ಪ್ರಧಾನಿಯಾಗಿ ಸಿಂಗ್
‘‘ಜೀವಂತ ಇರುವವರಿಗೆ ನಾವು ಗೌರವ ಸಲ್ಲಿಸಬೇಕು. ಆದರೆ ಮೃತರ ಬಗ್ಗೆ ಸತ್ಯವನ್ನೇ ಹೇಳಬೇಕು.’’
-ವೋಲ್ಟೇರ್
2014ರಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ಸ್ವಲ್ಪ ಸಮಯದ ಮೊದಲು ಮನಮೋಹನ್ ಸಿಂಗ್ ಅವರು, ಮಾಧ್ಯಮಗಳಿಗಿಂತಲೂ ಇತಿಹಾಸವು ತಮ್ಮ ಬಗ್ಗೆ ಹೆಚ್ಚು ಉದಾರವಾಗಿ ನಿರ್ಣಯಿಸಲಿದೆ ಎಂದು ಹೇಳಿದ್ದರು. ಈಗ, ಸಿಂಗ್ ಅವರ ನಿಧನದ ನಂತರ ಅವರಿಗೆ ಸಲ್ಲಿಸಲಾದ ಪ್ರಶಂಸಾತ್ಮಕ ಗೌರವಗಳ ಸುರಿಮಳೆಯ ಬಗ್ಗೆ ಓದಿದಾಗ, ಈ ಇತಿಹಾಸಕಾರನಿಗೆ ಅಚ್ಚರಿಯಾಗುತ್ತಿದೆ. ಈ ಶ್ಲಾಘನೆಗಳು ಸಂಪೂರ್ಣವಾಗಿ ಅರ್ಹವೇ? ಅವರು ಈಗ ಹೇಳಲಾಗುತ್ತಿರುವಷ್ಟು ಬುದ್ಧಿವಂತ, ಸರ್ವಜ್ಞ ಮತ್ತು ಸ್ಪಷ್ಟವಾಗಿ ದೋಷರಹಿತ ರಾಜಕಾರಣಿಯಾಗಿದ್ದರೆ?
ಮನಮೋಹನ್ ಸಿಂಗ್ ಅವರ ವೃತ್ತಿಜೀವನದಲ್ಲಿ ಮೂರು ವಿಭಿನ್ನ ಹಂತಗಳಿದ್ದವು: ವಿದ್ವಾಂಸ, ಸರಕಾರದಲ್ಲಿ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿ. ಹೆಚ್ಚಿನ ಮೌಲ್ಯಮಾಪನಗಳು ಎರಡನೇ ಹಂತದ ಮೇಲೆ ಮತ್ತು ವಿಶೇಷವಾಗಿ ಹಣಕಾಸು ಸಚಿವರಾಗಿ ಅವರ ಅಧಿಕಾರಾವಧಿಯ ಮೇಲೆ ಕೇಂದ್ರೀಕೃತವಾಗಿವೆ. ಅವರು ಲೈಸೆನ್ಸ್ ರಾಜ್ ಅನ್ನು ಕಿತ್ತುಹಾಕುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಭಾರತದ ಆರ್ಥಿಕತೆಯನ್ನು ಮೂರು ದಶಕಗಳ ಸ್ಥಿರತೆಗೆ, ಉದ್ಯಮಶೀಲತೆಯ ಉಲ್ಬಣಕ್ಕೆ ಮತ್ತು ಸಾಮೂಹಿಕ ಬಡತನಕ್ಕೆ ಕಾರಣವಾಗಿದ್ದ ನಿಯಂತ್ರಣಗಳಿಂದ ಮುಕ್ತಗೊಳಿಸಿದ್ದು ನಿಜಕ್ಕೂ ಒಂದು ಪ್ರಮುಖ ಸಾಧನೆಯಾಗಿದೆ. ಇದಕ್ಕಾಗಿ ಸಿಂಗ್ ಅವರನ್ನು ಸರಿಯಾಗಿಯೇ ಹೊಗಳಲಾಗುತ್ತಿದೆ. ಆದರೆ ಅವರ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಬೆಂಬಲವನ್ನು ಮರೆಯಬಾರದು. ಅವರು ಚುನಾವಣೆಯಲ್ಲಿ ಗೆದ್ದಿರದ ಅರ್ಥಶಾಸ್ತ್ರಜ್ಞರನ್ನು ಸಂಪುಟಕ್ಕೆ ಕರೆತಂದರು ಮತ್ತು (ಕಾಂಗ್ರೆಸ್ ಪಕ್ಷದೊಳಗಿನ ಕೆಲವರು ಸೇರಿದಂತೆ) ಪ್ರತಿಕೂಲ ರಾಜಕಾರಣಿಗಳ ವಿರುದ್ಧ ರಕ್ಷಣೆ ನೀಡಿದರು. ಸಿಂಗ್ ಅವರೊಂದಿಗೆ ಮತ್ತು ಅವರ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಇಂದು ಸರಕಾರದಲ್ಲಿ ಕಳಪೆಯಾಗಿ ಕಾರ್ಯನಿರ್ವಹಿಸುವ ಕೆಲವು ಅತ್ಯಂತ ಸಮರ್ಥ ಅರ್ಥಶಾಸ್ತ್ರಜ್ಞರು ಮತ್ತು ನಾಗರಿಕ ಸೇವಕರೂ ಇದ್ದರು.
ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿ ತಮ್ಮ ಕೊಡುಗೆಗಳನ್ನು ನೀಡುವಂತಾದದ್ದು ಆಕಸ್ಮಿಕ. ಭಾರತವು ವಿದೇಶಿ ವಿನಿಮಯ ಬಿಕ್ಕಟ್ಟನ್ನು ಎದುರಿಸಿತು. ರಾಜೀವ್ ಗಾಂಧಿಯವರ ಹತ್ಯೆಯು ರಾವ್ ಅವರನ್ನು ಪ್ರಧಾನಿಯಾಗಲು ಅವಕಾಶ ಮಾಡಿಕೊಟ್ಟಿತು. ಹಣಕಾಸು ಮಂತ್ರಿ ಹುದ್ದೆಗೆ ರಾವ್ ಮೊದಲು ಆಯ್ಕೆ ಮಾಡಿದ ವ್ಯಕ್ತಿ (ಐ.ಜಿ. ಪಟೇಲ್) ಅದನ್ನು ನಿರಾಕರಿಸಿದ್ದರು. ಮತ್ತೊಂದೆಡೆ, ಅವರಿಗೆ ಅವರವೇ ಆದ ಶೈಕ್ಷಣಿಕ ಅರ್ಹತೆಗಳಿದ್ದವು. ಅವರು ಸಾಧಿಸಿದ ಸಾಧನೆಯ ಮಟ್ಟವನ್ನು ಪ್ರಶಂಸಿಸಲು ಅವರ ವೈಯಕ್ತಿಕ ಹಾದಿಯನ್ನು ಕೇಂಬ್ರಿಡ್ಜ್ ಸಮಕಾಲೀನರಾದ ಅಮರ್ತ್ಯ ಸೇನ್ ಮತ್ತು ಜಗದೀಶ್ ಭಗವತಿ ಅವರ ಹಾದಿಯೊಂದಿಗೆ ಹೋಲಿಸಬೇಕು. ಸೇನ್ ಮತ್ತು ಭಗವತಿ ಬೌದ್ಧಿಕ ಶ್ರೀಮಂತ ವರ್ಗದಲ್ಲಿ ಜನಿಸಿದ್ದವರು. ಸೇನ್ ರವೀಂದ್ರನಾಥ ಟಾಗೋರ್‌ಗೆ ಹತ್ತಿರವಿರುವ ವಿದ್ವಾಂಸರ ಕುಟುಂಬದಿಂದ ಬಂದವರು - ವಾಸ್ತವವಾಗಿ, ಅವರಿಗೆ ‘ಅಮರ್ತ್ಯ’ ಎಂದು ಹೆಸರಿಟ್ಟವರೇ ಟಾಗೋರ್. ಭಗವತಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಮಗ. ಅವರಿಗಿದ್ದ ಸಾಮಾಜಿಕ ಸವಲತ್ತು ಸಹಜವಾಗಿಯೇ ಅವರನ್ನು ಕೇಂಬ್ರಿಡ್ಜ್‌ಗೆ ತಲುಪಿಸಿತ್ತು. ಮತ್ತೊಂದೆಡೆ, ಸಾಧಾರಣ ಕುಟುಂಬ ಹಿನ್ನೆಲೆ ಮತ್ತು ವಿಭಜನೆಯ ಸಮಯದಲ್ಲಿ ಅವರು ಅನುಭವಿಸಿದ ಆಘಾತಗಳನ್ನು ಗಮನಿಸಿದರೆ, ಸಿಂಗ್ ಯಾವುದೇ ದೊಡ್ಡ ಪಾಶ್ಚಿಮಾತ್ಯ ವಿಶ್ವವಿದ್ಯಾಲಯಕ್ಕೆ ಹೋಗಬೇಕಾಗಿರಲಿಲ್ಲ. ಆದರೂ ಅವರು ಹೋದರು. ಆಕ್ಸ್‌ಫರ್ಡ್‌ನಲ್ಲಿ ಡಿ. ಫಿಲ್. ಪಡೆಯುವ ಮೊದಲು ಕೇಂಬ್ರಿಡ್ಜ್‌ನಲ್ಲಿ ಅರ್ಥಶಾಸ್ತ್ರದಲ್ಲಿ ಮೊದಲ ಪದವಿ ಪಡೆದರು.
