳನ್ನು ಗಮನಿಸಿದ ಬಳಿಕ ಈ ಆಸಕ್ತಿಯು ಇನ್ನಷ್ಟು ಹೆಚ್ಚಿತು.
ಇತಿಹಾಸಕಾರ ಮತ್ತು ಪ್ರವಾಸಿ ಇಬ್ಬರಿಗೂ ಉದ್ವಿಗ್ನತೆ ಕಂಡಿದ್ದರೂ, ಪ್ರಸಕ್ತ ಸಂಘರ್ಷದ ಪ್ರಮಾಣ ಮತ್ತು ತೀವ್ರತೆ ಹಿಂದೆಂದೂ ಇರದಷ್ಟಿದೆ ಮತ್ತು ಬಹುಶಃ ಅನಿರೀಕ್ಷಿತವಾದದ್ದಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಮೈತೈ ಬಂಡುಕೋರರು ಮತ್ತು ಕುಕಿ-ಜೋ ಬಂಡುಕೋರರು ಪರಸ್ಪರ ರಾಜಿ ಮಾಡಿಕೊಳ್ಳಲಾಗದ ಮಟ್ಟಿನ ಶತ್ರುಗಳಂತೆ ಕಾಣುತ್ತಿದ್ದಾರೆ. ಆನ್‌ಲೈನ್‌ಲ್ಲಿ ಸಿಗುವ ಹಿಂಸಾಚಾರದ ವಿವರಗಳಂತೂ ನಿಂದನೀಯ ಹೇಳಿಕೆಗಳಿಂದ ತುಂಬಿಹೋಗಿವೆ.
ಮಣಿಪುರದ ಬಿಕ್ಕಟ್ಟನ್ನು ಗೋದಿ ಮಾಧ್ಯಮವು ಮರೆಮಾಚಿದೆ ಮತ್ತು ನಿರ್ಲಕ್ಷಿಸಿದೆ ಎಂಬುದು ನಮಗೆ ಗೊತ್ತಿದೆ. ಅದೃಷ್ಟವಶಾತ್, Scroll ಮತ್ತು thewireನಂತಹ ಸ್ವತಂತ್ರ ವೆಬ್‌ಸೈಟ್‌ಗಳು, ಪ್ರತ್ಯಕ್ಷ ವರದಿಗಳ ಮೂಲಕ ಹಾಗೂ ವಿವಿಧ ಗುಂಪುಗಳ ಪ್ರತಿನಿಧಿಗಳ ಸಂದರ್ಶನಗಳ ಮೂಲಕ ಅಲ್ಲಿ ನಿಜವಾಗಿಯೂ ಏನಾಗುತ್ತಿದೆ ಎಂಬುದನ್ನು ನಮಗೆ ತಿಳಿಸಿವೆ. ರಾಜ್ಯದ ಎಲ್ಲಾ ಭಾಗಗಳ ಸಹೋದ್ಯೋಗಿಗಳ ಜೊತೆಗಿನ ಮಾತುಕತೆಗಳಿಂದ ನಾನು ಇಲ್ಲಿಯವರೆಗಿನ ಎಲ್ಲವನ್ನೂ ತಿಳಿದುಕೊಂಡಿದ್ದೇನೆ. ಈ ಮುಂದಿನ ವಿಶ್ಲೇಷಣೆ ಅವೆಲ್ಲ ಸಾಕ್ಷ್ಯಗಳನ್ನು ಆಧರಿಸಿದ್ದಾಗಿದೆ.