ಸೇನ್ ಮತ್ತು ಭಗವತಿ ತಮ್ಮ ವೃತ್ತಿಜೀವನದ ಬಹುಪಾಲು ಸಮಯವನ್ನು ವಿದೇಶದಲ್ಲಿ ಕಳೆದಿದ್ದಾರೆ. ಸಿಂಗ್ ಕೂಡ ಹಾಗೆ ಮಾಡಬಹುದಿತ್ತು. ಆದರೆ ಅವರು ತಮ್ಮ ತಾಯ್ನಾಡನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಳ್ಳಲು ಆಯ್ಕೆ ಮಾಡಿಕೊಂಡರು. ಅವರು ಪಂಜಾಬ್ ಮತ್ತು ದಿಲ್ಲಿಯಲ್ಲಿ ವಿಶ್ವವಿದ್ಯಾನಿಲಯದ ಶಿಕ್ಷಕರಾಗಿ ಸುಮಾರು ಒಂದು ದಶಕವನ್ನು ಕಳೆದರು ಮತ್ತು ಇನ್ನೂ ಒಂದೂವರೆ ದಶಕಗಳ ಕಾಲ ಸರಕಾರದಲ್ಲಿ ಕೆಲಸ ಮಾಡಿದರು. ಹಣಕಾಸು ಕಾರ್ಯದರ್ಶಿ, ರಿಸರ್ವ್ ಬ್ಯಾಂಕಿನ ಗವರ್ನರ್ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಂತಹ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದರು.
ಮನಮೋಹನ್ ಸಿಂಗ್ ಅವರಿಗೆ ಇತ್ತೀಚೆಗೆ ಸಲ್ಲಿಸಲಾದ ಗೌರವಗಳು ಸರಕಾರದಲ್ಲಿ ಆರ್ಥಿಕ ಸುಧಾರಕರಾಗಿ ಅವರ ವೃತ್ತಿಜೀವನದ ಮೇಲೆ ಕೇಂದ್ರೀಕೃತವಾಗಿವೆ. ವಿದ್ವಾಂಸ ಮತ್ತು ಶಿಕ್ಷಕರಾಗಿ ಅವರ ಕೆಲಸಕ್ಕೆ ಅವರು ಸ್ವಲ್ಪ ಗಮನ ನೀಡಿದ್ದರೂ, ಅವರ ರಾಜಕೀಯ ಪರಂಪರೆಯನ್ನು ಹೆಚ್ಚಾಗಿ ಮರೆಮಾಡಿದ್ದಾರೆ. 1991 ಮತ್ತು 1996ರ ನಡುವೆ ಸಿಂಗ್ ಅವರನ್ನು ರಾಜಕೀಯಕ್ಕೆ ದಾರಿ ತಪ್ಪಿ ಬಂದ ನೀತಿ ಅರ್ಥಶಾಸ್ತ್ರಜ್ಞರೆಂದು ಪರಿಗಣಿಸಬಹುದು. ಆದರೂ, 1996ರ ನಂತರ ಅವರು ಪೂರ್ಣಾವಧಿ ರಾಜಕಾರಣಿಯಾದರು. ಇದರಲ್ಲಿ, 2004ರಿಂದ 2014ರವರೆಗೆ ಅವರು ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಹತ್ತು ವರ್ಷಗಳು ಅತ್ಯಂತ ಮಹತ್ವದ್ದಾಗಿವೆ.
ಆಗಿನ ಪ್ರಧಾನಿಯ ಕೃಪೆಯ ಮೂಲಕ ಸಿಂಗ್ ಹಣಕಾಸು ಸಚಿವರಾದರು ಮತ್ತು ಅವರು ತಮ್ಮ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಕೃಪೆಯ ಮೂಲಕ ಆಕಸ್ಮಿಕವಾಗಿಯೇ ಪ್ರಧಾನಿಯಾದರು. ಪ್ರಧಾನಿಯಾಗಿ ತಮ್ಮ ಮೊದಲ ಅವಧಿಯಲ್ಲಿ ಸಿಂಗ್ ತಮ್ಮನ್ನು ತಾವು ಸ್ವಲ್ಪ ಮಟ್ಟಿಗೆ ದೋಷಮುಕ್ತಗೊಳಿಸಿಕೊಂಡರು. ಜಾತ್ಯತೀತ ಮನಸ್ಸಿನ ಸಿಖ್ ಚುಕ್ಕಾಣಿ ಹಿಡಿದಿದ್ದರಿಂದ ಗುಜರಾತ್‌ನಲ್ಲಿ ಮುಸ್ಲಿಮ್ ವಿರೋಧಿ ಹತ್ಯಾಕಾಂಡದ ನಂತರ ಬಂದ ಜನಾಂಗೀಯ ಉದ್ವಿಗ್ನತೆಗಳು ತಗ್ಗಿದವು. ಆರ್ಥಿಕತೆಯು ಸ್ಥಿರವಾಗಿ ಬೆಳೆಯಿತು. ಇದು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸಲು ಸಹಾಯ ಮಾಡಿತು. ಮೂಲಭೂತ ವಿಜ್ಞಾನದಲ್ಲಿ ಸಂಶೋಧನೆಗೆ ಉತ್ತೇಜನ ದೊರೆಯಿತು ಮತ್ತು ಅಮೆರಿಕದೊಂದಿಗೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಲಾಯಿತು.
2009ರಲ್ಲಿ ನಾನು ಹೊಸದಿಲ್ಲಿಯಲ್ಲಿ ಒಂದು ತಿಂಗಳು ಕಳೆದೆ. ನಾನು ಪ್ರಧಾನಿಯೊಂದಿಗೆ ಸಭೆ ನಡೆಸಿದ್ದೆ. ಮುಖ್ಯವಾಗಿ, ಸರಕಾರದ ಒಳಗೆ ಮತ್ತು ಹೊರಗೆ ಅವರಿಗೆ ಹತ್ತಿರವಿರುವ ಜನರೊಂದಿಗೆ ನಾನು ಮಾತುಕತೆ ನಡೆಸಿದ್ದೆ. ಅವರ ವಯಸ್ಸು ಮತ್ತು ಆಗಷ್ಟೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂಬ ಅಂಶವನ್ನು ಗಮನಿಸಿ, ಸಿಂಗ್ ಮುಂದಿನ ಸಾರ್ವತ್ರಿಕ ಚುನಾವಣೆಗಳಿಗೆ ಮೊದಲು ಸಾರ್ವಜನಿಕ ಬದುಕಿನಿಂದ ಗೌರವಯುತವಾಗಿ ನಿರ್ಗಮಿಸಬೇಕು ಎಂದು ಅವರೆಲ್ಲರೂ ಭಾವಿಸಿದ್ದರು. ಸಿಂಗ್ ಅಧಿಕಾರದಲ್ಲಿ ಉಳಿಯಲು ಬಯಸಿದರೆ, ಅವರು ಲೋಕಸಭಾ ಸ್ಥಾನವನ್ನು ಗೆದ್ದರೆ ಅದು ಅವರ ವಿಶ್ವಾಸಾರ್ಹತೆಯನ್ನು ಬಲಪಡಿಸುತ್ತದೆ ಎಂದು ಒಬ್ಬ ಅಭಿಮಾನಿ ಹೇಳಿದ್ದರು (ಅದನ್ನು ಅವರು ಪಂಜಾಬ್‌ನಿಂದ ಸುಲಭವಾಗಿ ಮಾಡಬಹುದಿತ್ತು).