ಮೇ ೨೦೨೩ರ ಮೊದಲು ಕೂಡ ಕುಕಿಗಳು ಮತ್ತು ಮೈತೈಗಳು ಯಾವುದೇ ರೀತಿಯಲ್ಲಿ ಸಂಪೂರ್ಣ ಸಾಮರಸ್ಯದಿಂದ ಇದ್ದವರಲ್ಲ. ಅವರು ಧರ್ಮದಿಂದ ಭಿನ್ನರು. ಬಹುತೇಕ ಕುಕಿಗಳು ಕ್ರಿಶ್ಚಿಯನ್ನರು ಮತ್ತು ಮೈತೈಗಳಲ್ಲಿ ಹೆಚ್ಚಿನವರು ಹಿಂದೂಗಳು. ಕುಕಿಗಳು ಹೆಚ್ಚಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಾರೆ ಮತ್ತು ಮೈತೈಗಳ ಪ್ರಾಬಲ್ಯವಿರುವುದು ಇಂಫಾಲ ಕಣಿವೆಯಲ್ಲಿ. ಆಶ್ರಯ ನೀಡಿದ್ದೇವೆ ಎಂಬ ರೀತಿಯಲ್ಲಿ ಮೈತೈ ರಾಜಕಾರಣಿಗಳು ತಮ್ಮ ವಿಚಾರವಾಗಿ ತೋರಿಸಿಕೊಳ್ಳುವುದರ ಬಗ್ಗೆ ಕುಕಿಗಳು ಅಸಮಾಧಾನ ಹೊಂದಿದ್ದರೆ, ಕುಕಿಗಳು ಅನುಭವಿಸುತ್ತಿರುವ ಪರಿಶಿಷ್ಟ ಪಂಗಡದ ಸ್ಥಾನಮಾನವು ಸರಕಾರಿ ಉದ್ಯೋಗಗಳನ್ನು ಪಡೆಯಲು ಅವರಿಗೆ ಅನುಕೂಲಕರವಾಗಿದೆ ಎಂದು ಮೈತೈಗಳು ಕರುಬುತ್ತಾರೆ.
ನಮ್ಮ ದೇಶದಲ್ಲಿ ಅಂತರ್‌ಜಾತಿ ಮತ್ತು ಧರ್ಮಗಳ ನಡುವಿನ ಸಂಘರ್ಷ ಸಾಮಾನ್ಯವಲ್ಲ. ಹಾಗೆ ನೋಡಿದರೆ, ಅಂತಹ ಸಂಘರ್ಷವು ಸ್ವತಂತ್ರ ರಾಷ್ಟ್ರವಾದ ನಮ್ಮಲ್ಲಿನ ಒಂದು ನಿಯತ ಲಕ್ಷಣವೇ ಆಗಿದೆ. ಆದರೂ ಈ ಕಲಕಿದ ಇತಿಹಾಸದಲ್ಲಿನ ಮೈತೈ-ಕುಕಿ ಸಂಘರ್ಷವು ಹಿಂಸಾಚಾರದ ಪ್ರಮಾಣ ಮತ್ತು ವಿಶೇಷವಾಗಿ ಸಂಪೂರ್ಣ ಧ್ರುವೀಕರಣದ ಕಾರಣದಿಂದ ಎದ್ದು ಕಾಣಿಸುತ್ತದೆ. ಸ್ವತಂತ್ರ ಸಂಶೋಧಕರು ಸಂಗ್ರಹಿಸಿದ ಪುರಾವೆಗಳು, ಈ ಘರ್ಷಣೆಯಲ್ಲಿ ಸ್ವಲ್ಪ ಮಟ್ಟಿಗೆ ಅನನುಕೂಲತೆಯನ್ನು ಹೊಂದಿರುವವರು ಕುಕಿಗಳು ಎಂಬುದನ್ನು ತೋರಿಸುತ್ತವೆ. ಏಕೆಂದರೆ ರಾಜ್ಯದಲ್ಲಿ ಅಧಿಕಾರದ ನಿಯಂತ್ರಣ ಹೊಂದಿರುವವರು ಮೈತೈಗಳು. ಪೊಲೀಸರು ಮತ್ತು ಆಧಿಕಾರಿಗಳು ಮೈತೈ ರಾಜಕಾರಣಿಗಳ ಮಾತನ್ನೇ ಕೇಳುತ್ತಾರೆ. ಬಹಳಷ್ಟು ಚರ್ಚ್ ಗಳನ್ನು -ಒಂದು ಅಂದಾಜಿನ ಪ್ರಕಾರ ಇನ್ನೂರಕ್ಕೂ ಹೆಚ್ಚು ಚರ್ಚ್‌ಗಳನ್ನು ಸುಟ್ಟುಹಾಕಲಾಗಿರುವುದು ಈ ತಾರತಮ್ಯದ ಒಂದು ಲಕ್ಷಣವಾಗಿದೆ.
ಮೇ ೨೦೨೩ರ ಮೊದಲು ಮೈತೈಗಳು ಮತ್ತು ಕುಕಿಗಳ ನಡುವೆ ಇದ್ದ ಅಪನಂಬಿಕೆ ಸ್ವಲ್ಪ ಮಟ್ಟಿನದ್ದಾಗಿತ್ತು. ಆದರೆ ಆನಂತರ ಸಂಬಂಧವು ಸಂಪೂರ್ಣವಾಗಿ ವಿಷಮಯವಾಗಿದೆ. ಮೊದಲು, ಕುಕಿಗಳು ಇಂಫಾಲ ಕಣಿವೆಯಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ವಿಚಾರದಲ್ಲಿ, ಹಾಗೆಯೇ ಗುಡ್ಡಗಾಡು ಪ್ರದೇಶಗಳಲ್ಲಿ ಮೈತೈಗಳು ಕೆಲಸ ಮಾಡುವ ವಿಚಾರದಲ್ಲಿ ಪರಸ್ಪರ ಸಾಕಷ್ಟು ಸಹಿಷ್ಣುತೆ ಇತ್ತು. ಈಗ ಭಯದಿಂದಾಗಿ ಕುಕಿಗಳು ಕಣಿವೆಯನ್ನೂ, ಮೈತೈಗಳು ಗುಡ್ಡಗಾಡು ಪ್ರದೇಶವನ್ನೂ ಸಂಪೂರ್ಣವಾಗಿ ತೊರೆಯುವುದರೊಂದಿಗೆ, ಜನಾಂಗೀಯ ಬೇರ್ಪಡುವಿಕೆ ಬಹುತೇಕ ಮುಗಿದಂತಾಗಿದೆ.
ಈ ದುರಂತದ ಸ್ಥಿತಿಗೆ ಮೂವರು ವ್ಯಕ್ತಿಗಳು ಪ್ರಮುಖವಾಗಿ ಹೊಣೆಯನ್ನು ಹೊರಬೇಕು. ಮೊದಲನೆಯದಾಗಿ, ಮಣಿಪುರದ ಮುಖ್ಯಮಂತ್ರಿ. ಅವರು ಸ್ಪಷ್ಟವಾಗಿ ಪಕ್ಷಪಾತಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ವಾಲುವಿಕೆ ಮೈತೈಗಳ ಕಡೆಗೆ. ಬಿರೇನ್ ಸಿಂಗ್ ನೇತೃತ್ವದ ಸರಕಾರದ ಸೈದ್ಧಾಂತಿಕ ಪಕ್ಷಪಾತಕ್ಕೆ ಅದರ ಆಡಳಿತಾತ್ಮಕ ಸಾಮರ್ಥ್ಯದ ಕೊರತೆಯೂ ಕಾರಣ. ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯಂತೆ, ಸಂಘರ್ಷವು ಭುಗಿಲೆದ್ದ ಸ್ವಲ್ಪ ಸಮಯದ ನಂತರ ಬಂಡುಕೋರ ಗುಂಪುಗಳು ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲು ರಾಜ್ಯ ಸರಕಾರವು ಅವಕಾಶ ಮಾಡಿಕೊಟ್ಟಿತು ಮತ್ತು ಬಹುಶಃ ಪ್ರೋತ್ಸಾಹಿಸಿತು. ಈಗ ಆರು ತಿಂಗಳುಗಳು ಕಳೆದಿವೆ ಮತ್ತು ಈವರೆಗೆ ಈ ಲೂಟಿಯಾದ ಶಸ್ತ್ರಾಸ್ತ್ರಗಳ ಒಂದು ಸಣ್ಣ ಶೇಕಡಾವಾರು ಭಾಗವನ್ನು ಮಾತ್ರ ಸರಕಾರ ವಶಪಡಿಸಿಕೊಂಡಿದೆ.