ಈ ಸಂದರ್ಭದಲ್ಲಿ, ಸಿಂಗ್ ರಾಜ್ಯಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದರು. ಮೊದಲ ಅವಧಿಯಲ್ಲಿಯೂ ಅವರು ಅಗತ್ಯಕ್ಕಿಂತ ಮೀರಿ ಪಕ್ಷಾಧ್ಯಕ್ಷರಿಗೆ ವಿಧೇಯರಾಗಿದ್ದುದನ್ನು ತೀಕ್ಷ್ಣ ದೃಷ್ಟಿಯ ವಿಮರ್ಶಕರು ಗಮನಿಸಿದ್ದರು. ಈಗ ಗೌರವ ಇನ್ನಷ್ಟು ಹೆಚ್ಚಾಯಿತು ಮತ್ತು ಅದು ಅವರ ವೈಯಕ್ತಿಕ ಮತ್ತು ರಾಜಕೀಯ ನಿಲುವಿಗೆ ಹೆಚ್ಚು ಹಾನಿಕಾರಕವಾಯಿತು. ಏತನ್ಮಧ್ಯೆ, ಅವರ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬರುವುದಕ್ಕೆ ಶುರುವಾದವು. ಕೆಲವು ಆರೋಪಗಳು (ಉದಾಹರಣೆಗೆ ಸಿಎಜಿ ವರದಿಯಿಂದ ಬಂದಿರುವ ಆರೋಪಗಳು) ಹೆಚ್ಚಾಗಿ ಹುಸಿಯಾಗಿದ್ದರೂ, ಇನ್ನು ಕೆಲವು ಆರೋಪಗಳಲ್ಲಿ ಬಹುಶಃ ಹೆಚ್ಚು ಸತ್ಯವಿತ್ತು.
ಪ್ರಧಾನಿಯಾಗಿ, ಮನಮೋಹನ್ ಸಿಂಗ್ ಅವರು ತಮ್ಮ ಮಾತು ಕೇಳದ ಕ್ಯಾಬಿನೆಟ್ ಮಂತ್ರಿಗಳ ವಿರುದ್ಧ ತಮ್ಮ ಅಧಿಕಾರವನ್ನು ಚಲಾಯಿಸಲು ಹಿಂಜರಿಯುತ್ತಿದ್ದರು. ತಮ್ಮ ಮೊದಲ ಅವಧಿಯಲ್ಲಿ ಅವರು ಕೆಲವು ಅತ್ಯುತ್ತಮ ಸದಸ್ಯರನ್ನು ಹೊಂದಿರುವ ಜ್ಞಾನ ಆಯೋಗವನ್ನು ನೇಮಿಸಿದರು. ಆದರೆ ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಅವರಿಗೆ ಅದನ್ನು ಹಲ್ಲಿಲ್ಲದಂತೆ ಮಾಡಲು ಅವಕಾಶ ಮಾಡಿಕೊಟ್ಟರು. ತಮ್ಮ ಎರಡನೇ ಅವಧಿಯಲ್ಲಿ ಅವರು ಪ್ರಣವ್ ಮುಖರ್ಜಿ ಅವರಿಗೆ ಹಣಕಾಸು ಸಚಿವರಾಗಿ ವಿಸ್ತೃತ ಅಧಿಕಾರವನ್ನು ನೀಡಿದರು. ಮುಖರ್ಜಿ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತ ಅನುಭವಿಸಿದ್ದ ಸ್ಥಾನಮಾನವನ್ನು ಕುಗ್ಗಿಸಿದರು. ಉದಾರೀಕರಣ ಪ್ರಾರಂಭವಾದಾಗಿನಿಂದ ಅವರನ್ನು ಅತ್ಯಂತ ಕೆಟ್ಟ ಹಣಕಾಸು ಮಂತ್ರಿ ಎಂದು ಬಣ್ಣಿಸಲಾಯಿತು.