ಮಣಿಪುರದಲ್ಲಿನ ದುರಂತಕ್ಕೆ ಎರಡನೇ ಹೊಣೆ ಕೇಂದ್ರ ಗೃಹ ಸಚಿವರು. ರಾಜ್ಯಕ್ಕೆ ಒಮ್ಮೆ ನೆಪಮಾತ್ರದ ಭೇಟಿ ನೀಡಿದ್ದು ಬಿಟ್ಟರೆ ಹಿಂಸಾಚಾರವನ್ನು ತಡೆಯಲು ಅವರು ಮಹತ್ತರವಾದ ಏನನ್ನೂ ಮಾಡಲಿಲ್ಲ. ಬದಲಾಗಿ ವಿಧಾನಸಭೆ ಚುನಾವಣೆಗಳು ನಡೆಯುತ್ತಿರುವ ಇತರ ರಾಜ್ಯಗಳ ಮತದಾರರ ಧ್ರುವೀಕರಣಕ್ಕೆ ತಮ್ಮ ಸಮಯ ಮತ್ತು ಶಕ್ತಿಯನ್ನು ವ್ಯಯಿಸಿದ್ದಾರೆ. ಮೂರನೆಯ ಹೊಣೆಗಾರರು ಪ್ರಧಾನಿ. ಅವರು ಮಣಿಪುರಕ್ಕೆ ಭೇಟಿ ನೀಡಲೇ ಇಲ್ಲ. ಮುಖ್ಯಮಂತ್ರಿ ಮತ್ತು ತಮ್ಮ ಗೃಹ ಸಚಿವರಿಗೆ ಬಿಕ್ಕಟ್ಟನ್ನು ಪರಿಹರಿಸಲು ಏನನ್ನೂ ಮಾಡಲು ಸಾಧ್ಯವಾಗದ ಹಾಗೆ ಎಲ್ಲವನ್ನೂ ಮಾಡಲು ಮುಕ್ತ ಅಧಿಕಾರ ಕೊಡುತ್ತಿದ್ದಾರೆ. ಇದು ಅಸೂಕ್ಷ್ಮತೆ ಅಥವಾ ದುರಹಂಕಾರದಿಂದ ಹುಟ್ಟಿಕೊಂಡಿದ್ದು, ಮಣಿಪುರದ ಜನರ ಬಗೆಗಿನ ಈ ಎದ್ದುಕಾಣುವ ಅನಾಸಕ್ತಿ ಭಾರತದ ಪ್ರಧಾನಿಗೆ ತಕ್ಕದ್ದಲ್ಲ. ಕಣಿವೆ ಮತ್ತು ಗುಡ್ಡಗಾಡು ಪ್ರದೇಶಗಳೆರಡಕ್ಕೂ ಭೇಟಿ ನೀಡುವುದರೊಂದಿಗೆ ನರೇಂದ್ರ ಮೋದಿ ರಾಜ್ಯ ಪ್ರವಾಸ ಮಾಡಿದ್ದಿದ್ದರೆ, ಅವರು ಮಣಿಪುರಿಗಳ ಬಗ್ಗೆ - ಮೈತೈಗಳು, ಕುಕಿಗಳು ಅಥವಾ ಯಾರೇ ಆಗಿರಲಿ - ಕಾಳಜಿ ಹೊಂದಿದ್ದಾರೆ ಎಂಬ ಸಂದೇಶವೊಂದು ಹೋಗುತ್ತಿತ್ತು. ಸಾಮಾಜಿಕ ಸಾಮರಸ್ಯದ ಮೊದಲ ಹೆಜ್ಜೆಯಾಗಿ ಎರಡೂ ಸಮುದಾಯಗಳ ನಾಯಕರ ನಡುವೆ ಮಾತುಕತೆಯನ್ನು ಪ್ರಾರಂಭಿಸಲು ಅದರಿಂದ ಸಾಧ್ಯವಾಗುತ್ತಿತ್ತು.
ಬಿರೇನ್ ಸಿಂಗ್ ನಡೆಗೆ, ಮೈತೈ ಪ್ರಾಬಲ್ಯವನ್ನು ಪ್ರಚೋದಿಸುವ ಮೂಲಕ ತಾನು ಅಧಿಕಾರದಲ್ಲಿರಲು ಸಾಧ್ಯ ಎಂದು ಅವರು ನಂಬಿರುವುದು ಕಾರಣವಾಗಿರಬಹುದು. ಆದರೆ ಅಮಿತ್ ಶಾ ಮತ್ತು ನರೇಂದ್ರ ಮೋದಿಯವರು ಮಣಿಪುರ ಮತ್ತು ಮಣಿಪುರಿಗಳನ್ನು ಏಕೆ ಅಪ್ರಜ್ಞಾಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ? ಮೊದಲ ಹೆಜ್ಜೆಯಾಗಬೇಕಿದ್ದ ಬಿರೇನ್ ಸಿಂಗ್ ಅವರ ವಜಾಗೊಳಿಸುವಿಕೆ ಕ್ರಮಕ್ಕೆ ಮುಂದಾಗದಿರುವುದಕ್ಕೆ ದೌರ್ಬಲ್ಯವನ್ನು