ಮನಮೋಹನ್ ಸಿಂಗ್ ಅವರಿಗೆ ಅರ್ಜುನ್ ಸಿಂಗ್ ಅವರಿಗಿಂತ ಪಾಂಡಿತ್ಯದ ಬಗ್ಗೆ ಹೆಚ್ಚು ತಿಳಿದಿತ್ತು ಮತ್ತು ಮುಖರ್ಜಿ ಅವರಿಂದ ಎಂದಿಗೂ ಸಾಧ್ಯವಾಗಿರದಂಥ ರೀತಿಯಲ್ಲಿ ಅವರು ಉತ್ತಮವಾಗಿ ಹಣಕಾಸು ಸಚಿವಾಲಯವನ್ನು ನಡೆಸಿದ್ದರು. ಸಂಪುಟದಲ್ಲಿ ಸವಾಲನ್ನು ಎದುರಿಸಿದಾಗ ಅವರ ಅಂಜುಬುರುಕತನವೇ (ಮತ್ತು ಸಿಂಗ್ ಬಹುಶಃ ಕಾಂಗ್ರೆಸ್ ಅಧ್ಯಕ್ಷರ ಕಿವಿಗೆ ಬಿದ್ದಿರಬಹುದು ಎಂದು ಭಯಪಡುತ್ತಿದ್ದರು) ಸಂಸದರಾಗಿ ಗೆದ್ದಿದ್ದ ಇತರ ಸಚಿವರು ಹೆಚ್ಚು ಧೈರ್ಯಶಾಲಿಗಳಂತೆ ಇರಲು ಕಾರಣವಾಗಿತ್ತು.
ಹೆಚ್ಚು ಸಮಸ್ಯೆಗಳು ಎದುರಾಗತೊಡಗಿದಾಗ ಮನಮೋಹನ್ ಸಿಂಗ್ ತಮ್ಮದೇ ಆದ ರೀತಿಯಲ್ಲಿ ವರ್ತಿಸುವ ಮೂಲಕ ಪ್ರತಿಕ್ರಿಯಿಸಿದರು. ರಾಹುಲ್ ಗಾಂಧಿಯವರು ಸರಕಾರಿ ಸುಗ್ರೀವಾಜ್ಞೆಯನ್ನು ಸಾರ್ವಜನಿಕವಾಗಿ ಹರಿದು ಹಾಕಿದ ಬಗ್ಗೆ ಅವರು ಮೌನವಾಗಿದ್ದರು ಮತ್ತು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಸೇವೆ ಸಲ್ಲಿಸಲು ತುಂಬಾ ಸಂತೋಷವಾಗುತ್ತದೆ ಎಂದು ತಮ್ಮ ಎರಡನೇ ಅವಧಿಯಲ್ಲಿ ಅವರು ಹೇಳಿದಾಗ, ಆ ಹೇಳಿಕೆಗಿಂತಲೂ ಅವರ ಅವತ್ತಿನ ಮೌನವೇ ಹೆಚ್ಚನ್ನು ಹೇಳಿತ್ತು ಎನ್ನಿಸುವಂತಿತ್ತು. ಪಕ್ಷ ಮತ್ತು ಸರಕಾರದೊಳಗೆ ತಮ್ಮ ಸ್ಥಾನವನ್ನು ಮರಳಿ ಪಡೆಯಲು ಅವರು ಬಹಳ ಸಂತೋಷಪಡುತ್ತಿರುವ ಹಾಗೆ ಇತ್ತು.
ಇದು ಒಂದು ದುರಂತಮಯ ತಪ್ಪು ನಿರ್ಧಾರವಾಗಿತ್ತು. ಸತ್ಯವೆಂದರೆ ಸೋನಿಯಾ ಗಾಂಧಿಯವರಿಗೆ ಮನಮೋಹನ್ ಸಿಂಗ್ ಎಷ್ಟು ಋಣಿಯಾಗಿದ್ದರೋ ಅಷ್ಟೇ ಮಟ್ಟಿಗೆ ಅವರಿಗೆ ಸೋನಿಯಾ ಗಾಂಧಿ ಋಣಿಯಾಗಿದ್ದರು. 2004ರಲ್ಲಿ, ಸರಕಾರದಲ್ಲಿ ಎಂದಿಗೂ ಕೆಲಸ ಮಾಡದ ಕಾರಣ, ಅವರು ಪ್ರಧಾನಿಯಾಗಲು ಅನರ್ಹರು ಎಂದು ಸೋನಿಯಾರಿಗೆ ತಿಳಿದಿತ್ತು. ಸಂಪುಟ ಸಭೆಗಳನ್ನು ನಡೆಸಲು, ನೀತಿ ವಿಷಯಗಳಲ್ಲಿ ನಿರ್ಧರಿಸಲು ಅಥವಾ ವಿದೇಶಿ ರಾಷ್ಟ್ರಗಳ ಮುಖ್ಯಸ್ಥರನ್ನು ಸಮಾನವಾಗಿ ಭೇಟಿ ಮಾಡಲು ತಾವು ಅಸಮರ್ಥರು ಎಂದು ಅವರಿಗೆ ತಿಳಿದಿತ್ತು. ಅಧಿಕಾರ ವಹಿಸಿಕೊಳ್ಳುವ ಮೂಲಕ ಸಿಂಗ್ ಸೋನಿಯಾರನ್ನು ಹೆಚ್ಚಿನ ಮುಜುಗರದಿಂದ ಪಾರು ಮಾಡಿದರು. ಆದರೂ, 2009ರಲ್ಲಿ ಯುಪಿಎ ಮರುಚುನಾವಣೆಯ ನಂತರ ಸೋನಿಯಾ ಗಾಂಧಿ ತಮ್ಮ ಅನನುಭವಿ ಮಗನನ್ನು ಭವಿಷ್ಯದ ಪ್ರಧಾನಿಯನ್ನಾಗಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ಯತ್ನಿಸಿದರು ಮತ್ತು ಈ ಭ್ರಮೆಯಲ್ಲಿ, ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಅನುಭವಿ ಸಾರ್ವಜನಿಕ ಸೇವಕರಲ್ಲಿ ಒಬ್ಬರಾದ, ಸೇವೆಯಲ್ಲಿದ್ದ ಪ್ರಧಾನಿ ಸಾಧ್ಯವಾದಷ್ಟೂ ಶಾಮೀಲಾಗಿದ್ದರು.
ಮನಮೋಹನ್ ಸಿಂಗ್ ಅವರ ಅಸಹಾಯಕತೆ ಬಹಿರಂಗವಾಗಿ ವ್ಯಕ್ತವಾಗತೊಡಗಿದ್ದು ನರೇಂದ್ರ ಮೋದಿ ಪ್ರಧಾನಿಯಾಗುವ ಅಭಿಯಾನದಲ್ಲಿ ಎಷ್ಟು ಸಹಾಯ ಮಾಡಿದೆ ಎಂಬುದನ್ನು ಭವಿಷ್ಯದ ಇತಿಹಾಸಕಾರರು ನಿರ್ಣಯಿಸಬೇಕು. ಮೇಲ್ನೋಟಕ್ಕೇ ದುರ್ಬಲರಂತಿದ್ದ ಪ್ರಧಾನಿಯನ್ನು ಕಂಡ ನಂತರ ಮತದಾರರು, ಬಲಿಷ್ಠ ಮತ್ತು ದೃಢನಿಶ್ಚಯದ ನಾಯಕನಾಗುವುದಾಗಿ ಹೇಳಿದ್ದ ವ್ಯಕ್ತಿಯ ಮಾತಿಗೆ ಮರುಳಾಗಿದ್ದರು. ಮೋದಿ ಹಿಂದುಳಿದ ಹಿನ್ನೆಲೆಯಿಂದ ಬಂದವರು. ಆದರೆ ಮನಮೋಹನ್ ಸಿಂಗ್ ಅವರ ಆಶೀರ್ವಾದದೊಂದಿಗೆ ಕಾಂಗ್ರೆಸ್ ಕುಟುಂಬ ಪಕ್ಷವಾಗಿ ಹೊಸದಾಗಿ ಹೊರಹೊಮ್ಮಿದ್ದು ಸಹ ಮೋದಿಯ ಪರವಾಗಿ ಕೆಲಸ ಮಾಡಿತ್ತು.