ಒಪ್ಪಿಕೊಂಡಂತಾಗುತ್ತದೆ ಎಂಬುದು ಕಾರಣವೇ? ಕುಕಿಗಳು ಕೆಟ್ಟವರಾಗಿ ಕಾಣುವಂತೆ ಮಾಡುವುದು, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಹಿಂದೂ ಮತಗಳನ್ನು ಕ್ರೋಡೀಕರಿಸಲು ಸಹಾಯ ಮಾಡುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿದೆಯೇ? ಅಥವಾ ಇದು ಕೇವಲ ಶ್ರೇಣಿಯ ಅಸಮರ್ಥತೆಯೇ? ಏಕೆಂದರೆ, ಅವರ ಪ್ರತಿಪಾದಿತ ಹೀರೋ ಸರ್ದಾರ್ ವಲ್ಲಭಭಾಯಿ ಪಟೇಲ್‌ಗಿಂತ ಭಿನ್ನವಾಗಿ, ಮೋದಿ ಮತ್ತು ಶಾ ಪ್ರಚಾರ ಮತ್ತು ಸ್ವಯಂ ಪ್ರಚಾರದಲ್ಲಿ ಬಹುಮಟ್ಟಿಗೆ ಪರಿಣತರಾಗಿದ್ದಾರೆ. ಅವರಲ್ಲಿ ಬುದ್ಧಿವಂತಿಕೆಯಿಂದ ನಿಭಾಯಿಸುವ ಅಥವಾ ಕಾಳಜಿ ಮತ್ತು ತಿಳುವಳಿಕೆಯಿಂದ ಆಡಳಿತ ನಡೆಸುವ ಪಟೇಲರ ಸಾಮರ್ಥ್ಯದ ಕೊರತೆಯಿದೆ.
ಕಳೆದ ಕೆಲವು ತಿಂಗಳುಗಳಲ್ಲಿ, ರಾಜಸ್ಥಾನ, ತೆಲಂಗಾಣ ಮತ್ತು ಇತರ ರಾಜ್ಯಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದಾಗ ಗೃಹ ಸಚಿವರು ಮತ್ತು ಪ್ರಧಾನ ಮಂತ್ರಿಗಳು ಇತರೆಲ್ಲ ವಿಚಾರಗಳ ಬಗ್ಗೆ ಭಾರೀ ಮಾತನಾಡಿದರೂ, ಮಣಿಪುರದ ಬಗ್ಗೆ ವ್ಯವಸ್ಥಿತ ಮೌನವನ್ನು ಪಾಲಿಸಿದರು. ಕುತೂಹಲಕಾರಿ ವಿಷಯವೆಂದರೆ, ಆರೆಸ್ಸೆಸ್‌ನ ಸರಸಂಘಚಾಲಕರು ತಮ್ಮ ವಾರ್ಷಿಕ ವಿಜಯದಶಮಿ ಭಾಷಣದಲ್ಲಿ ಮಣಿಪುರದ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದ್ದು. ತಮ್ಮ ಭಾಷಣದಲ್ಲಿ ಅವರು ಹೇಳಿದ್ದು: ‘‘ಇಷ್ಟು ದಿನ ಒಟ್ಟಿಗೆ ವಾಸಿಸುತ್ತಿದ್ದ ಮೈತೈಗಳು ಮತ್ತು ಕುಕಿಗಳು ಏಕೆ ಇಷ್ಟೊಂದು ಸಂಘರ್ಷದಲ್ಲಿದ್ದಾರೆ? ಇದರಿಂದ ಯಾರಿಗೆ ಲಾಭ? ಯಾವುದೇ ಹೊರಗಿನ ಶಕ್ತಿಗಳು ಇದ್ದವೇ? ಬಲಿಷ್ಠ ಸರಕಾರವಿದೆ. (ಕೇಂದ್ರ) ಗೃಹ ಸಚಿವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಆದರೂ, ಎಲ್ಲ ಶಾಂತವಾಗಿದೆ ಎನ್ನುವಾಗ, ಕೆಲವು ದುರಂತಗಳು ಸಂಭವಿಸುತ್ತವೆ. ಈ ಜನರು ಯಾರು? ಇದರ ಹಿಂದೆ ಪ್ರಚೋದನೆಯಿದೆ.’’