ಖಂಡಿತವಾಗಿಯೂ 2014ರಿಂದ ನಾವು ನೋಡುತ್ತಿರುವುದು ಅಧಿಕಾರವಲ್ಲ, ಸರ್ವಾಧಿಕಾರ. ನಮ್ಮ ಪ್ರಜಾಪ್ರಭುತ್ವ ಮತ್ತು ಬಹುತ್ವದ ರುಜುವಾತುಗಳ ಸ್ಥಿರ ಸವೆತವಿದೆ. ಹೆಚ್ಚುತ್ತಿರುವ ಅಸಮಾನತೆಗಳು ಮತ್ತು ಲಾಭದಾಯಕ ಉದ್ಯೋಗದ ಸಾಧ್ಯತೆಗಳು ಕುಗ್ಗುತ್ತಿರುವುದರಿಂದ ಆರ್ಥಿಕತೆ ಕಳಪೆ ಮಟ್ಟಕ್ಕಿಳಿದಿದೆ. ಪ್ರಧಾನಿ, ಗೃಹ ಸಚಿವರು ಮತ್ತು ಯುಪಿ ಮತ್ತು ಅಸ್ಸಾಂ ಮುಖ್ಯಮಂತ್ರಿಗಳ ಪ್ರಚೋದನೆಯಿಂದ ಸಾಮಾಜಿಕ ವಾತಾವರಣ ಪ್ರತೀ ವರ್ಷವೂ ಕೆಳಮಟ್ಟಕ್ಕೆ ಇಳಿಯುತ್ತಿದೆ ಮತ್ತು ನಮ್ಮ ಸಹಜ ಸಾಮಾಜಿಕ ಪರಿಸರದಲ್ಲಿ ಹಿಂದೆಂದೂ ಕಂಡಿರದಷ್ಟು ವಿನಾಶ ಕಂಡುಬಂದಿದೆ.
ಮೋದಿ ಆಳ್ವಿಕೆಯ ವರ್ಷಗಳಲ್ಲಿನ ದುಷ್ಟತನವು, ಮನಮೋಹನ್ ಸಿಂಗ್ ಅವರ ಬಗ್ಗೆ ಬರೆಯಲು ಆಯ್ಕೆ ಮಾಡಿಕೊಂಡಿರುವ ಸಂವೇದನಾಶೀಲ, ಸೂಕ್ಷ್ಮ, ಉದಾರವಾದಿ ಮತ್ತು ಪ್ರಜಾಪ್ರಭುತ್ವವಾದಿ ಭಾರತೀಯರನ್ನು ಅವರ ಸಾರ್ವಜನಿಕ ಜೀವನದ ಅವಧಿಯಲ್ಲಿ ಅವರು ಮಾಡಿದ ಎಲ್ಲಾ ಒಳ್ಳೆಯದನ್ನು ಹೊಗಳಲು ಮತ್ತು ಕೆಟ್ಟದ್ದನ್ನು ನಿರ್ಲಕ್ಷಿಸಲು ಅಥವಾ ಸೌಮ್ಯವಾಗಿರಲು ಪ್ರೇರೇಪಿಸಿರಬಹುದು. ಸಿಂಗ್ ಅವರ ವಿದ್ವತ್ಪೂರ್ಣ ಸಾಧನೆಗಳು ಪ್ರಭಾವಶಾಲಿಯಾಗಿದ್ದವು ಮತ್ತು ಆರ್ಥಿಕ ಸುಧಾರಕರಾಗಿ ಅವರ ಕೊಡುಗೆಗಳು ಗಣನೀಯ ಮತ್ತು ಶಾಶ್ವತವಾಗಿದ್ದವು ಎಂಬುದರಲ್ಲಿ ಸಂದೇಹವಿಲ್ಲ. ಆದರೂ ಪ್ರಧಾನ ಮಂತ್ರಿಯಾಗಿ ಅವರ ದಾಖಲೆ ಮತ್ತು ಅವರ ರಾಜಕೀಯ ಪರಂಪರೆ ಹೆಚ್ಚು ಮಿಶ್ರವಾಗಿದೆ. ವಿಶೇಷವಾಗಿ ಅವರ ಎರಡನೇ ಅವಧಿಯಲ್ಲಿ, ಅವರು ತಿಳಿಯದೆಯೇ ಸರಕಾರದಲ್ಲಿ ಸರ್ವಾಧಿಕಾರದ ಉದಯಕ್ಕೆ ಅನುವು ಮಾಡಿಕೊಟ್ಟರು ಮತ್ತು ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷದಲ್ಲಿ ಭಟ್ಟಂಗಿತನ ಮತ್ತು ಕುಟುಂಬ ರಾಜಕಾರಣದ ಸಂಸ್ಕೃತಿಯನ್ನು ತಾವಾಗಿಯೇ ಶಾಶ್ವತಗೊಳಿಸಿಬಿಟ್ಟರು.