ಮೋಹನ್ ಭಾಗವತ್ ಅವರ ಭಾಷಣದ ಮೊದಲು ಮತ್ತು ನಂತರ, ಮಣಿಪುರ ಬಿಕ್ಕಟ್ಟಿಗೆ ‘ವಿದೇಶಿ ಕೈವಾಡ’ ಕಾರಣ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಿಂದುತ್ವದ ಹ್ಯಾಂಡಲ್‌ಗಳ ಮೂಲಕ ಪ್ರಬಲವಾಗಿ ಪ್ರಚಾರ ಮಾಡಲಾಗಿದೆ. ಕುಕಿಗಳು ಹೆಚ್ಚಾಗಿ ಕ್ರಿಶ್ಚಿಯನ್ ಆಗಿರುವುದರಿಂದ ಅವರು ನಿಜವಾದ ಭಾರತೀಯರಂತಲ್ಲ, ಆದರೆ ಮೈತೈಗಳು ಹೆಚ್ಚಾಗಿ ಹಿಂದೂಗಳಾಗಿರುವುದರಿಂದ ದೃಢ ಮತ್ತು ವಿಶ್ವಾಸಾರ್ಹ ದೇಶಭಕ್ತರಾಗಿದ್ದಾರೆ ಎಂದು ಹೇಳುವುದು ನಡೆದಿದೆ. ಈ ವಾದಗಳು ಸುಳ್ಳು ಮತ್ತು ವಿನಾಶಕಾರಿ. ಹಿಂದುತ್ವ ಸಿದ್ಧಾಂತಗಳು ಇಂಫಾಲ ಮತ್ತು ಹೊಸದಿಲ್ಲಿಯಲ್ಲಿ ತಮ್ಮದೇ ನಾಯಕರ ತಪ್ಪುಗಳನ್ನು ಮರೆಮಾಚುವುದಕ್ಕಾಗಿ ಕುಕಿಗಳನ್ನು ಕೆಣಕಲು ಬಯಸುತ್ತವೆ.
ಮಣಿಪುರದ ಬಿಕ್ಕಟ್ಟು ಇಷ್ಟು ತಿಂಗಳು ಮುಂದುವರಿದಿರುವುದು, ಅದು ಶಮನವಾಗುವ ಯಾವುದೇ ಲಕ್ಷಣ ಮೇಲ್ನೋಟಕ್ಕೆ ಕಾಣದಿರುವುದು ಈ ಡಬಲ್ ಇಂಜಿನ್ ಸರಕಾರದ ಸಂಪೂರ್ಣ ವೈಫಲ್ಯದ ಸಂಕೇತವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಹುಮತದ ಹೊರತಾಗಿಯೂ, ಕಾನೂನು ಮತ್ತು ಸುವ್ಯವಸ್ಥೆ, ಪೊಲೀಸ್ ಮತ್ತು ಅರೆಸೇನಾಪಡೆಯ ನಿಯಂತ್ರಣದ ಹೊರತಾಗಿಯೂ, ಮೋದಿ-ಶಾ ಆಡಳಿತವು ಮಣಿಪುರ ಮತ್ತು ಮಣಿಪುರಿಗಳನ್ನು ಈ ದುಸ್ಥಿತಿಗೆ ತಂದಿದೆ. ಮೋಹನ್ ಭಾಗವತ್ ಅವರು ತಮ್ಮ ಸಹವರ್ತಿ ಆರೆಸ್ಸೆಸ್ ಪ್ರಚಾರಕರಿಂದ ನಡೆಸಲ್ಪಡುವ ಸರಕಾರವು ಬಲಿಷ್ಠವಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೂ ಇದನ್ನು ಅಸಮರ್ಥತೆ ಮತ್ತು ದುರುದ್ದೇಶಪೂರಿತ ಎಂದು ಹೇಳುವುದು ಹೆಚ್ಚು ಸೂಕ್ತ. ಕಾನೂನು ಮತ್ತು ಸುವ್ಯವಸ್ಥೆಯನ್ನು ಖಾಸಗಿಯವರಿಗೆ ಹೊರಗುತ್ತಿಗೆ ನೀಡುವುದನ್ನು ತಡೆಯುವಲ್ಲಿ ಈ ಸರಕಾರದ ಅಸಮರ್ಥತೆ ಕಾಣಿಸುತ್ತದೆ. ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲ್ಲುವ ತನ್ನ ಅವಕಾಶವನ್ನು ಹೆಚ್ಚಿಸಲು ಗಡಿ ರಾಜ್ಯದಲ್ಲಿ ಬಹುಸಂಖ್ಯಾತ ಅಜೆಂಡಾವನ್ನು ಪ್ರಚೋದಿಸುತ್ತಿರುವುದು ಅದರ ದುರುದ್ದೇಶ.